ಪ್ರೀತ್ಸೆ.. ಪ್ರೀತ್ಸೆ ಎಂದು ಹುಡುಗರು ಕಿರುಚುತ್ತಿದ್ದರೆ, “ಪ್ರೀತ್ಸೆ ಅಂತ ಪ್ರಾಣ ತಿನ್ನೊ ಪ್ರೇಮಿ ನೀನು ಯಾರೋ? “.. ಎನ್ನುತ್ತ ಹುಡುಗಿಯರು ಗುನುಗುತ್ತಿದ್ದರೆ, ಅರ್ಥವಾಯಿತಲ್ಲವೇ “ವ್ಯಾಲೆಂಟೈನ್ಸ್ ಡೇ” ಬಂದಿದೆ ಅಂತ.  ದಿನದರ್ಶಿಕೆಯ ಫೆಬ್ರುವರಿ ೧೪ ನ್ನು ಪ್ರತಿ ವರ್ಷ ಪ್ರೇಮಿಗಳ ದಿನವೆಂದು ಆಚರಿಸುವ ಸಂಸ್ಕೃತಿ ಇತ್ತೀಚೆಗೆ ಬಹಳ ಪ್ರಚಾರ ಪಡೆಯುತ್ತಿದೆ.  ವಿಶ್ವದೆಲ್ಲೆಡೆ ಆಚರಿಸಲಾಗುವ ಈ ದಿನದಂದು ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಕೆಂಪು ಬಣ್ಣದ ವಸ್ತ್ರವನ್ನು ಧರಿಸುತ್ತಾರೆ. ಮಕ್ಕಳಿಂದ ಹಿಡಿದು ವಯೋವೃದ್ಧರು ಪ್ರೇಮ ಪ್ರಣಯದ ದಿನಕ್ಕೆ ಮೋಹರಾಗಿರುವುದು ಇಂದಿನ ವಾಸ್ತವ.  ಸಂತ ವ್ಯಾಲೈಂಟೆನ್ ಇವರ ಹೆಸರನ್ನೇ ಈ ದಿನಕ್ಕೆ ಇಡಲಾಗಿದ್ದು, ಆತನು ಪ್ರೇಮಿಗಳನ್ನು ಒಂದುಗೂಡಿಸುತ್ತಾನೆಂಬ ನಂಬಿಕೆಯಿದೆ.  ಪ್ರೇಮ ಮತ್ತು ಕಾಮಗಳ ನಡುವಿನ ವ್ಯತ್ಯಾಸವನ್ನು ಅರಿಯದೇ ಸಾಮೂಹಿಕ ಸನ್ನಿ ಹಿಡಿದವರಂತೆ  ಪ್ರೇಮದ ಪ್ರದರ್ಶನವನ್ನು ಸಾರ್ವಜನಿಕವಾಗಿ ಮಾಡುವ ಅಸಹ್ಯ ಆಚರಣೆಯೆಂಬ ಅಪವಾದವು ಕೂಡ ವ್ಯಾಲೆಂಟೈನ್ಸ್ ಡೇ ಗೆ  ಇದೆ.

ಶತಶತಮಾನಗಳ ಹಿಂದೆ ವಿದೇಶೀಯರ ಧಾರ್ಮಿಕ ಆಚರಣೆಯೆಂದು ಪರಿಗಣಿಸಲ್ಪಟ್ಟಿದ್ದ ಸೇಂಟ್ ವ್ಯಾಲೆಂಟೈನ್ ಡೇ ಅಥವಾ ದಿ ವ್ಯಾಲೆಂಟೈನ್ ಫೀಸ್ಟ್ ಕಾಲಕ್ರಮೇಣ ಸಾಂಸ್ಕ್ರತಿಕ ಆಚರಣೆಯೆನಿಸಿತು. ಹತ್ತೊಂಬತ್ತನೆಯ ಶತಮಾನದಲ್ಲಿ ವ್ಯಾವಹಾರಿಕ ದೃಷ್ಟಿಯಿಂದ ಇಡೀ ವಿಶ್ವವನ್ನೇ ಪಸರಿಸಿತು. ‌ಪ್ರೀತಿ ಪ್ರೇಮವೆನ್ನುವುದು ಒಂದು ದಿನದ‌ ಸಂಭ್ರಮವಲ್ಲ,  ಇದು ಏಳೇಳು ಜನುಮಗಳ ಸಂಬಂಧವೆಂಬುದು ನಮ್ಮ ನಂಬಿಕೆಯಾದರೂ, ಪ್ರೀತಿಯೆನ್ನುವುದು ನಿತ್ಯನೂತನ, ಜೀವ ಚೈತನ್ಯವಿದ್ದಂತೆ, ಬರುಡಾದ ಕೊರಡನ್ನು ಕೊನರಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ನಾವೆಲ್ಲರೂ ಇದನ್ನು ಒಪ್ಪಿಕೊಂಡು ಅಪ್ಪಿಕೊಂಡು, ನಮ್ಮದೇ ಆಚರಣೆ ಎನ್ನುವಂತೆ ಹಿಗ್ಗಿ ಕುಣಿದು ಕುಪ್ಪಳಿಸುತ್ತಿರುವುದು ಕಹಿ ಸತ್ಯ.

ವ್ಯಾಲೆಂಟೈನ್ ದಿನದ‌ ಆಚಾರಣೆ, ವಿಚಾರ ಮತ್ತು ವಿಹಾರಗಳತ್ತ ಒಂದು ಕುಡಿ ನೋಟ..

ಶಾಲಾ ಕಾಲೇಜುಗಳು, ಕಛೇರಿಗಳು, ಕಂಪನಿಗಳ ಸುತ್ತಮುತ್ತ ಪ್ರತಿ ಅಂಗಡಿಗಳಲ್ಲಿ  ಮಾಲ್ಗಳಲ್ಲಿ ಮತ್ತು ರಸ್ತೆಗಳಲ್ಲಿ ಕೆಂಪು ಬಲೂನ್ ಹೃದಯಗಳು, ಕೆಂಪು ಗುಲಾಬಿ ಹೂವುಗಳು, ಚಾಕೊಲೇಟ್, ಟೆಡ್ಡಿ ಬೇರ್, ಗ್ರೀಟಿಂಗ್ ಕಾರ್ಡುಗಳು, ಉಡುಗೊರೆಗಳ ಮಾರಾಟಗಳು ಅಬ್ಬರದಿಂದ ನಡೆಯುತ್ತಿವೆ.
ಫೆಬ್ರುವರಿ ೭ ರಿಂದಲೇ ಸಂಭ್ರಮಾಚರಣೆಗೆ  ದಿನಗಳ ಗಣನೆ ಪ್ರಾರಂಭವಾಗುತ್ತದೆ.

ಮೊದಲನೇ ದಿನ  ರೋಸ್ ಡೇ (ಗುಲಾಬಿ ಹೂವಿನ ದಿನ ಫೆಬ್ರುವರಿ ೭),  

ಪ್ರಪೋಸ್ ಡೇ (ಪ್ರೇಮ ನಿವೇದನೆ ದಿನ ಫೆಬ್ರುವರಿ ೮)

ಚಾಕೊಲೇಟ್ ಡೇ (ಮಿಠಾಯಿ ದಿನ ಫೆಬ್ರುವರಿ ೯),

ಟೆಡ್ಡಿ ಡೇ (ಗೊಂಬೆ ಉಡುಗೊರೆ ದಿನ ಫೆಬ್ರುವರಿ ೧೦),

ಪ್ರಾಮಿಸ್ ಡೇ (ಆಣೆ ಪ್ರಮಾಣದ ದಿನ ಫೆಬ್ರುವರಿ ೧೧),

ಹಗ್ ಡೇ (ಆಲಿಂಗನದ ದಿನ ಫೆಬ್ರುವರಿ ೧೨),

ಕಿಸ್ ಡೇ  (ಚುಂಬನದ ದಿನ ಫೆಬ್ರುವರಿ ೧೩) ಮತ್ತು

ವ್ಯಾಲೆಂಟೈನ್ ಡೇ (ಪ್ರೇಮಿಗಳ ದಿನ ಫೆಬ್ರುವರಿ ೧೪) ಪ್ರೇಮಿಗಳ ಪಾಲಿಗೆ ಹಬ್ಬದ ದಿನ.

ಭಾರತದಲ್ಲಿ ಪ್ರೇಮಿಗಳ ದಿನ ತೊಂಬತ್ತರ ದಶಕದಲ್ಲಿ ತೇಜಗತಿಯನ್ನು ಪಡೆಯಿತು. ಆಗ ಬಂದಂತಹ ವಿವಿಧ ಟಿ.ವಿ.ಚಾನೆಲ್ ಗಳು, ಅದರಲ್ಲೂ‌ ಎಮ್.ಟಿ.ವಿ ನಡೆಸುತ್ತಿದ್ದ ಪ್ರೇಮ ಪತ್ರ ಸ್ಪರ್ಧೆಯಲ್ಲದೇ,  ರೊಮ್ಯಾಂಟಿಕ್ ಸಿನೆಮಾಗಳು, ಹಾಡುಗಳು, ಸಂಪರ್ಕ ಮಾಧ್ಯಮಗಳು,  ಆರ್ಥಿಕ ಉದಾರೀಕರಣ, ಎಫ್.ಎಮ್. ರೆಡಿಯೋಗಳು ಪ್ರಮುಖ ಪಾತ್ರವಹಿಸಿದವು.   ವಿಶ್ವವನ್ನೇ ಅಂಗೈಯಲ್ಲಿ ತೋರಿಸುವ ಜಂಗಮವಾಣಿಗಳ ಪ್ರಭಾವ ಅಬ್ಬರವನ್ನು ಮತ್ತಷ್ಟು ಹೆಚ್ಚಿಸಿತು.  ಇದೆಲ್ಲಾ ಜಾಗತೀಕರಣದ ಫಲಿತಾಂಶವೆನ್ನುವುದು ಸಾರ್ವತ್ರಿಕವಾಗಿ ತಿಳಿದಿದೆ.

ಈ ವಿದೇಶಿ ಆಚರಣೆಯ ಹಿಂದಿರುವ ಕೌತುಕ ಕಥೆಯೆಂದರೆ  ರೋಮನ್ ಚಕ್ರವರ್ತಿಯು ಕ್ರಿಶ್ಚಿಯನ್ ಸೈನಿಕರಿಗೆ  ಮದುವೆಯಾಗಲು ನಿಷೇಧ ಹೇರಿದ್ದನಂತೆ‌ ‌ ಸೇಂಟ್ ವ್ಯಾಲೆಂಟೈನ್ ಈ ಸೈನಿಕರಿಗೆ ವಿವಾಹಗಳನ್ನು ಮಾಡಿಸಿ ಕೊಟ್ಟರಂತೆ. ನಂತರ‌ ಆವರಿಗೆ ಮರಣದಂಡನೆ‌ ವಿಧಿಸಲಾಗಿತ್ತು.  ಆವರು  ಜೈಲರ್‌ನ ಮಗಳಿಗೆ “ಯುವರ್ ವ್ಯಾಲೆಂಟೈನ್” ಗೆ ಸಹಿ ಮಾಡಿದ ಪತ್ರವನ್ನು ಮರಣದಂಡನೆಗೆ ಮುಂಚಿತ ವಿದಾಯವಾಗಿ ಬರೆದಿದ್ದರಂತೆ. ಆತನು ಹುತಾತ್ಮನಾದ ಆ ದಿನವನ್ನು ಕ್ರಿಶ್ಚಿಯನ್‌ ಸಮುದಾಯದವರು ವ್ಯಾಲೆಂಟೈನ್ ಡೇ ಎಂದು‌ ಆಚರಿಸಲು ಪ್ರಾರಂಭಿಸಿದರು ಎಂದು ಕೆಲವು ಪುಸ್ತಕಗಳು ಉಲ್ಲೇಖಿಸುತ್ತವೆ.

ವಿಶ್ವದ ಅನೇಕ ದೇಶಗಳಲ್ಲಿ ಪ್ರಣಯ ಮತ್ತು ಪ್ರೀತಿಯ ಮಹತ್ವದ ಸಾಂಸ್ಕೃತಿಕ, ಧಾರ್ಮಿಕ ಮತ್ತು ವಾಣಿಜ್ಯ ಆಚರಣೆ ಈ ವ್ಯಾಲೆಂಟೈನ್ ಡೇ ಆಗಿದೆ. ಶುಭಾಶಯ ಪತ್ರಗಳು ಮತ್ತು ಉಡುಗೊರೆಗಳನ್ನು ಕಳುಹಿಸುವುದು, ಡೇಟಿಂಗ್, ಚರ್ಚ್ ಸೇವೆಗಳು, ನೊವೆನಾಗಳು ಆಚರಣೆಯ ಪ್ರಮುಖ ಭಾಗಗಳು. ಸಿಂಗಾಪುರದವರು, ಚೀನೀಯರು ಮತ್ತು ದಕ್ಷಿಣ ಕೊರಿಯನ್ನರು ವ್ಯಾಲೆಂಟೈನ್ಸ್ ಉಡುಗೊರೆಗಳ ಖರೀದಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಾರೆ.

ವ್ಯಾಲೆಂಟೈನ್ಸ್ ಡೇ  ಆಚರಣೆಯನ್ನು ವಸಾಹತುಶಾಹಿಯ ನಂತರದ ದೃಷ್ಟಿಕೋನದಿಂದ ಭಾರತೀಯ ಎಡಪಂಥೀಯ ಬುದ್ಧಿಜೀವಿಗಳು ಬಲವಾಗಿ ಟೀಕಿಸಿದ್ದಾರೆ . ವ್ಯಾಲೆಂಟೈನ್ಸ್ ಡೇ ಪರಿಣಾಮವಾಗಿ, ಕಾರ್ಮಿಕ ವರ್ಗಗಳು ಮತ್ತು ಗ್ರಾಮೀಣ ಬಡವರು ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಭೌಗೋಳಿಕವಾಗಿ ಪ್ರಾಬಲ್ಯದ ಬಂಡವಾಳಶಾಹಿ ಶಕ್ತಿ ರಚನೆಗಳಿಂದಾಗಿ ಸಂಪರ್ಕವನ್ನು ಕಳೆದುಕೊಳ್ಳುತ್ತಾರೆಂಬುದು ಅವರ ಅಭಿಪ್ರಾಯ.

ಬಲಪಂಥೀಯ ಹಿಂದೂ ರಾಷ್ಟ್ರೀಯತಾವಾದಿಗಳು ಸಹ ಈ ಆಚರಣೆಯನ್ನು ವಿರೋಧಿಸುತ್ತಾರೆ. ಫೆಬ್ರುವರಿ 2012 ರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮುತ್ತು ಕೊಡುವುದು ಅಥವಾ ತಬ್ಬಿಕೊಳ್ಳುವುದನ್ನು ಮಾಡಿದರೆ. ನಮ್ಮ ಕಾರ್ಯಕರ್ತರು ಅವರನ್ನು ಹೊಡೆಯುತ್ತಾರೆ” ಎಂದು ಭಜರಂಗದಳದವರು ಎಚ್ಚರಿಸಿದ್ದರು.  “ನಾವು ಪ್ರೇಮ‌ ಪ್ರೀತಿಯನ್ನು ವಿರೋಧಿಸುವುದಿಲ್ಲ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರೀತಿಯ ಅಸಭ್ಯ ಪ್ರದರ್ಶನವನ್ನು  ಸಹಿಸುವುದಿಲ್ಲ ಎಂದು ಕಡಕ್ ಸಂದೇಶಗಳನ್ನು ನೀಡಿದ್ದರು.

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಫೆಬ್ರವರಿ 14 ಅನ್ನು “ಭಾವನಾತ್ಮಕ ಶ್ರೀಮಂತಿಕೆ”ಗಾಗಿ “ಹಸು ಅಪ್ಪುಗೆಯ ದಿನ” ಎಂದು ಆಚರಿಸಲು ಮನವಿ ಮಾಡಿತು.  “ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು” ಹೆಚ್ಚಿಸಲು ಮುಂದೆ ಬನ್ನಿ ಎಂದು  ಭಾರತೀಯರಿಗೆ ಕರೆ ನೀಡಿತ್ತೆಂದು ದಿ ಹಿಂದೂ ಪತ್ರಿಕೆ ಫೆಬ್ರುವರಿ 2023 ರಲ್ಲಿ ವರದಿ ಮಾಡಿತ್ತು.   ವ್ಯಾಲೆಂಟೈನ್ಸ್ ಡೇ ಅನ್ನು “ಕೌ ಹಗ್ ಡೇ” ಎಂದು ಕರೆಯುವುದು ಹೆಚ್ಚಿನ  ಟೀಕೆಗಳಿಗೆ‌ ಗುರಿಯಾಯಿತು.  ಅಲ್ಲದೇ ಹಸುವಿನ ಒಪ್ಪಿಗೆಯ ಪತ್ರವನ್ನು ತೆಗೆದುಕೊಂಡು ನಂತರ‌ ಹಗ್ ಮಾಡಿ ಎಂದು  ಟಿ.ವಿ.ಮಾಧ್ಯಮಗಳು ಲೇವಡಿ ಮಾಡಿದವು.  ಹಸುವಿಗೆ ಅಗೌರವ ಮತ್ತು  ಗೋಹತ್ಯೆಯ ಆರೋಪದ ಮೂಲಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವ ಯೋಜನೆಯನ್ನು ಬಲಪಂಥೀಯ ಸಂಪ್ರದಾಯವಾದಿಗಳು ಹೊಂದಿದ್ದಾರೆಂದು ವಿಮರ್ಶೆ ಮಾಡಲಾಯಿತು.‌  ಪರಿಣಾಮವಾಗಿ ಈ ಯೋಜನೆ ಮೂಲೆ‌ ಗುಂಪಾಯಿತು.

ತಮ್ಮ ದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಇಂಡೋನೇಷ್ಯಾ , ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಲ್ಲಿ ಪ್ರೇಮಿಗಳ ದಿನದ ಆಚರಣೆಯನ್ನು ನಿಷೇಧಿಸಲಾಗಿದೆ.

ಆಧುನಿಕ ಕಾಲದಲ್ಲೂ‌ ಸಹ  ಕೆಲವು ಸಂಪ್ರದಾಯವಾದಿಗಳು ವಿದೇಶೀ ಸಂಸ್ಕ್ರತಿಯನ್ನು  ಅಸಹ್ಯವೆಂದು ಬಹಿಷ್ಕಾರ ಮಾಡುತ್ತಿರುವುದು ತಪ್ಪೆಂದು ಕೆಲವು ಯುವಕರು ಆನ್ಲೈನ್ ಸುದ್ದಿ ಮಾಧ್ಯಮಗಳೆದುರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿರುವುದು‌ ಶೋಚನೀಯ.

ಪ್ರೇಮಿಗಳ ದಿನದ ಕುರಿತು ಅನೇಕ‌ ಸಮೀಕ್ಷೆಗಳು ನಡೆದಿವೆ.‌
ಆನ್‌ಲೈನ್ ಸಮೀಕ್ಷೆಯಲ್ಲಿ, ಪ್ರತಿಕ್ರಿಯಿಸಿದವರಲ್ಲಿ ೬೮% ರಷ್ಟು ಜನರು ಪ್ರೇಮಿಗಳ ದಿನವನ್ನು ಆಚರಿಸಲು ಬಯಸುವುದಿಲ್ಲ. ಅದರಲ್ಲೂ ಸನಾತನ ಹಿಂದೂಗಳು, ಭಜರಂಗದಳದ, ಶಿವಸೇನೆ ಮತ್ತು‌ ಸಂಘ ಪರಿವಾರದ ಅನುಯಾಯಿಗಳು,  ಮುಸ್ಲಿಂ ಜನಾಂಗದವರು ಮತ್ತು ಭಾರತದ ಕ್ರಿಶ್ಚಿಯನ್‌ ಸಮುದಾಯದವರು  ಪ್ರೇಮಿಗಳ ದಿನದ ಆಚರಣೆಯನ್ನು ಬೆಂಬಲಿಸುವುದಿಲ್ಲ.  ಅನೇಕ ಸಂಘಟನೆಗಳು ಪ್ರೇಮಿಗಳ ದಿನಾಚರಣೆಯ ವಿರುದ್ಧ  ಪ್ರತಿಭಟನೆಗಳನ್ನು ಮಾಡಿದರು. ಇಂತಹ  ಅವಿವೇಕ‌ ಆಚರಣೆಗಳು ನಮ್ಮ‌ ಸಂಪ್ರದಾಯ, ಸಂಸ್ಕಾರ ಮತ್ತು ಸಂಸ್ಕೃತಿಗಳಿಗೆ‌ ಹಾನಿಯುಂಟು ಮಾಡುವುದರೊಂದಿಗೆ ನಮ್ಮಲ್ಲಿರುವ ಅವಿಭಕ್ತ ಕುಟುಂಬಗಳು, ನಿಯೋಜಿತ ವಿವಾಹಗಳ ಆಚರಣೆ, ಮಕ್ಕಳು, ಗೃಹಿಣಿಯರು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ‌ತೊಂದರೆಯಾಗುತ್ತದೆ‌. ಸಾಮಾಜಿಕವಾಗಿ, ಧಾರ್ಮಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರು‌ ಮುಂದೆ ನೋವನ್ನು ಅನುಭವಿಸುತ್ತಾರೆ‌ಂದು‌ ಪ್ರತಿಭಟನಾಕಾರರು ಘೋಷಿಸಿದರೂ, ಇವೆಲ್ಲ ಅಡೆತಡೆಗಳ ನಡುವೆಯೂ  ನಮ್ಮಲ್ಲಿ ವ್ಯಾಲೆಂಟೈನ್ಸ್ ಡೇ ಹೆಚ್ಚು ಜನಪ್ರಿಯವಾಗುತ್ತಿರುವುದು ಖೇಧನೀಯ.

ಪ್ರೇಮವಾಗಲಿ  ಕಾಮವಾಗಲಿ ನಾಲ್ಕು‌ ಗೋಡೆಗಳ ಮಧ್ಯಯಿರಬೇಕೆ ಹೊರತು‌  ಸಾರ್ವಜನಿಕ ಪ್ರದರ್ಶನವಾಗಬಾರದು ಎಂಬ ಅಲಿಖಿತ ನಿಯಮವನ್ನು ನಮ್ಮ‌ ಪೂರ್ವಜರು ಅನುಸರಿಸಿದರು. ಪ್ರೀತಿಯ ಅಧಿಪತಿಯಾದ ಕಾಮದೇವನನ್ನು ಆರಾಧಿಸುವ  ಸಂಪ್ರದಾಯ ಪ್ರಾಚೀನ ಕಾಲದಲ್ಲಿತ್ತಂತೆ.‌  ಮಧ್ಯಯುಗದಲ್ಲಿ ಇದೆಲ್ಲ ನಿಂತು‌ ಹೋಯಿತು. ಒಂದೆಡೆ ಆಧುನಿಕ ವ್ಯಾಲೆಂಟೈನ್ ಡೇ ಪಾರ್ಥೇನಿಯಂ ಕಳೆಯಂತೆ ಹರಡುತ್ತಿದ್ದರೆ, ಇನ್ನೊಂದೆಡೆ ನೈತಿಕ‌ ಪೋಲಿಸ್ ಗಿರಿ ಕೂಡ ಆರಂಭವಾಯಿತು. ಪ್ರೇಮ ಮತ್ತು ಕಾಮದ ನಡುವಿನ ವ್ಯತ್ಯಾಸವನ್ನು ಅರಿಯುವ ವಯಸ್ಸು ಮತ್ತು ಮನಸ್ಸಿನವರು  ಪ್ರೇಮಿಗಳ ದಿನಾಚರಣೆ ಆಚರಿಸುವುದು ಸೂಕ್ತ.  ಆದರೆ
ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ವ್ಯಾಲೆಂಟೈನ್ ಡೇ ಬಗ್ಗೆ ಆಸಕ್ತಿ ಮತ್ತು ಆಚರಣೆಯಲ್ಲಿ ತೊಡಗಿರುವುದು ಆಘಾತಕಾರಿ ಸಂಗತಿಯಾಗಿದೆ.

ವಿದೇಶೀ ಸಂತ ವ್ಯಾಲೆಂಟೈನ ನ ಹುತಾತ್ಮ ದಿನದ ಸಂಭ್ರಮವನ್ನು ಆಚರಿಸುವ ಬದಲು ೧೪ ಫೆಬ್ರುವರಿ ೨೦೧೯ ರಂದು ಪುಲ್ವಾಮ ದಾಳಿಯಲ್ಲಿ ನಮ್ಮ‌ ನಲವತ್ತು ಜನ‌ ಯೋಧರು ಹುತಾತ್ಮರಾದರು ಹಾಗು ೩೫ ಜನ ಯೋಧರು ಗಂಭೀರ ಗಾಯಗೊಂಡಿದ್ದರು. ಅವರ ಸ್ಮರಣಾರ್ಥವಾಗಿ  ಬಡ ಮಕ್ಕಳಿಗೆ, ಅನಾಥಾಶ್ರಮ, ವೃದ್ಧಾಶ್ರಮ, ನಮ್ಮನ್ನು ಸಂರಕ್ಷಿಸುವ ಸೈನಿಕರು ಮತ್ತವರ ಕುಟುಂಬ, ಆರಕ್ಷಕರು, ವೈದ್ಯರು, ಪೌರ ಕಾರ್ಮಿಕರು ಇವರಿಗೆಲ್ಲ ಹೂವು ಮತ್ತು  ಉಡುಗೊರೆಗಳನ್ನು ನೀಡಿ ಅರ್ಥಪೂರ್ಣ ಆಚರಣೆಯನ್ನು  ಯಾಕೆ ಮಾಡಬಾರದು? ನಿಮ್ಮೊಂದಿಗೆ ನಾವಿದ್ದೇವೆ ಎಂಬ ಧೈರ್ಯವನ್ನು‌ ಯಾಕೆ ತುಂಬಬಾರದು?  ಪ್ರೇಮ ಎನ್ನುವುದು ಕೇವಲ ಗಂಡು ಹೆಣ್ಣಿನ ನಡುವಿನ ದೈಹಿಕ ಆಕರ್ಷಣೆಯಾಗದೇ, ನಮ್ಮ ಸಂಸ್ಕೃತಿ ಮತ್ತು ನಮ್ಮ  ಹಿರಿಯರು‌ ಒಪ್ಪಿಕೊಳ್ಳುವಂತ ಮಧುರ ಅನುಭೂತಿಯಾಗಲಿ.  ನಮ್ಮ ಆಚರಣೆ  ನಮ್ಮ‌ ಸಂಸ್ಕೃತಿಯ ಕನ್ನಡಿಯಾಗಲಿ. ಏನಂತೀರ…?


Leave a Reply

Back To Top