“ಅಮ್ಮನಿಗೊಂದು ತಪ್ಪೊಪ್ಪಿಗೆ”ವೀಣಾ ಹೇಮಂತ್ ಗೌಡ ಪಾಟೀಲ್

ಅಮ್ಮ ಎಂದರೆ ಏನೋ ಹರುಷವು ನಮ್ಮ ಬಾಳಿಗೆ ಅವಳೇ ದೈವವು…. ಈ ಹಾಡು ಅದೆಷ್ಟು ನಿಜ ಅಲ್ಲವೇ?? ಏನೂ ಅರಿಯದ ಎಳೆ ಬೊಮ್ಮಟೆಯನ್ನು 9 ತಿಂಗಳ ಕಾಲ  ಹೊತ್ತು, ಮೂಳೆ ಮುರಿಯುವ ನೋವನ್ನು ಸಹಿಸಿ, ವಿಪರೀತ ರಕ್ತಸ್ರಾವವನ್ನು ಅನುಭವಿಸಿ  ಹೆರುವ ಮೂಲಕ ಈ ಭೂಮಿಗೆ ತರುವ ತಾಯಿ ಭೂಮಿಯಷ್ಟೇ ತೂಕವುಳ್ಳವಳು.
 ಮಗುವಿನ ಮಲ ಮೂತ್ರಗಳನ್ನು ಯಾವುದೇ ಹೇಸಿಗೆ ಇಲ್ಲದೆ  ಸ್ವಚ್ಛಗೊಳಿಸಿ ತೊಳೆದು ಒರೆಸಿ ಪೌಡರ್ ಹಾಕಿ ಬಟ್ಟೆ ಬದಲಿಸಿ ಮಗುವಿಗೆ ಅಲಂಕಾರ ಮಾಡಿ ಮುದ್ದಾಡುವ ಅಮ್ಮ.
 ಏನು ಮಾಡಿದರೆ ಆಕೆಯ ಋಣ ತೀರೀತು??

 ತಾನು ನಿದ್ದೆಗೆಟ್ಟರೂ ತನ್ನ ಮಗು ನಿದ್ದೆಗೆಡಬಾರದೆಂದು ಕಾಲ ಕಾಲಕ್ಕೆ ಮಗುವಿನ ಹಾಸಿಗೆ ಪರೀಕ್ಷಿಸುವ, ಒದ್ದೆಯಾಗಿದ್ದರೆ  ಬದಲಾಯಿಸುವ, ಅತ್ತರೆ ಎತ್ತಿ ರಮಿಸುವ ಹಸಿದರೆ ಹಾಲು ಕುಡಿಸುವ ಅಮ್ಮ ದೇವರ ನಂತರದ ಇನ್ನೊಂದು ದೈವ ಸೃಷ್ಟಿ ಎಂದರೆ ತಪ್ಪಲ್ಲ ಅಲ್ಲವೇ??

 ಬೆಳಗಾ ಮುಂಜಾನೆ ಬೇಗನೆ ಎದ್ದು ಮನೆ ಕೆಲಸಗಳ ಜೊತೆ ಜೊತೆಗೆ ತರಹಾವರಿ ತಿಂಡಿಗಳನ್ನು ಮಾಡಿ, ಎಲ್ಲದಕ್ಕೂ ನಖರೆ ಮಾಡುವ  ಮಕ್ಕಳನ್ನು ಎಬ್ಬಿಸಿ ಶಾಲೆಗೆ ಅಣಿ ಮಾಡಿ ತಿಂಡಿ ತಿನ್ನಿಸಿ ಹಾಲು ಕುಡಿಸಿ ಅವರ ಡಬ್ಬಗಳಿಗೆ ಊಟ, ಬಾಟಲಿಗೆ ನೀರು ತುಂಬಿ, ನೀಟಾಗಿ ಒಗೆದು ಇಸ್ತ್ರಿ ಮಾಡಿದ ಸಮವಸ್ತ್ರವನ್ನು ಹಾಕಿ  ಕಾಲಿಗೆ ಸಾಕ್ಸು,ಶೂ ಹಾಕಿ ಶಾಲೆಯ ಮತ್ತು ಊಟದ ಬ್ಯಾಗನ್ನು ಮಗುವಿನೊಂದಿಗೆ ಹೊತ್ತು ನಡೆಯುತ್ತಾ ಶಾಲೆಯ ಬಸ್ಸಿಗೋ ಆಟೋಕ್ಕೋ ಏರಿಸಿ ಬರುವ ತಾಯಿ, ಮತ್ತೆ ಅಳಿದುಳಿದ ಮನೆ ಕೆಲಸಗಳನ್ನು ಪೂರೈಸಿ ಹೊತ್ತು ಹೊತ್ತಿಗೆ ಅಡುಗೆ ಮಾಡಿ ಬಡಿಸಿ ಮಕ್ಕಳು ಶಾಲೆಯಿಂದ ಬರುವ ಹೊತ್ತಿಗೆ ಅವರಿಗೆ ಬೇಕಾದ ತಿಂಡಿಯನ್ನು ಸಿದ್ಧಪಡಿಸಿ ಅವರನ್ನು ಮನೆಗೆ ಕರೆತಂದು ನಿಧಾನವಾಗಿ ತಿನ್ನಿಸುತ್ತಾ ಶಾಲೆಯ ಆಗುಹೋಗುಗಳ ಕುರಿತು ಪ್ರಶ್ನಿಸಿ ಮತ್ತೆ ಅವರ ಮನಿ ಪಾಠವನ್ನು ಪೂರೈಸಲು ಸಹಾಯ ಮಾಡಿ ಅವರನ್ನು ಬೆಳೆಸುವ ತಾಯಿ  ಸಹಸ್ರಭುಜಗಳನ್ನು ಹೊಂದಿರುವ ದೇವಿಯ ಭೌತಿಕ ಸ್ವರೂಪ  ಅಂದರೆ ತಪ್ಪಲ್ಲ ಅಲ್ಲವೇ??

 ಆಕೆ ಕೇವಲ ಮಕ್ಕಳ ಚಾಕರಿ ಮಾಡುವುದಿಲ್ಲ, ಪತಿಯ ಅತ್ತೆ ಮಾವನ ಕುಟುಂಬದ, ಮನೆಗೆ ಬಂದು ಹೋಗುವ ಎಲ್ಲರನ್ನೂ ಅಷ್ಟೇ ಉತ್ಸಾಹದಿಂದ ಪ್ರೀತಿಯಿಂದ ಸಂಭಾಳಿಸುವ ಕೆಲಸ ಮಾಡುತ್ತಾಳೆ. ಅದೊಂದು ಥ್ಯಾಂಕ್ ಲೆಸ್ ಜಾಬ್ ಆದರೂ ಕೂಡ ಕೊಂಚವೂ ಬೇಸರವಿಲ್ಲದೆ ಮಾಡುವ ಸಂಬಳರಹಿತ ರಜೆ ಇಲ್ಲದ ಕೃತಜ್ಞತೆಯನ್ನು ವ್ಯಕ್ತಪಡಿಸದ ಸಾಮಾಜಿಕ ವ್ಯವಸ್ಥೆಯುಳ್ಳ ವಾರದ ಐದಾರು ದಿನ ಮಾತ್ರ ಕೆಲಸ ನಿರ್ವಹಿಸುವ ಉಳಿದವರು ಆಕೆಯನ್ನು ಆಡಿಕೊಂಡು ನಕ್ಕರೆ, ನಾನು ಕೂಡ ಅವರೊಂದಿಗೆ  ನಕ್ಕು ಸುಮ್ಮನಾಗುವ ಆಕೆ ಭೂಮಿ ತಾಯಿಯಷ್ಟೇ ಸಹನಶೀಲಳು ಅಲ್ಲವೇ???

 ಇನ್ನು ಓದಿ ಕಾಲೇಜಿಗೆ ಹೋಗುತ್ತಿರುವ, ಹಾಸ್ಟೆಲ್ಗಳಲ್ಲಿ ವಾಸಿಸುತ್ತಿರುವ, ನೌಕರಿ ಮಾಡುತ್ತಿರುವ ಮಕ್ಕಳು ಹಬ್ಬ ಹರಿದಿನಗಳಲ್ಲಿ ಊರಿಗೆ ಬಂದರೆ ರಾಶಿ ರಾಶಿ ಒಗೆಯುವ ಬಟ್ಟೆಗಳನ್ನು ತರುತ್ತಾರೆ. ಅಮ್ಮ ನಿನ್ನ ಕೈ ರುಚಿ ಮಿಸ್ ಮಾಡ್ಕೋತೀವಿ ಅಂತ ಹೇಳಿ ಅಮ್ಮನ ಬಳಿ ಅಲವತ್ತುಕೊಂಡು ಹಲವಾರು ತಿಂಡಿ ತಿನಿಸುಗಳನ್ನು ಮಾಡಿಸಿಕೊಂಡು ತಿನ್ನುವ ಮಕ್ಕಳ ಮೆಚ್ಚುಗೆಗಾಗಿ ಆ ಹೃದಯ ಕಾಯುತ್ತಿರುತ್ತದೆ ಎಂಬ ಅರಿವು ಮಕ್ಕಳಿಗೆ ಏಕೆ ಇರುವುದಿಲ್ಲ. ಅಯ್ಯೋ ನಮ್ಮ ವೈಯುಕ್ತಿಕ ಕೆಲಸಗಳಲ್ಲಿ, ಬಟ್ಟೆ ಸ್ವಚ್ಛಗೊಳಿಸುವ, ಹಾಸಿಗೆ ಹೊದಿಕೆ ಸರಿಪಡಿಸುವ ಅಮ್ಮ ಕಿರಿಕಿರಿ ಮಾಡುತ್ತಾಳೆ ಎಂದೆನಿಸಿದರೆ ಖಂಡಿತವಾಗಿಯೂ ಅದು ಆಕೆಯ ತಪ್ಪು ಎಂಬಂತೆ ಮನೆಯ ಜನರೆಲ್ಲ ನಗಾಡಿ ತಮಾಷೆ ಮಾಡುವುದು ಅದೆಷ್ಟು ಸರಿ???
 ನಿಮ್ಮ ಒಂದು ಫೋನ್ ಕಾಲಿಗಾಗಿ… ಅದೂ ನೀವು ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡಿದ್ದೀರಿ ಎಂಬುದನ್ನರಿಯಲು ಆಕೆ ಬಯಸಿದರೆ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಮಕ್ಕಳಿಗೆ ಮುಂದೊಂದು ದಿನ ಹಾಗೆ ಕಾಳಜಿ ಮಾಡುವವರು ಯಾರೂ ಇಲ್ಲ ಎಂದು ಅನ್ನಿಸುವ ದಿನ ಬಂದೇ ಬರುತ್ತದೆ ಅಲ್ಲವೇ??

 ತಮ್ಮೆಲ್ಲ ಅವಶ್ಯಕತೆಗಳಿಗೆ ತಾಯಿಯನ್ನು ಬಲವಾಗಿ ಬಳಸಿಕೊಂಡು ಆಕೆಯ ಇಳಿ ವಯಸ್ಸಿನಲ್ಲಿ ವಯೋ ಸಹಜವಾಗಿ ಬಳಲುವ, ನೋವುಗಳನ್ನು ಹೇಳಿಕೊಳ್ಳುವ, ಗುಳಿಗೆ ಮಾತ್ರೆಗಳನ್ನು ಸೇವಿಸುವ ಅಮ್ಮನಿಗೆ ಅಮ್ಮ ನೀನು ಹೇಗಿದ್ದೀಯಾ?? ಊಟ ಮಾಡಿದೆಯಾ?? ಕಾಲು ನೋವು ಹೇಗಿದೆ ಎಂದು ಕೇಳಿದರೆ ನಮ್ಮ ಬಾಯಿ ಸವೆದು ಹೋಗುವುದಿಲ್ಲ ಅಲ್ಲವೇ??

 ಅಮ್ಮ ಎಂಬ ಅಕ್ಷಯ ಪಾತ್ರೆ ನಮಗೆ ಕೇವಲ ಕೊಡುವುದನ್ನು ಕಲಿತಿದೆ, ಬದಲಾಗಿ ಆಕೆ ಕೇಳುವುದು ತುಸು ಕಾಳಜಿ, ಪ್ರೀತಿ ಮತ್ತು ನಾನಿರುವೆ ಅಮ್ಮ ಚಿಂತಿಸಬೇಡ  ಎಂಬ ಭರವಸೆಯನ್ನು ಮಾತ್ರ. ಅಷ್ಟನ್ನು ಕೊಡಲಾಗದಿದ್ದರೆ ಮನುಷ್ಯರಾಗಿ ಹುಟ್ಟಿದ್ದು  ಯಾವ ಪುರುಷಾರ್ಥಕ್ಕೆ ಎಂಬ ಯೋಚನೆ ನಮಗೆ ಬರಬೇಕಲ್ಲವೇ??

ಅಷ್ಟಕ್ಕೂ ಅಮ್ಮನನ್ನು ನಾವು ಓರ್ವ ಕೆಲಸ ಮಾಡುವ ಯಂತ್ರದಂತೆ ಭಾವಿಸಿದ್ದೇವೆ….. ಆಕೆಯೂ ಸಹ ಮಾನವ ಸಹಜ ಶಿಶು. ಆಕೆಯಲ್ಲೂ ರಾಗ, ದ್ವೇಷ, ಪ್ರೀತಿ, ಪ್ರೇಮ, ಸಿಟ್ಟು, ಸೆಡವು, ಅಸಹನೆಗಳು ಇವೆ…. ಆದರೆ ನಮ್ಮ ಸೊ ಕಾಲ್ಡ್ ಸಾಮಾಜಿಕ ಸ್ಥಿತಿ ಕಾರ್ಯೆಶು ದಾಸಿ, ಕರಣೇಶು ಮಂತ್ರಿ, ಭೋಜ್ಜೆಶು ಮಾತಾ,ರೂಪೇಶು ಲಕ್ಷ್ಮಿ,ಶಯನೇಶು ರಂಭಾ ಕ್ಷಮಯಾಧಾರಿತ್ರಿ ಮುಂತಾದ 6 ಗುಣಗಳನ್ನು ಹೊರಿಸಿ ಆಕೆ ಹೀಗಿದ್ದರೆ ಮಾತ್ರ ಚೆನ್ನ ಎಂದು ಶರ ಬರೆದಿದೆ.
 ಇದು ಆಕೆಯ ಮೇಲೆ ಈ ಸಮಾಜ ಎಸಗಿರುವ ಅಪಚಾರ ಅಲ್ಲವೇ???

 ಸ್ನೇಹಿತರೆ ಈಗಲೂ ಸಮಯ ಮೀರಿಲ್ಲ…. ನಮ್ಮ ಅಮ್ಮಂದಿರ ಪ್ರೀತಿ ಮಮತೆ ತ್ಯಾಗ  ಗುರುತಿಸಿ ಗೌರವಿಸೋಣ. ತುಸು ಬೆಚ್ಚನೆಯ ಪ್ರೀತಿ, ಮಾರ್ಧವತೆ  ನಿನ್ನೊಂದಿಗೆ ನಾನಿದ್ದೇನೆ ಎಂಬ ಭಾವ ತೋರುವ ಮೂಲಕ ಆಕೆಯ ಬಾಳಿನ ಸಂಜೆಯನ್ನು ಸುಖವಾಗಿ ಕಳೆಯುವಂತಹ ಅವಕಾಶ ಕಲ್ಪಿಸೋಣ.  ನೋವ ಮರೆತು ಜಂಜಾಟಗಳನೆಲ್ಲ ದೂರವಿಟ್ಟು ಅಮ್ಮನ ಮಡಿಲಲ್ಲಿ ಮತ್ತೆ ಮಕ್ಕಳಾಗಿ ನೆಮ್ಮದಿಯ ನಿದ್ರೆಗೆ ಜಾರೋಣ.


Leave a Reply

Back To Top