ಗಜಾನನ ಶರ್ಮ ಅವರ ಕೃತಿ “ಕರಿಮೆಣಸಿನ ರಾಣಿಯ ಅಕಳಂಕ ಚರಿತೆ”ಅವಲೋಕ ಮಾಲಾ ಹೆಗಡೆ

ಪುಸ್ತಕ ಓದು
ಪುಸ್ತಕದ ಹೆಸರು : ಕರಿಮೆಣಸಿನ ರಾಣಿಯ ಅಕಳಂಕ ಚರಿತೆ
ಲೇಖಕರು : ಡಾ. ಗಜಾನನ ಶರ್ಮ
ಮುದ್ರಣ : 2021
ಪುಟಗಳ ಸಂಖ್ಯೆ : 432
ಬೆಲೆ : ₹395
ಪ್ರಕಾಶಕರು : ನಂ 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧೀಬಜಾರ್ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು, 560 004

ಸುಪ್ರಸಿದ್ಧ ಲೇಖಕರಾದ ಡಾ.ಗಜಾನನ ಶರ್ಮ ರವರು ಬರೆದ ಅಪೂರ್ವ, ಐತಿಹಾಸಿಕ ಕಥನ ಕಾದಂಬರಿ ಈ ಕರಿಮೆಣಸಿನ ರಾಣಿ ಚೆನ್ನಭೈರಾದೇವಿಯ ಚರಿತೆ.
           ಪ್ರಜೆಗಳ ಪಾಲಿನ ದೇವತೆ, ಪ್ರೀತಿಯ ಅವ್ವರಸಿಯಾಗಿ, ಕಾಳುಮೆಣಸಿನ ವ್ಯಾಪಾರವ ಹುಟ್ಟುಹಾಕಿ ಅದರ ರಫ್ತು ವ್ಯವಹಾರದಿಂದ ಜನಜೀವನ, ಸಾಮ್ರಾಜ್ಯ ಸಮೃದ್ಧಗೊಳಿಸಿ ಕಾಳುಮೆಣಸಿನ ರಾಣಿ ಎಂದೇ ಹೆಸರಾದವಳು. ಪೋರ್ಚುಗೀಸರ ಪಾಲಿಗೆ ಸಿಂಹಸ್ವಪ್ನವಾಗಿದ್ದು, ಇಡೀ ಕೊಂಕಣ ಕರಾವಳಿಯನ್ನು ಅವರಿಂದ ರಕ್ಷಿಸುವಲ್ಲಿ ಸಫಲಳಾದ ಸಾಹಸಿ ಸಾಮ್ರಾಜ್ಞಿ. ದಕ್ಷಿಣ ಕೊಂಕಣ, ಮಲೆನಾಡನ್ನು 54 ವರ್ಷಗಳ  ಕಾಲ, ದಕ್ಷವಾಗಿ ಆಳಿದ ವೀರ ವನಿತೆ ಚೆನ್ನಭೈರಾದೇವಿಯ ತ್ಯಾಗ, ಸಾಹಸ, ಮತ್ತು ಧೀಮಂತ ವ್ಯಕ್ತಿತ್ವಗಳ ಒಂದು ಪರಿಪೂರ್ಣ ಚಿತ್ರಣವ ತೆರೆದಿಟ್ಟ ಅಪರೂಪದ ಚಾರಿತ್ರಿಕ ಕೃತಿ ಇದಾಗಿದೆ.

     ಇದರ ವಿಶೇಷತೆಯೆಂದರೆ, ಐತಿಹಾಸಿಕ ಕಾದಂಬರಿಯಾಗಿದ್ದೂ ಕೇವಲ ರಾಜನೀತಿ, ಯುದ್ಧ ಕಲೆ, ಸಾಮ್ರಾಜ್ಯ ವಿಸ್ತರಣೆಗಷ್ಟೇ ವಿಷಯ ವಸ್ತು ಸೀಮಿತಗೊಳ್ಳದೇ, ಅದಕ್ಕೂಮೀರಿ ಅಂದಿನ ಜನರ ದೈನಂದಿನ ಜೀವನ, ಆಚಾರ -ವಿಚಾರ, ಧಾರ್ಮಿಕನಂಬಿಕೆ, ಪೂಜಾ ಕ್ರಮ ಇದರ ಜೊತೆಜೊತೆಗೆ ಸಂಬಂಧಗಳ ನಡುವಿನ ಬಾಂಧವ್ಯ, ಪ್ರೀತಿಯನ್ನೂ ಸೂಕ್ಷ್ಮವಾಗಿ, ನೈಜವಾಗಿ ಬಿಂಬಿಸಲ್ಪಟ್ಟ ಅಪೂರ್ವ ಕಥಾವಸ್ತುವನ್ನೊಳಗೊಂಡ ಬರಹವಾಗಿದ್ದುದು.

ಮನೋಜ್ಞ ಪಾತ್ರ ಚಿತ್ರಣಗಳ ಮೂಲಕ ಶರ್ಮರವರು ಓದುಗನನ್ನು ಪ್ರತೀ ಹಂತದಲ್ಲೂ ಹಿಡಿದಿಡುವಲ್ಲಿ  ಸಂಪೂರ್ಣ ಯಶಸ್ವಿಯಾಗಿದ್ದಾರೆ.



ಸ್ವಚ್ಛ ಮನ,  ವಿಶಿಷ್ಟ ಪ್ರಬುದ್ಧ ವ್ಯಕ್ತಿತ್ವವ ಮೆರೆಸುವ ಜಿನದತ್ತ, ಸಭಾಯಿತರ ಸರಳತೆ, ಮಾರ್ಗದರ್ಶಿ ರಾಜತಾಂತ್ರಿಕತೆಯ ವಿವರಣಾ ಶೈಲಿ, ಮುಗ್ಧಳಾಗಿದ್ದು ಸಾಹಸೀ ಪ್ರವೃತ್ತಿಯ ಮೆರೆಯುವ ವಿರಳ ವ್ಯಕ್ತಿತ್ವದ ಶಬಲೆ, ಜೈನ ಮತಾಚರಣೆ, ಸಲ್ಲೇಖನ ವೃತ, ಸಂಬಂಧ ಗಳ ನಡುವಿನ ವೈಷಮ್ಯ, ಪೋರ್ಚುಗೀಸರ ಮಣಿಸಲು ಹೂಡುವ ಗೂಢಚರ್ಯ,  ವೈಯಕ್ತಿಕ ಆಸೆ, ಆಕಾಂಕ್ಷೆಗಳನೆಲ್ಲ ಹತ್ತಿಕ್ಕಿ ಸಮಚಿತ್ತ ನಿರ್ಲಿಪ್ತ ಭಾವದರ್ಶಿಯಾಗಿ ನಾಡಿಗಾಗೇ ತನ್ನ ಜೀವಮಾನ ಸವೆಸಿದ ಮಹಾರಾಣಿ, ಗೋವಾದಲ್ಲಿ ನೆಲೆಯೂರಿದ್ದ ಮತಾಂಧತೆ, ಅಲ್ಲಿನವರ ಮೃಗೀಯ ವರ್ತನೆ ಹೀಗೆ ಈ ಎಲ್ಲಾ ವಿಭಿನ್ನ ವಸ್ತು ವಿಷಯದ ಸುತ್ತ ಕಥೆ ಕುತೂಹಲಕಾರಿಯಾಗಿ ಹೆಣೆಯಲ್ಪಟ್ಟಿದೆ. ಪುಟ ತಿರುವಿದಷ್ಟು ಹೆಚ್ಚು ಉತ್ಸುಕತೆ, ಚಿಂತನೆಗೆ ನಮ್ಮನ್ನು ಕೊಂಡೊಯ್ಯುತ್ತಾ ಸಾಗುವುದೇ ಇದರ  ವೈಶಿಷ್ಟ್ಯ.

ಎಲ್ಲಿಯೂ ತನ್ನನ್ನು ತಾನೇ ಮೆರೆಸಿಕೊಳ್ಳದ, ಚರಿತ್ರೆಯಲ್ಲಿ ಉಳಿಯಲು ಶಾಸನವ ಬರೆಸದ, ಎಲ್ಲಾ ಹೆಣ್ಣು ಮಕ್ಕಳಿಗೂ ಸ್ಫೂರ್ತಿದಾಯಕ ವ್ಯಕ್ತಿತ್ವದ ಗಣಿ ಈ ನಗರೆಯ ರಾಣಿ ಭೈರಾದೇವಿ. ಇಷ್ಟು ದೀರ್ಘ ಕಾಲ ಶರಾವತಿ ದಂಡೆಯನಾಳಿದ, ಜನರ ಅಂತರಾಳದಿ ಮನೆಮಾಡಿದ ಸಾಳುವ ಮನೆತನದ ಕಳಶ  ಚೆನ್ನಭೈರಾದೇವಿ ನಮ್ಮ ಇತಿಹಾಸದ ಪುಟಗಳಲ್ಲೇಕೆ ಮರೆಯಾದಳೆoಬುದೇ ಯಕ್ಷ ಪ್ರಶ್ನೆಯಾಗಿ ಕಾಡುವುದು ಓದುಗನಿಗೆ. ಅಲ್ಲದೇ ಇದೊಂದು ವಿಷಾದವೇ ಸರಿ.

ಈಗಲಾದರೂ ಇಂತಹ ರೋಮಾಂಚನಕಾರಿ, ಅದ್ಭುತ  ನಾಡಿನ ಚರಿತೆಯನ್ನು ನಮ್ಮ ಮುಂದೆ ಕಾದಂಬರಿ ರೂಪದಲ್ಲಿ ತೆರೆದಿಟ್ಟ ಗಜಾನನ ಶರ್ಮರವರಿಗೆ ಅನಂತಾನಂತ ಅಭಿನಂದನೆಗಳು.


Leave a Reply

Back To Top