ಲಹರಿ ಸಂಗಾತಿ
ಕಣ್ಣುಗಳು ಬಾಳ ಕಾವ್ಯದ ವರತೆಗಳು…
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
“ಕಣ್ಣು ಕಣ್ಣು ಕಲೆತಾಗ…”
ಅವನ ಕಣೋಟಕ್ಕೆ ಸೋತ ಇವಳು ನಾಚಿ ನೀರಾಯಾದಳು. ಇವಳು ಅವನನ್ನೇ ತದೇಕಚಿತದಿಂದ ಕಣ್ಣೋಟ ಬೀರಿ ಮುಗುಳ್ನಗೆ ನಕ್ಕಳು.
ಒಂದೇ ದೃಷ್ಟಿಯಿಂದ ಆ ಮಗುವನ್ನು ನೋಡುತ್ತಿದ್ದ ಆ ಕಣ್ಣುಗಳು ತುಂಬಿ ಬಂದವು. ತಕ್ಷಣ ಆ ಮಗುವನ್ನು ಎತ್ತಿಕೊಂಡು ಕೆನ್ನೆಗೆ ಎರಡು ಮುತ್ತುಗಳನ್ನು ಕೊಟ್ಟಳು ಆ ಮಕ್ಕಳಿಲ್ಲದ ತಾಯಿ…!!
ಮೇಲಿನ ಎರಡು ಸನ್ನಿವೇಶಗಳು ನಾವು ನಿತ್ಯ ಬದುಕಿನಲ್ಲಿ ನೋಡುತ್ತೇವೆ. ನಮ್ಮ ಕಣ್ಣುಗಳು ಬದುಕಿನ ಕಾವ್ಯದ ವರತೆಗಳಿದ್ದಂತೆ. ಕಣ್ಣುಗಳು ಇಡೀ ನಮ್ಮ ವ್ಯಕ್ತಿತ್ವವನ್ನು ಅಳೆಯುವ ಮಾಪನಗಳಿದ್ದಂತೆ. ನೋಡುವ ಕಣ್ಣುಗಳ ನೋಟವೇ ಎಲ್ಲವನ್ನು ಹೇಳಿಬಿಡುತ್ತದೆ. ಒಂದು ಪ್ರೀತಿಯ ಕಣ್ಣಿನ ನೋಟವು ಸಾವಿರಾರು ಪ್ರೀತಿಯ ಸಂಬಧಯನ್ನು ಬೆಸೆದು ಬಿಡುತ್ತದೆ. ಎಲ್ಲೋ ದೂರದಲ್ಲಿದ್ದ ಜೋಡಿಗಳನ್ನು ಒಂದು ಮಾಡಿಬಿಡುತ್ತದೆ ಇಲ್ಲವೇ ಆ ಪ್ರೀತಿಯ ಕಣ್ಣೋಟಗಳು ಹೊಸ ಬದುಕನ್ನು ಹರಸುವ ಬುನಾದಿಯಾಗಿ ಬಿಡುತ್ತವೆ.
ಕವಿ, ಪ್ರೇಮಿ, ಹುಚ್ಚ, ಈ ಮೂವರು ಒಂದೇ ಸಾಲಿನಲ್ಲಿ ಸೇರುತ್ತಾರೆ. ಈ ಮೂವರು ಸಮಾಜವನ್ನು ನೋಡುವ ದೃಷ್ಟಿಕೋನವೇ ವಿಭಿನ್ನ. ಅದಕ್ಕೆ ಮುಖ್ಯ ಕಾರಣ ಕಣ್ಣುಗಳು..!! ವಿಭಿನ್ನ ದೃಷ್ಟಿಯಿಂದ ಸಮಾಜವನ್ನು ನೋಡುತ್ತಾ ನೋಡುತ್ತಾ ಕವಿ ಕಾವ್ಯವನ್ನು ಕಟ್ಟುತ್ತಾನೆ. ಪ್ರೇಮಿ ತನ್ನ ಪ್ರಿಯತಮೆಯ ಮನಸ್ಸನ್ನು ಗೆಲ್ಲುತ್ತಾನೆ. ಹುಚ್ಚ ತನ್ನ ಕಣ್ಣುಗಳಿಂದಲೇ ಸಮಾಜವನ್ನು ವಿಭಿನ್ನವಾಗಿ ನೋಡಿ ಸತ್ಯದ ಮಾತುಗಳನ್ನು ಆಡುತ್ತಾ ಆಡುತ್ತಾ ಎಲ್ಲರ ದೃಷ್ಟಿಯೊಳಗೆ ಹುಚ್ಚ…ಅವನು ಹ ಹ್ಹಾ..ಎಂದು ಅವನಿಗೆ ಪಟ್ಟಕಟ್ಟುತ್ತಾರೆ. ಇವೆಲ್ಲದಕ್ಕೂ ಮುಖ್ಯ ನಮ್ಮ ಕಣ್ಣುಗಳೇ ಕಾರಣ..!! ನಮ್ಮ ಕಣ್ಣುಗಳೆಂದರೆ… ಜೈವಿಕವಾಗಿ ನೋಡುವುದಾದರೆ, ಅವು ತುಂಬಾ ಸೂಕ್ಷ್ಮ. ಕಣ್ಣುಗಳೇ ಇಲ್ಲದೆ ಹೋದರೆ ಜಗತ್ತನ್ನು ನೋಡಲಾಗುವುದಿಲ್ಲ. ಜಗತ್ತು ಕತ್ತಲಾಗಿ ಕಾಣಿಸುತ್ತದೆ.
ಕಣ್ಣುಗಳನ್ನು ನಾವು ಸೂಕ್ಷ್ಮವಾಗಿ ಆರೈಕೆ ಮಾಡಬೇಕು. ಕಣ್ಣುಗಳ ಆರೋಗ್ಯವೇ ನಮ್ಮ ಇಡೀ ಬದುಕಿನ ಆರೋಗ್ಯವೆಂದರೂ ತಪ್ಪಾಗುವುದಿಲ್ಲ. ಒಂದು ಕಾಲದಲ್ಲಿ ಹಿರಿಯರು ಕಣ್ಣುಗಳ ಆರೋಗ್ಯವನ್ನು ಕುರಿತು, “ಚಾಲಿಸ್ಕೊ, ಚಾಲಿಸ್ ಆತೇ ಹೈ…” ಎಂದು ಗುನುಗುತ್ತಿದ್ದರು. ಆದರೆ ಇವತ್ತಿನ ಯಾಂತ್ರಿಕ ಯುಗದಲ್ಲಿ ಅತಿಯಾದ ಮೊಬೈಲ್ ಬಳಕೆ, ಟಿವಿ ವೀಕ್ಷಣೆ, ಒತ್ತಡದ ಜೀವನ… ಮುಂತಾದವುಗಳಿಂದ ವಯಸ್ಸಿಗೆ ಮೊದಲೇ ದೃಷ್ಟಿ ದೋಷ ಬಂದು ಬಿಟ್ಟಿರುತ್ತದೆ. ಅದು ಇವತ್ತಿನ ಅನಿವಾರ್ಯವೂ ಕೂಡ. ಹಾಗಾಗಿ ಕಣ್ಣುಗಳ ಆರೋಗ್ಯ ಎಷ್ಟು ಮುಖ್ಯವೋ.. ನಮ್ಮ ಸಾಮಾಜಿಕ ಆರೋಗ್ಯವು ಅಷ್ಟೇ ಮುಖ್ಯ. ಸಾಮಾಜಿಕ ಆರೋಗ್ಯವನ್ನು ಚೆನ್ನಾಗಿ ಕಾಪಾಡಬಲ್ಲ ನಮ್ಮ ದೇಹದ ಮುಖ್ಯ ಭಾಗವೇ ಕಣ್ಣುಗಳು..! ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಕವಿತ್ವ ಅಡಗಿರುತ್ತದೆ. ಪ್ರೀತಿ ಉಕ್ಕಿರುತ್ತದೆ. ಆದರೆ ಎಲ್ಲರೂ ಅಕ್ಷರರೂಪಕ್ಕೆ ಅಳಿಸಲಾಗುವುದಿಲ್ಲ. ಚಿತ್ರ ರೂಪದಲ್ಲಿ ಬರೆಯಲಾಗುವುದಿಲ್ಲ. ಹಾಡಿನ ರೂಪದಲ್ಲಿ ಹಾಡಲಾಗುವುದಿಲ್ಲ ಆದರೆ ಪ್ರತಿಯೊಬ್ಬರಲ್ಲಿಯೂ ಕೂಡ ಅವರವರ ಕಣ್ಣುಗಳೇ ವಿಭಿನ್ನವಾಗಿ ಬಾಳ ಕಾವ್ಯವನ್ನು ಕಟ್ಟಿ ಕೊಡಬಲ್ಲದು.
“ಅವಳು ಎಷ್ಟೊಂದು ಸುಂದರವಾಗಿದ್ದಾಳೆ. ಅವಳ ಸಿಗ್ನವಾದ ಸೌಂದರ್ಯ ನನ್ನ ಹೃದಯವನ್ನು ಆಕರ್ಷಿಸುತ್ತದೆ”.
“ವ್ಹಾ.. ಅದೆಂತಹ ಸುಂದರವಾದ ಹೂವು ಅಬ್ಬಾ..!!” ಎಂದು ನಮ್ಮ ಮನಸ್ಸು, ಹೃದಯವನ್ನು ಕದ್ದ ಕ್ಷಣಗಳನ್ನು ಕಣ್ಣುಗಳ ಮೂಲಕ ಅನುಭವಿಸುತ್ತೇವೆ. ಕೇವಲ ಶೃಂಗಾರವಲ್ಲದೆ,, ಅಪಘಾತಗಳಾದಾಗ, ಸಾವು ನೋವುಗಳಾದಾಗ, ಕಷ್ಟಗಳು ಬಂದು ಕಣ್ಣೀರು ಸುರಿಸುವಾಗ ಅಂತಹ ಸಮಯದಲ್ಲಿ ಕರುಣಾಜನಕ ಪರಿಸ್ಥಿತಿಯಲ್ಲಿ ಕಣ್ಣುಗಳೇ ಮಮತೆಯ ಮಡಿಲನ್ನು ತುಂಬುವ ಕರುಣಾರಸಗಳಾಗುತ್ತವೆ..!!
ಇನ್ನೂ ಕೆಲವು ಸಂದರ್ಭಗಳಲ್ಲಿ ಅನ್ಯಾಯವಾದಾಗ, ದೌರ್ಜನ್ಯ ಮಾಡಿದಾಗ, ತೊಂದರೆ ಕಂಡು ಬಂದಾಗ ಸಮ್ಮತಿಯಲ್ಲದ ಕೆಲವು ಘಟನೆಗಳನ್ನು ನಾವು ಸಮಾಜದಲ್ಲಿ ಕಂಡಾಗ ನಮ್ಮ ಕಣ್ಣುಗಳು ಸುಮ್ಮನಿರುವುದಿಲ್ಲ ಕೆಂಡದ ಉಂಡೆಗಳಾಗುತ್ತವೆ..! ಕೋಪಗೊಳ್ಳುತ್ತೇವೆ.!! ಆಕ್ರೋಶಬರಿತರಾಗುತ್ತೇವೆ. ಆಗ ನಮ್ಮ ಕಣ್ಣುಗಳು ಇದಕ್ಕೆ ಪೂರಕವಾಗಿ ಬಿರಿಬಿರನೇ ಬೀಡುತ್ತಾ ವರ್ತಿಸುತ್ತೇವೆ. ಬಾಲ್ಯದಿಂದಲೇ ಅಪ್ಪನ ಬಿರಿಬಿರಿ ಕಣ್ಣುಗಳು ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟಿದ್ದಕ್ಕೆ ಸಾಕ್ಷಿಯಾಗುತ್ತದೆ.
ಸುಂದರವಾದ ಬೆಟ್ಟ, ಗುಡ್ಡ, ಆಕಾಶ, ಸಮುದ್ರ, ನದಿ, ಹೂಬಳ್ಳಿ, ಕಾಲು, ಪ್ರಾಣಿ, ಪಕ್ಷಿ, ಪಶು ಗ್ರಾಮ… ಇವೆಲ್ಲವೂ ನಮ್ಮ ಕಣ್ಣುಗಳಲ್ಲಿ ತನ್ನ ಸೌಂದರ್ಯದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ನಮ್ಮ ನಮ್ಮ ಕಣ್ಣುಗಳೇ ಬಾಳ ಕಾವ್ಯದ ವಸ್ತುಗಳಾಗುತ್ತವೆ. ಕಾವ್ಯ ಅಂದರೆ ಕೇವಲ ಕವಿತೆಯಲ್ಲ. ಅದು ನಮ್ಮ ಬದುಕಿನ ಒಳ ಮತ್ತು ಹೊರ, ಬಹಿರಂಗ ಅಂತರಂಗ ಎಲ್ಲವನ್ನು ಕಟ್ಟಿಕೊಡುವ ದೃಷ್ಟಿಯೇ ಆಗಿದೆ.
ಯಾಕೋ…ಕಣ್ಣುಗಳು ಮತ್ತೆ ಮತ್ತೆ ನಿಮ್ಮೊಂದಿಗೆ ಮಾತನಾಡಬೇಕಿಂದಿವೆ. ಪಿಸುಗುಟ್ಟುವ ಮಾತುಗಳು ನಿಮ್ಮ ದೃಷ್ಟಿ ಯುದ್ಧಕ್ಕೆ ಸೋತು ಹೋಗಿವೆ..
ಹೌದು… ನಾವು ನಮ್ಮ ಕಣ್ಣುಗಳ ಮೂಲಕ ಹೃದಯದೊಡನೆ ಮಾತನಾಡಬೇಕಿದೆ. ಎಲ್ಲಾ ಅಡ್ಡ ಗೋಡೆಗಳನ್ನು ಕೆಡವುತ್ತಲೇ, ಪ್ರೀತಿಯಿಂದ ಸಮಾನತೆಯ ಸಮಾಜವನ್ನು ನೋಡಬೇಕಿದೆ…ಸೃಷ್ಟಿಯಲ್ಲಿ ನಾವೇಲ್ಲರೂ ಒಂದೇ ಎಂದು ದೃಷ್ಟಿ ಹರಿಸೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ನಿಜವಾಗಿಯೂ ಕಣ್ಣುಗಳು ಕವಿತೆ ಕಟ್ಟುವ ಒರತೆಗಳೇ. ತುಟಿಗಳ ಮಾತಿಗಿಂತ ಕಣ್ಣಿನ ಮಾತೇ ಮಧುರ. ನವರಸಗಳನ್ನು ಕಣ್ಣಲ್ಲೇ ವ್ಯಕ್ತಪಡಿಸಬಹುದು. ಕಣ್ಣು ಕಣ್ಣು ಕಲೆತಾಗ ಏನೆಲ್ಲವನ್ನು ಮಾತಾಡಿಕೊಳ್ಳಬಹುದು.
ಮನಸೆಳೆಯುವ ಲೇಖನ.
ಮನದುಂಬಿದ ಅಭಿನಂದನೆಗಳು.