‘ಆಡುವ ಮಾತಿಗಿರಲಿ ಮುತ್ತಿನ ಮೌಲ್ಯ’ ಡಾ.ಸುಮತಿ ಪಿ. ಅವರ ಲೇಖನ

.

ಮುತ್ತು ಬೆಲೆಬಾಳುವ ನವರತ್ನಗಳಲ್ಲಿ ಒಂದು. ಅದನ್ನು ಬಹಳ ಜೋಪಾನವಾಗಿ ಕಾಪಾಡುತ್ತೇವೆ. ಅಂತೆಯೇ ನಾವು ಆಡುವ ಮಾತು ಕೂಡ. “ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು” ಎಂಬ ಗಾದೆಯಂತೆ ನಾವಾಡುವ ಮಾತು ಕೆಲವೊಂದು ಸಂದರ್ಭದಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ.ಬಹಳ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿ ಸರ್ವನಾಶವನ್ನೂ ಮಾಡಬಲ್ಲುದು.
ಆಡುವ ಮಾತು ಮಧುರವಾಗಿರಬೇಕು.ಸತ್ಯವನ್ನೇ ಮಾತನಾಡಬೇಕು.ಮಾತು ಗೆಳೆತನ ಮಾಡುತ್ತದೆ.ಮಾತು ಬಾಂಧವ್ಯ ಬೆಸೆಯುತ್ತದೆ,ಸಾಮರಸ್ಯ ಸೇತುವಾಗುತ್ತದೆ.ಮಾತು ಜಗತ್ತನ್ನು  ಕಟ್ಟತ್ತದೆ.ಮಾತು ಜಗತ್ತನ್ನು ಒಡೆಯುತ್ತದೆ.ಆದ್ದರಿಂದ ಮಾತು ಕಠೋರವಾಗಿಬಾರದು,ಮೃದುವಾಗಿ,ಮಧುರವಾಗಿ, ಪ್ರಾಮಾಣಿಕವಾಗಿರಬೇಕು. ನಾವಾಡುವ ಮಾತು ಸತ್ಯವಾಗಿದ್ದರೆ ನಂಬಿಕೆ, ವಿಶ್ವಾಸ,ಭರವಸೆಗಳು ಮೂಡಿ ,ಸಂತಸವು ಅರಳಿ,ಮನಸ್ಸು ಸಂಭ್ರಮಿಸುತ್ತದೆ.
*ಮಾತನಾಡುವುದೂ ಒಂದು ಕಲೆ*
ಮಾತಾಡುವುದೂ ಒಂದು ಕಲೆ.ಕೆಲವರಂತೂ ಎಷ್ಟು ಚೆನ್ನಾಗಿ ಮಾತಿನಿಂದ ಪಳಗಿಸುತ್ತಾರೆಂದರೆ, ಅವರ ಮಾತಿಗೆ ಕಟ್ಟುಬಿದ್ದು,ಅವರು ಹೇಳಿದ್ದನ್ನು ನಾವು ಮಾಡುತ್ತೇವೆ. ಅಷ್ಟೂ ನಂಬಿಕೆ, ವಿಶ್ವಾಸ, ಭರವಸೆಯನ್ನವರು ಮಾತಿನ ಮೂಲಕವೇ ತುಂಬುತ್ತಾರೆ. ನಾವು ದಿನನಿತ್ಯ ವಿವಿಧ ರೀತಿಯ ಮಾತುಗಳನ್ನಾಡುವವರನ್ನು ನೋಡುತ್ತಿರುತ್ತೇವೆ. ಮಿತಭಾಷಿಗಳು, ಅತಿಭಾಷಿಗಳು, ಮೃದು ಮಾತುಗಾರರು,ಒರಟು ಮಾತಿನವರು, ಉಡಾಫೆಯ ಮಾತಾಡುವವರು,  ಹೊಗಳುಭಟ್ಟರು ಇತ್ಯಾದಿ.
“ಮಾತು ಬೆಳ್ಳಿ ಮೌನ ಬಂಗಾರ’ ಎಂಬುವುದನ್ನು ಬಹಳಷ್ಟು ಜನ ಮರೆತೇ ಬಿಟ್ಟಿರುತ್ತಾರೆ. ಆದ್ದರಿಂದಲೇ ಮಿತಭಾಷಿಗಳಿಗೆ ಸಾಮಾನ್ಯವಾಗಿ  ‘ಜಂಭಗಾರ’ ಮಾತನಾಡುವುದಿಲ್ಲ. ಅವನಿಗೆ ದೊಷ್ಟಸ್ಥಿಕೆ ಎನ್ನುವುದುಂಟು. ಆದರೆ ಅವರ ಮಿತಭಾಷೆಯ ಕಾರಣ, ಕೀಳರಿಮೆಯೋ, ಮೃದು ಸ್ವಭಾವವೊ, ವಿಷಯದ ಅರಿವಿನ ಕೊರತೆಯೋ ಇರಬಹುದು. ಅಲ್ಲದಿದ್ದರೆ ಅತಿಯಾದ ಪ್ರಬುದ್ಧತೆಯಿಂದಲೂ ಇರಬಹುದು.  ಸಂಘಜೀವಿಯಾದ ಮಾನವ ಬೇಕೆಂದೇ ಒಂಟಿಯಾಗಿ ಎಂದೂ ಇರಲಾರ. ವ್ಯಕ್ತಿ ಆಡುವ ಮಾತಿನಿಂದ ಅವನ ವ್ಯಕ್ತಿತ್ವವನ್ನು ಅಳೆಯಬಹುದಂತೆ. ಮನುಷ್ಯನ ಜೀವನದಲ್ಲಿ ನಡೆಯುವಂತಹ ಎಲ್ಲ ಪ್ರಕ್ರಿಯೆಗಳಿಗೂ ಅವನಾಡುವ ಮಾತು ಪ್ರೇರಕ ಶಕ್ತಿಯಾಗಿ ನಿಲ್ಲುತ್ತದೆ
“ನಾಲಗೆ ಒಳ್ಳೆಯದಿದ್ದರೆ ನಾಡೆಲ್ಲ ಒಳ್ಳೆಯದು”ಎನ್ನುವಂತೆ ನಾವಾಡುವ ಮಾತು ನಾಲ್ಕು ಜನ ಮೆಚ್ಚುವಂತಿದ್ದರೆ ಅವರುಗಳ ಮನಸ್ಸುಗಳಿಗೆ ಸಂತಸವನ್ನು ನೀಡಿದರೆ ನಾಲ್ಕು ಜನರಿಗೆ ಬೇಕಾದವನಾಗಿ ಅವರೆಲ್ಲರ ಮಧ್ಯದಲ್ಲಿ ತಾನೊಬ್ಬನಾಗಿ ಸಂತಸದಿಂದ ಬದುಕು ನಡೆಸಲು ಸಾಧ್ಯವಾಗುತ್ತದೆ . ಅದೇ ಮಾತು ಮಾತಿಗೂ ಸಿಟ್ಟು ತೋರಿಸಿದರೆ ಕುಹಕವನ್ನು ಕಾಣಿಸಿದರೆ, ಮೋಸವನ್ನು ಮೇಳೈಸಿದರೆ,ಕಪಟವನ್ನು ಅಡಗಿಸಿದರೆ, ವಂಚನೆಯಿಂದ ಒಲೈಸಿದರೆ ಅಂತವನನ್ನು ಯಾರೂ ಸ್ವೀಕರಿಸುವುದಿಲ್ಲ ಅದಕ್ಕೆ ಸರ್ವಜ್ಞ ಹೇಳಿರುವುದು
ಮಾತಿನಿಂ ನಗೆ-ನುಡಿಯು | ಮಾತಿನಿಂ ಹಗೆ ಕೊಲೆಯು | ಮಾತಿನಿಂ ಸರ್ವ ಸಂಪದವು ಲೋಕಕ್ಕೆ | ಮಾತೆ ಮಾಣಿಕವು ಸರ್ವಜ್ಞ ||

“ಬಾಯ್‌ಬಿರಿದ ಚಿಪ್ಪಿನೊಳಗೆ ಸ್ವಾತಿ ಮಳೆಹನಿಯೊಂದು ಬಿದ್ದು, ಕಾಲಾನುಕಾಲಕ್ಕೆ ಅದು ಮುತ್ತಾಗುತ್ತೆ” ಎನ್ನುತ್ತಾರೆ, ಅದೇ ರೀತಿಯಲ್ಲಿ ವ್ಯಕ್ತಿಯೊಬ್ಬನ ಸಂಕಷ್ಟದ ಕಾಲದಲ್ಲಿ ನೋವಿನ ಸಂದರ್ಭದಲ್ಲಿ ಆಡುವಂತಹ ಸಮಾಧಾನದ, ಸ್ಪೂರ್ತಿಯ ಮಾತು ಅವನ ಜೀವನದಲ್ಲಿ ಭರವಸೆಯ ಬೆಳಕಾಗಿ ಮುನ್ನುಗ್ಗಿ ಸಾಗಲು ನೆರವಾಗಬಲ್ಲದು.ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾ ಬದುಕನ್ನು ಧೈರ್ಯದಿಂದ ಎದುರಿಸಲು ಪ್ರೇರಕ ಶಕ್ತಿಯಾಗುವುದು

ಮಾತು ಆಡುವಾಗ ಬಹಳ ಎಚ್ಚರದಿಂದ ಇರಬೇಕು.ಏಕೆಂದರೆ ಆಡಿದ ಮಾತನ್ನು ಹಿಂದೆ ತೆಗೆಯಲಾಗದು.ಆದುದರಿಂದ ಮಾತನಾಡುವಾಗ ಎಲ್ಲಿ ಮಾತನಾಡಬೇಕು,ಯಾವಾಗ ಮಾತನಾಡಬೇಕು,ಏನು ಮಾತನಾಡಬೇಕು,ಎಷ್ಟು ಮಾತನಾಡಬೇಕು ,ಹೇಗೆ ಮಾತನಾಡಬೇಕು ಎಂಬುದನ್ನು ಅರಿತು ಮಾತನಾಡಿದರೆ ಚೆನ್ನ.
      ಎಲ್ಲೆಂದರೆ ಅಲ್ಲಿ ಹೇಗೇಗೊ ಮಾತನಾಡುವವರನ್ನು ನಾವು ಸಾಮಾನ್ಯ ಆಡುಮಾತಿನಲ್ಲಿ “ಅಧಿಕ ಪ್ರಸಂಗಿ”ಎನ್ನುತ್ತೇವೆ.ಇನ್ನೂ ಮಾತಿನ ಅಗತ್ಯ ಇಲ್ಲದೆ ಇದ್ದಲ್ಲಿ ಮಾತನಾಡಿದರೆ “ಮೂಗು ತೂರಿಸುವುದು” ಎನ್ನುತ್ತೇವೆ. ಅದಕ್ಕೆ ಹೇಳುವುದು ನಾವು ಆಡುವ ಮಾತು ಸಮಯ ಸಂದರ್ಭೊಚಿತವಾಗಿ, ಹಿತಮಿತವಾಗಿ ಇರಬೇಕು,ಮತ್ತೆ ಮತ್ತೆ ಕೇಳಿಸುವಂತೆ ಇರಬೇಕು.
*ಮಾತೆಂದರೆ ಮನದ ಭಾವನೆ*
ನಾವಾಡುವ ಮಾತು ಸತ್ಯವಾಗಿರಬೇಕು.ಮಾತಿನಲ್ಲಿ ಪ್ರಾಮಾಣಿಕತೆ ಇಗಿರಬೇಕು. ಒಳಗೊಂದು ,ಹೊರಗೊಂದು ಎನ್ನುವಂತಿರಬಾರದು.ಮಾತು ಅಂತರಾಳದ ಅಭಿವ್ಯಕ್ತಿಯಾಗಿರಲಿ. “ಮಾತೆಂಬುವುದು ಮನಸ್ಸಿನ ಕನ್ನಡಿಯಿದ್ದಂತೆ”ನಾವಾಡುವ ಮಾತಿನಿಂದ ನಾವು ಎಂಥವರು, ಹೇಗೆ ಎಂಬುದನ್ನು ಅಳೆಯಲು ಸಾಧ್ಯ.ಮಾತು ಮನುಜನ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತದೆ. ವ್ಯಕ್ತಿಯ ಸಂಸ್ಕಾರ, ಸಂಸ್ಕೃತಿಯನ್ನು ಪರಿಚಯಿಸುತ್ತದೆ. ನಮ್ಮ ವ್ಯಕ್ತಿತ್ವದ ಸತ್ವವನ್ನೂ ಸಾಮರ್ಥ್ಯಗಳನ್ನಷ್ಟೇ ಅಲ್ಲದೆ, ನಮ್ಮ ಗುಣಾವಗುಣಗಳನ್ನೂ ಸ್ವಭಾವ ವರ್ತನೆಗಳನ್ನೂ ಬಿಂಬಿಸುವ ಶಕ್ತಿ ಮಾತಿಗಿರುತ್ತದೆ. ಹಾಗಾಗಿಯೇ ರಾಜಾ ಭರ್ತೃಹರಿ ತುಂಬ ಅರ್ಥಪೂರ್ಣವಾಗಿ ಹೇಳುತ್ತಾನೆ ‘ಮನುಷ್ಯನನ್ನು ಅಂದಗೊಳಿಸುವುದು ಒಡವೆ ವಸ್ತ್ರಗಳು ಅಲ್ಲ, ಸೌಂದರ್ಯ ಪ್ರಸಾದನ ಲೇಪನಗಳೂ ಅಲ್ಲ, ಕೇಶಾಲಂಕಾರಗಳೂ ಹೂಗಳೂ ಅಲ್ಲ, ಮನುಷ್ಯನನ್ನು ಅಂದಗೊಳಿಸುವುದು ಕೇವಲ ಅವನ ಮಾತು ಎಂದು.

ಆದರೆ ಇಂದಿನ ಸಮಾಜದಲ್ಲಿ ಮಾತೇ ಎಲ್ಲಾ ಸಂಘರ್ಷಗಳಿಗೂ ಕಾರಣವಾಗುತ್ತಿದೆ.ಮಾತು ಮಾತಿನಲ್ಲೂ ಕೋಪ,ಅಸಹನೆ ಹೊರಹಾಕುತ್ತಾ,ಮೋಸ,ವಂಚನೆ,ಸೇಡಿನ ಭಾವ ವಿಜೃಂಭಿಸುತ್ತಿದೆ.
ಇನ್ನೊಂದೆಡೆ ಅತಿ ಸರಳ ಜನಗಳು, ಮಾನವೀಯತೆಗಾಗಿ ಮಾತಾಡುವವರು. ಕೇಳುವವರಿಗೆ ಮಾತಿನ ಬಿಸಿ ತಟ್ಟದಂತೆ ಎಚ್ಚರಿಕೆಯಿಂದ ಮಾತಾಡುವವರೂ ಇದ್ದಾರೆ. ಅದಕ್ಕಾಗಿಯೇ ಹಿರಿಯರು ಹೇಳಿರುವುದು, ‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ಎಂದು. ಇನ್ನು ‘ಕಡ್ಡಿ ಮುರಿದಂತೆ ಮಾತಾಡುವವರೂ ಇದ್ದಾರೆ .ಇಂತಹವರ ಮಾತಿನಲ್ಲಿ ಕೃತಕತೆ ಇರುವುದಿಲ್ಲ. ಅಪ್ರಿಯ ಸತ್ಯಗಳನ್ನೂ ಅಳುಕಿಲ್ಲದೆ ಹೇಳುವ ಇವರಿಗೆ ವಿರೋಧಿಗಳೂ ಹೆಚ್ಚು.

ಜ್ಞಾನ ವೃದ್ಧ, ವಯೋವೃದ್ಧರು, ಉತ್ತಮ ನಿರ್ಧಾರ ತೆಗೆದುಕೊಳ್ಳುವ  ತಾಕತ್ತಿರುವವರು , ಜವಾಬ್ದಾರಿಯುತ ಹುದ್ದೆ, ಸ್ಥಾನಗಳಲ್ಲಿರುವವರು ಸಾಮಾನ್ಯವಾಗಿ ತೂಕದ ಮಾತಾಡುತ್ತಾರೆ. ಏಕೆಂದರೆ ಇಂಥವರಿಗೆ ತಮ್ಮ ಮಾತಿನ ಪರಿಣಾಮ ಎದುರಿಸುವ ಜವಾಬ್ದಾರಿಯಿರುತ್ತದೆ. ಜವಾಬ್ದಾರಿಯಿರುವುದರಿಂದಲೇ ತೂಕದ ಮಾತಾಡಲು ಕಲಿತವರೂ ಬಹಳಷ್ಟು ಜನರಿರುತ್ತಾರೆ.  ಇವೆರಡೂ ಇಲ್ಲದವರು ಹಗುರವಾದ ಉಡಾಫೆಯ ಮಾತಾಡುವವರು, ಸ್ವಪ್ರಶಂಸೆ ಮಾಡಿಕೊಳ್ಳುವವರು, ಗೊತ್ತಿಲ್ಲದ ವಿಷಯವನ್ನೂ ಗೊತ್ತಿರುವಂತೆ ನಟಿಸಿ ಮಾತನಾಡುವವರಿರುತ್ತಾರೆ. ಇವರಿಗೆ ಕೇಳುಗರು ತಮಗಿಂತ ಬುದ್ಧಿವಂತರಾಗಿರಬಹುದೆಂಬ ಯೋಚನೆಯೇ ಇರುವುದಿಲ್ಲ. ಪ್ರಶಂಸೆ ಯಾವಾಗಲೂ ಇತರರು ಮಾಡಬೇಕು.ಆಗ ಮಾತ್ರ ಅದಕ್ಕೇ ಬೆಲೆ. ಈ ಸತ್ಯ ತಿಳಿದವರು ಯಾವಾಗಲೂ ಜಾಗರೂಕತೆಯಿಂದಲೇ ಮಾತಾಡುತ್ತಾರೆ.
*ಮಾತಿನ ಮಹತ್ವ*
ಆಡುವ ಪ್ರೀತಿಯ ಮಾತು ಸಾವಿರಾರು ದುಃಖಿತ ಮನಸ್ಸುಗಳನ್ನು ಸಾಂತ್ವನಗೊಳಿಸಬಲ್ಲದು.ಅದೇ ಕಠೋರವಾದ ಮಾತು ಶೂಲದಂತೆ ಇರಿದು ಮನಸ್ಸನ್ನು ಕೆಡಿಸಿ,ಸಾಯಿಸಲೂಬಹುದು.ಆಡುವ ಪ್ರತಿಯೊಂದು ಮಾತು ಒಂದಲ್ಲ ಒಂದು ರೀತಿಯಿಂದ ಬಹಳಷ್ಟು ಮಹತ್ವ ಪಡೆಯುತ್ತದೆ.ಪ್ರೀತಿಯ ಮಾತಿನಿಂದ ಏನು ಬೇಕಾದರೂ ಸಾಧಿಸಬಹುದು. ಕೆಲವೊಮ್ಮೆ ಮಾತಿನ ಅವಸರ ಅವಘಡಕ್ಕೆ ಕಾರಣವಾಗುವುದೂ ಇದೆ.
ಬಾಯಿಂದ ಹೊರ ಹೊರಟ ಮಾತು ಬಿಟ್ಟ ಬಾಣದಂತೆ. ಆಡಿದ ಮೇಲೆ ಆಯ್ತು, ಮತ್ತೆ ಹಿಂದೆ ಪಡೆಯಲಾಗದು .ಹಾಗಾಗಿ ಆಡಬೇಕಾದ ಮಾತನ್ನು ಧ್ಯಾನವಿಟ್ಟು, ಸಂದರ್ಭವರಿತು, ಪರಿಣಾಮವನ್ನೂ ಮುಂದಾಲೋಚಿಸಿ, ಹದದಲ್ಲಿ ಮಾತನಾಡಬೇಕು ಎನ್ನುತ್ತಾರೆ ಪ್ರಾಜ್ಞರು. ಕುಂಭಕರ್ಣನು ಬ್ರಹ್ಮನಲ್ಲಿ ವರ ಕೇಳುವಾಗ ”ಇಂದ್ರಾಸನವನ್ನು ನೀಡು,” ಎನ್ನುವ ಬದಲು, ತಪಸ್ಸಿನ ಆಯಾಸದಲ್ಲಿ ಕ್ಷಣ ಕಾಲ ಮೈಮರೆತು ”ನಿದ್ರಾಸನವನ್ನು ನೀಡು”ಎಂದು ಕೋರಿಬಿಟ್ಟ ಎನ್ನುವ ಕಥೆಯನ್ನು ಇಲ್ಲಿ ನಾವು ನೆನೆಪಿಸಿಕೊಳ್ಳಬಹುದು.
ಮಾತು ಬಲ್ಲವನಿಗೆ ಜಗಳ ಇಲ್ಲ’
 ಊಟ ಬಲ್ಲವನಿಗೆ ರೋಗವಿಲ್ಲ. ‘ಮಾತು ನಿರ್ಮಾಣ ಮಾಡುತ್ತದೆ ಮಾತು ನಿರ್ನಾಮವೂ ಮಾಡುತ್ತದೆ’ ಎನ್ನುವ ಗಾದೆಯಂತೆ.ಬದುಕಿನಲ್ಲಿ ನಾವಾಡುವ ಮಾತು ಒಳಿತಿಗೂ,ಕೆಡುಕಿಗೂ ಕಾರಣ ಎನ್ನಬಹುದು. ಮಹಾಭಾರತದಲ್ಲಿ ಶಕುನಿಯ ಕುತಂತ್ರವು ಹೇಗೆ ಕೌರವ ವಂಶವನ್ನೂ, ಕೀರ್ತಿಯನ್ನೂ ಶಾಶ್ವತವಾಗಿ ನಿರ್ನಾಮ ಮಾಡಿತು ಎನ್ನುವುದನ್ನೂ, ವಿದುರ, ವ್ಯಾಸ, ಶ್ರೀ ಕೃಷ್ಣರ ಮಾತು ಹೇಗೆ ಪಾಂಡವರನ್ನು ಮಾರ್ಗದರ್ಶಿಸಿ, ಧರ್ಮಕ್ಕೆ ಜಯವನ್ನು ಸಾಧಿಸಿತೆನ್ನುವುದನ್ನೂ ನಾವಿಲ್ಲಿ ಉಲ್ಲೇಖಿಸಬಹುದು.

*ಮಾತಿನ ಬಗೆಗಿರಲಿ ಕಾಳಜಿ*
ಎಲುಬಿಲ್ಲದ ನಾಲಗೆ  ಎನೇನೊ ನುಡಿಯದಂತೆ ಎಚ್ಚರವಾಗಿರಬೇಕು
ಬಿಟ್ಟು ಬಾಣ ಆಡಿದ ಮಾತು ಮರಳಿ ಬಾರದು.ವಿವೇಕಿಗಳು  ತಮ್ಮ ಮಾತಿನ ಬಗ್ಗೆ ಕಾಳಜಿ ವಹಿಸುತ್ತಾರೆ. ‘ತುಂಬ ಮಾತನಾಡುವಾಗ ಆವೇಶದಲ್ಲಿ ಎಲ್ಲಿ ತಮ್ಮ ಮಾತಿನಲ್ಲಿ ಸುಳ್ಳು ಉದುರೀತೋ’ ಎನ್ನುವ ಎಚ್ಚರದಲ್ಲಿ ಇರುತ್ತಾರೆ.

 ಜೀವನದುದ್ದಕ್ಕೂ ಮಿತಭಾಷಿಣಿಯಾಗಿದ್ದ ರಾಮಕೃಷ್ಣ ಪರಮಹಂಸರ ಪತ್ನಿ  ಶಾರದಾಮಣಿ ದೇವಿಯವರು ಶಿಷ್ಯರಿಗೆ ತಿಳಿ ಹೇಳುತ್ತಾರೆ- ”ಒರಟಾಗಿ ಮಾತನಾಡ ಬಾರದಪ್ಪ, ಒರಟಾಗಿ ನುಡಿಯುತ್ತಿದ್ದರೆ ಮನಸ್ಸು ಒರಟಾಗುತ್ತದೆ. ಬುದ್ಧಿ ಒರಟಾಗುತ್ತದೆ. ಒರಟಾದ ಬುದ್ಧಿ ಮನಸ್ಸುಗಳಲ್ಲಿಸತ್ಯವೂ ಪರಮಾತ್ಮನೂ ಹೇಗೆ ತಾನೆ ಪ್ರತಿಫಲಿಸಲಾದೀತು?” ಎಂದು.

ಹೀಗೆ ಮಾತು ಮೃತ್ಯುವೂ ಆಗಬಹುದು. ಎಂತೆಂಥದೋ ಸಂದರ್ಭದಲ್ಲಿ ನಾಲಿಗೆ ತಪ್ಪಿಯೋ ಉದ್ದೇಶಪೂರ್ವಕವಾಗಿಯೋ ಆಡಿದ ಮಾತು ಕಾಲಾನಂತರದಲ್ಲಿ ನಮ್ಮ ಕೊರಳಿಗೆ ಉರುಲಾಗಿ ಬರುವಂಥ ಪ್ರಸಂಗಗಳನ್ನು ನಾವು ಕೇಳಿಯೇ ಇದ್ದೇವೆ.ಮಾತುಗಳಲ್ಲಿ ಸಮಯ ತಿನ್ನುವ ಶಿಷ್ಟಾಚಾರದ ಮಾತುಗಳಿವೆ, ಆರೋಗ್ಯ ಕೆಡಿಸುವ ಅರ್ಥಹೀನ ಮಾತುಗಳಿವೆ,ಕರುಳು ಕಿವುಚುವ ಮಾತ್ಸರ್ಯದ ಈಟಿ ಮಾತುಗಳಿವೆ,ನಗುನಗುತ್ತಲೇ ಮಾನ ಹರಾಜು ಹಾಕುವ ಚಾಟಿ ಮಾತುಗಳಿವೆ, ಲೋಕವೆಲ್ಲದರ ಬಗ್ಗೆ ಹಗುರವಾಗಿ ಆಡಿಕೊಳ್ಳುವ ಬಾಯ್ತುರಿಕೆ ಮಾತುಗಳಿವೆ,ಅಯ್ಯೋ ಪಾಪ ಎಂದು ಮರುಗುವ ಸಹಾನುಭೂತಿಯ ಹುಸಿ ಮಾತುಗಳಿವೆ.ಇವೆಲ್ಲವನ್ನು `ಮಾತು’ ಎಂದು ಕರೆದರೂ ಯಾವುದು ಉಪಯುಕ್ತಕಾರಿಯೋ,ಯಾವುದು ಉತ್ಪಾದನಾಶೀಲವೋ ಅದು ಮಾತ್ರವೇ `ಮಾತು’ ಎನ್ನಿಸಿಕೊಳ್ಳುವುದು. ಉಳಿದುದೆಲ್ಲ  ಅನರ್ಥವಾಗಿ ಆಯುಷ್ಯ ಕರಗಿಸುವ,ಚಾರಿತ್ರ್ಯ ನಾಶ ಮಾಡುವ ಕಾಲ ಹರಣಕಾರಿ ಕಸ ಮಾತ್ರ. ಹಾಗೆ ನೋಡಿದರೆ ನಾವಾಡುವ ಪ್ರತಿ ಮಾತು ನಮ್ಮ ವ್ಯಕ್ತಿತ್ವದ ಕಟ್ಟಡವನ್ನು ನಿರ್ಮಾಣ ಮಾಡುವಲ್ಲಿ ಬಳಕೆಯಾಗುವ ಒಂದೊಂದು ಇಟ್ಟಿಗೆಯಂತೆ.ನಿನ್ನೆ ಆಡಿದ ಮಾತು ಒಂದು ಇಟ್ಟಿಗೆ, ಇಂದು ಆಡುವ ಮಾತು ಇನ್ನೊಂದು ಇಟ್ಟಿಗೆ, ನಾಳೆ ಆಡಲಿರುವ ಮಾತು  ಮತ್ತೊಂದು ಇಟ್ಟಿಗೆ ಇವೆಲ್ಲ ಒಂದರ ಮೇಲೊಂದು
 ಸೇರುತ್ತ,ನಮ್ಮ ವ್ಯಕ್ತಿತ್ವದ ಕಟ್ಟಡ ನಿರ್ಮಾಣಗೊಳ್ಳುತ್ತ ಸಾಗುತ್ತಿರುತ್ತದೆ.
ಆದುದರಿಂದ ನಮ್ಮ ವ್ಯಕ್ತಿತ್ವದ ಕಟ್ಟಡ ಬಲವಾಗಿಸುವ,ತೂಕದ ಮಾತುಗಳನ್ನಾಡುತ್ತಾ, ವ್ಯಕ್ತಿತ್ವವನ್ನು ಗಟ್ಟಿಯಾಗಿ ನಿರ್ಮಿಸೋಣವೇ?


Leave a Reply

Back To Top