ಶರಣ ಆದಯ್ಯ ಲೇಖನ-ನಂರುಶಿ ಕಡೂರು.

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ,
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ,
ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ,
ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೆ.

       ಶರಣ ಪರಂಪರೆಗೆ ಮಾರುಹೋಗಿ ಸೌರಾಷ್ಟ್ರದಿಂದ ಬಂದಂತವರು ಶರಣ ಆದಯ್ಯರವರು. ಇವರ ವಚನಗಳ ಅಂಕಿತ ಸೌರಾಷ್ಟ್ರ ಸೋಮೇಶ್ವರ.

     ಈ ವಚನದಲ್ಲಿ ಶರಣರು ತನುವಿಗೆ ಮೋಹವಿರಬಾರದು, ಈ “ದೇಹ ಮೂಳೆ ಮಾಂಸದ ತಡಿಕೆ” ಅಷ್ಟೇ. ಯಾವುದೇ ಆಸೆ ಆಮಿಷಗಳು ಇರಬಾರದು. ಇದು ಬೇಕು, ಅದು ಬೇಕು ಎನ್ನುವ ಬಾಹ್ಯ ಸೌಂದರ್ಯಕ್ಕೆ ಮಾರು ಹೋಗುವುದು ಬೇಡ. ಅಂತರಂಗದಲ್ಲಿ ಪರಿಶುದ್ಧವಿರಬೇಕು, ಹೊರಗಿನ ಸೌಂದರ್ಯಕ್ಕೆ ಬೆಲೆ ಕೊಡಬಾರದು. “ಆಸೆಯೆಂಬುದು ಅರಸಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯ” ಈ ಅಣ್ಣನ ಮಾತಿನಲ್ಲಿ, ಎಲ್ಲವನ್ನು ತ್ಯಜಿಸಿದಾಗ ಮಾತ್ರ ಶಿವಶರಣನಾಗಲು ಸಾಧ್ಯ. ಮನದಲ್ಲಿ ಕಾಮ, ಕ್ರೋಧ, ಮದ, ಮೋಹ, ಲೋಭ, ಮತ್ಸರಗಳೆಂಬ ಷಡ್ವರ್ಗಗಳು ಇದ್ದರೆ ಶರಣನಾಗುವುದಿಲ್ಲ. ಯಾವುದೇ ವ್ಯಕ್ತಿ ತನ್ನ ಬಾಹ್ಯ ಸೌಂದರ್ಯದಿಂದ ಮನುಷ್ಯನೆನಿಸದೆ, ಆಂತರ್ಯದಲ್ಲಿ ಆ ಗುಣಗಳನ್ನು ಇಟ್ಟುಕೊಂಡ ಮೃಗವು ಕೂಡ ಮನುಷ್ಯನಾಗಬಹುದು. ಈಗ ಇರುವವರೆಲ್ಲ ಗೋಮುಖ ವ್ಯಾಘ್ರಗಳೇ. ಮಾತಲ್ಲಿ ಒಂದು ಮನದಲ್ಲಿ ಒಂದು, ಬಣ್ಣ ಬದಲಿಸುವ ಜನರೇ ಹೆಚ್ಚು. ಮುಖವಾಡದ ಜೀವನ ಶಾಶ್ವತವಲ್ಲ. ಒಂದಲ್ಲ ಒಂದು ದಿನ ತಲೆಗೆ ಏರಿದ ಮುಖವಾಡ ಕಳಚಲೇ ಬೇಕು. ಸುಳ್ಳಿಗೆ ಬಳಿದ  ಬಣ್ಣ ಸತ್ಯದ ಮಳೆಯಲ್ಲಿ ನೆನೆದು ಬಣ್ಣ ಕಳಚಲೇ ಬೇಕೆಂಬ ಸಂಗತಿ ಜಗಕೆ ತಿಳಿಯಲೇ ಬೇಕು.

         ಮನದೊಳಗೆ ನಾನು, ನನ್ನದು, ನನ್ನಿಂದಲೇ ಎನ್ನುವ ಭಾವವನ್ನು ಮೊದಲು ಬಿಡಬೇಕು. ” ಹಮ್ಮು ಮಾಡಿ ಬ್ರಹ್ಮ ಕೆಟ್ಟ” ಎಂಬ ಮಾತಿನಂತೆ ಅಹಂಕಾರ ಇದ್ದ ಮಾನವನಿಗೆ ಹೆಚ್ಚು ಬಾಳಿಕೆ ಇಲ್ಲ. ನನ್ನಿಂದಲೇ ಎಲ್ಲಾ. ನಾನೇ ಇವೆಲ್ಲದರ ಸೃಷ್ಟಿಕರ್ತ ಎಂದ ಬ್ರಹ್ಮನಿಗೆ ನಾಶ ತಪ್ಪಿದ್ದಲ್ಲ ಎಂದಾಗ ನಮ್ಮಂತಹ ಹುಲು ಮಾನವರು ಯಾವ ಲೆಕ್ಕ. ಮತ್ತು ಪ್ರಾಣದ ಬಗ್ಗೆ ಅತಿಯಾಸೆಯನ್ನು ಇಟ್ಟುಕೊಳ್ಳಬಾರದು. ಈ ಜೀವ ಎಂಬುದು “ನೀರ ಮೇಲಿನ ಗುಳ್ಳೆ” ಯಂತೆ. ಇದರ ಅಂತ್ಯ ಯಾವಾಗ ಎಂದು ತಿಳಿದವರಾರು? ಜಗವೇ ಒಂದು ನಾಟಕರಂಗ, ನಮ್ಮ ನಮ್ಮ ಪಾತ್ರಗಳು ಮುಗಿದಾಗ ತೆರೆಯ ಮರೆಗೆ ಸರಿಯಲೇ ಬೇಕು. ಸರಿಯದೇ ಅಲ್ಲೇ ಇದ್ದರೆ, ಉಳಿದ ಪಾತ್ರಗಳಿಗೆ ತೊಂದರೆ ಮಾಡಿದಂತೆ. ಅವರಿಗಾಗಿ ಸ್ಥಳ ಕಲ್ಪಿಸಿ ನಾವು ತೆರಳಬೇಕು.      

     ನಮ್ಮ ಚಿತ್ತದಲ್ಲಿ ಏನನ್ನು ಅಪೇಕ್ಷಿಸದೆ, ಎಲ್ಲವು ಪರರಿಗಾಗಿ, ಪರರ ಹಿತಕ್ಕಾಗಿ, ನನಗೇನು ಇಲ್ಲ, ನಾನು ಬದುಕುವುದು ಕೂಡ ಪರರಿಗಾಗಿಯೇ ಎನ್ನುವ ವಿರಕ್ತಿ ಭಾವವನ್ನು ಇಟ್ಟುಕೊಂಡು ಕೆಲವು ವಿಷಯಗಳ ಬಗ್ಗೆ ತಾತ್ಸರತೆ ಇರಬೇಕು. ವಿರಕ್ತನಾಗುವುದು ಸುಲಭದ ಮಾತಲ್ಲ. ಪರರ‌ ಹಿತಕ್ಕಾಗಿ ಸಾಧನೆಯ ವಿರಕ್ತ ಜೀವನ ನಡೆಸುವುದು ತುಂಬಾ ಕಷ್ಟದ ವಿಷಯ. ನಮಗೆ ಯಾವುದೂ ಶಾಶ್ವತವಲ್ಲ ಅಂತೆಯೇ ನಾವು ಕೂಡ ಶಾಶ್ವತವಲ್ಲ. ಮತ್ತು ಯಾವುದು ಸ್ವಂತದಲ್ಲ. ಅದಕ್ಕಾಗಿ ಎಲ್ಲಾ ವಿಷಯಗಳ ಬಗ್ಗೆಯಲ್ಲದಿದ್ದರೂ, ನಮಗೆ ಮಾರಕವಾಗುವ ವಿಷಯಗಳಿಂದಲಾದರೂ ಅಲಕ್ಷ್ಯವನ್ನು ಹೊಂದಿ, ಸಾಧ್ಯವಾಗುವಷ್ಟು ತಿರಸ್ಕರಿಸಬೇಕು. ನಮ್ಮ ಭಾವನೆಗಳಲ್ಲಿ ದಿಗಂಬರನಾಗಬೇಕು. ನಮ್ಮ ಚಿಂತನೆಗಳು ಗಗನದೆತ್ತರಕೆ ಮುಟ್ಟುವಂತಿರಬೇಕು, ವಿಶಾಲ ಮನಸ್ಥಿತಿಯನ್ನು ಇಟ್ಟುಕೊಳ್ಳಬೇಕು.

      ಈ ನಿರ್ಮೋಹ, ನಿರಂಹಕಾರ, ನಿರ್ಭಯ, ನಿರಪೇಕ್ಷ, ಉದಾಸೀನ, ದಿಗಂಬರತೆಯನ್ನು ಮೈಗೂಡಿಸಿಕೊಂಡಾಗ  ಜ್ಞಾನವೆಂಬುದು ಸುಜ್ಞಾನವಾಗಿ ಪರಮಾನಂದವಾದಾಗ ಮಾತ್ರ ನನ್ನ ಆರಾಧ್ಯ ದೈವ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗದಲ್ಲಿ ಅಡಗಿರುವ ದೇವ ಎಲ್ಲೆಲ್ಲಿಯೂ ಕಾಣುವನು. ಅವನನ್ನು ಹುಡುಕಿಕೊಂಡು ಬೇರೆಲ್ಲೂ ಹೋಗುವ ಅನಿವಾರ್ಯತೆ ಇಲ್ಲ. ನಾವಿದ್ದಲ್ಲಿಗೆ ಸೋಮೇಶ್ವರ ಹುಡುಕಿಕೊಂಡು ಬರುವನೆಂದು ಆದಯ್ಯನವರು ಕಿವಿಮಾತು ಹೇಳಿದ್ದಾರೆ.


One thought on “ಶರಣ ಆದಯ್ಯ ಲೇಖನ-ನಂರುಶಿ ಕಡೂರು.

  1. ಸೂಪರವಚನ
    ನಿರ್ವಚನ
    ಧನ್ಯವಾದಗಳು
    ಅಕ್ಕಮಹಾದೇವಿ

Leave a Reply

Back To Top