‘ಹಣ್ಣೆಲೆ ಉದುರುವಾಗ’ ಹವ್ಯಕ ಸಂಭಾಷಣೆ ಮಿಶ್ರಿತ ಕಥೆ ಕುಸುಮಾ. ಜಿ.ಭಟ್ ಅವರಿಂದ

ಮಧ್ಯಾಹ್ನದ ಏರು ಬಿಸಿಲು ಊರ ತುದಿ ತೋಟದ ಸಂಕ ದಾಟಿ ಒಂದಷ್ಟು ಅಡಿಕೆ ,ಕಾಫಿಹಣ್ಣು , ಕಾಳು ಮೆಣಸು  ಎಲ್ಲವನ್ನೂ ತುಂಬಿದ  ಬಿದಿರು ಬುಟ್ಟಿ  ಹೊತ್ತು ಏದುಸಿರು ಬಿಡುತ್ತ ಕಲ್ಲಿನ ಮೆಟ್ಟಿಲುಗಳ ಹತ್ತಿ ಮನೆಯೊಳಕ್ಕೆ  ಹೊಕ್ಕ  ಶ್ರೀನಾಥ.
ಜಗಲಿಗೆ  ಕಾಲಿಟ್ಟವ ಬೆವರು ಬಸಿಯುತ್ತಿದ್ದ ಅಂಗಿಯ ಗುಂಡಿಯನ್ನು ಬಿಚ್ಚುತ್ತಲೇ ಬೆಳಿಗ್ಗೆಯೇ  ಚಾರ್ಜಿಗೆ  ಹಾಕಿಟ್ಟ ಮೊಬೈಲ್ ಎತ್ತಿಕೊಂಡ.
ಹಿಂದಿನ ದಿನದಿಂದ ಒತ್ತಿ ಒತ್ತಿ ಬೇಸತ್ತ ನಂಬರಿಗೆ ಮತ್ತೊಮ್ಮೆ ಟ್ರೈ ಮಾಡಿದ.ಎರಡೆರಡು ಸಾರಿ
ಪೂರ್ತಿ ರಿಂಗಾದರೂ ಅತ್ತ ಕಡೆ ರಿಸೀವ್ ಮಾಡುತ್ತಿಲ್ಲ .ನೀರ ಪಸೆ ಆರಿದ ಗಂಟಲಿನಿಂದ  “ಎಲ್ಲೋದ್ಯೆ  ಒಂದು ಸಲ ಬಂದೋಗಿಲ್ಲಿ ” ಎಂದು  ದೊಡ್ಡಕೆ ಕೂಗತೊಡಗಿದಾಗ ಅಡುಗೆ ಮನೆ ಇಂದ  “ಓ…. ಬಂದಿ  ತಡ್ಕಳಿ ಚೂರು
ಮಜ್ಜಿಗೆ ಕಡಿಯಕ್ಕೆ ಹಾಕಿದ್ದಿ ನಿಂಗಕ್ಕೆ  ಮಜ್ಜಿಗೆ ಜೊತಿಗೆ ಉಪ್ಪು ಹಾಕ್ಲ ಬೆಲ್ಲ ಕರಡಿ  ತಗಂಡ್ ಬರ್ಲಾ?” ಎಂದಿನಂತೆ ಪ್ರಶ್ನಿಸುತ್ತ
ಪತ್ನಿ ಭಾರತಿ  ಕೈಯ್ಯಲ್ಲಿ  ಮಜ್ಜಿಗೆ ಲೋಟ ಹಿಡಿದೇ ತಂದಳು
“ತಗಳಿ ಬೆಳ್ಗೆ ಮುಂಚೆ ಎರಡು  ದೋಸೆ ತಿಂದು ಹೋದೋರು
ತಿರುಗಿ ಚಾ ಕುಡಿಯಕ್ಕು ಬರ್ಲೆ. ಈ ವರ್ಷ ರಾಜು ಶೇರೆಗಾರಂಗೆ ಫಸಲು ಗುತ್ತಿಗೆ ಕೊಟ್ಟಾಯ್ದು ಹಂಗಿದ್ಮೇಲೆ ಒಣ ಹೊಟ್ಟೇಲಿ ಈ ವಯಸ್ಸಗೂ ಯಾರಿಗೆ  ಹೇಳಿ ದುಡಿತಿ ನಿಂಗ.
ಮೊದ್ಲೇ  ನಮ್ಮನೆ ಮಾಣಿಯಂತು ಮನಿಗೆ ಬಪ್ಪವ ಅಲ್ಲ, ಕೂಸಿನ್ನು ಲಗ್ನ ಮಾಡಿ ಜವಾಬ್ಧಾರಿ  ಕಳ್ಕoಡಿದ್ದು.
 ನಾವ್ ಇಪ್ಪ ತಂಕ ಉಂಬಲೆ, ಕಾಯಿಲೆ ಕಸಾಲೆ ಎಲ್ಲದಕ್ಕೂ ಬ್ಯಾಂಕ್ ಲಿ ಇಪ್ಪ ಬಡ್ಡಿ ದುಡ್ಡೇ ಸಾಕು. ಹಂಗಿದ್ದಮ್ಯಾಲೆ ಮೈ ಗಿಬ್ಬಿಕಂಡು ಒದ್ದಾಡದು ಎಂತಕೆ??”  ಒಂದೇ ಸಮನೆ ಒದುರುತ್ತಾ ಇದ್ದರೂ ಒಂದು ಪದವನ್ನೂ ಆಲಿಸುವಷ್ಟು ವ್ಯವಧಾನವಿಲ್ಲದೆ
“ಥೋ ಮಾರೈತಿ ಅದನ್ನ ಅತ್ಲಗೆ ಬಡಿ. ಮೊದ್ಲು
ಆ  ವೀಣನ ಗಂಡನ ನಂಬರಿಗಾದ್ರು ನಿನ್ನ ಫೋನ್ ತಗಂಡ್ ಒಂದ್ಸಲ ಟ್ರೈ ಮಾಡು ನೋಡನ”  ಮತ್ತಷ್ಟು ಜೋರಾಗಿ ಆರಚಿದ.


ಭಾರತಿ ಈ ಮನೆ ಹೊಸ್ತಿಲು ತುಳಿದಾಗಿನಿಂದ ಶ್ರೀನಾಥನ ಎದುರು ಸಿಟ್ಟಿನ  ಸ್ವಭಾವದ ಗುಟ್ಟು ಅರಿತ  ಭಾರತಿ ಮೌನವಾಗಿ  ತನ್ನ ಫೋನು ಹಿಡಿದುಕೊಂಡಳು
ಮೊದಲನೇ  ರಿಂಗಿಗೆ ಆ ಕಡೆ  ಇಂದ “Yes… Sanjay speaking…may I know who is this? “ಎಂಬ  ಮಾತು ಕೇಳುತ್ತಿದ್ದಂತೆ  ಭಾರತಿ
 “ಅಯ್ಯೋ   ಇಂಗ್ಲಿಷ್ ಗೆ ಮಾತಾಡ್ತಾ  ನೋಡಿ.ಇದ್ಯಾವ್ದೋ ಕಂಪನಿ ನಂಬರು.ನಾ ಮಾಡಿದ್ದು ಎಲ್ಲಿಗೋ ಹೋತು
ಕಾಣ್ತು ” ಭಯದಿಂದ ನುಡಿದಾಗ,
“ಕೊಡಿಲ್ಲಿ ಮೊಬೈಲು.,ಯಾಕ್ ಹೋಪದಿಲ್ಲೆ  ನೋಡೇಬುಡ್ತಿ ಇನ್ನೊಂದು ಸಲ” ಸಿಟ್ಟಿಂದ  ಕಸಿದುಕೊಂಡ ಶ್ರೀನಾಥ.

ಭೀಮಣ್ಣ  ಒಬ್ಬ ಅನುಭವಿ  ಕೃಷಿಕ ಅಷ್ಟೇ ಅಲ್ಲ  ಸ್ವತಃ ತಾನೇ ನೆಟ್ಟು ಬೆಳೆಸಿದ ಗಿಡಗಳಿಗೆ ಕಸಿ ಕಟ್ಟಿ ತರಾವರಿ ಹೂವು,ಹಂಪಲುಗಳ ಮನೆ ಹಿತ್ತಲಿನಲ್ಲೆ ಬೆಳೆದ ನಿಪುಣ ಸುತ್ತಮುತ್ತಲ ಊರಲ್ಲಿ  ಅಪ್ಪೆಮಿಡಿ  ಭೀಮಣ್ಣ ಎಂದೇ ಹೆಸರಾದವ!
ಹೆಂಡತಿ ಸರಸ್ವತಕ್ಕ ಕೂಡಾ ಒಬ್ಬ ಸದ್ಗೃಹಿಣಿ ಅಷ್ಟೇ ಅಲ್ಲ ಶಾಸ್ತ್ರೀಯ ಸಂಗೀತ ಪ್ರವೀಣೆ.
ತಮಗೆ ಸಂತಾನ ಭಾಗ್ಯವೇ ಇಲ್ಲವೇನೋ ಎಂಬ ಕೊರಗಿನಲ್ಲಿ ಕಂಡ ಕಂಡ ದೇವರಿಗೆ,ಹರಕೆ ಕಟ್ಟಿಕೊಂಡು ವ್ರತ,ಪೂಜೆ ಪುನಸ್ಕಾರದ ಫಲವಾಗಿ  ಇವರಿಗೆ ಹುಟ್ಟಿದ ಮುದ್ದಿನ ಮಗ ಕಿರಣ, ನಂತರದಲ್ಲಿ  ಹೆಣ್ಣು ಮಗು ಬೇಕೇ ಬೇಕು ಎಂಬ ಆಸೆಗೆ ಶಾರದೆಯ ವರಪ್ರಸಾದವೆಂಬಂತೆ  ಜನಿಸಿದ ವೀಣಾ.
ಭೀಮಣ್ಣನ ಮನೆಗೆ ಬರುವ ಅತಿಥಿಗಳಿಗೆ ಕಾಡಿನ ಮಧ್ಯೆ ಇರುವ ಸನ್ಯಾಸಿಗಳ ಆಶ್ರಮದೊಳಗೆ ಸಿಗುವ ಅನುಭವ!.ಏಕೆಂದರೆ ಮನೆ ಅಂಗಳದಲ್ಲಿ ಚಿಕ್ಕು, ಪಪ್ಪಾಯಿ, ಪೇರಳೆ ಹೀಗೆ ವರ್ಷಾವಧಿ  ಹಣ್ಣುಗಳ ಸುಗ್ಗಿ. ಇನ್ನು ಬೇಸಿಗೆಯಲ್ಲಿ ಮಧ್ಯಾಹ್ನ ಊಟಕ್ಕೆ ಉಳಿದವರಿಗಂತೂ ಸುಬ್ಬಣ್ಣನ ಕೈಯ್ಯಾರೆ ತಯಾರಾದ  ಮಾವು, ಹಲಸುಗಳಿಂದ ಮಾಡಿದ ರುಚಿ ರುಚಿ ಖಾದ್ಯಗಳ ಮೆಲ್ಲುವ ಸುಯೋಗ! ವಿಧವಿಧ ಉಪ್ಪಿನಕಾಯಿಯದೇ ಮೇಳ!
ಅತಿಥಿ ದೇವರುಗಳು  ಹೊಟ್ಟೆ ತುಂಬಾ ಉಂಡು ತೃಪ್ತಿಯಲಿ ತೇಗಿದಾಗಲೇ ಈ ದಂಪತಿಗಳಿಗೆ ಒಂದು ಬಗೆಯ  ಸಮಾಧಾನ.

ಶೈಕ್ಷಣಿಕ ಸೌಲಭ್ಯ  ಇಲ್ಲದ ಆಗಿನ ಕಾಲಕ್ಕೆ ತಾವಂತೂ ಹೆಚ್ಚು ಓದಲಾಗಲಿಲ್ಲ   ಇಂದು  ತಮ್ಮ ಇಬ್ಬರು ಮಕ್ಕಳನ್ನಾದರೂ ಒಳ್ಳೆಯ ವಿದ್ಯಾವಂತರನ್ನಾಗಿ ಮಾಡಬೇಕೆಂಬ  ಆಶಯ ಭೀಮಣ್ಣ ದಂಪತಿಗಳದು.
ಅದೇ ಕನಸಲ್ಲಿ ಅಚ್ಚುಕಟ್ಟಾಗಿ ಸಂಸಾರ ನಡೆಸಿ   ವರ್ಷದ ಉತ್ಪತ್ತಿ ಯಲ್ಲಿ ಉಳಿದ ಪೂರ್ತಿ ಹಣ ಮಕ್ಕಳ ಓದಿಗಾಗಿಯೇ ಸುರಿದು ಯಾವೊಂದು ಕೊರತೆ  ಮಾಡದೆ ಪ್ರೀತಿಯಿಂದ,ಶಿಸ್ತಿನಲ್ಲಿ ಬೆಳೆಸಿದರು. ಮುಂದೆ ಕಾಲೇಜಿಗೆ  ಸೇರಿಸುವಾಗಲೂ ಮುಂದಾಲೋಚನೆ ಇಟ್ಟು ,ಪಿತ್ರಾರ್ಜಿತ ಆಸ್ತಿಯಾಗಿ ಬಂದ ಎರಡು ಎಕರೆ ಗದ್ದೆಯನ್ನೇ ಕಷ್ಟಪಟ್ಟು ಅಡಿಕೆ ತೋಟ ಮಾಡಿ,ಒಳ್ಳೆಯ ಫಸಲು ತೆಗೆಯುತ್ತಿದ್ದ ಭೀಮಣ್ಣ  ಮುಂದೆ ಮಗನ ಕೈಯ್ಯಲ್ಲಿ  ಅದೇ ಜಮೀನಿಗೆ ಆಧುನಿಕ ಕೃಷಿ ಮಾಡಿಸಿ ಇನ್ನೂ ಹೆಚ್ಚಿನ ಪ್ರಗತಿ ಕಾಣಬೇಕು ಎಂಬ ಉದ್ದೇಶಕ್ಕೆ  ಕಿರಣನಿಗೆ ಅಗ್ರಿಕಲ್ಚರಲ್ ಸೈನ್ಸ್  ಕೊಡಿಸಿದ್ದ. ಅಪ್ಪನ  ಆಸೆಯಂತೆ  ಕಿರಣ್ ಶ್ರದ್ದೆಯಲಿ ಓದಿ ಅತಿ  ಹೆಚ್ಚಿನ ಮೆರಿಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಾಗ ಮಗನ ಸಾಧನೆ ಕಂಡು ಭೀಮಣ್ಣನ ಸಂತಸಕ್ಕೆ ಪಾರವೇ ಇಲ್ಲ. ಅದೇ ಖುಷಿಯಲ್ಲಿ ಊರ ಮುಂದೆ  “ಇನ್ನೇನು ನನ್ನ ಮಗ ತಾಲೂಕಿನ ಅಗ್ರಿಕಲ್ಚರ್ ಆಫೀಸ್ ಗೆ ಬಂದು  ದೊಡ್ಡ ಹುದ್ದೆ ಅಲಂಕರಿಸುತ್ತಾನೆ!
ಹೊಸ ಹೊಸ ಗೊಬ್ಬರ, ಔಷಧಗಳ ಪ್ರಯೋಗಿಸಿ,ಹೈಬ್ರೀಡ್ ಥಳಿಗಳ ಬೆಳೆಸಿ ಇಡೀ ತೋಟವನ್ನು ಬಂಗಾರ ಮಾಡುವ” ಎಂದು ಬೀಗಿದ್ದ.
ಭೀಮಣ್ಣನ ಕನಸು ನನಸಾಗುವ ಕಾಲಬಂದೇ ಬಿಟ್ಟಿತು ಎನ್ನುವಷ್ಟರಲ್ಲ್ಲಿ ಪ್ರೊಫೆಸರ್ ಒಬ್ಬರ  ಸಲಹೆ ಮೇರೆಗೆ ಕಿರಣ್ ಇನ್ನೂ ಹೆಚ್ಚಿನ  ಎಜುಕೇಶನ್ ಗೋಸ್ಕರ ವಿದೇಶ ಕ್ಕೆ ಹಾರಿ ಎರಡು ವರ್ಷದೊಳಗೇ  ದೊಡ್ಡ ಸೈoಟಿಸ್ಟ್  ಆದ.
ಒಂದೇ  ಬಾರಿ ತಾಯ್ನಾಡಿಗೆ ಬಂದು ಅಪ್ಪ ಅಮ್ಮನ ಮುಖ ನೋಡಿಕೊಂಡು ಹೋಗಿದ್ದಷ್ಟೇ.ಅದೇ ಯೂನಿವರ್ಸಿಟಿಯಲಿ ಓದಲು ಬಂದಿದ್ದ  ಜರ್ಮನಿಯ ಜೇನುಕಂಗಳ ಚೆಲುವೆಗೆ ಮರುಳಾಗಿ  ಅವಳನ್ನೇ ಕೈ ಹಿಡಿದು ಅಲ್ಲೇ ಸೆಟಲ್ ಆಗಿದ್ದಾನೆ ಎಂಬ ಸುದ್ದಿ ಫೇಸ್ಬುಕ್ ಲ್ಲಿದ್ದ ಅವನ ಫ್ರೆಂಡ್ ಮುಖೇನ ತಡವಾಗಿ ಭೀಮಣ್ಣನ ಕಿವಿಗೆ ತಲುಪಿತು.

ಮುದ್ದಿನ ಗಂಡು ಮಗನ ಬಗ್ಗೆ ನೂರಾರು ಭರವಸೆಗಳನ್ನಿಟ್ಟು ಬೆಳೆಸಿದ್ದ ಕೆಲಸವಾನಿ  ಭೀಮಣ್ಣನ ಮನೋಬಲ,  ದಿನೇ ದಿನೇ ಕುಸಿಯತೊಡಗಿತು. ಹೆಸರಿಗೆ ಅನ್ವರ್ಥವಾಗಿ ಬಲವಾದ ಆಳಾಗಿದ್ದ ಭೀಮಣ್ಣನ ದೇಹ  ಕ್ರಮೇಣ ಕೃಶವಾಗ ತೊಡಗಿತು.
 ‘ಮಗಳಾದರೂ ಹತ್ತಿರ ಇದ್ದಾಳಲ್ಲ ‘ ಎಂದು ಪತ್ನಿಗೆ ಆತನೇ ಧೈರ್ಯ ತುಂಬಿದ್ದ.

ಆದಷ್ಟು ಬೇಸರ ನುಂಗಿಕೊಂಡು ಸಂಸಾರ ಸಾಗುತ್ತಿರಲು ಮಗಳು ವೀಣಾ ಓದಿನ ಕಡೆ ಆಸಕ್ತಿ ತೋರದೆ ಸಂಗೀತದಲ್ಲಿ ವಿದ್ವತ್ ಪಡೆಯಲೇ ಬೇಕೆಂಬ ಹಠಕ್ಕೆ ಬಿದ್ದು ಕಲಿಕೆಯಲ್ಲಿರುವಾಗಲೇ ಸಾಫ್ಟ್ ವೇರ್ ಕಂಪನಿಯಲಿದ್ದ ಶ್ರೀಮಂತ ವರ ಬಂದಾಗ  ಹಿಂದೆ ಮುಂದೆ ಯೋಚಿಸದೆ ಅರ್ಧ ಎಕರೆ ಜಮೀನನ್ನೇ ಮಾರಿ  ಖುಷಿಯಿಂದ ಭರ್ಜರಿಯಾಗಿ ಮದುವೆ ಮಾಡಿಕೊಟ್ಟ.
ಎರಡು ಮಕ್ಕಳ ಹೆತ್ತು ಬಾಣಂತನ ಮುಗಿಸಿಕೊಂಡು ಮುಂಬೈಗೆ ಹೋದ ಮೇಲೆ ವೀಣಾ ತಾನಾಯಿತು ತನ್ನ ಗಂಡ, ಮಕ್ಕಳಾಯ್ತು ಊರಿಗೆ ಬರುವುದು ಅಪರೂಪವಾಯಿತು.
ಯಾರು ನಿಂತಲ್ಲೇ ನಿಂತಿದ್ದರೂ ಕಾಲ ಕೂರುವುದೇ, ಭೀಮಣ್ಣನಿಗೀಗ ಎಪ್ಪತ್ತೊಂಬತ್ತು ತುಂಬಿ ಎಂಬತ್ತರ ಹೊಸ್ತಿಲು. ವಯೋಸಹಜ  ಬಂದ ಬಿ.ಪಿ, ಶುಗರ್  ಖಾಯಿಲೆಗಳ .ನಡುವೆ  ಅವರಿವರ ಕೈ ಕಾಲು ಹಿಡಿದು ಎರಡು ಕಣ್ಣಿಗೂ ಆಪರೇಷನ್ನೂ ಕೂಡಾ ಆಯ್ತು.
ಇನ್ನು ಅರವತ್ತೆಂಟರ ಸರಸ್ವತಕ್ಕನಿಗೆ ಮರೆವಿನ ರೋಗ,  ಗ್ಯಾಸ್ ಸ್ಟವ್ ಹಚ್ಚಿದ್ದು ಇಡೀ ದಿನ ಹಾಗೇ ಉರಿಯುತ್ತಲೇ ಇರುತ್ತದೆ.  ಮಾತ್ರೆ ನುಂಗಿದರೆ ಹೊತ್ತಿಗೆ ಮೂರು ಇಲ್ಲದಿದ್ದರೆ  ಇಡೀ ದಿನ ಆದರ ನೆನಪೇ ಬಾರದು.ಕಿವಿಗೆ ಹಾಕಿದ ಮಿಷನ್ ತೆಗೆದರೆ  ಪಕ್ಕದಲ್ಲಿ ಡಂಗುರ ಬಾರಿಸಿದರೂ ಕೇಳಿಸಿದ ಕಿವುಡುತನ.ಹೆತ್ತು ಹೊತ್ತು  ಸಾಕಿದ ಮಕ್ಕಳಿಬ್ಬರ ಆಶ್ರಯ, ಪ್ರೀತಿಯಿಂದ ವಂಚಿತರಾದ ಇಂತಹ ಯಾತನಾಮಯ ವೃದ್ಧಾಪ್ಯದಲ್ಲಿ ಮಾನಸಿಕ ಅಸ್ವಸ್ಥತೆ ಕಾಡದೆ ಇದ್ದೀತೆ?

ಮಾಗಿಚಳಿ ಪ್ರಾರಂಭದ ದಿನಗಳವು.ಅಂದು ದೀವಾನ್ ಮೇಲೆ ಕವಳ ಜಗಿಯುತ್ತ ಕೂತಿದ್ದ ಭೀಮಣ್ಣ,ಇದ್ದಕ್ಕಿದ್ದ ಹಾಗೆ  ಮೇಲಿಂದ ಕುಸಿದು ಬಿದ್ದವ ತಲೆಗೆ ಬಲವಾದ ಏಟಾದರೂ ಅತ್ತಿತ್ತ ಕದಲದೇ ನೆಲಕ್ಕೆ ಒರಗಿಬಿಟ್ಟ.
ದೇವರ ಕೋಣೆಯಲ್ಲಿ ಸ್ತೋತ್ರ ಓದುತ್ತಾ ಕೂತಿದ್ದ ಸರಸ್ವತಕ್ಕ ಸುಮಾರು ಹೊತ್ತಿಗೆ  ಬಂದವಳು ಈ ದೃಶ್ಯ ಕಂಡು ದಿಕ್ಕೇ ತೋಚದೆ  ಕಂಗಲಾದಳು.
ಹೇಗೋ ಆತರಿಸಿಕೊಂಡು  ಪುಸ್ತಕದಲ್ಲಿನ ನಂಬರ್ ಹುಡುಕಿ ಮಗಳಿಗೆ ಫೋನು  ಹಚ್ಚಿದರೆ ” ಏನಮ್ಮ ನಿಂದೂ? 108ಕ್ಕೆ ಕಾಲ್ ಮಾಡಿ ಬೇಗ ಆಸ್ಪತ್ರೆಗೆ ಸೇರಿಸು. ನೀ  ಹೀಗೆ  ಧಿಡೀರ್ ಅಂತ ಹೇಳಿಬಿಟ್ರೆ  ಹೇಗೆ ಬರೋದು?”
ಎಂದು ಖಡಕ್ಕಾಗಿ ನುಡಿದು ಫೋನು ಕುಕ್ಕಿದಾಗ, ಗಂಡನಿಗೆ  ಎಚ್ಚರ ತಪ್ಪಿದ ಆತಂಕವೊಂದೆಡೆ ,ಜೊತೆಗೆ ಫೋನೊಳಗೆ ಮಗಳಿಂದ ಬಂದ ನಿರಾಶಾದಾಯಕ ಉತ್ತರದ ನೋವು ಬೇರೆ ಸರಸ್ವತಕ್ಕನಿಗೆ.
ಕೊನೆಗೂ ಕೇರಿ ಜನಗಳೇ ಗತಿ ತಮಗೆ ಎಂದುಕೊಂಡು ಒಮ್ಮೆ ಆಚೀಚೆ  ಮನೆಯವರನ್ನು ಕೂಗಿ  ಸುಸ್ತಾಗಿ  ಶಿವನೇ ಎನ್ನುತ್ತಾ ತಲೆಗೆ ಕೈ ಕೊಟ್ಟು ಹತಾಶೆಯಿಂದ ಕೂತು ಬಿಟ್ಟಳು ಸರಸ್ವತಕ್ಕ.
ಅದೇ ಹೊತ್ತಿಗೆ ಪಕ್ಕದೂರಿಂದ ಸಂತಾನು ಸಂತು ಎಂದು  ಆಗಮಿಸಿದ ಶ್ರೀನಾಥ (ಸರಸ್ವತಕ್ಕನ ದಾಯಾದಿ )”ಅತ್ಯಮ್ಮ … ಮಾವಾ ಇದೇನು ಒಬ್ರದ್ದೂ ಸದ್ದೇ ಇಲ್ಲೆ!!
ಎಲ್ಲೋದಿ ಅರಾಮಿದ್ರಾ?”  ಕೇಳುತ್ತಲೇ ಕೈಸಾಲೆವರೆಗೂ ಬಂದವನು,  ಪ್ರಜ್ಞೆಯಿಲ್ಲದ ಭೀಮಣ್ಣ ನ ಪರಿಸ್ಥಿತಿ ನೋಡಿ “ಅಯ್ಯೋ ಎಂತಾಗೋತು? ಎಷ್ಟೊತ್ತಾತು ಬಿದ್ದು?”
ಗಾಬರಿಯಿಂದ ಹಣೆ ಎಲ್ಲಾ ಮುಟ್ಟಿ,ಎದೆ ಬಡಿತ ಪರೀಕ್ಷಿಸಿ ಒಮ್ಮೆ ಖಾತರಿ ಮಾಡಿಕೊಂಡವ  ತನ್ನ ಕಾರಲ್ಲಿ ಸೀದಾ ಹೈಟೆಕ್ ಆಸ್ಪತ್ರೆ ಯೊಂದಕ್ಕೆ ಕರೆದೊಯ್ದ.
ಆಸ್ಪತ್ರೆ ಆವರಣಕ್ಕೆ ಹೋಗುತ್ತಿದ್ದಂತೆ ತಕ್ಷಣ ಅಲ್ಲಿಯ ಕಾಂಪೌಂಡರ್, ಸಿಸ್ಟರ್ ಗಳು ಸ್ಟ್ರಕ್ಚರ್ ಮೂಲಕ ಎಮರ್ಜೆನ್ಸಿ ವಾರ್ಡಗೆ  ನಂತರ , ಕೆಲವೇ ಕ್ಷಣದಲ್ಲಿ ಪೇಶಂಟ್ ಕೋಮಾ ಸ್ಥಿತಿಯಲ್ಲಿರುವನೆಂದು ಚಿಕಿತ್ಸೆ ಶುರುಮಾಡೋ ಮೊದಲು ಡಯಾಗ್ನೋಸಿಸ್ ಒಳಪಡಿಸಲು ಐ.ಸಿ.ಯು ನಲ್ಲಿಡಲು ಶಿಫ್ಟ್ ಮಾಡಲಾಯಿತು.
ಶ್ರೀನಾಥ ಸ್ವಲ್ಪವೂ ಎದೆಗುಂದದೆ ಅಲ್ಲಿ ಏನೇನು ವ್ಯವಸ್ಥೆ ಆಗಬೇಕೋ ಎಲ್ಲಾ ಮಾಡಿ, ಮಧ್ಯರಾತ್ರಿಗೆ  ಮನೆ ಸೇರಿದ.
ನಂತರ ಪ್ರತಿದಿನವೂ ಎರಡು ಬಾರಿ ಆಸ್ಪತ್ರೆಗೆ
ಬಂದು ಆದಷ್ಟು  ಹೊತ್ತು ಅಲ್ಲೇ ಇದ್ದು, ರಿಪೋರ್ಟ್ ಪ್ರಕಾರ ಹೆಚ್ಚಿನ ಟ್ರೀಟ್ಮೆಂಟ್ ಬಗ್ಗೆ ಡಾಕ್ಟರಲ್ಲಿ ವಿಚಾರಿಸಿ, ಮಾತ್ರೆ ಔಷಧಿ ಹೀಗೆ ಎಲ್ಲಾ ಜವಾಬ್ಧಾರಿ ಇವನೇ ನೋಡಿಕೊಳ್ಳುತ್ತಿದ್ದ.
ಈ ನಡುವೆ ಮಗಳು  ವೀಣಾ ಅದೊಂದು ದಿನ ಬಂದು ಅಪ್ಪ ಅಮ್ಮನ ಆಸ್ಪತ್ರೆಯಲ್ಲೇ  ಮಾತಾಡಿಸಿ   ‘ಏನಾದ್ರೂ ತೊಂದ್ರೆ ಆದಾಗ  ಶ್ರೀ ಅಂಕಲ್ ಗೆ ಕಾಲ್ ಮಾಡಿ ಬರ್ತಾರೆ “ಎನ್ನುತ್ತಾ  ಖರ್ಚಿಗಷ್ಟು ದುಡ್ಡು ಕೊಟ್ಟು ಪರಾರಿಯಾದಳು.
ವಾರ  ಕಳೆದರೂ ಸಹಜ ಸ್ಥಿತಿಗೆ ಬರದ ಭೀಮಣ್ಣನನ್ನು ಒಂದು ದಿನ ಡಾಕ್ಟರ್ “ಮನೆಗೆ ಕರೆದುಕೊಡು ಹೋಗಿ ಯಾವತ್ತಾದ್ರೂ
ಎಚ್ಚರವಾದರೂ  ಆಗಬಹುದು ಜಾಗ್ರತೆ.ನಮ್ಮ ಪ್ರಯತ್ನವೆಲ್ಲಾ ಮಾಡಿ ಮುಗಿಸಿದ್ದೇವೆ ಎಂದು ಕಳಿಸಿಬಿಟ್ಟರು.

ಅಂದಿನಿಂದ  ಈ ಮನೆಯ ಮೇಲೆ ಶ್ರೀನಾಥನ ಜವಾಬ್ಧಾರಿ ಮತ್ತೂ ಹೆಚ್ಚಾಯಿತು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡವನಿಗೆ  ಭೀಮಣ್ಣನ ಬಗ್ಗೆ ಅದೇನೋ ಪ್ರೀತಿ.ಈಗಂತೂ ಇವರೇನೂ ಪರರಲ್ಲ ತನ್ನ ಮನೆಯವರೇ ಅನ್ನುವಷ್ಟು  ಹಚ್ಚಿಕೊಂಡು  ಕಾಳಜಿಯಲ್ಲಿ ಹಗಲು ರಾತ್ರಿ ಎನ್ನದೇ ತಾನೇ ಖರ್ಚುವಹಿಸಿ ಡಾಕ್ಟರ್ ಚೆಕ್ ಅಪ್ ಮಾಡಿಸಿ ತನ್ನ ನಿಸ್ವಾರ್ಥ ಸೇವೆಗಯ್ಯುತ್ತಿದ್ದ .
ಬೇರೆ ವಿಧಿಯಿಲ್ಲದೆ ಸರಸ್ವತಕ್ಕನೂ  ಮನೆ ಕಡೆ ಸ್ವಲ್ಪ ವ್ಯತ್ಯಾಸವಾದರೂ ಶ್ರೀನಾಥನಿಗೇ ಫೋನು ಮಾಡುವುದು ಅಭ್ಯಾಸವಾಗಿಬಿಟ್ಟಿತ್ತು.
ಹೀಗೆ ಮೂರು ತಿಂಗಳು ಈ ಕಡೆ ಜ್ಞಾನವೇ ಇಲ್ಲದ ಭೀಮಣ್ಣ ಪವಾಡವೆಂಬಂತೆ  ಆ ರಾತ್ರಿ ಇದ್ದಕಿದ್ದ ಹಾಗೇ ಕಣ್ಣು ತೆರೆದು  ಏನೇನೋ ಗೊಜ ಗೊಜ ಮಾತಾಡತೊಡಗಿದಾಗ  ಹೆಂಡತಿಗೆ ಪರಮಾಶ್ಚರ್ಯ!
ಆ ಕ್ಷಣಕ್ಕೆ ಆದ ಖುಷಿಗೆ ರಾತ್ರೋರಾತ್ರಿ ತಕ್ಷಣ ಮಗಳಿಗೆ ಫೋನು ಮಾಡಿಬಿಟ್ಟರು.
“ವಾವ್ ! I am very happy.ಅಪ್ಪ ರಿಕವರ್ ಆದರೆ? Realy  God is great! ಕಣಮ್ಮಾ.
Early morning ಹೊರಟು ಬರ್ತೇವೆ. ಮತ್ತೆ ಮನೆಗೆ ಏನಾದ್ರೂ ತರ್ಬೇಕಾ ಹೇಳು ”  ಮಧ್ಯ ರಾತ್ರಿಗೆ ತಕ್ಷಣ  ಫೋನು ಎತ್ತಿದ ಮಗಳು ವೀಣಾಳ ಸಂತೋಷಭರಿತ ಉದ್ಗಾರದ ನುಡಿ ಕೇಳಿ ಸರಸ್ವತಕ್ಕನಿಗೆ ಪರಮಾಶ್ಚರ್ಯ!ಇತ್ತೀಚಿಗೆ ಮಗಳು ಒಮ್ಮೆ ಕೂಡಾ  ಒಳ್ಳೇ ಮಾತಾಡಿದ್ದೆ ಇಲ್ಲ. ಅಷ್ಟಕ್ಕೂ ಒಂದು ದಿನವೂ ತಾನಾಗಿಯೇ ಅಪ್ಪನ ಅರೋಗ್ಯ ವಿಚಾರಿಸಿದ ದಾಖಲೆಯೂ ಇಲ್ಲ!

ಇತ್ತ ಸುದ್ದಿ ಕೇಳಿದ ಶ್ರೀನಾಥ  ಸಂತೋಷ, ಕುತೂಹಲದಿಂದ ಮಾವನ ಮಾತಾಡಿಸಲು ಬೆಳಿಗ್ಗೆ ಎದ್ದವನೇ ಹಾಜರು.
ಭೀಮಣ್ಣನ ಅಪ್ಪಿಕೊಂಡವನೆ ಗಳಗಳ ಅಳುತ್ತ
“ಸಧ್ಯ ಮಾವ ಮೊದಲಿನಂತೆ  ಊಟ, ತಿಂಡಿ ಮಾಡಿಕೊಂಡು ಮನೆಯೊಳಗೆ ಓಡಾಡಿಕೊಂಡಿರುವಂತೆ ಆದ್ರೆ ಸಾಕು ಅತ್ಯಮ್ಮ!
ಎಂದು ಸಮಾಧಾನದಿಂದ ಹೊರಟು ನಿಂತಾಗ ಸರಸ್ವತಕ್ಕ “ನಾಳೆ ಮಗಳು ಅಳಿಯ  ಬಪ್ಪೋರ್ ಇದ್ದ.  ಯಂಗಕ್ಕೇನು ತೊಂದ್ರಿಲ್ಲೆ.ನಾಲ್ಕು ದಿನ ನಿನ್ನ ಮನೆಕಡೆ  ನೋಡ್ಕ್ಯ,  ಮಾಣಿ ನಿಂಗೂ  ಮನೆ -ಮಠ,ವಯಸ್ಸಾದ ತಾಯಿ ಇದ್ದು ಪಾಪ.”ಎಂದರು.
ಮರುದಿನ  ಮಗಳು, ಅಳಿಯ, ಮೊಮ್ಮೊಕ್ಕಳು ಮಾತ್ರ ಅಲ್ಲ ಜೊತೆಗೊಬ್ಬ ಹಿಂದಿಯಲ್ಲಿ ಮಾತಾಡುವ ಅಪರಿಚಿತ ವ್ಯಕ್ತಿ ಕೂಡಾ ಬಂದಿದ್ದ.
ತೋರಿಕೆಗೆ ಒಂದೆರಡುಕ್ಷೇಮ ಸಮಾಚಾರದ ಮಾತಾಡಿ
ಸೀದಾ ವೀಣಾ ಕೋಣೆಗೆ ಹೋದವಳೇ ಹಳೇ ಆಲ್ಮೆರಾದಲ್ಲಿದ್ದ
ಒಂದಷ್ಟು ಕಾಗದ ಪತ್ರ ಸರ ಸರ ತೆಗೆದಳು.ಎಲ್ಲಾ ಸೇರಿ ಸುಮಾರು ಹೊತ್ತಿನ ತನಕ ಏನೋ ಗಹನವಾದ ಚರ್ಚೆಯಲ್ಲಿ  ಮುಳುಗಿದವರು  ಅಪ್ಪನ ನಡುಗುವ ಕೈಗೆ ಪೆನ್ನು ಕೊಟ್ಟು ಅದ್ಯಾವುದೋ  ಪೇಪರ್ ಮೇಲೆ ಸೈನ್ ಮಾಡಿಸಿಕೊಂಡಿದ್ದು ಸರಸ್ವತಕ್ಕಗೆ ಆಸ್ಪಷ್ಟವಾಗಿ  ತೋರಿದ್ದಷ್ಟೇ.
 ಮರುದಿನ ಬೆಳಗಿನ ಜಾವವೇ  ಎಲ್ಲರೂ ವಾಪಾಸ್ ಹೊರಟಾಗಲೂ
ಏನೂ ಅರಿಯದ ಮುಗ್ಧ ಸರಸ್ವತಕ್ಕ ಮೂಕ ಪ್ರೇಕ್ಷಕಳಾಗಿ ಬೀಳ್ಕೊಡುವಾಗ,
ಮನೆ ಅಂಗಳದ ಸುತ್ತ ಮುತ್ತ ಗಿಡ ಮರಗಳಿಂದ ಹಣ್ಣಾದ
ಹಳದಿ ಕೆಂಪು ಎಲೆಗಳು ಕೊರೆವ ಇಬ್ಬನಿಯಲ್ಲಿ ಬಳ ಬಳ ಉದುರುತ್ತಾ ಬಾಳ ಸಂಧ್ಯಾ ಕಾಲವನ್ನು ಸೂಚಿಸುತಿತ್ತು.

           ದಿನಕಳೆದಂತೆ  ಭೀಮಣ್ಣನ ಆರೋಗ್ಯ ಮತ್ತೆ ಹದಗೆಡುತ್ತಲೇ ಬಂತು. ಎಷ್ಟೇ ಕೆಲಸದ ಒತ್ತಡವಿದ್ದರೂ ಪ್ರತಿ ಸಾರಿ ಶ್ರೀನಾಥನೇ  ಚೆಕ್ ಅಪ್ ಮಾಡಿಸಿಕೊಂಡು ಬರುವುದು ಅನಿವಾರ್ಯವಾಗಿತ್ತು.
ಈ ಬಾರಿ ಸರಸ್ವತಮ್ಮನ ಫೋನ್ ಕರೆ ಬಂದಾಗ ಶ್ರೀನಾಥ ಸ್ವಾಭಾವಿಕವಾಗಿ ಹೇಳತೊಡಗಿದ “ಅವತ್ತು ಮಗಳು ಅಳಿಯ ಬಂದಿದ್ವಲ್ಲ. ಮುಂದಿನ ವ್ಯವಸ್ಥೆ ಬಗ್ಗೆ ಏನಂದ?ನಿಂಗಳಿಬ್ಬರು ಒಂದು ಸಲ  ಅಲ್ಲಿಗೆ ಹೋಗಿ ಒಳ್ಳೇ  ಡಾಕ್ಟರ್ ಗೆ ತೋರಿಸ್ಕೊಂಡಿದ್ರೆ ಚೆನ್ನಾಗಿರ್ತಿತ್ತು ಅನ್ನಿಸ್ತು “
“ಅವಾಗಿ  ಕರೀದೆ ಯಂಗ ಹ್ಯಾಂಗೆ ಹೋಪದು ಹೇಳು  ಮಾಣಿ ?
ಕಾರೊಳಗೆ ಜಾಗ ಬೇರೆ ಇರ್ಲೆ. ಅವು ಬಪ್ಪಕ್ಕಾರೆ  ಒಂದ್ ನಮೂನಿ ವಕೀಲರ ಹಂಗೆ ಇದ್ದವ್ನ  ಕರ್ಕಂಡ್ ಬಂದಿದ್ದ. ರಾತ್ರಿ ತನಕ ಅವ್ರ ಭಾಷೆಲೆ ಮಾತುಕತೆ ಜೋರು ನಡೀತಿತ್ತು.ಇವ್ರ ಕೈ ಹಿಡ್ಕಂಡು ಯಾವ್ದೋ ಕಾಗದಕ್ಕೆ ಸೈನು ಹಾಕ್ಸಿದ್ದು ಕಂಡಿ. ಬಹುಷಃ ಎಂತಾರು ದುಡ್ಡು ಬಪ್ಪಾ ಹಂಗೆ…..”
ಸರಸ್ವತಕ್ಕ ಮಾತು ಮುಗಿಸೋ ಮುಂಚೆಯೇ ಶ್ರೀನಾಥನ ಕಿವಿ ಚುರುಕಾಯಿತು. ದೊಡ್ಡ ಅನ್ಯಾಯವಾಯಿತು ಎಂದು ವಿಷಯ ಪೂರ್ತಿ ಅಂದಾಜು ಮಾಡಿಕೊಂಡವನೇ  ಇದನ್ನ ಇಷ್ಟಕ್ಕೆ ಬಿಡಬಾರದು  ವೀಣಾಳ  ಹತ್ತಿರ ಮಾತಾಡಲೇಬೇಕು ಎಂದು ಸಿಟ್ಟಿನಿಂದ ಎರಡು ದಿನದಿಂದ
ಅವಳ ನಂಬರಿಗೆ ಪದೇ ಪದೇ  ಫೋನ್ ಟ್ರೈ ಮಾಡುತ್ತಿದ್ದ.
ಅಂತೂ ಕೊನೆಯ ಬಾರಿಗೆ ಅಕಸ್ಮಾತ್ ವೀಣಾ ಮಾತಿಗೆ ಸಿಕ್ಕಳು
ಅವಳೇ ಮಾತು ಶುರುಮಾಡಿ “ಅಂಕಲ್  sorry.ಅಪ್ಪ, ಅಮ್ಮಾ ಹೇಗಿದ್ದಾರೆ? Age ಆದವರನ್ನ care ಮಾಡಬೇಕು ಅಂತ ನಮಗೂ ಫೀಲ್ ಆಗುತ್ತೆ.ಆದ್ರೆ ನಾವು ತುಂಬಾ ಬ್ಯುಸಿಲಿದ್ದೇವೆ  ನೆಕ್ಸ್ಟ್ ವೀಕ್ ಮಕ್ಕಳಿಗೆ ಸೆಮ್ ಬ್ರೇಕ್ ಸ್ಟಾರ್ಟ್ ಆಗುತ್ತ್ತೆ.ದುಬೈ ಗೆ ಟ್ರಿಪ್ ಮಾಡಿಬರೋಣ ಅಂತ ಪ್ಲಾನ್ ಇದೆ.”
 ಎಂದು ಎಂಜಲು ನುಂಗಿಕೊಳ್ಳುತ್ತಾ “ಒಂದು ವಿಷಯ ಮರೆತಿದ್ದೆ ನೋಡಿ,ಕಳೆದ ಬಾರಿ ಊರಿಗೆ ಬಂದಾಗ ಅಪ್ಪ ಜಮೀನ್ ಅಷ್ಟು ನನ್ನ ಹೆಸರಿಗೆ ಬರೆದು ಕೊಟ್ಟುಬಿಟ್ಟ ಪಾಪ.ಅವರಿಗೆ ನಾವು ಚೀಟ್ ಮಾಡೋಕಾಗುತ್ತ? ಬೆಂಗಳೂರಲ್ಲಿ  ‘ಆಸರೆ’  ಎಂಬ ವೃದ್ಧಾಶ್ರಮಕ್ಕೆ ಮಾತಾಡಿದ್ದೇವೆ.ಅಲ್ಲಿ ತನಕ ಅಮ್ಮನಿಗೆ ಏನಾದ್ರೂ ಕಷ್ಟ ಆದ್ರೆ ಪ್ಲೀಸ್ ಒಬ್ಬಳು  ಯಾವದಾದ್ರು ನರ್ಸ್ ಗೆ ಹೇಳಿ ವ್ಯವಸ್ಥೆ ಮಾಡಿಸಿ. ನಿಮಗೆ ಪುಣ್ಯ ಬರುತ್ತೆ. “ಎಂದು ಕಾಲ್ ಕಟ್ ಮಾಡಿಬಿಟ್ಟಳು.
            ಮೊಬೈಲ್ ತೆಗೆದು ದೂರ ಇಟ್ಟವನೇ ಹತ್ತು ನಿಮಿಷ ತಟಸ್ಥನಾಗಿ ಕೂತು ಬಿಟ್ಟ ಶ್ರೀನಾಥ.ಮೊಬೈಲ್ ಒಳಗಿನ ಮಾತನ್ನು ಅಲ್ಪ ಸ್ವಲ್ಪ ಕೇಳಿಸಿಕೊಂಡ ಭಾರತಿ ಸುಮ್ಮನಿರದೆ “ನೋಡಿ ಹೆಂಗಾತು ಈಗ? ಸಾಕ  ಆಗಿದ್ದು? ಅವತ್ತಿಂದ ಬಾಯಿ ಬಾಯಿ ಬಡ್ಕಂಡಿ  ಸಾವಿರ ಸಲ  ನಿಂಗಕ್ಕೆ ಬ್ಯಾಡ  ಇದ್ರ ಉಸಾಬರಿ ಅಂತ. ಚೂರೂ ಕಿವಿ ಮೇಲೆ ಹಾಕ್ಯಳ್ಳೆ ಅಲ್ದಾ?” ಎಂದ ಮಾತಿಗೆ ಶ್ರೀನಾಥ ಒಮ್ಮೆ ದೀರ್ಘ ನಿಟ್ಟುಸಿರುಬಿಟ್ಟು
ಶಾಂತ ಚಿತ್ತದಿಂದ    ” ನೋಡು ಭಾರತಿ,ಹಣ್ ಎಲೆ  ಉದುರಕ್ಕಾದ್ರೆ ಕಾಯಿ ಎಲೆ ನಗ್ಯಾಡಿತ್ತಡ! ಹಿಂದಿನವು  ಗಾದೆ ಕಟ್ಟಿದ್ದು ಸುಮ್ನೆ ಅಲ್ಲ.
ಲೋಕನೀತಿ ಹಿಂಗೆ ಬಂದೋಯ್ದು. ಇವತ್ತು ಅವ್ರ ಮನೆ ಪರಿಸ್ಥಿತಿ ನಾಳೆ ಎಲ್ಲಾ ಅಪ್ಪ ಅಮ್ಮನ ಕಥೆಯೂ ಇಷ್ಟೇ. ಹಂಗೆ  ಮುಂದೆ ಮಕ್ಕಳಿಗೂ ತಪ್ಪಿದ್ದಲ್ಲ ಈ ಅವಸ್ಥೆ.ಮಾಡಿದ ಪುಣ್ಯ  ಏನಾರು ಇದ್ರೆ ಅಂತವ್ರನ್ನ ಆ ದೇವ್ರು ಕಾಯ್ತ.”
‘ಆನು ಗಟ್ಟಿ ಇಪ್ಪ ತನಕ ಅಮ್ಮಾ  ನಿನ್ನ, ಆ ಅತ್ಯಮ್ಮನ  ಘನಾಗಿ ನೋಡಿಕೊಳ್ತಿ.ಖಂಡಿತಾ ಕೈ ಬಿಡದಿಲ್ಲೆ  ಚಿಂತೆ ಮಾಡಡಿ “
ಎಂದು ಅಲ್ಲೇ ಇದ್ದ ತಾಯಿ ಗೌರಮ್ಮನ ನೋಡುತ್ತಾ ಭಾವುಕನಾಗಿ ತಗ್ಗು ಸ್ವರದಲ್ಲಿ  ಹೇಳತೊಡಗಿದ.

Leave a Reply

Back To Top