ಸ್ನೇಹ ಸಂಗಾತಿ
ಗೊರೂರು ಶಿವೇಶ್
‘ಅಮರ . . . ಮಧುರ . . . ಸ್ನೇಹ’
ನನ್ನ ಮುಂದೆ ಬಾರದಿರು,ನಾ ನಿನ್ನ ಅನುಯಾಯಿಯಲ್ಲ.
ನನ್ನ ಹಿಂದೆಯು ಬಾರದಿರು,ನಾ ನಿನ್ನ ನಾಯಕನಲ್ಲ.
ಬಾ, ನನ್ನ ಜೊತೆಯಲ್ಲಿಯೆ ನಡೆ,
ನಾನು ನಿನ್ನ ಸ್ನೇಹಿತ.
ನಿಜಸ್ನೇಹವನ್ನು ಸರಳವಾಗಿ ಹೇಳುವ ಪದ್ಯವಿದು. ತಂದೆ-ತಾಯಿ ಬಂಧುಗಳು ಹುಟ್ಟಿನಿಂದ ಬಂದರೆ ಸ್ನೇಹಿತರು ಜೀವನದ ಹಲವು ಹಂತಗಳಲ್ಲಿ ನಮಗೆ ಎದುರಾಗಿ, ಪರಿಚಯವಾಗಿ, ಆಮೇಲೆ ಸ್ನೇಹಕ್ಕೆ ತಿರುಗುವುದು ಬಹಳಷ್ಟು ಸಂದರ್ಭದಲ್ಲಿ ನಮ್ಮ ಸ್ವಭಾವವನ್ನು ಅವಲಂಭಿಸಿರುತ್ತದೆ. ‘ಒಂದೇ ರೀತಿಯ ರೆಕ್ಕೆಗಳನ್ನು ಹೊಂದಿದ ಹಕ್ಕಿಗಳು ಜೊತೆಯಲ್ಲಿಯೆ ಹಾರು ತ್ತವೆ’ ಇಲ್ಲವೆ, ‘ನಿನ್ನ ಸ್ನೇಹಿತರ ಹೆಸರನ್ನು ಹೇಳು, ನಾನು ನಿನ್ನ ಸ್ವಭಾವವನ್ನು ಹೇಳುತ್ತೇನೆ’ ಎಂಬ ನಾಣ್ಣುಡಿಗಳು ಸಮಾನ ಸ್ವಭಾವವುಳ್ಳವರಲ್ಲಿ ಉಂಟಾಗುವ ಸ್ನೇಹಭಾವವನ್ನು ಕುರಿತು ಹೇಳುತ್ತದೆ.
ವಿರುದ್ಧ ಸ್ವಭಾವವುಳ್ಳವರಲ್ಲಿ ಸ್ನೇಹ ಸಂಭವಿಸುವುದಾದರೂ ಅದು ಅಪರೂಪ.ಪ್ರತಿಯೊಬ್ಬರ ಬಾಳಿನಲ್ಲಿ ಬಾಲ್ಯವೆಂಬುದು ಸ್ನೇಹಕಾಲದ ಆಡಂಬೊಲವೆ ಸರಿ. ಆರ್. ಕೆ. ನಾರಾಯಣ್ ರವರ ‘ಸ್ವಾಮಿ ಮತ್ತು ಅವನ ಸ್ನೇಹಿತರು’ ಬಾಲ್ಯ ಕಾಲದಲ್ಲಿ ಸಹಜ ಸ್ನೇಹಕ್ಕಾಗಿ ಹಾತೊರೆಯುವ ಮುಗ್ಧ ಮನಸ್ಸಿನ ಭಾವವನ್ನು ಸರಳವಾಗಿ ಹೇಳುವ ಕಾದಂಬರಿ. ಸ್ವಾಮಿಗೆ ತರಗತಿಯಲ್ಲಿ ಶಂಕರ, ಸ್ಯಾಮ್ಯುಯಲ್ ಉರುಫ್ ಬಟಾಣಿ, ಮಣಿ, ಸ್ನೇಹಿತರು. ತರಗತಿಯಲ್ಲಿ ಉಂಟಾಗುವ ಹತ್ತು ಹಲವು ರೀತಿಯ ಸನ್ನಿವೇಶಗಳು, ವಿಷಾದದಿಂದಲೋ,ವಿನೋದದಿಂದಲೋ ಅಂತ್ಯವಾಗುತ್ತಿದ್ದಘಟನೆಗಳುಶಾಲಾಜೀವನವನನ್ನು ಮುದಗೊಳಿಸಿರುತ್ತದೆ.ಆಗ ಪ್ರವೇಶ ಪಡೆÀಯುವವನೆ ಆ ಊರಿಗೆ ಹೊಸದಾಗಿ ವರ್ಗದಾಗಿ ಬರುವ ಶ್ರೀಮಂತ ಪೋಲೀಸ್ ಮುಖ್ಯಾಧಿಕಾರಿಯ ಮಗ ರಾಜಂ. ಕ್ರಿಕೆಟ್‍ನಲ್ಲಿ ಪರಿಣಿತಿ ಪಡೆದಿದ್ದ ಅವನೆಡೆಗೆ ಸ್ವಾಮಿಯ ಮನಸ್ಸು ವಾಲುತ್ತದೆ. ಹಳೆಯ ಸ್ನೇಹಿತರನ್ನು ಮರೆತು ಹೊಸಬನ ಸ್ನೇಹಕ್ಕಾಗಿ ಹಾತೊರೆಯುತ್ತಾನೆ. ರಾಜಂನ
ಕ್ರಿಕೆಟ್ ತಂಡಕ್ಕೆ ಮುಖ್ಯಬೌಲರ್‍ರಾಗಿಯೂ ರೂಪುಗೊಳ್ಳುತ್ತಾನೆ. ಮುಂದೆ ಪರಿಸ್ಥಿತಿಯ ಪ್ರಭಾವದಿಂದಾಗಿ ಸ್ವಾಮಿ ಬೇರೆ ಶಾಲೆಯನ್ನು ಸೇರಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದರಿಂದಾಗಿ ಕ್ರಿಕೆಟ್ ಪ್ರಾಕ್ಟೀಸ್‍ಗೆ ತೊಂದರೆ ಉಂಟಾಗುವುದರ ಜೊತೆಗೆ ಮುಂದೆ ನಡೆಯುವ ಪ್ರಮುಖಪಂದ್ಯದಿಂದ ಹೊರಗುಳಿಯುತ್ತಾನೆ. ಆ ಪಂದ್ಯ ಸೋತ ಕಾರಣ ರಾಜಂ, ಸ್ವಾಮಿಯನ್ನು ಮಾತನಾಡಿಸುವುದನ್ನು ನಿಲ್ಲಿಸುತ್ತಾನೆ. ಸ್ವಾಮಿ, ರಾಜಂನನ್ನು ಭೇಟಿಯಾಗಿ ವಿಷಯ ತಿಳಿಸಲು ಪ್ರಯತ್ನಿಸುತ್ತನಾದರೂ ಸಾಧ್ಯವಾಗುವುದಿಲ್ಲ.ಮುಂದೆ ರಾಜಂ ತಂದೆಗೆ ವರ್ಗವಾಗುತ್ತದೆ. ವಿಷಯ ತಿಳಿದ ಸ್ವಾಮಿಗೆ ದುಃಖವಾಗುತ್ತದೆ. ಕೊನೆಗೆ ಅವನು ಬೇರೆ ಊರಿಗೆ ಹೋಗುತ್ತಿರುವ ವಿಷಯ ತಿಳಿದು ರೈಲ್ವೆ ನಿಲ್ದಾಣಕ್ಕೆ ಹೋಗುತ್ತಾನೆ. ಸ್ನೇಹದ ನೆನಪಿಗೆ ಪುಸ್ತಕವೊಂದನ್ನು ನೀಡುತ್ತಾನೆ. ಅದನ್ನು ಸ್ವೀಕರಿಸಿದ ರಾಜಂ ಅವನೊಡನೆ ಮಾತನಾಡದೆ ಮುಖ ತಿರುವಿ ಕೂರುತ್ತಾನೆ. ರೈಲು ಮುಂದೆ ಸಾಗಿದಂತೆ ಪ್ಲಾಟ್ ಫಾರಂನಲ್ಲಿ ಹನಿ ತುಂಬಿದ ಕಣ್ಣುಗಳಿಂದ ಸ್ವಾಮಿ ನಿಲ್ಲುವುದರೊಂದಿಗೆ ಕಥೆ ಮುಕ್ತಾಯವಾಗುತ್ತದೆ.
ಈ ಕಥೆ ನನ್ನ ಬಾಲ್ಯ ಕಾಲಕ್ಕೆ ಕರೆದೊಯ್ದು ನಿಲ್ಲಿಸಿತು. ಆರನೆಯ ತರಗತಿಯವರೆಗೆ ನಮ್ಮೂರಿನ ಮೂಲ ಪ್ರಾಥಮಿಕ ಶಾಲೆಯಲ್ಲಿ ಓದಿದ ನನಗೆ ನನ್ನ ಚಿಕ್ಕಪ್ಪನ ಪ್ರಭಾವದಿಂದಾಗಿ ‘ಹೆಚ್.ಆರ್.ಪಿ’ ಕಾಲೋನಿಯಲ್ಲಿನ ಶಾಲೆಯಲ್ಲಿ ಓದುವ ಅವಕಾಶ ದೊರಕಿತು. ಹೊಸ ಶಾಲೆಯಲ್ಲಿದ್ದವರೆಲ್ಲ ಹೇಮಾವತಿ ಜಲಾಶಯ ಯೋಜನೆಯ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಂಜಿನಿಯರ್ ಮತ್ತು ಇತರೆ ನೌಕರರ ಮಕ್ಕಳು. ಹಳೆಯ ಶಾಲೆಯಲ್ಲಿ ನನ್ನಂಥವರೆ ಇದ್ದು ಅವರೊಡನೆ ನೀರೊಳಗಿನ ಮೀನಾಗಿದ್ದ ನಾನು ಇಲ್ಲಿ ನೀರಿನಿಂದ ಹೊರ ತೆಗೆದಂಥಾದೆ. ಬುದ್ಧಿ ಮಟ್ಟದಲ್ಲಾಗಲಿ, ಅಂತಸ್ಥಿನಲ್ಲಾಗಲಿ ಅವರ ಹತ್ತಿರವೂ ಬರಲಾರದವನಾಗಿದ್ದೆ. ಪ್ರತಿ ಸೋಮವಾರ, ಶುಕ್ರವಾರ ಇದ್ದ ಯೂನಿಫಾರಂ, ಬಿಳಿಶರ್ಟ್, ಕಾಕಿಚೆಡ್ಡಿ. ಆ ಚೆಡ್ಡಿಯೋ ಸರಿಯಾಗಿ ಹಿಂದೆ ಹರಿದುಹೋಗಿತ್ತು. ಅದನ್ನು ‘ಕವರ್’ ಮಾಡಲು ಬ್ಯಾಗನ್ನು ಹಿಂದಕ್ಕೆ ಹಾಕಿಕೊಂಡು ಹೋಗುತ್ತಿದೆನಾದರೂ, ತರಗತಿಯಲ್ಲಿ ಮುಚ್ಚಿಡಲಾಗದೆ ಸಹಪಾಠಿಗಳ ಛೇಡಿಕೆಗೆ ತುತ್ತಾಗಿದ್ದೆನು.ಆ ಸಂದರ್ಭದಲ್ಲಿ ನನಗೆ ಪರಿಚಯವಾದದ್ದು ನಾಗೇಂದ್ರಬಾಬು. ಅವರ ತಂದೆ ಅಲ್ಲಿ ಇಂಜಿನಿಯರ್ ಆಗಿದ್ದರು. ನಾನು
ಆಗಲೇ ಪತ್ತೆದಾರಿ ಕಾದಂಬರಿ ಓದುವ ಹುಚ್ಚು ಹತ್ತಿಸಿಕೊಂಡಿದ್ದು. ಅದು ಅವನ ಪರಿಚಯಕ್ಕೆ ನಾಂದಿ ಹಾಡಿತು. ಮುಂದೆ ಸಾಕಷ್ಟು ಕಾದಂಬರಿಗಳನ್ನು ಜೊತೆಯಲ್ಲಿ ಹಂಚಿಕೊಂಡು ಓದಿದೆವು. ನಾನು ಅವರ ಮನೆಗೆ ಹೋಗಲು ಸಂಕೋಚಿಸುತ್ತಿದ್ದೆನಾದರೂ ಅವನು ನಮ್ಮ ಮನೆಗೆ ಸರಾಗವಾಗಿ ಬರುತ್ತಿದ್ದ. ನನ್ನಲ್ಲಿದ್ದ ಕೀಳರಿಮೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದವನು, ಅವನೆ. ನಮ್ಮ ಮನೆಯಲ್ಲಿ ಬೆಳೆಯುತ್ತಿದ್ದ ನನ್ನ ಸೋದರಮಾವನ ಮಗ ನಾವು ತಿರುಗಾಡಲು ಹೊರಟಾಗ ಜೊತೆಯಲ್ಲಿ ಬರುವುದಾಗಿ ಹಿಂದೆ ಬೀಳುತ್ತಿದ್ದ. ಒಮ್ಮೆ ಅವನನ್ನು ಬರಬೇಡವೆಂದು ಬಲವಾಗಿ ಹಿಂದಕ್ಕೆ ನೂಕಿದಾಗ ಇದೇ ಸ್ನೇಹಿತ ನನಗೆ ತಿಳಿಹೇಳಿದ.
ಮುಂದೆ ಪ್ರೌಢಶಾಲೆಗೆ ಕಾಲಿರಿಸಿದಾಗ ಸೆಕ್ಷನ್‍ಗಳು ಬದಲಾವಣೆಯಾಗಿ ಭೇಟಿಗಳ ಸಂಖ್ಯೆ ಕಡಿಮೆಯಾಗಿ ‘ಕಣ್ಣಿಂದ ಮರೆಯಾದವರು ಮನದಿಂದಲೂ ಮರೆಯಾದಂತೆ’ ಎಂಬ ನುಡಿಯಂತೆ ನಮ್ಮ ಸ್ನೇಹವೂ ಕೊನೆಯಾಯಿತು.ಸ್ನೇಹಿತರು ಬೆಂಕಿಕಡ್ಡಿಯಂತೆ, ಬೇಸಿಗೆಯಲ್ಲಿ ಒಂದೆ ಹೊಡತಕ್ಕೆ ಹತ್ತುವವು. ಮಳೆಗಾಲದಲ್ಲಿ ಹತ್ತುವ ಕಡ್ಡಿಗಳ ಸಂಖ್ಯೆ ಕಡಿಮೆ. ನಿಜಜೀವನದಲ್ಲೂ ನಿಜ ಸ್ನೇಹಿತರು ದುರ್ಲಭ. ಕರ್ಣ-ದುರ್ಯೋಧನ, ಕ್ಷಷ್ಣ-ಕುಚೇಲರ ಕುರಿತು ಬರುವ ಕಥೆಗಳು ಕೂಡಾ, ಪಂಪನಂಥ ಕವಿಗಳ ಕಲ್ಪನೆಯೆ ಸರಿ. ವಿಷ್ಣುವರ್ಧನ ಗತಿಸಿದಾಗ ಅವರ ‘ಕುಚುಕು’ ಗೆಳೆಯ ಅಂಬರೀಶ್ ಪರಿತಪಿಸಿದ್ದನ್ನು ಟಿ.ವಿಯಲ್ಲಿ ಲೈವ್ ನೋಡಿದ್ದೇವೆ. ಆದರೆ ನಿಜಜೀವನದಲ್ಲಿ ಒಂದು ಕಾಲದ ಗೆಳೆಯರು ಮುಂದೆ ಶತ್ರುಗಳಾಗಿ ಪರಸ್ಪರ ಹಗೆ ತೀರಿಸಲು ಮಾಡುವ ಪ್ರಯತ್ನಗಳು, ವಿಷ ಕಾರುವ ಪ್ರಸಂಗಗಳು ಕಣ್ಣೆದುರಿಗೆ ಇವೆ. ಅನೇಕ ಕಥೆ, ಕಾದಂಬರಿ ಮತ್ತು ಸಿನಿಮಾಗಳಿಗೆ ನಾಂದಿಹಾಡಿವೆ. ಸಂಗ್ಯಾ-ಬಾಳ್ಯ, ಸೀಸರ್-ಬೂಟಸ್, ದ್ರುಪದ-ದ್ರೋಣಚಾರ್ಯರ ಕಥೆಗಳು ಪುರಾಣ, ಇತಿಹಾಸ, ಜನಪದ ಸಾಹಿತ್ಯದಲ್ಲಿ ಹೇರಳವಾಗಿವೆ. ಅವಿಶ್ವಾಸ, ಅಪನಂಬಿಕೆ ಚಾಡಿ ಮಾತುಗಳಿಗೆ ಕಿವಿಗಳನ್ನಷ್ಟೆ ಕೊಡದೆ ಬುದ್ಧಿಯನ್ನು ಕೊಡವುದು, ಸ್ನೇಹ ಮುರಿಯಲು ಕಾರಣವಾಗುತ್ತದೆ.‘
‘ನಂಬಿಕೆಯೆ ಸ್ನೇಹದ ಮೂಲ’ ಎಂಬುದಾಗಿ ಕುರಿತಾಗಿ ಕಥೆಯೊಂದು ನೆನೆಪಾಗುತ್ತಿದೆ. ರಣರಂಗದಲ್ಲಿ ಶತ್ರುಪಡೆಯ ಮೇಲೆ ದಾಳಿ ಮಾಡಲು ಹೋದ ಸ್ನೇಹಿತ ಪುನಃ ಬಾರದಿದ್ದನ್ನು ನೋಡಿಬರಲು ಮೇಲಾಧಿಕಾರಿಯ ಅನುಮತಿ ಕೇಳುತ್ತಾನೆ. ಅಧಿಕಾರಿ ಅನುಮತಿ ನೀಡಲು ನಿರಾಕರಿಸುತ್ತಾ ‘ಆತ
ಶತ್ರುಪಡೆಗೆ ಸಿಕ್ಕು ಈಗಾಗಲೇ ಸತ್ತಿರಬಹುದು. ಈಗ ಅಲ್ಲಿಗೆ ಕಳುಹಿಸಿ ನಿನ್ನನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ’ ಎನ್ನುತ್ತಾನೆ. ಆದರೆ ತುಂಬಾ ಗೋಗೆರೆದು ಅನುಮತಿ ಪಡೆದ ಹೋದ ಸೈನಿಕ ಕೆಲಗಂಟೆಗಳ ನಂತರ ಸ್ನೇಹಿತನ ಕಳೇಬರವನ್ನು ಹೊತ್ತು ಬರುತ್ತಾನೆ. ಬರುವಾಗ ಈತನೂ ಪ್ರಾಣಾಂತಿಕವಾಗಿ ಗಾಯಗೊಂಡಿರುತ್ತಾನೆ. ಅದನ್ನು ಕಂಡ ಮೇಲಾಧಿಕಾರಿ ಸಿಟ್ಟು, ಶೋಕದಿಂದ ‘ನನ್ನ ಮಾತನ್ನು ಕೇಳದೆ ಹೋದೆ. ಈಗ ನೋಡು ಇಬ್ಬರನ್ನು ನಾನು ಕಳೆದುಕೊಳ್ಳಬೇಕಾಯಿತು’ ಎನ್ನುತ್ತಾನೆ. ಅದಕ್ಕೆ ಸೈನಿಕ ನುಡಿಯುತ್ತಾನೆ. ‘ಸಾರ್, ನಾನು ಅಲ್ಲಿಗೆ ಹೋದಾಗ ಸ್ನೇಹಿತನ ಪ್ರಾಣ ಇನ್ನೂ ಇತ್ತು. ಸಾಯುವ ಮುನ್ನ ಆತ ಹೇಳಿದ ಗೆಳೆಯ ನೀನು ಬರುತ್ತೀಯ ಎಂದು ನನಗೆ ಖಂಡಿತ ಗೊತ್ತಿತ್ತು”.
ಇನ್ನೂ ತಂದೆ-ತಾಯಿ, ಸಹೋದರ, ಸಹೋದರರಲ್ಲಿ ಸ್ನೇಹಭಾವ ಬಾಲ್ಯದಲ್ಲಿ ಇರುತ್ತದೆಯಾದರೂ ಪ್ರಾಯಕ್ಕೆ ಸಂದಂತೆ, ಸಮವಯಸ್ಕರು ಭಾವನೆಗಳನ್ನು ಹಂಚಿಕೊಳ್ಳಲು ಹೆಚ್ಚು ಸಹಕಾರಿಯಾಗುತ್ತಾರೆ. ಪತಿ, ಪತ್ನಿಯರಲ್ಲಿ ಸ್ನೇಹಭಾವ ಸುಗಮ ದಾಂಪತ್ಯಕ್ಕೆ ಸಹಕಾರಿಯಾಗಬಹುದಾದರೂ ಇಬ್ಬರ ನಡುವಿನ ವಿಶ್ವಾಸ, ಸ್ನೇಹದ ಕೊರತೆ ಪ್ರತಿದಿನದ ಕದನಕ್ಕೆ ಹಾದಿ ಮಾಡುತ್ತದೆ. ಹಿರಿಯರು ನೋಡಿ ಮಾಡಿದ ಮದುವೆಯದವರಲ್ಲಿ, ತಾರುಣ್ಯದಲ್ಲಿ ಗಂಡ-ಹೆಂಡತಿಯರ ನಡುವೆ ಕನಿಷ್ಠ ಐದಾರುಮಾರಿನ ಅಂತರ. ಗಂಡ ಮುಂದೆಲ್ಲೊ ಟವಲ್ ಕೊಡವಿಕೊಂಡು ನಡೆಯುತ್ತಿದ್ದರೆ ಹೆಂಡತಿ ಸಣ್ಣ ಮಕ್ಕಳನ್ನು ಎಳೆದುಕೊಂಡು, ಬ್ಯಾಗ್ ಹಿಡಿದು ಬರುತ್ತಿದ್ದ ದೃಶ್ಯ ಸಾಮಾನ್ಯ. ಮುಂದೆ ತರುಣ್ಯ ಕಳೆದು ವೃದ್ಧಾಪ್ಯ ಆವರಿಸಿದಾಗ ಇದು ಉಲ್ಟಾ-ಪಲ್ಟಾ. ಹೆಂಡತಿ ಮಗಳೊಂದಿಗೆ ಮುಂದೆ ಮುಂದೆ ನಡೆದು ಮದುವೆಗೋ ಮತ್ತೊಂದು ಶುಭಕಾರ್ಯಕ್ಕೂ ಸಾಗುತ್ತಿದ್ದಾರೆ, ಗಂಡ ನಡೆಯಲಾರದೆ ‘ನಿಲ್ಲೆ ನಾನು ಬರ್ತಿನಿ’ ಎನ್ನುವುದು. “ ಮನೇಲಿ ಸುಮ್ನೆ ಬಿದ್ದಿರಲಾರದೆ ಇಲ್ಬಂದು ಯಾಕ್ ನಮ್ಮ ಪ್ರಾಣ ತಿಂತಿರಾ” ಎಂದು ಬೈಯುತ್ತಾ ಹೆಂಡತಿ ಸಾಗುವುದು ಕೂಡಾ ಮಾಮೂಲು. ಗಂಡ-ಹೆಂಡಿರಲ್ಲಿ ವಯಸ್ಸಿನ ವ್ಯತ್ಯಾಸದಿಂದಾಗಿ ‘ಅಮ್ನೋರು ಪಟ್ಟಕ್ಕೆ ಬಂದಾಗ ಅಯ್ನೋರು ಚಟ್ಟಕ್ಕೆ’ ಎಂದಾಗಿ ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎನ್ನುತ್ತಾ ಈ ರೀತಿ ಸೇಡು ತೀರಿಸಿಕೊಳ್ಳುವುದು ಹಳ್ಳಿಗಾಡಿನಲ್ಲಿ ಸಾಮಾನ್ಯ ಸಂಗತಿ.
ಹಾಗಿದ್ದರೆ ಈ ಸ್ನೇಹ-ಸಂಬಂಧವನ್ನು ಉಳಿಸಿಕೊಳ್ಳುವ ಬಗೆ ಹೇಗೆ ? ಇದಕ್ಕೆ ಎಲ್ಲೊ ಓದಿದ ಮತ್ತೊಂದು ಕಥೆ ನೆನಪಾಗುತ್ತದೆ. ಮರುಭೂಮಿಯಲ್ಲಿ ಇಬ್ಬರು ಸ್ನೇಹಿತರು ಸಾಗುತ್ತಿರುತ್ತಾರೆ. ಆಗ ಒಬ್ಬ ಇನ್ನೊಬ್ಬನಿಗೆ ತಮಾಷೆ ಮಾಡುತ್ತಾನೆ. ಇದಕ್ಕೆ ಕೋಪಗೊಂಡ ಅವನ ಸ್ನೇಹಿತ ಕಪಾಲಕ್ಕೆ ಹೊಡೆಯುತ್ತಾನೆ. ಆಗ ಹೊಡೆತ ತಿಂದವ ಅಲ್ಲಿದ್ದ ಮರಳಿನ ಮೇಲೆ ‘ಈ ದಿನ ನನ್ನ ಸ್ನೇಹಿತ ಕಪಾಳಕ್ಕೆ ಹೊಡೆದ’ ಎಂದು ಬರೆಯುತ್ತಾನೆ. ಮುಂದೆ ದಾರಿಯಲ್ಲಿ ಝರಿಯೊಂದು ಎದುರಾದಾಗ ಈ ಮೊದಲು ಹೊಡೆತ ತಿಂದವ ಈಜಲು ಹೋಗಿ ಮುಳುಗಲಾರಂಭಿಸುತ್ತಾನೆ. ಅವನ ಸ್ನೇಹಿತ ನೀರಿನಿಂದ ಮೇಲೆತ್ತಿ ಕಾಪಾಡುತ್ತಾನೆ. ಈ ಬಾರಿ ‘ನನ್ನ ಸ್ನೇಹಿತ ನನ್ನನ್ನು ಬದುಕುಳಿಸಿ ಕಾಪಾಡಿದ’ ಎಂದು ಪಕ್ಕದಲ್ಲಿನ ಬಂಡೆಯ ಮೇಲೆ ಕೆತ್ತುತ್ತಾನೆ. ಬದುಕುಳಿಸಿದ ಸ್ನೇಹಿತ ಕಳೆದ ಬಾರಿ ಮರಳಿನ ಮೇಲೆ, ಈ ಬಾರಿ ಬಂಡೆಯ ಮೇಲೆ ಬರದದ್ದನ್ನು ಕುರಿತು ಪ್ರಶ್ನಿಸುತ್ತಾನೆ. ಅದಕ್ಕೆ ಅವನು ಪಡೆದ ಉತ್ತರ ಹೀಗಿತ್ತು. ‘ನನಗೆ ಸ್ನೇಹಿತರು ನೋವುಂಟುಮಾಡಿದರೆ ಮರಳಿನ ಮೇಲೆ ಬರೆಯುತ್ತೇನೆ. ಏಕೆಂದರೆ ಕ್ಷಮೆಯ ಗಾಳಿ ಅದನ್ನು ಅಳಿಸಿಹಾಕುತ್ತದೆ. ಆದರೆ ಪಡೆದ ಉಪಕಾರ ಶಾಶ್ವತವಾಗಿರಬೇಕಲ್ಲ! ಅದಕ್ಕೆ ಅದನ್ನು ಯಾವಾಗಲೂ ಬಂಡೆಯ ಮೇಲೆ ಕೆತ್ತೋದು” ನಿಜ ಸ್ನೇಹ ಅಜರಾಮರ.
ಗೊರೂರು ಶಿವೇಶ್
Very practical
Thanks
ಸೊಗಸಾಗಿದೆ ಅದರಲ್ಲೂ ಕೊನೆಯ ಸಾಲುಗಳು ಅನುಕರಣೀಯ. ಕೆಟ್ಟದ್ದು ಮರಳ ಮೇಲೆ ಅಳಿಸಿ ಹೊಗಲಿ, ಒಳ್ಳೆಯದು ಬಂಡೆ ಮೇಲೆ ಶಾಶ್ವತವಾಗಿರಲಿ. ಬರೀ ಸ್ನೇಹದಲ್ಲಿ ಅಲ್ಲಾ ಜೀವನದ ಎಲ್ಲಾ ಸಂಭದಗಳನ್ನೂ ಈ ರೀತಿಯೇ ಉಳಿಸಿಕೊಳ್ಳೋಣ.
Yes I too liked it…Some times we quarrel for very small things.time only makes up more mature. But some people adhere these qualities with the influence of parents,friends,teachers. It’s always true that good friend never judge you.