‘ಕಣ್ಣೀರು’ ವೈದ್ಯಕೀಯ ಲೇಖನ-ಡಾ.ಅರಕಲಗೂಡು ನೀಲಕಂಠ ಮೂರ್ತಿ

ಮಾನವ ತನ್ನ ಕಣ್ಣುಗಳಿಂದ ಸುರಿಸುವ ಕಣ್ಣೀರಿನೊಳಗೆ ಅನೇಕ ಭಾವನಾತ್ಮಕ ಅರ್ಥಗಳು ಅಥವ ಸಂವೇದನೆಗಳು ಅಡಗಿ ಕುಳಿತಿರುವುದು ಸರ್ವವಿದಿತ. ನೋವು, ನಲಿವು, ಸುಖ, ದುಃಖ, ಅಳು, ನಗು, ಹೀಗೆ ಪ್ರತಿ ಭಾವನಾತ್ಮಕ ಪರಿಸ್ಥಿತಿಯಲ್ಲೂ ಕಣ್ಣುಗಳಿಂದ ನೀರು ಹರಿಸುವುದು ಅಸಹಜವಲ್ಲ. ಹೇಗೆ ವ್ಯಕ್ತಿ ವ್ಯಕ್ತಿಯ ನಡೆ ನುಡಿಯಲ್ಲಿ ವ್ಯತ್ಯಾಸ ಇರುತ್ತದೆಯೋ ಹಾಗೆ ಒಬ್ಬೊಬ್ಬರ ಭಾವನಾತ್ಮಕ ಸಂವೇದನೆಯಲ್ಲೂ ಸಹ ವ್ಯತ್ಯಾಸ ಇದ್ದೇ ಇರುತ್ತದೆ; ಅಥವ ಭಾವನೆಗಳಲ್ಲಿ ಪ್ರತಿಯೊಬ್ಬರು ಅನನ್ಯ.
ಕೆಲವರು ಅದೆಂಥ ಚಿಕ್ಕ ವಿಷಯವೇ ಆದರೂ ತಕ್ಷಣ ಕಣ್ಣೀರು ಹರಿಸುವ ಜಾಯಮಾನದವರು. ನನಗೆ ತಿಳಿದಿರುವ ರೋಗಿಯೊಬ್ಬರ ಕುಟುಂಬದಲ್ಲಿ ಅಂತಹ ಒಬ್ಬ ಮಹಿಳೆ ಇದ್ದಾರಂತೆ; ಖುಷಿಯ ವಿಷಯಕ್ಕು ಬಿಕ್ಕಿಬಿಕ್ಕಿ ಆಗಬಾರದ್ದು ಆಗಿ ಹೋದಂತೆ ಅತ್ತುಬಿಡುತ್ತಾರಂತೆ!  ಕೆಲವರು ತಮ್ಮ ಆತ್ಮೀಯರು ತೀರಿಕೊಂಡಾಗ ಕೂಡ ತೊಟ್ಟು ಕಣ್ಣೀರಿಗೂ ಬರ ಬಡಿದವರಂತೆ ಇದ್ದುಬಿಡುತ್ತಾರೆ – ಹಾಗಂತ ಅವರು ಕಲ್ಲು ಹೃದಯಿಗಳು ಎಂದೇನೂ ಅಲ್ಲ. ಇನ್ನು ಕೆಲವರು ದುಗುಡ ದುಃಖ ಆದಾಗ ಸಹ ಸ್ಥಿತಪ್ರಜ್ಞರ ಹಾಗೆ ಎದೆಗುಂದದೆ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುವವರೂ ಇದ್ದಾರೆ. ವೈವಿಧ್ಯಮಯವೆ ಬಹುಶಃ ಜಗದ ನಿಯಮ ಮತ್ತು ಅದು ಆನಂದಮಯ!
ಇಂಥ ಅತ್ಯಂತ ಮುಖ್ಯವಾದ ಕಣ್ಣೀರಿನ ಬಗೆಗೆ ಸ್ವಲ್ಪ ವಿವರವಾಗಿ ಅರಿತರೆ ಉತ್ತಮ ಅಲ್ಲವೆ?

ಕಣ್ಣೀರನ್ನು ಸ್ರವಿಸುವುದು ‘ಲ್ಯಾಕ್ರಿಮಲ್’ (ಅಶ್ರುಕಾರಕ) ಎಂಬ ಜೋಡಿ ಎಕ್ಸೊಕ್ರೈನ್ ಗ್ರಂಥಿಗಳು.  ಲ್ಯಾಕ್ರಿಮಲ್ ಗ್ರಂಥಿಗಳು ಭೂಮಿಯ ಎಲ್ಲ ಸಸ್ತನಿಗಳಲ್ಲಿ ಮತ್ತು ಕೆಲವು ಸಾಗರ ಸಸ್ತನಿಗಳಲ್ಲಿ ಕೂಡ ಕಂಡುಬರುತ್ತವೆ. ಮಾನವರಲ್ಲಿ, ಕಣ್ಣುಗೂಡಿನ ಮೇಲಿನ ಹೊರ ಪಾರ್ಶ್ವದಲ್ಲಿನ ಲ್ಯಾಕ್ರಿಮಲ್ ಕುಳಿಗಳಲ್ಲಿ ಲ್ಯಾಕ್ರಿಮಲ್ ಗ್ರಂಥಿಗಳು ಸ್ಥಾಪಿತಗೊಂಡಿರುತ್ತವೆ.

ಈರುಳ್ಳಿ ಕತ್ತರಿಸುವಾಗ, ಅಥವ ಸಂಬಂಧ ಮುರಿದು ಬಿದ್ದಂಥ ದುಃಖಕರ ಸ್ಥಿತಿಯಾಗಲಿ ಅಥವ ಸುಖಾಂತ್ಯಗೊಂಡ ಕಥೆಯೊಂದರ ಅಂತ್ಯದಲ್ಲೆ ಆಗಲಿ, ಹೀಗೆ ಅನೇಕ ಪರಿಸ್ಥಿತಿಗಳು ಕಣ್ಣೀರು ಹರಿಸುವ ಪ್ರಚೋದಕಗಳು. ಹಾಗಾಗಿ ಕಣ್ಣೀರು ಅನೇಕ ರೀತಿಯಲ್ಲಿ ಉಪಯೋಗಕರ ಮತ್ತು ಕಣ್ಣುಗಳು ನಿರಂತರವಾಗಿ ಕಣ್ಣೀರನ್ನು ಉತ್ಪತ್ತಿಮಾಡುತ್ತವೆ. ಸಾಮಾನ್ಯವಾಗಿ ಮಾನವರ ಕಣ್ಣುಗಳು ಒಂದು ವರ್ಷದಲ್ಲಿ ಹದಿನೈದರಿಂದ ಮೂವತ್ತು ಗ್ಯಾಲನ್ನಿನಷ್ಟು ಕಣ್ಣೀರನ್ನು ಉತ್ಪತ್ತಿ ಮಾಡುತ್ತವೆ — ಅಂದರೆ ಅಂದಾಜು ಐವತ್ತರಿಂದ ನೂರಕ್ಕೂ ಹೆಚ್ಚು ಲೀಟರಿನಷ್ಟು!

ಮೂರು ಬಗೆ ಕಣ್ಣೀರು:
ಕಣ್ಣೀರು ಮಾನವನಿಗೆ ಪ್ರಮುಖವಾಗಿ  ಕಣ್ಣಿನ ಆರೋಗ್ಯ ಕಾಪಾಡಲು ಮತ್ತು ಸ್ಪಷ್ಟವಾಗಿ ನೋಡಲು ಅವಶ್ಯಕ. ಅಲ್ಲದೆ ಭಾವೋದ್ವೇಗಗಳ ಸಂವಹನಕ್ಕೆ ಕೂಡ ಅತ್ಯವಶ್ಯಕ. ನಮ್ಮ ಶರೀರದಲ್ಲಿ ಒಂದೇ ರೀತಿಯ ಬದಲಿಗೆ, ಮೂರು ವಿಧವಾದ ಕಣ್ಣೀರು ಉತ್ಪತ್ತಿಯಾಗುತ್ತದೆ.                          

… ‘ಬೇಸಲ್ ಟಿಯರ್ಸ್’ (ಮೂಲಭೂತ ಕಣ್ಣೀರು/basal tears) — ನಮ್ಮ ಕಣ್ಣುಗಳ ಪಾರದರ್ಶಕ ಭಾಗವಾದ ಕಾರ್ನಿಯಾವನ್ನು ನಿರಂತರವಾಗಿ ಲೇಪನಗೊಳಿಸಿ ನುಣುಪಾಗಿಡಲು, ಆರೈಕೆ ಮಾಡಿ ರಕ್ಷಿಸಲು ಎಲ್ಲ ಸಮಯದಲ್ಲೂ ಈ ‘ಆಧಾರ ಕಣ್ಣೀರು’ ಇರಲೇಬೇಕು. ಕಣ್ಣುಗಳ ಮತ್ತು ಇತರೆ ಭೌತಿಕ ಜಗತ್ತಿನ ನಡುವೆ ಕಣ್ಣೀರು ನಿರಂತರ ರಕ್ಷಾಫಲಕದ ಹಾಗಿದ್ದು, ಹೊರಗಿನ ಕೊಳಕಿನಿಂದ ಕೂಡ ಕಣ್ಣಗಳನ್ನು ರಕ್ಷಿಸುತ್ತದೆ.

… ‘ರಿಫ್ಲೆಕ್ಸ್ ಟಿಯರ್ಸ್’ (ಪ್ರತಿಫಲಿತ ಕಣ್ಣೀರು/reflex tears) — ಈರುಳ್ಳಿ ಘಾಟು, ಹೊಗೆ, ಬಾಹ್ಯ ಪದಾರ್ಥಗಳು ಮುಂತಾದ ಹಾನಿಕಾರಕ ಪೀಡಕಗಳಿಂದ (harmful irritants) ತೊಂದರೆ ಬರದಂತೆ ಶುದ್ಧಿ ಮಾಡಬೇಕಾದಾಗ ಈ ಪ್ರತಿಫಲಿತ ಕಣ್ಣೀರು ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಮೂಲಭೂತ ಕಣ್ಣೀರಿಗಿಂತ ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಪ್ರತಿಫಲನ ಕಣ್ಣೀರಿನಲ್ಲಿ ಸೂಕ್ಷ್ಮಜೀವಿಗಳನ್ನು (ಬ್ಯಾಕ್ಟೀರಿಯ) ತಡೆಗಟ್ಟಲು ಬೇಕಾದ ಪ್ರತಿಕಾಯಗಳೂ (antibodies) ಕೂಡ ಹೇರಳವಾಗಿರುತ್ತವೆ.

… ‘ಎಮೋಶನಲ್ ಟಿಯರ್ಸ್’ (ಭಾವನಾತ್ಮಕ ಕಣ್ಣೀರು/emotional tears) — ಖುಷಿ, ದುಃಖ, ಭಯ ಮುಂತಾದ ಭಾವನಾತ್ಮಕ ಪರಿಸ್ಥಿತಿಗಳಲ್ಲಿ ಉತ್ಪತ್ತಿಯಾಗುವ ಕಣ್ಣೀರು.

ಕಣ್ಣೀರು ಕೇವಲ ಲವಣಯುಕ್ತ ಮಾತ್ರ ಅಲ್ಲ. ರಚನೆಯಲ್ಲಿ ಕಣ್ಣೀರು ಲಾಲಾರಸದ ಹಾಗೆ ಕಿಣ್ವಗಳು, ಲಿಪಿಡ್ಸ್ (ಮೇಧಸ್ಸು), ಮೆಟಾಬೊಲೈಟ್ಸ್ (ಉಪಾವಚಯಕಗಳು) ಮತ್ತು ಎಲೆಕ್ಟ್ರೊಲೈಟ್ಸ್ ಗಳಿಂದ (ವಿದ್ಯುದ್ವಿಭಾಜ್ಯಗಳು) ಕೂಡಿರುತ್ತದೆ. ಪ್ರತಿ ಕಣ್ಣೀರ ಹನಿ ಮೂರು ಪದರಗಳನ್ನು ಹೊಂದಿರುತ್ತದೆ.
… 1. ಒಳಗಿನ ಲೋಳೆ ಪದರವು ಕಣ್ಣೀರ ಹನಿಯನ್ನು ಕಣ್ಣಿನ ಮೇಲೆ ಬಿಗಿದು ಕಟ್ಟಿದ ಹಾಗೆ ಇಡುತ್ತದೆ.
… 2. ನೀರಿನ ಮಧ್ಯ ಪದರವು ಅತಿ ದಪ್ಪ ಪದರವಾಗಿದ್ದು, ಕಣ್ಣನ್ನು ಜಲಸಂಯುಕ್ತವಾಗಿಡುತ್ತದೆ (hydrated), ಮತ್ತು ಸೂಕ್ಷ್ಮಜೀವಿಗಳನ್ನು ಹಿಮ್ಮೆಟ್ಟಿಸಿ ಕಾರ್ನಿಯಾವನ್ನು ರಕ್ಷಿಸುತ್ತದೆ.
… 3. ಹೊರಗಿನ ಎಣ್ಣೆಯುಕ್ತ (ಜಿಡ್ಡಾದ) ಪದರವು ಕಣ್ಣೀರ ಹನಿಯ ಮೇಲ್ಮೈಯನ್ನು ನುಣುಪಾಗಿಡುವುದರಿಂದ, ಕಣ್ಣಿನ ಪಾರದರ್ಶಕತೆಯನ್ನು ಕಾಪಾಡುವುದಲ್ಲದೆ, ಉಳಿದ ಪದರಗಳು ಸಹ ಆವಿಯಾಗದ ಹಾಗೆ ತಡೆಯುತ್ತದೆ.

ಕಣ್ಣೀರಿನ ಉತ್ಪತ್ತಿ:
ಎರಡೂ ಕಣ್ಣುಗಳ ಮೇಲಿನ ಹೊರಗಿನ
ಬದಿಯಲ್ಲಿರುವ ಅಶ್ರುಕಾರಕ ಗ್ರಂಥಿಗಳು (lacrimal glands) ಕಣ್ಣೀರನ್ನು ಉತ್ಪತ್ತಿಸುತ್ತವೆ. ನಾವು ಕಣ್ಣು ಮಿಟುಕಿಸಿದಾಗ, ಕಣ್ಣೀರು ಕಣ್ಣಿನ ಹೊರ ಮೈಮೇಲೆ ಹರಡಿಕೊಳ್ಳುತ್ತದೆ. ನಂತರ  ಕಣ್ಣಿನ ಮೇಲಿನ ಮತ್ತು ಕೆಳಗಿನ ರೆಪ್ಪೆಯ ಮೂಲೆಯಲ್ಲಿ ಇರುವ ಒಂದೊಂದು ರಂಧ್ರದ (punctum)  ಮೂಲಕ, ರೆಪ್ಪೆಗಳಲ್ಲಿರುವ ಚಿಕ್ಕ ಚಿಕ್ಕ ಕಾಲುವೆಯಲ್ಲಿ ಹರಿದು, ಮುಂದೆ ಕೆಳಕ್ಕೆ ಸಣ್ಣ ನಾಳದಲ್ಲಿ (duct) ಇಳಿದು ಮೂಗಿನಲ್ಲಿ ಸುರಿಯುತ್ತದೆ. ಅಲ್ಲಿ ಕಣ್ಣೀರು ಮತ್ತೆ ಮರುಹೀರಿಕೆಯಗುತ್ತದೆ ಅಥವ ಆವಿಯಾಗುತ್ತದೆ.
ಕಣ್ಣಿನ ಸೋಂಕು, ಊತ, ಪೆಟ್ಟು ಅಥವ ಗೆಡ್ಡೆ ಮುಂತಾದುವು ಆದಾಗ, ವಯಸ್ಕರ ಅಶ್ರುಕಾರಕ ನಾಳಗಳು (lacrimal ducts) ಮುಚ್ಚಿ ತೊಂದರೆ ಆಗಬಹುದು. ಕೆಲವೊಮ್ಮೆ ಹಸುಳೆಗಳು ಹುಟ್ಟಿದಾಗಲೆ ಕಣ್ಣೀರ ನಾಳಗಳು ಮುಚ್ಚಿರಬಹುದು; ಆದರೆ, ಕ್ರಮೇಣ ತಂತಾನೆ ಸರಿಯಾಗುವುದು.

ಅತೀವ್ರ ಭಾವನಾತ್ಮಕ ಸಂದರ್ಭಗಳಲ್ಲಿ ಉಕ್ಕಿ ಬರುವ ಕಣ್ಣೀರು, ಹರಿವಿನ ವ್ಯವಸ್ಥೆಗೆ ಅತಿಯಾಗಿ, ಆ ಕಣ್ಣೀರು ಕಣ್ಣುಗಳಿಂದ ಹೊರಬಂದು ಕೆನ್ನೆಗಳ ಮೇಲೆ ಇಳಿಯುವುದು ಮತ್ತು ಮೂಗಿನ ಹೊಳ್ಳೆಗಳಲ್ಲಿ ಸಹ ಸೋರುವುದು ಸಹಜ. ವಯಸ್ಸಾದ ಹಾಗೆ ಮೂಲಭೂತ ಕಣ್ಣೀರಿನ ಉತ್ಪತ್ತಿ ಕಮ್ಮಿಯಾಗಿ ಶುಷ್ಕ (ಒಣಕಣ್ಣು) ಕಣ್ಣಿಗೆ ತುತ್ತಾಗಬಹುದು. ಅಲ್ಲದೆ ಮಹಿಳೆಯರಲ್ಲಿ, ಗರ್ಭಾವಸ್ಥೆಯ ಸಮಯ ಮತ್ತು ಮುಟ್ಟುನಿಲ್ಲುವ ಸಂದರ್ಭಗಳಲ್ಲಿ ಸಂಗತಗಳ (harmones) ವ್ಯತ್ಯಯ ಉಂಟಾಗಿ ಸಹ ಶುಷ್ಕ ಕಣ್ಣಿನ ತೊಂದರೆ ಬರಬಹುದು. ಸ್ಪರ್ಶ ದರ್ಪಣಗಳ (contact lenses) ಉಪಯೋಗ ಹಾಗು ಕೆಲವು ಔಷಧಗಳ ಪರಿಣಾಮದಿಂದ ಕೂಡ ಶುಷ್ಕ ಕಣ್ಣುಗಳ ಸಾಧ್ಯತೆ ಇದೆ. ಒಣಕಣ್ಣಿನ ತೊಂದರೆ ಇದ್ದವರಲ್ಲಿ, ಕಣ್ಣಿನ ರೆಪ್ಪೆಗಳ ಉರಿಯೂತ ಕೂಡ ತೊಂದರೆ ನೀಡಬಹುದು.

ಮಾನವ ಸಂಸ್ಕೃತಿ ಮತ್ತು ಕಣ್ಣೀರು:
ಸರಿ ಸುಮಾರು ಎಲ್ಲ ಮಾನವ ಸಂಸ್ಕೃತಿಗಳಲ್ಲೂ, ಅಳುವುದರಿಂದ ಕಣ್ಣೀರು ಕೆನ್ನೆಗಳ ಮೇಲೆ ಹರಿಯುವುದು ಮತ್ತು ಅದರ ಸಂಗಡ ಬಿಕ್ಕುವ ಸದ್ದು ಹೊರಡುವುದು ಸಹಜವಾಗಿ ಇದ್ದೇ ಇದೆ. ಭಾವನಾತ್ಮಕ ಪ್ರಚೋದನೆಗಳು ಸಾಮಾನ್ಯವಾಗಿ ಖಿನ್ನತೆ ಹಾಗು ದುಃಖಕರ ಪರಿಸ್ಥಿತಿಯಲ್ಲಿ ಉಂಟಾದರು, ಅಳುವುದನ್ನು ಕೋಪ, ಖುಷಿ, ಭಯ, ನಗು ಅಥವ ಹಾಸ್ಯ, ಹತಾಶೆ, ಪಾಶ್ಚಾತ್ತಾಪ ಅಥವ ಅಂಥ ಇನ್ನಿತರ ಅಗಾಧ ಭಾವನಾತ್ಮಕ ಸ್ಥಿತಿಗಳೂ ಸಹ ಉತ್ಪತ್ತಿಸಬಹುದು. ಕೆಲವೊಮ್ಮೆ ಸಂಗೀತದಿಂದ, ಓದುವುದರಿಂದ, ಮಾಧ್ಯಮಗಳ ಮೂಲಕ ನೋಡುವುದು, ಕೇಳುವುದು ಸಹ ಭಾವನಾತ್ಮಕ ಕಣ್ಣೀರಿಗೆ ಮೂಲ ಆಗಬಹುದು. ಸಾಮಾನ್ಯವಾಗಿ ಎಲ್ಲ ಸಮಾಜಗಳಲ್ಲು ಹೆಚ್ಚಾಗಿ ಅಳುವುದು ಹಸುಳೆಗಳು ಮತ್ತು ಮಕ್ಕಳು. ಕೆಲವು ಸಂಸ್ಕೃತಿಗಳಲ್ಲಿ ಅಳುವುದನ್ನು ಬಾಲಿಶ ಎಂದೂ ಮತ್ತು ಘನತೆಯಲ್ಲ ಎಂದೂ ಭಾವಿಸುವರಲ್ಲದೆ, ಸಾವಿನ ಸಂದರ್ಭ ಅಲ್ಲದೆ ಉಳಿದಂತೆ ಸಾರ್ವಜನಿಕವಾಗಿ ಅಳುವುದನ್ನು ಧಿಕ್ಕರಿಸುತ್ತಾರೆ. ಸುಮಾರು ಎಲ್ಲ ಪಾಶ್ಚಿಮಾತ್ಯ ಸಮಾಜದಲ್ಲಿ ಹೆಂಗಸರು ಮತ್ತು ಮಕ್ಕಳ ಅಳು ಸಹಜವೆಂದಾದರೆ, ಪುರುಷತ್ವಕ್ಕೆ ಅದು ತಕ್ಕದಲ್ಲ ಎಂಬ ನಂಬಿಕೆ ಇದೆ. ಕೆಲವು ಲ್ಯಾಟಿನ್ ಪ್ರದೇಶಗಳಲ್ಲಿ ಪುರುಷರಲ್ಲಿ ಸಹ ಅಳುವುದು ಸ್ವೀಕಾರಕ್ಕೆ ಅರ್ಹವಂತೆ.
ಕೆಲವು ಆಧುನಿಕ ಮಾನಸಿಕ ಚಿಕಿತ್ಸಾ ಯತ್ನಗಳಲ್ಲಿ ಅಳುವುದನ್ನು, ಆರೋಗ್ಯಕ್ಕಾಗಿ ಹಾಗು ಮಾನಸಿಕ ಯೋಗಕ್ಷೇಮಕ್ಕಾಗಿ ಉತ್ತಮವೆಂದು ಪ್ರೋತ್ಸಾಹಿಸಲಾಗುತ್ತದೆ.

ಕೆಲವು ವೈಶಿಷ್ಟ್ಯಗಳು:

ನಮ್ಮೆಲ್ಲರ ದಿನನಿತ್ಯದ ಬದುಕಿನಲ್ಲಿ ನಮ್ಮ ಕಿವಿಗೆ ಆಗಾಗ ಬಂದು ಬೀಳುವ ಮೊಸಳೆ ಕಣ್ಣೀರು ಎಂಬ ಗಾದೆ ಮಾತು ಚಾಲ್ತಿಗೆ ಬಂದಿರಬಹುದಾದರೂ ಹೇಗೆ?
ಗ್ರೀಕ್ ದಂತಕಥೆಯ ಪ್ರಕಾರ ಮೊಸಳೆಗಳು ಬೇಟೆಗಾಗಿ ಆಮಿಷ ಒಡ್ಡುವ ಸಮಯದಲ್ಲಿ ಅಥವ ಆ ಬೇಟೆಯನ್ನು ತಿನ್ನುವಾಗ ಕಣ್ಣೀರು ಸುರಿಸುತ್ತ ಅಳುವ ಹಾಗೆ ನಟಿಸುತ್ತವೆಯಂತೆ. ಆದರೆ, ಹೇಗಿದ್ದರು ಮಿಕ ಸಿಕ್ಕ ನಂತರ ಅದೆಂಥ ಕಣ್ಣೀರೆ ಆದರು ಏತಕ್ಕಾಗಿ; ನಾನಂತು ಅರಿಯೆ.

ವೈದ್ಯಕೀಯವಾಗಿ, ಮುಖದ ಒಂದು ಪಾರ್ಶ್ವದ ಸ್ನಾಯುಗಳು ದಿಢೀರನೆ ಬಲಹೀನವಾಗಿ ಅಥವ ಪಾರ್ಶ್ವವಾಯುವಿಗೆ ತುತ್ತಾದ ನಂತರ, ಮತ್ತೆ ಗುಣಮುಖವಾಗುವ ಸಮಯದಲ್ಲಿ ಆ ಬದಿಯ ಮುಖದ ನರದಲ್ಲಿ ವ್ಯತ್ಯಯವಾಗಿ, ಅದರಿಂದಾಗಿ ಆಹಾರದ ವಾಸನೆ ಬಂದಾಗ ಅಥವ ತಿನ್ನುವಾಗಲೆಲ್ಲ ಕಣ್ಣೀರು ಸುರಿಸುವ ತೊಂದರೆಯಾಗುವ ರೋಗಕ್ಕೆ “ಮೊಸಳೆ ಕಣ್ಣೀರಿನ ಸಿಂಡ್ರೋಂ” ಅಥವ “ಬೋಗೊರಾಡ್ಸ್ ಸೀಂಡ್ರೋಂ” ಎನ್ನುವರು.

ಕಾರಣವಿಲ್ಲದೆ ಇದ್ದಕ್ಕಿದ್ದ ಹಾಗೆ ಗಳಗಳನೆ  ಅಳುವವರನ್ನು ಅಥವ ಪ್ರಚೋದನೆ ಇಲ್ಲದೆ ಗಹಗಹಿಸಿ ನಗುವವರನ್ನು ಅಥವ  ಹಾಗೆ ಒಮ್ಮೆ ನಗುವುದು ಮಗುದೊಮ್ಮೆ ಅಳುವುದು ಅಂಥ ವ್ಯಕ್ತಿಯನ್ನು ಕಂಡಾಗ ಏನನ್ನಿಸಬಹುದು? ಆದರೆ ಅಂತಹ ಕಾಯಿಲೆ ಇರುವುದೂ ಸಹ ಸತ್ಯ!
ಕೆಲವರಿಗೆ ನರಮಂಡಲದ ಹಾನಿ ಸಂಭವಿಸಿದಾಗ, ಮೆದುಳಿನ ಭಾವನಾತ್ಮಕ ನಿಯಂತ್ರಣ ಕೆಲಸದ ಹತೋಟಿ ತಪ್ಪಿ, ಪ್ರಾಸಂಗಿಕವಾಗಿ ರೋಗಿಯು ಹಿಡಿತಕ್ಕೆ ಸಿಗದಂತೆ ನಗುವ ಅಥವ ಅಳುವ ರೋಗಕ್ಕೆ ‘ಸೂಡೊಬಲ್ಬಾರ್ ಪರಿಣಾಮ’ ಎಂದು ಹೆಸರು. ಎಷ್ಟು ಶೋಚನೀಯ ಅಲ್ಲವೆ? ಎಂಥೆಂಥ ಕಲ್ಪಿಸಲಸಾಧ್ಯ ರೋಗಗಳು ಹಾಗು ಅವುಗಳಿಂದ ಬಳಲುವವರ ಮತ್ತವರ ಬಂಧುಗಳ ಹಿಂಸೆ ಎಷ್ಟು?

ಹೋದ ವರ್ಷ ಮಳೆ ಬೀಳದೆ ಈಗ ನೀರಿಗೆ ಹಾಹಾಕಾರ ಹೇಗೋ ಹಾಗೆಯೆ, ಕಣ್ಣೀರಿಗೂ ಬರ ಬಡಿವ ಸಾಧ್ಯತೆ ಇದ್ದು, ಆ ತೊಂದರೆಯನ್ನು ‘ಅಲಾಕ್ರೀಮಿಯ’ ಅಥವ ಜನ್ಮಜಾತ ಕಣ್ಣೀರಿನ ಉತ್ಪತ್ತಿಯ ಕೊರತೆ (congenital absence of tear production) ಎನ್ನುತ್ತಾರೆ. ಭಾವನಾತ್ಮಕ ದುಃಖದಲ್ಲಿ ಕೂಡ ಕಣ್ಣೀರು ಸುರಿಯದಂಥ ಸ್ಥಿತಿ.
ಇನ್ನು ನಮ್ಮ ಮುಖದ ಮೇಲೆ ಸುಮ್ಮಸುಮ್ಮನೆ ಕಣ್ಣೀರು ಹರಿದರೆ ಹೇಗನ್ನಿಸಬಹುದು! ಹೌದು ಹಾಗು ಒಂದು ತೊಂದರೆ ಇದೆ. ರೆಪ್ಪೆಯ ಮೂಲೆಯಲ್ಲಿರುವ ಕಣ್ಣೀರು ಹರಿಯಲು ಬೇಕಾದ ರಂಧ್ರ, ಕಾಲುವೆ ಮತ್ತು ನಾಳ ಇವುಗಳಲ್ಲಿ ಯಾವುದೇ ಮುಚ್ಚಿದಂಥ ಸ್ಥಿತಿ ಉಂಟಾದಾಗ, ಮೂಲಭೂತ ಕಣ್ಣೀರೆ ಅಧಿಕವಾದಂತಾಗಿ ಮುಖದ ಮೇಲೆ ಹರಿದು, ಅಂಥ ವ್ಯಕ್ತಿಗೆ ಮಾನಸಿಕ ತೊಂದರೆಯಿಂದ ಹಾಗಾಗುತ್ತಿದೆ ಎಂಬ ಭಾವನೆ ಮೂಡಿ ಮುಜುಗರ ಕೂಡ ಸಾಧ್ಯ.

ಅಂತಿಮವಾಗಿ ಶುಷ್ಕ ಕಣ್ಣು ಎಂಬುದು ಒಂದು ಸಾಮಾನ್ಯ ತೊಂದರೆ. ಕಣ್ಣಿಗೆ ಅಗತ್ಯವಾದ ತೇವಾಂಶವನ್ನು ಕಣ್ಣೀರಿಗೆ ಕೊಡಲು ಸಾಧ್ಯವಾಗದೆ ಹೋದಾಗ ಒಣ ಕಣ್ಣಿನ ಬಾಧೆ ಸಾಧ್ಯ. ಅದು ವಯೋವೃದ್ಧರಲ್ಲಿ, ಮುಟ್ಟು ನಿಂತ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ. ಆಗ ಕಣ್ಣು ಕೆಂಪಾಗುವಿಕೆ, ಉರಿಯೂತದ ತೊಂದರೆ ಮತ್ತು ಬೆಳಕಿನ ಸೂಕ್ಷ್ಮತೆ ಉಂಟಾಗಬಹುದು. ಅದಕ್ಕಾಗಿ ತೇವ ಮಾಡುವ ಕಣ್ಣಿನ ಹನಿಗಳು ಮಾರುಕಟ್ಟೆಯಲ್ಲಿ ದೊರಕುತ್ತವೆ.

(ಸೂಚನೆ: ಎಕ್ಸೊಕ್ರೈನ್ ಗ್ರಂಥಿಯು ತನ್ನ ಉತ್ಪತ್ತಿಯನ್ನು ನಾಳದ ಮೂಲಕ ಶರೀರದ ಅಂಗಾಂಗದ ಮೇಲೆ ನೇರವಾಗಿ ಹರಿಸುತ್ತದೆ. ಉದಾಹರಣೆಗಳು – ಬೆವರು, ಕಣ್ಣೀರು, ಲಾಲಾರಸ, ಹಾಲು, ಜೀರ್ಣಕ್ರಿಯೆಯ ರಸಗಳು ಮುಂತಾಗಿ. ಎಂಡೊಕ್ರೈನ್ ಗ್ರಂಥಿಯು ತನ್ನ ಉತ್ಪನ್ನವನ್ನು ರಕ್ತಕ್ಕೆ ನೇರ ಹರಿಸುತ್ತದೆ. ಥೈರಾಯ್ಡ್, ಪಿಟ್ಯೂಟರಿ, ಪ್ಯಾನ್ಕ್ರಿಯಾಸ್, ಓವರಿ ಮುಂತಾದುವುಗಳ ಸಂಗತಗಳು, ಅಂದರೆ ಹಾರ್ಮೋನ್ಸ್, ಇದಕ್ಕೆ ಉದಾಹರಣೆಗಳು).


2 thoughts on “‘ಕಣ್ಣೀರು’ ವೈದ್ಯಕೀಯ ಲೇಖನ-ಡಾ.ಅರಕಲಗೂಡು ನೀಲಕಂಠ ಮೂರ್ತಿ

  1. ‘ಕಣ್ಣೀರ ಕಥೆ ‘ ತುಂಬಾ ಚೆನ್ನಾಗಿದೆ.
    ವೈದ್ಯಕೀಯ ಲೇಖನ informative ಆಗಿದೆ. ಕಣ್ಣೀರ origin ಹೇಗೆ, ಎಷ್ಟು ಬಗೆ ಕಣ್ಣೀರು ಹಾಗೂ ಅದರ ಉಪಯುಕ್ತತೆ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರ. Congrats Murthy!

Leave a Reply

Back To Top