‘ಬಾಂಧವ್ಯದ ಬೇರು’ ಸಣ್ಣ ಕಥೆ-ಜಯಲಕ್ಷ್ಮಿ.ಕೆ

ಮುರಿದು ಬಿದ್ದ ಕಿಟಕಿಯಂಚಿನಿಂದ ಹೊರಗೆ ದೃಷ್ಟಿ ಹರಿಸಿ ಆಕಾಶವನ್ನು ನೋಡಿದೆ. ಆಗಸದುದ್ದಗಲಕ್ಕೂ ಚಿತ್ತಾರ ಬಿಡಿಸಿದಂತಿದ್ದ ತಾರೆಗಳು ಬಾನಂಗಳವನ್ನು ರಂಗುಗೊಳಿಸಿ ನಗುತ್ತಿದ್ದವು. ಹೊತ್ತು ಮೂಡಲು ಎರಡು ತಾಸಾದರೂ ಬೇಕು. ಇದ್ದ ಒಂದು ಬೀದಿ ದೀಪ ಕೂಡಾ ವಿರಾಮ ಪಡೆದುಕೊಂಡು ಅದೆಷ್ಟೋ ದಿನಗಳಾಗಿದ್ದರಿಂದ ಮನೆಯ ಹೊರ ವಾತಾವರಣ ಕತ್ತಲನ್ನೇ ಹೊದ್ದು ಮಲಗಿತ್ತು. ಇನ್ನೊಂದು ತಾಸು ನಿದ್ದೆ ಮಾಡಿಬಿಡೋಣ ಎಂದು ಎಡಕ್ಕೊಮ್ಮೆ ಬಲಕ್ಕೊಮ್ಮೆ ಮಗ್ಗುಲು ಬದಲಾಯಿಸಿ ನೋಡಿದ ಚೇತನ್. ಉಹೂಂ.. ನಿದ್ದೆ ಬರಲಿಲ್ಲ. ನಿದ್ದೆ ಬಂದರೆ ಎಲ್ಲವನ್ನೂ ಮರೆಸುತ್ತದೆ, ಬಾರದೇ ಹೋದರೆ ಎಲ್ಲವನ್ನೂ ನೆನಪಿಸುತ್ತದೆ ಎನ್ನುತ್ತಾರಲ್ಲ, ಹಾಗಾಯಿತು ನೋಡಿ ಚೇತನ್ ಪಾಡು.  ಹಾಗೇ ಬಿದ್ದುಕೊಂಡ, ನೆನಪುಗಳು ಹಿಂದಿನ ದಿನಗಳತ್ತ ಕೊಂಡೊಯ್ದವು.

ಚೇತನ್ ಮತ್ತು ಅವನ ಅಣ್ಣ ಸಂತೋಷ್ ಇಬ್ಬರೂ ತಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು.  ಚೇತನ್ ಹೈಸ್ಕೂಲ್ ಸೇರುವ ಮುನ್ನವೇ ಅಕ್ಕ ಸುಧಾ ಎಸ್ ಎಸ್ ಎಲ್ ಸಿ ಮುಗಿಸಿ ಅಲ್ಲೇ ಇದ್ದ ಕಾಲೇಜು ಸೇರಿಕೊಂಡಿದ್ದಳು. ಅಪ್ಪನಿಗೆ ಸರ್ಕಾರಿ ಕೆಲಸ. ಮೂರೂ ಮಕ್ಕಳನ್ನು ಚೆನ್ನಾಗಿ ಓದಿಸಿ, ಸರ್ಕಾರಿ ಉದ್ಯೋಗಕ್ಕೇ ಸೇರಿಸಬೇಕು ಎಂಬುದು ಅಪ್ಪನ ಬಯಕೆಯಾಗಿತ್ತು. ಆದರೆ ಓದಿನಲ್ಲಿ ಜಾಣೆಯಾಗಿದ್ದ ಸುಧಾ ನೋಡಲು ಬಹಳ ಚಂದವಿದ್ದುದರಿಂದ ಪದವಿ ಮುಗಿಸುವ ಮುನ್ನವೇ ಸಂಬಂಧಗಳು ಬರತೊಡಗಿದವು. ಓದಿಗೇ ಹೆಚ್ಚಿನ ಆದ್ಯತೆ ಕೊಡುತ್ತಿದ್ದ ಅಪ್ಪ ಇಷ್ಟು ಬೇಗ ಕನ್ಯಾದಾನ ಮಾಡುವುದಿಲ್ಲ ಎಂದು ಬಂದಂತಹ ವರರಿಗೆ ಹೇಳಿದ್ದರೂ ಬ್ಯಾಂಕ್ ಉದ್ಯೋಗಿ ಸುಧಾಕರನ ಕೋರಿಕೆಯನ್ನು ಅವರಿಗೆ ಅಲ್ಲಗಳೆಯಲಾಗಲಿಲ್ಲ. ಅಕ್ಕನ ಒಪ್ಪಿಗೆ ಮತ್ತು  ಅಮ್ಮನ ಸಮ್ಮತಿಯೊಂದಿಗೆ  ಸುಧಾ ಮತ್ತು ಸುಧಾಕರ್ ಮದುವೆ ಅದ್ಧೂ ರಿಯಾಗಿಯೇ ನೆರವೇರಿತು.

ಆಗ ಚೇತನ್ ಎಂಟನೇ ತರಗತಿಯಲ್ಲಿದ್ದ.  ಅಣ್ಣ ಉನ್ನತ ಶ್ರೇಣಿಯೊಂದಿಗೆ ಹತ್ತನೇ ತರಗತಿ ಪಾಸಾಗಿ ಕಾಲೇಜು ಸೇರಿದ್ದ.  ಅಪ್ಪ ಅಮ್ಮ ಇಬ್ಬರೂ ಮಕ್ಕಳ ಶಿಕ್ಷಣಕ್ಕೆ ತುಂಬಾ ಪ್ರೋತ್ಸಾಹ ಕೊಡುತ್ತಿದ್ದರು. ಅಷ್ಟೇನೂ ಕಲಿಯದ ಅಮ್ಮ ಓದಿನಲ್ಲಿ ಹಿಂದೇ ಇರುತ್ತಿದ್ದ ಚೇತನ್ ನ ಪಕ್ಕದಲ್ಲಿಯೇ ಕುಳಿತುಕೊಂಡು ಕಲಿಕೆಗೆ ಪ್ರೇರಣೆ ನೀಡುತ್ತಿದ್ದಳು. ಅಣ್ಣ ಸಂತೋಷಗಿಂತ ಚೇತನ್ ಗೇ ಹೆಚ್ಚಿನ ಕಾಳಜಿ ತೋರುತ್ತಿದ್ದಳು. ಆದರೇನು? ವಿದ್ಯಾದೇವಿ ಒಲಿದರಲ್ಲವೇ ಕಲಿಯುವುದು? ಅಕ್ಕ ಅಣ್ಣನಿಗೆ ಒಲಿದ ವಿದ್ಯಾಸರಸ್ವತಿ ಚೇತನ್ ಗೆ ಯಾಕೋ ಒಲಿಯಲೇ ಇಲ್ಲ. ಎಂಟು ಮತ್ತು ಒಂಬತ್ತನೇ ತರಗತಿಯನ್ನು ಹೇಗೆ ಹೇಗೊ ದಾಟಿದರೂ ಏನೇ ಮಾಡಿದರೂ ಹತ್ತನೇ ತರಗತಿ ಪಾಸಾಗಲಿಲ್ಲ. ಇಂಗ್ಲಿಷ್, ಗಣಿತ, ವಿಜ್ಞಾನದಲ್ಲಿ ಎರಡಂಕೆಯನ್ನೂ ದಾಟಲಾಗಲಿಲ್ಲ.  ಶಾಲೆಯಲ್ಲಿ ಶಿಕ್ಷಕರ, ಹೆತ್ತವರ ಒತ್ತಾಯಕ್ಕೆಂಬಂತೆ ಎರಡೆರಡು ಬಾರಿ ಮರು ಪರೀಕ್ಷೆಗೆ ಕಟ್ಟದರೂ ಕೂಡಾ ಆತನ  ಅಂಕಗಳಲ್ಲಿ ಹೆಚ್ಚೇನೂ ಬದಲಾವಣೆ ಆಗುತ್ತಿರಲಿಲ್ಲ.  ಏನಾದರೂ ಕೆಲಸ ಮಾಡಿಯೇನು ಆದರೆ ಇನ್ನು ಶಾಲೆಗೆ ಹೋಗೋದೇ ಇಲ್ಲ ಅಂತ ಹಠ ಹಿಡಿದು ಕುಳಿತ.   ಆತನಿಗೆ ಹಸು ಕರು, ಹೊಲ ಗದ್ದೆ, ಕಾಡು ಕಣಿವೆ, ಕೆರೆ ಕಾಲುವೆಗಳ ಒಡನಾಟದ ಬದುಕು ಕಣ್ಮನಸ್ಸಿಗೆ ಹಬ್ಬ ಎನಿಸಿತ್ತು.     ಕಿರಿಮಗನ ತಲೆಗೆ ವಿದ್ಯೆ ಹತ್ತಲಿಲ್ಲ ಎಂದು ಅಪ್ಪ ಅಮ್ಮ ವ್ಯಥೆ ಪಡುತ್ತಿದ್ದರೆ, ಪ್ರಕೃತಿಯೊಂದಿಗಿನ ಈ ಸುಖ ಶಾಲೆಯ ನಾಲ್ಕು ಗೋಡೆಗಳ ನಡುವೆ ಇಲ್ಲವೇ ಇಲ್ಲ ಎಂದು ಚೇತನ್  ನಿರುಮ್ಮಳವಾಗಿ ಇರತೊಡಗಿದ. ಅದು ಇದು ಕಲಿಯುವ ನೆಪದಲ್ಲಿ ಸುಮ್ಮನೆ ಅಲ್ಲಿ ಇಲ್ಲಿ ಸುತ್ತುವುದು, ಅಮ್ಮ ಮಾಡಿದ ಅಡುಗೆಯನ್ನು ಉಣ್ಣುವುದು..ಅಷ್ಟೆ.. ಅವನಿಗೆ ಬೇರೇನೂ ಮಹಾ  ಅನಿಸುತ್ತಲೇ ಇರಲಿಲ್ಲ.  “ಚೇತನ್, ನೀನು ಏನು ಹೀಗೇ ಅಲೆಯತ್ತ  ಇರುವುದಾ, ಅಲ್ಲ ಹೊಸತೇನಾದರೂ ಕಲಿಯುವ ಉದ್ಧೇಶ ಇದೆಯಾ?” ಎಂಬ ಅಪ್ಪನ ಗದರಿಕೆಯ ಪ್ರಶ್ನೆಗೆ, “ ನಮ್ಮ ಗದ್ದೆ, ತೋಟ ಇದೆಯಲ್ಲ, ನಾನು ಕೃಷಿಕನಾಗುವೆ”  ಎನ್ನುತ್ತಿದ್ದ.

” ಶಾಲೆ ಬಿಟ್ಟ ಈ ಹುಡುಗ ಬೆಳಗಿನಿಂದ ಸಂಜೆಯತನಕ  ಸುಮ್ಮನೆ ತಿರುಗಾಡುತ್ತಾ ಇರುತ್ತಾನೆ. ಅವನಿಗೆ ಏನಾದರೂ ದಾರಿ ತೋರಬಾರದೇ? ” ಚೇತನ್ ಅಮ್ಮ ಅಪ್ಪನಿಗೆ  ಹೇಳುತ್ತ  ಆತಂಕ ವ್ಯಕ್ತಪಡಿಸಿದಳು. ” ಕಲ್ಲು ಕೂಡಾ ನಾನು ಡಿಗ್ರಿ ಎಂದು ಹೇಳುವ ಈ ಕಾಲದಲ್ಲಿ ಹತ್ತನೇ ತರಗತಿ ಪಾಸಾಗದ ಇವನಿಗೆ ಯಾವ ದಾರಿ ತೋರಲಿ? ಸೋಮಾರಿಯಾಗಿ ಕೆಟ್ಟ ಚಟಕ್ಕೆ ಬೀಳುವ ಬದಲು ಪಾಳು ಬಿದ್ದ ನಮ್ಮ ಹೊಲ ಗದ್ದೆಗಳನ್ನು ನೋಡಿಕೊಳ್ಳಲಿ, ಅವನಿಗೂ ಅದೇ ಇಷ್ಟ ಅನ್ನುತ್ತಾನಲ್ಲ”  ” ಅಪ್ಪ ಮೆಲ್ಲಗೆ ವ್ಯವಸಾಯದ ಒಂದೊಂದೇ  ಜವಾಬ್ದಾರಿಯನ್ನು ಚೇತನ್ ತಲೆಗೆ ಹೊರಿಸಿದ್ದರು. ಮೊದ ಮೊದಲು ಚಿಕ್ಕ ಪುಟ್ಟ ಕೆಲಸಗಳಿಗೆ  ಹಚ್ಚಿದ್ದ ಮನೆ ಮಂದಿ ಬರಬರುತ್ತಾ ಸಂಪೂರ್ಣ ಹೊಣೆಗಾರಿಕೆ ನೀಡಿಬಿಟ್ಟರು. ” ಸಂತೋಷ್ ಓದು ಮುಗಿಸಿ ನೌಕರಿಗೆ ಸೇರಲಿ. ಕಲಿತು ಮುಂದೆ ಹೋಗಲಾಗದ ಚೇತನ್  ಭೂಮಿ ಕೆಲಸ ಮಾಡಿಕೊಂಡು ನಮ್ಮ ಜೊತೆ ಇರಲಿ ” ಎಂಬ ನಿರ್ಧಾರಕ್ಕೆ ಬಂದಿದ್ದ ಅಮ್ಮ ಚೇತನ್ ಮಾಡುತ್ತಿದ್ದ ಕೆಲಸಗಳನ್ನೆಲ್ಲ ಹೊಗಳುತ್ತ, ಕೃಷಿಯತ್ತ ಆತನ ಮನಸ್ಸು ಗಟ್ಟಿಯಾಗಿ ವಾಲುವಂತೆ ಮಾಡಿದ್ದಳು.  ಚೇತನ್ ಆರಂಭದಲ್ಲಿ ಉತ್ಸಾಹದಿಂದ ಮಾಡುತ್ತಿದ್ದ ಕೆಲಸಗಳು  ದಿನಗಳು ಕಳೆಯುತ್ತ ಕಳೆಯುತ್ತಾ ತೋಟ ಗದ್ದೆಗಳ ಜೊತೆಗೆ ದನ ಕರುಗಳ  ಕೆಲಸ ತ್ರಾಸದಾಯಕ ಎನಿಸತೊಡಗಿತು. 

ಎಷ್ಟೊಂದು ಕೆಲಸ! ರಾಸುಗಳನ್ನು ಕೊಟ್ಟಿಗೆಯಿಂದ ಹೊರಗೆ ತಂದು ಕಟ್ಟಬೇಕು. ಸೆಗಣಿ ಬಾಚಿ ಕೊಟ್ಟಿಗೆ ಶುಚಿಗೊಳಿಸಬೇಕು. ಕರು ಬಿಟ್ಟು ಹಾಲು ಕರೆದ ಅಮ್ಮ ಕ್ಯಾನಿಗೆ ತುಂಬಿದ ಹಾಲನ್ನು ಡೈರಿಗೆ ಕೊಟ್ಟು ಬರಬೇಕು. ಇಲ್ಲಿಗೆ ಬೆಳಗಿನ ಕೆಲಸಕ್ಕೆ ಒಂದು ವಿರಾಮ. ತಿಂಡಿ ತಿಂದು ಮತ್ತೆ ದನ ಕರುಗಳಿಗೆ ಹುಲ್ಲು ನೀರು… ಉಫ್..!! ಈ ಕೆಲಸಗಳಿಗೆ ಕೊನೆಯೇ ಇಲ್ಲ. ಅಬ್ಬಾ..!!! ಮೊದಲ ಬಾರಿಗೆ ಚೇತನ್ ಗೆ  ತಾನೂ ಕಷ್ಟಪಟ್ಟು ಓದಬೇಕು ಎನ್ನಿಸಿತ್ತು! ಎಷ್ಟು ಚೆನ್ನಾಗಿತ್ತು ಶಾಲೆಗೆ ಹೋಗುತ್ತಿದ್ದ ಆ ದಿನಗಳು…..!! ಮಧುರ ನೆನಪುಗಳ ಮೆಲುಕು ಹಾಕುತ್ತಿದ್ದ  ಚೇತನ್ ಗೆ ಮತ್ತೆ ನಿದ್ದೆ ಆವರಿಸಿದ್ದು ಗೊತ್ತಾಗಲೇ ಇಲ್ಲ.

” ಚೇತನ್… ಚೇತನ್.. ಇವತ್ತು ಹಾಲಿನ ಡೈರಿಗೆ ನನ್ನ ಬೈಕ್ ತಗೊಂಡು ಹೋಗಬೇಡ. ನಿನ್ನ ಸೈಕಲ್ ನಲ್ಲೇ ಹೋಗು.. ಅಮ್ಮಾ.. ಹೇಳಮ್ಮ ಅವನಿಗೆ… ನಾನು ಚೊಕ್ಕವಾಗಿರಿಸಿದ ಬೈಕನ್ನು ಮುಟ್ಟಕೂಡದು ಎಂದು.. ” ಅಣ್ಣನ ದೊಡ್ಡ ದನಿ ಕೇಳಿದಾಗಲೇ  ಚೇತನ್ ಗೆ ಎಚ್ಚರ ಆದದ್ದು! ಹೊದ್ದುಕೊಂಡಿದ್ದ ಚಾದರವನ್ನು ಮಡಚಿಟ್ಟು ಹೊರಗೆ ಬಂದ. ಅಣ್ಣ ಸಂತೋಷ  ಅಮ್ಮನೊಡನೆ ಮಾತಾಡುತ್ತಾ ಬೈಕ್ ಒರಸುತ್ತಿದ್ದ. ” ಗೋಪೀನ ಬೇಗ ತಂದು ಹೊರಗೆ ಕಟ್ಟು, ಹಾಲು ಕರೆಯಲು ತಡವಾಗಿ ಹೋಯ್ತು ” ಅಮ್ಮನೆಂದಾಗ ತನ್ನ ಪಾಲಿನ ಕೆಲಸಗಳೆಲ್ಲ ತನಗಾಗಿ ಕಾಯುತ್ತಿದೆ ಎಂಬ ಅರಿವು ಚೇತನ್ ಗೆ ಮೂಡಿ  ದೈನಂದಿನ ಕಾಯಕದತ್ತ ಮುಖ ಮಾಡಿದನು.

” ನಮ್ಮ ಸಂತೂಗೆ ಓದೋದು ತುಂಬಾ ಇರುತ್ತೆ, ಬಸ್ಸಿಗೆ ಕಾಯುವ ಸಮಯ ವ್ಯರ್ಥ ತಾನೇ.. ಒಂದು ಬೈಕ್ ಕೊಡಿಸಿ ” ಎಂದು ಅಮ್ಮನ ಮೂಲಕ ಸಂತೋಷ ಬೇಡಿಕೆ ಇಟ್ಟ ಎರಡೇ ವಾರಗಳಲ್ಲಿ ಅಪ್ಪ ಬೈಕ್ ಕೊಡಿಸಿದ್ದರು. ಇದೀಗ ” ಓದುವ ಮಕ್ಕಳಿಗೆ ಕಿರಿಕಿರಿ ಆಗಬಾರದು. ನಮ್ಮ ಸಂತೂಗೆ ಓದಿ ಬರೆಯಲು ಒಂದು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಆಗಬೇಕು. ” ಅಮ್ಮನ ಅಭಿಪ್ರಾಯ ಅಪ್ಪನಿಗೆ ಸರಿ ಎನಿಸಿತು. ಕಿಟಕಿ ಬಾಗಿಲುಗಳೆಲ್ಲ ಸುವ್ಯವಸ್ಥಿತವಾಗಿದ್ದ ಅಕ್ಕ ಸುಧಾಳ ರೂಮ್ ನಲ್ಲಿದ್ದ ವಸ್ತುಗಳನ್ನೆಲ್ಲ  ಸ್ಥಳ್ಲಾಂತರಗೊಳಿಸಿ ಅಲ್ಲೊಂದು ಮೇಜು, ಕುರ್ಚಿ, ಮಂಚ ಎಲ್ಲ ಅಲಂಕೃತಗೊಂಡವು.  ಇದೂ ಸಹ ಸಂತೋಷನ ಮನದ ಬಯಕೆಯೇ ಆಗಿತ್ತು.

ಆಫೀಸ್ ಗೆ ಹೊರಡುವ ಮುನ್ನ ಅಪ್ಪ ಅಣ್ಣನ ಬಟ್ಟೆಗೂ ಇಸ್ತ್ರಿ ಮಾಡಿ ಒಪ್ಪವಾಗಿ ಇರಿಸುತ್ತಿದ್ದರು. ಅಮ್ಮ ಬೇಗನೆ ಎದ್ದು ಅಣ್ಣನಿಗೆ ಸ್ನಾನಕ್ಕೆ ನೀರು ಕಾಯಿಸಿ ಕೊಡುತ್ತಿದ್ದಳು. ಚೊಕ್ಕವಾಗಿ ಹೊರಟು ಬೈಕ್ ಏರಿ ಕಾಲೇಜಿಗೆ ಹೋಗುತ್ತಿದ್ದ ಅಣ್ಣನನ್ನು ನೋಡುವಾಗ ಚೇತನ್ ಗೆ ಖುಷಿಯಾಗುತ್ತಿತ್ತು. ಜೊತೆಗೆ ನಾನೂ ಓದಿದ್ದಿದ್ದರೆ ನನಗೂ ಇದೇ ಮರ್ಯಾದೆ ಸಿಗುತ್ತಿತ್ತಲ್ಲವೇ… ಎಂದು ಬೇಸರವೂ ಆಗುತ್ತಿತ್ತು.

ಆ ಒಂದು ದಿನ ಚೇತನ್ ಮತ್ತು ಅಮ್ಮ ಮಧ್ಯಾಹ್ನ  ಊಟ ಮಾಡುತ್ತಿರಬೇಕಾದರೆ ಅಪ್ಪನ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ಹೃದಯಾಘಾತಕ್ಕೊಳಗಾಗಿ ಕಛೇರಿಯ ಕುರ್ಚಿಯಲ್ಲೇ ಅಸು ನೀಗಿದ ಅಪ್ಪನ ಅಂತ್ಯ  ಕುಟುಂಬವನ್ನು ಇದ್ದಕ್ಕಿದ್ದಂತೆ ಅನಾಥರನ್ನಾಗಿಸಿತ್ತು.

” ಅಪ್ಪನ ಕೆಲಸ ನಿಮ್ಮಲ್ಲಿ ಒಬ್ಬರಿಗೆ ಸಿಗುತ್ತೆ… ಯಾರಿಗೆ ಎನ್ನುವುದನ್ನು ನಿರ್ಧಾರ ಮಾಡಿ. ಉಳಿದಂತೆ ಅದಕ್ಕೆ ಅವಶ್ಯವಾದ ಕೆಲಸ ಕಾರ್ಯಗಳನ್ನು ನಾನು ಮಾಡಿಕೊಡುತ್ತೇನೆ “… ಎಂದು ಚಿಕ್ಕಪ್ಪನ ಮಗ ದಿಗಂತ್ ಬರವಸೆ ನೀಡಿದ್ದ. ಅಕ್ಕ, ಮದುವೆಯಾಗಿ ಬದುಕು ಕಟ್ಟಿಕೊಂಡಾಗಿತ್ತು. ಅಮ್ಮನಿಗೆ ಅಷ್ಟೊಂದು ವಿದ್ಯಾಭ್ಯಾಸ ಇಲ್ಲ. ಇನ್ನು ಚೇತನ್… ಎಸ್ ಎಸ್ ಎಲ್ ಸಿ ಫೈಲ್. ಸಹಜವಾಗಿ ಅಣ್ಣ ಸಂತೋಷನೇ ಆ ಹುದ್ದೆಗೆ ಸರಿ ಎಂದು ತೀರ್ಮಾನ ಆಯಿತು. ಮೂರೇ ತಿಂಗಳಲ್ಲಿ ಸಂತೋಷನ ಪದವಿ ಪರೀಕ್ಷೆಯೂ ಆಯಿತು ಮತ್ತು ಅವನಿಗೆ ಅಪ್ಪನ ನೌಕರಿಯೂ ದೊರೆಯಿತು.

ಬಾಲ್ಯಾವಸ್ಥೆ ಆಟೋಟಗಳಲ್ಲೇ ಮುಗಿದು ತಾನಾಗಿ ಶಾಲೆ ತೊರೆದು ಮನೆ  ಸೇರುವಷ್ಟರಲ್ಲಿ ಎಲ್ಲದಕ್ಕೂ ಆಧಾರವಾಗಿದ್ದ ಅಪ್ಪನ ಸಾವಿನ ಮೂಲಕ ಬದುಕಿನ ಒಂದು ಮಜಲಿನ ಅನುಭವ ಪಡೆದ ಚೇತನ್, ಬಾಳಿನ ಮುಂದಿನ ಪುಟಗಳು ಇನ್ನೊಂದು ತರಹದ ಅನುಭವವನ್ನು ನೀಡತೊಡಗಿದವು.

ಶಾಲೆಗೆ ಹೋಗುತ್ತಿದ್ದಾಗ’ ಪತ್ರ ಲೇಖನ ‘ ಕ್ರಮವನ್ನು ಕಲಿಸುತ್ತ, ಹಿರಿಯರಿಗೆ, ಅಣ್ಣನಿಗೆ ಪತ್ರ ಬರೆಯುವಾಗ “ತೀರ್ಥರೂಪ ಸಮಾನರಾದ “ಎಂದೇ ಸಂಭೋದನೆ ಮಾಡಬೇಕು ಎಂದು ಟೀಚರ್ ಕಲಿಸಿಕೊಟ್ಟಿದ್ದರ ನೆನಪಾಯಿತು.  ಅಪ್ಪ ನಿರ್ವಹಿಸುತ್ತಿದ್ದ ಹೊಣೆಗಾರಿಕೆಗಳನ್ನೆಲ್ಲ ಅಣ್ಣ ವಹಿಸಿಕೊಳ್ಳಲಿದ್ದಾನೆ ಎಂದು ಒಂದು ರೀತಿಯ ಸುರಕ್ಷತಾ ಭಾವ ಆತನಲ್ಲಿ ಮೂಡಿತು. ಅಮ್ಮ ಸಹ, ಪತಿಯ ಅಗಲಿಕೆಯ ನೋವನ್ನು ನುಂಗಿಕೊಳ್ಳುತ್ತ  ಮಕ್ಕಳಿಗೆ ಜೊತೆಯಾಗಿ, ಅವರ ಬಗ್ಗೆ ದುಪ್ಪಟ್ಟು ಕಾಳಜಿ ವಹಿಸುತ್ತ  ಜೀವನ ನಡೆಸತೊಡಗಿದಳು.

ಹಣ ಮತ್ತು ಅಧಿಕಾರ ಇವೆರಡೂ ಸಲೀಸಾಗಿ ಬಂದಾಗ ಮನುಷ್ಯನ ಸ್ವಭಾವದಲ್ಲಿ  ಅದೇನೋ ಬದಲಾವಣೆ ಆಗುತ್ತದೆ ಎಂದು ಹೇಳುತ್ತಾರೆ. ಆ ಮಾತು ಚೇತನ್ ನ ಮಗ್ಗುಲಿಗೇ ಅನ್ವಯ ಆದೀತು ಎಂದು ಆತ ಅಂದುಕೊಂಡಿರಲಿಲ್ಲ. ಅಣ್ಣ ಕೆಲಸಗಳನ್ನು ಒಪ್ಪಿಸುವಾಗ ಹೇಳುವ ಮಾತುಗಳು ಮಮತೆಯ ದನಿಗಳಿಗೆ ಬದಲಾಗಿ ಅಧಿಕಾರ ವಾಣಿಗಳಾಗಿ ಬರುತ್ತಿರುವುದು ಆತನಿಗೆ ಕ್ರಮೇಣ ಅರಿವಾಗತೊಡಗಿತು.  ಎಷ್ಟೇ ಚೊಕ್ಕವಾಗಿ  ಅಮ್ಮ ಅಡುಗೆ ಮಾಡಿದರೂ, ಅಣ್ಣ ಅಮ್ಮನ ಮೇಲೆ ರೇಗಾಡುವಾಗ ಅಮ್ಮನ ಕಣ್ಣುಗಳಲ್ಲಿ ಒಂದು ರೀತಿಯ ಭಯ ಅಸಹಾಯಕತೆಯ ನೋವನ್ನು ಗಮನಿಸತೊಡಗಿದ. ಇಷ್ಟಾದರೂ ಅಣ್ಣ ಮನೆಗೆ ಬೇಕಾಗಿದ್ದ ವಸ್ತುಗಳನ್ನು ತರುತ್ತಿದ್ದ. ಹೊಲ ಗದ್ದೆಗಳ ಬಗ್ಗೆ ಆಸಕ್ತಿ ತೋರದಿದ್ದರೂ ಭಿತ್ತನೆ ಬೀಜ, ಗೊಬ್ಬರ ಇತ್ಯಾದಿಗಳನ್ನು ತಂದು ಕೊಡುತ್ತಿದ್ದ. ಅಂತೆಯೇ ಅದರಿಂದ ಬರುವ ಆದಾಯದ ಲೆಕ್ಕಾಚಾರ ಹಾಕುತ್ತಿದ್ದ.

ಡಯಾನ, ಸಂತೋಷನ ಕಚೇರಿಯಲ್ಲಿಯೇ ಕೆಲಸ ಮಾಡುವ ಸುಂದರ  ಹುಡುಗಿ.  ಆಕೆ ಅಣ್ಣನಿಗೆ ಒಲಿದು ಬಂದ ದಿನದಿಂದ ಅಣ್ಣ ನಮ್ಮತ್ತ ನಿರ್ಲಕ್ಷದ ಭಾವ ತೋರಲಾರಂಭಿಸಿದನೋ ! ಎಂಬ ಸಂದೇಹ ನಿಜವೆಂದು ಅಣ್ಣ ಸಂತೋಷ ಮನೆಯಲ್ಲಿ  ದಿನೇ ದಿನೇ ವಿನಾಕಾರಣ ರೇಗಾಡುವುದನ್ನು ನೋಡಿ ಚೇತನ್ ಗೆ ತಿಳಿಯತೊಡಗಿತು.  ಆದರೆ ಚೇತನ್ ಬುದ್ಧಿ ಬಂದಂದಿನಿಂದ  ಇಲ್ಲಿಯ ತನಕ ಅಮ್ಮನಲ್ಲಾಗಲಿ, ಅಣ್ಣನಲ್ಲಾಗಲಿ ಯಾವುದೇ ರೀತಿಯ ಪ್ರಶ್ನಾವಳಿ ಮಾಡಿದವನೇ ಅಲ್ಲ.  ತನ್ನಷ್ಟಕ್ಕೆ ತಾನಿದ್ದು ಬಿಡುತ್ತಿದ್ದವನು.

ಒಂದು ದಿನ  ಸಂತೋಷ ಸಂಜೆ  ಆಫೀಸಿನಿಂದ ಬಂದವನೇ ” ಅಮ್ಮಾ.. ನಮ್ಮ ಕಚೇರಿ ಪಕ್ಕದಲ್ಲಿ ಒಂದು ಸೈಟ್ ಮಾರಾಟಕ್ಕೆ ಇದೆ. ನೀನು ಮನಸ್ಸೂ ಮಾಡಿದರೆ ನಾವು ಅದನ್ನು ಕೊಂಡುಕೊಳ್ಳಬಹುದು, ಮುಂದೆ ನಮಗೆ ಕೆಲಸಕ್ಕೆ ಬರುತ್ತದೆ… ” ಸಣ್ಣ ಪೀಠಿಕೆ ಹಾಕಿದ.

” ಪೇಟೆಯಲ್ಲಿ ಸೈಟ್ ತಗೊಳ್ಳಲು ಅಷ್ಟೊಂದು ದುಡ್ಡು ಎಲ್ಲಿಂದ ತರುವುದು ಮಗ “? ಅರ್ಥವಾಗದ ಅಮ್ಮ ಅಣ್ಣನ ಮುಖ ನೋಡಿದಳು.

” ತಾವರೆಕೆರೆಯ ಬಳಿ ನಮ್ಮ ತುಂಡು ಜಮೀನು ಇದೆಯಲ್ಲ, ಅದನ್ನು ಮಾರಿದರೆ ಪಟ್ಟಣದ ಆ ಸೈಟ್ ಖರೀದಿಸಬಹುದು. ನಾನು ಅದರ ಲೆಕ್ಕಾಚಾರ ಎಲ್ಲಾ ಮಾಡಿರುವೆ, ನೀವು ಏನಂತೀರಾ “?  

ಮನದಲ್ಲಿಯೇ ಏನೋ ಯೋಚಿಸಿ ಅಮ್ಮ ಒಮ್ಮೆ ಚೇತನ್ ಮುಖ ನೋಡಿ ಬಳಿಕ ಸಂತೋಷನಿಗೆ, ” ನೀನು ಪಟ್ಟಣದಲ್ಲಿ ಉದ್ಯೋಗ ಮಾಡುತ್ತಿರುವವನು, ಈ ಜಮೀನಿ ಕೊಡುಕೊಳ್ಳುವಿಕೆಯ ವ್ಯವಹಾರ ಬಲ್ಲವನು. ನಮಗೆಲ್ಲ ಒಳಿತಾಗುವ ಯೋಚನೆಯನ್ನೇ ಮಾಡುವವನು. ಆದ ಕಾರಣ ನಿನ್ನ ಯೋಚನೆಯಂತೆಯೇ ಆಗಲಿ, ಆದರೆ ಕಾಗದ ಪತ್ರಗಳ ಬಗ್ಗೆ ಗಮನ ಇರಲಿ. ಹೊರಗಿನ ಮಂದಿಯನ್ನು ನಂಬಲಿಕ್ಕೆ ಆಗುವುದಿಲ್ಲ, ಮೋಸ ಮಾಡಿಯಾರು. ಸುಧಾಳಿಗೂ ಈ ವಿಷಯ ತಿಳಿಸಬೇಕು ” ಎಂದಳು.  ಮುಂದೆ ವರ್ಷ ಕಳೆಯುವುದರೊಳಗೆ ಸಂತೋಷ ಮತ್ತೂ ಡಯನಾ ಮದುವೆಯೂ  ಆಯಿತು. ಅವರಿಬ್ಬರ ಇಚ್ಛೆಯಂತೆ ರಿಜೀಸ್ಟರ್ ಮಾಡಿಸಿಕೊಂಡು ಒಂದಷ್ಟು ಹತ್ತಿರದ ಬಂಧಗಳಿಗಷ್ಟೇ ಆಮಂತ್ರಣ ಕೊಟ್ಟು ಸರಳವಾಗಿ ಮದುವೆ ಮುಗಿಸಿ ಆಫೀಸಿಗೆ ಹತ್ತಿರವೇ ಒಂದು ಮನೆ ಬಾಡಿಗೆ ಪಡೆದು ಉಳಕೊಂಡರು.

ತದ ನಂತರ ಮೂರು ನಾಲ್ಕು ಸಲ ಸಂತೋಷ ಅಮ್ಮನನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದ. ಅದೊಂದು ದಿನ ಮನೆಗೆ ಬಂದಿದ್ದ ಅಕ್ಕ ಸುಧಾ, ” ಚೇತೂ..ನಿನ್ನ ಅತ್ತಿಗೆ ಬಂದ ಮೇಲೆ ನಿನ್ನಣ್ಣ ತುಂಬಾ ಬದಲಾಗಿದ್ದಾನೆ ಅಲ್ಲವಾ? ಜಮೀನು ಮಾರಿ ಬಂದ ಹಣದಿಂದ ಖರೀದಿಸಿದ ಸೈಟನ್ನು ಅವನ ಹೆಸರಿಗೇ ಬರೆಸಿಕೊಂಡಿದ್ದಾನಂತೆ!..”   ಹೇಗೋ ಸುದ್ದಿ ಸಂಗ್ರಹಿಸಿದ ಸುಧಾ ಕಿರಿ ತಮ್ಮನ ಮೇಲಿನ ಮಮತೆಯಿಂದ  ಮಾತು ಮುಂದುವರಿಸಿದಳು ” ಸಂಪತ್ತಿನ ಆಸೆಗೆ ಬಿದ್ದ ಮನುಷ್ಯ ಸಂಬಂಧಗಳನ್ನು ಮೆಟ್ಟಿ ನಿಲ್ಲುತ್ತಾನಂತೆ! ಇನ್ನು ನಾಳೆ ಸಂತು ಉಳಿದ ಗದ್ದೆ ತೋಟವನ್ನೂ ಮಾರುವ ಸಲಹೆ ನೀಡಬಹುದು. ಯಾವುದಕ್ಕೂ ಇನ್ನು ಮುಂದೆ ಜಾಗ್ರತರಾಗಿರಬೇಕು..”  ಎಂದು ಅಮ್ಮ, ತಮ್ಮನಿಗೆ ಕಿವಿಮಾತು ಹೇಳಿದಳು.  ಅವಳಿಗೆ  ಸಂತೋಷ  ಪಟ್ಟಣದ ಸೈಟನ್ನು ಕೇವಲ ತನ್ನ ಹೆಸರಿಗೆ ಮಾಡಿಕೊಂಡ ಸ್ವಾರ್ಥ ಬುದ್ಧಿ ಇಷ್ಟ ಆಗಿರಲಿಲ್ಲ.  ” ಸಂತು  ಹಾಗೆಲ್ಲ ಮಾಡುವವನಲ್ಲ.  ನಮ್ಮೆಲ್ಲರ ಮೇಲೆ ಅವನಿಗೆ ಪ್ರೀತಿ, ಕಾಳಜಿ ಇಲ್ಲವೇ? ನೀನು ಹಾಗೆಲ್ಲ ಯೋಚಿಸಬಾರದು ” ಅಮ್ಮ ನಡುವೆ ಬಂದು ಮಗಳ ಮಾತು, ಆಲೋಚನೆಗೆ ವಿರಾಮ ಹಾಕಿದಳು.

ಸ್ವಲ್ಪ ಸಮಯದಲ್ಲೇ ಅಣ್ಣ  ಪಟ್ಟಣದ ಸೈಟ್ ನಲ್ಲಿ ಮನೆ ಕಟ್ಟಿ ಅಲ್ಲಿ ಅಣ್ಣ ಅತ್ತಿಗೆ ಇರುವಂತಾಯಿತು. ಅಲ್ಲಿಗೆ ಮನಸಿನಿಂದ ಕ್ರಮೇಣ ದೂರ ಆಗುತ್ತಾ ಬರುತ್ತಿದ್ದ ಅಣ್ಣ ಮನೆಯಿಂದಲೂ ದೂರಾದ. ಇಷ್ಟೇ ಆಗಿದ್ದಿದ್ದರೆ ಚೇತನ್ ಹೊಲ ಗದ್ದೆಗಳಲ್ಲಿ ದುಡಿಯುತ್ತ ಅಮ್ಮನ ಜೊತೆ ಹೇಗೂ  ಜೀವನ ನಡೆಸಿಕೊಂಡು ಇರಬಹುದಿತ್ತು. ಆದರೆ ಹಾಗಾಗಲಿಲ್ಲ. ಅದೊಂದು ದಿನ ಭೂ ಮಾಪಕರ ಜೊತೆಗೆ ಬಂದ ಅಣ್ಣ ಆಸ್ತಿ ಪಾಲು ಮಾಡುವ ಎಂದ. ಅಮ್ಮ ಹೌಹಾರಿದಳು.  ಹಿಂದೆ  ಅಕ್ಕ ಆಡಿದ ಮಾತು ನೆನಪಾಯಿತು. ಬಾಂಧವ್ಯದ ಬೇರು ಸಂಪತ್ತಿನಲ್ಲಿದೆ ಎಂದರಿಯದ ಚೇತನ್ ಗೆ ಆ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂದು ತೋಚಲಿಲ್ಲ.  ಅಮ್ಮನ ಮನದೊಳಗೆ ಏನಿತ್ತೋ….! ಎಷ್ಟೊಂದು ಮುದ್ದಿನಿಂದ ಸಾಕಿ ಸಲಹಿದ ಮಗನಿಂದಾದ ಈ ನೋವು, ಆಘಾತವನ್ನು ತೋರಗೊಡದೆ ” ಹೌದಾ, ನಮ್ಮನ್ನು ನಿದಾನವಾಗಿ ದೂರ ದೂರ ಮಾಡುತ್ತ ಬಂದ ನೀನು ಈಗ ಆಸ್ತಿ ಪಾಲು ತಗೊಂಡು ಶಾಶ್ವತವಾಗಿ ದೂರ ಹೋಗ ಬಯಸುವಿಯಾದರೆ,  ನಿನ್ನ ಇಷ್ಟದಂತೆ ಆಗಲಿ ” ಎಂದು ಹೇಳುವಾಗ ಆಕೆಯ ಧ್ವನಿ ಕ್ಷೀಣವಾಗಿತ್ತು. ಯಾವಾಗಿನಂತೆ ಇಂದೂ ಮೌನವಾಗಿ ನಡೆದ ಮಾತುಕತೆಗಳನ್ನು ಕೇಳುತ್ತಿದ್ದ ಚೇತನ್ ನ್ನು ನೋಡಿ ಅಮ್ಮ, ” ನಿನಗೆ ವಿದ್ಯೆ ತಲೆಗೆ ಹತ್ತದೆ ನೀನು ಮುಂದೆ ಓದದೇ ಇದ್ದದ್ದು ಒಳ್ಳೆಯದಾಯಿತು ಮಗಾ ” ಎನ್ನುವಾಗ ಆಕೆಯ ಕಣ್ಣು ಮಂಜಾಗಿ ಧ್ವನಿ ಕಂಪಿಸಿತ್ತು. ಹೀಗೂ ಆಗಬಹುದೆಂಬ ಊಹೆಯಿಂದಲೇ ಏನೋ, ಏನೇನೂ ವಿಚಲಿತನಾಗದ ಚೇತನ್ ಅಮ್ಮನನ್ನು ಸಂತೈಸುವವನಂತೆ ಮೌನವಾಗಿ ಆಕೆಯ ಕೈಡಿದುಕೊಂಡ.

ಹೊರಗೆ ಹಸಿರು ಚಾದರ ಹೊದ್ದು ನಳನಳಿಸುತ್ತಿದ್ದ ಭತ್ತದ ಗದ್ದೆ ಅವರಿಬ್ಬರನ್ನು ನೋಡಿ ನಗುತ್ತಿತ್ತು. 


One thought on “‘ಬಾಂಧವ್ಯದ ಬೇರು’ ಸಣ್ಣ ಕಥೆ-ಜಯಲಕ್ಷ್ಮಿ.ಕೆ

Leave a Reply

Back To Top