ನನ್ನಿಷ್ಟದ ಕಾದಂಬರಿ ಶ್ರೀಕೃಷ್ಣ ಆಲನಹಳ್ಳಿ ಅವರ ಪರಸಂಗದ ಗೆಂಡೆತಿಮ್ಮ- ವೀಣಾ ನಿರಂಜನ

ಕೃತಿ : ಪರಸಂಗದ ಗೆಂಡೆತಿಮ್ಮ
ಲೇಖಕರು : ಶ್ರೀಕೃಷ್ಣ ಆಲನಹಳ್ಳಿ
ಪ್ರಕಾಶಕರು: ಐಬಿಎಚ್ ಪ್ರಕಾಶನ
ಪ್ರಕಟಣೆಯ ವರ್ಷ: 1974
ಇತ್ತೀಚಿನ ಮುದ್ರಣ: 2021
ಬೆಲೆ: 160 ರೂಪಾಯಿಗಳು

    ಒಂದು ಕಾಲಕ್ಕೆ ತ್ರಿವೇಣಿ, ಕೆ ಟಿ ಗಟ್ಟಿಯವರಿಂದ ಆರಂಭಿಸಿ ಕುವೆಂಪು, ಕಾರಂತ, ತೇಜಸ್ವಿ, ಲಂಕೇಶ್, ಅನಂತಮೂರ್ತಿ, ಶಾಂತಿನಾಥ ದೇಸಾಯಿ ಮುಂತಾದ ಕನ್ನಡದ ಖ್ಯಾತ ಲೇಖಕರ ಕಾದಂಬರಿಗಳನ್ನು ದಂಡಿಯಾಗಿ ಓದಿದ್ದೆ. ಆದರೆ ಕನ್ನಡದ ವಿಶಿಷ್ಟ ಲೇಖಕರೆಂದು ಪ್ರಸಿದ್ಧರಾದ ಶ್ರೀಕೃಷ್ಣ ಆಲನಹಳ್ಳಿಯವರ ಕೃತಿಗಳನ್ನು ಓದಿರಲಿಲ್ಲ.  ಕೇವಲ ಅವರ ಕೆಲವು ಬಿಡಿ ಕವಿತೆಗಳು ಮತ್ತು ಒಂದೆರಡು ಕತೆಗಳನ್ನು ಮಾತ್ರ ಓದಿದ್ದೆ. ಯಾಕೋ ಅವರು ನಿಷೇಧಿತ ಲೇಖಕರಾಗಿ ನನ್ನ ಪಟ್ಟಿಯಿಂದ ಹೊರಗೆ ಉಳಿದಿದ್ದರು. ನನ್ನ ವೈಯುಕ್ತಿಕ ಜಂಜಾಟಗಳಿಂದ ಓದಿನಿಂದ ಸುಮಾರು ವರ್ಷ ದೂರವೇ ಉಳಿದಿದ್ದ ನನಗೆ ನನ್ನ ಸಹೋದ್ಯೋಗಿಯೊಬ್ಬರು “ಭುಜಂಗಯ್ಯನ ದಶಾವತಾರಗಳು ನನ್ನ ಬದುಕಿನ ಕಠಿಣ ಸಮಯಗಳಲ್ಲಿ ನನ್ನಲ್ಲಿ ಚೈತನ್ಯ ತುಂಬುತ್ತ ಬಂದಿದೆ” ಎಂದು ಯಾವಾಗಲೂ ಹೇಳುತ್ತಿದ್ದರು. ಆವಾಗ ಇಂಥ ಲೇಖಕರನ್ನು ನಾನು ಓದಿಯೇ ಇಲ್ಲವಲ್ಲ ಅಂದುಕೊಳ್ಳುತ್ತಿದ್ದೆ. ಇತ್ತೀಚಿಗೆ ಅವರ ಕುರಿತು ಒಂದು ಬರಹ ಓದಲು ಸಿಕ್ಕು ಅವರ ಕೃತಿಗಳನ್ನು ಓದಬೇಕು ಎಂದು ಬಲವಾಗಿ ಅನ್ನಿಸಿ ಓದತೊಡಗಿದ್ದೆ. ಅವರ ಬಹುಚರ್ಚಿತ ಕಾದಂಬರಿಗಳು ನನ್ನಲ್ಲಿ ಕುತೂಹಲ ಹುಟ್ಟಿಸಿದವು. ಹೀಗಾಗಿ ಅವರ ಹೆಸರಾಂತ ಕಾದಂಬರಿಗಳನ್ನು ಓದುತ್ತ ಹೋದೆ. ಇಲ್ಲಿ ನಾನು ಈಗ ಹೇಳ ಹೊರಟಿರುವುದು ಭುಜಂಗಯ್ಯನ ಬಗ್ಗೆ ಅಲ್ಲ, ಅವರ ಇನ್ನೊಬ್ಬ ನಾಯಕ ಗೆಂಡೆತಿಮ್ಮನ ಬಗ್ಗೆ.



        ಮಾನವನ ವಿಕಾಸದ ಹಾದಿ ನಿರಂತರ ಚಲನಶೀಲ. ಬದಲಾವಣೆ ಎನ್ನುವುದು ಪ್ರತಿಕ್ಷಣದ, ಪ್ರತಿದಿನದ ಪ್ರಕ್ರಿಯೆ. ಆದರೆ ಬದಲಾವಣೆಯನ್ನು ಒಪ್ಪಿಕೊಳ್ಳುವುದು ಮಾತ್ರ ಸುಲಭವಲ್ಲ. ಇಂಥ ಒಂದು ಕ್ರಿಯೆ ನಾಗರಿಕತೆಯ ಉಗಮದಿಂದಲೂ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತ ತಲ್ಲಣಗಳೊಂದಿಗೆ ಪ್ರಯೋಗಶೀಲವಾಗಿ ನಡೆಯುತ್ತ ಬಂದಿದೆ. ಗೆಂಡೆತಿಮ್ಮನ ಕತೆಯು ಇಂಥದೇ ಒಂದು ಸ್ಥಾಪಿತ ಸಂಸ್ಕೃತಿ ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ಚಿತ್ರಿಸುತ್ತದೆ. ಗೆಂಡೆತಿಮ್ಮ ಮತ್ತು ಆತನ ಹೆಂಡತಿ ಮರಂಕಿ ಇಂತಹ ಆಧುನಿಕತೆಯನ್ನು ನಾಗರಿಕತೆಯ ಕಟ್ಟಕಡೆಯ ಹಳ್ಳಿಗಳಿಗೆ ತಲುಪಿಸುವ ರಾಯಭಾರಿಗಳಾದರೆ, ಗೌವಳ್ಳಿ ಎಂಬ ಗ್ರಾಮವು ಈ ಹೊಸತನದ ಗಾಳಿಗೆ ತನ್ನನ್ನು ಒಡ್ಡಿಕೊಳ್ಳುವ ಪ್ರಯೋಗಶಾಲೆಯಾಗಿದೆ. ಈ ಆಧುನಿಕತೆಗೆ ಒಗ್ಗಿ ಕೊಳ್ಳ ಬೇಕಾದಾಗ ಅಲ್ಲಿಯ ಜನಸಮೂಹ  ಅನುಭವಿಸುವ ವಿರೋಧ, ಸಂಕಷ್ಟ ಮತ್ತು ತಲ್ಲಣಗಳ ಚಿತ್ರಣವೇ ಈ ಕೃತಿಯ ಕತೆಯಾಗಿದೆ.

        ಗೆಂಡೆತಿಮ್ಮ ಸಾಲುಂಡಿ ಎಂಬ ಹಳ್ಳಿಯ ಸೀದಾ ಸಾದಾ ಮನುಷ್ಯ. ನಮ್ಮ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಎಡವಟ್ಟು ತರುಣ. ಅವನು ಪ್ರಸಂಗಗಳನ್ನು ರಸವತ್ತಾಗಿ ಹೇಳುತ್ತಿದ್ದ ಕಾರಣ ಅವನಿಗೆ ಪರಸಂಗದ ಗೆಂಡೆತಿಮ್ಮ ಎಂಬ ಅಡ್ಡ ಹೆಸರು ಬಂದಿತ್ತು. ತಿಮ್ಮ ಸಾಲುಂಡಿಯಿಂದ ಮೈಸೂರಿಗೆ ಬಂದು, ಮೈಸೂರಿನಲ್ಲಿ ದಿನ ನಿತ್ಯ ಅಗತ್ಯವಿರುವ ಸಾಮಾನುಗಳನ್ನು ಕೊಂಡುಕೊಂಡು, ಅವನ್ನು ಗೌವಳ್ಳಿಯೆಂಬ ಬಸ್ ಸಂಚಾರ ಸೇರಿದಂತೆ ಇತರೇ ಯಾವ ನಾಗರಿಕ ಸೌಲಭ್ಯಗಳಿಲ್ಲದ ಕಾಡು ಹಳ್ಳಿಗೆ ತನ್ನ ಗೂಡೆಯಲ್ಲಿ ಹೊತ್ತುಕೊಂಡು ಹೋಗಿ ಮಾರಾಟ ಮಾಡುವ ಒಬ್ಬ ವ್ಯಾಪಾರಿ. ತಾಯಿ, ಅಣ್ಣ ಅತ್ತಿಗೆ, ಅಣ್ಣನ ಮಗಳಿರುವ ಅವರ ಪುಟ್ಟ ಸಂಸಾರಕ್ಕೆ ಪೇಟೆಯ ಎಲ್ಲ ಪಟ್ಟುಗಳನ್ನು ಪಳಗಿಸಿಕೊಂಡ ಮರಂಕಿ ಎಂಬ ಚೆಲುವೆ ಗೆಂಡೆತಿಮ್ಮನನ್ನು ಮದುವೆಯಾಗಿ ಬರುವವರೆಗೆ ಅವರ ಸಂಸಾರ ನೆಮ್ಮದಿಯಿಂದಲೇ ಇತ್ತು. ಆಧುನಿಕತೆಯ ಸೋಂಕಿಲ್ಲದ ಈ ಮನೆಗೆ ಮರಂಕಿ ಕಾಲಿಟ್ಟಾಗ ಇದ್ದ ಅಲ್ಲಿಯ ಪರಿಸ್ಥಿತಿಗೆ ಹೊಂದಿ ಕೊಳ್ಳುವುದು ಸಾಧ್ಯವಾಗದಿದ್ದಾಗ ಅವಳು ಅಲ್ಲಿ ಸುಧಾರಣೆಗಳನ್ನು ತರಲು ಪ್ರಯತ್ನ ನಡೆಸಿದ್ದು ಅವರ ಮನೆ ಇಬ್ಭಾಗವಾಗುವುದಕ್ಕೆ ಕಾರಣವಾಗುತ್ತದೆ. ವಾರಕ್ಕೆ ಒಂದೇ ಸಲ ಸ್ನಾನ ಮಾಡುತ್ತಿದ್ದ, ಇಜ್ಜಲು, ಬೇವಿನಕಡ್ಡಿಯಿಂದ ಹಲ್ಲುಜ್ಜುತ್ತಿದ್ದ, ತಲೆಗೆ ಕೈಯೆಣ್ಣೆ ಹಚ್ಚುತ್ತಿದ್ದ, ಚೌಳಿನಿಂದ ಸೀರೆ ಒಗೆಯುತ್ತಿದ್ದ ಮನೆಗೆ ನಂಜನಗೂಡಿನ ಹಲ್ಲುಪುಡಿ, ಸಾಬೂನು, ಸ್ನೋ ಪೌಡರ್, ಗಮನದೆಣ್ಣೆ ಮುಂತಾದವು ಮರಂಕಿಯಿಂದ ಪರಿಚಯವಾದವಲ್ಲದೇ ದಿನ ಬಿಟ್ಟು ದಿನ ಸ್ನಾನ ಮಾಡುವುದು, ಸೀರೆ ಬದಲಿಸುವುದು, ದಿನವೂ ಬೆಳಿಗ್ಗೆ ಮುಖ ತೊಳೆದು ಪೌಡರ್ ಹಚ್ಚಿ ಕೆಲಸ ಶುರು ಮಾಡುವುದು, ಧೂಳು ತುಂಬಿದ ಮನೆಯನ್ನು ಸ್ವಚ್ಛಗೊಳಿಸುವದು, ಕೊಳಕು ಬಚ್ಚಲನ್ನು ತೊಳೆಯುವುದು ಮೊದಲಾದವುಗಳು ಆಚರಣೆಗೆ ಬಂದಿದ್ದು ಮನೆಯ ಸದಸ್ಯರಿಗೆ ಅಸಹನೀಯ ಅನ್ನಿಸತೊಡಗಿದವು. ಜೊತೆಗೆ ಮರಂಕಿ ಧರಿಸುತ್ತಿದ್ದ ಒಳ ಉಡುಪುಗಳು ಇನ್ನಷ್ಟು ಕೆರಳುವಂತೆ ಮಾಡಿದವು. ಹೀಗೆ ಆಧುನಿಕತೆ ಅವರು ತಲೆತಲಾಂತರದಿಂದ ನಂಬಿಕೊಂಡು ಬಂದ ಮೌಲ್ಯಗಳನ್ನೇ ಬುಡಮೇಲು ಮಾಡಿದ್ದು ಸಂಘರ್ಷಕ್ಕೆ ಮೊದಲಾಗುತ್ತದೆ.

       ಈ ಸಂಘರ್ಷ ಅವರ ಮನೆಗೆ ಮಾತ್ರ ಸೀಮಿತವಾಗದೇ ಇಡೀ ಹಳ್ಳಿಗೆ ಚರ್ಚೆಯ ವಿಷಯವಾಗುತ್ತದೆ. ಆದರೆ ನಿಜವಾದ ಸವಾಲು ಎದುರಾಗುವುದು ಸಾಲುಂಡಿಯಲ್ಲಿ ಅಲ್ಲ, ತಿಮ್ಮ ವ್ಯಾಪಾರಕ್ಕೆ ಹೋಗುತ್ತಿದ್ದ ಗೌವಳ್ಳಿಯಲ್ಲಿ.  ತಿಮ್ಮ ಮರಂಕಿಯ ಕುರಿತು ರಸವತ್ತಾಗಿ ಹೇಳುವುದರ ಮೂಲಕ ಗೌವಳ್ಳಿಯಲ್ಲಿ ಒಂದು ಸಂಚಲನವನ್ನು ಉಂಟು ಮಾಡುತ್ತಾನೆ. ಇದಕ್ಕೆ ಮುಖ್ಯ ತಿರುವು ಬರುವುದು ಗೌವಳ್ಳಿಯ ಗೌಡರಾದ ಮಾಲೇಗೌಡರ ಮಗಳು ರತ್ನಿಯ ಮದುವೆಯ ಒಡಂಬಡಿಕೆಯಿಂದ. ಮಾಲೇಗೌಡರು ಮತ್ತು ಮನೆಯವರು ತಿಮ್ಮನಿಗೆ ಆಪ್ತರು. ವ್ಯಾಪಾರಕ್ಕೆಂದು ಗೌವಳ್ಳಿಗೆ ಬಂದಾಗಲೆಲ್ಲ ತಿಮ್ಮ ಅವರ ಮನೆಯ ಜಗಲಿಯಲ್ಲೇ ಉಳಿದು ಕೊಳ್ಳುತ್ತಿದ್ದ. ಮಾಲೇಗೌಡರ ಮಗಳು ರತ್ನಿ. ಅವಳ ಮದುವೆ ಪೇಟೆಯ ಹುಡುಗನೊಂದಿಗೆ ಗೊತ್ತಾಗುತ್ತದೆ. ಆ ಮೂಲಕ ರತ್ನಿಯ ಬದುಕಲ್ಲಿ ಹೊಸಬಣ್ಣ ಮೂಡ ತೊಡಗುತ್ತದೆ. ತಿಮ್ಮ ಮರಂಕಿಯರ ಮೂಲಕ ಪೇಟೆಯ ತಳುಕಿನ ವಸ್ತುಗಳು ರತ್ನಿಯನ್ನು ತಲುಪುತ್ತವೆ. ವಿಷಯ ಗೌವಳ್ಳಿಯ ಹೆಣ್ಣುಮಕ್ಕಳ ಕಿವಿಗೆ ತಲುಪಿದಾಗ ಅವರೆಲ್ಲ ಈ ಆಧುನಿಕತೆಯ ಆಕರ್ಷಣೆಗೆ ಮತ್ತು ಪ್ರಲೋಭನೆಗೆ ಒಳಗಾಗುತ್ತಾರೆ. ಆ ಹಳ್ಳಿಯ ಹೆಣ್ಣುಮಕ್ಕಳು ಕದ್ದು ಮುಚ್ಚಿ ಗೆಂಡೆತಿಮ್ಮನಿಂದ ತಮಗೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳ ತೊಡಗುತ್ತಾರೆ.  ಇದರಿಂದ ಅವನ ವ್ಯಾಪಾರ ಹೆಚ್ಚಿ ಲಾಭವೂ ದ್ವಿಗುಣಗೊಂಡಿತ್ತು.

 “ಉಜ್ವಲವಾದ ನಾಗರಿಕತೆಯಿಂದ ಜಗಜಗಿಸುವ ಮೈಸೂರು ನಗರಕ್ಕೆ ಎಷ್ಟು ಸಮೀಪದಲ್ಲಿದ್ದರೂ ಗೌವಳ್ಳಿ ತನ್ನ ಸಹಸ್ರಾರು ವರ್ಷಗಳ ಜೀವನ ಪದ್ಧತಿಯಿಂದ ಕಿಂಚಿತ್ತೂ ಬದಲಾಗಿರಲಿಲ್ಲ. ಯಾವುದೇ ನಾಗರಿಕ ಬಯಕೆಯೂ ಆ ಊರಿನ ಪಾಲಿಗೆ ಅನಿಷ್ಟ. ತಮ್ಮ ಜಗತ್ತು ಬೇರೆ, ಆ ಪ್ಯಾಟೆಯವರ ಜಗತ್ತು ಬೇರೆ. ತಮ್ಮ ಅವರ ರೀತಿ ನೀತಿಗಳೂ ಬೇರೆಬೇರೆ. ಇಂಥ ಸ್ಥಿತಿಯಲ್ಲಿದ್ದ ಗೌವಳ್ಳಿಯ ಜೀವನಕ್ಕೊಂದು ಹೊಸಬಣ್ಣ ಬಂದಿತ್ತು ಮರಂಕಿಯ ಮೂಲಕ. ಅವಳ ಬಯಕೆಗಳೇ ಗೌವಳ್ಳಿಯ ಹೆಣ್ಣುಮಕ್ಕಳ ಬಯಕೆಗಳಾಗಿ ರೂಪಾಂತರ ಗೊಂಡಿದ್ದವು. ”  ಹೀಗೆ ಗೌವಳ್ಳಿಗೆ ಈ ಆಧುನಿಕತೆಯ ಆಗಮನ ಸೃಷ್ಟಿಸಿದ ಕೋಲಾಹಲ ಅಷ್ಟಿಷ್ಟಲ್ಲ. ಅದರಿಂದ ಗೆಂಡೆತಿಮ್ಮನಲ್ಲೂ  ತಾನು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬ ದ್ವಂದ್ವ ಶುರುವಾಗಿ ಅವನು ಮಾನಸಿಕವಾಗಿ ಕುಗ್ಗುತ್ತಾನೆ. ಈ ಕಾರಣಕ್ಕಾಗಿಯೇ ಗೆಂಡೆತಿಮ್ಮ ಅಪರಾಧಿಯಾಗಿ ಗ್ರಾಮದ ಪಂಚಾಯಿತಿಯ ಮುಂದೆ ನಿಲ್ಲಬೇಕಾಗುತ್ತದೆ. ಸೂಕ್ಷ್ಮ ಮನಸ್ಸಿನ ಅವನು ಇದರಿಂದ ತುಂಬ ನೊಂದುಕೊಳ್ಳುತ್ತಾನೆ. ಅದೇ ಸ್ಥಿತಿಯಲ್ಲಿ ಸಾಲುಂಡಿಗೆ ನಸುಕಿನಲ್ಲಿ ಬಂದವನು ಹೆಂಡತಿ ಮರಂಕಿಯನ್ನು ಹಳ್ಳಿಯ ಮೇಷ್ಟ್ರು ಶಿವಯ್ಯನ ಜೊತೆಗೆ ನೋಡಿ ಆಘಾತಗೊಳ್ಳುತ್ತಾನೆ. ತಿಮ್ಮ ಮತ್ತು ಮರಂಕಿಯರ ದುರಂತ ಅಂತ್ಯದ ಮೂಲಕ ಕತೆ ಕೊನೆಗೊಳ್ಳುತ್ತದೆ.

       ಮರಂಕಿಯಿಂದ ಚಾಲನೆಗೊಂಡ ಈ ಪ್ರಕ್ರಿಯೆ ರತ್ನಿಯ ಮೂಲಕ ಇಡೀ ಹಳ್ಳಿಯನ್ನು ಒಳಗೊಂಡು ಮುಂದುವರಿಯುತ್ತದೆ. ಬದಲಾವಣೆ ಪ್ರಕೃತಿ ನಿಯಮ. ಬದುಕು ನಿಂತ ನೀರಲ್ಲ. ಈ ಸಂಘರ್ಷಕ್ಕೆ ಕೊನೆಯೆಂಬುದೇ ಇಲ್ಲ. ಕಾಲ ಕಾಲಕ್ಕೆ ಅದರ ಸ್ವರೂಪ ಬದಲಾದರೂ ಅದು ನಿರಂತರ ಕ್ರಿಯೆ. ಮೂಲ ಸಂಸ್ಕೃತಿ ಮತ್ತು ಬದಲಾಗುತ್ತಿರುವ ಮೌಲ್ಯಗಳ ನಡುವಿನ ಬಿಕ್ಕಟ್ಟು ಇಂದಿಗೂ ಈ ಕೃತಿಯನ್ನು ಸಮಕಾಲೀನವಾಗಿ ಜೀವಂತವಿರಿಸಿದೆ.


2 thoughts on “ನನ್ನಿಷ್ಟದ ಕಾದಂಬರಿ ಶ್ರೀಕೃಷ್ಣ ಆಲನಹಳ್ಳಿ ಅವರ ಪರಸಂಗದ ಗೆಂಡೆತಿಮ್ಮ- ವೀಣಾ ನಿರಂಜನ

  1. ಆಲನಹಳ್ಳಿ ಕೃಷ್ಣ‌ ನನ್ನ‌ಇಷ್ಟದ‌ ಲೇಖಕ. ಆಲನಹಳ್ಳಿ ಅವರ ಕತೆ ತಪ್ತ, ಕವಿತೆಗಳು, ಕಾದಂಬರಿ ಭುಜಂಗಯ್ಯನ ದಶಾವತಾಗಳು ಓದಿದ್ದೆ. ಆದರೆ ಅವರ ಪರಸಂಗದ ಗೆಂಡೆ ತಿಮ್ಮ ಕಾದಂಬರಿ ಓದಿರಲಿಲ್ಲ. ಈ ಸಿನಿಮಾ ಸಹ ನೋಡಿದರೂ,‌ ಕತೆ ಮರೆತು ಹೋಗಿದೆ. ಹಾಡು ನೆನಪಿದೆ.
    ಪರಸಂಗದ ಗೆಂಡೆತಿಮ್ಮನನ್ನು ನೀವು ಇಲ್ಲಿ ಪ್ರಜೆಂಟ್‌ ಮಾಡಿದ‌ ರೀತಿ‌ ಸೊಗಸು. ಗೆಂಡೆತಿಮ್ಮ,‌ಮರಂಕಿಯ ಸಾವು ಹೇಗಾಯಿತು ಎಂದು ಹೇಳದೆ, ಓದುಗರು ಮೂಲ‌ಕೃತಿ ಓದುವಂತೆ ಪ್ರೇರೆಪಿಸಿದ್ದೀರಿ. ಇದು ಮಹತ್ವದ್ದು.
    ವಿಮರ್ಶೆ ಹೀಗೆ ಕೃತಿಯತ್ತ ಕೈದೀವಿಗೆಯಂತಿರಬೇಕು.
    ಆಲನಹಳ್ಳಿ ಅವರನ್ನು ‌ನೆನಪಿಸಿದ್ದಕ್ಕೆ ಥ್ಯಾಂಕ್ಯೂ ನಿಮಗೆ
    ….

Leave a Reply

Back To Top