“ಅಮ್ಮ : ಮಗುವಿನ ಜೀವನದ ಓರ್ವ ಸುಂದರ ಶಿಲ್ಪಿ”ಕೆ.ಎನ್. ಚಿದಾನಂದ.

ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ ನು ತಾನೇ…… ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ…… ಅಮ್ಮ ನೀನು ನಕ್ಕರೆ ನಮ್ಮ ಬಾಳು ಸಕ್ಕರೆ…… ಅಮ್ಮನ ಮಾತೆ ಭಗವದ್ಗೀತೆ…….. ಅಮ್ಮಾ..ಊರೇನೆ ಅಂದರು ನೀ ನನ್ನ ದೇವರು……… ಅಮ್ಮ ಎಂದಾಗ ಏನೋ ಸಂತೋಷವು ನಾ ಅಮ್ಮ ಅಂದಾಗ ಏನೋ ಉಲ್ಲಾಸವು …….. ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ, ಅಮ್ಮಾ ನೀನೇ ದೈವ ಅಂತ ಕಾಲು ಮುಗಿದರೋ……
ಪ್ರೀತಿಯ ಓದುಗ ಬಂಧುಗಳೇ, ಈ ಮೇಲಿನ ಎಲ್ಲಾ ವಾಕ್ಯಗಳು ಚಲನಚಿತ್ರಗೀತೆಗಳಾಗಿದ್ದು ಅಮ್ಮನ ಕುರಿತು ಹೇಳುತ್ತವೆ. ನಿಜ ಅಮ್ಮ ಮಗುವಿನ ಪಾಲಿನ ದೈವ. ಅವಳೇ ಬೃಹದ್ಭ್ ವ್ಯ ಬ್ರಹ್ಮಾಂಡ. ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಸೃಷ್ಟಿಕರ್ತನನ್ನೂ ಮೀರಿಸಿದವಳು. ಪ್ರಪಂಚದ ಯಾವ ಪದಪುಂಜಗಳ ವರ್ಣನೆಗೆ ಸಿಗದವಳು. ವರ್ಣನೆಗೆ ಸಿಕ್ಕರೂ ಮುಗಿಯಲಾರದ ಕಾವ್ಯ.  ಮಮತೆಯ ಅಪ್ಪುಗೆಯಲ್ಲಿ ತನ್ನ ಕರುಳ ಕಂದನನ್ನು ಬೆಚ್ಚಗೆ ಬಂಧಿಸಿಡುವವಳು. ಪ್ರೀತಿಯ ಅಮೃತಧಾರೆ ಎರೆಯುವವಳು. ತನ್ನ ನೋವಿನಲ್ಲೂ ತನ್ನ ಮಕ್ಕಳಿಗೆ ಸಾಂತ್ವನ ಕೊಡುವ ಶಕ್ತಿಯಿರುವವಳು. ಅವಳೇ ಅಮ್ಮ.  

ಅಮ್ಮ ಎಂಬ ಪದಕ್ಕೆ ಪರ್ಯಾಯವಾಗಿ ಅಂಬ, ಅಂಬೆ, ಅಬ್ಬೆ, ಅಮ್ಮ, ಅಮ್ಮಾಜಿ, ಅವ್ವ, ಜನನಿ, ಜನ್ಮದಾತ್ರಿ, ಜನ್ಮಧಾತೆ, ತಾಯಮ್ಮ, ಧಾತ್ರಿ, ಮಾತ, ಮಾತಾ, ಮಾತೆ, ಮಾಯಿ, ಹಡೆದವಳು, ಹೆತ್ತಬ್ಬೆ ತಾಯಿ, ಮಾತೃ , ಮಾ ಎಂಬ ಶಬ್ದಗಳಿವೆ. ವಿಶ್ವ ಅಮ್ಮಂದಿರ ದಿನವನ್ನು ಭಾರತವೂ ಸೇರಿದಂತೆ ಪ್ರತಿ ವರ್ಷ ಪ್ರಪಂಚದ ಹಲವೆಡೆ ಮೇ ತಿಂಗಳ ಎರಡನೆಯ ಭಾನುವಾರದಂದು ಆಚರಿಸಲಾಗುತ್ತದೆ. ತಾಯಂದಿರ ದಿನ ಕ್ರಿ.ಶ. 1908 ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅ್ಯನಾ ಜಾರ್ವಿಸ್ ಮದುವೆ ಆಗಿರಲಿಲ್ಲ. ಕ್ರಿ.ಶ. 1905 ರಲ್ಲಿ ಅ್ಯನಾ ಜಾರ್ವಿಸ್ ಅವರ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅ್ಯನಾ ಜಾರ್ವಿಸ್ ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಪ್ರಾರಂಭ ಮಾಡಿದ್ದರು. ಮೇ 9, 1914ರಂದು ಅಮೆರಿಕದ ರಾಷ್ಟ್ರಾಧ್ಯಕ್ಷ ರಾಗಿದ್ದ ವುಡ್ರೋ ವಿಲ್ಸನ್ ಪ್ರತಿ ವರ್ಷ ಮೇ 2ನೇ ಭಾನುವಾರದಂದು ಅಮ್ಮಂದಿರ ದಿನ ಎಂದು ಆಚರಿಸಲಾಗುತ್ತದೆ ಎಂದು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿ ಮಾಡಿದ ನಂತರ ಅಮೆರಿಕ, ಭಾರತ ಹಾಗೂ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರದಂದು ಅಮ್ಮಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.

“ಮಾತೃ ದೇವೋ ಭವ” ಎಂಬುದು ಉಪನಿಷತ್ ವಾಣಿಯಾಗಿದೆ. ಅಂದರೆ ತಾಯಿಯೇ ದೇವರು ಎಂಬುದನ್ನು ವೇದಗಳು ಸ್ಪಷ್ಟಪಡಿಸಿವೆ. ತಾಯಿ ತ್ಯಾಗಮಯಿ, ಮಮತಾಮಯಿ, ಕರುಣಾಮಯಿ, ಪ್ರೇರಣಾಮಯಿ, ವಾತ್ಸಲ್ಯಮಯಿ, ರಕ್ಷಾಮಯಿ, ತಾಯಿಗಿಂತ ಬೇರೆ ದೇವರಿಲ್ಲ, ತಾಯಿಗಿಂತ ಬಂಧುವಿಲ್ಲ, ತಾಯಿ ಪ್ರತ್ಯಕ್ಷ ದೈವ ಹೀಗೆ ತಾಯಿಯ ಕುರಿತು ಹೇಳುವ ಎಲ್ಲಾ ಮಾತುಗಳು ಸತ್ಯ. ಆದರೆ ತಾಯಿ ಮತ್ತು ತಾಯಿ ಪ್ರೀತಿಯನ್ನು ಅಂದರೆ ಮಾತೃ ವಾತ್ಸಲ್ಯವನ್ನು ಏನೆಲ್ಲಾ, ಎಷ್ಟೆಲ್ಲಾ ಹೇಳಿದರೂ ಕೇವಲ ಮಾತು ಅಥವಾ ಅಕ್ಷರಗಳಲ್ಲಿ ಹಿಡಿದಿಡುವುದು ಸಾಧ್ಯವಾದೀತೆ ? ಹೇಳಿ ನೋಡೋಣ. ಇಲ್ಲ, ಅಮ್ಮ ಅನ್ನೋದು ಒಂದು ಮಹೋನ್ನತವಾದ ವ್ಯಕ್ತಿತ್ವ. ಹಾಗಾದರೆ, ಮಾತೃ ವಾತ್ಸಲ್ಯ ಎಂದರೇನು? ಎಂದು ಸ್ವಲ್ಪ ಚಿಂತನೆ ಮಾಡೋಣ. ಇದು ನೇರವಾಗಿ ತಾಯಿಯ ಪ್ರೀತಿಗೆ ಸಂಬಂಧಿಸಿದ ಮಾತು. ವಾತ್ಸಲ್ಯ ಎಂದರೆ ಪ್ರೀತಿ, ಮಮತೆ, ಕರುಣೆ, ದಯೆ, ಇತ್ಯಾದಿ ಅರ್ಥಗಳನ್ನು ಹೊಂದಿದೆ. ವಾತ್ಸಲ್ಯ ಒಂದು ಅದ್ಭುತ  ಭಾವನಾತ್ಮಕ ಮನಸ್ಥಿತಿ. ಭಾರತೀಯ ಸಂಸ್ಕೃತಿಯು ವಿಶ್ವ ಸಂಸ್ಕೃತಿಗೆ ಮಾತೃ ಸ್ಥಾನದಲ್ಲಿದೆ. ಏಕೆಂದರೆ ತಾಯಿಗೆ ಮಹೋನ್ನತವಾದ ಸ್ಥಾನವನ್ನು ನೀಡಿದ ಸಂಸ್ಕೃತಿ ಎಂದರೆ ಅದು ಭಾರತೀಯ ಸಂಸ್ಕೃತಿ. ಭಾರತದಲ್ಲಿ ಮಾತೃ ವಾತ್ಸಲ್ಯ ಎಂಬ ಪದವನ್ನು ನಾವು ಪದೇ ಪದೇ ಹೇಳುತ್ತಲೇ ಇರುತ್ತೇವೆ , ಕೇಳುತ್ತಲೂ ಇರುತ್ತೇವೆ. ಹೌದು. ಮಾತೃ ವಾತ್ಸಲ್ಯಕ್ಕೆ ಈ ಬ್ರಹ್ಮಾಂಡದಲ್ಲಿ ಬೇರೆ ಯಾವುದೂ ಸರಿಸಾಟಿಯಿಲ್ಲ. ಹಾಗಾದಲ್ಲಿ ಮಾತೃ ವಾತ್ಸಲ್ಯ ಹೇಗಿರುತ್ತದೆ. ಸ್ತ್ರೀಯು ತನ್ನ ಗರ್ಭದಲ್ಲಿ ಗರ್ಭಾಂಕುರ ಧರಿಸಿದ ಮೊದಲ ಕ್ಷಣದಿಂದಲೇ ತಾಯ್ತನದ ಅನುಭವ ಅವಳಿಗಾಗುತ್ತದೆ. ಮಗುವನ್ನು ಸಾಕಿ ಸಲಹುವ ಪರಮ ಜವಾಬ್ದಾರಿ ಈಗಿನಿಂದಲೇ ಆರಂಭವಾಗುತ್ತದೆ. ಮಗುವಿನ ಬಾಯಲ್ಲಿ ಮೊದಲ ತೊದಲ ” ಅಮ್ಮ” ಎಂಬ ಮಾತು ತಾಯ್ತನದ ಜೀವನವನ್ನೇ ಸಾರ್ಥಕಗೊಳಿಸುತ್ತದೆ. ಮಾತೃ ವಾತ್ಸಲ್ಯ ಜೊತೆ ಜೊತೆಯಲ್ಲೇ ಪ್ರಾರಂಭವಾಗಿ ಬಿಡುತ್ತದೆ. ತಾಯಿ ತನ್ನ ಮಗುವನ್ನು ಒಂಭತ್ತು ತಿಂಗಳುಗಳ ಕಾಲ ತನ್ನ ಗರ್ಭದಲ್ಲಿ ಹೊತ್ತು ಸಾಕುವುದು ಸ್ತ್ರೀ ಕುಲಕ್ಕೆ ಗೌರವವನ್ನು ತಂದುಕೊಡುವ ಸಂಗತಿಯಾಗಿದೆ. ಇದು ಮಾತೃ ವಾತ್ಸಲ್ಯವೇ ಹೊರತು ಬೇರೇನೂ ಅಲ್ಲ. ಮಗುವಿಗೆ ಜನ್ಮ ನೀಡುವುದು, ಹಾಲುಣಿಸುವುದು, ಲಾಲಿ ಹಾಡುವುದು, ಪಾಲನೆ ಪೋಷಣೆ ಮಾಡುವುದು, ಮಗುವಿನ ಆರೋಗ್ಯ ನೋಡಿಕೊಳ್ಳುವುದು, ಮಗುವಿನ ಹಸಿವನ್ನು ಅಳುವಿನ ಮೂಲಕವೇ ಅರ್ಥ ಮಾಡಿಕೊಳ್ಳುವುದು, ಕಾಲಕಾಲಕ್ಕೆ ವೈದ್ಯರಿಂದ ಮಗುವಿನ ಆರೋಗ್ಯ ತಪಾಸಣೆ ಮಾಡಿಸುವುದು, ಸಂಜೆಯಾಗುತ್ತಲೆ ದೃಷ್ಟಿ ತೆಗೆದು ಹಾಕುವುದು, ಮಗುವಿನ ಬೆಳವಣಿಗೆ ಮತ್ತು ವಿಕಾಸಕ್ಕಾಗಿ ತನ್ನ ಸುಖವನ್ನೆಲ್ಲಾ ತ್ಯಾಗ ‌ಮಾಡುವುದು ಇದರಲ್ಲೇ ಸ್ತ್ರೀಯು  ತಾಯ್ತನದ ಸರ್ವ ಶ್ರೇಷ್ಠ ಅನುಭವವನ್ನು ಪಡೆಯುತ್ತಾಳೆ.  ಇದೇ ನೋಡಿ ಮಾತೃ ವಾತ್ಸಲ್ಯ. ಜನನಿ ತಾನೇ ಮೊದಲ ಗುರು ಎಂಬಂತೆ, ಊಟ ಮಾಡಿಸುವುದು, ಪಾಠ ಹೇಳಿ ಕೊಡುವುದು, ಬುದ್ಧಿ ಹೇಳುವುದು, ಮಾತು ಕಲಿಸುವುದು, ಅಕ್ಷರ ತಿದ್ದಿಸುವುದು, ನಿತ್ಯಕರ್ಮಗಳಲ್ಲಿ ಶುಚಿತ್ವವನ್ನು ತಿಳಿಸುವುದು, ಸ್ನಾನಮಾಡಿಸುವುದು, ಬಟ್ಟೆಗಳನ್ನು ತೊಳೆದು ಕೊಳ್ಳುವುದನ್ನು ಕಲಿಸುವುದು, ಬಟ್ಟೆ ಧರಿಸುವುದನ್ನು ಕಲಿಸುವುದು ತನ್ನ ಮಗುವಿಗಾಗಿ ಎಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಾ ಅದರಲ್ಲಿಯೇ ಪರಮಾನಂದ ಸುಖವನ್ನು ಕಾಣುವುದು. ಇದು ಮಾತೃ ವಾತ್ಸಲ್ಯವಲ್ಲದೇ ಬೇರೇನು?  ಮಗುವಿಗೆ ಏನೊಂದು ಅರ್ಥವಾಗದಿದ್ದಾಗ, ಎಲ್ಲವನ್ನೂ ಅರ್ಥಮಾಡಿಕೊಂಡು ತಾಯಿ ತನ್ನ ಮಗುವನ್ನು ಬೆಳೆಸಿರುತ್ತಾಳೆ. ಆದರೆ ಅದೇ ಬೆಳೆದ ಮಗ / ಮಗಳು ತನ್ನ ತಾಯಿಗೆ ಪದೇ ಪದೇ ” ನಿನಗೇನೂ ಅರ್ಥ ಆಗಲ್ಲ ಅಮ್ಮ” ಎಂದು ಹೇಳುವ ಮಾತು ಎಷ್ಟೊಂದು  ಆಶ್ಚರ್ಯಕರವಾಗಿದೆ. ಮಗುವಿಗೆ ಜನ್ಮ ನೀಡಿದ ಕ್ಷಣದಿಂದ ಹಿಡಿದು ತನ್ನ ಜೀವವಿರುವ ತನಕ ತನ್ನ ಮಗುವಿಗಾಗಿ ಎಲ್ಲಾ ರೀತಿಯ ನೋವುಗಳನ್ನು ಸಹಿಸಿಕೊಳ್ಳುವ ಸಹನಾ ಮೂರ್ತಿಯೇ ಈ ವಾತ್ಸಲ್ಯಮಯಿ ತಾಯಿ. ಅಮ್ಮನ ಬಾಳಿನ ನೆಮ್ಮದಿಗೆ ಕಂದ ನೀನೆ ಆಧಾರ ಎಂದು ಹೇಳುವ ತಾಯಿಯ ಮಾತೃ ವಾತ್ಸಲ್ಯ ಕಡಲಿನ ಆಳಕ್ಕಿಂತಲೂ ಹೆಚ್ಚು. ಆಗಸದ ಅಗಲಕ್ಕಿಂತಲೂ ವಿಶಾಲವಾದುದಾಗಿದೆ. ಮಾತೃ ವಾತ್ಸಲ್ಯ ಕಾಮಧೇನುವಿನಂತೆ ಮತ್ತು ಕಲ್ಪವೃಕ್ಷದಂತೆ ಅಮರವಾಗಿದೆ. ಮಾತೃ ವಾತ್ಸಲ್ಯ ಅಕ್ಷಯ ಪಾತ್ರೆಯಂತಿದ್ದು ಮೊಗೆದಷ್ಟೂ ಪ್ರೀತಿ ಸಿಗುತ್ತದೆ. ತಾಯಿ ತನ್ನ ಮಗುವಿನ ಮೇಲೆ ಸುರಿಯುವ ಮುತ್ತಿನ ಸುರಿಮಳೆ, ಮಾತೆಯ ಆಲಿಂಗನ ಅಪ್ಪುಗೆಯಲ್ಲಿ ಸಿಗುವ ಬೆಚ್ಚನೆಯ ರಕ್ಷಣೆ, ಬೆಸುಗೆ, ಅನುಬಂಧ, ಸಂಬಂಧಗಳ  ಆನಂದವೇ ಮಾತೃ ವಾತ್ಸಲ್ಯ. ಅಮ್ಮನ ಮಡಿಲು, ಸ್ವರ್ಗದ ತೊಟ್ಟಿಲು. ಅಮ್ಮನ ಮಡಿಲು ಮಮತೆಯ ಕಡಲು. ಇಷ್ಟೆಲ್ಲಾ ಅಕ್ಕರೆ ನೀಡಿ ಬೆಳೆಸಿದ ಮಗು ಸ್ವಲ್ಪ ಹೊತ್ತು ತಾಯಿಯ ಕಣ್ಣಿನಿಂದ ಮರೆಯಾದರೆ ಮೊದಲು ಚಡಪಡಿಸುವ ಮನಸ್ಸು ಅಮ್ಮನದು. ಅಮ್ಮನ ಹೃದಯ ಮಗುವಿಗಾಗಿ ಸದಾ ಮಿಡಿಯುತ್ತದೆ. ಆದ್ದರಿಂದಲೇ ಕವಿಯೋರ್ವ,” ಅಮ್ಮ ಎಂದರೆ ಏನೋ ಹರುಷವು, ನಮ್ಮ ಪಾಲಿಗೆ ಅವಳೇ ದೈವವು”  ಎಂದು ಹಾಡಿದ್ದಾನೆ. ಅಮ್ಮ ಎಂದೆಂದಿಗೂ ಅಕ್ಕರೆಯ ಸಕ್ಕರೆ, ಕರುಣೆಯ ಕಸ್ತೂರಿ ಎಂದಿದೆ ಈ ಜಗತ್ತು.  ವಿಶ್ವ ವಿಜೇತ ಸ್ವಾಮಿ ವಿವೇಕಾನಂದರು ಹೇಳುವಂತೆ, ” ಈಗ ನಾನು ಏನಾಗಿದ್ದೀನೋ, ಅದಕ್ಕೆ ಕಾರಣ ನಮ್ಮ ಅಮ್ಮ. ನಾನು ಇನ್ನೇನೇ ಆದರೂ ಆಕೆಯ ಋಣವನ್ನು ತೀರಿಸುವುದಕ್ಕಂತೂ ಸಾಧ್ಯವಿಲ್ಲ” ಅಂದರೆ ಸ್ವಾಮಿ ವಿವೇಕಾನಂದರ ಮಾತು ‘ಅಮ್ಮ’ ಎಂಬ ಪಾತ್ರದ ಮಹೋನ್ನತಿಯನ್ನು ಪ್ರಸ್ತುತಪಡಿಸುತ್ತದೆ.  ಭಾರತದ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರ ಮಾತಲ್ಲಿ ಹೇಳುವುದಾದರೆ ” ತಾಯಿಗಿಂತ ದೊಡ್ಡದು ಇನ್ನೇನೂ ಇಲ್ಲ, ತಾಯಿ ಸಂತೋಷವಾಗಿದ್ದರೆ ಕುಟುಂಬ ಸಂತೋಷವಾಗಿರುತ್ತದೆ, ಕುಟುಂಬ ಸಂತೋಷವಾಗಿದ್ದರೆ ದೇಶ ಸಂತೋಷವಾಗಿರು ತ್ತದೆ. ಅಂದರೆ ಇಡೀ ದೇಶದ ಸಂತೋಷ ತಾಯಿಯ ಸಂತೋಷ ಮೇಲೆ ನಿಂತಿದೆ.
ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ರವರು, ” ನನಗೆ ನಮ್ಮಮ್ಮನ ಪ್ರಾರ್ಥನೆಗಳು ಇಂದಿಗೂ ನೆನಪಿನಲ್ಲಿವೆ. ಅವು ಯಾವತ್ತೂ ನನ್ನನ್ನೇ ಅನುಸರಿಸುತ್ತಿದ್ದವು. ನನ್ನ ಜೀವನದುದ್ದಕ್ಕೂ ನನ್ನನ್ನು ಗಟ್ಟಿಯಾಗಿ ಹಿಡಿದಿಟ್ಟಿದ್ದು ಅಮ್ಮನ ಪ್ರಾರ್ಥನೆಗಳೇ ” ಎಂದು ಸದಾ ಅಮ್ಮನನ್ನು, ಆಕೆಯ ತ್ಯಾಗವನ್ನು ನೆನಪಿಸಿಕೊಳ್ಳುತ್ತಿದ್ದರು ಎಂದು ಅವರ ಜೀವನಗಾಥೆ ಹೇಳುತ್ತದೆ.  “ಪೊಲಿಯೋ ಪೀಡಿತೆಯಾಗಿ, ಒಂಬತ್ತನೇ ವಯಸ್ಸಿನವರೆಗೂ ಕಾಲಿಗೆ ಕೋಳ ಧರಿಸಿಯೇ ತಿರುಗುತ್ತಿದ್ದ ನನ್ನನ್ನು ನೋಡಿದ ವೈದ್ಯರು ನೀನು ಮುಂದೆಂದೂ ನಡೆದಾಡುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದರು. ಆದರೆ ನೀನು ನಡೆದಾಡಬಲ್ಲೆ, ಓಡಬಲ್ಲೆ ಎಂದು ನಮ್ಮಮ್ಮ ಪ್ರತಿದಿನ ನನ್ನನ್ನು ಹುರಿದುಂಬಿಸುತ್ತಿ ದ್ದರು. ನಾನು ವೈದ್ಯರನ್ನು ನಂಬಲಿಲ್ಲ, ಅಮ್ಮ ನನ್ನು ನಂಬಿದೆ. ನನ್ನ ನಂಬಿಕೆ ಸುಳ್ಳಾಗಲಿಲ್ಲ, ಅಮ್ಮ ಹೇಳಿದಂತೆ ನಾನು ನಡೆಯತೊಡಗಿದೆ, ಓಡಿದೆ… ಅಷ್ಟೇ ಅಲ್ಲ, ಒಲಿಂಪಿಕ್ಸ್ ನಲ್ಲಿ ಓಟದ ಸ್ಪರ್ಧೆಯಲ್ಲೇ ಮೂರು ಚಿನ್ನ ಗಳಿಸಿ, ಈ ಸಾಧನೆ ಮಾಡಿದ ಮೊದಲ ಅಮೆರಿಕದ ಮಹಿಳೆ ಎಂಬ ಗೌರವಕ್ಕೆ ಪಾತ್ರಳಾದೆ…” ಅಮೆರಿಕದ ಅಥ್ಲೀಟ್ ವಿಲ್ಮಾ ರುಡೋಲ್ಫ್ ರ ಈ ಮಾತನ್ನು ಕೇಳಿದರೆ ಅಮ್ಮನ ಶಕ್ತಿಯೇನು ಎಂಬುದು ನಮಗೆಲ್ಲ ಅರಿವಾಗುತ್ತದೆ. ಒಟ್ಟಿನಲ್ಲಿ ಅಮ್ಮ ಎಂದರೆ ನಂಬಿಕೆ. ಅಮ್ಮ ಮಗುವಿನ ಜೀವನದ  ಓರ್ವ ಸುಂದರ ಶಿಲ್ಪಿ. ಎಂತಹ ಒರಟು ಮಗುವಾದರೂ ಅದನ್ನು ತಿದ್ದಿತೀಡಿ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯನ್ನಾಗಿ ಕೊಡುಗೆ ನೀಡುವ ಚಾಣಾಕ್ಷ್ಯತೆ ಅಮ್ಮನಲ್ಲಿದೆ. ಈ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳಿಗೂ ಜೀವ ನೀಡಿ ಬದುಕನ್ನು ಕಟ್ಟಿಕೊಡುವವಳು ಅಮ್ಮ. ಸಹೃದಯ ಸಹನಾ ಮೂರ್ತಿ. ಅಂತಹ ಮಾತೃ ಹೃದಯ ನಮ್ಮೆಲ್ಲ ರಿಗೂ ಬೇಕಾಗಿದೆ. ತಾಯಿಯ ಕಣ್ಗಳಿಗೆ ಮಗ ಅಥವಾ ಮಗಳು ಎಷ್ಟೇ ಬೆಳೆದರೂ, ಮಗುವಾಗಿಯೇ ನೋಡಲು ಇಚ್ಛಿಸುತ್ತಾಳೆ ತಾಯಿ. ತನ್ನ ಮಗುವಿಗೆ ಎಂತಹುದೇ ಕಷ್ಟ ಬಂದರೂ ತಾಯಿ ತನ್ನ ಮಾತೃ ಧರ್ಮ ಪಾಲನೆಯ ಮೂಲಕ ಸದಾ ರಕ್ಷಾ ಕವಚದಂತೆ ಜೊತೆಯಿರುತ್ತಾಳೆ. ಮಗ ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗಲೂ , ಅಲ್ಲಿಯೂ ಮಗನಿಗೆ ಒಳ್ಳೆಯದನ್ನೆ ಬಯಸುತ್ತಾಳೆ ತಾಯಿ. ಎಷ್ಟೆಷ್ಟೆಲ್ಲಾ ಕಷ್ಟಪಟ್ಟು ಸಾಕಿ ಸಲಹಿದ ತಾಯಿಗೆ ಒಂದು ದಿನವನ್ನು ಮುಡಿಪಾಗಿಟ್ಟು , ವಿಶ್ವ ತಾಯಂದಿರ ದಿನವೆಂದು ಆಚರಿಸಿ ಸುಮ್ಮನಿದ್ದು ಬಿಟ್ಟರೆ ಸಾಕೆ ? ತಾಯಿಗಾಗಿ ಪ್ರೀತಿ ಹಾಗೂ ಉಡುಗೊರೆ ನೀಡಲು ಯಾವುದೇ ವಿಶೇಷ ದಿನದ ಅಗತ್ಯ ಇಲ್ಲ. ಆದರೂ ಕೂಡಾ ತಾಯಂದಿರ ದಿನದಂದು ತಾಯಿಗೆ ಮತ್ತಷ್ಟು ಗೌರವ ನೀಡಲಾಗುತ್ತದೆ. ಈ ದಿನದಂದು ತಾಯಿಗೆ ಸಿಹಿ ಜೊತೆ ಉಡುಗೊರೆ ನೀಡಲಾಗುತ್ತದೆ. ವರ್ಷದ ಎಲ್ಲಾ ದಿನಗಳನ್ನು ತಾಯಿಯ ಹಾರೈಕೆಗೆ, ಅವಳ ಸಂತೋಷಕ್ಕಾಗಿ ಮೀಸಲಿಡೋಣ. ಅಮ್ಮನನ್ನು ಪೂಜಿಸಿ, ನಮಸ್ಕರಿಸಿ, ಪ್ರೀತಿಯಿಂದ ನೋಡಿಕೊಳ್ಳೋಣ. ಇದು ಸಾಂವಿಧಾನಿಕ ಕರ್ತವ್ಯವೂ ಆಗಿದೆ. ಮಾತೃ ಋಣ ಅನಂತವಾದುದು. ಅಂತೆಯೇ ಮಾತೃ ವಾತ್ಸಲ್ಯವೂ ಅನಂತವಾದುದು. ಜಗತ್ತಿನ ಎಲ್ಲ ಅಮ್ಮಂದಿರಿಗೂ ವಿಶ್ವ ಅಮ್ಮಂದಿರ ದಿನದ ಶುಭಾಷಯಗಳು.

—————-

Leave a Reply

Back To Top