ಪ್ರೊ. ಸಿದ್ದು ಸಾವಳಸಂಗ ಅವರ ಕವಿತೆ-ಸಾಯುವವರೆಗೆ ಬದುಕಿರಬೇಕು…!


ನನ್ನವ್ವನೆಂದರೆ….
ನನಗೆ ಪಂಚಪ್ರಾಣ !
ಇಳಕಲ್ಲು ಸೀರೆ ಉಟ್ಟುಕೊಂಡು
ಹಣೆಗೆ ಕಾಸಗಲ ಕುಂಕುಮ ಬೊಟ್ಟುಯಿಟ್ಟುಕೊಂಡು
ತಲೆಯ ಮೇಲೆ ಸೆರಗ ಹೊತ್ತುಕೊಂಡರೆ
ಥೇಟ್ ದೇವತೆಯೆ… !
ಗಂಡ ಮಕ್ಕಳಿಗಾಗಿ ಹಗಲಿರುಳು ದುಡಿವ
ಏಕೈಕ ಜೀವ ನನ್ನ ತಾಯಿ !
ಒಂದು ದಿನವೂ ನೋವಾಯಿತೆಂದು ನರಳಲಿಲ್ಲ
ಬೇಸರವಾಯಿತೆಂದು ಬಳಲಲಿಲ್ಲ
ದುಡಿಮೆಯೇ ಅವಳಿಗೆ ದೇವರು !
ನಮಗೆ ಮಾತ್ರ ತಾಯಿಯೇ ದೇವರು !!

ಸೋಮವಾರ ರೈತರಿಗೆ ರಜೆಯ ದಿನ
ಅಂದು ಅವರು ಎತ್ತು ಹೂಡುವುದಿಲ್ಲ !
ಕೆಲಸಗಾರರಿಗೂ ಅಂದು ರಜೆ
ಆದರೆ ನನ್ನವ್ವ ಸೋಮವಾರವೂ
ತಪ್ಪದೇ ಎಲ್ಲಿಯಾದರೂ ಕೂಲಿ ಕೆಲಸಕ್ಕೆ ಹೋಗುತ್ತಾಳೆ !
ಮಕ್ಕಳನ್ನು ಚೆನ್ನಾಗಿ ಸಾಕಬೇಕು ಎಂಬ ಹಂಬಲದಿಂದ!
ಇಂಥ ತಾಯಿಯ ಖುಣವನ್ನು ತೀರಿಸಲು
ಎಷ್ಟು ಜನ್ಮ ಎತ್ತಿಬಂದರೂ ಸಾಧ್ಯವಿಲ್ಲ !
ದುಡಿವ ಅವಳ ದೇಹಕ್ಕೆ ಮುಪ್ಪಾಗಿರಬಹುದು
ಆದರೆ ಮನಸ್ಸಿಗಲ್ಲ !!

ನನ್ನಪ್ಪನೋ ಮಹಾ ಸೋಂಬೇರಿ,ಆತ ಸೂರ್ಯಪುತ್ರ ಒಂದು ಕಡ್ಡಿಯನ್ನು ಸಹ ಎತ್ತಿ ಇಡುವುದಿಲ್ಲ !
ಆದರೆ ಸಮಯಕ್ಕೆ ಸರಿಯಾಗಿ ಚಹಾ ಊಟ ಆಗಲೇಬೇಕು !
ಮೈಗಳ್ಳನಾದರೂ ಅಪ್ಪ ಯಾವುದೇ ಚಟದ ದಾಸನಾಗಿರಲಿಲ್ಲ !
ಹೀಗಾಗಿ ಅವನು ಆರಕ್ಕೇರದೆ ಮೂರಕ್ಕಿಳಿಯದೆ
ಅವ್ವನಿಗೂ ಭಾರವಾಗದೆ ಸಾಮಾನ್ಯರಲ್ಲಿ
ಸಾಮಾನ್ಯನಾಗಿ ಬದುಕಿದ !!

ಕಾಲ ಬದಲಾಯಿತು
ಅವ್ವನಿಗೆ ಅಸ್ತಮ ಸೇರಿಕೊಂಡರೆ !
ಅಪ್ಪನಿಗೆ ಪಾರ್ಸಿ ಹೊಡೆಯಿತು  !
ಇಬ್ಬರೂ ಹಾಸಿಗೆ ಹಿಡಿದರು !!
ನಾನಾಗ ದುಡಿಯಲು ಆರಂಭಿಸಿದೆ
ಇಷ್ಟು ದಿನಗಳ ನಂತರ ನನಗೆ ಬೇಸರವೆನಿಸಿದ್ದೆಂದರೆ
ನನಗೊಬ್ಬರು ಸಹೋದರ ಅಥವಾ ಸಹೋದರಿ
ಇರಬೇಕೆನಿಸಿತು ! ಬದುಕಿನ ಕಷ್ಟ ಸುಖಗಳನ್ನು
ಹಂಚಿಕೊಳ್ಳಲು ಯಾರಾದರೂ ಒಬ್ಬರು ಬೇಕಲ್ಲವೆ ?

ಮುಂದೆ ಅಸ್ತಮ ಹೆಚ್ಚಾಗಿ ನನ್ನವ್ವ
ಬಹಳ ದಿನ ಬದುಕಲಿಲ್ಲ !
ಕಣ್ಣ ಮುಂದೆಯೇ ಪ್ರಾಣ ಬಿಟ್ಟಳು
ಬಹುಶಃ ತಾನು ಮಗನಿಗೂ ಬೇಸರವಾಗಬಾರದೆಂದು
ಈ ರೀತಿ ಮಾಡಿದಳೋ ಗೊತ್ತಿಲ್ಲ !
ಅವಳು ಬಹಳ ಸ್ವಾಭಿಮಾನಿ !
ತಾಯಿ ತೀರಿದ ಆರು ತಿಂಗಳೊಳಗಾಗಿ
ತಂದೆಯೂ ಇಹಲೋಕ ತ್ಯಜಿಸಿದ !
ಬಹಳ ವರ್ಷ ಕೂಡಿ ಬಾಳಿದ ದಂಪತಿಗಳಲ್ಲಿ
ಒಬ್ಬರು ಅಗಲಿದರೆ ಇನ್ನೊಬ್ಬರು ಬಹಳ
ದಿನ ಬದುಕುವುದಿಲ್ಲವೆನೋ ?
ಮೊದಲು ಹೋದವರು ಬೇಗನೇ ಹಿಂದಿನವರನ್ನು
ಕರೆಸಿಕೊಂಡು ಬಿಡುತ್ತಾರೆ !!

ಅಪ್ಪ ಅವ್ವನ ನೆನಪಿನೊಂದಿಗೆ
ಮನೆಯಲ್ಲಿ ಈಗ ನಾನೊಬ್ಬನೆ !
ನಾನೀಗ ಅನಾಥ ! ಒಂಟಿ !
ಏನೇ ಮಾಡಿದರೂ ನನ್ನನ್ನು ಯಾರೂ ಕೇಳುವವರಿಲ್ಲ !
ಅಪ್ಪ ಅವ್ವನಿಲ್ಲದ ಮನೆಯೀಗ ಬಣ ಬಣ
ನನ್ನದು ಒಂಟಿ ಮರದ ಹಕ್ಕಿಯ ಅಳಲು !
ಯಾರಿಲ್ಲ ನನ್ನ ಸುಖ ದುಃಖ ಕೇಳಲು
ಒಮ್ಮೊಮ್ಮೆ ನನಗೆ ಈ ಬದುಕು ಸಾಕೆನಿಸಿದೆ
ಆದರೂ ಸಾಯುವವರೆಗೆ ಬದುಕಿರಬೇಕಲ್ಲ… !!

———————————————–

2 thoughts on “ಪ್ರೊ. ಸಿದ್ದು ಸಾವಳಸಂಗ ಅವರ ಕವಿತೆ-ಸಾಯುವವರೆಗೆ ಬದುಕಿರಬೇಕು…!

  1. ತುಂಬಾ ಚೆನ್ನಾಗಿದೆ ಅಂತರಾಳದ ಮನಸಿನ ಕವನ sir

Leave a Reply

Back To Top