ಕಾಣದ ಕೈಗಳು (ಲಘು ಲೇಖನ )-ಕುಸುಮಾ. ಜಿ.ಭಟ್

    ಅದು 2021 ನೇ ಏಪ್ರಿಲ್-ಮೇ  ತಿಂಗಳ  ಕೆಟ್ಟ ಬೇಸಿಗೆ ಕಾಲ.
ಎಲ್ಲೆಲ್ಲೂ  ಕೋವಿಡ್ ಎರಡನೇ ಅಲೆಯ ರೌಧ್ರ ನರ್ತನ.
ಹಾಗೆ ನಮ್ಮ ಕುಟುಂಬಕ್ಕೂ ತಪ್ಪದೇ ಬಂದು ಅಪ್ಪಳಿಸಿತ್ತು.
ಆ ಸಮಯದಲ್ಲಿ  ವೈದ್ಯೋ ನಾರಾಯಣೋ ಹರಿ ಎಂಬಂತೆ ಸಾಕ್ಷಾತ್  ದೇವರಾಗಿ  ನಮ್ಮೆಲ್ಲರನ್ನೂ ಉಳಿಸಿದ ಆಯುಷ್  ಇಲಾಖೆಯ ಡಾ. ಪತಂಜಲಿಯವರ  ಆಯುರ್ವೇದ ಔಷಧೋಪಚಾರ, ನಿಸ್ವಾರ್ಥ ಸೇವೆಯ ಜೀವನ ಪರ್ಯಂತ ನೆನೆಯಬೇಕು

( ನಮ್ಮ ತಾಲ್ಲೂಕು ಮಾತ್ರವಲ್ಲದೆ ದೂರದ ಜಿಲ್ಲೆಗಳಿಂದ ಬಂದ, ಚಿಂತಾಜನಕ ಸ್ಥಿತಿಯಲ್ಲಿದ್ದ ನೂರಾರು  ಕೊರೋನಾ ಪೀಡಿತರು ಬದುಕಿದ್ದು ಇವರ ಕೈ ಗುಣದಿಂದಲೇ!)
ಇಡೀ ಮನೆ ಮಂದಿಯೂ ಆಸ್ಪತ್ರೆ ವಾರ್ಡಿನಲ್ಲಿ ಮಲಗಿದಂತೆ  ಹೋಮ್ ಕ್ವಾರಂಟೈನ್ ಆಗಿ ರೂಮ್., ಹಾಲ್ ಹೀಗೆ ಎಲ್ಲಾ ಕಡೆ  ನಿತ್ರಾಣವಾಗಿ ಬಿದ್ದು ಕೊಂಡಿದ್ದೆವು.
ಸ್ಥಳೀಯ  ಸರ್ಕಾರಿ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿದಾಗ ಕೊರೊನ ಪಾಸಿಟಿವ್ ಬಂದಿರೋ ಸುದ್ದಿ ಊರೆಲ್ಲ ಹಬ್ಬಿತ್ತು.
ಪಿ.ಡಿ.ಒ  ಗೆ ವಿಷಯ ತಲುಪಿದ್ದೇ ತಡ  “15ದಿನ ಏನಾದ್ರೂ ಮನೆ ಬಿಟ್ಟು ಹೋದಿರೋ ಇಡೀ ಊರಿಗೆ ಬೇಲಿ ಹಾಕಿಸಿಬಿಡ್ತೇವೆ
ಹುಷಾರ್” ಎಂದು ಪದೇ ಪದೇ ಫೋನ್ ಲ್ಲಿ ವಾರ್ನಿಂಗ್  ಬರತೊಡಗಿತ್ತು.

 ಕೆಲವು ಬಂಧು ಬಳಗದವರು, ಸ್ನೇಹಿತರು ಫೋನಾಯಿಸಿ “ಅದ್ಹೇಗೆ ಬಂತು ಎಲ್ಲರಿಗೂ?ಎಲ್ಲಿಗೆ ಹೋಗಿದ್ರಿ? “
ಎಂದು ಗಾಯದ ಮೇಲೆ ಬರೆ ಎಳೆದಂತೆ  ಪ್ರಶ್ನಿಸುತ್ತಿದ್ದರೆ
“ಅಯ್ಯೋ,ದೇವರೇ,ಛೇ ಪಾಪ ಬೇಗ ಹುಷಾರ್ ಆಗಿ, ಏನಾದ್ರೂ ಬೇಕಿತ್ತಾ* ಎಂದು  ಕಾಳಜಿ, ಅನುಕಂಪದಿಂದ ದಿನoಪ್ರತಿ ಫೋನಲ್ಲಿ ವಿಚಾರಿಸುತ್ತಿದ್ದರು.
(ಅಂದಿನ ಪರಿಸ್ಥಿತಿ ಕೂಡಾ ಹಾಗಿತ್ತು  ಅವರಿಗೂ ಸೋಂಕಿನ ಭಯ )
ಹೀಗೆ ಮಲಗಿದಲ್ಲೇ  ನರುಳುತ್ತಾ  ಮತ್ತೆ ಎದ್ದು ಬೀಳುತ್ತ  ಎರಡು ವಾರಗಳು  ಹೇಗೆ ಕಳೆಯಿತೋ  ಗೊತ್ತಿಲ್ಲ…
ಮನೆಯಲ್ಲಿ ಅಳಿದುಳಿದ ದಿನಸಿ ಕೂಡಾ ಖಾಲಿಯಾಗಿತ್ತು.
ಗಂಜಿ ಊಟ ಮಾಡಿ ಎಂದು ಡಾಕ್ಟರ್  ಅಡ್ವೈಸ್ ಮಾಡಿದ್ದರೂ
ಜ್ವರದ ಬಾಯಿಗೆ ಸೇರಬೇಕಲ್ಲ. ಹಸಿವು ತಡೆಯಲು ಆಗ್ತಿರಲಿಲ್ಲ.
ಮನೆ ಹಿತ್ತಲಲ್ಲಿ ಕೂಡಾ ಯಾವ ತರಕಾರಿ ಇಲ್ಲ. ಟೌನ್ ಕೇವಲ 5ಕಿ.ಮೀ ಇದ್ದರೂ  ಏನೂ ತರಲಾಗದ ಸ್ಥಿತಿ.ಗಂಡಸರಿಗೂ ಮನೆಯೊಳಗೆ ಎದ್ದು ಓಡಾಡಲಾಗದಷ್ಟು ನಿಶ್ಯಕ್ತಿ. ಇನ್ನು ಗಾಡಿ ಓಡಿಸಲು ಸಾಧ್ಯವೇ?
ದೇವರೇ ಈ ಸಂಕಟ, ಇಂಥ ಪರಿಸ್ಥಿತಿ ಯಾರಿಗೂ ಬೇಡ ಎಂದು ಕೈ ಮುಗಿದು ಕೂತಿದ್ದೆ ಆಯಿತು ಎಲ್ಲರೂ.

ಹೀಗಿರಲು ಅದೊಂದು ಮುಂಜಾನೆ ರೋಡ್ ನಲ್ಲಿ ಏನೋ ವೆಹಿಕಲ್ ಸೌಂಡ್ ಆಯಿತು. ಯಾರೆಂದು ಬಾಗಿಲು ತೆಗೆಯಲು ಭಯ.  ಕಿಟಕಿಯಲ್ಲೇ ಇಣುಕಿದೆ!  ಯಾರ ಸುಳಿವೂ ಕಾಣ್ತಿಲ್ಲ.
ನೋಡಿದ್ರೆ ಹೆಬ್ಬಾಗಿಲ ಕಟ್ಟೆ ಮೇಲೆ ತುಂಬಿದ ದೊಡ್ಡ ದೊಡ್ಡ ಚೀಲಗಳು. ಕುತೂಹಲದಿ  ಹತ್ತಿರ ಹೋಗಿ  ಕಟ್ಟಿದ  ದಾರ  ಬಿಚ್ಚುತ್ತೇನೆ ಇಡೀ ಸಂಸಾರಕ್ಕೆ(ಅವಿಭಕ್ತ ) ಸುಮಾರು 1ತಿಂಗಳಿಗಾಗುವಷ್ಟು  ದಿನಸಿ, ಹಾಗೆ  ತಾಜಾ  ತರಕಾರಿ,ಹಣ್ಣುಗಳು  ಹೀಗೆ ಒಂದೆರಡಲ್ಲ
ದಿನಬಳಕೆಯ ಎಲ್ಲಾ ವಸ್ತುಗಳು  ಅದರಲ್ಲಿ ತುಂಬಿಕೊಂಡಿತ್ತು!
ಖುಷಿ ಒಂದು ಕಡೆಯಾದರೆ ಆ ಸಂತೋಷಕ್ಕೆ ನನಗೆ ಕಣ್ಣೀರು ಬೇರೆ.  ಇದನ್ನು ಕಂಡ ಮನೆಯ ಜನರೆಲ್ಲರ ಸೊರಗಿದ   ಮುಖದಲ್ಲೂ   ಏನೋ ಅವ್ಯಕ್ತ ಸಂತಸ  ತೇಲಿಬಂತು.

ಇದು ನನ್ನ ಸಣ್ಣ ಅಕ್ಕನದೇ ಕೈ ಎಂದು  ನನ್ನ ಆತ್ಮಕ್ಕೆ ಹೊಳೆದು ಬಿಟ್ಟಿತ್ತು.ಅಷ್ಟೊತ್ತಿಗೆ  ಅವಳದೇ ಕಾಲ್!   ಹಲೋ ಎನ್ನಲೂ ಆಗದಷ್ಟು ಭಾವುಕವಾಗಿತ್ತು ಮನಸ್ಸು
“ಕುಸುಮಾ … ಸಾರೀ ನಿಮ್ಮನ್ನೆಲ್ಲ ನೋಡಲು ಬರಲಿಕ್ಕಾಗುತ್ತಿಲ್ಲ.  ಅಂದಾಜಿಗೆ  ಒಂದಷ್ಟು ಸಾಮಾನುಗಳ  ಕಳಿಸಿ ಕೊಟ್ಟಿದ್ದೇವೆ.ನಿಧಾನಕ್ಕೆ ಸರಿಯಾಗಿ ಜೋಡಿಸಿಟ್ಟುಕೊಳ್ಳಿ. ಮಾತ್ರೆಗಳು ಏನಾದ್ರೂ ಬೇಕಿದ್ದರೆ ಹೆಸರುಗಳ ಮೆಸೇಜ್ ಮಾಡು”
ಎನ್ನುತ್ತಿದ್ದಂತೆ  ಈಗ ಇಲ್ಲದ ಅಮ್ಮನ ಸ್ಥಾನ ತಾನೇ ತುಂಬಿ ಆ ಸಂಕಷ್ಟ ಕಾಲಕ್ಕೆ ಅಕ್ಕರೆಯಿಂದ  ಸೇವೆಗೈದ ಅವಳಿಗೆ ಮನತುಂಬಿ ನಮಿಸುತ್ತಾ  “ಅಕ್ಕಾ ಹ್ಯಾಪಿ  ಮದರ್ಸ್ ಡೇ” ಎಂದು ಜೋರಾಗಿ ಕೂಗಿಬಿಟ್ಟೆ.

———————————-

One thought on “ಕಾಣದ ಕೈಗಳು (ಲಘು ಲೇಖನ )-ಕುಸುಮಾ. ಜಿ.ಭಟ್

Leave a Reply

Back To Top