ವಿಜಯಪ್ರಕಾಶ್ ಕಣಕ್ಕೂರು- ನಯನ. ಜಿ. ಎಸ್‌ ಅವರ ಗಜಲ್ ಜುಗಲ್ ಬಂದಿ

ಹೃದಯದ ಗೂಡಿನಲಿ ದಿವ್ಯಪ್ರಭೆಯಾಗಿ ಪ್ರಜ್ವಲಿಸಿದೆ ನೀನು
ಭಾವನೆಯ ಬೀಡಿನಲಿ ಸುಜ್ಞಾನದೀಪವಾಗಿ ಬೆಳಗಿದೆ ನೀನು

ಕರಗಿಸಿದೆ ಮನದ ಭಾರವನ್ನು ಒಲವಿಂದ ಒರಗುತ ನನ್ನೆದೆಗೆ
ಬಾಳಿನ ಏರಿಳಿತಗಳಲಿ ಜೊತೆಯಾಗಿ ಸ್ಫೂರ್ತಿಯಾದೆ ನೀನು

ನಿರ್ಭಾವುಕತೆಯೊಳಗಿನ ಮಿಡಿತವನ್ನು ಅರಿತೆ ಹೇಗೆ ಹೇಳು
ನೀರವ ನೀರಸ ಬದುಕಲಿ ಸುದೀಪ್ತಿಯಾಗಿ ಉದಿಸಿದೆ ನೀನು

ಕರ ಹಿಡಿದು ನಡೆದ ದಿನಗಳು ಕಳೆದು ಹೋಗುವುದೇಕೆ ಬೇಗ
ಅತಿಶಯ ಪ್ರೀತಿಯಲಿ ಆತ್ಮದೇವತೆಯಾಗಿ ಕಾಣಿಸಿದೆ ನೀನು

ಸಣ್ಣ ನಗುವಿನಿಂದಲೇ ಬದಲಿಸಿದೆ ವಿಜಯನ ಬದುಕಿನ ಬಣ್ಣ
ಜನ್ಮ ಪುಣ್ಯದಂತೆ ಅವನಿಯಲಿ ನನಗಾಗಿ ಅವತರಿಸಿದೆ ನೀನು.

*****

ಭವದ ಅಚಿಂತ್ಯತೆಯಲಿ ಶೋಭೆಯಾಗಿ ಕಾಣಿಸಿದೆ ನೀನು
ಹೃದಯದ ಪುಷ್ಪಣಿಯಲಿ ತಣ್ಪನಿಯಾಗಿ ವಿಹರಿಸಿದೆ ನೀನು

ಮೇರೆಗಳ ಮೀರುತ ನಗುವ ಅನಂತತೆಗೆ ರೂವಾರಿಯಾದೆ
ಬಾಳ್ವೆಯ ಕ್ಷಾಂತಿಯಲಿ ಪ್ರಭೃತಿಯಾಗಿ ಕಂಗೊಳಿಸಿದೆ ನೀನು

ಕಂಗಳು ಹಡೆದ ಕಂಬನಿಗಳ ಭಾವಕೆ ಅನುರೂಪನಾದೆ ಹೇಗೆ
ಎದೆಯ ಮಿಡಿತದಲಿ ಮೆಲ್ಲುಲಿಯಾಗಿ ಆವಿರ್ಭವಿಸಿದೆ ನೀನು

ಸಂದ ಪಥಗಳಲಿ ಮೂಡಿದೆ ಅನುಭಾವಗಳ ಹೆಜ್ಜೆಗುರುತುಗಳು
ಅನುರೂಪತೆಯ ಗರಿಮೆಯಲಿ ಹಾರೈಕೆಯಾಗಿ ಆವರಿಸಿದೆ ನೀನು

ಅರಿತು ಮನದ ಭಾವಗಳನ್ನು ಸ್ಫೂರ್ತಿಯಾದೆ ನಯನಗಳ ನಲಿವಿಗೆ
ಒಪ್ಪವಾಗುವಂತೆ ಬದುಕಿನಲಿ ಆತ್ಮಬಂಧುವಾಗಿ ಮೇಲೈಸಿದೆ ನೀನು.

***********************

Leave a Reply

Back To Top