ತತ್ವ ಪದಗಳ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಶಿಶುನಾಳ ಷರೀಫರ ಜೀವನ ಗಾಥೆ-ಗೊರೂರು ಅನಂತರಾಜು

ಹಾಸನದ ರಂಗಸಿರಿಯ ಕಾಲೇಜು ರಂಗೋತ್ಸವದಲ್ಲಿ ಮಂಗಳವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ  ಎರಡು ನಾಟಕಗಳು ಪ್ರದರ್ಶನಗೊಂಡವು. ಹಾಸನದ ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮಂಜುನಾಥ ಬೆಳಕೆರೆ ರಚಿತ ಶರೀಫ ನಾಟಕ ಪ್ರದರ್ಶಿಸಿದರು. ನಾಟಕ ನಿರ್ದೇಶನ ಬಾಬಾ ಸಾಹೇಬ ಕಾಂಬಳೆ. ಶಿಶುನಾಳ ಶರೀಫರು ಕನ್ನಡದ ಸಾಹಿತ್ಯ ತತ್ವಪದ ರೂವಾರಿ. ಹಿಂದು ಮುಸ್ಲಿಂ ಭಾವೈಕತೆಗೆ ಹೆಸರಾಗಿರುವ ತತ್ವ ಸಾಹಿತ್ಯದ ಮೇರು ಪರ್ವತ. ಇವರು ಗುರು ಗೋವಿಂದ ಭಟ್ಟರಲ್ಲಿ ಶಿವನನ್ನು ಕಂಡ ಆಧ್ಯಾತ್ಮಿಕ ಚಿಂತಕರು. ಡಾಂಭಿಕ ಭಕ್ತಿಗೆ ತಮ್ಮ ತತ್ವಪದಗಳ ಮೂಲಕ ಕನ್ನಡಿ ಹಿಡಿದವರು. ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಾ ತಮ್ಮ ಇಡೀ ಜೀವನವನ್ನು ಶುದ್ಧ ಭಕ್ತಿ, ಪರಿಶುದ್ಧ ಆಧ್ಯಾತ್ಮಕಕ್ಕೆ ಸಮರ್ಪಿಸಿದ ಮಹಾನ್ ಸಂತ. ಇವರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾ. ಶಿಶುವಿನಾಳ ಗ್ರಾಮದಲ್ಲಿ ತಾ. ೩.೭-೧೮೧೯ರಲ್ಲಿ ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬರು. ತಾಯಿ ಹೆಜ್ನೂಮಾ. ಮುಲ್ಕಿ ಪರೀಕ್ಷೆ ಪಾಸು ಮಾಡಿ ಕೆಲ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಕುಂದಗೋಳ ನಾಯಕ ಮನೆತನದ ಫಾತಿಮಾ ಶರೀಫರ ಬಾಳಿನಲ್ಲಿ ಚಂದ್ರಮಳಾಗಿ ಬಂದರು. ಇವರ ದಾಂಪತ್ಯದ ಬಾಳಿನಲ್ಲಿ ಲತಿಮಾ ಹೆಣ್ಮಗಳು ಬೆಳ್ದಿಂಗಳಂತೆ ಜನ್ಮಿಸಿ ಕೆಲ ದಿನಗಳಲ್ಲೇ ತೀರಿಕೊಂಡಿತು. ತವರು ಮನೆಗೆ ಹೋದ ಫಾತಿಮಾ ಕೂಡ ಅಲ್ಲಿಯೇ ತೀರಿಕೊಂಡರು. ಮಾವ ಅಂತ್ಯಕ್ರಿಯೆಗೆ ಬರಬೇಕೆಂದಾಗ  ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ.. ಹಾಡು ಸಂದರ್ಭೋಚಿತವಾಗಿ ಪರಿಣಾಮಕಾರಿಯಾಗಿತ್ತು. ಕುಂದಗೋಳ ತಾ. ಕಳಸದ ಗೋವಿಂದ ಭಟ್ಟರು ಬಹಿಷ್ಕಾರಕ್ಕೂ ಹೆದರದೇ ಶರೀಫರಿಗೆ ಜನಿವಾರ ಹಾಕಿ  ಕ್ರಾಂತಿ ಮಾಡಿದವರು.  ನನ್ನೊಳಗೆ ನಾ ತಿಳಕೊಂಡೆ ಎನಗೆ ಬೇಕಾದ ಗಂಡನ್ನ ಮಾಡಿಕೊಂಡೆ ಗುರು ಗೋವಿಂದನ ಪಾದ ಹಿಡಕೊಂಡೆ.. ಎಂದು ಶರೀಫರು ಸ್ಮರಿಸಿದ್ದಾರೆ. ಗುರು ಶಿಷ್ಯರಿಬ್ಬರು ಮಸೀದಿ, ದೇವಾಲಯಗಳಿಗೆ ಸಂದರ್ಶಿಸಲು ಹೊರಟರು. ಅನೇಕ ಹಾಡುಗಳನ್ನು ಶರೀಫರು ರಚಿಸಿ ಹಾಡಿದರು. ಇವರ ಹಾಡುಗಳಲ್ಲಿ ೪೬ ಊರುಗಳ ಪ್ರಸ್ತಾಪವಿದೆ.  ಹಾಡಿನ ಪದಗಳು ಧಾರವಾಡ ಭಾಗದ ಆಡು ಭಾಷೆಯಲ್ಲಿವೆ. ಇವುಗಳಲ್ಲಿ ಕೆಲವು ದೇವ ಸ್ತುತಿಯನ್ನು ಇನ್ನು ಕೆಲವು ತತ್ವ ಬೋಧನೆಯನ್ನು ಸಾರಿವೆ.  ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಂಬೆಳಗಿನ ಕಾಲದಲ್ಲಿ ತಮ್ಮ ಅನುಭವ ಕಾವ್ಯದ ಹೊಂಗಿರಣವನ್ನು ಹಾಯಿಸಿದ ಅನುಬಾವಿ ಕವಿ. ಅಂಕಲಗಿಯ ಅಡವಿ ಸ್ವಾಮಿಗಳು, ಗರಗದ ಮಡಿವಾಳಪ್ಪನವರು, ನವಿಲುಗುಂದದ ನಾಗಲಿಂಗಪ್ಪನವರು ಮೊದಲಾಗಿ ಸಮಕಾಲೀನ ಸಾಧು ಸತ್ಪುರುಷರ ಸಾನ್ನಿಧ್ಯ ಸಂಸರ್ಗಗಳಿಂದ ಅನುಬಾವಿಗಳಾಗಿ ಮಾಗಿದರು. ಪಲ್ಲಕಿ ಏರಿ ಬರುವ ನಾಗಲಿಂಗಮತಿಗಳ ದೃಶ್ಯ ಸೊಗಸಾಗಿತ್ತು. ಶರೀಫ್ ತತ್ವಪದಗಳ ಹಿನ್ನಲೆಯಲ್ಲಿ ಅವರ ಅಂತರಾಳವನ್ನು ನಾಟಕ ಬಿಚ್ಚಿಡುತ್ತಾ ಹೋಗುತ್ತದೆ. ನಾಟಕದಲ್ಲಿ ಸಂಗೀತ ಹಾಡು ಪ್ರಧಾನವಾಗಿ ಉಮೇಶ ಪತ್ತಾರ, ಪ್ರಕಾಶ ಬಡಿಗೇರ, ಬಾಬಾಸಾಹೇಬ ಕಾಂಬಳೆರವರ ಸಾಂಗತ್ಯದಲ್ಲಿ ನಾಟಕಕ್ಕೆ ಜೀವಕಳೆ ತುಂಬಿದೆ. ಶರೀಫರ ಪಾತ್ರದಲ್ಲಿ ಮಹಾಲಕ್ಷ್ಮೀ ಮುಖಭಾವ ಸೂಕ್ತವಾಗಿ ಒಪ್ಪುತ್ತದೆ.    ಕಾಲೇಜಿನ ಪ್ರಾಂಶುಪಾಲರು ಮಧುಸೂದನ್ ಅವರು ಗೋವಿಂದ ಭಟ್ಟರ ಪಾತ್ರವನ್ನು ನಿರ್ವಹಿಸಿ ತಮ್ಮ ಶಿಷ್ಯರಿಗೆ (ಸ್ಟೂಡೆಂಟ್ಸ್) ಗಳಿಗೆ ಪ್ರೇರಕ ಶಕ್ತಿಯಾಗಿದ್ದಿದ್ದು ಗಮನಾರ್ಹ. ನಯನ -ಫಾತಿಮಾ, ಮಂಜು ಪ್ರಮೋದ್-ಗರಗದ ಮಡಿವಾಳ,  ಲಾವಣ್ಯ-ನಾಗಲಿಂಗಸ್ವಾಮಿ, ನಂದನ್-ಹಿರಿ ಸಿದ್ಧರಾಮಯ್ಯ, ಭುವನ್ ಕುಮಾರ್-ಇಮಾಮ್, ಆದಿತ್ಯ-ಮುದುಕ ಇತ್ಯಾದಿ ಪಾತ್ರಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ನಿಭಾಯಿಸಿದರು.


ಹಾಸನ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಇನ್ನೊಂದು ನಾಟಕ ಭಗವದ್ದಜ್ಜುಕೀಯಂ. ರಚನೆ ಬೋಧಯಾನ. ಕನ್ನಡಕ್ಕೆ ಕೆ.ವಿ.ಸುಬ್ಬಣ. ನಿರ್ದೇಶನ ರಂಗನಾಥ ಶಿವಮೊಗ್ಗ. ಸಂಸ್ಕೃತ ನಾಟಕ ಪರಂಪರೆಯಲ್ಲಿ ಹಾಸ್ಯ ರಸವನ್ನು ಪ್ರಧಾನವಾಗಿರಿಸಿಕೊಂಡ ಪ್ರಕಾರವಾಗಿ ಪ್ರಹಸನವು ನಿಲ್ಲುತ್ತದೆ. ಕ್ರಿ.ಶ.೭ನೇ ಶತಮಾನದ ಕಾಲಘಟ್ಟದಲ್ಲಿ ನಡೆಯುತ್ತಿದ್ದ ಧಾರ್ಮಿಕ ಸಂಘರ್ಷದ ಕುರಿತು ವಿಡಂಬನಾತ್ಮಕವಾಗಿ ನಾಟಕ ಮೂಡಿ ಬಂತು. ಬೌದ್ಧ ಧಮ್ಮದ ತತ್ವಗಳಿಂದ ಪ್ರಭಾವಿತನಾದ ಶಿಷ್ಯ ಶಾಂಡಿಲ್ಯನಿಗೂ ವೈದಿಕ ಧರ್ಮದ ಕರ್ಮಟ ತತ್ವವನ್ನು ಪ್ರತಿಪಾದಿಸುವ ಗುರು ಪರಿವ್ರಾಜಕರಿಗೂ ತಾತ್ವಿಕ ಸಂಘರ್ಷಗಳ ಹೊಯ್ದಾಟದಲ್ಲಿ ಸಾಗುವ ನಾಟಕ ಹಲವು ಪವಾಡಗಳ ಸಾದೃಶ್ಯ ರೂಪವಾಗಿದೆ. ನಾಟಕದ ಆರಂಭದಲ್ಲಿ ಶಾಂಡಿಲ್ಯ ಭಿಕ್ಷಾಟನೆಯಲ್ಲಿ ಹೊಟ್ಟೆ ಪಾಡೇ ತನಗೆ ಮುಖ್ಯವೆಂದು ಪ್ರತಿಪಾದಿಸುತ್ತಾನೆ. ಕಾಮಿಡಿ ಪಾತ್ರಕ್ಕೆ ಲಗತ್ತಾಗಿ ಪಾತ್ರದಾರಿ ವಿನಯ್ ಕುಮಾರ್ ಗುರು ಬೋಧನೆಯನ್ನು ಟೀಕಿಸಿ ವಿಡಂಬಿಸಿ ಪ್ರೇಕ್ಷಕರನ್ನು ನಗಿಸಲು  ಬೋಧ ಪ್ರಧಾನ ನಾಟಕದಲ್ಲೂ ಒಂದಿಷ್ಟು ಕಚಗುಳಿ ಮಾತು ಅಭಿನಯದಿಂದ ರಂಜಿಸುತ್ತಾರೆ. ನಾಟಕದ ನಾಯಕಿ ವಸಂತಸೇನೆ (ಅನುಷ ಪಿ.ಜಿ.) ತನ್ನ ಸಖಿಯರಾದ ಪರಭೃತಿಕೆ (ದೀಪು ಎಸ್.) ಮಧುಕಾರಿಕೆ (ಡಿಂಪಲ್ ಎ.ಪಿ.)  ಹಾಡುತ್ತಾ ನಲಿಯುತ್ತಾ ರಂಗ ಪ್ರವೇಶಿಸುತ್ತಾಳೆ. ವೇಶ್ಯೆಯಾದ  ಇವಳ ಆಯಸ್ಸು ಆಗಲೇ ಮುಗಿದಿದೆಯೆಂದು ಬರುವ ಯಮ ಪುರುಷ (ಆಕಾಶ್‌ಎಂ.ಎಸ್) ವಿಷ ಸರ್ಪ ರೂಪ ತಾಳಿ ಕಚ್ಚಿ ಸಾಯಿಸುತ್ತಾನೆ. ಇದನ್ನು ಕಣ್ಣಾರೆ ಕಂಡ ಶಾಂಡಿಲ್ಯ ದು:ಖಿತನಾಗುತ್ತಾನೆ. ತಪಸ್ಸಿಗೆ ಕುಳಿತ ಗುರು ಪರಿವ್ರಾಜಕರಲ್ಲಿ ಅತ್ತು ಕರೆದು ಆಕೆಯ ಪ್ರಾಣ ಉಳಿಸಬೇಕೆಂದು ಬೇಡುತ್ತಾನೆ. ಶಿಷ್ಯನ ಅಭಿಷ್ಟೇ ಈಡೇರಿಸಲು ಗುರುಪರಿವ್ರಾಜಕರು ನಿರ್ಧರಿಸಿ ವಸಂತ ಸೇನೆಗೆ ತಮ್ಮ ಪ್ರಾಣವನ್ನು ಧಾರೆ ಎರೆಯುತ್ತಾರೆ. ಇತ್ತ ಗುರುಗಳು ಸತ್ತು ಅತ್ತ ಜೀವ ತೆಳೆಯುವ ವಸಂತಸೇನೆ ಗುರುವಿನಂತೆಯೇ ವರ್ತಿಸುವುದು ಪರಕಾಯ ಪ್ರವೇಶದ ಅಭಿನಯ ರಂಜಿಸುತ್ತದೆ. ಇದೇ ಕಾಲಕ್ಕೆ ವಸಂತಸೇನೆಯ ಸಂಗ ಬಯಸಿ ರಂಗ ಪ್ರವೇಶಿಸುವ ರಾಮಿಲಕ (ತನುಶ್ರೀ ಎಮ್.ಪಿ.) ಆಕೆಯನ್ನು ತಬ್ಬಿಕೊಳ್ಳಲು ಹೋಗಿ ದಬ್ಬಿಸಿಕೊಳ್ಳುತ್ತಾನೆ. ಎಲ್ಲೋ ಎಡವಟ್ ಆಯಿತೆಂದು ಯಮನಿಂದ ಒದೆ ತಿಂದು ಬರುವ ಯಮಪುರುಷ ವಸಂತ ಸೇನೆಯ ಪ್ರಾಣವನ್ನು ಮತ್ತೆ ಗುರು ಪರಿವ್ರಾಜಕರಿಗೆ ವರ್ಗಾಯಿಸಿ ಆತ ಹೆಣ್ಣಿನಂತೆ ನುಲಿಯುವುದು ನಗಿಸುತ್ತದೆ. ಒಟ್ಟಾರೆ ನಾಟಕ ಪ್ಯಾಂಟಸಿಯಾಗಿ ಜಾನಪದ ಕಥೆಯಂತೆ ರಂಜಿಸುವಲ್ಲಿ ವಿದ್ಯಾರ್ಥಿಗಳ ಪಾತ್ರಾಭಿನಯವು ಸಾತ್ ನೀಡಿದೆ.


Leave a Reply

Back To Top