ಕನ್ನಡನಾಡಿನ ಕಲಾ ಕಣ್ಮಣಿ ಡಾ. ರಾಜ್ ಹುಟ್ಟು ಹಬ್ಬದ ವಿಶೇಷ ಲೇಖನ- ಶೈಲಾಬೆಂಗಳೂರು

ಡಾ ರಾಜ್ ಕನ್ನಡಿಗರ ಅಪೂರ್ವ ಸಂಪತ್ತು, ಈ ನಮ್ಮ ಮುತ್ತು, ಕರುನಾಡ ಪ್ರೀತಿಯ ರಾಜಕುಮಾರ. ಹೆಸರೇ ಸೂಚಿಸುವಂತೆ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ರಾಜನಾಗಿಯೇ ಮೆರೆದು, ಅಂದೂ, ಇಂದೂ ಎಂದೆಂದೂ, ಎಲ್ಲಾ ವಯೋಮಾನದ ಚಿತ್ರರಸಿಕರಿಗೆ ಇಷ್ಟವಾಗುವ ಏಕೈಕ ಮಹಾನ್ ಕಲಾವಿದ ನಮ್ಮ ರಾಜಕುಮಾರ್.  

ಇವರು ಹುಟ್ಟಿದ್ದು 1929, ಏಪ್ರಿಲ್ 24 ರಂದು  ಚಾಮರಾಜನಗರ ಜಿಲ್ಲೆಯ ಗಡಿಬಾಗದ ಗಾಜನೂರು ಎಂಬ ಸಣ್ಣ ಗ್ರಾಮದಲ್ಲಿ.  ಓದಿದ್ದು ನಾಲ್ಕನೇ ತರಗತಿಯಾದರೂ ತಮ್ಮ ನಟನೆಯಲ್ಲಿ, ಗಾಯನದಲ್ಲಿ ಜೀವನ ಸಂಪೂರ್ಣತೆ ಪಡೆದು, ನಟನೆಯನ್ನೇ ಜೀವನವಾಗಿಸಿದ ಕಲಾ ತಪಸ್ವಿ. ಅವರನ್ನು ಆರಾಧಿಸುವ ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಎಂದೇ ಕರೆಯುತ್ತಿದ್ದ ಪ್ರೀತಿಯ ಕರ್ನಾಟಕದ ಮನೆ ಮಗ ಅಣ್ಣಾವ್ರು.

ಸಾಮಾನ್ಯವಾಗಿ ನಾಯಕ ನಟ ಅಥವಾ ಅದರಲ್ಲೂ ಒಬ್ಬ ಮಹಾನ್ ಮೇರು ನಟನೆಂದರೆ ಸ್ವಲ್ಪ ಗತ್ತು, ದರ್ಪ ಇದ್ದೇ ಇರುವ ಕಾಲದಲ್ಲಿ ಸಭ್ಯತೆಗೆ ಮತ್ತೊಂದು ಅರ್ಥ ತಂದವರೇ ನಮ್ಮೆಲ್ಲರ ಮುಗುಳ್ನಗೆಯ ಸರದಾರ ಡಾ. ರಾಜ್.  ಎಂಥಹ ಪಾತ್ರ ಕೊಟ್ಟರೂ ನೀರು ಕುಡಿದಂತೆ ಸರಾಗವಾಗಿ ಅಭಿನಯಿಸುವ ಕಲೆ ಸಿದ್ದಿಸಿಕೊಂಡಿದ್ದ ಡಾ. ರಾಜ್ ತಮ್ಮ ತಂದೆಯವರಾದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರೊಡನೆ ಸಣ್ಣ ವಯಸಿನಲ್ಲೇ ಗುಬ್ಬಿ ನಾಟಕ ಮಂಡಳಿಯಲ್ಲಿ ಕಲಾ ಸೇವೆ ಸಲ್ಲಿಸುತ್ತಿದ್ದರಿಂದ ಅಭಿನಯ ಕಲೆ ಅವರಿಗೆ ರಕ್ತಗತವಾಗಿಯೇ ಬಂದಿತ್ತು. ಬಾಲ್ಯದಲ್ಲೇ ನಾಟಕದಲ್ಲಿನ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ೧೯೫೪ ರಲ್ಲಿ ಬೇಡರ ಕಣ್ಣಪ್ಪ ಚಿತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಡಾ. ರಾಜ್ ಅಲ್ಲಿಂದ ಹಿಂದಿರುಗಿ ನೋಡಿದ್ದೆ ಇಲ್ಲ. ಸಾಲು ಸಾಲು ಚಿತ್ರಗಳಿಗೆ ಜೀವವಾದರು. 1972ರಲ್ಲಿ ತೆರೆ ಕಂಡ ‘ಬಂಗಾರದ ಮನುಷ್ಯ’ ಆ ಕಾಲದಲ್ಲೇ ಚಿತ್ರಮಂದಿರಗಳಲ್ಲಿ ಸತತ ಒಂದು ವರ್ಷ ಪ್ರದರ್ಶನ ಕಂಡು ಮತ್ತು ಮರುಪ್ರದರ್ಶನಗೊಂಡು ದಾಖಲೆ ನಿರ್ಮಿಸಿತ್ತು.

ಹಲವಾರು ವಿಭಿನ್ನ ಪಾತ್ರಗಳು ಡಾ. ರಾಜ್ ರವರನ್ನು ಅರಸಿ ಬಂತು.  ಭಕ್ತ ಪ್ರಹ್ಲಾದದಲ್ಲಿ ದರ್ಪದಿಂದ ಆರ್ಭಟಿಸಿದ್ದು, ಶ್ರೀ ಕೃಷ್ಣ ದೇವರಾಯ ಚಿತ್ರದಲ್ಲಿನ ರಾಜ ಗಾಂಭೀರ್ಯ, ಕಸ್ತೂರಿ ನಿವಾಸದಲ್ಲಿನ ಸ್ವಾಭಿಮಾನಿ, ಭಕ್ತ ಕುಂಬಾರನ ಭಕ್ತಿ, ಕವಿರತ್ನ ಕಾಳಿದಾಸ ಚಿತ್ರದಲ್ಲಿ ಮಹಾಕಾಳಿಯ ಆರಾಧಕನಾಗಿ, ಶ್ರೀನಿವಾಸ ಕಲ್ಯಾಣದಲ್ಲಿ ಸಾಕ್ಷಾತ್ ಶ್ರೀನಿವಾಸನಂತೆ ಕಂಗೊಳಿಸಿ, ಸಂಪತ್ತಿಗೆ ಸವಾಲ್ ನಲ್ಲಿ ಜಮೀಂದಾರಿಕೆ ವಿರುದ್ಧ ಹೋರಾಡುವ ಕೆಚ್ಚೆದೆಯ ಯುವಕನಾಗಿ, ಹಾಲು ಜೇನು, ಭಾಗ್ಯವಂತರು ಚಿತ್ರದಲ್ಲಿ ಮುದ್ದಿನ ಮಡದಿಗೆ ಪ್ರೀತಿಯ ಪತಿಯಾಗಿ, ಗಂಧದ ಗುಡಿಯಲ್ಲಿನ ಅರಣ್ಯ ರಕ್ಷಕ, ಸನಾದಿ ಅಪ್ಪಣ್ಣ ಚಿತ್ರದಲ್ಲಿ ಶಯಾನಾಯಿ ವಾದಕನಾಗಿ ದದ್ದು ಒಂದೇ ಎರಡೇ….ಅವರು ಮಾಡದ ಪಾತ್ರಗಳೇ ಇಲ್ಲ.  ಅಷ್ಟರಲ್ಲಿ ಆಗಲೇ ಅವರು ನಟಸಾರ್ವಭೌಮನೆನಿಸಿದ್ದರು. ರಸಿಕರ ರಾಜನಾದರು. ಕರುನಾಡಿಗೆ ಸಿಕ್ಕ ನಿಜವಾದ ಅಪ್ರತಿಮ ವರನಟರಾದರು. ಅವರಿಗೆ ಸಂದ ಇಲ್ಲ.

1959 ರಲ್ಲಿ ಬಿಡುಗಡೆಯಾದ ಮಹಿಷಾಸುರ ಮರ್ಧಿನಿ ಚಿತ್ರದ ‘ತುಂಬಿತು ಮನವ’ ಎಂಬ ಹಾಡಿನಿಂದ ತಮ್ಮ ಮೊದಲ ಗಾಯನವನ್ನು ಪ್ರಾರಂಭಿಸಿದ ಅಣ್ಣಾವ್ರು ಮತ್ತೆ ಹಾಡಲು ಶುರು ಮಾಡಿದ್ದು ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಹಾಡಿನ ಮೂಲಕ ಅಲ್ಲಿಯವರೆಗೂ ಅವರ ಚಿತ್ರಗಳಿಗೆ ಪಿ.ಬಿ ಶ್ರೀನಿವಾಸ್ ಅವರು ದನಿಯಾಗಿದ್ದರು.  ಪಿ.ಬಿ. ಶ್ರೀನಿವಾಸ್ ರವರ  ಧ್ವನಿ ರಾಜ್ ಹಾಡುಗಳಿಗೆ ಒಗ್ಗಿಹೋಗಿತ್ತು. ರಾಜ್ ರವರು ಎಷ್ಟೋ ಬಾರಿ ಅನೇಕ ಸಂದರ್ಶನಗಳಲ್ಲಿ, ನಾನು ಶರೀರವಾದರೆ ಪಿ. ಬಿ. ಎಸ್  ನನ್ನ ಶಾರೀರ ಎಂದು ಹೇಳಿಕೊಳ್ಳುತ್ತಿದರು. ಬಭ್ರುವಾಹನ ಚಿತ್ರದಲ್ಲಿ ತಮ್ಮದೇ ಎರಡೂ ಪಾತ್ರಗಳಲ್ಲಿನ ಹಿನ್ನೆಲೆ ಗಾಯನಕ್ಕಾಗಿ ಪಿ.ಬಿ.ಎಸ್ ಜೊತೆ ಹಾಡಿದ ‘ಯಾರು ತಿಳಿಯರು’ ಎಂಬ ಜನಪ್ರಿಯ ಗೀತೆ ಇಂದಿಗೂ ಜನಮಾನಸದಲ್ಲಿ ಶಾಶ್ವತ. ಅದಕ್ಕೆ ಅವರನ್ನು ಕನ್ನಡಿಗರು ಪ್ರೀತಿ ಇಂದ ‘ಗಾನಗಂಧರ್ವ’ ಎಂದದ್ದು.

ಡಾ. ರಾಜ್ ಅವರ ಚಿತ್ರಗಳಲ್ಲದೆ, ಬೇರೆ ಬೇರೆ ನಾಯಕ ನಟರಿಗೂ ದನಿಯಾದರು.  ನಟನೆಯಂತೆ ಅವರ ಗಾಯನ ಕಲೆಯೂ ಒಂದರ ಮೇಲೊಂದರಂತೆ ಜನಪ್ರಿಯವಾದವು. ಕುಮಾರ್ ಬಂಗಾರಪ್ಪ ನಟನೆಯ ಅಶ್ವಮೇಧ ಚಿತ್ರದ ‘ ಹೃದಯ ಸಮುದ್ರ ಕಲಕಿ’ ಎಂಬ ಗೀತೆಗಾಗಿಯೇ ಚಿತ್ರ ನೋಡಲು ಜನ ಬರುತ್ತಿದ್ದುದು ಸುಳ್ಳಲ್ಲ. ಅಲ್ಲದೆ, ‘ಮುದ್ದಿನ ಮಾವ’ ಚಿತ್ರದಲ್ಲಿ ಮಹಾನ್ ಗಾಯಕರಾದ ಎಸ್.ಪಿ. ಬಾಲಸುಬ್ರಮಣ್ಯಂ ಮುಖ್ಯ ಪಾತ್ರದಲ್ಲಿ ನಟಿಸಿದಾಗ ಅದರಲ್ಲಿನ ಎರಡು ಹಾಡುಗಳಿಗೆ ರಾಜ್ ಹಾಡಿದರು. ಒಬ್ಬ ಪ್ರಖ್ಯಾತ ಗಾಯಕನಿಗೆ ಒಬ್ಬ ಹಿರಿಯ ಶ್ರೇಷ್ಠ ನಟ ಹಾಡಿದ್ದು ಅದೇ ಮೊದಲು, ಹಾಗೂ ಇಬ್ಬರ ಅಭಿಮಾನಿಗಳಿಗೂ ಇಂದಿಗೂ ಆ ಚಿತ್ರ ನೋಡಲು ಒಂದು ಥರದ ಪುಳಕ, 1992 ರಲ್ಲಿ “ಜೀವನ ಚೈತ್ರ” ಚಿತ್ರದ ‘ನಾದಮಯ’ ಗೀತೆಯನ್ನು ಡಾ. ರಾಜ್ ಶಾಸ್ತ್ರೀಯಾವಾಗಿ ಶುಶ್ರಾವ್ಯವಾಗಿ ಹಾಡಿದ್ದರು.., ಆ ಗೀತೆಗೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿತ್ತು. ಅಂದು ಕನ್ನಡಿಗರೆಲ್ಲರ ಮನೆ, ಮನ ನಾದಮಯವಾಗಿತ್ತು, ಹೆಮ್ಮೆ ಇಂದ ಬೀಗಿತ್ತು. ಹಂಸಲೇಖ ಸಂಗೀತ ನಿರ್ದೇಶನದ ಆಕಸ್ಮಿಕ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆ ಕೂಡ ಇಂದಿಗೂ ಕನ್ನಡ ನಾಡಿನ ಅಸ್ಮಿತೆಯ ಗೀತೆಯಾಗಿಯೇ ಉಳಿದಿದೆ…

ನಟನೆಯ ಉತ್ತುಂಗದಲ್ಲಿ ಇರುವಾಗಲೇ ಚಿತ್ರಗೀತಯಲ್ಲದೆ ಅನೇಕಾನೇಕ ಭಾವಗೀತೆ, ಭಕ್ತಿಗೀತೆ ಇನ್ನೂ ಅನೇಕ ಗೀತೆಗಳನ್ನು ಹಾಡಿದ್ದು ಅವರ ಸಾಧನೆಗೆ ಮತ್ತೊಂದು ಹೆಮ್ಮೆಯ ಗರಿಗಳಾದವು.  ಅವರ ಜೀವನದ ಅಂತ್ಯದವರೆಗೂ ಕಲಾ ಸೇವೆ ಮಾಡುತ್ತಲೇ ಬಂದ ಡಾ. ರಾಜ್  ನೆಗೆ ೨೦೦೬ ಏಪ್ರಿಲ್ 12 ರಲ್ಲಿ ತಮ್ಮ ಅಪಾರ ಅಭಿಮಾನಿಗಳನ್ನು ಅಗಲಿ ಇಹಲೋಕ ತ್ಯಜಿಸಿದರು ಕೂಡ ಈಗಲೂ ಕನ್ನಡದ ಕಣ್ಮನಿಯಾಗಿ ಜನಮಾನಸದಲ್ಲಿ ರಾರಾಜಿಸುತ್ತಿರುವರು. ಆದರೆ ಕಲೆಗೆ ಸಾವಿಲ್ಲ,  ಅಣ್ಣಾವ್ರ ಹೆಸರು ಸೂರ್ಯ ಚಂದ್ರರಷ್ಟೇ ಅಮರ. ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಮನಸಿನ ಮೂಲೆ ಮೂಲೆಯಲ್ಲೂ ಅಣ್ಣಾವ್ರ ನೆನಪು ಚಿರಸ್ಥಾಯಿಯಾಗಿ ಉಳಿದಿದೆ.

——————————-

Leave a Reply

Back To Top