ಕಾವ್ಯ ಸಂಗಾತಿ
ಸಂತೆಬೆನ್ನೂರು ಫೈಜ್ನಟ್ರಾಜ್
ಎರಡು ಕವಿತೆಗಳು
ಬಿಳಿಮೊಟ್ಟೆಗಳೆಲ್ಲವೂ ಕಾಗೆಯದಲ್ಲ!
ಒಲವೆಂಬುದು
ಸಿಹಿ ವಿಷ
ಸಿಹಿಯೆಂದೇ ಸವಿಯಬೇಕು
ವಿಷವಿದ್ದರೂ ನುಂಗಬೇಕು
ಬದುಕುವ ಭರವಸೆ
ಒಲವಿಗಿದೆ
ಎದೆಯ ತಂತಿ ಕಿತ್ತರೂ ಸಣ್ಣ ದನಿ
ಮಿಡಿಯುತ್ತಿರಬೇಕು
ಬರಿ ಬೆಲ್ಲ ಎಲ್ಲರಿಗೆಲ್ಲಿದೆ
ಮೈ ತುಂಬಾ ನೋವ ಬೇವ ಘಮವಿದ್ದರೂ
ನಗುವ ಸಿಹಿ
ಧರಿಸಿ ನಡೆವ ಸಿದ್ದರಿಗಿಲ್ಲಿ ಬರವಿಲ್ಲ
ಎದುರಿನವರೆಲ್ಲಾ ನಮ್ಮರೆಂದುಕೊಂಡವ ದಡ್ಡ
ಬಿಳಿ ಮೊಟ್ಟೆಗಳೆಲ್ಲವೂ ಕಾಗೆಯದಲ್ಲ!
ನಂಬು ನಿನ್ನೊಳಗಿನ ಮನುಜಮತದ
ಒಲವ
ಬರಿದೆ ನನದು ನಿನದೆಂಬ ಬಡಿವಾರದಿ
ಬಡಿದಾಡುವ
ಮಣ್ಣರಸ್ತೆಯಿದು ಮನ ; ಗುರಿಯಂತೂ ಒಲವಿನದೆ
ನಡೆದಷ್ಟು ದಾರಿ
ಕಂಡಷ್ಟು ಒಲವು
ಒಂದೆಂಬುದು ಎದೆಯ ಹಾಡಾದರೆ ಜಗದ ಜನರೆಲ್ಲಾ
ಆತ್ಮ ಬಂಧುಗಳು
ಒಲವಿರಲಿ
ಒಲವಿರಲಿ
ಮೊಗೆದಷ್ಟೂ ಮೊಗೆದಷ್ಟೂ
ಹಂಚಿ ಉಳಿಯುವಷ್ಟು
ಒಲವಿರಲಿ
ಸಂಕಟ ಸಾವಿರವಿರಲಿ
ನೀರುಳಿದ ಮೀನಂತೆ ಬದುಕು ಇದ್ದರೂ
ಹೊಳೆದಂಡೆಯ ನಗುವ ಗರಿಕೆಯ ತೆರದಿ
ಕಣ್ಣ ತುಂಬಾ ಒಲವದು
ಚಿರವಿರಲಿ ಅನವರತ….
ಒಲವೇ ಬದಕು ಎಂಬುದು ಎದೆ ಶಾಸನವಾಗಲಿ!
*******
ನೋವು ಮತ್ತು ದ್ರವ
ಬೋತಲಿಯಿಂದ ಒಂಟಿ ಕಾಲಿನ ಬಟ್ಟಲಿಗೆ
ಜಿಗಿದ ದ್ರವ
ಗಂಟಲ ಗುಹೆಗುಂಟ ಬಿದ್ದದ್ದು ನೋವಿನ ಮೇಲೇ!
ನಂದಿದ್ದದ್ದೇ ಅಂತ ನಿರಾಳವಾಗಿ
ಮಲಗಿದ್ದ ನೋವಿನ ಮೇಲೆ ಸುಡ್ ಸುಡೋ
ಹನಿಗಳು ಬಿದ್ದಕೂಡಲೇ ಎದ್ದು ಚಕ್ಕಂಬಕ್ಕಳ
ಹಾಕಿ ಕೂತುಬಿಟ್ಟಿತು.
ದ್ರವದ ಜೊತೆ ಜೊತೆಗೆ ಕ್ಲೋಸಪ್ ಪೇಸ್ಟಿನಂತಹ
ಉಪ್ಪನಕಾಯಿಗೆ ನೋವು
ನಲುಗಿ ಹೋಯಿತು ಒಮ್ಮೆಲೆ ” ತುಟಿ ಮೇಲೆ ಬಂದಂಥ ಮಾತೊಂದೆ ಒಂದು…. ” ಹಾಡು ಗೊತ್ತಿಲ್ಲದಂತೆ
ನೋವಿನ ನಾಲಗೆ ಮೇಲೆ ರಾರಾಜಿಸತೊಡಗಿತು!
ಪಕ್ಕದಲ್ಲೇ ನೆಗ್ಗಿ ಹೋದ ಎದೆ,
ಸನಿಹವೇ ಅದರುತ್ತಿರುವ ಹೃದಯ
ಅದರೊಳಗೆ ಎಂದೋ ಹಾಡಿ ಬಿಟ್ಟ ಹಳೆಯ ಕವಿತೆಗಳ ಸಮಾಧಿ
ಚೂರು ನಿಟ್ಟುಸಿರು….ಎಲ್ಲವೂ ನೋವ
ನರ್ತನಕ್ಕೆ ಸಾಥ್ ನೀಡಲೆದ್ದವು!
ಒಂದೊಂದು ಗುಟುಕು ಒಳ ಬಂದಂತೆ
ನೋವು ಮಧುರ ಮುಲುಕಿನೊಡನೆ ಹೃದಯದ ಹೆಗಲಿಗೆ ಕೈ
ಹಾಕಿ ಬಂದ ದ್ರವವ ಬೈಟು ಮಾಡಿ ಚಿಯರಪ್ ಹೇಳುತ್ತಿದೆ!
ಬಿಕ್ಕಳಿಸ ಹೊರಟ ಹೃದಯಕ್ಕೆ
ಹಗೂರಾಗಿ ಆಲಂಗಿಸಿ
ನಗಿಸಲೆತ್ನಿಸಿ ಸೋತಿತು ಮನಸು
ಎದೆಗುಂದದ ನೋವು ಮರೆತ ಅವಳ ಸಾಲು ಸಾಲು ಹಾಡುಗಳ
ಎದುರೆದುರೇ ಸುರಿಯುತಿದೆ!
ಗಂಟಲ ಗುಹೆ ಬಂದಾಯಿತು
ದ್ರವವೆಲ್ಲಾ ನೋವಿಗೂ ಮತ್ತು ಹೃದಯಕ್ಕೂ
ಸಾಲದಾಗಿ
ಮತ್ತೊಂದಕೆ ಮನವೆಳಸಿ ಕಾತರ;
ಎಂದೋ ಕೈ ಬೀಸಿ ಹೋದ ಅವಳ
ನೆನಪೇ ನೋವು
ಅರ್ಧಂಬರ್ಧ ಕವಿತೆಗಳೇ ನೆನಪು
ದ್ರವ ಬಂದಾಗೆಲ್ಲಾ ಅವಳು ಕಣ್ಮುಂದೆ;
ಉಳಿದ ಸಮಯ ನೆಗ್ಗಿದ ಎದೆಯಲ್ಲಿ
ಮುರಿದ ಹೃದಯದಲ್ಲಿ ಬಂಧಿ!
ನೋವೊಂದೇ…..ಅನವರತ ಜತೆ
ಎಲ್ಲರಿಗೂ!
ಸಂತೆಬೆನ್ನೂರು ಫೈಜ್ನಟ್ರಾಜ್
ಒಲವೆ ಬದುಕಾಗಲಿ ಅನವರತ ನೋವಿದ್ದರೂ…
ತುಂಬಾ ಸುಂದರವಾದ ಕಾವ್ಯರಂಗೋಲಿ.