ಕಾವ್ಯ ಸಂಗಾತಿ
ಟಿ.ದಾದಾಪೀರ್ ತರೀಕೆರೆ
ನನ್ನಮ್ಮಿ..
ಕತ್ತಲೆಗೆ ಕೊಳ್ಳಿ ಇಟ್ಟಿರುವ
ನನ್ನಮ್ಮಿ
ಬೆಳಕಿನಂತೆ ಸದಾ
ಜ್ವಲಿಸುವ
ದೇವರ ಗುಡಿಯ ಹಣತೆ
ಬಿಸಿಲಿಗೆ ಸುಡದಂತೆ
ನನ್ನ ತಂಪಾಗಿಟ್ಟ
ನನ್ನಮ್ಮಿಯ ಎದೆತುಂಬೆಲ್ಲ
ಕರಗದ ಮಮತೆಯ
ಮಂಜುಗಡ್ಡೆಗಳ ಸಾಲು
ನನ್ನ ಎದೆಗಾನಿಸಿ
ಮಲಗಿದಳೆಂದರೆ
ಚಂದ್ರ, ಚುಕ್ಕಿಗಳ ಹಿಡಿದಿಟ್ಟ
ಆಕಾಶವೇ ನಾಚುತ್ತದೆ
ಚುಕ್ಕಿಗಳು ಜಾರಿ ಬಿದ್ದಿವೆ
ಎಷ್ಟೊ ಸಾರಿ ರಾತ್ರೀಲಿ
ನನ್ನಮ್ಮಿ
ಯಾವತ್ತೂ ಹಿಡಿತ ಸಡಿಲಿಸಲೆ ಇಲ್ಲ
ಬರಿ ನಗುವಳು
ನನಗೆ ಅಳುವಿನ ಪದದ
ಅಥ೯ ಹೇಳಲೆ ಇಲ್ಲ
ದುಃಖದ ಹಾಳೆ ಹರಿದು
ಹೋದಂತೆ ಕಾಣುವ
ಪ್ರತಿ ಭಾಷೆಗಳ
Dictionary ನನ್ನಮ್ಮಿ
ಮಳೆ , ಗಾಳಿ , ಬಿಸಿಲ ಬೇಗೆಗೆ
ನಾನು ದಣಿದಿದ್ದೆ ಇಲ್ಲ
ನನ್ನಮ್ಮಿ ಭೂಮಿಯ ಆಳಕ್ಕೆ ಇಳಿದು
ಆಕಾಶಕ್ಕೆ ಹರಡಿದ ಆಲದ ಮರ
‘ ಅವಳ ಹಸಿರು ನನಗೆ ಉಸಿರಾಗಿರಲಿ ‘
ಟಿ.ದಾದಾಪೀರ್
Masha Allah