ಕಾವ್ಯ ಸಂಗಾತಿ
ಲಲಿತಾ ಕ್ಯಾಸನ್ನವರ
ಗುಳ್ಳವ್ವ
ಮುಂಜಾನೆದ್ದುಕೊಂಡು ಮಳೆಯಲ್ಲಿ
ಕಡ್ಲಿ ಕಿಸೆ ತುಂಬಿಕೊಂಡು ರಾಡಿಯಲ್ಲಿ
ಬುಟ್ಟಿ ಹೊತ್ತುಕೊಂಡು ಜಿಗಿದಾಡುತಲಿ
ಗುಳ್ಳವ್ವನ ಕರೆಯಲು ಹೊಂಟೇವು
ಮಣ್ಣಿಗೆ ಪೂಜೆಮಾಡಿ ಕಡ್ಲಿಯಹಂಚುತಲಿ
ಊದುಕಡ್ಡಿ ಬೆಳಗಿ ಮಣ್ಣು ತುಂಬುತಲಿ
ಮನಿಗೆ ಗುಳ್ಳವ್ವನ ಮಣ್ಣ ತಂದೇವು
ಕುಸುಬಿ ಗುಲಗಂಜಿ ಹೂವ ಇಟ್ಟೆವು
ಒಂದಕ್ಕಿಂತ ಒಂದು ಚೆಂದದ ಚೌಕಟ್ಟಿನಲ್ಲಿ
ಸಾಗವಾನಿ ಚಿತ್ರ ಚಿತ್ತಾರದ ಸೊಬಗಿನಲ್ಲಿ
ಒಂದರಿಂದ ಐದನೇ ಅಂತಸ್ತಿನ ಅಟ್ಟಣಿಗೆಯಲ್ಲಿ
ಚೆಂದಧ ಗುಳ್ಳವ್ವನ ಕುಡ್ರಿಸಿ ಆರತಿ ಬೆಳಗೆವು
ಮನೆ ಮನೆಗೆ ಹೋಗಿ ಹಾಡುತಲಿ
ಗೆಳೆಯರೆಲ್ಲ ಕೇಕೇಹಾಕಿ ಕೈ ಕುಲುಕುತಲಿ
ವಡಿಕಡಬು ದೋಸೆ ಬಜ್ಜಿ ನೈವೇದ್ಯ ತಟ್ಟೆಯಲ್ಲಿ
ಗುಳ್ಳವ್ವಗ ಆರತಿ ಮಾಡಿ ಬೇಡಿಕೊಂಡೆವು
ರೈತರ ಮನಿಯ ದೇವತೆಯಿವಳು
ಮಣ್ಣಿನ ಫಲವತ್ತತೆಗೆ ಹರಸುವಳು
ಉತ್ತಮ ಬೆಳಿಯ ನೀಡುವವಳು
ಗುಳ್ಳವ್ವನ ನಮ್ಮವ್ವ ಕಾಯ್ವವಳು.
ಲಲಿತಾ ಕ್ಯಾಸನ್ನವರ
ತುಂಬಾ ಸೊಗಸಾಗಿದೆ ಮೇಡಂ