ಎ ಎಸ್. ಮಕಾನದಾರ ಕವಿತೆ-ಕವಿತೆಯಾದಳು ಮಾಬವ್ವ

ಹೌದು
ಆವಾಗ ತನ್ನ ತಾಳಿ ಒತ್ತೆ ಇಟ್ಟು
ಮಕ್ಕಳಿಗೆ ಮದರಸಾ ಕಲಿಸಿದ್ದೆ ತಪ್ಪಾಯ್ತು
ಅಲಿಫ್- ಬೆ -ತೆ ಗೊತ್ತಿರದ ಮಾಬವ್ವಗ
ತಿಳಿದಿದ್ದು ರಟ್ಟೆ ಬಲ ಮಾತ್ರ

ಆಕಿಯ ಹಡದವ್ವ ಕುಂಟಾ ಬಿಲ್ಲೆ
ಆಡೋ ಕಾಲಿಗೆ
ಬಳೆಚೂರ ಆಡೋ ಕೈಗೆ ಬೆತ್ತದಿಂದ ನಾಲ್ಕು
ಬಾರಿಸಿ ಜೀತಕ್ಕ ಇಟ್ಟಿದ್ಲು

ದನದಕ್ಕಿಯಾಗ ಕಸುವು
ಹೆಡಮುರಗಿ ಕಟ್ಟಿದ್ಲು
ಮಕ್ಕಳ ಮ್ಯಾಗ ಮಕ್ಕಳು
ಮಕ್ಕಳ ಮ್ಯಾಗ ಮಕ್ಕಳು
ಕೊಟ್ಟ ಅಲ್ಲಾಹ ನಲ್ಲಿ ದುವಾಬೇಡಿಕೋ
ಇಲ್ಲಾ ಗಂಗವ್ವಗ ಸೇರಿಕೋ
ಅಂದಿದ್ದ ಪತಿರಾಯ

ಗಂಡನ ಬೇ ಷರಮ್ ಬಾಳ್ವೆಗೆ ಅಂಜದೆ
ಜಮಾತ್ ದಿಂದ ಬಹಿಷ್ಕಾರಕ್ಕ ಒಳಗಾದಳು
ಬಂಧು ಬಳಗ ಸಮಾಜದ ವಿರುದ್ಧ
ಗಂಡಗಚ್ಚಿ ಹಾಕಿದ್ಲು
ಮಳೆರಾಯ ಸೆಟಗೊಂಡ್ರು
ಮಾಬವ್ವನ ಕಣ್ಣು ಸುರಿಸುವ
ಕಣ್ಣೀರೆಂಬುದು ಭೂದೇವಿಗೆ ಸೋನೆ ಮಳೆ

ಊರಾಗ ಅತ್ರ ಜನ ನಕ್ಕಾರೂ ಅಂತ
ಅಡಿವ್ಯಾಗ ಕುಂತು ಅಳತಿದ್ಲು
ಮಾಬವ್ವನ ಸಂಕಟ
ಭೂದೇವಿಗೆ
ಭುದೇವಿಯ ಸಂಕಟ
ಮಾಬವ್ವ ತಿಳಿದಿದ್ಲು

ತಂಗಾಳಿ ನೀರು ಇಬ್ಬರ ಒಡಲಿಗೂ ಎರವಾಗಿತ್ತು
ಜಡ್ಡಿಗೆ ಬಿದ್ದ ಅತ್ತೆ
ಕೂಲಿನಾಲಿ ಮಾಡೋ ಮಗಳು
ಸಾಲಿಗೆ ಸಲಾಂ ಹೇಳಿದ ಮಗ
ಕಾಮಾಲೆಗೆ ತತ್ತರಿಸಿ
ಉತ್ತರಾಣಿ ಕಡ್ಡಿಯಂಥ ತಾಯಿಯ
ಎದೆ ಹಾಲಿಗೆ ಬಾಯಿ ಹಾಕೋ ಬಗಲ್ ಗೂಸು
ಕಟ್ಕೊಂಡು ಬಾಳ್ವೆ ನೀಗಿಸಿದ್ಲು
ಕಡ್ಲಿಮಟ್ಟಿ ಕಾಶಿ ಬಾಯಿ ಕತಿಗಿಂತ
ಮಾಬವ್ವನ ಕತಿ ಕೇಳಾಕ ಇಷ್ಟ ಆಗತಿತ್ತು
ರೆಕ್ಕಿ ಬಂದ್ ಗಂಡ ಮಕ್ಳು ಹಾರಿ ಹೋಗಿದ್ರು
ಹಾರವರ ಓಣಿ ಮುಸುರಿ
ಮೃಷ್ಟಾನ್ನ ಆಗಿತ್ತು
ನೌಕರಿ ಮಕ್ಕಳಿಂದಾಗಿ ಆಶ್ರಯ ಮನಿ ಇಲ್ಲಾ
ದೀಪಕ್ಕ ಎಣ್ಣಿಲ್ಲ
ಇದ್ದ ರೇಷನ್ ಕಾರ್ಡ್ ಸರ್ಕಾರ ಕಸಗೊಂಡಿತ್ತು

ಮಂದಿ ಮನಿ ನೆರಳು ಹಣಿಕಿಹಾಕಿ
ಅಣುಕಿಸತಿತ್ತು
ಮಾಬವ್ವನ ಗೋಳು ಕೇಳಿದವರು
ಸುಗ್ಯಾಗ ಗೌರಿ ಹುಣ್ಣಿಮೆ ಸೀಗೆಹುಣ್ಣಿವೆ
ಲಗ್ನ ಮುಹರ್ತದಾಗ ಬೀಸೋ ಪದ ಹಂತಿ ಪದ ಲಾವಣಿ ಶೋಭಾನ ಪದವಾಗಿ
ಚಿನ್ನವ್ವ ಶರಣವ್ವ ಬಸವ್ವ ಚೆಂದಾಗಿ ಹಾಡತಿದ್ರು

ಕೇಳೋರು ಕಣ್ಣೀರು ದಳ ದಳ ಇಳಿತಿದ್ದವು
ಕುಡಿದಾ ಗೆಳೆತ್ಯಾರು ನಿರ್ಧಯಿ ವಿಧಿಗೆ
ಚಟಗ ಮುರದ ಚಟ್ಟಾ ಕಟ್ಟತಿದ್ರು
ಎಲಿ ಅಡಿಕೆ ಹಾಕಿ ಛಿ ಥು ಅಂತ ಉಗಿತಿದ್ರು
ಈ ಮನಿ
ಆ ಮನಿ
ಹಿಂಗ ಮುಂದಿನ ಮನಿ
ಉಡಿ ತುಂಬಿ ಕೋಳ್ಳಾಕ ದಾರಿ ಹಿಡಿತಿದ್ರು
ವೇದ ಶಾಸ್ತ್ರ ಓದಿದವರು
ದೊಡ್ಡವರು ಅನಿಸಿಕೊಂಡ್ರು
ಬಡವಿ ವೇದನೆ ತಿಳಕೊಳ್ಳಾಕ
ಯಾವ ಸಾಲಿಗೂ ಹೋಗಲಿಲ್ಲ !
ಮಾಬವ್ವನ ಒಡಲು ಬರಿದಾಗಲಿಲ್ಲ !
ಕೇಳಿದವರ ಎದಿ ಕರಗಲಿಲ್ಲ !

ಎ ಎಸ್. ಮಕಾನದಾರ
ನಿರಂತರ ಪ್ರಕಾಶನ
ಎಂ.ಆರ್. ಅತ್ತಾರ ಬಿಲ್ಡಿಂ


9 thoughts on “ಎ ಎಸ್. ಮಕಾನದಾರ ಕವಿತೆ-ಕವಿತೆಯಾದಳು ಮಾಬವ್ವ

  1. ಕವಿತೆ ಪ್ರಕಟಿಸಿ ಸಹಕಾರ ನೀಡಿದ್ದಕ್ಕೆ ಧನ್ಯವಾದಗಳು ಸರ್ ಸಂಗಾತಿ ಬಳಗಕ್ಕೆ

    -ಎ ಎಸ್. ಮಕಾನದಾರ. ಗದಗ

  2. ಮಾಬವ್ವನ ಕಥಿ ಓದಿ ಕರುಳು ಚುರುಕ್ ಅಂತೂ …

  3. ಧನ್ಯವಾದಗಳು ಸರ್ ತಮ್ಮ ಪ್ರತಿಕ್ರಿಯೆ ಗಾಗಿ

Leave a Reply

Back To Top