ವಾಣಿ ಯಡಹಳ್ಳಿಮಠ ಅವರ ಕವಿತೆ-ಮನದ ಮನೆ

ತುಸು ಒಂಟಿಯಾಗಿರುವೆನೆಂದು
ತುಸು ಬಿಡುವಾಗಿರುವೆನೆಂದು
ಮನದ ಮನೆಯೊಳಗೊಮ್ಮೆ ನೋಡಿದೆ
ಇರುಸುಮುರುಸಿನಿಂದಲೇ ಇಣುಕಿದೆ

ಅಲ್ಲಲ್ಲಿ ನೋವಿನ ಜಾಲ ಕಟ್ಟಿತ್ತು
ಮಾಯದೇ ಉಳಿದ ಗಾಯಗಳ ಕಲೆಯೂ ಇತ್ತು
ನನ್ನವರೇ ಇರಿದ ಕುರುಹೂ ಇತ್ತು
ತುಸು ಬಿಗುಮಾನದ ಕಸವೂ ಇತ್ತು

ನಲ್ಮೆಯ ಕೆಲ ಚಲನಚಿತ್ರಗಳು ಇದ್ದವು
ಪ್ರೀತಿಯ ಕೆಲ ಮಾತುಗಳೂ ನುಲಿಯುತಿದ್ದವು
ಸ್ನೇಹದ ಸವಿ ಕ್ಷಣಗಳು ಸರಿಯುತಿದ್ದವು
ನೆನಪುಗಳು ರಾಶಿ ರಾಶಿಯಾಗಿ ಬಿದ್ದಿದ್ದವು

ಬಾಲ್ಯದಿ ಹುಡುಗಾಟದ ನಲಿವು
ಹದಿಹರೆಯದಿ ಕನಸುಗಳ ಸುಳಿವು
ತದನಂತರ ಸಂಸಾರದ ಹೊರೆಯು
ಇಳಿವಯಸಿಲಿ ಏಕಾಂಗಿಯ ಅಳಲು

ಎಲ್ಲದೆರೆಡೆಗೆ ಒಂದೊಮ್ಮೆ ದಿಟ್ಟಿಸಿದೆ
ನನ್ನನೇ ಕಳೆದುಕೊಂಡ ಭಾವದಿ ತಲ್ಲಣಿಸಿದೆ
ನಾನಿನ್ನೂ ನಾನಾಗಿಯೇ ಉಳಿದಿರುವೆನೇನು ?
ನನ್ನನು ನಾ ಧೈರ್ಯದಿ ಎದುರಿಸುವೆನೇನು ?

ಕನ್ನಡಿಯೆಡೆಗೆ ತಳಮಳಿಸಿ ಸಾಗಿದೆ
ನನ್ನ ನಾ ಗುರುತಿಸಲು ತಡಕಾಡಿದೆ
ಸುಕ್ಕುಗಟ್ಟಿದ ಸೋತ ಭಾವದಿ
ಏಕಾಂಗಿಯಾಗಿ ನಿಂತಿದ್ದೆ
ಸಂತೈಸುವವರ ಕಾಣದೇ ಕಳವಳಿಸಿ ನಿಂತಿದ್ದೆ
ಹಾಗೆಯೇ ಹಿಂಜರಿಯುತ ಕದ ಮುಚ್ಚಿದೆ
ಮರಳಿ ಬದುಕಿನ ಜಂಜಾಟಗಳೆಡೆಗೆ ತಿರುಗಿದೆ…

Leave a Reply

Back To Top