ಅಪ್ಪ ಎಂಬ ಆಪ್ತರಕ್ಷಕ-ವೀಣಾ ಹೇಮಂತ್ ಗೌಡ ಪಾಟೀಲ್ 

ಅದೊಂದು ಮಧ್ಯಮ ವರ್ಗದ, ತಂದೆ,ತಾಯಿ, ಎರಡು ಗಂಡು ಒಂದು ಹೆಣ್ಣು ಮಗು ಇರುವ ಪುಟ್ಟ ಸಂಸಾರ. ಇಬ್ಬರು ಗಂಡು ಮಕ್ಕಳಿಗಿಂತ ತಂದೆಗೆ ಹೆಣ್ಣುಮಗಳ ಮೇಲೆ ಅಪಾರ ಪ್ರೀತಿ. ಹೈಸ್ಕೂಲಿಗೆ ಬಂದ ಗಂಡು ಮಕ್ಕಳು ಪರಸ್ಪರ ಜಗಳ ಮಾಡುತ್ತಿರುವಾಗ ತಂದೆ ಮಕ್ಕಳನ್ನು ಸಮಾಧಾನಪಡಿಸಿದರು. ಇಬ್ಬರೂ ಮಕ್ಕಳು ಅವನು ಮುದ್ದಿನ ಮಗ ಅದಕ್ಕೆ ಅವನಿಗೆ ನೀವು ಏನೂ ಹೇಳುವುದಿಲ್ಲ ಎಂದು ಪರಸ್ಪರ ದೋಷಾರೋಪಣೆ ಹೊರಿಸಿದರು. ಉತ್ತರವಾಗಿ ತಂದೆ ಅತ್ಯಂತ ಸಮಾಧಾನದಿಂದ ನೀವಿಬ್ಬರೂ ನನ್ನೆರಡು ಕಣ್ಣುಗಳಿದ್ದಂತೆ ಎಂದು ಹೇಳಿದರು. ಹಾಗಾದರೆ ನಾನು?? ಎಂದು ಅಲ್ಲಿಯೇ ಜಗಳ ನೋಡುತ್ತಿದ್ದ ಪುಟ್ಟ ಮಗಳು ಅಸುರಕ್ಷತಾ ಭಾವದಿಂದ ಕೇಳಿದಳು. ಕೂಡಲೇ ಎಚ್ಚೆತ್ತ ತಂದೆ ನೀನು ನನ್ನ ಹೃದಯ ಮಗು ನಿನಗೆ ನೋವಾದರೆ ನನಗೂ ನೋವಾಗುತ್ತದೆ ಎಂದು ಹೇಳಿದರು. ಅದೇ ಕೊನೆ ಆ ಅಣ್ಣ ತಮ್ಮಂದಿರು ಎಂದೂ ತಮ್ಮ ತಂಗಿಯೊಂದಿಗೆ ಕಿತ್ತಾಡುವುದಾಗಲಿ ಕಿರಿಕಿರಿ ಮಾಡುವುದಾಗಲಿ ಮಾಡಲಿಲ್ಲ. ಆಕೆಯನ್ನು ಮಗುವಿನಂತೆ ಪೊರೆದರು. ಇಂದು ಅವರಿಲ್ಲದಿದ್ದರೂ ತಂದೆಯ ಎಲ್ಲಾ ಆದರ್ಶಗಳನ್ನು ಮೈಗೂಡಿಸಿಕೊಂಡು ಆ ಮಕ್ಕಳು ಪರಸ್ಪರ ಹೊಂದಾಣಿಕೆಯಿಂದ ಜೀವಿಸುತ್ತಿದ್ದಾರೆ. ಇದು ಮಕ್ಕಳಿಗೆ ಅಪ್ಪ ಕೊಡುವ ಭಾವನಾತ್ಮಕ ಮತ್ತು ನೈತಿಕ ತಾಕತ್ತು.

ನೂರಾರು ಕಿಲೋಮೀಟರ್ಗಳ ದೂರ ತನ್ನ ಬೈಕ್ ನಲ್ಲಿ ಪಯಣಿಸುತ್ತಿದ್ದ ಆ ತಂದೆ ನಿವೃತ್ತರಾದ ನಂತರ ವಯೋಸಹಜವಾಗಿ ಬೆಂಗಳೂರಿನ ಟ್ರಾಫಿಕ್ ನಲ್ಲಿ ಗಾಡಿ ಓಡಿಸಲು ಮಾತ್ರವಲ್ಲ ಹಿಂದೆ ಕುಳಿತುಕೊಳ್ಳಲು ಕೂಡ ಭಯ ಪಡುತ್ತಿದ್ದರು. ಆದರೆ ಒಮ್ಮೆ ಭೀಕರ ಆರೋಗ್ಯ ತೊಂದರೆಯಿಂದ ಮಗ ಆಸ್ಪತ್ರೆಗೆ ದಾಖಲಾದಾಗ ಅದೇ ತಂದೆ ಬೆಂಗಳೂರಿನ ತುದಿ ಭಾಗದಿಂದ ಮೆಜೆಸ್ಟಿಕ್ ವರೆಗೆ ಬೈಕ್ ನಲ್ಲಿ ಹೋಗಿ ತನ್ನ ಮಗನಿಗಾಗಿ ಔಷಧಿಗಳನ್ನು ಖರೀದಿಸಿ ತಂದರು. ಇದು ಮಕ್ಕಳನ್ನು ಉಳಿಸಿಕೊಳ್ಳಲು ಮಾಡುವ ತಂದೆಯ ಕಸರತ್ತು….. ಅದಕ್ಕೆ ಅಪ್ಪ ಜೀವ ರಕ್ಷಕ,ದೇವರು ಕೊಟ್ಟ ಬದುಕಿನ ಬಹುದೊಡ್ಡ ಗಿಫ್ಟ್.

ಮಗ ಅತ್ಯಂತ ಕಡಿಮೆ ಅಂಕಗಳನ್ನು ಪರೀಕ್ಷೆಯಲ್ಲಿ ಪಡೆದು ಬಂದಾಗ ಅಮ್ಮ ಸಹಜವಾಗಿಯೇ ಕೋಪದಿಂದ ಕೂಗಾಡಿದರೆ ಅಪ್ಪ ಮಗನನ್ನು ಕೂರಿಸಿಕೊಂಡು ತನ್ನ ಸ್ನೇಹಿತ ಹಲವಾರು ಬಾರಿ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿ ಪ್ರಯತ್ನ ಬಿಡದೆ ಓದಿದ್ದರ ಫಲವಾಗಿ ಪೆಥಾಲಜಿಸ್ಟ್ ಆಗಿರುವ ಉದಾಹರಣೆ ನೀಡಿ ಆತನಲ್ಲಿ ಹುಮ್ಮಸ್ಸು ತುಂಬಿದರು. ಫೇಲಾಗುವುದು ತಪ್ಪಲ್ಲ ಆದರೆ ಪ್ರಯತ್ನ ಮಾಡದೇ ಇರುವುದು ಬಹುದೊಡ್ಡ ತಪ್ಪು ಎಂದು ತಿಳಿಹೇಳಿದರು….. ಅದಕ್ಕೆ ಹೇಳುವುದು ಅಪ್ಪ ಆಪ್ತ ಸಲಹೆಗಾರ ಮತ್ತು ಆಪದ್ಬಾಂಧವ.

ಹೀಗೆ ಹೇಳುತ್ತಾ ಹೊರಟರೆ ಅಪ್ಪನ ಕುರಿತು ನೂರಾರು ವಿಷಯಗಳು ಪ್ರತಿ ಮನೆ ಮನೆಗಳಿಂದ ಹೊರ ಬರುತ್ತವೆ. ದೈಹಿಕವಾಗಿ 9 ತಿಂಗಳು ಹೊರುವ ತಾಯಿ ಭಾವನಾತ್ಮಕವಾಗಿ ಮಕ್ಕಳೊಂದಿಗೆ ತಂದೆಗಿಂತ ಹೆಚ್ಚು ಮಿಳಿತಗೊಂಡಿರುತ್ತಾಳೆ. ಅಪ್ಪ ಎಂದರೆ ಶಿಸ್ತು ಅಪ್ಪ ಎಂದರೆ ಕೋಪ ಎಂಬ ಸಾತ್ವಿಕ ಭಯ ದಿಂದ ಗಂಡುಮಕ್ಕಳು ಅಪ್ಪನಿಂದ ಕೊಂಚ ದೂರವೇ ಇರುತ್ತಾರೆ. ಗಂಡು ಮಕ್ಕಳ ಪಾಲಿಗೆ ಅಪ್ಪ ಬಾಸ್, ಹಿಟ್ಲರ್, ಹೆಡ್ ಮಾಸ್ಟರ್ ಎಲ್ಲವೂ ಆಗಿರುತ್ತಾನೆ. ಮಕ್ಕಳು ಶಿಸ್ತಿನ ಜೀವನ ಶೈಲಿ ರೂಡಿಸಿಕೊಳ್ಳಲು ಅಪ್ಪನ ಈ ಅವತಾರಗಳು ಅತ್ಯಂತ ಅವಶ್ಯಕ….. ಅಪ್ಪ ಬಾಸ್, ಹಿಟ್ಲರ್, ಹೆಡ್ ಮಾಸ್ಟರ್ ನಿಜ. ಆದರೆ ಇವೆಲ್ಲವಗಳ ಹಿಂದೆ ಹೆಂಗರುಳಿನ ಅಪ್ಪ ಕಾಣುವುದೇ ಕಣ್ಣಲ್ಲಿ ನೀರಿನ ಪಸೆ ಇರುವುದಿಲ್ಲ ಆದರೆ ಹೃದಯದಲ್ಲಿ ಕೋಲಾಹಲವಿರುತ್ತದೆ. ಎದೆ ಸೆಟೆಸಿ ನಡೆಯುವ ಅಪ್ಪ ತನ್ನ ಮಕ್ಕಳ ಭವಿಷ್ಯಕ್ಕಾಗಿ ಬೇರೊಬ್ಬರ ಮುಂದೆ ಬೆನ್ನು ಬಾಗಿಸಿ ನಿಂತಿರುತ್ತಾನೆ. ಮನೆಯಲ್ಲಿ ದರ್ಪ ತೋರಿಸುವ ಅಪ್ಪ ಮೇಲಧಿಕಾರಿಗಳ ಅಡಿಯಲ್ಲಿ ದಯನೀಯವಾಗಿ ಕಾರ್ಯನಿರ್ವಹಿಸುತ್ತಿರುತ್ತಾನೆ. ಅಮ್ಮ ಮನೆ ಸಂಬಾಳಿಸುತ್ತಾಳೆ ನಿಜ ಆದರೆ ಅಪ್ಪ ಮನೆಯ ಸಂಭಾಳಿಸಲು ಬೇಕಾದ ಆರ್ಥಿಕ ಶಕ್ತಿಗಾಗಿ ಜಗತ್ತಿನೊಂದಿಗೆ ಹೋರಾಟ ನಡೆಸಿರುತ್ತಾನೆ….. ಅದಕ್ಕೆ ಅಪ್ಪ ಪ್ರಬಲ ಹೋರಾಟಗಾರ

ಹೆಣ್ಣು ಮಕ್ಕಳು ಗಂಡು ಮಕ್ಕಳಂತೆ ಅಪ್ಪನಿಗೆ ಹೆದರುವುದಿಲ್ಲ ..ಅವರು ಅಪ್ಪನ ಮಕ್ಕಳು, ಅಪ್ಪನ ಅಪಾರ ಪ್ರೀತಿ ಮತ್ತು ಮಮತೆಯ ಕಡಲಲ್ಲಿ ಮಿಂದವರು. ಅದೇನೋ ಗೊತ್ತಿಲ್ಲ ಅಪ್ಪನಿಗೆ ಹೆಣ್ಣು ಮಕ್ಕಳೆಂದರೆ ತುಸು ಹೆಚ್ಚೇ ಸಾಫ್ಟ್ ಕಾರ್ನರ್.. ಹೆಣ್ಣು ಮಕ್ಕಳು ಅಪ್ಪನ ಪ್ರೀತಿಯ ಸಿಂಹಪಾಲನ್ನು ಪಡೆದರೆ ಗಂಡು ಮಕ್ಕಳು ಮುಂದೆ ಅಪ್ಪನ ಜವಾಬ್ದಾರಿಯಲ್ಲಿ ಪಾಲು ಪಡೆಯುತ್ತಾರೆ…. ಮಗಳೊಂದಿಗಿನ ಸಲಿಗೆ ಅಪ್ಪನನ್ನು ಒಳ್ಳೆಯ ಸ್ನೇಹಿತನನ್ನಾಗಿ ರೂಪಿಸಿದರೆ ಮಗಳು ತನ್ನ ಮೊದಲ ಸ್ನೇಹಿತನೊಂದಿಗೆ ತನ್ನೆಲ್ಲ ಭಾವನೆಗಳನ್ನು ಹಂಚಿಕೊಳ್ಳುತ್ತಾಳೆ…. ಅಪ್ಪ ಹೆಣ್ಣು ಮಕ್ಕಳ ಪಾಲಿನ ಮೊದಲ ಹೀರೋ

ಗಂಡು ಮಕ್ಕಳಿಗೆ ಉತ್ತಮ ನೌಕರಿ ದೊರೆತು ತನ್ನ ತಾಯಿ ತಂದೆ ಮತ್ತು ಮುಂದೆ ಮದುವೆಯಾದ ನಂತರ ತನ್ನನ್ನು ನಂಬಿ ಕೈ ಹಿಡಿದು ಬಂದ ಪತ್ನಿಗೆ ಉತ್ತಮ ಜೀವನ ಕೊಡುವ ಆಶಯ ಹೊಂದಿದರೆ‌ ಹೆಣ್ಣು ಮಕ್ಕಳು ಕೂಡ ವಿದ್ಯಾವಂತರಾಗಿ ವಿವಾಹವಾಗಿ ಗಂಡನ ಮನೆಗೆ ಹೊರಡುತ್ತಾರೆ. ಆದರೆ ತಂದೆ ತಾಯಿಯ ಪ್ರೀತಿ ವಾತ್ಸಲ್ಯವನ್ನು ಹೊತ್ತು ಹೊರಡುವ ಮಕ್ಕಳು ಎಷ್ಟೇ ದೊಡ್ಡವರಾದರೂ ಮಕ್ಕಳಾಗಿಯೇ ಉಳಿಯುತ್ತಾರೆ.ತನ್ನ ಮಕ್ಕಳು ಅದಷ್ಟೇ ದೊಡ್ಡವರಾದರೂ ಅವರನ್ನು ಪ್ರೀತಿಸುವ ಅವರಿಗಾಗಿ ಮಿಡಿಯುವ, ದುಡಿಯುವ ತಾಯಿಯ ನಂತರದ ಏಕೈಕ ಜೀವಿ ತಂದೆ…. ಅದಕ್ಕೆ ಅಪ್ಪ ಕುಟುಂಬ ವತ್ಸಲ.

ಈ ಮುನ್ನ ತನ್ನ ತನ್ನ ತಂದೆಯನ್ನು ಮೈಸೂರು ಹುಲಿ ಎಂದು, ಬಾಸ್ ಎಂದು ಕರೆಯುತ್ತಿದ್ದ ಮಗ ತಾನು ತಂದೆಯಾದಾಗ ತನ್ನ ಮನೆ ಮತ್ತು ಕುಟುಂಬದ ನಿರ್ವಹಣೆಗಾಗಿ ಕೆಲಸ ನಿರ್ವಹಿಸುವಾಗ ಅಪ್ಪ ಅದೆಷ್ಟು ಗ್ರೇಟ್ ಎಂದು ಅರಿಯುತ್ತಾನೆ. ಅಪ್ಪಂದಿರು ಹಾಗೆ… ಸಂಬಳ ಇನ್ನಷ್ಟು ಹೆಚ್ಚು ದೊರೆತರೆ, ಕುಟುಂಬಕ್ಕೆ ಆಸರೆಯಾಗುತ್ತದೆ ಎಂಬ ಭಾವ. ತನಗಾಗಿ ವರ್ಷಕ್ಕೆ ಒಂದೆರಡು ಜೊತೆ ಬಟ್ಟೆ ಹೊಲಿಸುವ, ಅಪ್ಪ ಎರಡು ವರ್ಷಕ್ಕೊಂದು ಜೊತೆ ಚಪ್ಪಲಿ ಸವೆಸುವ ಅತ್ಯಂತ ಮಿತವ್ಯಯದ ವ್ಯಕ್ತಿ ಅಪ್ಪ. ಸ್ನಾನ ಮಾಡಿ ಒಳಉಡುಪುಗಳನ್ನು ಧರಿಸಿ ಮೇಲೆ ತಾವೇ ಇಸ್ತ್ರಿ ಮಾಡಿಕೊಂಡ ಪ್ಯಾಂಟು ಶರ್ಟು ಅಥವಾ ಅಂಗಿಯ ಜೊತೆ ಪಂಜೆ ಇಲ್ಲವೇ ಧೋತರವನ್ನು ಧರಿಸಿ ಎಣ್ಣೆ ಹಾಕಿ ಓರಣವಾಗಿ ಬಾಚಿ ದೇವರಿಗೊಂದು ಕೈಮುಗಿದರೆ ಅಪ್ಪನ ಅಲಂಕಾರ ಮುಗಿದಂತೆಯೇ….. ಅದಕ್ಕೆ ಅಪ್ಪ ಸರಳಾತಿಸರಳ ಜೀವಿ….. ಕಾಯಕ ಜೀವಿಯು ಹೌದು

ಸಂಬಳ ಬಂದ ದಿನ ತಿಂಗಳ ಮನೆ ಖರ್ಚಿಗೆ, ಬಾಡಿಗೆಗೆ, ಔಷಧಿಗೆ ಎಂದು ಹಣವನ್ನು ಎತ್ತಿಡುವ ತಂದೆ ಬೋನಸ್ ನಂತಹ ಹೆಚ್ಚುವರಿ ಹಣ ದೊರೆತಾಗ ಹೆಂಡತಿ ಮಕ್ಕಳಿಗೆ ಬಟ್ಟೆ ಬರೆ ಖರೀದಿಸಲು ಸಂತೆಗೆ ಕರೆದೊಯ್ದು ಅವರ ಸಂತೋಷವನ್ನು ಕಣ್ತುಂಬಿಕೊಳ್ಳುತ್ತಾನೆ. ಕೈಯಲ್ಲಿ ಹಣವಿಲ್ಲದಿದ್ದರೂ ಮಕ್ಕಳನ್ನು ತನಗೆ ಸರಿ ಎನಿಸಿದ ಒಳ್ಳೆಯ ಶಾಲೆ ಕಾಲೇಜುಗಳಿಗೆ ದಾಖಲು ಮಾಡುವ ಅಪ್ಪ ಮಕ್ಕಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದರ ಜೊತೆ ಜೊತೆಗೆ ಅವರ ಒಳ್ಳೆಯ ಬ್ರಾಂಡೆಡ್ ಬಟ್ಟೆಗಳು ಶೂಗಳು ಮೊಬೈಲ್, ಪ್ರವಾಸ, ಸ್ಟಡಿ ಟೂರ್ನಂತಹ ಮತ್ತಿತರ ಅವಶ್ಯಕತೆಗಳನ್ನು ಕೂಡ ಶತಾಯಗತಾಯ ಪೂರೈಸುತ್ತಾನೆ…. ಅದಕ್ಕೆ ನಾವು ಕೇಳಿದ್ದನ್ನು ಪೂರೈಸುವ ಕಲ್ಪವೃಕ್ಷ  ಅಪ್ಪ

ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸುವ ಅಪ್ಪ ರಜಾದಿನಗಳನ್ನು ಕಳೆಯಲು ಅವರು ಬರುವ ದಿನ ಚಿಕ್ಕ ಮಕ್ಕಳಂತೆ ಹೆಚ್ಚು ಸಂಭ್ರಮದಿಂದ ಅವರನ್ನು ಎದುರುಗೊಳ್ಳುತ್ತಾನೆ. ಮಗಳು ಇದ್ದಷ್ಟು ದಿನವೂ ಆಕೆಯ ಎಲ್ಲ ಬೇಕು ಬೇಡಗಳನ್ನು ಒದಗಿಸುತ್ತ ಆಕೆಯ ಹಾಸಿಗೆ ಹೊದಿಕೆಗಳನ್ನು ಕೂಡ ತಾನೆ ಹೊಂದಿಸಿಕೊಡುವ ಸಂಜೆಯಾದರೆ ಆಕೆಯನ್ನು ತಿನ್ನಲು ಹೊರಗೆ ಕರೆದೊಯ್ಯುವ, ಮರಳಿ ಹೋಗುವಾಗ ಬಟ್ಟೆ ಬರೆ ಕೊಡಿಸಿ ಆಕೆಯ ಕಣ್ಣರಳುವುದನ್ನು ನೋಡಿ ಸಂಭ್ರಮಿಸುವ ಅಪ್ಪ ಮಗಳ ಪಾಲಿಗೆ ಕೇಳಿದ್ದನ್ನು ಕೊಡುವ ಕಾಮಧೇನು.

 ಮೊಮ್ಮಕ್ಕಳಂತೂ ಅಪ್ಪನ ನೆಚ್ಚಿನ ಗೆಳೆಯರು. ಹರೆಯದಲ್ಲಿ, ಕುಟುಂಬ ರಕ್ಷಣೆಯ ಹೊಣೆಗಾರಿಕೆಯಲ್ಲಿ ತನ್ನ ಮಕ್ಕಳೊಂದಿಗೆ ಬೆರೆತು ಆಡಲಾಗದ ಎಲ್ಲಾ ಆಟ ಪಾಠಗಳನ್ನು ತನ್ನ ಮೊಮ್ಮಕ್ಕಳ ಜೊತೆ ಆಡುವ ಅಪ್ಪ ಪುಟ್ಟ ಮಗುವಿನಂತೆ ಭಾಸವಾಗುತ್ತಾನೆ. ತನ್ನ ಮಕ್ಕಳಿಗೆ ಜಿಪುಣ ಎಂಬಂತೆ ತೋರುವ ಅಪ್ಪ ಮೊಮ್ಮಕ್ಕಳ ಪಾಲಿಗೆ ಕೇಳಿದ್ದನ್ನು ಕೊಡಿಸುವ ಕಾಮಧೇನು. ಅಮ್ಮ ಮತ್ತು ಅಜ್ಜಿಯರ ಕಣ್ಗಾವಲನು ತಪ್ಪಿಸಿ ಮೊಮ್ಮಕ್ಕಳಿಗಾಗಿ ಚಾಕಲೇಟುಗಳನ್ನು ಸಿಹಿ ತಿಂಡಿಗಳನ್ನು ಚಿಪ್ಸ್ ಗಳನ್ನು ತಂದು ಕೊಡುವ ಇಲ್ಲವೇ ಹೊರಗೆ ಕರೆದು ತಿನ್ನಿಸಿಕೊಂಡು ಬರುವ ಅಜ್ಜ ಮೊಮ್ಮಕ್ಕಳಿಗಾಗಿ ಸುಳ್ಳು ಹೇಳುವುದನ್ನು ಕಲಿಯುತ್ತಾನೆ, ತಂದೆ ತಾಯಿಯರ ಶಿಕ್ಷೆಯಿಂದ ರಕ್ಷಿಸುತ್ತಾನೆ….. ಅಪ್ಪ ಅಜ್ಜನಾಗಿ ಪರಿವರ್ತನೆ ಹೊಂದಿದಾಗ… ಹಳೇ ಬೇರು ಹೊಸ ಚಿಗುರು ಕೂಡಿದರೆ ಮರ ಸೊಗಸು ಎಂಬುದು ಇದಕ್ಕೇ ಇರಬೇಕು.

ಬದಲಾದ ಕಾಲಘಟ್ಟದಲ್ಲಿ ಅಪ್ಪ ಮಕ್ಕಳೊಂದಿಗೆ ಇನ್ನೂ ಹೆಚ್ಚು ಮಿಳಿತಗೊಳ್ಳುತ್ತಾನೆ. ಅಪ್ಪ ಮಕ್ಕಳನ್ನು ತಬ್ಬಿ ಮುದ್ದಾಡುತ್ತಾನೆ ಸ್ನೇಹ ಭಾವದಿಂದ ವರ್ತಿಸುತ್ತಾನೆ ಅವರಿಗೆ ಬೇಕಾದ ಸಾಮಾನುಗಳನ್ನು ಅವರನ್ನೇ ಕರೆದುಕೊಂಡು ಹೋಗಿ ಕೊಡಿಸುತ್ತಾನೆ. ವಾರಾಂತ್ಯಗಳಲ್ಲಿ ಹೊರಗೆ ಕರೆದೊಯ್ಯುತ್ತಾನೆ. ಹೆಂಡತಿ ಮಕ್ಕಳ ಸುಖದಲ್ಲಿ ಕುಟುಂಬದ ಏಳಿಗೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಪಾತ್ರಗಳು ಬದಲಾಗಿಲ್ಲ ಆದರೆ ಪಾತ್ರಧಾರಿಗಳು ಬದಲಾಗಿದ್ದಾರೆ. ಅವರ ವೇಷಭೂಷಣದಲ್ಲಿ ಕೊಂಚ ವ್ಯತ್ಯಾಸವಾಗಿದೆ. ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುರಿದಂತಹ  ಎರಕವೇ.‌‌… ಅಪ್ಪ.

ಅಪ್ಪನಿಗೆ ಯಾರು ಸಾಟಿ ಇಲ್ಲ
ಅಪ್ಪನೇ ಮಕ್ಕಳ ಬಾಳಿಗೆ ಎಲ್ಲ
ಎಲ್ಲರಿಗೂ ಅಪ್ಪ ಬೇಕೇ ಬೇಕಲ್ಲ
ನೂರ್ಕಾಲ ಬಾಳಲಿ ಹಾರೈಸಿರೆಲ್ಲ


Leave a Reply

Back To Top