ಕನವರಿಸುತಿದೆ ಪ್ರಿಯೆ ನನ್ನೆದೆ
ಹಾಲು ಜೇನಿನಂಥ
ಮಧುರ ಬಂಧನ ಕಳಚಿ
ನೀ ಹಾರಿ ಬಿಟ್ಟೆ ನನ್ನೆದೆ ಗೂಡಿಂದ
ಭೂಮಿ ತೂಕದ ಭಾರವಿರಿಸಿ
ನನ್ನ ಮನ ಕದ್ದೊಯ್ದಿಯಲ್ಲಾ ಪ್ರಿಯೆ…

ನೊರೆಹಾಲಿನಂಥ ನಿನ್ನ ಪ್ರೀತಿ
ಅಂತರಂಗದಿ ತಂಪಾಗಿಸಿ
ನೂರಾರು ಭಾವ ಪುಟಿದೇಳಲು
ನಿನ್ನೆದೆಯ ಜ್ವಾಲೆಯಲಿ ಕಮರಿ
ಅನಾಥವಾಗಿಸಿ ಜಾರಿ ಹೋದೆಯಲ್ಲ ಪ್ರಿಯೆ…

ನಿನ್ನ ಸ್ಪರ್ಶ! ಒಲವಿನೆದೆಗೆ ತಾಕಲು
ಬೆಚ್ಚಗಿನ ನಿನ್ನುಸಿರು ನನ್ನುಸಿರಲಿ ಮಿಳಿತವಾಗಿ
ಅರಳಿದ ಅನುರಾಗ ಮಧುಚುಂಬನ ನೀಡಿ
ಅಮೃತವ ಸವಿದ ಮನಕೆ
ವಿಷತೆತ್ತು ದೂರ ಹೋದೆಯಲ್ಲಾ ಪ್ರಿಯೆ…

ಹೊಳೆವ ಕಂಗಳಾಗಸದಿ ಕುಳಿತೆ
ಅಂತರಂಗದೊಳಗೆ ಹೂಮಂಟಪವಿರಿಸಿ
ಒಲುಮೆ ಭಾವಗಳ ಬಿತ್ತಿ
ಅದಮ್ಯ ಒಲುಮೆ ಮೊಳಕೆಯಾಗಿರಲು
ಹದಗೊಳಿಸಿದ ಹೃದಯವ
ಕಲಕಿ ಕೆಣಕಿ ಕಡೆಗಣಿಸಿದೆಯಲ್ಲ ಪ್ರಿಯೆ…

ಕೆಸರಿನಲ್ಲರಳಿದ ನೈದಿಲೆಯ ಎದೆಗಪ್ಪಿ
ರವಿ ಶಶಿಯ ಅಂತರದರಿವಿಲ್ಲದೆ
ಬಿಕ್ಕುತಿಹುದು ಈ ಮನ
ಬಾನಲ್ಲಿ ನಲಿವ ತಾರೆಗಳಣಕಿಸುತಿಹುದು
ಬಾ ನನ್ನ ನಲ್ಲೆ ಕಾಯುತಿಹುದು ಈ ಹೃದಯ
ಮರಳಿ ಕಟ್ಟುವ ಪ್ರೇಮದೊಲುಮೆಯ ಗೂಡ…


Leave a Reply

Back To Top