ಅಪ್ಪನ ದಿನದ ವಿಶೇಷ
ಪ್ರೇಮಾ ಟಿ ಎಂ ಆರ್
“ಅಪ್ಪಯ್ಯ”
ಯಾವ ಬೆಲ್ಲದ ಸಿಹಿಯಿಲದ್ದದ್ದಿ
ಅರೆದರೋ ಈ ಅಪ್ಪನೆಂಬ
ಭಾವವನು
ಯಾವ ಜೇನಿನ ಸವಿಯಲೂಡಿ
ಎರೆದರೋ ಈ ಅಪ್ಪನೆಂಬ
ಬಂಧವನು ಎದೆಗೆ?
ಬರೋಬ್ಬರಿ ಮೂವತ್ತು ವರ್ಷಗಳು,ಅಮ್ಮ ಹೋದಮೇಲೆ ತಾನೇ ಅಮ್ಮನಾಗಿ ವಾತ್ಸಲ್ಯವೆರೆದ ಅಪ್ಪ. ನನ್ನ ಮಗಳು ಬರ್ತಾಳೆ ಎಂದು ಊರಿಗೆಲ್ಲ ಸಾರಿ ಬಂದು ದಾರಿಯಲ್ಲೇ ನಿಂತು ಮೈಲುದೂರದವರೆಗೆ ದೃಷ್ಟಿಚೆಲ್ಲಿ ಬರವ ಕಾಯುವ ಅಪ್ಪ ಇನ್ನಿಲ್ಲ. ಎದೆಯ ಗಾಯದ ಆಳ ಅಳೆಯಬಲ್ಲಿರಾ ನೀವು? ಈ ಅಗಲಿಕೆಯೆಂಬ ಹುಣ್ಣಿಗೆ ಮಲಾಮು ಹುಟ್ಟಿಕೊಂಡಿಲ್ವೇ. ವಾರದ ಹಿಂದೆ ಮನೆಗೆ ಬಂದ ಅಪ್ಪಗೆ ಆಸ್ಪತ್ರೆಗೆ ಹೋಗಿದ್ಯೇನೋ ಟೆಸ್ಟ ಮಾಡಿಸ್ಕೊಂಡ್ಯಾ ಅಂದ್ರೆ ಇನ್ನು ಹತ್ತು ವರ್ಷ ನನ್ಗೆ ಏನೂ ಆಗೋದಿಲ್ಲ ನೀ ಹೆದ್ರಬೇಡ ಅಂದವನ ಜೀವ ರಾತ್ರಿ ಮಲಗಿ ಬೆಳಗ್ಗೆ ಏಳುವದರೊಳಗೆ ಕಣಕ್ ಮಾಯ ಅಂದ್ರೆ ಹೇಗೆ ನಂಬುವದು. ಅಪ್ಪಯ್ಯ ಎದೆಯಲ್ಲಿ ಅಗೆದಿಟ್ಟು ಹೋದ ನೋವಿನ ಹೊಂಡ ಹೇಗೆ ತುಂಬುವದು?
ವಾರದ ಹಿಂದೆ ಗೇಟಿನಾಚೆಯಿಂದಲೇ ಮಗಳೆ ಪ್ರೇಮಾ ಎಂದು ಕರೆಯುತ್ತಲೇ ಬಂದವನು, ನಕ್ಕು ನಗಿಸಿ ಹಳೆ ನೆನಪುಗಳ ಹರವಿ ಅಳಿಸಿ ಹಿತವಾಗಿ ಉಂಡು ಸುಖವಾಗಿರು ಮಗಳೆ ಎಂದು ತಲೆಸವರಿ, ರಸ್ತೆಯ ತಿರುವಿನಲ್ಲಿ ಹಿಂತಿರುಗಿ ಕೈಬೀಸಿ ನಡೆದವನು ಇನ್ನಿಲ್ಲವೆಂದರೆ ನಂಬಲಹುದೇ?. ಎಲ್ಲ ಹೆಣ್ಮಕ್ಕಳಿಗೂ ಅವರವರ ಅಪ್ಪ ಯಾವ ಹೀರೋಗೂ ಕಡ್ಮೆ ಇಲ್ಲವಾದರೂ ನಮ್ಮಪ್ಪಯ್ಯನ ರೀತಿಯೇ ಬೇರೆ. ಐದೇ ವರ್ಷಕ್ಕೆ ಕುಚ್ಚಿನಾಡಿನ ಬಂಧುಗಳ ಮನೆಯ ಕೈಗೆಲಸಕ್ಕೆ ನಿಂತ ಅಪ್ಪ ಏಳೇ ವರ್ಷಕ್ಕೆ ದನ ಕಾಯಲೆಂದು ಕಾಡು ಹೊಕ್ಕಿದ್ದನಂತೆ . ಈಗ ಇಹದ ಬಂಧ ಕಳಚಿಕೊಳ್ಳುವಾಗ ಅವನೇ ಹೇಳುವಂತೆ ಅವನಿಗೆ ತೊಂಬತ್ತನಾಲ್ಕು. ನಾವೇ ಎಣಿಸಿದರೂ ತೊಂಬತ್ತಕ್ಕೆ ಕಡಿಮೆಯಲ್ಲ. ಸಾವು ಮುಟ್ಟುವ ವಾರ ಮೊದಲು ಬಂದ ಅಪ್ಪನಲ್ಲಿ ಅದೇ ಬಾಲ್ಯದ ಹರೆಯದ ಲವಲವಿಕೆ. ಬಂದಾಗೆಲ್ಲ ಕಾಲ್ನಡಿಗೆಯಲ್ಲಿಯೇ ಚಾಳೀಸ ಇಲ್ಲದೆಯೇ ಇಡೀ ಕಾರವಾರ ಪೇಟೆ ತಿರುಗಿ ಬರುವ ಅಪ್ಪ ನಾಲ್ಕು ಹೆಜ್ಜೆ ನಡೆದರೆ ನಾಲ್ಕು ಹೆಜ್ಜೆ ಓಡುತ್ತಲೇ ನಡೆಯುತ್ತಿದ್ದ. ಮೊನ್ನೆಯವರೆಗೂ ತೋಟದ ಕೆಲಸ ಕೊಟ್ಟಿಗೆ ಕೆಲಸ ಎಲ್ಲವೂ ಅವನಿಗೆ ನೀರು ಕುಡಿದಷ್ಟು ಸಲೀಸು. ಹಳೆಯದು ಮಾರಿ ಹೊಸದಾಗಿ ಕೊಂಡ ಕೆನೆಟಿಕ್ ಕೈಗೆ ಬಂದರೆ ಕುಚ್ಚಿನಾಡದ ಮೂಲೆಮೂಲೆ ಸುತ್ತಿ ಬರುವ ಛಲಗಾರ. ಮೊನ್ನೆ ಬಂದಾಗ ಕುಚ್ಚಿನಾಡಿನ ತೂಗು ಸೇತುವೆಯ ಮೇಲೆ ಗಾಡಿ ಓಡಿಸಿದ ಸಾಹಸಗಾಥೆ ಹೇಳಿಕೊಂಡು ಖುಷಿಪಟ್ಟಿದ್ದ.
ಒಂದು ಕಾಲಕ್ಕೆ ಹಾಲು ಎನ್ನಲು ಹಾಳು
ಎನ್ನುವ, ಹೇಳು ಎನ್ನಲು ಹೇಲು ಎನ್ನುವ ಹಾಲಕ್ಕಿ ಜನರನ್ನ, ಕನ್ನಡವೇ ಬರದ ಕುಂಬ್ರಿ ಮರಾಠಾ ಜನರನ್ನು ಸೇರಿಸಿಕೊಂಡು ಅವರಿಗೆ ಯಕ್ಷಗಾನ ತರಬೇತಿ ನೀಡಿ ಊರಿಗೆ ದೂರವಾದ ದಟ್ಟಾರಣ್ಯದ ನಡುವಿನ ಕುಗ್ರಾಮದಲ್ಲಿ ಬಯಲಾಟಗಳನ್ನು ಆಡಿಸುತ್ತಿದ್ದ ಅಪ್ಪ ಇಂದಿಗೂ ಯಕ್ಷಗಾನದ ಹಾಡು ಹಾಡಿಕೊಂಡು ಲಹರಿಯಲ್ಲಿ ತೇಲಿ ಹೋಗುವನು. ಊರಲ್ಲಿ ಅಂಗಡಿ ಇಟ್ಟುಕೊಂಡು ಬಿಡುವಿನ ವೇಳೆ ವ್ಯಾಪಾರ ವ್ಯವಹಾರ ಮಾಡುವ ಅಪ್ಪ ಲೆಕ್ಕಚಾರದಲ್ಲಿ ನೆನಪಿನ ಶಕ್ತಿಯಲ್ಲಿ ಬಿಲ್ ಕುಲ್ ಪಕ್ಕಾ. ಅಂದು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಊರಲ್ಲಿ ಉತ್ತಿಬಿತ್ತಿ ಬೆಳೆದು ಖಂಡುಗಖಂಡುಗ ಅಕ್ಕಿ ತಲೆಮೇಲೆ ಹೊತ್ತೇ ಸಾಗಿಸಿ ಮಕ್ಕಳ ಹೊಟ್ಟೆ ತುಂಬಿಸಿದವನು. ಅದೇ ಬೆವರ ಭತ್ತ ಅಕ್ಕಿ ಮಾರಿ ಬೇಡಿಕೆಗಳನ್ನೆಲ್ಲ ಪೂರೈಸಿ ವಿದ್ಯಾವಂತರನ್ನಾಗಿ ಮಾಡಿದ ಅಪ್ಪ. ಹೊತ್ತು ತರುವ ಅದೇ ಹೊರೆಯಲ್ಲಿ ಒಂದಷ್ಟು ನೆಲ್ಲಿಕಾಯಿ ಹರಿದು ತುಂಬಿಕೊಂಡು, ಒಂದಷ್ಟು ಕಬ್ಬಿನಚೂರು ತುರಕಿಕೊಂಡು, ಒಂದಷ್ಟು ಆನೆಬಾಳೆಕಾಯಿ ಗೆಣಸು ಕಟ್ಟಿಕೊಂಡು ನನ್ನ ಮಗಳಿಗೆ ಎಂದು ಕಂಡವರಿಗೆ ಹೆಮ್ಮೆಯಿಂದ ಹೇಳಿ ಒಜ್ಜೆ ಹೆಚ್ಚಿದಷ್ಟೂ ಮಗಳ ನೆನಪಲ್ಲಿ ಹಗುರಾದವನು. ಕೆಳಗುನೂರಿಗೆ ಬಂದಾಗೆಲ್ಲ ಶಾಲೆಯ ಏರಿನಮೇಲೆ ಐಸ್ ಕೇಂಡಿ ಮಾರುವವನ ಪಕ್ಕ ನಿಂತು ನನ್ನ ಶಾಲೆ ಬಿಡುವುದನ್ನೇ ಕಾದು ನಿಂತು ಕೈಬೀಸುವವನು. ಎರಡು ಕೈಯ್ಯಲ್ಲಿ ಎರಡು ಐಸ್ಕ್ರೀಮ್ ಕೊಡಿಸುವಾಗ ಅವನ ಕಣ್ಣಿನ ಚಮಕು ಈಗಲು ನೆನಪಿದೆ.
ರಾತ್ರಿ ಶಾಲೆಯಲ್ಲಿ ಓದುಬರಹ ಕಲಿತ ಅಪ್ಪ ನಮ್ಮೆದೆಗೆ ಅಕ್ಷರವನ್ನು ಕಡ್ಡಾಯವಾಗಿಸಿದವನು. ತೊಂಬತ್ತು ಮೀರಿದ ಅಪ್ಪ ಕನ್ನಡಕವಿಲ್ಲದೆಯೇ ಇಡೀ ಮುಂಜಾವು ಪತ್ರಿಕೆ ಓದುತ್ತಿದ್ದ ಅಂದ್ರೆ ನೀವು ನಂಬಲೇಬೇಕು. ಹಬ್ಬಕ್ಕೆ ಬಂದ್ಹೋಗು ಮಗಾ ಎಂದು ಕರೆಮಾಡುವ ಅಪ್ಪ ಎದ್ದು ನಡೆದೇ ಬಿಟ್ಟ. ಎಷ್ಟೊಂದು ಸುಂದರ ಸಾವು ನೆರೆದವರು ನುಡಿಯುತ್ತಿದ್ದರೆ ನನ್ನೆದೆ ಅಳುತಿತ್ತು. ನನ್ನ ಅನಾಥೆ ಮಾಡಿ ಹೋದೆ ನೀನು….. ಅಪ್ಪ ನನ್ನೆದೆಯಲ್ಲಿ ಹೆಮ್ಮೆಯೇ ?ಮನೆಮಾಡಿದ್ದ ನನ್ನೆದೆಯೊಳಗಿನ ಅಹಂಕಾರವೇ? ಶಿಖರದೆತ್ತರದ ಆತ್ಮವಿಶ್ವಾಸವೇ? ಅಪ್ಪ ಇಲ್ಲವೆಂಬುದು ನೆನಪಿಗೆ ಬಂದಾಗಲೆಲ್ಲ ನನ್ನೊಳಗಿನ ಸೊಕ್ಕು ಅಂಗುಲ ಅಂಗುಲ ಕರಗಿ ಕಾಲಡಿಗೆ ಹರಿಯುತ್ತಿದೆ. ಅಪ್ಪಯ್ಯನ್ನ ಬರೆಯುವಷ್ಟು ಅಕ್ಷರಗಳೇ ಇಲ್ಲ ಎದೆಯಲ್ಲಿ. ಅವನನ್ನು ಬರೆದು ಮುಗಿಸಿಬಿಡೋಕೆ ಸಾಧ್ಯವೇ? ಅಪ್ಪಯ್ಯನ ಮತ್ತಷ್ಟು ಹುಡುಕಿಕೊಂಡು ಹಿಂತಿರುಗಿ ನಡೆಯುತ್ತಲೇ ಇದ್ದೇನೆ. ಹೆಣ್ಣು ಕೊಟ್ಟ ಮಾವನನ್ನು ಹೆತ್ತ ತಂದೆತಾಯಿಗಿಂತ ಒಂದು ಗುಂಜಿಯೂ ಕಡಿಮೆಯೆಂದುಕೊಳ್ಳದ ಅಳಿಯ ತಲೆಮೇಲೆ ಕೈಹೊತ್ತು ಕೂತು ನೆನಪ ಬಗೆಯುತ್ತಾರೆ. ಮೊಮ್ಮಗ ಮ್ಲಾನವನ್ನು ಮೌನವನ್ನು ಹೊತ್ತು ಕಂಗೆಟ್ಟಿದ್ದಾನೆ. ಅಪ್ಪಯ್ಯ ಮತ್ತೆ ಬಂದಾನೇ? ತಾನು ಸೃಷ್ಟಿಸಿ ಹೋದ ಶೂನ್ಯವನ್ನು ತುಂಬಿಯಾನೆ? ಎಷ್ಟು ಬೇಗ ದಿನಗಳು ವಾರಗಳಾಗುತ್ತವೆ, ತಿಂಗಳಾಗುತ್ತವೆ, ಮತ್ತೆ ವರ್ಷಗಳು. ಅಪ್ಪಯ್ಯ ದೂರದೂರ ಸಾಗುತ್ತಾನೆ ಅಂದುಕೊಂಡಂತೆಲ್ಲ ಎದೆ ಹಿಂಡುತ್ತದೆ. ವಿಲಗುಡುತ್ತದೆ. ಅಪ್ಪಯ್ಯ ಕೊರಳು ಸವರಿ ಲಲ್ಲೆಗರದು ಸಾಕಿದ , ಅಪ್ಪಯ್ಯನ ಆರೈಕೆಯಲ್ಲಿ ಮಿರಮಿರ ಮಿಂಚುವ ಪುಟ್ಟ ಹೆಂಗರ ಅಪ್ಪಯ್ಯನ ಕೈನ ರೊಟ್ಟಿ ನೆನಪಿಸಿಕೊಂಡು ಬಿಡದೇ ಕೂಗುತ್ತದೆ ಅಂಬಾ…… ಎಂದು. ಇನ್ನು ಅಪ್ಪಯ್ಯ ಇಲ್ಲವೆಂದು ಹೇಗೆ ನಂಬಿಸಲಿ ಅದನ್ನ.
ಹೆಜ್ಜೆಹೆಜ್ಜೆಗೆ ಬೆನ್ನಿಗೆ ಬಿದ್ದು ಸಂತೈಸುವ ಸಂಗಾತಿಯ ಕಣ್ತಪ್ಪಿಸಿ ಅಪ್ಪನಿಗಾಗಿ ಒಂದಷ್ಟು ಅಳಬೇಕು. ಬೆಳಗಿನ ಐದೂವರೆಗೆ ಎದ್ದು ಕಡಲೆಡೆಗೆ ಮುಖ ಮಾಡುತ್ತೇನೆ. ಉಪ್ಪಿನಾಗರವೇ ಆದ ಕಡಲಿಗೆ ನನ್ನದೊಂದಿಷ್ಟು ಹನಿ ಭಾರವಲ್ಲ. ಅತ್ತರೆ ಹಗುರಾಗುತ್ತದೆಯೇ ಎದೆ? ಯಾರು ಬರೆದರೋ ಸುಳ್ಳುಸುಳ್ಳೇ. ನಿನ್ನ ನೆನಪಾಯ್ತು ಮಗಳೆ, ಬಂದ್ಬಿಟ್ಟೆ , ಎನ್ನುತ್ತ ಒಂದಷ್ಟು ಬಾಳೆಹಣ್ಣು ಶೇಂಗಾಬೀಜ ಚೀಲಕ್ಕೆ ಹಾಕಿಕೊಂಡು ಬರುವ ಅಪ್ಪಯ್ಯ ಸಾಗರದ ವೈಶಾಲ್ಯವನ್ನೂ ಮರೆಮಾಚಿ ಕಣ್ಣೆದುರು ಚಾಚಿಕೊಂಡರೆ ಎದ್ದು ಕಡಲಿಗೆ ಬೆನ್ನಾಗುತ್ತೇನೆ. ಅರೇ ಅಪ್ಪಯ್ಯ ಬೆನ್ನು ಸವರುತ್ತ ಹಿಂದ್ಹಿಂದೆ ಬರುತ್ತಿದ್ದಾನೆ. ಗಕ್ಕನೆ ತಿರುಗಿದರೆ ಕಡಲ ಗಾಳಿ. ನೀನೆಲ್ಲೋ ನಾನು ಅಲ್ಲೇ ಮಗಾ ಎನ್ನುತ್ತ ಅಪ್ಪಯ್ಯ ಕಡಲಗಾಳಿಯೊಳಗೆ ಸೇರಿಹೋದನೇ?
ಇದು ನಿನಗೆ ಕೊನೆಯ ನಮನವಲ್ಲ ಅಪ್ಪಯ್ಯ , ನಿತ್ಯ ಗಿರಿ ಗಗನ ಗುಡಿ ಗೋಪುರ ಶಿಖರಗಳು ದನಕರು ಹಸಿರು ಕಂಡಾಗೆಲ್ಲ ನಿನಗೆ ಸಲಾಮು ಸಲ್ಲುತ್ತಲೇ ಇರುತ್ತದೆ.
——————————–
ಪ್ರೇಮಾ ಟಿ ಎಮ್ ಆರ್
ಕಂಬನಿ ಮಿಡಿಯುವ ಭಾವ ಬಂಧನದ ಬರಹ.