ವಿಶೇಷ ಲೇಖನ
ಬಹುಪಯೋಗಿ ಈಚಲ
ಕಣ್ಮರೆಯಾಗುತ್ತಿರುವ
ಗುಡಿ ಕೈಗಾರಿಕೆಗಳು
ಭಾರತಿ ಅಶೋಕ್
ಈಚಲ ಇದು ಸೌಳು ನೆಲದಲ್ಲಿ ಬೆಳೆಯುವ ಬಹುಪಯೋಗಿ ಮರ. ಹೆಚ್ಚು ಮಳೆ ಬೀಳುವ ಭೂಮಿಯಲ್ಲಿ ಹೆಚ್ಚೆಚ್ಚು ಮರಗಳು ಬೆಳೆಯುತ್ತಿದ್ದವು.ಸೌಳು ಭೂಮಿಯಲ್ಲಿ ಕಾಣ ಸಿಗುವ ಈ ಮರಗಳು ಮನುಷ್ಯರ ಬದುಕಿಗೆ ತುಂಬಾ ಉಪಯುಕ್ತ. ಮರದ ಪ್ರತಿ ಭಾಗವೂ ಉಪಯುಕ್ತವಾಗಿದೆ.
ಈಚಲ ಮರಗಳನ್ನು ಹತ್ತಿರದಿಂದ ನೊಡಿದ್ದು ಕಡಿಮೆ, ಅದರೂ ಅದರ ಸಂಪೂರ್ಣ ಸದುಪಯೋಗ ಪಡೆದವಳು ನಾನು. ಚಿಕ್ಕ ವಯಸ್ಸಿನಿಂದಲೂ ಶಾಲಾ ರಜ ದಿನಗಳಲ್ಲಿ ದೊಡ್ಡಪ್ಪಂದಿರು ಇರುವ ಊರಾದ ಮಾದೂರು ಹಗರಿ ಬೊಮ್ಮನಹಳ್ಳಿಯಿಂದ ಕೆಲವೇ ಕಿ ಮಿ ದೂರದಲ್ಲಿರುವ ಇಲ್ಲಿ ನನ್ನ ಝಾಂಡ. ಅಕ್ಕ ಪಕ್ಕದ ಹಳ್ಳಿಗೆ ಅಕ್ಕಂದಿರನ್ನು ಮದುವೆ ಮಾಡಿ ಕೊಟ್ಟಿರುವುದರಿಂದ ಸದಾ ಒಂದಿಲ್ಲೊಂದು ಹಳ್ಳಿಗೆ ಹೋಗುವುದು ನನ್ನ ಅತ್ಯಂತ ಪ್ರೀತಿಯ ಕಾಯಕ. ಹೊಗುವುದೆಂದರೆ ಹೀಗಿನಂತೆ(ಈಗಲೂ)ಆಯಾ ಹಳ್ಳಿಗಳಿಗೆ ವಾಹನಗಳ ಸಂಚಾರ ಸೌಲಭ್ಯವಿಲ್ಲದಿರುವುದು ನನ್ನಲ್ಲಿ ಇನ್ನಷ್ಟು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಲು ಕಾರಣವಾದದ್ದು ಸತ್ಯ. ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ನಡೆದೇ ಹೋಗಿ ಬರುವುದು ಅನಾಯಾಸದ ಕೆಲಸ. ಹಾಗೆಲ್ಲಾ ತಿರುಗಾಡುವುದು ಕೇವಲ ಅಕ್ಕ ಭಾವನ ಪ್ರೀತಿಗಾಗಿ ಅಲ್ಲ ರಸ್ತೆ ಇಕ್ಕೆಲದಲ್ಲಿ ಸಿಗುವ ವಿವಿಧ ಜಾತಿಯ ಪಕ್ಷಿಗಳನ್ನು,ಮರ ಗಿಡಗಳನ್ನು ಹತ್ತಿರದಿಂದ ಮುಟ್ಟಿ ನೋಡಿ ಮಾತಾಡುವ ಹಂಬಲದಿಂದ. ಅಣ್ಣ ಅಕ್ಕಂದಿರು ಪೊದೆಗಳಲ್ಲಿ ಸಿಗುವ ಕೌಜುಗ ಹಿಡಿದು ಅಗತ್ಯಕ್ಕೆಂದು ಜೊತೆಯಲ್ಲಿರಿಸಿದ ಕಡ್ಡಿ ಪೆಟ್ಟಿಗೆ ಬಳಸಿ ಅಲ್ಲಲ್ಲೇ ಮುದ್ದಾದ ಪಕ್ಷಿಯನ್ನು ಸುಟ್ಟು ತಿನ್ನುತ್ತಿದ್ದರು. ನನಗೆ ಅಂತಹ ಚಂದದ ಮುದ್ದಾದ ಜೀವ ಇಲ್ಲವಾಗುವುದನ್ನು ನೊಡಲು ಆಗದೇ ಒಬ್ಬಳೇ ದೂರ ದೂರ ನಡೆಯುತ್ತಿದ್ದೆ. ಆಗ ಈ ಈಚಲ ಮರ ನೋಡಿದ ನೆನಪು. ಎತ್ತರಕ್ಕೆ ಬೆಳೆಯುವ ಕಾರಣ ಕತ್ತೆತ್ತಿ ನೋಡಿದ್ದೇ ಸಾಹಸ. ಅದರಲ್ಲಿ ಗೊಂಚಲು ಗೊಂಚಲು ಹಣ್ಣು (ಉತ್ತತ್ತಿ) ಖರ್ಜೂರ ಎಂದು ಅಣ್ಣ ಹರಿದು ಕೊಡುತ್ತಿದ್ದ, ತಿಂದಾಗ ದೇಹದಲ್ಲಿ ಉಷ್ಣ ಹೆಚ್ಚಿ ಹೊಟ್ಟೆ ನೊಂದದ್ದು ಇದೆ. ಯಾವಗಲೋ ಒಂದೆರಡು ಬಾರಿ ಈಚಲ ಕೊಬ್ಬರಿ ತಿಂದ ನೆನಪು. ಅದು ಮೆದು ಮತ್ತು ಗಟ್ಟಿಯಾಗಿಯೂ ಸಿಗುತ್ತದೆ ಎಂದು ಇತ್ತೀಚೆಗೆ ಗೊತ್ತಾದದ್ದು. ಮರದ ಸುಳಿಯಿಂದ ಎಷ್ಟು ಕೆಳಗೆ ಅದನ್ನು ಕತ್ತರಿಸುವ ಲೆಕ್ಕದಲ್ಲಿ ಅದು(ಕೊಬ್ಬರಿ) ಮೆದು ಅಥವಾ ಗಟ್ಟಿಯಾಗಿರುತ್ತದೆ.
ಈಚಲ ಮರ ನೋಡಲು ತೆಂಗಿನ ಮರದಂತೆ ಎತ್ತರಕ್ಕೆ ನೇರವಾಗಿ ಬೆಳೆಯುವ ಖರ್ಜೂರ ಜಾತಿಯದ್ದು. ಹಣ್ಣುಗಳು ಖರ್ಜೂರದ ಹಣ್ಣನ್ನೇ ಹೊಲುತ್ತವೆ, ಸ್ವಾದವೂ. ಇನ್ನು ಇದರ ಕಾಂಡ ಎತ್ತರದ ಸುಳಿಯಿಂದ ಸ್ವಲ್ಪ ಕೆಳಗೆ ಕತ್ತಿರಿಸಿದ ಮಧ್ಯದಲ್ಲಿನ ತಿರುಳು ಕೊಬ್ಬರಿ. ಇದು ಬಡವರ ಅಡುಗೆ ಮನೆಯ ತೆಂಗು ಹೌದು. ನಾನು ಚಿಕ್ಕವಳಿದ್ದಾಗ ಬಲಿತ ಕೊಬ್ಬರಿ ತಿನ್ನಲು ಆಗದೇ ಹಲ್ಲಿನ ನಡುವಿಂದ ಚಂಗನೆ ಜಾರಿ ಬಾಯಿಂದ ಅಷ್ಟು ದೂರ ಬೀಳುತ್ತಿತ್ತು, ಆದರೂ ಕಡಿದು ತಿನ್ನುವ ಛಲ ಮಾತ್ರ ಬಿಡುತ್ತಿರಲಿಲ್ಲ.
ಇದೆಷ್ಟೇ ಆಗಿದ್ದರೆ ಅಂತಹ ಉಪಯೋಗಿ ಎಂದು ಹೇಳಲು ಸಾಧ್ಯವಿರಲಿಲ್ಲ. ಇವತ್ತಿನ ಮದ್ಯ ಪ್ರಿಯರ ಮೂಲ ಇದು. ತೆಂಗಿನ ಮರದಿಂದ ನೀರಾ ಸಿಗುವಂತೆ ಈಚಲ ಮರದಿಂದ ಹೆಂಡ ಸಿಗುವುದು. ಇಷ್ಟಕ್ಕೆ ಇದು ಮುಗಿಯದು. ಬಡವನ ಅನ್ನದ ಮುಲವೂ ಹೌದು.
ಈಚಲ ಮರದ ಗರಿಯಿಂದ ಈಚಲ ಚಾಪೆ, ಈಚಲ ಬಾರಿಗೆ, ಮನೆ ಸೂರಿಗೆ ಹೊದಿಕೆಯಾಗಿ ಉಪಯುಕ್ತವಾಗಿದೆ. ಮದೂರಿನ ಸುತ್ತಲೂ ಈ ಮರಗಳು ಹೇರಳವಾಗಿ ಸಿಗುತ್ತಿದ್ದವು. ಅಂತೆಯೇ ಅಲ್ಲಿನ ಸಮುದಾಯವೊಂದರ ಕಸುಬಿಗೆ ಸಾಕಷ್ಟು ಕಚ್ಚಾ ವಸ್ತುವು ಅಗಿದ್ದ ಕಾರಣ ಆ ವೃತ್ತಿಯನ್ನೇ ನಂಬಿಕೊಂಡು ಸಮುದಾಯವು ಬದುಕುತ್ತಿದ್ದವು. ಈಚಲ ಗರಿಯನ್ನು ಕತ್ತರಿಸಿ ತಂದು ಕೊರವ ಜನಾಂದ ನಾಗರ ಹಿಡಿಯ ಕಸಬರಿಗೆಯನ್ನು ಕಟ್ಟುತ್ತಿದ್ದರು. ನಮ್ಮೂರಲ್ಲೂ(ಸೋಗಿ) ಕೊರವ ಸಮುದಾಯದವರು ಈ ಕಾಯಕ ಮಾಡುತ್ತಿದ್ದರು. ಅವರು ದೂರದಿಂದ ಈ ಕಚ್ಚಾ ವಸ್ತುವನ್ನು ತಂದು ಊರಿನ ಪ್ರತಿಯೊಂದು ಮನೆಗು ವರ್ಷಕ್ಕೆ ಜೊತೆ,ಎರಡು ಜೊತೆ ನಾಗರ ಹಿಡಿಕೆಯ ಬಾರಿಗೆ ಮಾಡಿ ಕೊಡುತ್ತಿದ್ದರು. ಈ ನಾಗರ ಹಿಡಿಕೆ ಎಂದರೆ ಹಿಡಿಕೆ ನೋಡಲು ನಾಗರ ಹೆಡೆಯಂತೆ ಕಾಣುವ ಹಿಡಿಕೆಯ ಬಾರಿಗೆ. ಪೂರ್ತಿ ಸವೆದು ಹೋದರೂ ಹಿಡಿಕೆ ಮಾತ್ರ ಈಗ ತಾನೆ ಕಟ್ಟಿದಂತಿರುತ್ತಿದ್ದವು. ಹೊಸ ಬಾರಿಗೆ ಅದರೆ ಕಸ ಗುಡಿಸಲು ಸುಲಭ, ಸವೆದು ಹೊದಂತೆ ಮೊಂಡ ಬಾರಿಗೆಯಿಂದ ಎಷ್ಟು ಬಗ್ಗಿದರೂ ನೆಲ ಸಿಗದು. ಆದರೂ ಅದರಿಂದಲೇ ಗುಡಿಸಬೇಕು ಕಾರಣ ಬಾರಿಗೆ ಸಿಗಲು ಇನ್ನು ಸಮಯ ಇರಿತ್ತಿತ್ತು. ಕಾರಣ ಮದ್ಯದಲ್ಲಿ ಬಾರಿಗೆ ಕೇಳಿದರೆ “ಮನ್ನೆ ಕೊಟ್ಟಿನಿ ವರ್ಷಕ್ಕೆ ಎಷ್ಟು ಜೋಡಿ ಬಾರಿಗೆ ಹರಿತಿರಿ” ಅಂತ ಅಪ್ತವಾಗಿ ಗದರುತ್ತಿದ್ದರು.
ಈಗ ಮತ್ತೆ ಮಾದೂರಿಗೆ ಬರುತ್ತೇನೆ ಕಾರಣ ನಮ್ಮೂರಲ್ಲಿ ಈಚಲ ಚಾಪೆ ನಾ ಕಾಣೆ, ಕಂಡದ್ದು ಅಲ್ಲೇ. ಈ ಈಚಲ ಚಾಪೆ ಮೇಲೆ ಮಲಗೊದು ಅಂದ್ರೆ ಅದೊಂತರ ಖುಷಿ. ಸಂಜೆಯಾಗುತ್ತಲೇ ದೊಡ್ಡಪ್ಪ ಅಂಗಳದಲ್ಲಿ ಚಾಪೆ ಹಾಸಿ ನಮ್ಮನ್ನು ಕರೆದುಕೊಂಡು ಕುಳಿತುಕೊಳ್ಳುತ್ತಿದ್ದರು. ಊರು ಆಗ ವಿದ್ಯತ್ ಸಂಪರ್ಕದಿಂದ ಬಲು ದೂಉರ ಇತ್ತು. ಬೊಮ್ಮನಹಳ್ಳಿ ಕೂಡ್ಲಿಗಿ ಮದ್ಯದಲ್ಲಿರುವ ಊರಿದು. ಈಗಾಗಲೇ ಹೇಳಿರುವೆ ಈ ಊರಿಗೆ ಆಧುನಿಕತೆಯು ಲವಲೇಶವು ಸೋಂಕಿಲ್ಲ ಅಂತ. ಜೋಡೆತ್ತಿನ ಬಂಡಿಯಲ್ಲಿ ಪಯಣಿಸುವ ಜನರನ್ನು ಕತ್ತಲೆಯಲ್ಲಿಯೇ ಕುಳಿತು ನಕ್ಷತ್ರಗಳ ಬೆಳಕಿನಲ್ಲಿ, ಸಾಧ್ಯವಿದ್ದಾಗ ಚಂದ್ರನ ಬೆಳಕಿನಲ್ಲಿ ಊರಿಂದ ಆಚೀಚೆ ಹೋಗಿ ಬರುವುದನ್ನು ಗಮನಿಸುವುದೇ ಒಂದು ಮಜ. ಕುಳಿತಾಗ ಸುಮ್ಮನಿರದ ಕೈಗಳು ಚಾಪೆಯ ಮೂಲೆಯನ್ನು ದುಂಡಗೆ ಸುತ್ತುವುದು ಕೆಂಜೋಳು ಕುಟುಕಿದಂತೆ ಅದರಲ್ಲಿನ ಈಚಲ ಮುಳ್ಳು ಚುಚ್ಚುತ್ತಲೇ ಶಾಕ್ ಹೊಡೆಸಿಕೊಂಡಂತೆ ಕೈ ಬರ್ರನೆ ಎಳೆದುಕೊಳ್ಳುವುದು ಚಟವಾಗಿತ್ತು ಅನ್ನಿಸುತ್ತದೆ.
ಈ ಈಚಲ ಚಾಪೆಯೊಂದಿಗೆ ಸುಂದರ ನೆನಪುಗಳು ಈಗಲೂ ಹಸಿರಾಗಿವೆ. ಊರು ವಿದ್ಯುತ್ ಸಂಪರ್ಕದಿಂದ ದೂರ ಇತ್ತು ಎನ್ನುವುದು ಆ ಊರಿನ ಜನರ ಬದುಕನ್ನು ಎಷ್ಟು ಪ್ರಭಾವಿಸಿತ್ತೆಂದರೆ ಕತ್ತಲಾಗುತ್ತಲೇ ಅಡುಗೆ ಮಾಡಿ ಉಂಡು ಮನೆಯಿಂದ ಹೊರಗೆ ಬಂದುಬಿಡುವುದು. ಅಡುಗೆ ಮನೆಯೆಂದರೆ ಅಲ್ಲೊಂದು ಅಗತ್ಯವಾಗಿ ಚಿಮಣ ಬೇಕೇಬೇಕು. ಅದು ಸೀಮೆ ಎಣ್ಣೆಗು ಬರದ ಕಾಲ. ಹೊತ್ತು ಮುಳುಗಿದರೆ ಬದುಕೆಲ್ಲವೂ ಸುಳಿವಿನ ಮೇಲೆಯೇ, ಅಂಗಳದ ಸ್ವಚ್ಛಂದ ಆಗಸದೊಂದಿಗೇ. ಕ್ಷಮಿಸಿ ಈ ಚಾಪೆ ಬಗ್ಗೆ ಹೇಳ್ತಿದ್ದೆ,ಉಂಡವರೇ ಅಂಗಳದಿ ಚಾಪೆಯಲ್ಲಿ ಪವಡಿಸುವುದು, ಅದು ಈ ಈಚಲ ಚಾಪೆಯಲ್ಲಿಯೇ. ಹೊಸ ಚಾಪೆಯಾದರೆ ಖಂಡಿತ ಮುಳ್ಳುಗಳೊಂದಿಗೆ ಕುಟುಕುವಾಟ ಅಡಲೇಬೇಕು. ಕಾಲ ಕಳೆದಂತೆ ಮುಳ್ಳು ಸವೆದು ತನ್ನ ಅರಿತ, ಇರಿತವನ್ನುವನ್ನು ಬಿಟ್ಟು ಕೊಟ್ಟು ಮೆದುವಾಗುತ್ತಿತ್ತು.
ಈಗ ಸಕಾಲಕ್ಕೆ ಸಾಕಾಗುವಷ್ಟು ಮಳೆ ಬಾರದೇ ಬಂದ ಮಳೆಯಲ್ಕಿ ಜೀವ ಹಿಡಿಯಲು ಸಾಧ್ಯವಾಗದೇ ವಿನಾಶದ ಅಂಚಿನಲ್ಲಿರುವ ಜೀವ ಸಂಕುಲಗಳಲ್ಲಿ ಈ ಈಚಲವು ಇದೆ. ಅದರ ಜೊತೆಗೆ ಈಚಲ ಮರವನ್ನು ನಂಬಿಕೊಂಡಿದ್ದ ಸಮುದಾಯಗಳು, ಸಾಂಪ್ರದಾಯಿಕ ವೃತ್ತಿಗಳು ನ್ಯಪತ್ಯಕ್ಕೆ ಸೇರಿವೆ. ಇದಕ್ಕೆಲ್ಕಾ ಕೇವಲ ಪ್ರಕೃತಿಯನ್ನೇ ಹೊಣೆಗಾರನನ್ನಾಗಿಸಲು ಸಾಧ್ಯವಿಲ್ಲ, ಆಧುನಿಕತೆಯ ಭರಾಟೆಯು, ತಂತ್ರಜ್ಞಾನವೂ ಕಾರಣವಾಗಿವೆ.ಇಂದು ಕೈ ಕಸಬಿನಲ್ಲಿ ತಯಾರಾದ ಈಚಲ ಚಾಪೆ, ಬಾರಿಗೆಗಳನ್ನು ಬಳಸುವರಾರು? ಚಾಪೆ ಎಂದರೆ ಅದರ ಸ್ಥಾನವನ್ನು ಆದುನಿಕ ವೈಭವದ ಮತ್ತೆಗಳ ಅಲಂಕರಿಸಿವೆ. ಈಚಲ ಬಾರಿಗೆಯನ್ನು ಹಿಡಿದು ಗುಡಿಸಲು ಸಾಧ್ಯವಿದೆಯೇ ತಂತ್ರಜ್ಞಾನದ ಪ್ರಗತಿಯಿಂದ ಕಸ ಗುಡುಸಲು ಬಾರಿಗೆಯನ್ನೇ ಬಳಸದ ದಿನಗಳಲ್ಲಿ ಕೌಶಲ್ಯಪೂರ್ಣ ಬಾರಿಗೆ ಚಿಕ್ಕ ಹಿಡಿಕೆಯ ಬಾರಿಗೆ ಯಾರಿಗೆ ಬೇಕಿದೆ. ಕಸಬನ್ನು ನಂಬಿಕೊಂಡಿದ್ದ ಸಮುದಾಯಗಳು ಇಂದು ಪರ್ಯಾಯ ವೃತ್ತಿಯನ್ನು ಅರಸುತ್ತಾ ಗುಳೆ ಹೊರಟಿವೆ.
ನೆನಪುಗಳು ಮಾತ್ರ ಎಂದೂ ಮಾಸದಂತೆ
ಭಾರತಿ ಅಶೋಕ್