ವಿಶೇಷ ಲೇಖನ
ಸುಜಾತಾ ಪಾಟೀಲ ಸಂಖ
“ಅಕ್ಕ ಮಹಾದೇವಿ ಜಯಂತಿ”
ಕಲ್ಲ ಹೊತ್ತು ಕಡಲೊಳಗೆ ಮುಳುಗಿದೊಡೆ
ಎಡರಿಂಗೆ ಕಡೆಯುಂಟೆ ಅವ್ವ?
ಉಂಡು ಹಸಿವಾಯಿತ್ತೆಂದೊಡೆ ಭಂಗವೆಂಬೆ,
ಕಂಡ ಕಂಡ ಠಾವಿನಲ್ಲಿ ಮನ ಬೆಂದೊಡೆ
ಗಂಡ ಚೆನ್ನಮಲ್ಲಿಕಾರ್ಜುನೆಂತೊಲಿವನವ್ವ?
ಶರಣೆ ಅಕ್ಕ ಮಹಾದೇವಿ
********
12ನೇ ಶತಮಾನದ ಬಸವಾದಿ ಶರಣರ ವಾಸ್ತವಿಕ ಬದುಕನ್ನು ತಮ್ಮ ವಚನಗಳ ರೂಪದಲ್ಲಿ ಮೌಲ್ಯಗಳನ್ನು ಹರವಿದರು.
ಆ ಮೌಲ್ಯಯುತ ವಚನ ಬೆಳಕಿನಲ್ಲಿ ಇಂದಿನ ವರ್ತಮಾನದ ಬದುಕನ್ನು ಪರಿಶೀಲಿಸುವ, ಪರಾಮರ್ಶಿಸುವ ಅನಿವಾರ್ಯತೆ ಇಂದು ಇದೆ ಅನ್ನಿಸುತ್ತದೆ.
ವಚನಗಳ ಆಂತರಿಕ ಭಾವ ಬಂಧನಗಳು ವರ್ತಮಾನದ ಬದುಕಿಗೆ ಮುಖಾಮುಖಿಯಾಗಬಲ್ಲ ಮಾತುಗಳು ಎಂದು ಹೇಳಿದರೆ ತಪ್ಪಾಗಲಿಕಿಲ್ಲ,
ಆದ್ದರಿಂದ ಸಮಕಾಲಿನ ಕನ್ನಡ ಸಾಹಿತ್ಯ ಸಂದರ್ಭವೂ 12ನೇ ಶತಮಾನದ ಶರಣರ ವಚನಗಳ ಕುರಿತು ಆಳವಾದ ಅಧ್ಯಯನಗಳು ಮತ್ತು ವಚನ ಅಧ್ಯಯನ ಪೀಠಗಳು ವಚನ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿ ವಿದ್ವತ್ಪೂರ್ಣ ಮತ್ತು ಜನಮುಖಿ ಅಧ್ಯಯನಗಳು ನಡಿಯಬೇಕಾಗಿದೆ. ವಚನಗಳಲ್ಲಿಯ ವೈಚಾರಿಕತೆ, ತಾತ್ವಿಕತೆ ಸಾಹಿತ್ಯ , ಸಾಂಸ್ಕೃತಿಕತೆ ಮತ್ತು ತೌಲನಿಕವಾದ ಮೌಲ್ಯಗಳು ಮತ್ತು ಶರಣರ ವಚನಗಳಲ್ಲಿರುವ ಜೀವ ಕಾರುಣ್ಯವನ್ನು ಜಗತ್ತಿಗೆ ಹಂಚಬೇಕಾದ ಜವ್ಹಾಬ್ಧಾರಿ ಅನಿವಾರ್ಯತೆ ನಮ್ಮೇಲ್ಲರ ಮೇಲೆ ಇದೆ.
ಇಂದು ಆಧುನಿಕ ತಂತ್ರಜ್ಞಾನವು ಅತ್ಯಂತ ಮುಂದುವರೆದು ಪ್ರತಿ ಕ್ಷೇತ್ರದಲ್ಲಿ ಮಾಡುತ್ತಿರುವ ಕ್ರಾಂತಿ ಅಪೂರ್ವ ಮತ್ತು ಅತ್ಯದ್ಭುತ.
ಮಾಹಿತಿ ಶಿಕ್ಷಣ , ಜಗತ್ತಿನ ಅಂತರ್ಜಾಲ ಜೋಡಣೆಯಿಂದ,
ಯಾವುದೇ ವಿಚಾರಧಾರೆಯನ್ನು ಮತ್ತು ಜ್ಞಾನಧಾರೆಯನ್ನು ಕ್ಷಣಮಾತ್ರದಲ್ಲಿ ಜಗತ್ತಿಗೆ ತಲುಪಿಸುತ್ತಿರುವ ಈ ತಾಂತ್ರಿಕತೆಯು ವಚನ ಸಾಹಿತ್ಯದಲ್ಲಿ ಅಡಗಿರುವ ವಿಶ್ವದ ವಿದ್ಯಮಾನಗಳೊಂದಿಗೆ ಬೆರೆಯಬೇಕಾಗಿದೆ.
ಇಂದು ನಾನು ಶರಣೆ ಅಕ್ಕಮಹಾದೇವಿಯವರ ಮೇಲಿನ ಮೌಲ್ಯಯುತ ವಚನದ ಅನುಸಂಧಾನ ಮಾಡೋಣ.
ಕಲ್ಲ ಹೊತ್ತು ಕಡಲೊಳಗೆ ಮುಳುಗಿದೊಡೆ
ಎಡರಿಂಗೆ ಕಡೆಯುಂಟೆ ಅವ್ವ?
ಶರೀರಕ್ಕೆ ಕಲ್ಲು ಕಟ್ಟಿಕೊಂಡು ನೀರಿನಲ್ಲಿ ಮುಳುಗಿದರೆ ಅಪಾಯ ಖಂಡಿತ ಅಂದರೆ ,
ಇದು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ವಿಚಾರವಾಗಿದೆ.
ಚಿಕ್ಕ ಮಕ್ಕಳಿಗೆ ಏಸು ಕಲಿಸುವಾಗ ಮುಳುಗಬಾರದೆಂದು ಕುಂಬಳಕಾಯಿಯನ್ನು ಮತ್ತು ಹಳ್ಳಾದ ಹವೆ ತುಂಬಿದ ಡಬ್ಬಿಗಳನ್ನು ಕಟ್ಟಲಾಗುತ್ತದೆ ಕಾರಣ ಕಲ್ಲು ಅಥವಾ ವಜನವಿರುವ ವಸ್ತುಗಳನ್ನು ಕಟ್ಟಿದರೆ ಆ ಈಜಾಡುವ ಮಗು ಮುಳುಗಿ ಹೋಗುವ ಸಂಭವ ಇರುತ್ತದೆ. ಹಾಗೆಯೇ ಶರಣೆ ಮಹಾದೇವಿ ಅಕ್ಕ ಹೇಳುತ್ತಾರೆ,
ಕಲ್ಲನ್ನು ಕಟ್ಟಿಕೊಂಡು ನೀರಿನಲ್ಲಿ ಮುಳುಗಿದರೆ ಅದು ವೈಜ್ಞಾನಿಕವಾಗಿ ಮುಳುಗುವುದು ಸಹಜ .
ಹಾಗೆಯೇ …
ನಿಜ ಜೀವನದಲ್ಲಿ ಕಲ್ಲು ಅನ್ನುವ ಪ್ರಪಂಚ ಬಾರವಾದ ವಸ್ತುಗಳಾದ, ಮಾಯಾ ಮೋಹಗಳು ,ಮತ್ತು ಅರಿಷಡ್ವರ್ಗಗಳನ್ನು, ಕಟ್ಟಿಕೊಂಡು ಜಗತ್ತು ಅನ್ನುವ ನೀರಿನಲ್ಲಿ ಮುರುಗಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತದೆ.
ಅದರಂತೆ ಊಟ ಮಾಡಿಯೂ ಹಸಿವಾಗಿದೆ ಎಂದು ಹೇಳಿದರೆ,ಸುಳ್ಳು ಹೇಳಿದಂತೆ ಆಗುತ್ತದೆ. ಈ ರೀತಿ ಸುಳ್ಳು ಹೇಳುವವರನ್ನು ಮತ್ತು ವಿನಾಕಾರಣವಾಗಿ ತಮ್ಮ ಮೈಮೇಲೆ ತಾವೇ ಅಪಾಯವನ್ನು ಹಾಕಿಕೊಳ್ಳುವವರ ಕುರಿತು ವಿಡಂಬನಾತ್ಮಕವಾಗಿ ಶರಣೆ ಅಕ್ಕ ಹೇಳುತ್ತಾರೆ,
ಕಂಡ ಕಂಡ ಠಾವಿನಲ್ಲಿ ಮನ ಬೆಂದೊಡೆ
ಗಂಡ ಚೆನ್ನಮಲ್ಲಿಕಾರ್ಜುನೆಂತೊಲಿವನವ್ವ?
ತಾನು ಈಗಾಗಲೇ ಒಬ್ಬನಿಗೆ ಮನಸ್ಸು ಕೊಟ್ಟಾಗಿದೆ.
ಒಮ್ಮೆ ಒಬ್ಬರಿಗೆ ಮನಸ್ಸು ಹ್ರದಯ ಕೊಟ್ಟ ಮೇಲೆ ಮತ್ತೆ ಅದೇ ಮನಸ್ಸು ಹ್ರದಯ ಇನ್ನೊಬ್ಬರಿಗೆ ಹೇಗೆ ಕೊಡಲು ಸಾಧ್ಯ,
ಅದು ಸಾಧ್ಯವಿಲ್ಲ ….
ಎಂಬುದನ್ನು ಈ ವಚನದಲ್ಲಿ ಸೂಕ್ಷ್ಮವಾಗಿ ದ್ವನಿಸುತ್ತಾರೆ, ಶರಣೆ ಅಕ್ಕಮಹಾದೇವಿಯವರು.
ಹೀಗಿದ್ದಾಗ ನಾನು ಕಂಡ ಕಂಡ ಕಡೆ ನನ್ನ ಮನಸ್ಸನ್ನು ಹರಿ ಬಿಟ್ಟರೆ ನನ್ನ ಆತ್ಮಸಂಗಾತದ ಗಂಡ ಚೆನ್ನಮಲ್ಲಿಕಾರ್ಜುನನಿಗೆ ದ್ರೋಹ ಬಗೆದಂತೆ,
ಹಾಗಾದರೆ ಅವನು ನನಗೆ ಒಲಿಯಲು ಹೇಗೆ ಸಾಧ್ಯ,
ಅದು ನಾನು ನನ್ನ ಪ್ರೇಮಕ್ಕೆ ವಿಶ್ವಾಸಘಾತ ಮಾಡಿದಂತೆ.
ಒಂದು ವೇಳೆ ನಾನು ಹೀಗೆ ಮಾಡಿದರೆ ನನ್ನ ಗಂಡ ನನಗೆ ಒಲಿಯಲು ಸಾಧ್ಯವಿಲ್ಲ ಎಂಬ ಅರಿವು ಶರಣೆ ಅಕ್ಕಮಹಾದೇವಿಯವರದ್ದು.
ಬಹುಶಃ ಶರಣೆ ಅಕ್ಕ ಮಹಾದೇವಿಯವರಿಗೆ ಅವರ ಆಪ್ತ ವಲಯದವರು ಕೌಶಿಕ ಮಹಾರಾಜನನ್ನು ಮದುವೆಯಾಗಲು ಒತ್ತಾಯಿಸುತ್ತಾರೆ.
ಹೀಗೆ ಒತ್ತಾಯಿಸಿದಾಗ , ಶರಣೆ ಅಕ್ಕ ಹೇಳುತ್ತಾರೆ. ಈಗಾಗಲೇ ನನ್ನ ಮನಸ್ಸು ಕೊಟ್ಟಾಗಿದೆ,
ಕೊಟ್ಟ ಮನಸ್ಸನ್ನು ಮತ್ತೊಬ್ಬರಿಗೆ ಒಪ್ಪಿಸುವುದು ಶುದ್ಧ ತಪ್ಪು, ಹೀಗೆ ತಪ್ಪು ಮಾಡಿ
ಮತ್ತೆ ಬೇರೆ ಕೇಡನ್ನು ಎದುರು ಹಾಕಿಕೊಳ್ಳಲಾರೆನೆಂಬ ಅರ್ಥದಲ್ಲಿ ಹೇಳಿದ ನಿರಾಕರಣೆಯ ಭಾವ ಶರಣೆ ಅಕ್ಕನ ವಚನವಾಗಿದೆ ಇದು, ಎಂದು ನನಗೆ ಅನಿಸುತ್ತದೆ.
ಸುಜಾತಾ ಪಾಟೀಲ ಸಂಖ