ಕನ್ನಡಕ್ಕೊಬ್ಬರೆ ನಟಸಾರ್ವಭೌಮ ಡಾ. ರಾಜ್ (ಹುಟ್ಟು ಹಬ್ಬದ ನಿಮಿತ್ತ ಏಪ್ರಿಲ್ 24)ವೀಣಾ ಹೇಮಂತ್ ಗೌಡ ಪಾಟೀಲ್

ರಾಜಕುಮಾರ್ ಎಂದರೆ ಅಚ್ಚ ಬಿಳಿ ಬಣ್ಣದ ಪಂಚೆ ಮತ್ತು ಅಂಗಿ ಧರಿಸಿದ ಸರಳತೆ,ಮುಗ್ಧತೆ, ಪ್ರೀತಿ, ವಿಶ್ವಾಸ ಮತ್ತು ವಿನಯವೇ ಮೈವೆತ್ತಂತ ವ್ಯಕ್ತಿತ್ವದ ಸಂತ. ಯಾವುದೇ ಉಪಮಾನ ಉಪಮೇಯಗಳಿಗೆ ನಿಲುಕದ ಅದ್ಭುತ ರಸಗ್ರಹಿಕೆಯುಳ್ಳ ನವರಸಗಳನ್ನೊಳಗೊಂಡ ಲೀಲಾಜಾಲ ಅಭಿನಯದ ಸಾಕಾರ ಮೂರ್ತಿ.

 ಕವಿರತ್ನ ಕಾಳಿದಾಸದ ಪೆದ್ದ ಕುರಿ ಕಾಯುವ ವ್ಯಕ್ತಿಯ ನಟನೆಯಿಂದ ಪ್ರಬುದ್ಧ ಪ್ರಕಾಂಡ ಪಂಡಿತನಾಗಿ ಪರಕಾಯ ಪ್ರವೇಶ ಮಾಡಿದಂತಹ ನಟನೆ ಇರಲಿ, ಯುವ ಜನರನ್ನು ಪ್ರೇರೇಪಿಸುವ ಜೀವನ ಚೈತ್ರ ಆಕಸ್ಮಿಕಗಳಂತಹ ಚಿತ್ರಗಳಿರಲಿ, ವಿನಯವೇ ಮೈವೆತ್ತ ಸಾಕ್ಷಾತ್ಕಾರ ಚಿತ್ರವಿರಲಿ, ತನ್ನಿಡಿ ಬದುಕನ್ನೇ ಹಾಳು ಮಾಡಿದ ದುಷ್ಕರ್ಮಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ ಗುರಿ ಚಲನಚಿತ್ರವಿರಲಿ,ಅವರಿಗೆ ಅವರೇ ಸಾಟಿ. ಪೌರಾಣಿಕ ಪಾತ್ರಗಳಲ್ಲಂತೂ ಅವರ ಅಂಗಸೌಷ್ಟವ, ಅಸ್ಕಲಿತ ಮಾತಿನ ಶೈಲಿ, ಅದ್ಭುತ ನಟನೆ ಹೋರಾಟದ ದೃಶ್ಯಗಳಲ್ಲಿನ ವೀರೋಚಿತ ಅಭಿನಯ, ಖಳ ನಟರೊಂದಿಗೆ ವ್ಯಂಗೋಕ್ತಿಗಳನ್ನು ಉದುರಿಸುವಾಗ ಅವರ ಬಾಡಿ ಲ್ಯಾಂಗ್ವೇಜ್ ಒಂದೇ ಎರಡೇ!!ಅವರನ್ನು ವರ್ಣಿಸಲು…. ಅಬ್ಬ ಎರಡು ಕಣ್ಣು ಸಾಲದು ಅವರ ಅಭಿನಯವನ್ನು ನೋಡಲು, ಎರಡು ಕಿವಿಗಳು ಸಾಲದು ಅವರ ಇಂಪಾದ ಗಾನಸುಧೆಯನ್ನು ಕೇಳಲು.

 ಕೇವಲ ಭಾರತದಲ್ಲಲ್ಲ, ಇಡೀ ಜಗತ್ತಿನಾದ್ಯಂತ ಡಾಕ್ಟರ್ ರಾಜ್ ಅವರಂತಹ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ಇನ್ನೋರ್ವ ನಟ ಇಲ್ಲ ಎಂದರೆ ಡಾಕ್ಟರ್ ರಾಜ್ ಅವರ ನಟನೆಯ ಆಳ, ಅಗಲ, ವ್ಯಾಪ್ತಿಯ ಅರಿವಾದೀತು ನಮಗೆ. ತಾವು ಅಭಿನಯಿಸಿದ ಸರಿ ಸುಮಾರು ಐದು ದಶಕಗಳಲ್ಲಿ  ಮೂರು ಪೀಳಿಗೆಯ ಜನರಿಗೆ ಪ್ರೀತಿ, ಪ್ರೇಮ, ಸಹೋದರ ಭಾವ,ತ್ಯಾಗ,ವೈರಾಗ್ಯ ಅಕ್ಕರೆ ಮುಂತಾದ ಎಲ್ಲಾ ರಸಗಳನ್ನು ತಮ್ಮ ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಬದುಕಿನ ಪಾಠ ಹೇಳಿಕೊಟ್ಟವರು ಡಾಕ್ಟರ್ ರಾಜ್.

 ಅವರ ನಟನೆಯ ಬಂಗಾರದ ಮನುಷ್ಯ ಚಿತ್ರವನ್ನು ನೋಡಿದ ಸಾವಿರಾರು  ಜನರು ನೌಕರಿ ಬಿಟ್ಟು ವ್ಯವಸಾಯಕ್ಕೆ ಇಳಿದರು. “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ” ಎಂಬ ಅವರ ಹಾಡಿನ ಅಭಿನಯ ಲಕ್ಷಾಂತರ ಜನರನ್ನು ಪ್ರೇರೇಪಿಸಿ ಬದುಕಿನಲ್ಲಿ ಮುನ್ನಡೆಸಿತು.

 ತಾವು ನಟಿಸಿದ ಚಲನಚಿತ್ರಗಳಲ್ಲಿ ಹೆಣ್ಣು ಮಕ್ಕಳಿಗೆ ಹೇಗೆ ಗೌರವ ಕೊಡಬೇಕು, ಪತ್ನಿಯನ್ನು ಪ್ರೀತಿಸುವ ರೀತಿ, ತಪ್ಪು ಮಾಡುವವರನ್ನು ಬುದ್ಧಿ ಹೇಳಿ ಬದಲಾಯಿಸುವ, ಬದಲಾಗದೆ ಹೋದಲ್ಲಿ ಬುದ್ದಿ ಕಲಿಸುವ,ಮಕ್ಕಳಿಗೆ ಶಿಕ್ಷಣದ ಜೊತೆಗೆ ಶಿಷ್ಟಾಚಾರ ಗುರು ಹಿರಿಯರಲ್ಲಿ ತೋರುವ ವಿನಯ, ವಿಧೇಯತೆ, ಸತ್ಯಪರತೆ ಕರ್ತವ್ಯ ನಿಷ್ಠೆ ಹೀಗೆ ಭಾರತೀಯ ಸಂಸ್ಕೃತಿಯ ವಿವಿಧ ಮಗ್ಗಲುಗಳನ್ನು ಪಾಠವನ್ನೇ ಮಾಡದೆ ಕೇವಲ ತಾವು ಅಭಿನಯಿಸುವ ಚಲನಚಿತ್ರ ಮತ್ತು ನಟನೆಯ ಮೂಲಕ ಕಲಿಸಿದ ಅದ್ಭುತ ಗುರು ಡಾಕ್ಟರ್ ರಾಜ್. ಕೇವಲ ನಟನೆಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಆತ ನುಡಿದಂತೆಯೇ ನಡೆದು ಬದುಕಿದ ಅದ್ಭುತ ಸಂತ.

 ಬದುಕಿನ ಪ್ರತಿ ಗಳಿಗೆಯನ್ನು ಕೃತಜ್ಞತೆಯಿಂದ ಪ್ರೀತಿಯಿಂದ ವಿಶ್ವಾಸದಿಂದ ಬದುಕಿದವರು. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನವರ ಉಕ್ತಿಯಂತೆ ತಮಗಿಂತ ಅತ್ಯಂತ ಕಿರಿಯ ವ್ಯಕ್ತಿಯನ್ನು ಕೂಡ ಅತ್ಯಂತ ಗೌರವಯುತವಾಗಿ ಪ್ರೀತಿಯಿಂದ ನಡೆಸಿಕೊಂಡವರು. ಚಲನಚಿತ್ರಗಳಷ್ಟೇ ಅಲ್ಲದೆ, ಕಿರುತೆರೆಯ ನಟ ನಟಿಯರ ಅಭಿನಯವನ್ನು ಮೆಚ್ಚಿ ಹಾರೈಸಿದವರು ಅವರು. ಅವರ ಒಂದು ಪ್ರೀತಿಯ ಹಾರೈಕೆ ವಿಶ್ವ ಚಲನಚಿತ್ರರಂಗದ  ಆಸ್ಕರ್ ಪ್ರಶಸ್ತಿಗಿಂತಲೂ ಮಿಗಿಲಾದದ್ದು ಎಂಬುದು ಅವರಿಂದ ಹಾರೈಸಲ್ಪಟ್ಟವರ ಅಂಬೋಣವಾಗಿತ್ತು.

 ತಮ್ಮ ನಿರ್ಮಾಪಕರನ್ನು ಅನ್ನಕ್ಕೆ ದಾರಿ ಮಾಡಿಕೊಟ್ಟ ದಣಿಗಳೆಂದೂ, ತಮ್ಮ ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಎಂದು ಗೌರವಿಸಿದವರು.
 ಅವರ ಅಭಿನಯದ ಚಲನಚಿತ್ರ ಒಂದರ ಶೂಟಿಂಗ್ ತಮ್ಮ ಕಾಲೇಜಿನಲ್ಲಿ ನಡೆಯುತ್ತಿರುವಾಗ ಹಿಂದೆ ಕುಳಿತು ಶೂಟಿಂಗ್ ನೋಡುತ್ತಿದ್ದ ಪ್ರಕಾಂಡ ಪಾಂಡಿತ್ಯ ಉಳ್ಳ ಪ್ರೊಫೆಸರ್ ಒಬ್ಬರು ಖುದ್ದು ತಾವೇ ಡಾಕ್ಟರ್ ರಾಜ್ ರವರು ಶೇಕ್ಸಪಿಯರ್ ನ ಪಾಠವನ್ನು ಅಭಿನಯಿಸಿ ತೋರಿಸುವಾಗ ಅವರ ಧ್ವನಿಯಲ್ಲಿನ ಏರಿಳಿತ, ಇಂಗ್ಲೀಷ್ ಭಾಷೆಯ ಮೇಲಿನ ಅವರ ಹಿಡಿತ ಮತ್ತು ಅಭಿನಯ ಪ್ರತಿಭೆಯನ್ನು ಕಂಡು ಮಂತ್ರಮುಗ್ಧರಾದರಂತೆ.

 ನಮಗೆ ಭಕ್ತ ಕುಂಬಾರ, ವಿಜಯನಗರದ ಅರಸ  ಶ್ರೀ ಕೃಷ್ಣದೇವರಾಯ, ಬೇಡರ ಕಣ್ಣಪ್ಪ, ರಣಧೀರ ಕಂಠೀರವ, ಮಯೂರ,ಓಹಿಲೇಶ್ವರ, ಇಮ್ಮಡಿ ಪುಲಕೇಶಿ  ಮುಂತಾದ ಪೌರಾಣಿಕ, ಐತಿಹಾಸಿಕ ಪುರುಷರ ಹೆಸರುಗಳನ್ನು ಕೇಳಿದಾಗ ಕಣ್ಣಮುಂದೆ ಬರುವ ಚಿತ್ರ ಕೇವಲ ಒಬ್ಬರದು ಅದು ಡಾ. ರಾಜ್.

 ಪಾತ್ರವೇ ತಾನಾಗಿ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ ನಟಸಾರ್ವಭೌಮ  ಡಾಕ್ಟರ್ ರಾಜ್ ಹುಟ್ಟಿದ್ದು ಚಾಮರಾಜಪೇಟೆ ಬಳಿಯ ಗಾಜನೂರಿನಲ್ಲಿ. ತಂದೆ ಪುಟ್ಟಸ್ವಾಮಯ್ಯ ಗುಬ್ಬಿ ನಾಟಕ ಕಂಪನಿಯಲ್ಲಿ ಅದ್ಭುತ ರೌದ್ರನಟರಾಗಿ  ಅಭಿನಯಿಸುತ್ತಿದ್ದ ನಟ. ಪೂರ್ವ ಹೆಸರು ಮುತ್ತುರಾಜ್.ಕೇವಲ ನಾಲ್ಕನೇ ತರಗತಿಯವರೆಗೆ ಓದಿದ ಮುತ್ತುರಾಜ್ ಅವರ ವಿದ್ಯಾಭ್ಯಾಸ ಬಡತನ ಮತ್ತು ನಾಟಕವಾಡಲು ಊರಿಂದೂರಿಗೆ ವಲಸೆ ಹೋಗುವ ಕಾರಣ ಅಲ್ಲಿಗೇ ಮೊಟಕಾಗಿ ಮುಂದೆ ಗುಬ್ಬಿ ಕಂಪನಿಯಲ್ಲಿ ತಂದೆಯೊಂದಿಗೆ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಲು ಆರಂಭಿಸಿದರು.
 ಮುತ್ತು ರಾಜ್ ಪೂರ್ಣ ಪ್ರಮಾಣದಲ್ಲಿ ನಟನಾಗಿ ಹೊರಹೊಮ್ಮಿದ್ದು ಭಕ್ತ ಅಂಬರೀಶ ನಾಟಕದಲ್ಲಿ ಅಂಬರೀಶನ ತಮ್ಮ ರಮಾಕಾಂತನಾಗಿ. ತಂದೆಯಿಂದಲೇ ರಂಗ ತಾಲೀಮು ಪಡೆದ ಮುತ್ತುರಾಜ್ ತಂದೆಯ ಜೊತೆಗೆ ಕುರುಕ್ಷೇತ್ರ ನಾಟಕದಲ್ಲಿ ತಂದೆ ಭೀಮನಾಗಿಯೂ ಮಗ ಅರ್ಜುನನಾಗಿಯೂ ಪಾತ್ರ ನಿರ್ವಹಿಸಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯ ಆಶಯದಂತೆ ವಿವಾಹ ಮಾಡಿಕೊಂಡಿದ್ದ ಸೋದರ ಸಂಬಂಧಿ ಪಾರ್ವತಮ್ಮ ಡಾಕ್ಟರ್ ರಾಜ್ ಅವರ ಜೀವನದ ಚುಕ್ಕಾಣಿಯನ್ನು ಯಶಸ್ವಿಯಾಗಿ ಮುಂದೆ ಸಾಗಿಸಿದ ಅದ್ಭುತ ವ್ಯಕ್ತಿ.

 ತಂದೆಯ ಸಾವಿನ ನಂತರ ಗುಬ್ಬಿ ಕಂಪನಿ ಅಲ್ಲದೆ ಶೇಷ ನಾಟಕ ಮಂಡಳಿ, ಶ್ರೀ ಸಾಹಿತ್ಯ ನಾಟಕ ಮಂಡಳಿಗಳಲ್ಲಿಯೂ ಕೂಡ ಕಾರ್ಯನಿರ್ವಹಿಸಿದರು ಮುತ್ತುರಾಜ್.
 ಈಗಾಗಲೇ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಬಾಲ ನಟನಾಗಿ ಶ್ರೀನಿವಾಸ ಕಲ್ಯಾಣದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾಗಿ ಚಿತ್ರರಂಗಕ್ಕೆ ಬಂದು ನಟಿಸಿದ ಮುತ್ತುರಾಜ್ ಮುಂದೆ ನಿರ್ದೇಶಕ ಎಚ್.ಎಲ್.ಎನ್. ಸಿಂಹ ಅವರ ಕಣ್ಣಿಗೆ ಬಿದ್ದು ಅವರ ಮೂಲಕ ಬೇಡರ ಕಣ್ಣಪ್ಪ ಚಲನಚಿತ್ರ ತಯಾರಿಸಲು ಮುಂದಾದ ನಿರ್ಮಾಪಕ ಎವಿಎಂನ ಚೆಟ್ಟಿಯಾರ ಮತ್ತು ಮತ್ತು ಸಹ ನಿರ್ಮಾಪಕರಾದ ಗುಬ್ಬಿ ವೀರಣ್ಣನವರ ಸಹಮತಿಯ ಮೇರೆಗೆ ಮುತ್ತುರಾಜ್…. ರಾಜಕುಮಾರನೆಂಬ ಹೆಸರಿನಿಂದ ಬೇಡರ ಕಣ್ಣಪ್ಪ ಚಲನಚಿತ್ರದಲ್ಲಿ ಅಭಿನಯಿಸಿದರು. ಕಟ್ಟುಮಸ್ಥಾದ ದೇಹ ಸೌಷ್ಟವ, ಅದ್ಭುತ ಅಭಿನಯ ಪ್ರತಿಭೆ ಪ್ರೇಕ್ಷಕರ ಮನಸೆಳೆಯಿತು. ಮುಂದೆ ಒಂದೊಂದೇ ಚಲನಚಿತ್ರಗಳಲ್ಲಿ ಅಭಿನಯಿಸಲು ಆರಂಭಿಸಿದ  ರಾಜ್ ಹಿಂತಿರುಗಿ ನೋಡಿದ್ದೇ ಇಲ್ಲ.
 ಮದರಾಸಿನಲ್ಲಿ ಮನೆ ಮಾಡಿದ ರಾಜ್ ಅವರ ಜನಪ್ರಿಯತೆ ಇಡೀ ಕರ್ನಾಟಕದಾದ್ಯಂತ ಸಂಚಲನವನ್ನು ಸೃಷ್ಟಿ ಮಾಡಿತ್ತು.ಅವರ ಅಭಿನಯದ ಚಲನಚಿತ್ರಗಳು ಅದ್ಭುತ ಯಶಸ್ಸನ್ನು ಗಳಿಸುತ್ತಿದ್ದವು. ಆದಾಗ್ಯೂ ಸರಿಯಾದ ಮಟ್ಟದ ಸಂಭಾವನೆ ದೊರೆಯುತ್ತಿರಲಿಲ್ಲ.ಇದನ್ನು ಮನಗಂಡ ರಾಜ್ ಅವರ ಸಹೋದರ ವರದರಾಜ್ ಮತ್ತು ರಾಜ ಅವರ ಪತ್ನಿ ಪಾರ್ವತಮ್ಮ ಅವರು ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸನ್ನು ಪ್ರಾರಂಭಿಸಿದರು. ಮುಂದೆ ಪೂರ್ಣಿಮಾ ಎಂಟರ ಪ್ರೈಸಸ್ ಎಂಬ ಸಂಸ್ಥೆಯನ್ನು ಕೂಡ ಸ್ಥಾಪಿಸಿದ ಅವರು ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. ಕನ್ನಡದ ಅತ್ಯುತ್ತಮ ಕಾದಂಬರಿಗಳನ್ನು ಚಲನಚಿತ್ರವಾಗಿಸಿದ ಕೀರ್ತಿ ಪಾರ್ವತಮ್ಮ ರಾಜಕುಮಾರ ಅವರದು.  

 ಕೇವಲ ಚಲನಚಿತ್ರಗಳಲ್ಲಿ ಮಾತ್ರ ಹೋರಾಟ ಮಾಡುವ ಅಭಿನಯ ಮಾಡದೆ, ಕರ್ನಾಟಕದಲ್ಲಿ ಕನ್ನಡದ ಉಳಿಕೆಗಾಗಿ ಗೋಕಾಕ್ ವರದಿಯನ್ನು ಜಾರಿಗೊಳಿಸಲು ಒತ್ತಾಯಿಸಿ ಇಡೀ ಕರ್ನಾಟಕದಾದ್ಯಂತ  ಸಾಹಿತಿಗಳ,ಕನ್ನಡ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ ಹಿರಿಯಾಳುಗಳ ಜೊತೆಗೆ ಇಡೀ ಕರ್ನಾಟಕವನ್ನು ಸುತ್ತಿ ಜನಜಾಗೃತಿ ಮೂಡಿಸಿದವರು ರಾಜ್. ತಾವು ಸ್ವತಃ ಈಡಿಗ ಸಮುದಾಯಕ್ಕೆ ಸೇರಿದ್ದರೂ ಯಾವುದೇ ಮಧ್ಯ ತಯಾರಿಸುವ ಫ್ಯಾಕ್ಟರಿಗಳ ಉದ್ಘಾಟನೆಗಾಗಲಿ, ರಿಟೇಲ್ ಮಾರಾಟ ಕೇಂದ್ರಗಳ ಉದ್ಘಾಟನೆಗಾಗಲಿ ಎಂದು  ಹೋಗಲಿಲ್ಲ. ನುಡಿದಂತೆ ನಡೆದ ಅವರು ನಡೆದ ಹಾದಿ ಮುಂದಿನ ತಲೆಮಾರಿನ ಎಲ್ಲ ನಟರಿಗೆ ರಾಜ್ ಮಾರ್ಗವಾಗಿದೆ.

 ರಂಗಭೂಮಿಯಿಂದ ಬಂದ ಕಾರಣ ಅದ್ಭುತ ಕಂಠ ಸಿರಿಯನ್ನು ಹೊಂದಿದ್ದ ರಾಜ್ ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯದಿದ್ದರೂ ಉತ್ತಮ ಗಾಯಕರೂ ಹೌದು. ಭಾರತೀಯ ಚಲನಚಿತ್ರ ರಂಗದಲ್ಲಿ ನಟನೆ ಮತ್ತು ಗಾಯನ ಎರಡಕ್ಕೂ ರಾಷ್ಟ್ರಪ್ರಶಸ್ತಿ ಪಡೆದ ಏಕಮೇವಾದ್ವಿತೀಯ ನಟ ರಾಜ ಕುಮಾರ್. ನಟನೆಗಾಗಿ ಹಲವಾರು ರಾಷ್ಟ್ರಪ್ರಶಸ್ತಿಗಳನ್ನು ಪಡೆದ ರಾಜ್ ಅವರು ತಮ್ಮ ನಟನೆಯ ಜೀವನ ಚೈತ್ರ ಚಿತ್ರದಲ್ಲಿನ “ನಾದಮಯ ಈ ಲೋಕವೆಲ್ಲ” ಎಂಬ ಹಾಡಿಗೆ ಧ್ವನಿ ನೀಡಿದ್ದು ಆ ಹಾಡಿಗೆ ಅವರಿಗೆ ರಾಷ್ಟ್ರಮಟ್ಟದ ಅತ್ಯುನ್ನತ ಗಾಯಕ ಪುರಸ್ಕಾರ ಲಭ್ಯವಾಗಿದೆ.

 ಕನ್ನಡದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ರಾಜಕುಮಾರ ಅವರಿಗೆ ಸಿಕ್ಕ ಪ್ರಶಸ್ತಿ ಪುರಸ್ಕಾರಗಳು ಹತ್ತು ಹಲವು.
 *ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ನಟಸಾರ್ವಭೌಮ ಪ್ರಶಸ್ತಿ ಪಡೆದ ಅವರು,
*ರಾಷ್ಟ್ರದ ಅತ್ಯುನ್ನತ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ. *ಭಾರತೀಯ ಚಲನಚಿತ್ರ ರಂಗದ ಅತಿ ದೊಡ್ಡ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪುರಸ್ಕಾರವನ್ನು ಪಡೆದಿದ್ದಾರೆ.
* ಹಂಪಿ ವಿಶ್ವವಿದ್ಯಾಲಯವು ಇವರನ್ನು ನಾಡೋಜ ಪುರಸ್ಕಾರ ನೀಡಿ ಗೌರವಿಸಿದೆ. *ಕರ್ನಾಟಕ ಸರ್ಕಾರದ ಕರ್ನಾಟಕ ರತ್ನ ಪ್ರಶಸ್ತಿ ಕೂಡ ಇವರ ಮಡಿಲಿಗೆ ಬಿದ್ದಿದೆ.

 ತಮ್ಮ ಜೀವನದ ಮಧ್ಯಕಾಲದಲ್ಲಿ
ಯೋಗಾಭ್ಯಾಸವನ್ನು ಪ್ರಾರಂಭಿಸಿದ ಇವರು ಜೀವಿತದ ಕೊನೆಯವರೆಗೂ ಅದನ್ನು ಮುಂದುವರಿಸಿಕೊಂಡು ಬಂದರು. ಅವರ ನಾಯಕತ್ವದ ಚಲನಚಿತ್ರ ಒಂದರಲ್ಲಿ ಆರಂಭದ ದೃಶ್ಯಗಳಲ್ಲಿ ಅವರ ಯೋಗಾಭ್ಯಾಸದ ಚಿತ್ರೀಕರಣವಿದೆ.
  ಮುಂದೆ 2000ನೇ ಇಸವಿಯಲ್ಲಿ ಕುಖ್ಯಾತ ಕಾಡುಗಳ್ಳ, ದಂತ ಚೋರ ವೀರಪ್ಪನ್ ಡಾಕ್ಟರ್ ರಾಜರನ್ನು ಗಾಜನೂರಿನ ಅವರ ತೋಟದ ಮನೆಯಿಂದ ಅಪಹರಿಸಿ ಸರಿಸುಮಾರು 108 ದಿನಗಳ ಕಾಲ ತನ್ನ ವಶದಲ್ಲಿ ಇಟ್ಟುಕೊಂಡನು. ಮುಂದೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಸತತ ಪ್ರಯತ್ನದಿಂದ ಬಿಡುಗಡೆ ಮಾಡಿದನು.

 100ನೇ ಚಿತ್ರವಾಗಿ ಭಾಗ್ಯದ ಬಾಗಿಲು ತೆರೆಕಂಡರೆ ಇವರ 150ನೇ ಚಿತ್ರವಾಗಿ ಗಂಧದ ಗುಡಿ ಅರಣ್ಯ ಇಲಾಖೆಯವರ ಕಾರ್ಯವೈಖರಿ ಮತ್ತು ಕಾಡುಗಳ ಉಳಿಸುವಿಕೆಯ ಕುರಿತಾದ ಮೊಟ್ಟಮೊದಲ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿತು. ಹಲವಾರು ನಾಯಕಿಯರೊಂದಿಗೆ ತೆರೆ ಹಂಚಿಕೊಂಡ ಡಾಕ್ಟರ್ ರಾಜ್ ಅವರ ಸಹೋದ್ಯೋಗಿಗಳಾಗಿ ವಜ್ರಮುನಿ, ಸುಂದರ ಕೃಷ್ಣ ಅರಸ್, ನರ ಸಿಂಹರಾಜು, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ವಿಷ್ಣುವರ್ಧನ್ ಅನಂತ್ ನಾಗ್ ಅಂಬರೀಷ್, ಶಂಕರ್ ನಾಗ್  ಮುಂತಾದವರು ಕಾರ್ಯನಿರ್ವಹಿಸಿದರು. ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಚಿತ್ರದಲ್ಲಿಯೂ ಕೂಡ ಇವರು ಅಭಿನಯಿಸಿದರು. ಮುಂದೆ ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಎಂದು ಗುರುತಿಸಿಕೊಂಡ ಡಾಕ್ಟರ್ ರಾಜ್ ಇಡೀ ಕನ್ನಡ ಚಿತ್ರರಂಗದ ಮೇರು ನಟನಾಗಿ ಹಿರಿಯ ಕಲಾವಿದರಾಗಿ ಉಳಿದೆಲ್ಲ ಕಲಾವಿದರಿಗೆ ಮೇಲ್ಪಂಕ್ತಿಯಾಗಿ ನಿಂತರು. ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರ ಮೂಲಕ ಹಲವಾರು ನಟ ನಟಿಯರನ್ನು ಬೆಳಕಿಗೆ ತಂದ ಅವರು ಸ್ವತಹ ತಮ್ಮ ಮಕ್ಕಳಲ್ಲಿ ಮೂರು ಜನ ಗಂಡು ಮಕ್ಕಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದರು. ಹಿರಿಯ ಪುತ್ರಿಯನ್ನು ಸೋದರ ಸಂಬಂಧಿ ಗೋವಿಂದರಾಜ ಅವರಿಗೆ ಮದುವೆ ಮಾಡಿಕೊಟ್ಟರೆ  ಮತ್ತೋರ್ವ ಪುತ್ರಿ ಪ್ರೇಮದ ಕಾಣಿಕೆ ಎಂಬ ಚಲನಚಿತ್ರದಲ್ಲಿ ಇವರೊಂದಿಗೆ ನಟಿಸಿದ್ದಾರೆ. ಮೈಸೂರಿನಲ್ಲಿ ಶಕ್ತಿಧಾಮ ಎಂಬ ಹೆಣ್ಣು ಮಕ್ಕಳ ಆಶ್ರಯಧಾಮವನ್ನು  ಸ್ಥಾಪಿಸಿರುವ ಅವರು ಅಲ್ಲಿ ನೂರಾರು ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿದ್ದಾರೆ, ಅದು ಇಂದಿಗೂ ನಡೆದುಕೊಂಡು ಬಂದಿದೆ.

 ಪೌರಾಣಿಕ , ಧಾರ್ಮಿಕ, ಭಕ್ತಿ ಪ್ರಧಾನ,ಬಾಂಡ್, ಸಾಮಾಜಿಕ ಮತ್ತು ಐತಿಹಾಸಿಕ ಚಿತ್ರಗಳೇ ಆಗಿರಲಿ ಅಲ್ಲಿ ಅಣ್ಣಾವ್ರ ಛಾಪು ಒಡಮೂಡಲೇಬೇಕು. ಅಣ್ಣಾವ್ರ ಗಾಯನದ ಧ್ವನಿಮುದ್ರಿತ ಕ್ಯಾಸೆಟ್ಗಳು ಇಂದಿಗೂ ಮನೆ ಮನೆಯಲ್ಲಿ ಅನುರಣಿಸುತ್ತವೆ.

 2006 ಏಪ್ರಿಲ್ 12ರಂದು ವಯೋ ಸಹಜವಾಗಿ ಉಂಟಾದ ಹೃದಯಾಘಾತದಿಂದ ಡಾಕ್ಟರ್ ರಾಜ್ ಅವರು  ಇಹಲೋಕವನ್ನು ತ್ಯಜಿಸಿದರು. ರಾಜಕುಮಾರ ಅವರು ಕಣ್ಮರೆಯಾಗಿ ಇಲ್ಲಿಗೆ 18 ವರ್ಷಗಳು ಸಂದಿದ್ದರೂ ಇಂದಿಗೂ ಕನ್ನಡಿಗರ ಮನೆ ಮನಗಳಲ್ಲಿ ಅಜರಾಮರರಾಗಿದ್ದಾರೆ.

 ಕನ್ನಡದ ನಾಡು-ನುಡಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟ, ಕನ್ನಡದ ನೆಲ ಜಲ ಸಂಸ್ಕೃತಿಗಳ ರಕ್ಷಣೆಗೆ ಅಪಾರ ಕೊಡುಗೆ ನೀಡಿದಂತಹ ಅಣ್ಣಾವ್ರು ವಿರಳಾತಿವಿರಳರಲ್ಲಿ ಒಬ್ಬರು. ಅಂತಹ ಮಹಾನ್ ಚೇತನದ ಹುಟ್ಟುಹಬ್ಬದ ಈ ದಿನ ಮತ್ತೊಮ್ಮೆ ಅವರನ್ನು ನೆನೆಯುತ್ತಾ ಮತ್ತೆ ಮತ್ತೆ ಕನ್ನಡ ನೆಲದಲ್ಲಿ ಹುಟ್ಟಿ ಬನ್ನಿ ಎಂದು ಆಶಿಸುವ

——————————–

Leave a Reply

Back To Top