ಎಂಥ ಮಾತು! ಶತಶತಮಾನಗಳಿಂದ ಹೆಣ್ಣನ್ನು ಕಂಡ ರೀತಿ,ಆಚಾರ, ವಿಚಾರ,ವೇದ,ಪುರಾಣ,ಪುಣ್ಯ ಕಥೆಗಳಲ್ಲಿ ವೈಭವಿಕರಿಸಿದ  ಬಗೆಯೆಲ್ಲವೂ ಸ್ತುತ್ಯಾರ್ಹ!…. ದೇವತೆಯ ಸಾಲಿನಲ್ಲಿ ನಿತ್ಯವೂ ಪೂಜೆ ಪುರಸ್ಕಾರ.ಅವಳೆಂದರೆ ಜೀವ,ಉಸಿರು,ಬದುಕು! ಏನೆಲ್ಲ ಉದ್ಗಾರ! ಮನುಷ್ಯ ತನ್ನ ವಯಕ್ತಿಕ ಹಿತಾಸಕ್ತಿಯ ಮೇಲೆ ಪ್ರಭಾವ ಬೀರುವ ಮೂಲಕ ತಮ್ಮ ಸ್ವಂತ ಮನೋಲ್ಲಾಸಗಳನ್ನು ಪೂರೈಸಿಕೊಳ್ಳುವ ಮಾರ್ಗವನ್ನು ಆರಿಸಿರುವ ವಿಷಯ ಮೈಮರೆಯುವಂತಿಲ್ಲ! ಹೆಣ್ಣು ಜಗದ ಕಣ್ಣಿಗೆ ಹೋಲಿಸಿ,ಪ್ರಕೃತಿಗೆ ಸಮಜಾಯಿಷಿ,ಧರೆಯ ಒಡಲು, ಕ್ಷಮಯಾಧರಿತ್ರಿಯೆಂಬ ಕಿರೀಟದಲ್ಲಿ‌ ಮೆರೆಸುತ್ತ ಹೆಣ್ಣು ಎಂಬ ದೈವ ಶಕ್ತಿಯನ್ನು ಗೌರವಿಸುವ ಇತಿಹಾಸದ ಪುಟಗಳು,ಸತ್ಯ,ಮಿಥ್ಯದೆಡೆಗೆ ಒಮ್ಮೆ ತಮ್ಮೊಳಗಿನ ನೈಜವಾದ ವಿಚಾರಧಾರೆಗಳನ್ನು ಪರಾಮರ್ಶೆ ಮಾಡಿದಲ್ಲಿ  ಸತ್ಯದ ಅನುಭೂತಿ ಒಂದರ್ಥದಲ್ಲಿ ಪ್ರಕಟಗೊಳ್ಳಬಹುದು.

ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ‘ಸ್ತ್ರೀ’ ಎಂಬ ನತದೃಷ್ಟೆಯ ಕಥೆಗಳು ಸಾವಿರಾರು! ಅವರೆಲ್ಲರೂ ಮೂಕವೇದನೆಯೊಂದಿಗೆ ಮೌನವಾಗಿ ಸಹಿಸಿಕೊಂಡು,ದಹಿಸಿಕೊಂಡು ಆಹುತಿಯಾಗಿದ್ದು ಈ ಧರೆಯಲ್ಲಿ!ಇದೊಂದು ಸಹನೆಯ ಮಟ್ಟವೋ ಅಥವಾ ದೌರ್ಜನ್ಯದ ಅಟ್ಟಹಾಸವೋ! ಅರ್ಥೈಸುವುದು‌ ಕಷ್ಟ ಸಾಧ್ಯ!. ನಮ್ಮ ವ್ಯವಸ್ಥೆ ಯಾವ ಮಟ್ಟದ್ದು? ಎಂಬುದನ್ನು ಸೂಚಿಸುತ್ತದೆ.

ರಾಮಾಯಣದಲ್ಲಿ…ರಾವಣ,ಸೀತೆಯನ್ನು ಅಪಹರಿಸಿ ಈಶ್ವರನ ಪರಮ ಭಕ್ತನಾದರೂ…..ಹೆಣ್ಣನ್ನು ಗೌರವಿಸುವುದನ್ನು ಬಿಟ್ಟು… ಅಪಹರಿಸಿ ಇಡೀ ಲಂಕೆಯ ಅನವತಿಗೆ ಕಾರಣವಾಗಿದ್ದು, ಮಹಾಭಾರತದಲ್ಲಿ ದುಶ್ಯಾಸನ ದ್ರೌಪದಿಗೆ ಮಾಡಿದ ಅವಮಾನ ಇಡೀ ಕುರುವಂಶ ನಾಶಕ್ಕೆ ನಾಂದಿಯಾಯಿತು..ಇನ್ನೂ ಹತ್ತಾರು ಕಥೆಗಳ ವ್ಯಥೆಗಳಿವೆ.ಇವೆಲ್ಲವೂ ಇತಿಹಾಸದ ಪುಟಗಳಲ್ಲಿ ಲೀನವಾಗಿ,ಅದರ ದುಷ್ಪರಿಣಾಮದ ಕುರಿತು ತರಗತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದ್ದು,ಪ್ರತಿಯೊಂದು ಸಂದರ್ಭದಲ್ಲಿ ಹೆಣ್ಣು ಮಗುವಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಎಲ್ಲ ಮಾಹಿತಿಗಳನ್ನು ಬಹಿರಂಗವಾಗಿ ಹಂಚಿಕೊಳ್ಳುತ್ತಿದ್ದರೂ,ಇವತ್ತು “ಹೆಣ್ಣು ಮಗು” ವನ್ನು ನೋಡುವ ದೃಷ್ಟಿ ಕೋನ ಬದಲಾಗುತ್ತಿಲ್ಲವೆಂದರೆ ಎನರ್ಥ? ಪ್ರಶ್ನೆ? ಪ್ರಶ್ನೆಯಾಗಿಯೇ ಮುಂದುವರೆಯುತ್ತಿರುವುದು ಆಘಾತಕಾರಿ ಸಂಗತಿ!

ನಮ್ಮ ದೇಶದಲ್ಲಿ  ದಿನವೊಂದಕ್ಕೆ ಸರಾಸರಿ 87 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ಎಂದು ಆಘಾತಕಾರಿ ವರದಿಯನ್ನು ಸರ್ಕಾರ ನೀಡಿದೆ. 2019ರಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಕುರಿತು ವರದಿ ಬಿಡುಗಡೆ ಮಾಡಿದ್ದು, ಈ ಆಘಾತಕಾರಿ ಅಂಶ ಹೊರಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ7ರಷ್ಟು ಹೆಚ್ಚಿದೆ ಎಂದು ತಿಳಿಸಿದೆ. ಒಂದು ವರ್ಷದಲ್ಲಿ 4,05,861 ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು  ನಡೆದಿದ್ದು, 2018ಕ್ಕೆ ಹೋಲಿಸಿದರೆ, ಮಹಿಳೆಯರ ಮೇಲಿನ ದೌರ್ಜನ್ಯ ಸಂಖ್ಯೆ ಅಧಿಕಗೊಂಡಿದೆ. ಹತ್ರಸ್​ನ ಯುವತಿ ಅತ್ಯಾಚಾರದ ಬಳಿಕ ಈ ಕೇಂದ್ರ ಸರ್ಕಾರದ ಎನ್​ಸಿಆರ್​ಬಿ ಈ ಅಂಕಿಅಂಶಗಳ ದಾಖಲೆ ಹೊರಹಾಕಿದೆ.  

ನಮ್ಮ ದೇಶದಲ್ಲಿ 2021ರಲ್ಲಿ 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು,ಪ್ರತಿದಿನ ಸರಾಸರಿ 86 ಪ್ರಕರಣಗಳಂತೆ ಪ್ರತಿ ಗಂಟೆಗೆ ಸುಮಾರು 49 ಮಹಿಳೆಯರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು NCRB ಯು ದೇಶದಲ್ಲಿನ ಅಪರಾಧಗಳ ಇತ್ತೀಚಿನ ವರದಿ ತಿಳಿಸಿದೆ.

ಯಾಕೆ ಇಷ್ಟು ಕ್ರೌರ್ಯ?… ಸ್ವಾತಂತ್ರ್ಯ ಸಿಕ್ಕು 78 ವರ್ಷ ಕಳೆದಿದೆಯೆಂದು ಹೆಮ್ಮೆ ಪಡುವುದಾ? ಇಡೀ ವಿಶ್ವ ಭಾರತವನ್ನು ಗೌರವಿಸುತ್ತದೆ.ನಮ್ಮ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಹಿನ್ನಲೆಯಲ್ಲಿ, ನಮ್ಮ ದೇಶದ ಕೆಲ ವಿಕೃತ ಮನಸ್ಸುಗಳು ತಮ್ಮ ಅಸಹ್ಯ,ಅಸಭ್ಯ ವರ್ತನೆಯಿಂದ ಮಹಿಳೆಯರ ಸ್ವಾವಲಂಬಿ ಬದುಕನ್ನು ನರಕ ಮಾಡುತ್ತಿರುವುದು ಸಹಿಸಲು ಹೇಗೆ ಸಾಧ್ಯ?..ಹೆಣ್ಣಾಗಿ ಹುಟ್ಟುವುದು ತಪ್ಪಾ???  ಎಂಬ ಪ್ರಶ್ನೆ ಪ್ರತಿ ಹೆಣ್ಣು ಮಗು ಪ್ರಶ್ನಿಸುವಂತಾಗಿದೆ!.ಯಾಕಿಂತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ಹಿನ್ನೆಲೆಯೆನು? ಪ್ರತಿಬಾರಿಯು ಹೆಣ್ಣು ಮಕ್ಕಳನ್ನೆ ದೋಷಿತರಾಗಿ,ಅಪರಾಧಿಗಳಾಗಿ ಕೊನೆಗೆ ಆತ್ಮಹತ್ಯೆಗೆ ಪರೋಕ್ಷವಾಗಿ ಪ್ರಭಾವ ಬೀರಿ ಅಂತ್ಯ ಹಾಡುವುದು ಎಷ್ಟು ಸರಿ?

ನಿರ್ಭಯಾ ಪ್ರಕರಣ,ದಾನಮ್ಮ ಪ್ರಕರಣ,ಹಸುಗೂಸುಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ,ಕೊಲೆ ಪ್ರಕೊಲೆ,ಕಾಶ್ಮೀರದ ಎಂಟು ವರ್ಷದ ಹುಡುಗಿ ಆಸೀಫ ಬಾನುಳ ಅತ್ಯಾಚಾರ ಮತ್ತು ಕೊಲೆ,ಹೆಣ್ಣು ಯಾವ ಹುದ್ದೆ ಸ್ವೀಕರಿಸಿದರೂ,ಅಲ್ಲಿ ಅವಳು ನಿರ್ಭಯವಾಗಿ ಕಾರ್ಯ ನಿರ್ವಹಿಸುವ ಸ್ಥಿತಿ ಬರುತ್ತಿಲ್ಲ,ಆತಂಕ,ಭಯದಲ್ಲಿರುವುದು;ಅಷ್ಟಲ್ಲದೆ ಮನೆಯಲ್ಲಿ ಹಾಗೂ ಕೆಲಸ ಮಾಡುವಲ್ಲಿ ಅನುಭವಿಸುವ ನರಕಯಾತನೆಗೆ ಎಷ್ಟೋ ಹೆಣ್ಣು ಮಕ್ಕಳು ನಲುಗುತ್ತಿರುವುದು  ಸಮಾಜದ ನಡೆ ಎತ್ತ ಸಾಗಿದೆ ಎನ್ನುವುದನ್ನು ಚಿಂತಿಸಬೇಕಿದೆ.

ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು?
                     ‌  ಕವಯತ್ರಿ ಸಂಚಿಯ ಹೊನ್ನಮ್ಮ

ಈ ಪದ್ಯದ ವಾಕ್ಯಾರ್ಥ ವಿವರಿಸುವ ಅವಶ್ಯಕತೆಯಿಲ್ಲ, ಕಾರಣ ಈ ಪದ್ಯವನ್ನು ಪ್ರತಿಯೊಬ್ಬರೂ ಬಲ್ಲರು!. ಇಷ್ಟಾಗಿಯೂ ಬದಲಾಗದ ವಿಕೃತ ಮನಸ್ಸಿನ ಪುರುಷರ ಮನೆಯಲ್ಲಿರುವ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತ? ಇಂತಹ ಪಾಪಿಷ್ಠ,ಮುಖವಾಡ ಧರಿಸಿ ನಟನೆಯಲ್ಲಿ ನಯವಂಚನೆ ಮಾಡುವ ಮನೋರೋಗಿಗಳನ್ನು ಸರಿಪಡುಸುವ ಜವಾಬ್ದಾರಿ ಯಾರದೆಂದು ಚಿಂತಿಸುವುದು ಅನಿವಾರ್ಯವಾಗಿದೆ.ಒಬ್ಬ ಹೆಣ್ಣು ಇನ್ನೊಂದು ಹೆಣ್ಣಿನ ದುಃಖ,ನೋವು,ಅನ್ಯಾಯ ಅನುಭವಿಸುವಂತಹ‌ ಸಮಯದಲ್ಲಿ ಜೊತೆಗಿದ್ದು,ಅದರ ವಿರುದ್ಧ ಧ್ವನಿಯೆತ್ತುವ ಕೆಲಸ‌ ಮಾಡಬೇಕಾಗಿರುವುದು ಬಹುಮುಖ್ಯ.

ಹೆಣ್ಣು ಮಕ್ಕಳಿಗೆ ಸ್ವರಕ್ಷಣೆಗಾಗಿ ಕರಾಟೆ,ಆಯುಧ ಬಳಸುವ ಕಲೆ,ತಮ್ಮನ್ನು ತಾವು ರಕ್ಷಿಸುವುದನ್ನು ಕಲಿಸಿಕೊಡವುದು ಅನಿವಾರ್ಯ.
ಮನೆಯಲ್ಲಿ ತಂದೆ,ಅಣ್ಣ,ತಮ್ಮ,ಮಾವ…ಹೀಗೆ ಹತ್ತು ಹಲವಾರು ರೂಪಗಳಲ್ಲಿ ನಡೆಯುವ ಅತ್ಯಾಚಾರಗಳಿಂದ ಕಾಪಾಡಿಕೊಳ್ಳಲಾಗದ ಸ್ಥಿತಿಯಿಂದ ಹೊರಬರಲು ಆತ್ಮ ಸ್ಥೈರ್ಯ ಕೊಡುವ ಮೂಲಕ ಜಾಗೃತಿ ಮೂಡಿಸುವುದು ಅವಶ್ಯ.. ಸ್ವರಕ್ಷಣೆ ಕಲಿಸಿಕೊಟ್ಟರೆ ಅವಸರದಲ್ಲಿಯು,ಅನಿರೀಕ್ಷಿತವಾಗಿ ಎದುರಾಗುವ ಸಂಕಟದಿಂದಲೂ ಮತ್ತು ಅತ್ಯಾಚಾರಗಳಿಂದ ಕಾಪಾಡಿಕೊಳ್ಳಲು ನೆರವಾಗುತ್ತದೆ..

ಪ್ರತಿಭಟನೆ!…ಪ್ರತಿಭಟನೆ!… ಹೊರಾಟದ ಕಿಚ್ಚು! ಎಷ್ಟು ದಿನ! ಅತ್ಯಾಚಾರ,ಕೊಲೆ ಪ್ರಕರಣಗಳು ಕಣ್ಮುಂದೆ ನಡೆದರೂ, ಏನು ನಡೆದಿಲ್ಲವೆಂವಂತೆ ಸಾಗುವ ಮೂಕ ಮನಸುಗಳು!…ನಮ್ಮ ಮನೆಯ ಹೆಣ್ಣು ಮಕ್ಕಳು‌ ಸುರಕ್ಷಿತವಷ್ಟೇ ಮುಖ್ಯ, ಎಂಬ ಮನೋಭಾವ ಬದಲಾಗದ ಮೇಲೆ ನ್ಯಾಯ ದೊರಕುವುದೆಂತು? ಮೇಣದ ಬತ್ತಿ ಹಚ್ವಿ ಒಂದಿಷ್ಟು ದಿನ ಹೋರಾಡಿ, ಕೊನೆ ಕೊನೆಗೆ ಹೋರಾಟದ ನಶೆ ನೆಲಕಚ್ಚಿದಾಗ ಇಷ್ಟೆಲ್ಲ ಚಿಂತಿಸಿದರೂ,ಕೊನೆಗೆ ದೊರೆಯುವುದು‌ ನಿರಾಶೆ!ಎಂಬುದು ಅಷ್ಟೇ ಸತ್ಯ.ಅಪರಾಧಿಗಳು ರಾಜಾರೋಷವಾಗಿ
 ಬಿಡುಗಡೆ ಹೊಂದಿ ಒಂದಿಷ್ಟು ದಿನ ಮೌನವಾಗಿ ಮತ್ತೆ ಸಾಚಾ ಮುಖವಾಡದಿಂದ ಬದುಕುತ್ತಿರುವಾಗ,ಸಂತ್ರಸ್ತರಿಗೆ ಎಲ್ಲಿಂದ ನ್ಯಾಯ ದೊರಕಿತು? ಕಾನೂನು ವ್ಯವಸ್ಥೆಯಲ್ಲಿ ನ್ಯಾಯ ರಬ್ಬರ್ ಜಗ್ಗಿದಂತೆ! ಅತ್ಯಾಚಾರ ಪ್ರಕರಣ ಫೋಕ್ಸೊ…ಕಾಯಿದೆ,ನಿರ್ಭಯಾ ಆ್ಯಕ್ಟ್….ಒಂದೇ ಎರಡೆ? ಚೀನಾ ದಲ್ಲಿ ಇಂತಹ ಪ್ರಕರಣದ ಆರೋಪಿಯ ಮರ್ಮಾಂಗ ಕತ್ತರಿಸಲಾಗುತ್ತದೆ. ಈಜಿಪ್ತ್ ದಲ್ಲಿ ಗಲ್ಲು ಶಿಕ್ಷೆಯಾಗುತ್ತದೆ. ನಮ್ಮ ದೇಶದಲ್ಲಿ ಕಠಿಣ ಕ್ರಮಗಳು ಜಾರಿಯಾಗದೆ ಇರುವುದೇ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವುದು.ಅಪರಾಧಿಗಳಿಗೆ ಬೆಂಬಲ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಷ್ಟೇ ಮುಖ್ಯವಾಗಿದೆ. ನಿರ್ಭಯ ಆ್ಯಕ್ಟ್ ಜಾರಿಯಾಗಿದ್ದರೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಿಲ್ಲವೆಂದರೆ ನಮ್ಮ ದೇಶದ ಭವಿಷ್ಯ ಕಳಂಕಿತರ ಪಟ್ಟಿಯಲ್ಲಿ ಸೇರಿಸಲು ಸಿದ್ದತೆ ನಡೆಯುತ್ತಿದೆ ಎಂದರ್ಥ!.ಹುಟ್ಟಿದರೆ ಭಾರತದಂತಹ ಪುಣ್ಯಭೂಮಿಯಲ್ಲಿ ಎಂಬ ಕೊಟ್ಯಾಂತರ ಜನರ ಕನಸು ಕನಸಾಗಿ ಉಳಿಯದಂತೆ ಮಾಡುವುದು ಯಾರು?..

ಒಟ್ಟಾರೆ, ಹೆಣ್ಣು ಅಬಲೆಯಲ್ಲ! ಸಬಲೆಯೆಂಬುದನ್ನು ಬಾಹ್ಯವಾಗಿ ನಾವೆಲ್ಲ ಒಪ್ಪಲೆಬೇಕು!. ಕಾರಣ ಪ್ರತಿ ಕೆಲಸದ ಮುಂಚೂಣಿಯಲ್ಲಿರುವ ಹೆಣ್ಣು ಮಕ್ಕಳ ಸಾಧನೆ ಗೌರವಿಸುವಂತಹುದು.ಎಷ್ಟೋ ಪಾಲಕರು ಹುಟ್ಟಿದರೆ ನಮಗೆ ಹೆಣ್ಣು ಮಕ್ಕಳೆ ಹುಟ್ಟಬೇಕು ಎಂಬ ಕನಸು ಕಂಡವರು ಇದ್ದಾರೆ.ಆದರೆ ಅವಳ ಸುರಕ್ಷತೆ ವಿಷಯದಲ್ಲಿ ಅಥವಾ ಬೆಂಗಾವಲಾಗಿ ನಿಲ್ಲುವ ವಿಷಯದಲ್ಲಿ ಸಂಘಟನೆಗಳು,ಸರಕಾರ,ಕಾನೂನು ವ್ಯವಸ್ಥೆ, ಸಮಾಜದ ಬದ್ದತೆ,ನಾಗರಿಕರ ಜವಾಬ್ದಾರಿ, ಎಲ್ಲರಿಗೂ ಅನ್ವಯವಾಗುವ ಕಠಿಣಕ್ರಮ ಹೊತ್ತ ಕಾಯಿದೆಗಳು,ಇಂತಹ ಪ್ರಕರಣಗಳು ಮುರುಕಳಿಸದಂತೆ ಸಾಮಾಜಿಕ ಸ್ವಾಸ್ಥ್ಯ ಕೆಡದಂತೆ,ಮೊಬೈಲ್ ಗಳಲ್ಲಿ ಜಾಹಿರಾತುಗಳಲ್ಲಿ,ಕಳಪೆ ಮಾಧ್ಯಮಗಳಲ್ಲಿ ಹೆಣ್ಣು ಮಕ್ಕಳನ್ನು ಅಸಭ್ಯವಾಗಿ ,ಅಶ್ಲೀಲವಾಗಿ ದುಡಿಸಿಕೊಳ್ಳುವುದನ್ನು ತಡೆಗಟ್ಟುವುದು ಮುಖ್ಯ! ದುಶ್ಯಾಸನರ ಸಂತತಿ ಅವನತಿಯತ್ತ ಸಾಗುವಂತೆ ದಿಟ್ಟ ಕ್ರಮಕೈಗೊಳ್ಳುವ ಹೆಜ್ಜೆ ಇಡುವುದು ಅನಿವಾರ್ಯ! ಇಲ್ಲವೆಂದರೆ ಪ್ರತಿ ಹೆಣ್ಣು ಕೂಸು ಹೆಣ್ಣಾಗಿ ಹುಟ್ಟೋದು ತಪ್ಪಾ??? ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಚಿಂತಿಸಿ ಸಮಯ ಜಾರುವ ಮುನ್ನ!


4 thoughts on “

  1. ಹೆಣ್ಣಿನ ನೋವು ನಲಿವುಗಳ ಕುರಿತು ಚೆನ್ನಾಗಿ ಮೂಡಿ ಬಂದಿದೆ.

Leave a Reply

Back To Top