“ಊಟ ಬಲ್ಲವನಿಗೆ ರೋಗವಿಲ್ಲ” ಲೇಖನ ಹನಿಬಿಂದು

ಇದೊಂದು ಅನುಭವ ಹಾಗೂ ಜಿಜ್ಞಾಸೆ . ನಮಗೆ ಆರೋಗ್ಯ ಸರಿಯಿಲ್ಲದಾಗ ನಾವು ವೈದ್ಯರಲ್ಲಿ ಹೋಗುತ್ತೇವೆ. ಹಾಗೆ ವೈದ್ಯರಲ್ಲಿ ಹೋದಾಗ ವೈದ್ಯರು ನಮಗೆ ಔಷಧಿಯನ್ನು ಮಾತ್ರೆಗಳನ್ನು ಕೊಡುತ್ತಾರೆ.  ಹಾಗೆ ಕೊಟ್ಟಾಗ ತಪ್ಪದೇ ಒಂದಿಷ್ಟು ಸಮಯ ನಿರಂತರವಾಗಿ ಸೇವಿಸಬೇಕೆಂದು ಕೂಡಾ ಹೇಳುತ್ತಾರೆ, ಜೊತೆಗೆ ಸಾಕಷ್ಟು ನೀರು ಕುಡಿಯಿರಿ, ರೆಸ್ಟ್ ಮಾಡಿ, ಲೈಟ್ ಆಹಾರ ತಿನ್ನಿ, ಊಟದ ಬಳಿಕ ಒಂದು 15 -20 ನಿಮಿಷ ಆದ ಮೇಲೆ, ಅಥವಾ ಊಟದ ಅರ್ಧ ಗಂಟೆ ಮೊದಲು ಮಾತ್ರೆ, ಮದ್ದು ತಿನ್ನಲು ಹೇಳುತ್ತಾರೆ. ಹಾಗೆ ಅವರು ಹೇಳಿದಂತೆ ಕೇಳುತ್ತಾ, ನಾವು ಸಮಯಕ್ಕೆ ಸರಿಯಾಗಿ ಅವರು ಹೇಳಿದಷ್ಟು ದಿನ ಆ ಔಷಧವನ್ನು ಸೇವಿಸಿದ ಬಳಿಕ ನಮ್ಮ ಆರೋಗ್ಯ ಸುಧಾರಿಸುತ್ತದೆ ಅಲ್ಲವೇ? ಅದನ್ನು ತಪ್ಪಿದರೆ? ಮತ್ತೆ ಎರಡೇ ದಿನಕ್ಕೆ ರೋಗ ಉಲ್ಬಣಿಸುವ ಕ್ರಿಯೆ ನಡೆಯುತ್ತದೆ. ಹಾಗಾಗಿ ಸರಿಯಾದ ವಸ್ತುವನ್ನು, ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯಕ್ಕೆ ಪಡೆದುಕೊಂಡರೆ ಮಾತ್ರ ಆರೋಗ್ಯ ಸುಧಾರಿಸಲು ಸಾಧ್ಯ.
     ನಮ್ಮ ಆಹಾರವೂ ಕೂಡಾ ನಮ್ಮ ದೇಹಕ್ಕೆ ಔಷಧೀಯ ಹಾಗೆ ಕೆಲಸ ಮಾಡುತ್ತದೆ ಅಲ್ಲವೇ? ನಿರಂತರ ಬೀಡಿ ಕಟ್ಟುವ ಮಹಿಳೆಯರಿಗೆ ತಂಬಾಕಿನಿಂದ ಬರುವ ಶ್ವಾಸಕೋಶದ ತೊಂದರೆಗಳು, ನಿತ್ಯ ನಿಲ್ಲುವ ಕಾರ್ಯ ಮಾಡುವವರಿಗೆ ಕಾಲು ನೋವು, ಕಾಲು ಗಂಟಿನ ಮೂಳೆ ಸವೆತ, ನಿತ್ಯ ಬಸ್ಸು, ಬೈಕಿನಲ್ಲಿ ತಿರುಗುವವರೆಗೆ ಬೆನ್ನು ನೋವು, ನಿತ್ಯ ಕುಳಿತುಕೊಳ್ಳುವವರಿಗೆ ಹೊಟ್ಟೆ ದಪ್ಪ ಇತ್ಯಾದಿ ಖಾಯಿಲೆ ಕಾಡಿಸುತ್ತದೆ ಎಂದು ನಮಗೆ ತಿಳಿದಿದೆ. ಹಾಗಿರುವಾಗ ನಾವು ನಿತ್ಯ ಸೇವಿಸುವ ಆಹಾರವೂ ಕೂಡ ಔಷಧೀಯ ಹಾಗೆಯೇ ತಿಂದರೆ ಒಳ್ಳೆಯದಲ್ಲವೇ? ಹಾಗಿದ್ದರೆ ಮಾತ್ರ ನಮ್ಮ ದೇಹವು ಉತ್ತಮ ಸ್ಥಿತಿಯಲ್ಲಿದ್ದು ಮುಂದೆ ನಮಗೆ ಯಾವುದೇ ತೊಂದರೆಗಳು ಬರದೇ ಇರಬಹುದು.


    ಪಾರ್ಟಿ ಎನ್ನುವ ನೆಪದಲ್ಲಿ ಸಿಕ್ಕಿದ್ದೆಲ್ಲವನ್ನು ತಿಂದರೆ, ವಿಪರೀತ ಕುಡಿತ, ಹೊಟ್ಟೆಗೆ ಭಾರ ವಾಗುವಷ್ಟು ಆಹಾರ ಸೇವನೆ, ಕಡಿಮೆ ನೀರು ಕುಡಿಯುವುದು, ಪ್ರತಿನಿತ್ಯ ಹೊರಗಿನ ಆಹಾರ, ಅತಿ ಹೆಚ್ಚು ಕರಿದ ತಿಂಡಿಗಳ ಸೇವನೆ, ಪ್ರತಿನಿತ್ಯ ಜಂಕ್ ಫುಡ್ಗಳ ಬಳಕೆ – ಇವೆಲ್ಲವೂ ಕೂಡ ನಮ್ಮ ಆರೋಗ್ಯ ಹದಗೆಡಲು ದಿನೇ ದಿನೇ ಕಾರಣವಾಗುತ್ತವೆ. ಹೋಟೆಲ್ ಗಳಲ್ಲಿ ಮತ್ತು ಸಣ್ಣ ಸಣ್ಣ ಕ್ಯಾಂಟೀನ್ ಗಳಲ್ಲಿ ಬಳಸುವ ಎಣ್ಣೆ ಹೇಗಿದೆ ಎಂದು ನಮಗೆ ತಿಳಿದಿರುವುದಿಲ್ಲ. ಒಮ್ಮೆ ಕರೆದ ಎಣ್ಣೆಯಲ್ಲೇ ಪದೇ ಪದೇ ತಿಂಡಿಗಳನ್ನು ಕರೆದು ಕೊಡುವುದರಿಂದ ಅಂತಹ ತಿಂಡಿ ನಮಗೆ ರೋಗ ಕಾಡುವುದಂತೂ ಸತ್ಯವೇ ಸರಿ. ನಮ್ಮ ದೇಹದ ಅಂಗಾಂಗಗಳು ಮಶೀನುಗಳಂತೆ ಕೆಲಸ ಮಾಡುತ್ತವೆ ಆದರೂ ಅವುಗಳಿಗೆ ಅವುಗಳದ್ದೇ ಆದಂತಹ ಒಂದು ಕಟ್ಟಳೆಗಳಿವೆ. ಅವು ಯಾವ ಯಾವ ಆಹಾರಗಳನ್ನು ಜೀರ್ಣಿಸಿಕೊಳ್ಳಬಹುದು ಮತ್ತು ಯಾವ ಯಾವ ಆಹಾರಗಳನ್ನು ಜೀರ್ಣಿಸಿಕೊಳ್ಳಲಾಗದು ಎಂಬುದನ್ನು ಅರಿತಿರುತ್ತವೆ. ಮರಗಳಲ್ಲಿ ರಕ್ತ ಸಂಚಾರ ವಾಗುವಾಗ ಕೂಡ ಕರಗದ ಆಹಾರದ ಎಣ್ಣೆಯ ಅಂಶವು ನರಗಳಲ್ಲಿ ಬ್ಲಾಕೆಜ್ ಉಂಟು ಮಾಡುವ ಸಂಭವವಿರುತ್ತದೆ. ಇದರಿಂದಾಗಿ ಇಂದು ಅನೇಕ ಜನರು ಕಂಡ ಕಂಡಲ್ಲಿ ಹೃದಯ ಸ್ತಂಭನವಾಗಿ ಪ್ರಾಣ ಬಿಡುತ್ತಾರೆ. ನಮ್ಮ ಆಹಾರವೆಲ್ಲವೂ ಕೊನೆಯ ಕ್ಷಣದಲ್ಲಿ ರಕ್ತದ ರೂಪದಲ್ಲಿ ಬದಲಾವಣೆಯಾಗುತ್ತದೆ. ಅದರಿಂದ ನಮ್ಮ ದೇಹಕ್ಕೆ ಬೇಕಾದ ಶಕ್ತಿಯು ಸಿಗುತ್ತದೆ. ನಾವು ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ಜಂಕ್ ಫುಡ್ ಗಳನ್ನು ತಿನ್ನುವುದರಿಂದ ಅದರಿಂದ ಯಾವುದೇ ವಿಟಮಿನ್ ಗಳು ಮತ್ತು ಪೋಷಕಾಂಶಗಳು ನಮಗೆ ಸಿಗದೇ ದೇಹವು ತನ್ನ ಶಕ್ತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಆಗ ಅಂಗಾಂಗಗಳು ತಮ್ಮಷ್ಟಕ್ಕೆ ತಾವೇ ತಮ್ಮ ಕೆಲಸದ ಶಕ್ತಿಯನ್ನು ಕಳೆದುಕೊಳ್ಳುತ್ತವೆ.
             ಆದಕಾರಣ ನಮಗೆ ನಾವೇ ತಿಳಿದುಕೊಳ್ಳಬಹುದು ಏನೆಂದರೆ ನಮ್ಮೆಲ್ಲಾ ಹಲವಾರು ದೈಹಿಕ ತೊಂದರೆಗಳಿಗೆ ಕಾರಣ ನಮ್ಮ ಆಹಾರ ಪದ್ಧತಿ. ನಮ್ಮ ಆಹಾರ ಪದ್ಧತಿಯನ್ನು ನಾವು ಸರಿಪಡಿಸಿಕೊಂಡರೆ ಅದೆಷ್ಟೋ  ಕಾಯಿಲೆಗಳಿಂದ ಮುಕ್ತರಾಗಬಹುದು. ಇಂದಿನ ದಿನಗಳಲ್ಲಿ ಹಲವಾರು ಜನರು ಮನೆಯ ಆಹಾರವನ್ನೇ ಸೇವಿಸುತ್ತಾರೆ ಮತ್ತು ಉತ್ತಮವಾದ ಆಹಾರ ಪದ್ಧತಿಯನ್ನು ಬಳಸಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಅಂತೂ ಇದು ಹೆಚ್ಚು ಇತ್ತು. ಆದ್ದರಿಂದಲೇ ಆಗಿನ ಜನರ ಆರೋಗ್ಯ ಸರಿಯಾಗಿದ್ದು ದೈಹಿಕವಾಗಿ ಕೂಡ ಗಟ್ಟಿಮುಟ್ಟಾಗಿದ್ದರು. ಆದರೆ ನಿಮ್ಮದು ಯಾರೆಲ್ಲ ತಮ್ಮ ನಾಲಿಗೆಯ ಚಪ್ಪಲಕ್ಕೆ ಬಿದ್ದು ಹೊರಗಿನ ರುಚಿರುಚಿಯಾದ ಆಹಾರಗಳನ್ನು ಇಷ್ಟಪಟ್ಟು ಅವುಗಳನ್ನೇ ಹೆಚ್ಚಾಗಿ ತಿನ್ನುತ್ತಾರೋ ಅಂತಹ ಜನರ ಆರೋಗ್ಯವಂತು ಪೂರ್ತಿಯಾಗಿ ಹದಗೆಡುವುದೇ ಅಲ್ಲದೆ, ಹಲವಾರು ಜನರಿಗೆ ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಾದ ಅಂತಹ ಸಮಸ್ಯೆಗಳು ಉಂಟಾಗಿವೆ. ಕೆಲವೊಂದು ಕಾಯಿಲೆಗಳನ್ನು ಹೊರತುಪಡಿಸಿದರೆ ಹೆಚ್ಚಿನ ಖಾಯಿಲೆಗಳು ಜನರಿಗೆ ಅದರಲ್ಲೂ ಉದರದ ಕಾಯಿಲೆಗಳು ಅವರ ಆಹಾರ ಕ್ರಮದಿಂದಲೇ ಬರುತ್ತವೆ ಎಂದು ನನಗನಿಸುತ್ತದೆ. ವೈದ್ಯರು ಕೂಡ ಪ್ರತಿನಿತ್ಯ ದೇಹದ ಆಹಾರದ ಬಗ್ಗೆ, ಕುಡಿಯುವ ನೀರಿನ ಬಗ್ಗೆ ಮತ್ತು ನಾವು ಉಸಿರಾಡುವ ಗಾಳಿಯ ಬಗ್ಗೆ ಅವುಗಳೆಲ್ಲವೂ ಶುದ್ಧವಾಗಿರಬೇಕು ಎಂದು ಪ್ರತಿನಿತ್ಯ ಹೇಳುತ್ತಿರುತ್ತಾರೆ. ಹಾಗೆ ನಾವು ಆಹಾರವನ್ನು ಸೇವಿಸುವ ಸಮಯ ಕೂಡ ಸರಿಯಾಗಿರಬೇಕು. ನಾಲ್ಕು ಗಂಟೆಗಳಷ್ಟು ಸಮಯ ಒಮ್ಮೆ ಆಹಾರವನ್ನು ಸೇವಿಸಿದ ಮೇಲೆ ಬಿಡಬೇಕು. ಅದರ ಮಧ್ಯ ಮಧ್ಯದಲ್ಲಿ ಮತ್ತೆ ಚಾಕಲೇಟು,  ಕಾಫಿ , ಚಹಾ, ಜ್ಯೂಸು ಇವೆಲ್ಲವೂ ಕೂಡ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲವೆಂದು ನನಗೆ ಅನ್ನಿಸುತ್ತದೆ.
  ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ, ಊಟ ಬಲ್ಲವನಿಗೆ ರೋಗವಿಲ್ಲ, ದಿನಕ್ಕೆ ಎರಡು ಹೊತ್ತು ಉಂಡವ ಯೋಗಿ, ಮೂರು ಹೊತ್ತು ಉಂಡವ ರೋಗಿ – ಮೊದಲಾದ ಗಾದೆಗಳನ್ನು ಹಿರಿಯರು ಆಹಾರದ ಬಗ್ಗೆ ಹೇಳುತ್ತಾ ಆಹಾರ ಸೇವನೆ ಎಷ್ಟು ಮುಖ್ಯ ಎಂಬುದನ್ನು ದೃಢಪಡಿಸಿಕೊಟ್ಟಿದ್ದಾರೆ. ನಾವು ತಿನ್ನುವ ಆಹಾರ ಹಿತಮಿತವಾಗಿರಬೇಕು ಮತ್ತು ಹೊಟ್ಟೆಯಲ್ಲಿ ಒಂದಿಷ್ಟು ಜಾಗವನ್ನು ಉಳಿಸಿಕೊಂಡು ತಿನ್ನಬೇಕು. ಅದಕ್ಕಾಗಿ ಹಿರಿಯರು ಹಂಚಿ ತಿಂದರೆ ಹಸಿವಿಲ್ಲ ಎಂದಿದ್ದಾರೆ. ಹಿತ ಮಿತವಾಗಿ ಸರಿಯಾದ ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸಗಳನ್ನು ಬೆಳೆಸಿಕೊಳ್ಳೋಣ. ಆ ಮೂಲಕ ನಮ್ಮ ಆರೋಗ್ಯವನ್ನು ನಾವೇ ಸರಿಪಡಿಸಿಕೊಳ್ಳಲು ಪ್ರಯತ್ನಿಸೋಣ. ನಮ್ಮ ಅನಾರೋಗ್ಯದಿಂದ ನಮ್ಮನ್ನು ಅವಲಂಬಿಸುವವರಿಗು ತೊಂದರೆಯಾಗುತ್ತದೆ ಎಂಬುದನ್ನು ಮನಗಂಡು ನಮ್ಮ ಆರೋಗ್ಯದ ಸಮಸ್ಯೆಯಿಂದಾಗಿ ನಮ್ಮನ್ನು ಅವಲಂಬಿಸಿದವರಿಗೆ ತೊಂದರೆ ಕೊಡದೆ ಇರೋಣ. ಆರೋಗ್ಯವೇ ಭಾಗ್ಯವಲ್ಲವೇ? ಅದು ಉತ್ತಮವಾಗಿರಲಿ, ಹಾಗೆಯೇ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ. ಉತ್ತಮ ದೇಹದಿಂದ ಉತ್ತಮ ಮನಸ್ಸನ್ನು ಕೂಡ ಕಾಯ್ದುಕೊಳ್ಳೋಣ. ನೀವೇನಂತೀರಿ?

———————————————-

One thought on ““ಊಟ ಬಲ್ಲವನಿಗೆ ರೋಗವಿಲ್ಲ” ಲೇಖನ ಹನಿಬಿಂದು

Leave a Reply

Back To Top