“ಮತ್ತೆ ಹಾಡಿತು ಕೋಗಿಲೆ” ಕುಸುಮಾ.ಜಿ. ಭಟ್ ಅವರ ಸಣ್ಣ ಕಥೆ

ತುರ್ತು ನಿಗಾ ಘಟಕದಿಂದ ಟ್ರಾಲಿಯಲ್ಲಿ ಹೊರ ತಂದ ನಿರ್ಜೀವ ಶರೀರವನ್ನು ಹೊತ್ತ ಆಂಬುಲೆನ್ಸ್ ನಗರದ ಪ್ರತಿಷ್ಟಿತ ಹೃದ್ರೋಗ ಆಸ್ಪತ್ರೆಯ ಆವರಣ ಬಿಟ್ಟು ಹೊರಟಿತ್ತು. ವಿಧಿಯ ಆಟಕ್ಕೆ ಬಲಿಯಾಗಿ ಮಸಣದ ಹಾದಿಯಲ್ಲಿ ಸಾಗುವಾಗ ವಿಧಿಯು ಒಂದಾಗಿಸಿದ್ದ ಅವಳೊಬ್ಬಳೇ ಇದ್ದಳು ಜೊತೆಗೆ.

ಅರು ತಿಂಗಳ ಹಿಂದಷ್ಟೇ ಹೃದಯಕ್ಕೆ ಡಬಲ್ ಸ್ಟಂಟ್ ಅಳವಡಿಸಿದ್ದರೂ ಇತ್ತೀಚಿಗೆ ಎರಡೆರಡು ಬಾರಿ ಆದ ಹಾರ್ಟ್ ಅಟ್ಯಾಕಿನಿಂದ ತೀವ್ರ ಅಸ್ವಸ್ಥಗೊಂಡಿದ್ದ ಸುರಾಗ್. ಕಾರ್ಡಿಯಾಲಜಿಸ್ಟ್ ಡಾ. ವಿಲಿಯಮ್ ಫರ್ನಾoಡಿಸರ ಸಲಹೆಯ ಮೇರೆಗೆ ಕೊನೆಯ ಪ್ರಯತ್ನವೆಂಬಂತೆ ಕಳೆದ ವಾರ ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಬೇಕಾಯಿತು. ದುರಾದೃಷ್ಟಾವಶಾತ್ ಅನಸ್ತೇಶಿಯಾ ಅವಧಿ ಮೀರಿದರೂ ಎಚ್ಚರವಾಗುವ ಲಕ್ಷಣವೇ ಕಾಣದೆ ನುರಿತ ಸರ್ಜನ್ ಗಳಿಗೆ ಒಂದು ಎಕ್ಸ್ಪೆರಿಮೆಂಟ್ ವಸ್ತುವಾಗಿ ಸಾವು ಬದುಕಿನೊಂದಿಗೆ ಹೋರಾಡಿ ಕೊನೆಗೂ ಇಹಲೋಕಕ್ಕೆ ಇತಿಶ್ರೀ ಹಾಡಿದ್ದ ಸುರಾಗ್. ಇನ್ನೇನು ಆಪರೇಷನ್ ಆಗಿಬಿಟ್ಟರೆ ಒಂದು ಹಂತಕ್ಕಾದರೂ ಎಲ್ಲಾ ಸರಿ ಹೋದೀತೆoಬ ಒಂದು ನಂಬಿಕೆ, ನಿರೀಕ್ಷಾ ಭಾವದಿಂದ ತನ್ನವನನ್ನು ಯಾವ ದಾರಿಯಲ್ಲಿ ಜೋಪಾನವಾಗಿ ಕರೆತಂದಿದ್ದಳೋ ಸುಚಿತ್ರಾ ಮರಳಿ ಅದೇ ಮಾರ್ಗದಲ್ಲಿ ಅವನನ್ನು ಒಂದು ಶವದ ರೂಪದಲ್ಲಿ ಯಾವ ಮುಖದಿಂದ ಕೊಂಡೊಯ್ದಾಳು ಊರಿಗೆ ??
ತನ್ನನ್ನು ಇಷ್ಟಪಟ್ಟ ಜೀವದೊಂದಿಗೆ ಬಾಳಿದರೆ ಬದುಕು ಹಸನಾದೀತು ಎನ್ನುವ ಸಿದ್ಧಾಂತಕ್ಕೆಮಣಿದು ಇನ್ನೂ ವೈವಾಹಿಕ ಬದುಕಿಗೆ ಕಾಲಿಟ್ಟು, ದಾಂಪತ್ಯ ಜೀವನದ ಸೊಗಡನ್ನೂ ಅರಿಯುವ ಮೊದಲೇ ವಿತಂತು ಪಟ್ಟಕ್ಕೆ ವಿಧಿ ತಳ್ಳಿದಾಗ ಈ ಸತ್ಯವನ್ನು ಹೇಗೆ ತಾನೇ ಸ್ವೀಕರಿಸಿರಬಹುದು ಹೇಳಿ? ಕನಸಲ್ಲಿಯೂ ನೆನೆಸಿಕೊಳ್ಳಲಾಗದು ಅವಳ ಆಂತರ್ಯದ ಕೂಗನ್ನು.

‘ಸುರಾಗ್’ ಹೆಸರಾಂತ ಹಿಂದೂಸ್ಥಾನಿ ಸಂಗೀತಗಾರನಾಗಿದ್ದ ಮತ್ತು ತಾನು ವಿದ್ವತ್ ಪದವಿ ಪಡೆದ ಸಂಗೀತ ವಿದ್ಯಾಲಯದಲ್ಲಿ ಗುರುವೂ ಹೌದು! ಸ್ಫುರದ್ರೂಪಿ ಗಾಯಕ ವೇದಿಕೆ ಹತ್ತಿ ಕೂತು ಶಿವರಂಜನಿ ರಾಗದ ಆಲಾಪನೆ ಶುರುಮಾಡಿದನೆಂದರೆ ಪಕ್ಕ ವಾದ್ಯದವರು ಹರ್ಷಚಿತ್ತದಿ ಪೈಪೋಟಿಗಿಳಿದಂತೆ ಸಾಥ್ ಕೊಡುತ್ತಿದ್ದರು!
ಸಂಗೀತದ ಗಂಧ ಗಾಳಿ ಗೊತ್ತಿಲ್ಲದವರೂ ಕೂಡಾ ಸುರಾಗ್ ನ ಸ್ವರಮಾಧುರ್ಯಕ್ಕೆ ಮರುಳಾಗಿ ಸಂಗೀತ ಪ್ರೇಮಿಗಳಾಗುತ್ತಾರೆ ಎಂದರೆ ಆಶ್ಚರ್ಯವೇನಿಲ್ಲ ಬಿಡಿ. ಅಂತೆಯೇ ಕ್ಯಾಂಪಸ್ಸಿನ ಎದುರಿರುವ ಡಿಪ್ಲೊಮೋ ಕಾಲೇಜಿನಲ್ಲಿ ಫ್ಯಾಶನ್ ಡಿಸೈನರ್ ಕೋರ್ಸ್ ಕಲಿಯುತ್ತಿರುವ ಸುಚಿತ್ರಾ ತಿಂಗಳಿಗೊಂದಾವರ್ತಿ ಆಡಿಟೋರಿಯಮ್ ಒಳಗೆ ನಡೆಯುವ ಸಂಗೀತ ಕಚೇರಿಗೆ ಆಗಾಗ ಬಂದು ಸುರಾಗ್ ಧ್ವನಿಗೆ ಫಿದಾ ಆಗಿದ್ದು ಅತಿಶಯೋಕ್ತಿಯಲ್ಲ !

ಮೊದಲೇ ನೋಡಲು ಸುಚಿತ್ರಾ ಇಡೀ ಕ್ಯಾಂಪಸ್ ನಲ್ಲಿ ಆಕರ್ಷಣೆಯ ಕೇಂದ್ರ ಬಿಂದು.ಈಗಂತೂ ತಾನೇ ವಿವಿಧ ವಿನ್ಯಾಸಗಳಲ್ಲಿ ರೆಡಿ ಮಾಡಿಕೊಂಡ ಉಡುಗೆ ತೊಟ್ಟು ಸೆಲೆಬ್ರಿಟಿಯಂತೆ ಬಳುಕುತ್ತ ಸಭೆಯ ಮುಂದಿನ ಸೀಟು ಅಲಂಕರಿಸಿದಳೆಂದರೆ ಎಲ್ಲರ ದೃಷ್ಟಿಯೂ ಅವಳತ್ತಲೇ.
ಆರಂಭದಲ್ಲಿ ತನ್ನ ಕಾಜಲ್ ತೀಡಿದ ಕಾಂತಿ ತುಂಬಿದ ಕಂಗಳ ಅತ್ತಿತ್ತ ಕದಲಿಸದೆ ಗಾಯಕನನ್ನೇ ನೋಡುತ್ತಾ ಕೂರುತ್ತಿದ್ದಳಾದರೂ ಕಾರ್ಯಕ್ರಮ ಅಂತ್ಯ ಭಾಗಕ್ಕೆ ತಲುಪುವಾಗ ರಾಗ, ತಾಳ, ಲಯಗಳಲ್ಲಿ ತಾನೂ ಬಂಧಿಯಾಗಿ ಮನಸಾರೆ ಅನುಭವಿಸುತ್ತ ಕಣ್ಮುಚ್ಚಿ ಅದರೊಳಗೆ ತನ್ಮಯಳಾಗಿಬಿಡುತ್ತಿದ್ದಳು.
ಹಾಗೆಯೇ ಸುರಾಗ್ ಗಮನಿಸಿದಂತೆ ಮೊದ ಮೊದಲು ಸುಚಿತ್ರಾ ತನ್ನೆದುರು ಆಸೀನರಾದ ಎಲ್ಲಾ ಸಭಿಕರಂತೆ ಕಾಣಿಸುತ್ತಿದ್ದರೂ ಈ ನಡುವೆ ಅವಳು ಮೈಮರೆತು ತನ್ನ ಸಂಗೀತವನ್ನೇ ಆಲಿಸುವ ಪರಿಗೆ ಬೆರಗಾಗಿ, ಅಪರೂಪದ ಚೆಲುವಿಗೆ ಮರುಳಾಗಿ ಹೋಗಿದ್ದ ತನಗೇ ಅರಿವಿಲ್ಲದಂತೆ!
ಸ್ಟೇಜ್ ಹತ್ತುತ್ತಿದ್ದಂತೆ ಹಾಡಲು ಶುರು ಮಾಡೋ ಮೊದಲು ಅವನ ತೀಕ್ಷ್ಣ ಕಣ್ಣುಗಳು ಅವಳ ಚೆಲುವ ನಯನಗಳ ಅರಸುತ್ತಿದ್ದವು.
ಒಂದು ದಿನ ಅಕಸ್ಮಾತ್ ಅವಳ ಅನುಪಸ್ಥಿತಿ ಇದ್ದರೆ ಅಂದು ಅವನ ಕಛೇರಿಗೆ ಎಂದಿನ ಮೆರುಗಿಲ್ಲ, ಗೆಲುವಿಲ್ಲ!
ಹೀಗೆ ದಿನ ಉರುಳಿದಂತೆ ಸುಚಿತ್ರಾ ಸುರಾಗನ ಸಂಗೀತ ಲೋಕಕ್ಕೆ ಸ್ಫೂರ್ತಿಯ ಚಿಲುಮೆಯೇ ಆಗಿದ್ದಳು. ಒಂದೆರಡು ಬಾರಿ ಅವಳ ನೇರ ಪರಿಚಯ ಮಾಡಿಕೊಳ್ಳುವ ಹಂಬಲದಿಂದ ಅವನೇ ವೇದಿಕೆಯಿಂದ ಇಳಿದು ಪ್ರಯತ್ನಿಸಿದ್ದೂ ಇದೆ ! ಆದರೆ ಸುಚಿತ್ರಾಗೆ ಇದ್ಯಾವುದೂ ಗಮನಕ್ಕಿಲ್ಲ. ಹಾಡು ಮುಗಿದ ಬಳಿಕ ತಾನಾಯಿತು ತನ್ನ ಮುಂದಿನ ಕ್ಲಾಸ್ ಆಯಿತು ಎಂದು ನಡೆದುಬಿಡುತ್ತಿದ್ದಳು ಸದ್ದಿಲ್ಲದೇ.
ಸುಚಿತ್ರಾಳ ಜೀವನದಲ್ಲಿ ಮುಂದೆ ನಡೆದದ್ದೆಲ್ಲ ಒಂದು ಸಿನಿಮಾ ಕಥೆಯಂತೆ ಅವಳ ಕಲ್ಪನೆಗೂ ಬಾರದ್ದು ಯಾರ ಊಹೆಗೂ ನಿಲುಕದ್ದು.!
ಸುಚಿತ್ರಾ ಈಗ ಫೈನಲ್ ಇಯರ್ ಓದುತ್ತಿರುವುದರಿಂದ ಕಲ್ಚರಲ್ ಪ್ರೋಗ್ರಾಮ್, ಸ್ಪೋರ್ಟ್ಸ್ ಹೀಗೆ ಎಲ್ಲಾ ವಿಷಯಗಳ ಆಚೆ ಬದಿಗಿಟ್ಟು ಪಾಠ, ಪ್ರವಚನಕ್ಕೆ ಜಾಸ್ತಿ ಒತ್ತು ನೀಡತೊಡಗುತ್ತಾಳೆ. ಆದರೆ ಇತ್ತ ಸುರಾಗ್ ಮನಸ್ಸನ್ನು ಪೂರ್ತಿ ಸುಚಿತ್ರಾಳೇ ಆವರಿಸಿದ್ದಾಳೆ. ಅವಳನ್ನು ತನ್ನವಳಾಗಿ ಪಡೆಯುವ ಕಾತುರ ದಿನೇ ದಿನೇ ಹೆಚ್ಚುತ್ತಿದೆ.ಅದೊಂದು ದಿನ ಸುಚಿತ್ರಾ ಕಾಲೇಜು ಮುಗಿಸಿ ಗೆಳತಿಯರೊಂದಿಗೆ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾಗ ಸುರಾಗ್ ಸುಯ್ ಅಂತ ಭಾರತಕ್ಕೆ ಬೆರಳೆಣಿಕೆಯಷ್ಟು ಆಮದಾಗಿರುವ ವಿದೇಶೀ ಬ್ರಾಂಡ್ ನ ಕಾರನ್ನು ತಂದು ಮೈಗೆ ತಾಕುವಂತೆ ನಿಲ್ಲಿಸಿದ. ಸುಚಿತ್ರಾ ಒಮ್ಮೆ ಹೌಹಾರಿ ಸಾವರಿಸಿಕೊಂಡು “ನಮಸ್ತೇ ಸರ್”ಎಂದು ಕೈ ಮುಗಿದು ನಿಂತರೆ “ಡ್ರಾಪ್ ಕೊಡ್ಲಾ ಮೇಡಂ” ಎನ್ನಬೇಕೆ.” ಸುಚಿತ್ರಾ ಕೂಡಾ ಪರ್ವಾಗಿಲ್ಲ ನಾ ಕಾಲೇಜ್ ಬಸ್ಸಿನಲ್ಲೇ ಹೋಗುವೆ “ಎಂದು ನಯವಾಗಿ ನಿರಾಕರಿಸುತ್ತಾಳೆ.
ಅಷ್ಟಕ್ಕೂ ಸುಮ್ಮನಿರದೆ ಸುರಾಗ್ ಹಠದಿಂದ ಸೋಶಿಯಲ್ ಮೀಡಿಯಾಗಳಲ್ಲೆಲ್ಲ ಜಾಲಾಡಿ ಅಂತೂ ಮತ್ತೆ ಸುಚಿತ್ರಾಳ ಸಂಪರ್ಕಿಸುತ್ತಾನೆ. ಈ ಬಾರಿಯೂ ಸುಚಿತ್ರಾ ಸಹಜವೆಂಬಂತೆ ಗೌರವಿಸಿ ಅಭಿಮಾನದಿಂದ ಮಾತಿಗಿಳಿಯುತ್ತಾಳೆ.
ಸುರಾಗ್ ತುಂಬಾ ಖುಷಿಯಿಂದ ಯಾವ ಎಗ್ಗು ಸಿಗ್ಗಿಲ್ಲದೇ ತಾನವಳನ್ನು ಇಷ್ಟಪಡುತ್ತಿರುವ ಬಗ್ಗೆ ತಿಳಿಸುತ್ತಾ ತನ್ನನ್ನೇ ಮದುವೆಯಾಗೆಂದು ನೇರವಾಗಿ ಕೇಳುತ್ತಾನೆ. ಈ ವಿಚಿತ್ರ ವರ್ತನೆಗೆ ಸುಚಿತ್ರಾ ಆತಂಕಗೊಂಡರೂ ಸ್ವಲ್ಪವೂ ವಿಚಲಿತಳಾಗದೆ “ಸರ್ ನೀವು ನನ್ನ ತಪ್ಪು ತಿಳಿದಿರಿ ಬಹುಷಃ. ಈಗಲೂ ನಾನು ನಿಮ್ಮ ಸಂಗೀತದ ಅಭಿಮಾನಿ ಹೊರತು ಬೇರಾವ ಭಾವನೆಯೂ ನಿಮ್ಮ ಮೇಲಿಲ್ಲ. ನಾನಿನ್ನೂ ಓದಬೇಕು. ಫ್ಯೂಚರ್ ಬಗ್ಗೆ ಯೋಚನೆ ಮಾಡುವ ವಯಸ್ಸು ನನ್ನದಲ್ಲ” ಎಂದು ಸ್ಪಷ್ಟವಾಗಿ ಹೇಳುತ್ತಾಳಲ್ಲದೆ ಇನ್ನು ಮುಂದೆ ತನ್ನ ಸುದ್ದಿಗೆ ಬರಬಾರದೆಂದು ಬೇಡಿಕೊಳ್ಳುತ್ತಾಳೆ.
ಸತತ ಪ್ರಯತ್ನದ ನಂತರವೂ ಜೀವಕ್ಕಿಂತ ಹೆಚ್ಚು ಅವಳನ್ನೇ ಪ್ರೀತಿಸುತ್ತೇನೆಂದರೂ ಆಕೆ ಒಪ್ಪಿಕೊಳ್ಳದಿರುವುದರಿಂದ ಕುಗ್ಗಿದ ಸುರಾಗ್ ಕ್ರಮೇಣ ಮಾದಕ ದ್ರವ್ಯದ ದಾಸನಾಗುತ್ತಾನೆ. ಅದ್ಯಾವ ಮಟ್ಟಕ್ಕಿಳಿಯಿತೆಂದರೆ ತನ್ನ ಪ್ರೊಫೆಶನ್ ಸಹ ಲೆಕ್ಕಿಸದೆ ಕಂಠ ಪೂರ್ತಿ ಕುಡಿದು ಬೀದಿಯಲ್ಲೆಲ್ಲಾ ತೂರಾಡುವುದು, ಚರಂಡಿ ಬಳಿ ಬಿದ್ದು ಯಾರೋ ಎತ್ತಿ ಮನೆಗೆ ಕಳುಹಿಸುವುದು ಹೀಗೆ ಮಿತಿ ಮೀರಿತ್ತು. ದಿನವಿಡೀ ಇದೇ ಅಮಲಿನಲ್ಲಿ ಮುಳುಗಿದ್ದವಗೆ ತಂದೆ ತಾಯಿ ಬಂಧು ಬಳಗವರ ಬುದ್ಧಿ ಮಾತು,ಸ್ನೇಹಿತರ ಹಿತನುಡಿಗಳು ಕಿವಿಗೆ ತಾಕುವುದಾದರೂ ಹೇಗೆ??
ಮಧ್ಯರಾತ್ರಿಯಲ್ಲೂ ಸುಚಿತ್ರಾಳ ಮನೆ ಬಾಗಿಲು ಬಡಿದು ಪ್ರೀತಿಗಾಗಿ ಅಂಗಲಾಚಿ, ಹತಾಶೆಯಿಂದ ಹೆತ್ತವರಿಗೆ ಬೆದರಿಕೆ
ಹಾಕುವ ಮಟ್ಟಕ್ಕೆ ಇಳಿಯುತ್ತಾನೆ. ಆಗ ಅವನಲ್ಲಿ ತಾನು ಬಯಸಿದ್ದನ್ನು ಪಡೆದೇ ತೀರಬೇಕೆನ್ನುವ ಹಟವಿತ್ತೇ ವಿನಃ ಪ್ರೀತಿಗೆ ಜಾಗವಿರಲಿಲ್ಲ. ಆಗಷ್ಟೇ ಉತ್ತಮ ರಿಸಲ್ಟ್ ಪಡೆದು ಫೈನಲ್ ಇಯರ್ ಮುಗಿಸಿದ್ದ ಸುಚಿತ್ರಾ ಕೆಲಸಕ್ಕೆ ಸೇರುವ ಆತುರದಲ್ಲಿದ್ದರೆ ಸಾದು ಸ್ವಭಾವದ ಅವಳಪ್ಪ ಸುರಾಗ್ ನ ಕಿರುಕುಳದಿಂದ ಏನಾದರೂ ಅನಾಹುತ ಮಾಡಿಬಿಟ್ಟರೆ ಎನ್ನುವ ಭಯದಲ್ಲಿ.ಕೊನೆಗೂ ಮಗಳಿಗೆ ಏನೇನೋ ಹೇಳಿ ನಂಬಿಸಿ ಆತುರಾತುರವಾಗಿ ಸುರಾಗ್ ಗೆ ಧಾರೆಯೆರೆದು ಕೊಡುತ್ತಾನೆ. ಅದ್ಯಾವ ಗಳಿಗೆಯಲ್ಲಿ ತಾಳಿಕಟ್ಟಿದನೋ? ಆ ಕ್ಷಣದಲ್ಲಿ ಸುಚಿತ್ರಾ ಎಂಬ ಸುಂದರಿ ಒಬ್ಬ ಸಂಗೀತಗಾರ ಅಲ್ಲ ಕುಡುಕನ ಕೈ ಸೆರೆಯಾದಳು ಎಂದರೂ ತಪ್ಪಲ್ಲ!
ಮದುವೆಯಾದ ಹೊಸತರಲ್ಲೂ ಇಷ್ಟ ಪಟ್ಟವಳು ಪಕ್ಕಕ್ಕಿರುವುದನ್ನೂ ಪರಿಗಣಿಸದೆ ಕುಡಿಯಲು ಹಾತೊರೆಯುತ್ತಿದ್ದ. ಸುಚಿತ್ರಾಗೆ ಹೊಸ ಬಾಳಿನ ಹೊಸ್ತಿಲಲ್ಲೇ ಭವಿಷ್ಯದ ಕಂಟಕಗಳ ದರ್ಶನವಾಗತೊಡಗುತ್ತದೆ. ರಾಗವಿಲ್ಲದ ಸುರಾಗ್ ನೊಂದಿಗಿನ ಬದುಕು. ಶೃಂಗಾರ ಶೂನ್ಯ ರಾತ್ರಿಗಳು ಮುಳ್ಳಿನ ಹಾಸಿಗೆಯಲ್ಲಿ ಉರುಳಿದಂತೆ ಭಾಸವಾಗುತ್ತದೆ.
ತನ್ನ ಖುಷಿಯೆನ್ನಲ್ಲ ಮರೆತು, ಸುರಾಗ್ ನನ್ನು ಸರಿದಾರಿಗೆ ತರುವ ವ್ಯರ್ಥ ಪ್ರಯತ್ನದಲ್ಲೇ ವೈವಾಹಿಕ ಜೇವನದ ಆರು ತಿಂಗಳುಗಳು ಉರುಳಿಹೋಗುತ್ತವೆ. ಏನೂ ಪ್ರಯೋಜನವಾಗದೆ, ಹಾರ್ಟ್ ನಲ್ಲಿ ಒಂದೊಂದೇ ವಾಲ್ವ್ ಗಳು ಬ್ಲಾಕೇಜ್ ಕಾಣಿಸತೊಡಗಿ ಸುರಾಗ್ ಹಾಸಿಗೆ ಹಿಡಿಯುತ್ತಾನೆ. ರಾತ್ರಿ ಹಗಲು ಅವನ ಶುಶ್ರೂಷೆಯಲ್ಲೇ ತೊಡಗಿದ ಸುಚಿತ್ರಾಳ ಬದುಕಲ್ಲಿ ಅದೊಂದು ದುರ್ದಿನ ಸುರಾಗ್ ಎಂಬ ಕೋಗಿಲೆಯ ಸ್ವರ ಸ್ಥಬ್ಧವಾಗುತ್ತದೆ. ಅಂತಿಮವಾಗಿ ಸುರಾಗ್ ನನ್ನು ಆತನ ಚಟವೇ ಚಟ್ಟಕ್ಕೇರಿಸುತ್ತದೆ.

ಸುರಾಗ್ ನ ಊರಲ್ಲಿ ತಮ್ಮ ನೆಚ್ಚಿನ ಗಾಯಕನ ಪಾರ್ಥಿವ ಶರೀರಕ್ಕೆ ನಮಿಸಲು ದುಃಖತಪ್ತ ಅಭಿಮಾನಿ ಸಾಗರವೇ ನೆರೆದಿದ್ದು ಕಣ್ ಮುಚ್ಚಿ ಬಿಡುವಷ್ಟರಲ್ಲಿ ಅಂತ್ಯಸಂಸ್ಕಾರವೂ ಮುಗಿದುಹೋಯಿತು. ಸಂತಾಪ ವ್ಯಕ್ತಪಡಿಸುವಿಕೆಯ ಪ್ರಹಸನ ಕೆಲವು ದಿನಗಳಲ್ಲಿ ಮುಗಿದು ಹೋಗುತ್ತದೆ. ಅತ್ತ ಓದಿಕೊಂಡಿದ್ದಕ್ಕೆ ಕೆಲಸವೂ ಇಲ್ಲ, ಇತ್ತ ಕೈ ಹಿಡಿದವನೂ ಇಲ್ಲದ ಚಿಗುರು ಬಾಲೆಯ ಆರ್ಥನಾದ ಕಿವುಡು ಸಮಾಜಕ್ಕೆ ಕೇಳಿಸೀತೆ? ಎಲ್ಲಿoದೆಲ್ಲಿಯ ತನಕ ಯೋಚಿಸಿದರೂ ಭವಿಷ್ಯ ಕರಾಳ. ಮರಳಿ ತವರನ್ನೇ ಆಶ್ರಯಿಸಿದವಳಿಗೆ ಸೌಂದರ್ಯವೆಲ್ಲ ಮಾಸಿ, ಕತ್ತಲಲ್ಲೇ ಕೊರಗುತ್ತಾ ಸೊರಗಿ ಮನಸ್ಸು ಕಲ್ಲಾಗಿ ಮುಂಬರುವ ದಿನಗಳು ನೀರಸವಾಗಿ ಸಾಗುತ್ತದೆ.

ಇಷ್ಟು ದಿನ ಕಣ್ಮುಚ್ಚಿ ಕುಳಿತಿದ್ದ ಅದ್ಯಾವ ದೈವೀ ಶಕ್ತಿ ಕಣ್ತೆರೆಯಿತೋ ಪವಾಡವೆಂಬಂತೆ ಇದುವರೆಗೆ ನಡೆದದ್ದೆಲ್ಲವನ್ನೂ ಕಣ್ಣಾರೆ ಕಂಡ ಜೀವವೊಂದು ಒಳಗೊಳಗೆ ಪರಿಹಾರಕ್ಕಾಗಿ ಮರುಗುತ್ತಿತ್ತು. ಅದು ಮತ್ಯಾರು ಅಲ್ಲ! ಸುರಾಗನ ಆಪ್ತ ಸ್ನೇಹಿತ ‘ಸಮರ್ಥ್’ !

ಹೌದು! ಸಮರ್ಥ್ ಹೊಸತಾಗಿ ಆರಂಭಿಸಿದ ದೊಡ್ಡ ಗಾರ್ಮೆಂಟ್ ಗೆ ಸ್ಟಿಚಿಂಗ್ ವಿಭಾಗಕ್ಕೆ ಲೇಡಿಸ್ ಟೈಲರ್, ಡಿಸೈನರುಗಳ ಅವಶ್ಯಕತೆ ಬಹಳವಿತ್ತು. ಆಗ ಮೊದಲು ನೆನಪಾಗಿದ್ದು ಸ್ನೇಹಿತನ ಕೈ ಹಿಡಿದು ಬದುಕು ಕಳೆದುಕೊಂಡ ಸುಚಿತ್ರಾ! ತಾನಾಗಿಯೇ ಅವಳಿಗೆ ಕರೆ ಮಾಡಿ ರೆಸ್ಯೂಮ್ ಕಳಿಸಲು ಕೇಳಿಕೊಂಡಾಗ ತನ್ನವನ ಆಪ್ತ ಸ್ನೇಹಿತ, ಪರಿಚಿತನಾದವನ ಸಹಾಯವನ್ನು ಸುಚಿತ್ರಾ ನಿರಾಕರಿಸಲು ಹೇಗೆ ತಾನೇ ಸಾಧ್ಯ? ಇಂಟರ್ವ್ಯೂ ನಲ್ಲಿ ಆಯ್ಕೆ ಆದವಳು ತನ್ನ ಕರ್ತವ್ಯ ನಿಷ್ಠೆ, ಟ್ರೈನಿಂಗ್, ಶ್ರದ್ಧೆಯಿಂದ ಕೆಲವೇ ದಿನಗಳಲ್ಲಿ ಸಿ.ಇ.ಒ. ಆಗಿ ನೇಮಕಗೊಳ್ಳುತ್ತಾಳೆ. ಸಮರ್ಥ್ ಮೊದಲೇ ಮನಸ್ಸಲ್ಲಿ ನಿರ್ಧರಿಸಿದಂತೆ ತನಗೆ ಬಂದ ನೂರಾರು ಪ್ರಪೋಸಲ್ಸುಗಳನ್ನು ಬದಿಗೊತ್ತಿ ಹಿರಿಯರೆದುರು ಜೀವನದಲ್ಲಿ ಒಂದೊಳ್ಳೆಯ ಆಯ್ಕೆಯ ಬಗ್ಗೆ ಪ್ರಸ್ತಾಪಿಸಿದಾಗ ಖುಷಿಯಿಂದ ಒಪ್ಪುತ್ತಾರೆ.

ಅದೊಂದು ಶುಭದಿನ ಸುಚಿತ್ರಾಳನ್ನು ತನ್ನ ಬಾಳಸಂಗಾತಿಯಾಗೆಂದು ಆಹ್ವಾನಿಸಿದ ಸಮರ್ಥನ ಬದುಕು ಸಾರ್ಥಕತೆಯ ಮಹಲನ್ನು ವೈಭವದಿಂದ ಏರಲು ಸಜ್ಜಾಗಿದ್ದು ಕೇವಲ ಅವನೊಬ್ಬನ ಬದುಕಿಗೆ ಮಾತ್ರವಲ್ಲದೇ ಸುಚಿತ್ರಾಳ ವಾಸ್ತವ ಬದುಕಿಗೂ ಭಾವನೆಗಳ ಸಿಹಿಜೇನನ್ನು ಸೇಚಿಸುತ್ತದೆ.

ಅಚಾನಕ್ಕಾಗಿ ಹೊಡೆದ ಗುಡುಗು ಸಿಡಿಲಿನ ಹೊಡೆತಕ್ಕೆ ಮಾವಿನ ಮರ ಉರುಳಿಬಿದ್ದರೆ ನೊಂದುಕೊಳ್ಳುವ ತರುಲತೆಗೆ ಬದುಕು ನಿರಂತರವೆಂದು ಕಂಡು ಬಂದರೆ ಅತಿಶಯವಲ್ಲ
ಪ್ರಕೃತಿಯಲ್ಲಿನ ಪ್ರತಿಯೊಂದಕ್ಕೂ ಪ್ರತಿಯೊಂದರ ಸಹಕಾರ ಅಗತ್ಯವಿರುವಂತೆ ಬಾಳ ಪಯಣದಲ್ಲಿ ಅದೆಷ್ಟೇ ಒಂಟಿತನದ ಬದುಕನ್ನು ಬಯಸಿದರೂ ಅದು ಅಸಾಧ್ಯವಾದದ್ದೇ. ಗತದ ಕಹಿಯು ವಾಸ್ತವದ ಸಿಹಿಯೊಂದಿಗೆ ಬೆಸೆದಾಗ ಸವಿದ ಸಿಹಿಭಾವ ಅವಳ ಬದುಕಿನ ನಿನ್ನೆಗಳ ಕರಾಳತೆಯನ್ನು ಕೆಡವಿದರೆ,‌ ಭವಿಷ್ಯದ ದಿನಗಳು ಸುಖದಿಂದ ಕೈಬೀಸಿ ಕರೆಯುವಂತೆ ಭಾಸವಾಯಿತು. ನಗು ಮೊಗದಿಂದ ನವ ಕನಸುಗಳಿಗೆ ಮುನ್ನುಡಿ ಬರೆದ ಅವಳ ತುಂಬು ನೇತ್ರಗಳಲ್ಲಿ ಸುರಿದ ಆನಂದಬಾಷ್ಪ ತನ್ನ ಬಾಳನ್ನು ಮತ್ತೊಮ್ಮೆ ಬೆಳಗಿದ ಸಮರ್ಥನೆಡೆಗೆ ಕೃತಜ್ಞತಾ ಭಾವದ ದೃಷ್ಟಿಯನ್ನು ಹೊಂದಿತ್ತು. ಬಾಳ ಪಯಣದಲ್ಲಿ ಸೌಭಾಗ್ಯದ ಸೆಲೆ ಬತ್ತಿ ಹೋಯಿತು ಎಂದೇ ಭಾವಿಸಿದ್ದವಳ ಕಮರಿಹೋದ ಬದುಕು ಇದೀಗ ವಸಂತನಾಗಮನದಿಂದ ನಳನಳಿಸಿದ ನಿಸರ್ಗದಂತೆ ನವೋಲ್ಲಾಸದಿಂದ ತುಂಬಿ ಹೋಗಿತ್ತು. ಮೌನವಾದ ಸುಚಿತ್ರಾಳ ಮನದ ಮಾಮರದಲ್ಲಿ ಕೋಗಿಲೆ ಮತ್ತೆ ಹಾಡಿತ್ತು.


5 thoughts on ““ಮತ್ತೆ ಹಾಡಿತು ಕೋಗಿಲೆ” ಕುಸುಮಾ.ಜಿ. ಭಟ್ ಅವರ ಸಣ್ಣ ಕಥೆ

  1. ಬಹಳ ಸುಂದರ ಕಥೆ. ಚೆಂದ ಇದೆ. ಕಮರಿದ ಬಾಳಿಗೆ ಹೊಸ ಚೈತನ್ಯ ತುಂಬುವ ಪರಿ ಚೆಂದಚೆಂದ. ಸರಾಗವಾಗಿ ಕಥೆ ಓದಿಸಿಕೊಂಡುಹೋಗುತ್ತದೆ. ಆಕರ್ಷಣೀಯ ಶೈಲಿ. ಅಭಿನಂದನೆಗಳು ಕುಸುಮಾಭಟ್ ರವರೆ.

  2. ಒಳ್ಳೆಯ ಕಥೆ ಒಳ್ಳೆಯ ಬರಹ ಕೂಡ , ಮುಂದು ವರೆಯಲಿ ಬರವಣಿಗೆ

  3. ಬಾಡಿದ ತಾವರೆ ಅರಳಿದ ಹಾಗೆ ಬದುಕಿನಲ್ಲಿ ಬರುವ ಅತ್ಯಂತ ಕ್ಲಿಷ್ಟಕರವಾದ ಮತ್ತು ಸಮಾಧಾನವೆಂಬ ಎರಡು ಪರಿಯನ್ನು ಮತ್ತೆ ಹಾಡಿತು ಕೋಗಿಲೆ ಕಥೆಯಲ್ಲಿ ಅದ್ಭುತವಾಗಿ ಮೂಡಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಮೇಡಂ

    ಅತ್ಯುತ್ತಮವಾದ ಬರಹ ಮೇಡಂ…✍

  4. ಕಥೆ ತುಂಬಾ ಚೆನ್ನಾಗಿದೆ. ಓದಿಸಿಕೊಂಡು ಹೋಗುವ ಶಕ್ತಿ ನಿಮ್ಮ ಕಥೆಗೆ ಹಾಗು ನಿಮ್ಮ ಬರವಣಿಗೆ ಶೈಲಿಗೆ ಇದು.

    ನಿನ್ನ ಕರ್ತವ್ಯ ನೀ ಮಾಡು, ಬಾಕಿದನ್ನು ನನಗೆ ಬಿಡು ಅನ್ನುವುದಕ್ಕೆ ಸುಚಿತ್ರಾಳ ಬಾಳೆ ಸಾಕ್ಷಿ.
    ಒಳ್ಳೆಯದನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ.

    ಕಥೆ ಬರೆಯುವುದನ್ನು ಮುಂದುವರಿಸಿ. ಒಳ್ಳೆಯದಾಗಲಿ, ಜಯ ಸಿಗಲಿ.

    ವೆಂಕಟೇಶ್ ವಿ., ಬೆಂಗಳೂರು

Leave a Reply

Back To Top