ಹೆಚ್.ಎಸ್.ಪ್ರತಿಮಾ ಹಾಸನ್ ಕೃತಿ ‘ಅಂತರಾಳದ ಪ್ರತಿರವ’ ಒಂದು ಅವಲೋಕನ-ಹರಿನರಸಿಂಹ ಉಪಾಧ್ಯಾಯ

ಹೆಚ್. ಎಸ್. ಪ್ರತಿಮಾ ಹಾಸನ್ ರವರ “ಅಂತರಾಳದ ಪ್ರತಿರವ” ಮುಕ್ತಕ ಸಂಕಲನ  ಕೃತಿಯಲ್ಲಿ  ಬದುಕಿನ ನಿಗೂಢಗಳ ಅಚ್ಚರಿಯ ಅನಾವರಣವಿದೆ.

ಬಹುವಿಧದ ಪ್ರತಿಭೆಯಿದೆ ನೀಲಮ್ಮ ಪುತ್ರಿಯಲಿ
ತುಹಿನಗಿರಿಯೊಡೆಯ ತಾ ಹರಸಿದಂತೆ
ಬಹಳ ಹರುಷವಿದೆಮಗೆ ಕರುನಾಡ ಹೆಣ್ಣು ಎನೆ
ಗೃಹಕೆ ಬೆಳಕಿವಳು ನಿಜ ಚಕ್ರಪಾಣಿ||

ಮುಕ್ತಕ ಕವಯತ್ರಿ, ಶಿಕ್ಷಕಿ, ಸಮಾಜ ಸೇವಕಿ, ಸಂಘಟಕಿ, ಶ್ರೀಮತಿ  ಹೆಚ್.ಎಸ್ . ಪ್ರತಿಮಾ ಹಾಸನ್ ಬಹುಮುಖ ಪ್ರತಿಭೆಯನ್ನು ಕಂಡಾಗ ಉದಿಸಿ ಬಂದ ಮುಕ್ತಕವಿದು.

ಕನ್ನಡ ಸಾಹಿತ್ಯವು ಇಂದು ಸೊರಗುತ್ತಿದೆ ಎಂಬ ಕೂಗು ಕೇಳಿ ಬರುವ ಹೊತ್ತಿನಲ್ಲಿ ಅದೆಷ್ಟೋ ಕವಿಗಳು, ಕವಯಿತ್ರಿಯರು, ಲೇಖಕ ಲೇಖಕಿಯರು ಕನ್ನಡದಲ್ಲಿ ಬರೆಯುತ್ತಿರುವುದು ಕಂಡು ಬರುತ್ತಿದೆ. ಇದನ್ನು ನೋಡಿದಾಗ ಕನ್ನಡದ ಜನರು ಕನ್ನಡವನ್ನು ಎಂದಿಗೂ ಹಿಂದೆ ಉಳಿಯಲು ಬಿಡುವ ಮಾತೇ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಅದರಂತೆ ಇಂದು ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬಂದು ತಮ್ಮ ಸಾಹಿತ್ಯ ಅಭಿರುಚಿಯನ್ನು ತೋರಿಸುತ್ತಿರುವುದು ಹೆಮ್ಮೆಯ ವಿಚಾರ. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕೃಷಿ ಮಾಡುವಲ್ಲಿ  ಹೆಜ್ಜೆ ಹಾಕುವ ಅನೇಕರಲ್ಲಿ ಒಬ್ಬರು ಹಾಸನದ ಶ್ರೀಮತಿಹೆಚ್ .ಎಸ್. ಪ್ರತಿಮಾ ಹಾಸನ್  ರವರು.

ಈಗಾಗಲೇ ಹಲವು ಕೃತಿಗಳನ್ನು ಹೊರ ತಂದಿರುವ ಇವರು ಈಗ ಮುಕ್ತಕ ಸಂಕಲನ ಕೃತಿಯನ್ನು ತರುವಲ್ಲಿ ಆಸಕ್ತಿ ತೋರಿರುವುದು ಆ ಸಾಹಿತ್ಯ ಪ್ರಕಾರಕ್ಕೊಂದು ಹೆಚ್ಛಿನ ಗರಿಯಿಟ್ಟಂತಾಗುವುದು. ಈ ಮುಕ್ತಕ ಪ್ರಕಾರವು ಮಾತ್ರಾಗಣ ಆಧಾರಿತ ರಚನೆಯಾಗಿದ್ದು, 20-16-20-16 ಅಥವಾ 20-18-20-16 ಮಾತ್ರೆಗಳ ಬಂಧವನ್ನು ಹೆಚ್ಚಾಗಿ ಬಳಸುವುದನ್ನು ಕಾಣುತ್ತೇವೆ. ಪ್ರತಿ ಐದೈದು ಮಾತ್ರೆಗಳಿಗೆ ಒಂದು ಗಣ ಎಂಬಂತೆ ವಿಂಗಡಿಸಬಹುದಾದ ಈ ರಚನೆಯಲ್ಲಿ ಕೊನೆಯ ಸಾಲಿನ ಅಂತ್ಯಕ್ಕೆ ಆರು ಮಾತ್ರೆಗಳ ಅಂಕಿತವಿರುತ್ತದೆ. ಮುಕ್ತಕಗಳಲ್ಲಿ ಪ್ರತಿ ಪದ್ಯಗಳೂ ಸ್ವತಂತ್ರವಾಗಿದ್ದು, ಆಕಾರದಲ್ಲಿ ಕಿರಿದಾದರೂ ಹಿರಿದರ್ಥವನ್ನು ಕೊಡುವಂಥವು. ಅನುಭವದ ನೆಲೆಯಲ್ಲಿ ಪರಿಪಕ್ವಗೊಂಡ ಸಾರ್ವಕಾಲಿಕ, ಸಾರ್ವದೇಶಿಕವಾಗಿ ಒಪ್ಪತಕ್ಕ ಅಭಿವ್ಯಕ್ತಿಗಳೆಂಬ ಕಿರು ರಚನೆಗಳನ್ನು ಮುಕ್ತಕಗಳು ಎಂದು ಹೇಳಬಹುದು.

ಶ್ರೀಮತಿ  ಹೆಚ್ ಎಸ್. ಪ್ರತಿಮಾ ಹಾಸನ್  ರವರ ಈ ಮುಕ್ತಕ ಕೃತಿ ಅಂತರಾಳದ  ಪ್ರತಿರವ ದಲ್ಲಿ ಸುಮಾರು  ಮುಕ್ತಕಗಳಿದ್ದು ಜೊತೆಗೆ ಓದಿ ಆರ್ಥೈಸಿಕೊಳ್ಳಲು ಸುಲಭವಾಗುವಂತೆ ಭಾವಾರ್ಥವನ್ನೂ ಬರೆದಿರುವುದನ್ನು ಕಾಣುತ್ತೇವೆ. ಕವಿಭಾವವನ್ನು ಅರ್ಥ ಮಾಡಿಕೊಳ್ಳುವುದು ಕೆಲವೊಮ್ಮೆ ಸುಲಭವಲ್ಲದ ಕಾರಣ ಓದುಗರು ಗೊಂದಲಕ್ಕೆ ಈಡಾಗಬಾರದು, ಓದಿದ ಪ್ರತಿಯೊಂದು ವಿಷಯಗಳೂ ಬೇಗ ಮನನವಾಗಲಿ ಎಂಬ ಉದ್ದೇಶದಿಂದ ಸರಳವಾಗಿ ಕೆಲವು ಸಾಲುಗಳಲ್ಲಿ ಅರ್ಥವನ್ನೂ ಇಲ್ಲಿ ನೀಡಿರುವುದು ಕೃತಿಯ ವಿಶೇಷತೆ.
ಇದು 2024ರ ಆವೃತ್ತಿ ಆಗಿದ್ದು. 120 ಬೆಲೆಯಾಗಿದೆ. ಒಟ್ಟು 60.ಪುಟವಿದೆ. ಬೆನ್ನುಡಿಯನ್ನು ಹಿರಿಯ ಪತ್ರಕರ್ತರು  ಶ್ರೀ ಗಣೇಶ್ ಕಾಸರಗೋಡುರವರು ಬರೆದಿದ್ದು. ಕವಯತ್ರಿಯನ್ನು ಪ್ರೋತ್ಸಾಹಿಸಿ ಬೆನ್ನು  ತಟ್ಟುವ ಕಾರ್ಯವನ್ನು ಮಾಡಿದ್ದಾರೆ.ಕೃತಿಯ  ಮಹತ್ವವನ್ನು ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

ಇಲ್ಲಿರುವ ಮುಕ್ತಕಗಳಲ್ಲಿ ಕೆಲವನ್ನು ನೋಡುವುದಾದರೆ…

ನಾಟಕವ ಮಾಡುವರು ಜನ ನೋಡಬೇಕೆಂದು
ತೋಟದಲಿ ಹೂವರಳಿ ಸೆಳೆಯುವಂತೆ
ನೋಟುಗಳ ನೀಡುತ್ತ ವೀಕ್ಷಿಸುತ ಮೆಚ್ಚುವರು
ಸಾಟಿಯಿರದಭಿನಯವ ಲಕ್ಷ್ಮಿದೇವಿ…..

ಭಾವಾರ್ಥ: ನಾಟಕಗಳನ್ನ ನೋಡುವುದೆಂದರೆ ಚೆಂದ ಅದರ ಅಭಿನಯವನ್ನು ಆನಂದಿಸುವುದೇ ಚೆಂದ ಕೆಲವೊಮ್ಮೆ ನಾಟಕದ ಕೆಲವು ಪಾತ್ರಗಳು ಮನಸ್ಸಿಗೆ ನಾಟಿ ಬಿಡುತ್ತವೆ. ಅವರ ಅಭಿನಯಕ್ಕೆ ಸರಿಸಾಟಿ ಯಾವುದೂ ಇಲ್ಲವೆನಿಸಿಬಿಡುತ್ತದೆ. ಅದು ಹೇಗೆ ಭಾಸವಾಗುತ್ತದೆ ಎಂದರೆ ತೋಟದಲ್ಲಿ ಅರಳಿದ ಹೂವಿನ ಸೌಂದರ್ಯದಂತಿರುತ್ತದೆ. ಹಾಗೆ ನಾಟಕಗಳನ್ನು ನೋಡಲು ಹಣ ಪಾವತಿಸಿ ಹೋಗುತ್ತೇವೆ. ಏಕೆಂದರೆ ನಾಟಕದ ಅಭಿನಯವು ಅಷ್ಟು ಮನಮುಟ್ಟುವಂತಿರುತ್ತದೆ.

ಸದ್ದಿರದೆ ಜಗವೆಲ್ಲ ಮಲಗಿರಲು ಅವನೊಬ್ಬ
ನೆದ್ದ ಕಪಿಲನಗರದರಸು ಗೌತಮ
ಬುದ್ಧ ಮನೆಯನು ಬಿಟ್ಟು ಬೋಧಿವೃಕ್ಷದ ಕೆಳಗೆ
ಸಿದ್ಧಿಗಳಿಸಲು ಕುಳಿತ ಲಕ್ಷ್ಮಿದೇವಿ…..

 ಭಾವಾರ್ಥ:  ಪ್ರಪಂಚದಲ್ಲಿ ಎಲ್ಲರೂ  ಯಾವುದೇ ಶಬ್ದ ಮಾಡದೆ ರಾತ್ರಿ ವೇಳೆ ಶಾಂತಿಯಿಂದ ನಿದ್ದೆ ಮಾಡುತ್ತಿರುತ್ತಾರೆ. ಆದರೆ ಗೌತಮ ಕಪಿಲ ನಗರದ  ಅರಸ ಬೋಧಿವೃಕ್ಷದ ಕೆಳಗೆ  ಕುಳಿತು ಧ್ಯಾನ ಮಾಡುತ್ತ ಶಾಂತಿಯನ್ನು ಗಳಿಸುತ್ತಾನೆ . ಅದರಿಂದ ಸಿದ್ಧಿ ಪಡೆಯಬೇಕೆಂದು ಆಶಿಸುತ್ತಾನೆ. ಲೋಕದ ಸಾವು ನೋವುಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ನಡು ರಾತ್ರಿ ಮನೆ ಬಿಟ್ಟು ಹೋಗುತ್ತಾನೆ.  ಬೋಧಿವೃಕ್ಷದ ಕೆಳಗೆ  ಸಿದ್ದಿಗಳಿಸಲು ತಪಸ್ಸಿಗೆ ಕುಳಿತುಬಿಡುತ್ತಾನೆ.

ಕನ್ನಡಕೆ ಕೈಯೆತ್ತು ಗೌರಿ ಶಿಖರದ ಹಾಗೆ
ಕನ್ನಡಕೆ ಕೊರಳೆತ್ತು ಪಾಂಚಜನ್ಯ
ಕನ್ನಡವ ನೆನೆಯುತ್ತ ಕನ್ನಡಾಂಬೆಗೆ ನಮಿಸು
ಕನ್ನಡವೆ ಚೆನ್ನುಡಿಯು ಲಕ್ಷ್ಮಿ ದೇವಿ…..

ಭಾವಾರ್ಥ: ನಮ್ಮ ಕನ್ನಡ  ನಮ್ಮ ಆಸ್ತಿ. ಅದನ್ನು ಉಳಿಸಿಕೊಳ್ಳುವ ಕೆಲಸ ನಮ್ಮಿಂದಲೇ ಆಗಬೇಕೇ ಹೊರತು ಬೇರೆಯವರು ಅದನ್ನು ಉಳಿಸಲು ಬರುವುದಿಲ್ಲ. ಕನ್ನಡಕ್ಕೆ ಕೈ ಎತ್ತು  ಗೌರಿ ಶಿಖರದ ಹಾಗೆ  ಕನ್ನಡಕ್ಕೆ ಕೊರಳೆತ್ತು  ಪಾಂಚಜನ್ಯದ ರೀತಿಯಲ್ಲಿ ಎಂಬಂತೆ ಕನ್ನಡವನ್ನೇ ಉಸಿರಾಗಿಸಿಕೊಂಡು  ಕನ್ನಡವನ್ನೇ ಬೆಳೆಸಲು  ಹೋರಾಟವನ್ನು ಮಾಡಬೇಕಾಗುತ್ತದೆ. ಕನ್ನಡವ ನೆನೆಸುತಲಿ  ಕನ್ನಡಾಂಬೆಗೆ ನಮಿಸುತ್ತಲಿ  ತಾಯಿಯ ಋಣ ತೀರಿಸಲಾಗದೆಂದು  ನನ್ನ ಕನ್ನಡ ನನಗೆ ಹೆಮ್ಮೆ ಎಂದು ಹೇಳುತ್ತಾ ಸಾಗುವ ದಾರಿಯಲ್ಲಿ ಕನ್ನಡಾಂಬೆಯನ್ನು ನಮಿಸುತ್ತಾ ಕನ್ನಡವೇ ಚೆನ್ನುಡಿಯು ಎಂದು ಹೇಳುತ್ತಾ  ಎಲ್ಲೆಡೆಯೂ ಪ್ರೀತಿ ವಿಶ್ವಾಸದಲ್ಲಿ ಬಾಳಬೇಕಾಗಿದೆ. ಪ್ರತಿ ಮನೆ ಮನೆಗಳಲ್ಲೂ ಕನ್ನಡದ ಕಹಳೆಯನ್ನು ಕೂಗ ಬೇಕಾಗಿದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡವೇ ನಮ್ಮಮ್ಮ, ಅವಳೇ ನಮ್ಮ ಉಸಿರಮ್ಮ ಎಂದು ಜೀವನದಲ್ಲಿ ಸಾಗ ಬೇಕಾಗುತ್ತದೆ.

ಕೂಲಿನಾಲಿಯ ಮಾಡಿ ಮಕ್ಕಳಿಗೆ ಮುದನೀಡಿ
ಪಾಲಿಸಿದ ತಾಯ್ತಂದೆ ನಿಜದೇವರು
ಹಾಲುಣಿಸಿ ತುತ್ತುಣಿಸಿ ಗೌರವವ ಹೆಚ್ಚಿಸಿದ
ನೀಲಮ್ಮನಿಗೆ ಶರಣು ಲಕ್ಷ್ಮಿದೇವಿ…..

ಭಾವಾರ್ಥ: ಯಾರೇ ಆಗಲಿ ಜನಿಸಿದ ಮಕ್ಕಳನ್ನು ಸಾಕುವಾಗ ತಮ್ಮ ಕುಡಿಗಳೆಂದು ಪ್ರೀತಿಯಿಂದ ಸಾಕುತ್ತಾರೆ.  ಯಾವುದೇ ಕಷ್ಟಗಳನ್ನು ತೋರಿಸಿಕೊಳ್ಳದಂತೆ ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕುತ್ತಾರೆ. ಅವರೇ ನಿಜವಾದ ದೇವರು. ಅವರ ಕಷ್ಟಗಳು ಎಷ್ಟೇ ಇದ್ದರೂ  ನಗುನಗುತ ಪ್ರೀತಿಯಿಂದ ಊಟ ಮಾಡಿಸುತ್ತಾರೆ. ಅಂತಹ ದೇವರುಗಳನ್ನು  ಚೆನ್ನಾಗಿ ನೋಡಿಕೊಳ್ಳುವ ರೀತಿಯಲ್ಲಿ  ಕೃತಜ್ಞತೆಯನ್ನು ತೋರಬೇಕು.  ಅಂತಹ ನನ್ನ ತಾಯಿಯು ಸಹ ಎದೆ ಹಾಲು ನೀಡುತ್ತಾ ಗೌರವ ನೀಡುತ್ತ ಪ್ರೀತಿ ಪ್ರೇಮದಲಿ ಸಾಕು  ಹೂವಂತೆ ಸಂರಕ್ಷಿಸುತ  ನನ್ನ ಎಲ್ಲಾ ಕಾರ್ಯಗಳಲ್ಲಿ ಜೊತೆಯಾಗಿ ನಿಲ್ಲುತ್ತಾ ನನಗೆ ಯಶಸ್ಸನ್ನು ನೀಡುತ್ತಿರುವ  ನನ್ನ ತಾಯಿ ನೀಲಮ್ಮಗೆ ಶರಣು.

ದುಃಖದಲಿ ನರಳಿದರು ಕಥೆಯದುವೆ ಹಲವಾರು
ದುಃಖವೇ ಶಾಶ್ವತವು ಎಂಬುದಿಲ್ಲ
ದುಃಖವನು  ಜಯಸಿದವ  ಎಲ್ಲವನು ಗೆಲ್ಲುವನು
ದುಃಖವದು ಕ್ಷಣಿಕವೈ  ಲಕ್ಷ್ಮಿದೇವಿ…..

 ಭಾವಾರ್ಥ:ಪ್ರಪಂಚದಲ್ಲಿ ಯಾರು ಏನನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಎಲ್ಲವೂ ನಶ್ವರ. ಇಂತಹ ಜೀವನದಲ್ಲಿ ನಾವು ಬಂದು ಹೋಗುವ ಬಂಧುಗಳಂತೆ  ಎಲ್ಲರೊಂದಿಗೆ ನಗುನಗುತ್ತಾ ಪ್ರೀತಿ ವಿಶ್ವಾಸದಲ್ಲಿ ಕಾಣಬೇಕು. ಎಲ್ಲರೊಂದಿಗೆ ಪ್ರೀತಿಯ ವಿಶ್ವಾಸದಿಂದ ಇರಬೇಕು. ಜೀವನ ಭಗವಂತ ನೀಡಿದ ಒಂದು ಉಡುಗೊರೆ. ಈ ಉಡುಗೊರೆಯ ಬಾಳನ್ನು ಸದುಪಯೋಗವಾಗಿ ಬಾಳಿ ತೋರಿಸಬೇಕು. ಯಾರೊಂದಿಗೂ ಜಗಳವಾಡದಂತೆ  ಯಾರಿಗೂ ನೋವುಂಟು ಮಾಡದಂತೆ  ಎಲ್ಲರೊಂದಿಗೆ ನಗುನಗುತ್ತಾ  ಮಾಡಬೇಕು. ನಮ್ಮ ಮುಂದಿನ ಪೀಳಿಗೆಗೆ ನಾವು ಒಳ್ಳೆಯದನ್ನ ಬಯಸಿ, ಒಳ್ಳೆಯದನ್ನ ಕಲಿಸಬೇಕು. ಆಗಲೇ ನಮ್ಮ ಹುಟ್ಟು ಸಾರ್ಥಕವಾಗುತ್ತದೆ.

ಕೃತಿಯೊಳಗಿನ ಎಲ್ಲಾ ಮುಕ್ತಕಗಳಿಂದ ಆಯ್ದು ಬೆರಳೆಣಿಕೆಯಷ್ಟನ್ನು ಮಾತ್ರ ಇಲ್ಲಿ ಉದಾಹರಿಸಿದ್ದೇನೆ. ಈ ಎಲ್ಲ ರಚನೆಗಳನ್ನು ಕಂಡಾಗ ಕವಯಿತ್ರಿಯು ಎಷ್ಟು ವಿಶಾಲ ಚಿಂತನೆಯುಳ್ಳವರಾಗಿದ್ದಾರೆ ಎಂದು ಅರ್ಥವಾಗುತ್ತದೆ. ಪ್ರತಿಯೊಂದು ಮುಕ್ತಕಗಳಲ್ಲಿಯೂ ವಿವಿದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾಹಿತ್ಯದ ವಿಸ್ತಾರವನ್ನು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಪ್ರೀತಿ, ಒಳಿತು ಕೆಡುಕು, ಬುದ್ಧಿವಾದ, ಅಮ್ಮ, ಸ್ನೇಹ ಮೊದಲಾದ ಸಾಕಷ್ಟು ವಿಷಯಗಳು ಹಾಸುಹೊಕ್ಕಾಗಿವೆ. ಬದುಕಿನ ಆಗು ಹೋಗುಗಳಿಗೆ ಸ್ಪಂದಿಸುತ್ತವೆ. ಸಂಬಂಧ, ಪರಿಸರ ಕಾಳಜಿ, ಕನ್ನಡದ ಹಿರಿಮೆ, ದುಃಖ, ಭಕ್ತಿ, ಕಲಿಕೆ, ತಾಳ್ಮೆಯ ಕುರಿತು ಬೆಳಕು ಚೆಲ್ಲುವ ಹಲವು ಮುಕ್ತಕಗಳು ಮನಸ್ಸಿಗೆ ನಾಟುತ್ತವೆ. ಆಧುನಿಕ ವಚನದಂತೆ ಕಂಗೊಳಿಸುವ ನಾಲ್ಕು ಸಾಲಿನ ಮುಕ್ತಕಗಳು ಲಕ್ಷ್ಮಿದೇವಿ ಅಂಕಿತದಿಂದ ಕೊನೆಗೊಳ್ಳುತ್ತವೆ.

ಈಗಾಗಲೇ ನೀಲ ಪ್ರತಿಮಾನ ಮಂಜು ಕವನ ಸಂಕಲನ, ಪಂಚ ಮುಕ್ತಕ ಮಾಲೆ, ಹಾಗೂ ಮನದಾಳದ ಪ್ರತಿಬಿಂಬ,  ಲೇಖನ ಸಂಕಲನವನ್ನು ಹೊರತಂದಿರುವ ಇವರು ಇನ್ನೂ ಹಲವು ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗಿದೆ.ಭಾವನೆಗಳ ಪ್ರತಿರೂಪ, ಪ್ರತಿ ಮಾವಲೋಕನ, ಪ್ರತಿಮಾಂತರಂಗ, ಪ್ರತಿ ಬೋಧ ಕೃತಿ. ಇವರ ಸಾಹಿತ್ಯ ಕೃಷಿ  ಹೀಗೆ ಮುಂದುವರೆಯುತ್ತಿರಲಿ.ಪ್ರತಿಮಾ ಸಾಮಾಜಿಕ, ಸಾಂಸ್ಕ್ರತಿಕ ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕಿಯೂ ಹೌದು. ಈ ಪ್ರತಿಷ್ಠಾನದ ಮೂಲಕ ಅನೇಕ ಸಮಾಜ ಸೇವೆಯನ್ನು ಮಾಡಿ ಗೌರವಕ್ಕೆ ಪಾತ್ರರಾಗಿರುವುದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಸಮಾಜ ಸೇವೆ ಹಾಗೂ ಸಾಹಿತ್ಯ ಸೇವೆಗೆ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಚಾರ. ಈಗ ಈ ಮತ್ತೊಂದು ಕೃತಿಯೂ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಕೀರ್ತಿ, ಸಮ್ಮಾನಗಳು ಅರಸಿ ಬರಲಿ ಎಂದು ಆಶಿಸುತ್ತಾ ಈ ಕೃತಿಯಲ್ಲಿನ ಉತ್ತಮ ಜೀವನ ಮೌಲ್ಯಗಳನ್ನು ಸಂದೇಶಗಳು ಜನತೆಗೆ ದಾರಿ ದೀಪವಾಗಲಿ. ಶ್ರೀಮತಿ ಹೆಚ್. ಎಸ್. ಪ್ರತಿಮಾ  ಹಾಸನ್ ರವರು  ಇನ್ನಷ್ಟು ಹೆಚ್ಚು ವೈವಿಧ್ಯಮಯ ಸಾಹಿತ್ಯ ರಚನೆಯಾಗಲಿ, ತಾಯಿ ಭುವನೇಶ್ವರಿಯ ಆಶೀರ್ವಾದ ಸದಾ ಇವರಿಗೆ ಪ್ರಾಪ್ತವಾಗಲಿ ಎಂದು ಹೃನ್ಮನದಿಂದ ಹಾರೈಸುತ್ತೇನೆ. ಹಾಗೂ ಅತಿ ಶೀಘ್ರದಲ್ಲೇ  ಅಂತರಾಳದ ಪ್ರತಿರವ ಮತ್ತು ನೀಲ ಪ್ರತಿಮಾನ ಮಂಜು ಕೃತಿಯು ಅಕ್ಷರನಾದ  ಪಬ್ಲಿಕೇಶನ್ ನಿಂದ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರಿನಲ್ಲಿ ಬಿಡುಗಡೆಯಾಗುತ್ತಿದೆ. ಹೀಗೆಯೇ ಎಲ್ಲ ಕ್ಷೇತ್ರದಲ್ಲಿ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಿ ಶ್ರೀಮತಿ  ಪ್ರತಿಮಾ ಹಾಸನ್ ರವರು ವಿಶ್ವ ವಿಖ್ಯಾತಿಯಾಗಿ ಹೆಸರುವಾಸಿಯಾಗಿ ಕೀರ್ತಿ ಪಡೆಯಲೆಂದು ಆಶಿಸುತ್ತೇನೆ..


Leave a Reply

Back To Top