ಲೇಖನ ಸಂಗಾತಿ
ಜಯಲಕ್ಷ್ಮಿ ಕೆ.
“ಜೀವನ ಮೌಲ್ಯಗಳು” ಲೇಖನ
ದೇವಾಲಯವೊಂದರಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಭಕ್ತವೃಂದಕ್ಕೆ ಅನ್ನದಾನ ಏರ್ಪಾಡಾಗಿತ್ತು. ದೇವಸ್ಥಾನದ ಅನತಿ ದೂರದಲ್ಲಿ ಊಟದ ತಟ್ಟೆ ಇಟ್ಟು ಕೈ ತೊಳೆಯಲು ವ್ಯವಸ್ಥೆ ಮಾಡಿದ್ದರು. ನೀರಿನ ಡ್ರಮ್ ನಿಂದ ನೀರು ತೆಗೆದುಕೊಂಡು ಕೈತೊಳೆದ ಯುವತಿಯೊಬ್ಬಳು ತನ್ನ ಹಿಂದೆ ನಿಂತಿದ್ದ ಹಿರಿಯ ಮಹಿಳೆಯೊಬ್ಬರಿಗೆ ಖಾಲಿ ಚೊಂಬು ಕೊಟ್ಟು ಅತ್ತ ನಡೆದಳು. “ಒಂದಿಷ್ಟು ನೀರು ತುಂಬಿ ಕೊಡಬಾರದೇನವ್ವಾ.. ಖಾಲಿ ಚೊಂಬು ಕೊಡ್ತಾರಾ..?” ಮಹಿಳೆ ಅಸಹನೆಯಿಂದ ನುಡಿದು ನೀರು ತೆಗೆದು ಕೈ ತೊಳೆದು ಪುನಃ ಚೊಂಬಿನಲ್ಲಿ ನೀರು ತುಂಬಿ ತನ್ನ ಹಿಂದೆ ನಿಂತಿದ್ದವರಿಗೆ ಕೊಟ್ಟು ಈಚೆಗೆ ಬಂದರು. ತನ್ನ ಹಿಂದೆ ನಿಂತಿರುವವರು ಕೂಡಾ ಕೈ ತೊಳೆಯಲೆಂದೇ ಬಂದವರು, ನೀರು ತುಂಬಿ ಕೊಡಬೇಕು ಎನ್ನುವುದು ಯಾರೂ ಮಾಡಿದ ನಿಯಮವಲ್ಲ. ಅದು ಸಭ್ಯತೆ. ನಾವು ಶಿಷ್ಟರೋ, ಅಶಿಷ್ಟರೋ ನಾಲ್ಕು ಜನರೊಂದಿಗೆ ಬೆರೆತಾಗಲೇ ಅರಿವಿಗೆ ಬರುವುದು. ರಷ್ಯಾ – ಉಕ್ರೈನ್ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಸಂಕಷ್ಟಕ್ಕೀಡಾಗಿದ್ದ ಭಾರತೀಯ ವಿದ್ಯಾರ್ಥಿ ವೃಂದವನ್ನು ನಮ್ಮ ಸರಕಾರ ಹರಸಾಹಸಪಟ್ಟು ಸ್ವದೇಶಕ್ಕೆ ಕರೆತಂದಿತು. ತಮ್ಮ ತಾಯ್ನಾಡಿಗೆ ಅಡಿಯಿಟ್ಟ ಬಹಳಷ್ಟು ವಿದ್ಯಾರ್ಥಿಗಳಿಗೆ ತಮ್ಮನ್ನು ನಮಸ್ಕಾರಗಳ ಮೂಲಕ ಸ್ವಾಗತಿಸುತ್ತಿದ್ದ ಹಿರಿಯ ವ್ಯಕ್ತಿಗೆ ಪ್ರತಿನಮಸ್ಕಾರ ಸಲ್ಲಿಸಬೇಕು ಎಂಬ ಸೌಜನ್ಯ ಇರಲಿಲ್ಲ.
ಸಮಾರಂಭದ ವೇದಿಕೆಯೊಂದರಲ್ಲಿ ಗಣ್ಯರೊಬ್ಬರು ಭಾಷಣ ಮಾಡುತ್ತಿದ್ದಾರೆ.. ಸಭಿಕರ ಸಾಲಿನಲ್ಲಿ ಎದುರಿನ ಆಸನದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಅದೇ ವೇದಿಕೆಯಲ್ಲಿ ನೃತ್ಯ ಮಾಡಿ ಬಂದಿದ್ದ ತನ್ನ ಮಗಳ ಕೈ ಹಿಡಿದು ಎದ್ದು ಹೊರಟೇ ಬಿಟ್ಟರು! ಹೋಗಲೇಬೇಕು ಎಂದಿದ್ದರೆ ಗಣ್ಯರ ಭಾಷಣ ಆರಂಭ ಆಗುವ ಮೊದಲೇ ಎದ್ದು ಹೋಗಿಬಿಡಬೇಕಿತ್ತು. ಇಲ್ಲ, ಆ ಭಾಷಣ ಕೇಳಿ ಹೋಗುವ ವ್ಯವಧಾನವಿರಬೇಕಿತ್ತು. ಭಾಷಣ ಮುಗಿದ ತಕ್ಷಣ ಆ ಕಾರ್ಯಕ್ರಮದ ನಿರೂಪಕ ಬಂದು ಹೇಳಿದ, “ಗಣ್ಯರು ಮಾತನಾಡುತ್ತಿರುವಾಗ ಯಾರೂ ಎದ್ದು ಹೋಗಬಾರದು, ಇತರರ ಕಲೆಯನ್ನು ಗೌರವಿಸುವ ಸೌಜನ್ಯವಿರಲಿ”.
ಮನೆಯ ಕರೆಗಂಟೆ ಒತ್ತಿ ನಿಂತಿದ್ದ ಪರಿಚಿತ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡಿದ ಮನೆಯೊಡತಿ “ನಮ್ಮವರು ಮನೆಯಲ್ಲಿಲ್ಲ”. ದಢಾರನೆ ಬಾಗಿಲು ಮುಚ್ಚಿದಳು. “ಮುಖಕ್ಕೇ ಬಾಗಿಲು ಹಾಕುವುದು.. ಇದೆಂಥ ಸಂಸ್ಕಾರವೋ… “ವ್ಯಕ್ತಿ ಗೊಣಗಿಕೊಂಡು ಹೋದ.
ದೇವಸ್ಥಾನಕ್ಕೆ ಹೊರಟ ಒಂದು ಕುಟುಂಬ. ಅವರ ಗುಂಪಿನಲ್ಲಿದ್ದ ಯುವತಿಯೊಬ್ಬಳು ಎರಡು ತುಂಡು ಉಡುಗೆಗಳನ್ನು ಧರಿಸಿ, ಕೂದಲು ಹರಡಿಬಿಟ್ಟು ದೇಗುಲದೊಳಗೆ ಕಾಲಿಟ್ಟಳು.”ಈ ಉಡುಗೆಯಲ್ಲಿ ದೇವಸ್ಥಾನಕ್ಕೆ ಪ್ರವೇಶವಿಲ್ಲ. ನಮ್ಮ ಸಂಸ್ಕೃತಿಯನ್ನು ಕಾಯ್ದುಕೊಳ್ಳಬೇಕಲ್ಲ….?” ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹಿರಿಯರೊಬ್ಬರು ಬಾಗಿಲಲ್ಲೇ ಆಕೆಯನ್ನು ತಡೆದರು.
ಸಭ್ಯತೆ… ಸಂಸ್ಕಾರ… ಸೌಜನ್ಯ ಇವೆಲ್ಲ ಪುಟ್ಟ ಪುಟ್ಟ ಪದಗಳು. ಆದರೆ ಅವೇ ನಮ್ಮ ಸಂಸ್ಕೃತಿಯ ಸಾರ. ವ್ಯಕ್ತಿಯ ವ್ಯಕ್ತಿತ್ವಕ್ಕೆ ಅಪಾರ ಗೌರವ ತಂದುಕೊಡತಕ್ಕಂತಹ ಮೂಲ ಧನ. ಇವೇ ನಮ್ಮ ಜೀವನ ಮೌಲ್ಯಗಳು ಕೂಡಾ. ಸಭ್ಯತೆ ಎನ್ನುವುದು ಸಂಸ್ಕೃತಿಯ ಪ್ರತೀಕ. ಸಂಸ್ಕಾರ ಸಂಸ್ಕೃತಿಯ ದ್ಯೋತಕ. ಸಂಸ್ಕೃತಿ ಎಂದರೆ ಅದು ನಮ್ಮ ಜೀವನ ವಿಧಾನ. ನಮ್ಮ ಮಾತು, ವರ್ತನೆ, ಆಚಾರ – ವಿಚಾರ, ಧರ್ಮ, ಉಡುಗೆ – ತೊಡುಗೆ, ಹಬ್ಬ -ಹರಿದಿನ, ಶಿಷ್ಟಾಚಾರ ಇತ್ಯಾದಿಗಳ ಒಟ್ಟು ಮೊತ್ತವೇ ಸಂಸ್ಕೃತಿ. ನಮ್ಮ ಸಾಮಾಜಿಕ ನಡವಳಿಕೆಯಲ್ಲಿ ನಮ್ಮ ಸಂಸ್ಕೃತಿ ವ್ಯಕ್ತವಾಗುತ್ತದೆ. ಸಂಸ್ಕೃತಿಯ ಅವನತಿ ಎಂದರೆ ಅದು ನಾಡಿನ ಅವನತಿ. ನಾವು ಮೈಗೂಡಿಸಿಕೊಳ್ಳುವ ಜೀವನ ಮೌಲ್ಯಗಳಲ್ಲಿ ನಮ್ಮ ಸಂಸ್ಕೃತಿಯ ಸಾರವಿದೆ. ಈ ಮೌಲ್ಯಗಳೇ ನಮ್ಮನ್ನು ಮೃಗತ್ವದಿಂದ ಮನುಷ್ಯತ್ವದೆಡೆಗೆ ಕರೆದುಕೊಂಡು ಹೋಗುವ ಅಂಶಗಳು. “ಮೌಲ್ಯಗಳಿಲ್ಲದ ಬದುಕು ಆತ್ಮವಿಲ್ಲದ ದೇಹದಂತೆ ” ಎನ್ನುವ ಸುಭಾಷಿತ ಹುಟ್ಟಿಕೊಂಡದ್ದು ಈ ನೆಲೆಯಲ್ಲಿಯೇ.
ಸಂಸ್ಕಾರ ಎನ್ನುವುದು ಆಂತರಿಕ ಬೆಳವಣಿಗೆ. ಗುರು – ಹಿರಿಯರನ್ನು ಗೌರವಿಸುವುದು ಒಂದು ಸಂಸ್ಕಾರ. ಸತ್ಯ, ಪ್ರಾಮಾಣಿಕತೆ, ಕೃತಜ್ಞತಾ ಭಾವ, ಪರೋಪಕಾರ ಗುಣ, ದೈವಭಕ್ತಿ ಇವೆಲ್ಲ ಬಾಲ್ಯದಿಂದಲೇ ಮೈಗೂಡಿಕೊಂಡು ಬರಬೇಕಾದ ಸಂಸ್ಕಾರಗಳು. “ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ ” ಎನ್ನುವುದು ಈ ಹಿನ್ನೆಲೆಯಲ್ಲಿಯೇ ಹುಟ್ಟಿಕೊಂಡದ್ದು. ಮಕ್ಕಳು ಅಭ್ಯಾಸದಿಂದ ಕಲಿಯುವುದಕ್ಕೂ ಮೊದಲು ಅನುಕರಣೆಯಿಂದ ಕಲಿಯುತ್ತಾರಾದ್ದರಿಂದ ಮನೆಯ ಹಿರಿಯರಲ್ಲಿ ಈ ಅಂಶಗಳು ರೂಢಿಯಾಗಿರಬೇಕು. ಗಾಳಿ, ಬೆಳಕು, ನೀರು ದೊರೆಯುವ ಕಡೆಗಳಲ್ಲಿ ಸಸಿಗಳು ಹುಲುಸಾಗಿ ಬೆಳೆಯುವಂತೆ ಜೀವನಾದರ್ಶಗಳನ್ನು ಪಾಲಿಸುವ ಪೋಷಕರ ಆಶ್ರಯದಲ್ಲಿ ಬೆಳೆಯುವ ಮಕ್ಕಳು ಸುಸಂಸ್ಕೃತರಾಗಿ ಬೆಳೆಯುತ್ತಾರೆ.
“ಪರೋಪಕಾರಾಯ ಪುಣ್ಯಾಯ ಪಾಪಾಯ ಪರ ಪೀಡನಂ ” ಎನ್ನುವ ಉಕ್ತಿಯಂತೆ ಪರೋಪಕಾರ ಗುಣ ನಮ್ಮ ಸಂಸ್ಕೃತಿಯ ಹೆಗ್ಗುರುತು. ಆದರೆ (use and throw ) ಉಪಯೋಗಿಸು ಎಸೆ ಎನ್ನುವ ಪೆನ್ನು ಇತ್ಯಾದಿ ವಸ್ತುಗಳ ಬಳಕೆ ಮಾಡಿ ಮಾಡಿ ಆ ಜಾಯಮಾನಕ್ಕೆ ಒಗ್ಗಿ ಹೋದ ನಾವುಗಳು ಮನುಷ್ಯರೊಂದಿಗೆ ಒಡನಾಡುವಲ್ಲಿಯೂ ಇದನ್ನೇ ಪಾಲಿಸುತ್ತಿದ್ದೇವೆ. ಅನೇಕ ಜನರ ಅನೇಕಾನೇಕ ಉಪಕಾರಗಳಿಂದ ಬದುಕು ಸಾಗಿಸುತ್ತಿರುವ ನಾವು ನಮಗೆ ಕಿಂಚಿತ್ತು ಉಪಕಾರ ಮಾಡಿದ್ದರೂ ಸರಿಯೇ ಆ ಉಪಕಾರವನ್ನು ಮರೆಯಬಾರದು. ಪ್ರತ್ಯುಪಕಾರ ಮಾಡುವ ಔದಾರ್ಯ ನಮ್ಮದಾಗಬೇಕು.
ಮೊದಲೆಲ್ಲ ಮಕ್ಕಳಿಗೆ ಜೀವನ ಪಾಠಗಳು ಶಾಲೆಗಳಲ್ಲಿ ಯಥೇಚ್ಛವಾಗಿ ಸಿಗುತ್ತಿತ್ತು. ಆದರೆ ಅಂಕವೇ ಶಿಕ್ಷಣದ ಮೂಲ ಉದ್ದೇಶ ಎನ್ನುವ ಪರಿಕಲ್ಪನೆ ಬಂದಾಗಿನಿಂದ ಪರಿಸ್ಥಿತಿ ಬದಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ಬರುವ ಹೊಸ ಹೊಸ ಕಾನೂನುಗಳು ವಿದ್ಯಾರ್ಥಿಗಳ ಸ್ವತಂತ್ರ -ಸ್ವೇಚ್ಛಾಚಾರಕ್ಕೆ ಹೆಚ್ಚಿನ ಅವಕಾಶ ಇರುವುದರಿಂದ ಶಿಕ್ಷಕ ವೃಂದಕ್ಕೆ ಕೂಡಾ ಯಾವುದನ್ನು ಹೇಗೆ ಮಕ್ಕಳಿಗೆ ಬೋಧಿಸಬೇಕು ಎನ್ನುವುದೇ ಬಹು ದೊಡ್ಡ ಸಮಸ್ಯೆಯಾಗಿದೆ. ಸಂಸ್ಕೃತಿ – ಸಂಸ್ಕಾರ ನೀಡತಕ್ಕಂತಹ ಪುಸ್ತಕಗಳನ್ನು ಓದುವ ಹವ್ಯಾಸ ಕೂಡಾ ಇಂದು ಬಹುತೇಕ ಮರೆಯಾಗಿದೆ. “ಪುಸ್ತಕಂ ಹಸ್ತ ಭೂಷಣಮ್ ” ಎನ್ನುವುದಕ್ಕೆ ಬದಲಾಗಿ ಮೊಬೈಲ್ ಹಸ್ತ ಭೂಷಣಮ್ ಎನ್ನುವ ಸ್ಥಿತಿ ಈಗಿದೆ. “ಒಳ್ಳೆಯ ಪುಸ್ತಕಗಳೆಂದರೆ ಒಂದು ಜನಾಂಗದಿಂದ ಇನ್ನೊಂದು ಜನಾಂಗಕ್ಕೆ ಸಾಗಿಸಲ್ಪಟ್ಟ ಮಹಾ ಮೇಧಾವಿಗಳ ಜೀವನ ಸರ್ವಸ್ವ “ಎನ್ನುವ ಆಂಗ್ಲ ಕವಿ ಮಿಲ್ಟನ್ ನ ಮಾತನ್ನಿಲ್ಲಿ ಸ್ಮರಿಸಬಹುದು.
ಅಧ್ಯಾತ್ಮ ನಮ್ಮ ಸಂಸ್ಕೃತಿಯ ಕೇಂದ್ರ ಬಿಂದು. ಪ್ರಾರ್ಥನೆ, ಧ್ಯಾನ, ಯೋಗ ಇತ್ಯಾದಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳು ಎಂಬುದು ಮಕ್ಕಳಿಗೆ ಎಳವೆಯಲ್ಲಿಯೇ ಮನವರಿಕೆಯಾಗಬೇಕು. ಹಾಗೆಯೇ ಉಣ್ಣುವ ಆಹಾರವನ್ನು ಗೌರವಿಸುವ ಸಂಸ್ಕಾರ ಕೂಡಾ.
ಒಟ್ಟಿನಲ್ಲಿ ಸಭ್ಯತೆ, ಸಂಸ್ಕಾರಗಳ ಮೂಲಕ ಸಂಸ್ಕೃತಿಯನ್ನು ಉಳಿಸಿ ಪೋಷಿಸುವ ನಿಟ್ಟಿನಲ್ಲಿ ನಾವು ಹೆಜ್ಜೆ ಹಾಕೋಣ, ಭಾವೀ ಜನಾಂಗವನ್ನು ಮುನ್ನಡೆಸೋಣ. ಸುಸಂಸ್ಕೃತ ಸಮಾಜದಲ್ಲಿ ಜೀವಿಸೋಣ.
ಜಯಲಕ್ಷ್ಮಿ ಕೆ.,
As usual.. wonderfully written ❤️
ಸಭ್ಯತೆ, ಸರಳತೆ ಮತ್ತು ಸಂಸ್ಕಾರಗಳ ಬಗ್ಗೆ ತುಂಬಾ ಅರ್ಥಪೂರ್ಣವಾಗಿ ಬರೆದಿದ್ದೀರಿ.❤️
ದೃಷ್ಟಾಂತಗಳ ಮೂಲಕ ಸಭ್ಯತೆ, ಸಂಸ್ಕಾರ, ಸಂಸ್ಕೃತಿ, ಸಂಸ್ಕಾರ ಮಾನವೀಯತೆಯ ಬಗ್ಗೆ ಅದ್ಭುತವಾಗಿ ಮೂಡಿಬಂದಿದೆ.
ಮಕ್ಕಳ ಮನಸ್ಸು – ದೇಶದ ಕನಸು.. ಮಕ್ಕಳನ್ನು ಹೇಗೆ ಬೆಳೆಸುತ್ತೆವೆಯೊ ಹಾಗೇ ದೇಶ ಕಟ್ಟಿಕೊಳ್ಳುತ್ತೆವೆ.
ಅದ್ಬುತ ಲೇಖನ ಮೇಡಂ
ಅಭಿನಂದನೆಗಳು