“ಪ್ರಾಸ್ಟೇಟ್ ಕ್ಯಾನ್ಸರ್” ವೈದ್ಯಕೀಯ ಲೇಖನ-ಡಾ.ಅರಕಲಗೂಡು ನೀಲಕಂಠ ಮೂರ್ತಿ.

ಪ್ರಾಸ್ಟೇಟ್ ಗ್ರಂಥಿಯು (Prostate gland) ಪುರುಷರ ಮೂತ್ರಕೋಶದ (urinary bladder) ಅಡಿಯಲ್ಲಿ, ಮತ್ತು ಅದರಿಂದ (ಶಿಶ್ನದ ಮೂಲಕ) ಹೊರಡುವ ಮೂತ್ರವಿಸರ್ಜನ ನಾಳದ (urethra) ಮೇಲ್ಭಾಗವನ್ನು ಸುತ್ತುವರಿದಿರುತ್ತದೆ. ವೀರ್ಯಾಣುಗಳನ್ನು (sperms)  ಪೋಷಿಸಿ ಮುಂದಕ್ಕೆ ಸಾಗಿಸುವ ವೀರ್ಯದ್ರವವನ್ನು (seminal fluid) ಉತ್ಪಾದಿಸುವುದು ಪ್ರಾಸ್ಟೇಟ್ ಗ್ರಂಥಿಯ ಪ್ರಾಥಮಿಕ ಕೆಲಸ.

ಪ್ರಾಸ್ಟೇಟ್ ಕ್ಯಾನ್ಸರ್ ಅಥವ ಪ್ರಾಸ್ಟೇಟ್  ಅರ್ಬುದ ಎಂಬುದು ಪ್ರಾಸ್ಟೇಟ್ ಗ್ರಂಥಿಯಲ್ಲಿ ಉಂಟಾಗುವ ಏಡಿಹುಣ್ಣು. ಕ್ಯಾನ್ಸರ್ ರೋಗಗಳಲ್ಲಿ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಅತ್ಯಂತ ಸಾಮಾನ್ಯ. ಅನೇಕ ಇಂಥ ಏಡಿಹುಣ್ಣುಗಳು ಬಹಳ ನಿಧಾನ ಬೆಳೆಯುವುದರಿಂದ, ಅಂಥವು ಪ್ರಾಸ್ಟೇಟ್ ಗ್ರಂಥಿಗಷ್ಟೇ ಸೀಮಿತವಾಗಿದ್ದು, ಯಾವ ಥರದ ಗಂಭೀರ ಹಾನಿಯೂ ಆಗದೆ ಇರಬಹುದು. ಹಾಗಾಗಿ, ಕೆಲವು ನಿಧಾನ ಬಲಿಯುವಂಥ ಏಡಿಹುಣ್ಣುಗಳಿಗೆ ಅತಿ ಕಡಿಮೆ ಚಿಕಿತ್ಸೆ ಬೇಕಾಗಬಹುದು, ಅಥವ ಚಿಕಿತ್ಸೆಯ ಅವಶ್ಯಕತೆಯೆ ಬಾರದ ಸಂಭವ ಸಹ ಇರಬಹುದು; ಆದಾಗ್ಯೂ ಇನ್ನು ಕೆಲವು ಆಕ್ರಮಣಾಕಾರಿಯಾಗಿದ್ದು ಬಹುಬೇಗ ಹರಡಬಹುದು. ಹಾಗಾಗಿ, ಬೇಗ ಕಂಡುಹಿಡಿದಂಥ ಮತ್ತು ಇನ್ನೂ ಸಹ ಪ್ರಾಸ್ಟೇಟ್ ಗ್ರಂಥಿಗೇ ಸೀಮಿತವಾದಂಥ ಕ್ಯಾನ್ಸರ್ ರೋಗದ ಚಿಕಿತ್ಸೆ ಅತ್ಯಂತ ಉತ್ತಮ ಅವಕಾಶ ಹೊಂದಿರುವುದು.

ರೋಗಲಕ್ಷಣಗಳು:
ಆರಂಭಿಕ ಹಂತಗಳಲ್ಲಿ ಪ್ರಾಸ್ಟೇಟ್ ಏಡಿಗ್ರಂಥಿಯು ಯಾವ ಥರದ ಲಕ್ಷಣ ಅಥವ ಸುಳಿವುಗಳನ್ನೂ ಉಂಟುಮಾಡದೆ ಇರಬಹುದು. ಆದರೆ, ಅತಿಯಾಗಿ ಉಲ್ಬಣವಾದ ಸ್ಥಿತಿಯಲ್ಲಿ ಈ ಕೆಳಕಂಡ ಲಕ್ಷಣಗಳನ್ನು ಕಾಣಬಹು


… ಮೂತ್ರ ಮಾಡುವುದು ಕಷ್ಟಕರ.
… ಮೂತ್ರದ ಹರಿವಿನ ದುರ್ಬಲತೆ.
… ಮೂತ್ರ ಮತ್ತು ವೀರ್ಯಗಳಲ್ಲಿ ರಕ್ತ.
… ಮೂಳೆಗಳ ನೋವು.
… ಶಿಶ್ನದ ನಿಮಿರುವಿಕೆಯಲ್ಲಿ ತೊಡಕು.
… ಪ್ರಯತ್ನ ಪಡದಿದ್ದರೂ ಇಳಿವ ತೂಕ.
ಈ ಯಾವ ಲಕ್ಷಣಗಳೂ ಕಡಿಮೆಯಾಗದೆ ನಿರಂತರವಾಗಿದ್ದರೆ ವೈದ್ಯರ ಸಲಹೆ ಪಡೆಯಬೇಕಾದೀತು.

ರೋಗಕಾರಕಗಳು: ಯಾವ ಕಾರಣದಿಂದ ಪ್ರಾಸ್ಟೇಟ್ ರೋಗ ಬರುವುದೆಂಬ ನಿಖರವಾದ ಕಾರಣ ಇನ್ನೂ ಸರಿಯಾಗಿ ತಿಳಿದಿಲ್ಲ. ಪ್ರಾಸ್ಟೇಟ್ ಗ್ರಂಥಿಯ ಕೋಶಗಳ ಡಿ.ಎನ್.ಎ.ಗಳಲ್ಲಿ ಬದಲಾವಣೆಗಳು ಕಂಡುಬಂದಾಗ ಕ್ಯಾನ್ಸರ್ ರೋಗ ಆರಂಭವಾಗಬಹುದು ಎಂದು ನಂಬಲಾಗಿದೆ. ಡಿ.ಎನ್.ಎ. ಕೋಶಗಳಲ್ಲಿಯೆ ಆ ಕೋಶಗಳು ಏನು ಮಾಡಬೇಕೆಂಬ ಸೂಚಕಗಳಿರುತ್ತವೆ. ಅಂತಹ ಬದಲಾವಣೆಗಳು ಆ ಕೋಶಗಳಿಗೆ, ಸಾಮಾನ್ಯ ಕೋಶಗಳಿಗಿಂತ ಅತಿ ವೇಗವಾಗಿ ಬೆಳೆದು ತಮ್ಮ ಸಂಖ್ಯೆಯನ್ನು ವರ್ಧಿಸಿಗೊಳ್ಳುವಂತೆ ಸೂಚಿಸುತ್ತವೆ. ಹಾಗೆ ಬೆಳೆದ ವಿಕೃತ ಕೋಶಗಳು ಅಧಿಕಗೊಂಡು ಬದುಕಿ ಹೆಚ್ಚು ಹೆಚ್ಚು ಉಳಯತೊಡಗಿದಾಗ, ಸಾಮಾನ್ಯ ಜೀವಕೋಶಗಳು ನಶಿಸುತ್ತಾ ಹೋಗುತ್ತವೆ. ಹಾಗೆ ಅಧಿಕಗೊಳ್ಳುವ ಕೋಶಗಳು ಗೆಡ್ಡೆಯಾಗಿ, ತನ್ನ ಹತ್ತಿರದ ಭಾಗಗಳಿಗೂ ಹರಡಬಹುದು. ಕಾಲಕ್ರಮೇಣ, ಕೆಲವು ವಿಕೃತ ಕೋಶಗಳು ಬಿಡುಗಡೆಗೊಂಡು ಶರೀರದ ಇತರ ಅಂಗಗಳಿಗೂ ಹರಡಬಹುದು. ಇದಕ್ಕೆ ಮೆಟಾಸ್ಟೇಸಿಸ್ (metastasis) ಎನ್ನುತ್ತಾರೆ.

ಅಪಾಯದ ಅಂಶಗಳು:
ಯಾವ ಥರದ ಅಪಾಯದ ಅಂಶಗಳು ಒಬ್ಬ ವ್ಯಕ್ತಿಯ ಪ್ರಾಸ್ಟೇಟ್ ಕ್ಯಾನ್ಸರ್ ಸಾಧ್ಯತೆಯನ್ನು ಅಧಿಕಗೊಳಿಸುತ್ತವೆಂದರೆ —

… ವಯಸ್ಸಾದ ಹಾಗೆ ಪ್ರಾಸ್ಟೇಟ್ ಅರ್ಬುದದ ಸಾಧ್ಯತೆ ಹೆಚ್ಚಾಗುತ್ತದೆ. 50 ವಯಸ್ಸಿನ ನಂತರ ಅದು ಅತಿ ಸಾಮಾನ್ಯ.

… ಯಾವ ಕಾರಣದಿಂದ ಹೀಗೆ ಎಂಬುದು ತಿಳಿದುಬಂದಿಲ್ಲದಿದ್ದರೂ, ಕಪ್ಪು ಜನಾಂಗದವರಲ್ಲಿ ಪ್ರಾಸ್ಟೇಟ್ ಅರ್ಬುದ ರೋಗದ ಅಪಾಯ, ಇತರ ಜನಾಂಗದವರಿಗಿಂತ ಹೆಚ್ಚಾಗಿ ಕಂಡುಬರುತ್ತದೆ. ಅಷ್ಟಲ್ಲದೆ, ಕಪ್ಪು ಜನರಲ್ಲಿ ಈ ರೋಗವು ತೀವ್ರತರವಾಗುವ ಅಥವ ಬೇಗ ಉಲ್ಬಣವಾಗುವ ಸಾಧ್ಯತೆ ಅಧಿಕ.

… ಒಂದು ಕುಟುಂಬದಲ್ಲಿ ಬಂಧು, ಅಂದರೆ ತಂದೆ, ಸಹೋದರ ಅಥವ ಇನ್ನಿತರ  ಯಾರೊಬ್ಬರಿಗಾದರೂ ಪ್ರಾಸ್ಟೇಟ್ ಕ್ಯಾನ್ಸರ್ ಕಾಯಿಲೆ ಆಗಿದ್ದರೆ, ಅಂತಹ ಕುಟುಂಬದ ಬೇರೆಯವರಿಗೂ ಕೂಡ ಈ ರೋಗದ ಸಾಧ್ಯತೆ ಇರುತ್ತದೆ. ಮೇಲಾಗಿ ಕುಟುಂಬದವರಲ್ಲಿ ಸ್ಥನ ಅರ್ಬುದ (breast cancer) ಸೂಚಕ ಜೀನ್ಸ್ (BRCA1 or BRCA2) ಗಳು ಕಂಡುಬಂದಿದ್ದರೆ, ಅಥವ ಸ್ತನ ಕ್ಯಾನ್ಸರ್ ಕುಟುಂಬದ ಯಾರೊಬ್ಬರಿಗಾದರೂ  ಮೊದಲು ಆಗಿದ್ದ ಇತಿಹಾಸ ಇದ್ದರೆ, ಅಂತಹ ವಂಶಸ್ಥರಲ್ಲಿ ಪ್ರಾಸ್ಟೇಟ್ ರೋಗದ ಸಾಧ್ಯತೆ ಹೆಚ್ಚು.

… ಆರೋಗ್ಯಕರ ತೂಕವಿರುವ ಜನರಿಗಿಂತ, ಬೊಜ್ಜಿನ ವ್ಯಕ್ತಿಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ರೋಗದ ಸಾಧ್ಯತೆ ಹೆಚ್ಚಿರಬಹುದು ಎಂದು ತಿಳಿದಿದೆ. ಅಲ್ಲದೆ ಬೊಜ್ಜಿನ ಜನರಲ್ಲಿ ಈ ಕ್ಯಾನ್ಸರ್ ಬಹಳ ತೀವ್ರವಾಗಿರುವ ಹಾಗು ಆರಂಭಿಕ ಚಿಕಿತ್ಸೆಯ ನಂತರ ಮತ್ತೆ ಬರುವ ಸಾಧ್ಯತೆ ಕೂಡ ಹೆಚ್ಚು.

ತೊಡಕುಗಳು (Complications):
ಪ್ರಾಸ್ಟೇಟ್ ಕ್ಯಾನ್ಸರ್ ರೋಗದ ಹಾಗು ಅದರ ಚಿಕಿತ್ಸೆಯ ತೊಡಕುಗಳೆಂದರೆ —

… ಹರಡುವಂಥ ಅರ್ಬುದ (Matastasizes) – ಪ್ರಾಸ್ಟೇಟ್ ಗ್ರಂಥಿಯ ಆಸುಪಾಸಿನ ಅಂಗಗಳಿಗೆ, ಉದಾಹರಣೆಗೆ ಮೂತ್ರಕೋಶ ಮುಂತಾಗಿ ಹರಡಬಹುದು ಮತ್ತು ರಕ್ತದ ಅಥವ ದುಗ್ಧರಸ ವ್ಯವಸ್ಥೆಯ (lymphatic system) ಮೂಲಕ ಮೂಳೆ ಮತ್ತು ಇತರ ಅಂಗಗಳಿಗೆ ಹರಡಬಹುದು. ಮೂಳೆಗೆ ವಿಸ್ತರಿಸಿದರೆ ನೋವು ಉಂಟುಮಾಡುವುದಲ್ಲದೆ, ಮೂಳೆಗಳು ಮುರಿಯುವ ಸಾಧ್ಯತೆ ಸಹ ಇರುತ್ತದೆ. ಆದಾಗ್ಯೂ, ಅಂದರೆ ಬೇರೆ ಭಾಗಗಳಿಗೆ ವಿಸ್ತರಿಸಿದ ನಂತರವೂ ಚಿಕಿತ್ಸೆಗೆ ಈ ರೋಗ ಸ್ಪಂದಿಸಬಹುದು; ಆದರೆ ಗುಣವಾಗುವ ಸಾಧ್ಯತೆ ಕಡಿಮೆ.

… ಸಂಯಮರಹಿತ ಮೂತ್ರವಿಸರ್ಜನೆ (Urinary inconvenience) – ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆ ಕೂಡ ಮೂತ್ರದ ಸಂಯಮ ಇಲ್ಲದ ಹರಿವಿಗೆ ಕಾರಣವಾಗಬಹುದು. ಅದರ ಚಿಕಿತ್ಸೆಯು ರೋಗದ ತೀವ್ರತೆ ಮತ್ತು ಅದು ಯಾವ ಸ್ಥಿತಿಯಲ್ಲಿದೆ ಎಂಬುದರ ಮೇಲೆ ಅವಲಂಬಿತ; ಹಾಗೆಯೆ ಗುಣವಾಗುವ ಸಾಧ್ಯಾಸಾಧ್ಯತೆ ಕೂಡ. ಚಿಕಿತ್ಸೆಯ ರೀತಿಗಳಲ್ಲಿ ಔಷಧೋಪಚಾರ, ಕ್ಯಾಥಿಟರ್ ಮತ್ತು ಶಸ್ತ್ರಚಿಕಿತ್ಸೆ ಸಾಧ್ಯ.

… ನಿಮಿರುವಿಕೆಯ ಅಪಸವ್ಯ (Erectile dysfunction) – ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಗಳಾದ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ (radiation) ಮತ್ತು ಸಂಗತ (hormone) ಚಿಕಿತ್ಸೆಗಳಲ್ಲಿ ಯಾವುದರಿಂದಲೂ ಶಿಶ್ನದ ನಿಮಿರುವಿಕೆ ಅಪಸವ್ಯ ಆಗಬಹುದು. ಔಷಧೋಪಚಾರ, ನಿರ್ವಾತ ಸಾಧನಗಳಿಂದ (vacuum devices)  ನಿಮಿರುವಿಕೆಯನ್ನು ಸರಿಪಡಿಸಲು ಸಾಧ್ಯ. ಅಲ್ಲದೆ ಶಸ್ತ್ರಚಿಕಿತ್ಸೆಯಿಂದ ಕೂಡ ಸಾಧ್ಯ.

ತಡೆಗಟ್ಟುವಿಕೆ:
ಪ್ರಾಸ್ಟೇಟ್ ಕ್ಯಾನ್ಸರ್ ಸಾಧ್ಯತೆಯನ್ನು ತಡೆಗಟ್ಟುವ ವಿಧಾನಗಳೆಂದರೆ —

… ಆರೋಗ್ಯಕರ ಆಹಾರ ಸೇವನೆ – ವೈವಿಧ್ಯಮಯ ಹಣ್ಣುಗಳು, ತರಕಾರಿ ಮತ್ತು ಧಾನ್ಯಗಳನ್ನು ಹೆಚ್ಚಾಗಿ ಸೇವಿಸಬೇಕು. ಹಣ್ಣು ಮತ್ತು ತರಕಾರಿಗಳಲ್ಲಿ ವಿಟಮಿನ್ ಮತ್ತು ಪೋಷಕಾಂಶಗಳು ಅಧಿಕವಾಗಿರುವುದರಿಂದ ಉತ್ತಮವಾದ ಆರೋಗ್ಯಕ್ಕೆ ಸಹಕಾರಿ. ಆದರೆ, ಇಂತಹ ಆಹಾರ ಸೇವನೆಯಿಂದ ಪ್ರಾಸ್ಟೇಟ್ ಕ್ಯಾನ್ಸರ್ ಬರದಿರುವ ಸಾಧ್ಯತೆ ಬಗ್ಗೆ ಸದ್ಯಕ್ಕೆ ಸರಿಯಾದ ಮಾಹಿತಿ ಇಲ್ಲ.
 ಆದಾಗ್ಯೂ, ಇಂತಹ ಆಹಾರ ಸೇವನೆಯಿಂದ ಒಟ್ಟಾರೆಯ ಆರೋಗ್ಯ ಸುಧಾರಿಸುವ ಸಾಧ್ಯತೆ ಹೆಚ್ಚು.

… ಪೂರಕಗಳ ಬದಲಿಗೆ ಆರೋಗ್ಯಕರ ಆಹಾರದ ಸೇವನೆ – ಪೂರಕಗಳಿಂದ (supplements) ಪ್ರಾಸ್ಟೇಟ್ ಕ್ಯಾನ್ಸರ್ ಸಾಧ್ಯಾಸಾಧ್ಯತೆಯ ಬಗೆಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ, ಉತ್ತಮ ಹಾಗು ವಿಟಮಿನ್ ಮತ್ತು ಖನಿಜಯುಕ್ತ ಆಹಾರ ಸೇವನೆಯಿಂದ ಶರೀರದಲ್ಲಿ ಇವುಗಳ ಆರೋಗ್ಯಕರ ಹಂತವನ್ನು ನಿರ್ವಸುವುದು ಸಾಧ್ಯ.

… ವ್ಯಾಯಾಮ – ವ್ಯಾಯಾಮ ಶರೀರದ ಸಮಗ್ರ ಆರೋಗ್ಯವನ್ನು ಸುಧಾರಿಸುವ ಜೊತೆಗೆ, ಉತ್ತಮ ತೂಕ ಹಾಗು ಮಾನಸಿಕ ಸ್ಥಿತಿಯನ್ನು ಕೂಡ ಅಭಿವೃದ್ಧಿ ಮಾಡುವುದು ಸಾಧ್ಯ. ವಾರದ ಎಲ್ಲ ದಿನಗಳೂ ವ್ಯಾಯಾಮ ಮಾಡುವದು ಉತ್ತಮ. ಹೊಸದಾಗಿ ವ್ಯಾಯಾಮ ಮಾಡುವವರು, ಆರಂಭದಲ್ಲಿ ನಿಧಾನವಾಗಿ ಮಾಡುತ್ತ ಕ್ರಮೇಣ ಪ್ರತಿದಿನ ಹೆಚ್ಚಿಸಬೇಕು.

… ಆರೋಗ್ಯಕರ ತೂಕ – ಸದ್ಯದ ತೂಕ ಆರೋಗ್ಯಕರವಾಗಿದ್ದರೆ, ಪ್ರತಿದಿನ ವ್ಯಾಯಾಮ ಮಾಡುತ್ತ, ಉತ್ತಮ ಆಹಾರ ಸೇವಿಸುತ್ತ ಅದೇ ತೂಕವನ್ನು ಕಾಪಾಡಿಕೊಳ್ಳುವುದು ಮುಖ್ಯ. ಹಾಗೆಯೆ, ತೂಕ ಇನ್ನೂ ಕಮ್ಮಿ ಆಗಬೇಕಾದರೆ, ಸೇವಿಸುವ ಆಹಾರದ ಕ್ಯಾಲೋರಿಗಳನ್ನು ಕಡಿಮೆಗೊಳಿಸಿ, ಹೆಚ್ಚು ವ್ಯಾಯಾಮ ಮಾಡಬೇಕು.

ರೋಗನಿರ್ಣಯ:
ಐವತ್ತು ವರ್ಷ ವಯಸ್ಸಿನ ಮತ್ತು ಹೆಚ್ಚಿನ ವಯಸ್ಸಿನ ಆರೋಗ್ಯವಂತ ಪುರುಷರು, ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ರೋಗದ ಲಕ್ಷಣಗಳು ಇಲ್ಲದೆ ಇದ್ದರೂ ಸಹ, ವೈದ್ಯರ ಪರೀಕ್ಷೆಗೆ ಒಳಗಾಗುವುದು ಉತ್ತಮ ಎಂದು ಕೆಲವರು ವಾದಿಸುತ್ತಾರೆ; ಆದರದು ಸದ್ಯಕ್ಕೆ ವಿವಾದಾತ್ಮಕ. ಹಾಗಾಗಿ ಅದರಿಂದ ಆಗುವ ಪ್ರಯೋಜನದ ಬಗ್ಗೆ ಒಮ್ಮತವಿಲ್ಲ. ಆದಾಗ್ಯೂ, ಅನೇಕ ವೈದ್ಯಕೀಯ ಸಂಘಟನೆಗಳ ಪ್ರಕಾರ 50 ವಯಸ್ಸಿನ ಮೇಲ್ಪಟ್ಟವರು, ತಮ್ಮ ವೈದ್ಯರ ಸಂಗಡ ಈ ಕಾಯಿಲೆಯ ಆಗುಹೋಗುಗಳ ಬಗೆಗೆ ಚರ್ಚಿಸುವುದು ಉತ್ತಮ ಎಂಬುದು; ಅದರಲ್ಲಿಯೂ ವ್ಯಕ್ತಿ ಕಪ್ಪು ಜನಾಂಗಕ್ಕೆ ಸೇರಿದ್ದರೆ, ಅಥವ ಪ್ರಾಸ್ಟೇಟ್ ಕ್ಯಾನ್ಸರ್ ರೋಗ ಇದ್ದ ಅಥವ ಅಂಥ ಅಪಾಯದ ಅಂಶಗಳಿರುವ ಕುಟುಂಬದಿಂದ ಬಂದವರಾಗಿದ್ದರೆ, ಅಂಥವರು ಬೇಗ ವೈದ್ಯರ ಸಂಗಡ ಚರ್ಚಿಸಿ, ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು.

ಪ್ರಾಸ್ಟೇಟ್ ಪರಿಶೋಧನೆಯ  ಪರೀಕ್ಷೆಗಳು (Screening tests) —

… ಗುದನಾಳದ ಬೆರಳು ಪರೀಕ್ಷೆ – DRE (Digital rectal examination) – ವೈದ್ಯರು ತಮ್ಮ ಬೆರಳಿಗೆ ಕೈಗವಸು ತೊಟ್ಟು, ಮುಲಾಮಿನಿಂದ ಬೆರಳನ್ನು ನುಣುಪಾಗಿಸಿಕೊಂಡು, ರೋಗಿಯ ಗುದನಾಳವನ್ನು ಪರೀಕ್ಷೆ ಮಾಡುವರು. ಅದರ ಮೂಲಕ ಗುದನಾಳದ ಪಕ್ಕ ಇರುವ ಪ್ರಾಸ್ಟೇಟ್ ಗ್ರಂಥಿಯ ಆಕಾರ, ಗಾತ್ರ ಮತ್ತು ವಿನ್ಯಾಸಗಳಲ್ಲಿ ದೋಷ ಕಂಡುಬಂದರೆ, ಮುಂದಿನ ಪರೀಕ್ಷೆಗಳಿಗೆ ಆದೇಶ ಮಾಡುವರು.

ಪ್ರಾಸ್ಟೇಟ್-ಸ್ಪೆಸಿಫಿಕ್ ಆಂಟಿಜನ್ (PSA) –                              ಪ್ರಾಸ್ಟೇಟ್ ಗ್ರಂಥಿಯ ಸಾಮಾನ್ಯ ಕೋಶಗಳು ಹಾಗು ಕ್ಯಾನ್ಸರ್ ಯುಕ್ತ ಕೋಶಗಳು ಉತ್ಪತ್ತಿ ಮಾಡುವ ಪ್ರೋಟೀನ್ ಪದಾರ್ಥಕ್ಕೆ ಪ್ರಾಸ್ಟೇಟ್-ಸ್ಪೆಸಿಫಿಕ್ ಆಂಟಿಜನ್ (Prostate-specific antigen) ಎಂದು ಹೆಸರು. ಇದು ರಕ್ತದಲ್ಲಿ ಅಲ್ಪ ಪ್ರಮಾಣದಷ್ಟು ಇರುತ್ತದೆ. ಆದರೆ, ಸಾಮಾನ್ಯಕ್ಕಿಂತ ಹೆಚ್ಚಿದ್ದರೆ, ಅದು ಪ್ರಾಸ್ಟೇಟ್ ಸೋಂಕು, ಉರಿಯೂತ, ಗ್ರಂಥಿ ದೊಡ್ಡದಾಗಿರುವಿಕೆ ಅಥವ ಕ್ಯಾನ್ಸರ್ ಮುಂತಾದುವುಗಳು ಇರುವ ಸೂಚಕ.

ಇಂತಹ ಪರೀಕ್ಷೆಯಿಂದ ಪ್ರಾಸ್ಟೇಟ್ ಗ್ರಂಥಿಯ ಅಸಹಜತೆ (abnormality) ತಿಳಿದುಬಂದಾಗ, ಕ್ಯಾನ್ಸರ್ ಇರುವುದನ್ನು ದೃಢೀಕರಿಸಲು ಹೆಚ್ಚಿನ ಪರೀಕ್ಷೆಗಳನ್ನು ಮಾಡಿಸುವರು —

… ಅಲ್ಟ್ರಾಸೌಂಡ್ – ಒಂದು ಸಿಗಾರ್ ಆಕಾರ ಮತ್ತು ಅಷ್ಟೇ ಗಾತ್ರದ ಶೋಧಕವನ್ನು ರೋಗಿಯ ಗುದನಾಳದ ಒಳಗೆ ತೂರಿಸಿ, ಅದರಿಂದ ಹೊಮ್ಮುವ ಶಬ್ದಗಳು ಪ್ರಾಸ್ಟೇಟ್ ಗ್ರಂಥಿಯ ಚಿತ್ರವನ್ನು ಸೃಷ್ಟಿಸುತ್ತವೆ.

… ಎಂ.ಆರ್.ಐ. (ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್) – ಕೆಲವು ಪರಿಸ್ಥಿತಿಗಳಲ್ಲಿ ವೈದ್ಯರು ಸವಿಸ್ತಾರ ಚಿತ್ರದ ಅವಶ್ಯಕತೆ ಇದ್ದಾಗ, ಎಂ.ಆರ್.ಐ. ಸ್ಕ್ಯಾನ್ ಮಾಡಿಸುವರು.

… ಬೈಯಾಪ್ಸಿ – ಪ್ರಾಸ್ಟೇಟ್ ಗ್ರಂಥಿಯಲ್ಲಿ ಕ್ಯಾನ್ಸರ್ ಇರುವುದನ್ನು ಖಚಿತಪಡಿಸಲು ವಿಶೇಷ ಪ್ರಕ್ರಿಯೆಯ ಸಹಾಯದಿಂದ, ರೋಗಿಯ ಪ್ರಾಸ್ಟೇಟ್ ಗ್ರಂಥಿಯಿಂದ ಕೆಲವು ಕೋಶಗಳನ್ನು ಒಂದು ಸಣ್ಣ ಸೂಜಿಯಿಂದ ಹೊರತೆಗೆದು, ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸುವ ಮೂಲಕ ಕ್ಯಾನ್ಸರ್ ಇರುವುದನ್ನು ದೃಢಪಡಿಸುವರು.
ಒಮ್ಮೆ ಪ್ರಾಸ್ಟೇಟ್ ಗ್ರಂಥಿಯಲ್ಲಿ ಕ್ಯಾನ್ಸರ್ ದೃಢವಾದ ನಂತರ, ಅದು ಎಷ್ಟು ಆಕ್ರಮಣಶೀಲ ಮಟ್ಟದ್ದಾಗಿದೆ ಎಂದು ತಿಳಿಯಲು ಕೋಶಗಳನ್ನು ಮುಂದಿನ ಪರೀಕ್ಷೆಗೆ ಒಳಪಡಿಸುವರು.

ಪ್ರಾಸ್ಟೇಟ್ ಕ್ಯಾನ್ಸರ್ ಶ್ರೇಣಿಯ ನಿರ್ಣಯ —

ಒಮ್ಮೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದನ್ನು ದೃಢೀಕರಿಸಿದ ನಂತರ, ಅದು ಎಷ್ಟು ಆಕ್ರಮಣಕಾರಿ ಎಂಬ ಶ್ರೇಣಿಯನ್ನು ನಿರ್ಧರಿಸಬೇಕಾಗುತ್ತದೆ. ಸಾಮಾನ್ಯ ಕೋಶಗಳಿಗಿಂತ ಕ್ಯಾನ್ಸರ್ ಕೋಶಗಳು ಎಷ್ಟು ಭಿನ್ನ ಎನ್ನುವುದರ ಮೇಲೆ ಇದರ ನಿರ್ಧಾರ ಸಾಧ್ಯ. ಉನ್ನತ ದರ್ಜೆಯ ಭಿನ್ನತೆ ಇದ್ದರೆ, ಅಂತಹ ಕೋಶಗಳು ಅತಿ ತ್ವರಿತವಾಗಿ ಹರಡುವ ಸಾಧ್ಯತೆ ಇರುವುದು. ಹಾಗೆ ಕ್ಯಾನ್ಸರ್ ಕೋಶಗಳ ಆಕ್ರಮಣಶೀಲತೆಯನ್ನು ತಿಳಿಯುವ ವಿಧಾನಗಳೆಂದರೆ —

… ಗ್ಲೀಸನ್ ಸ್ಕೋರ್ (Gleason score) – ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳ ಆಕ್ರಮಣಶೀಲತೆ ಅಳೆಯುವ  ಅತ್ಯಂತ ಸಾಮಾನ್ಯವಾದ ಪ್ರಮಾಣ ಗ್ಲೀಸನ್ ಸ್ಕೋರ್. ಇದು 2 (ಆಕ್ರಮಣಶೀಲ ಅಲ್ಲ) ರಿಂದ 10 (ಅತಿ ಆಕ್ರಮಣಶೀಲ) ರವರೆಗೆ ಇದ್ದು, ಈ ಹತ್ತರಲ್ಲಿ 6 ರಿಂದ 10 ರವರೆಗೆ ಬಹು ಮುಖ್ಯ ಅಂಕಗಳು. 6 ಅಂಕಗಳು ಕಡಿಮೆ ಆಕ್ರಮಣಶೀಲತೆ, 7 ಅಂಕಗಳು ಮಧ್ಯಮ ದರ್ಜೆಯ ಮತ್ತು 8 ರಿಂದ 10 ಅಂಕಗಳು ತೀವ್ರ ದರ್ಜೆಯ ಆಕ್ರಮಣಶೀಲತೆಯನ್ನು ತಿಳಿಸುತ್ತವೆ.

… ಆನುವಂಶಿಕ ಪರೀಕ್ಷೆ (Genomic testing) – ಈ ಪರೀಕ್ಷೆಯಿಂದ ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳಲ್ಲಿ ವಂಶಾವಳಿಯ ಯಾವ ಜೀನ್ (ಅನುವಂಶಿಕ ಧಾತು) ರೂಪಾಂತರ (mutation) ಹೊಂದಿವೆ ಎಂಬುದನ್ನು ತಿಳಿದು, ಇದರಿಂದ ರೋಗದ ಮುನ್ಸೂಚನೆ (prognosis) ಏನೆಂದು ತಿಳಿಯಬಹುದು. ಆದರೆ, ಈ ಪರೀಕ್ಷೆಯ ಅನುಕೂಲತೆ ಎಷ್ಟು ಮತ್ತು ಯಾರಿಗೆ ಎಂಬ ಅರಿವಿಲ್ಲದೆ, ಇದನ್ನು ಹೆಚ್ಚು ಉಪಯೋಗಿಸುವುದಿಲ್ಲ. ಆದಾಗ್ಯೂ, ವಂಶಾವಳಿಯ ಪರೀಕ್ಷೆಯಿಂದ ಕೆಲವು ಪರಿಸ್ಥಿತಿಯಲ್ಲಿ ಚಿಕಿತ್ಸೆಗೆ ಸಹಾಯ ಆಗಬಹುದು.

ಕ್ಯಾನ್ಸರ್ ವಿಸ್ತರಣೆ:
ಪ್ರಾಸ್ಟೇಟ್ ಕ್ಯಾನ್ಸರ್ ನಿರ್ಣಯದ ನಂತರ, ಅದರ ಹಂತ ಮತ್ತು ಬೇರೆ ಅಂಗಗಳಿಗೆ ವಿಸ್ತರಿಸಿದ ಬಗೆಗೆ ತಿಳಿಯಲು ಇನ್ನೂ ಕೆಲವು ಪರೀಕ್ಷೆಗಳನ್ನು ವೈದ್ಯರು ಹೇಳಬಹುದು —
… ಮೂಳೆಯ ಸ್ಕ್ಯಾನ್
… ಅಲ್ಟ್ರಾಸೌಂಡ್ ಸ್ಕ್ಯಾನ್
… ಕಂಪ್ಯೂಟರೈಸ್ಡ್ ಟೋಮೋಗ್ರಫಿ ಸ್ಕ್ಯಾನ್ (CT)
… ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (MRI)
… ಪಾಸಿಟ್ರಾನ್ ಎಮಿಶನ್ ಟೋಮೋಗ್ರಫಿ ಸ್ಕ್ಯಾನ್ (PET scan)

ಈ ಎಲ್ಲ ಪರೀಕ್ಷೆಗಳೂ ಎಲ್ಲರಿಗೂ ಅವಶ್ಯ ಇಲ್ಲ. ಈ ಪರೀಕ್ಷೆಗಳಿಂದ ವೈದ್ಯರು ಕ್ಯಾನ್ಸರ್ ವಿಸ್ತರಣೆಯ ಬಗ್ಗೆ ರೋಮನ್ ಅಂಕಗಳಲ್ಲಿ I ರಿಂದ IV (1 ರಿಂದ 6)  ವರೆಗೆ ವಿಭಾಗ ಮಾಡುವರು. ಅತಿ ಕಡಿಮೆ ಎಂದರೆ I ರ ಹಂತ, ಆ ಕ್ಯಾನ್ಸರ್ ಪ್ರಾಸ್ಟೇಟ್ ನಲ್ಲಿಯೆ ಸೀಮಿತ ಎಂದೂ, IV ರ ಹಂತ ಎಂದರೆ ಅದು ಬೇರೆ ಅಂಗಗಳಿಗೂ ಹರಡಿದೆ ಎಂದು ನಿರ್ಧರಿಸುತ್ತಾರೆ.

ಚಿಕಿತ್ಸೆ:
ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯು, ಅದು ಎಷ್ಟು ತ್ವರಿತವಾಗಿ ಬೆಳೆಯುತ್ತಿದೆ, ಬೇರೆ ಎಲ್ಲಾದರು ಹರಡಿದೆಯೆ ಮತ್ತು ರೋಗಿಯ ಸಮಗ್ರ ಆರೋಗ್ಯಸ್ಥಿತಿ ಹೇಗಿದೆ ಎಂಬುದಷ್ಟೇ ಅಲ್ಲದೆ, ಚಿಕಿತ್ಸೆಯಿಂದ ರೋಗಿಗೆ ಆಗುವಂಥ ಸಂಭಾವ್ಯ ಅನುಕೂಲತೆ ಮತ್ತು ಅದರ ಅಡ್ಡ ಪರಿಣಾಮಗಳ ಮೇಲೆ ಅವಲಂಬಿತವಾಗಿರುತ್ತದೆ.

ಸಾಮಾನ್ಯವಾಗಿ ಕಡಿಮೆ ಶ್ರೇಣಿಯ ಪ್ರಾಸ್ಟೇಟ್ ಕ್ಯಾನ್ಸರ್ ಆದರೆ ಚಿಕಿತ್ಸೆಯು  ತಕ್ಷಣದಲ್ಲಿ ಬೇಕಾಗುವುದಿಲ್ಲ. ಅಲ್ಲದೆ, ಇನ್ನು ಕೆಲವುಗಳಿಗೆ ಚಿಕಿತ್ಸೆಯ ಅವಶ್ಯಕತೆ ಇಲ್ಲದೆ, ಕೇವಲ ಅದರ ಮೇಲೆ ಕಣ್ಗಾವಲಿಟ್ಟಿದ್ದರೆ (surveillance) ಅಷ್ಟೆ ಸಾಕೆಂದು ವೈದ್ಯರು ಸೂಚಿಸುತ್ತಾರೆ. ಹಾಗೆ ತದೇಕ ಕಣ್ಗಾವಲಿನಲ್ಲಿರುವಾಗ ನಿಯಮಿತವಾಗಿ ರಕ್ತ ಪರೀಕ್ಷೆ, ಗುದನಾಳದ ಪರೀಕ್ಷೆ ಮತ್ತು ಪ್ರಾಸ್ಟೇಟ್ ಬೈಯಾಪ್ಸಿ ಮಾಡಿಸುತ್ತ, ರೋಗದ ಪ್ರಗತಿಯ ಬಗೆಗೆ ಅರಿಯಬೇಕಾದೀತು. ಅಂತಹ ಸಂದರ್ಭದಲ್ಲಿ, ರೋಗ ಉಲ್ಬಣವಾದ ಸೂಚನೆ ಕಂಡುಬಂದರೆ, ಶಸ್ತ್ರಚಿಕಿತ್ಸೆ ಅಥವ ರೇಡಿಯೇಶನ್ (ವಿಕಿರಣ) ಚಿಕಿತ್ಸೆಗೆ ತೊಡಗಿಸಬಹುದು.  ಯಾವ ಥರದ ತೊಂದರೆಯ ಲಕ್ಷಣವೂ ಇಲ್ಲದ ಕ್ಯಾನ್ಸರ್ ಮತ್ತು ತುಂಬ ನಿಧಾನ ಬಲಿಯಬಹುದಾಗಿದ್ದು, ಪ್ರಾಸ್ಟೇಟ್ ಗ್ರಂಥಿಯ ಚಿಕ್ಕ ಅಂಗಳಕ್ಕೆ ಮಾತ್ರ ಅದು ಸೀಮಿತವಾಗಿದ್ದರೆ, ಅಂತಹ ರೋಗಿಗಳಿಗೆ ಕೇವಲ ಇಂಥ ಕಣ್ಗಾವಲು ಸಾಕಾಗುತ್ತದೆ. ಹಾಗೆಯೆ, ಕ್ಯಾನ್ಸರ್ ಸಂಗಡ ಬೇರೆ ಇನ್ನಾವುದೇ ಗಂಭೀರ ಕಾಯಿಲೆ ಸಹ ಇದ್ದಾಗ, ಅಥವ ಕಾಯಿಲೆಯ ವ್ಯಕ್ತಿಗೆ ತುಂಬ ವಯಸ್ಸಾಗಿದ್ದು ಶಸ್ತ್ರಚಿಕಿತ್ಸೆ ಅಸಾಧ್ಯವಾದಾಗ ಕೇವಲ ಕಣ್ಗಾವಲು ಮಾತ್ರ ಸಾಧ್ಯವಾಗುತ್ತದೆ.

ಶಸ್ತ್ರಚಿಕಿತ್ಸೆಯಲ್ಲಿ ಪ್ರಾಸ್ಟೇಟ್ ಗ್ರಂಥಿಯ ಸಂಗಡ, ಸುತ್ತಲಿನ ಅಂಗಾಂಶಗಳನ್ನು ಮತ್ತು ಕೆಲವು ದುಗ್ಧರಸ ಗ್ರಂಥಿಗಳನ್ನೂ (lymph nodes) ತೆಗೆದುಹಾಕುವರು.
ಪ್ರಾಸ್ಟೇಟ್ ಗ್ರಂಥಿಗೆ ಸೀಮಿತವಾದ ಕ್ಯಾನ್ಸರ್ ರೋಗಕ್ಕೆ ಶಸ್ತ್ರಚಿಕಿತ್ಸೆ ಸೂಕ್ತ ಆಯ್ಕೆ. ಪ್ರಾಬಲ್ಯ ಹೊಂದಿರುವ ಕ್ಯಾನ್ಸರ್ ರೋಗಕ್ಕೆ, ಶಸ್ತ್ರಚಿಕಿತ್ಸೆಯ ಜೊತೆಗೆ, ಇತರೆ ಕೆಲವು ಸಂಯೋಜಿತ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಉದಾಹರಣೆಗೆ, ರೇಡಿಯೇಶನ್ ಚಿಕಿತ್ಸೆ, ಕೀಮೋಥೆರಪಿ, ಇಮ್ಯೂನೋಥೆರಪಿ, ಕ್ರೈಯೋಥೆರಪಿ, ಹೀಟಿಂಗ್ ಚಿಕಿತ್ಸೆ ಮುಂತಾಗಿ. ಅಂತಿಮವಾಗಿ ವೃಷಣಗಳನ್ನೆ ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವ ಚಿಕಿತ್ಸೆ ಸಹ ಒಂದು ವಿಧಾನ.


One thought on ““ಪ್ರಾಸ್ಟೇಟ್ ಕ್ಯಾನ್ಸರ್” ವೈದ್ಯಕೀಯ ಲೇಖನ-ಡಾ.ಅರಕಲಗೂಡು ನೀಲಕಂಠ ಮೂರ್ತಿ.

  1. ಯಥಾಪ್ರಕಾರ ಯಥಾವತ್ತಾಗಿ prostate can ಬಗ್ಗೆ ತುಂಬಾ ಚೆನ್ನಾಗಿ, ಎಲ್ಲರಿಗೂ ಅರ್ಥವಾಗುವ ಹಾಗೆ ವಿವರಿಸಿದ್ದೀರ.
    ಅಭಿನಂದನೆಗಳು ಮೂರ್ತಿ!

Leave a Reply

Back To Top