ಮಾಲಾ ಚೆಲುವನಹಳ್ಳಿ ಅವರ ಕವಿತೆ-ನನ್ನ ನಾ ಕಂಡಂತೆ

ನನ್ನಿರುವಿಕೆಯ ಬಯಸುವ ಜೀವಕೆ
ನೋವುಣಿಸುವುದು ಬೇಡ ನನಗೆ
ಕನ್ನಡಿಯೂ ಸುಳ್ಳು ಹೇಳುವ ಸತ್ಯವ
ಅರಗಿಸಿಕೊಳ್ಳುವುದು ಬೇಡ ನನಗೆ

ನಿಸ್ವಾರ್ಥದ ನಡೆಗೆ ಪ್ರತಿಫಲವ ಕಾಣದೇ
ಪ್ರತಿಕ್ಷಣ ಹಪಹಪಿಸುತಲಿರುವೆ
ಕಸುವ ಹೀರಿದ ನಿರ್ದಯಿ ಕಟುಕನ
ಒರಗಿಸಿಕೊಳ್ಳುವುದು ಬೇಡ ನನಗೆ

ಕರಗಿದ ಕನಸಿಗೂ ಬಂಗಾರದ ಕವಚವ
ಹೊದಿಸಿ ಪೋಷಿಸಿದ್ದೆ ಅನುದಿನ
ಸೊರಗಿದ ಜೀವದ ಕಿರು ಆಶಾಕಿರಣವ
ಜರುಗಿಸಿಕೊಳ್ಳುವುದು ಬೇಡ ನನಗೆ

ಎಂದಾದರೊಂದು ದಿನದ ಒಳಿತಿಗಾಗಿ
ನಿರೀಕ್ಷೆಯಲ್ಲಿ ದಿನ ದೂಡುವಾಗ
ಎಂದೆಂದೂ ಬದಲಾಗದ ಕುಟಿಲ ಮುಖವಾಡ
ಧರಿಸಿಕೊಳ್ಳುವುದು ಬೇಡ ನನಗೆ

ಹೆತ್ತವರು ಕೊಟ್ಟ ವಿದ್ಯೆ ಸಂಸ್ಕಾರಗಳು
ಮಾಲಾಳೊಳಗೆ ಜೀವಂತವಾಗಿವೆ
ಸತ್ತು ಸಮಾಧಿಯಾದ ಸಂಬಂಧದ ಜೊತೆ
ಗುರುತಿಸಿಕೊಳ್ಳುವುದು ಬೇಡ ನನಗೆ.

————————–

Leave a Reply

Back To Top