ಸಂಬಂಧಗಳ ನವೀಕರಣ
ಸುಧಾ ಹೆಚ್.ಎನ್
ನನ್ನಿಂದ ಆಗಲ್ಲ ಮೇಡಂ, ನನಗೆ ಅವನ ಜೊತೆ ಹೆಂಡತಿತರ ಸಂಸಾರ ಮಾಡಕ್ಕೆ ಸಾಧ್ಯನೇ ಇಲ್ಲ,ನನಗೆ ಡೈವರ್ಸ್ ಬೇಕು” ಅಂದಳು ಹುಡುಗಿ. ಇಪ್ಪತ್ತೊಂದರ ಹರೆಯದ ಲಕ್ಷಣವಾದ ವಿದ್ಯಾವಂತೆ.
ತಾಯಿಯನ್ನು ಕಳೆದುಕೊಂಡು ತಂದೆಯ ಆನಾದಾರಕ್ಕೊಳಗಾಗಿ ಅನಾಥವಾಗಿದ್ದ ಎರಡು ವರ್ಷದ, ಈ ಹುಡುಗಿಯನ್ನು ಮೊಮ್ಮಗಳ ನಾಥೆಯಿಂದ ಮಡಿಲಿಗೆ ಹಾಕಿಕೊಂಡಿದ್ದಳು,ತಾಯಿಯ ತಾಯಿ ಅಂದರೆ ಅಜ್ಜಿ. ಅಜ್ಜಿ…ಮತ್ತವಳ ಹುಟ್ಟು ಕುರುಡ ಮಗನೇ ಇವಳ ಬಂದು-ಬಳಗ ಎಲ್ಲಾ,ಅಜ್ಜಿ ಹೊಲ, ಮನಿ ಚಾಕರಿ ಎಂದು ಬಿಡುವಿಲ್ಲದೆ ದುಡಿಯುತ್ತಿದ್ದರೆ,ಹುಡುಗಿಗಿಂತ ಏಳು ವರ್ಷ ದೊಡ್ಡವನಾದ ಸೋದರ ಮಾವಜತನದಿಂದ ಸೊಸೆಯ ನ್ನು ಸಂಬಾಳಿಸುತ್ತಿದ್ದ. ಅವಳನ್ನು ತೊಟ್ಟಿಲಲ್ಲಿಟ್ಟು ತೂಗುತ್ತಿದ್ದ. ಅವಳ ಪ್ರತಿ ಚಲನೆ ಅವಳರಿವನ್ನು ಆವರಿಸಿ ಒಳಗಣ್ಣು ತೆರೆದಿಟ್ಟು ಜೋಪಾನ ಮಾಡಿದ್ದ. ಈ ಹುಡುಗಿ ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ,ಮಾವ-ಸೊಸೆ ಪರಸ್ಪರ ಅವಲಂಬಿತರಾಗಿ ಬದುಕತೊಡಗಿದ್ದರು. ಶಾಲೆ ಕಲಿಯ ತೊಡಗಿದ್ದು ಆ ಹುಡುಗಿಯಾದರೂ ಮಗ್ಗಿ,ಕತೆ,ಪದ್ಯ ಪಾಠ ವೆಲ್ಲಾ ಮಾವನಿಗೂ ಕಂಠಪಾಠವಾಗಿದ್ದವು. ಇವಳಿಗೆ ತಂದೆ ತಾಯಿಯ ಕೊರತೆ ಕಾಣಲೇ ಬಾರದು, ಅವನಿಗೆ ಕಣ್ಣು ಗಳಿಗೆ ಮುತ್ತಿದ್ದ ಕತ್ತಲ ಅರಿವು ಆಗಲೇ ಬಾರದು, ಎನ್ನುವುದನ್ನು ಪರಸ್ಪರರಿಗೆ ನಂಬಿಸುವ ಹಾಗೆ ಇವರಿಬ್ಬರ ಜೀವನ ನಡೆದಿತ್ತು. ಅದು ಮಾನವ ಸಹಜವಾದ ಪ್ರೀತಿಯೋ..ಅನಿವಾರ್ಯವೋ…ಅವಲಂಬನೆಯೋ ಅವರೆಂದೂ ಈ ಕುರಿತು ಯೋಚಿಸಲೇ ಇಲ್ಲ. ಹುಡುಗಿ ಆಗಲೇ ಕಾಲೇಜು ಮೆಟ್ಟಿಲು ಹತ್ತಿದ್ದಳು.
ಇದ್ದಕ್ಕಿದ್ದಂತೆ ಅಜ್ಜಿ ಜಡ್ಡು ಬಂದು ಹಾಸಿಗೆ ಹಿಡಿದಿತ್ತು. ತನ್ನನ್ನೇ ನೆಚ್ಚಿಕೊಂಡ ಹರೆಯದ ಮೊಮ್ಮಗಳು ಕಣ್ಣು ಕಾಣದ ಮಗ ,ಊರಿನ ಹಳೆ ತಲೆಗಳು ಅಜಮಾಯಿಷಿ ಕೊಟ್ಟ ಸಲಹೆಯಂತೆ ನರಳುತ್ತಲೇ ಕುರುಡು ಮಗನೊಂದಿ ಗೆ ಮೊಮ್ಮಗಳ ಮದುವೆ ಮಾಡಿ ಮುಗಿಸಿತ್ತು ಅಜ್ಜಿ. ಮದುವೆ ನಂತರ ಮೂರರಿಂದ ನಾಲ್ಕು ತಿಂಗಳ ಕಾಲ ಅಜ್ಜಿಯ ಆರೈಕೆಯಲ್ಲಿ ಕಳೆದು ಹೋಗಿತ್ತು. ಅಜ್ಜಿಗೆ ಇದೆಲ್ಲ ರೇಜಿಗವನ್ನು ನೋಡಿ, ಅನುಭವಿಸುವ ಯೋಗ ಇದ್ದದ್ದ ಕ್ಕೋ ಏನೋ ಬದುಕಿ ಉಳಿದಿತ್ತು. ಈ ಮಧ್ಯೆಯೂ ಹುಡುಗಿ ವಿದ್ಯಾಭ್ಯಾಸ ಮುಂದುವರಿಸಿದ್ದಳು. ಮೂರು ತಿಂಗಳಿನಿಂದ ಕೆಲಸಕ್ಕೂ ಹೋಗತೊಡಗಿದ್ದಳು. ವರ್ಷ ದಿಂದ ತೊಡರುಗಾಲು ಹಾಕತೊಡಗಿದ್ದ ಇವರಿಬ್ಬರ ಸಂಬಂಧ ಇತ್ತೀಚೆಗೆ ಮುಗ್ಗರಿಸಿ ಬಿದ್ದಿತ್ತು. ಕುರುಡ ಗಂಡ ನಿಂದ ಡೈವರ್ಸ್ ಕೊಡಿಸಿ ಎಂದು ನನ್ನ ಬಳಿ ಬಂದಿದ್ದಳು ಹುಡುಗಿ.
” ಮೇಡಂ ಮಾವ ನಿನಗೆ ಏನು ಬೇಕೋ ಅದು ಬರ್ಕಂಡು ಬಾ ಸಹಿ ಮಾಡಿ ಕೊಡ್ತೀನಿ ಕೋರ್ಟೆಗೆಲ್ಲಾ ಹೋಗೋದೇ ನು ಬ್ಯಾಡ ಅಂದಿದಾನೆ.” ಅಂದಳು.” ನೋಡಮ್ಮ, ಹಾಗೆಲ್ಲಾ ಗಂಡ-ಹೆಂಡತಿ ನೀವು, ನೀವೇ ಕರಾರು , ಪತ್ರ ಅಂತ ಬರೆದುಕೊಂಡರೆ ಅದು ಕಾನೂನುಬದ್ಧ ವಿಚ್ಛೇದನ ಆಗಲ್ಲ. ಹಿಂದೂಗಳಲ್ಲಿ ವಿಚ್ಛೇದನ ನ್ಯಾಯಾಲಯದ ಮೂಲಕಾನೇ ಆಗಬೇಕು . ಸಾಮಾನ್ಯವಾಗಿ ಮದುವೆ ಯಾದ ಒಂದು ವರ್ಷ ಅದ್ಮೇಲೆ ಮಾತ್ರ ಡೈವೋರ್ಸ್ ಕೇಸ್ನ ಕೋರ್ಟಿಗೆ ಹಾಕಬಹುದು. ನಾವು ಕೇಸು ಹಾಕಬೇಕು ಅಂದ್ರೆ ಕಾರಣಗಳು ಬೇಕು. ನೀವು ಎರಡು ವರ್ಷಕ್ಕಿಂತ ಹೆಚ್ಚು ಸಂಸಾರ ಮಾಡದೆ ಬೇರೆ ಬೇರೆ ಇದ್ದಿರಬೇಕು. ಅವನು ನಿನಗೇನಾದರು ಹಿಂಸೆ ಕೊಟ್ಟಿರಬೇಕು , ಏನಾದರೂ ಕಾಯಿಲೆ ಇದ್ದಿರಬೇಕು. ಅವನು ನಿನ್ನ ಜೊತೆ ಅಲ್ಲದೆ ಬೇರೆ ಇನ್ನೊಂದು ಮದುವೆಯಾಗಿದ್ದರೆ,ಬೇರೆ ಧರ್ಮಕ್ಕೆ ಸೇರಿದ್ದರೆ ಹೀಗೆ ಯಾವುದಾದರು ಕಾರಣಗಳಿದ್ದ ರೆ ಅವನ ವಿರುದ್ಧ ಡೈವೋರ್ಸ್ ಕೇಳಿ ಕೇಸು ಹಾಕಬಹು ದು. ಡೈವೋರ್ಸ್ ಅಂದರೆ ಹುಡುಗಾಟವಲ್ಲ . ತುಂಬಾ ಕಷ್ವ. ಕೋರ್ಟಿಗೆ ತುಂಬಾ ಸಮಯ ಓಡಾಡಬೇಕು. ನಿನಗೆ ನಿನ್ನ ಗಂಡ ಡೈವರ್ಸ್ ಕೊಡೋಕೆ ತಯಾರಿದಾನೆ ಅನ್ನೋದಾದ್ರೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ತಗೋಬಹುದು. ಒಂದು ಕೆಲಸ ಮಾಡು ನಿಮ್ಮಜ್ಜೀನ , ಸಾಧ್ಯವಾದರೆ ಗಂಡನ್ನೂ ಕರ್ಕೊಂಡು ಬಾ. ನಾನು ಮಾತಾಡ್ತೀನಿ “ಅಜ್ಜಿ,ಗಂಡ ಎಲ್ಲರನ್ನೂ ಕೂರಿಸಿ, ಮಾತಾಡಿ ಸಮಾಧಾನ ಹೇಳಿ ರಾಜಿ ಮಾಡಿ ಕಳಿಸುವ ಉದ್ದೇಶದಿಂದ ಹೇಳಿ ಕಳಿಸಿದ್ದಕ್ಕೆ ಅಜ್ಜಿ,ಗಂಡನೊಂದಿಗೆ ಬಂದು ನನ್ನೆದುರು ಕೂತಿದ್ದಳು.
“ಏನಂತೀರಾ ಅಜ್ಜಿ”.
” ಏನ್ ಹೇಳದವ, ಸಣ್ಣಾಕಿದ್ದಾಗ ಅವನ ಜೊತೆ ಪಾಡಾಗೇ ಇದ್ಲು. ಅರಗಳಿಗೇನು ಅವನ್ನ ಬಿಟ್ಟುರ್ತಿಲಿಲ್ಲ. ಅವನ ಕೈ ಹಿಡ್ಕಂಡೇ ಇರಾಕಿ. ಅವನ ಎಲ್ಲಾ ಚಾಕ್ರಿ ತಾನೇ ಮಾಡಕಿ. ಅವನಿಗೊಂದು ಅಸರೆ ಆಗತೈತಿ ಅಂತ ಮದ್ವಿ ಮಾಡ್ದೆ”. ಅಜ್ಜಿ ತನ್ನ ಪರಿಮಿತಿಯಲ್ಲಿ ಪ್ರಾಮಾಣಿಕವಾಗಿಯೇ ನಡೆದುಕೊಂಡಿದ್ದಳು.” ಆ ವಯಸ್ಸಿನಲ್ಲಿ ನನಗೆ ಏನು ಗೊತ್ತಾಕತಿ ಅಜ್ಜಿ. ನೀನು, ಮಾವ ಬಿಟ್ಟರೆ ನನಗೆ ಬ್ಯಾರೆ ಯಾರೂ ದಿಕ್ಕಿದ್ರು?. ಅವನ ಜೊತೇನೆ ಇರ್ತಿದ್ದೆ. ನೀನು ಬ್ಯಾರೆ ಸಾಯಂಗಿದ್ದಿ. ಹಂಗಂತ ನನಗೆ ಸರಿ-ತಪ್ಪು ತಿಳೀದಿರೋ ವಯಸ್ಸಲ್ಲಿ ನೀನು ಕಣ್ಣು ಕಾಣ್ದವನ ಜೊತೆ ಮದುವೆ ಮಾಡಿಬಿಟ್ಟರೆ ನನಗೆ ಅನ್ಯಾಯ ಮಾಡಿದಂಗೆ ಆಗಾಕಿಲ್ವಾ ? ಸಾಯೋಗುಂಟ ಇವನ ಜೊತೆ ನಾ ಹೆಂಗೆ ಬಾಳ್ಲಿ. ನಂಗೂ ಆಸೆ ಅಂತ ಇರಾಕಿಲ್ವಾ”? ವಯಸ್ಸು , ಕಲಿತ ವಿದ್ಯೆಯ ಪರಿಣಾಮ ಬುದ್ಧಿ ಬಲಿತು ಹೊರಗಿನ ಬಣ್ಣದ ಪ್ರಪಂಚದ ಪರಿಚಯವಾಗಿ ಪ್ರಸ್ತುತ ಪರಿಸ್ಥಿತಿಗೆ ಒಗ್ಗಿಕೊಳ್ಳಲಾಗದ, ಸಂಬಂಧ ಹರಿದುಕೊಳ್ಳಲಾಗದ ಗೊಂದಲದ ಮನಸ್ಥಿತಿಗೆ ಬಲಿಯಾಗಿದ್ದಳು ಆ ಹುಡುಗಿ.
“ಕಷ್ಟಪಟ್ಟು ಸಾಕಿ, ಸಲುವಿ, ಮೈಯನೆರೆದ್ದಿದ್ದೂ ನಿನಗ್ಯಾಕೆ ಅನ್ಯಾಯ ಮಾಡ್ಲೇ ತಾಯಿ ನನಗ್ಯಾರಿದಾರೆ? ನೀವಿಬ್ರೂ ಆವಾಗ ಚನ್ನಾಗಿದ್ರಿ,ನನಗೇನೋ ಬ್ಯಾನಿ ಅವಾಗಬಂದಿತ್ತು. ನಿಮ್ಮಿಬ್ಬರನ್ನೇ ಬಿಟ್ಟು ಸತ್ತೋಗಿಬಿಟ್ರೇ? ನೀವಿಬ್ರೂ ಅನಾಥ ಅಗೋಗ್ತೀರ ಅನ್ನೊದಿಗಿಲಿಂದ ಮದುವೆ ಮಾಡ್ಬಿಟ್ಟೆ ! ನಿಮ್ಮವ್ವನ್ನ ಆಣೇಗೂ ಮುಂದೆ ನಿನ್ನ ಜೀವನ ಈ ಮದುವಿಂದ ಹಾಳಾಗತೈತಿ ಅನ್ನೋದು ಅರುವಾಗಲಿಲ್ಲ ನಂಗೆ. ಇರಕ್ಕೆ ಮನೆ ಇತ್ತು ,ನಾಕು ಎಕ್ರಿ ಜಮೀನಿತ್ತು, ಹೆಂಗೋ ಇಬ್ರೂ ಜೀವನ ಮಾಡ್ಕಂಡು ಹೋಕಿರಿ ಅಂತ ಯೋಚ್ನಿ ಮಾಡ್ದೆ.” ಅಜ್ಜಿ ಕಣ್ಣೀರಾಯಿತು.
” ಈಗ ಏನು ಮಾಡೋಣ ಅಜ್ಜಿ” ನಾನು ಕೇಳಿದೆ.
” ಮತ್ತೇನ್ಮಾಡದೈತವಾ, ನನ್ನ ಮಗನಿಗೂ ಇದು ಹೊಂದಲ್ಲಬೇ . ಸುಮ್ಕೆ ಅಕಿ ಹೆಂಗೆ ಹೇಳ್ತಾಳೋ ಹಂಗೆ ಮಾಡಾನ . ದಿನಾ ಇದೇ ರೇಜಿಗ ನೋಡಿ ಸಾಕಾಗೇತಿ ಅಂತ ಹ್ವಾದ ದೀಪಾವಳಿಂದ ವರಾತ ಹಚ್ಚಿದ್ದ. ನಾನೆ ತಡ್ದಿದ್ದೆ. ಇಲ್ಲಿತನ ಬಂದಾಳೆ ಅಂದ್ರೆ ತೀರ್ತಲ್ಲ , ಅಕಿ ಹೆಂಗೆ ಹೇಳ್ತಾಳೆ ಹಂಗೆ ಮಾಡ್ರೀ. ನನ್ನ ಮಗನ ಹಣೆ ಬರದಾಗ ಇದ್ದಾಂಗ ಆಕತಿ.” ಅಜ್ಜಿ ಗಟ್ಟಿಯಾಗಿಯೇ ಹೇಳಿದಳು.
“ನೀನೇನಂತಿಯಪ್ಪ “. ನನ್ನ ಗೊಂದಲದ ಪ್ರಶ್ನೆ.
” ನಮ್ಮಿಂದ ತಪ್ಪು ಆಗೇತಿ ಮೇಡಂ. ತಂದೆ,ತಾಯಿ ಇಲ್ದಿರೋ , ಇನ್ನು ಸರಿಯಾಗಿ ತಿಳುವಳಿಕಿ ಬಾರದ ಹುಡುಗಿ ಮದುವೀನ ನನ್ನಂಥ ಬದುಕು ಕತ್ತಲಾದವನ ಜೋಡಿ ನಮ್ಮವ್ವ ಮಾಡ್ತೀನಿ ಅಂದಾಗ ನಾನಾದ್ರೂ ಯೋಚನೆ ಮಾಡಿ ಒಲ್ಲೆ ಅನ್ನಬೇಕಾಗಿತ್ತು. ನಮ್ಮವ್ವ ಲೋಕ ತಿಳೀದವಳು. ಅವಳ ಮನಸ್ಸಿನಲ್ಲಿ ವಿಷ ಇರ್ಲಿಲ್ಲ. ನಾನೇ ದುರಾಸೆಗೆ ಬಿದ್ದೆ. ನಮ್ಮನ್ನೇ ನಂಬಿದ್ದವಳಿಗೆ ಮೋಸ ಮಾಡ್ದಂಗಾಗೈತಿ. ಇವತ್ತಿನತನಕ ಆಕಿ ನನ್ನ ಹಡದವ್ವನಷ್ಟೇ ಸಮ ಕಾಳಜಿಯಿಂದ ನೊಡ್ಕಂಡವಳೆ. ನನ್ನ ಚಾಕರಿ ಮಾಡ್ಯಾಳೆ,ಗೆಳತಿತರ ಒಂದಿಷ್ಟು ಜ್ಞಾನ ,ಬುದ್ದಿ ಕಲಿಸಿದಾಳೆ. ತಬಲ , ಸಂಗೀತದ ಹೊಸ ಜಗತ್ತು ನನಗೆ ತೋರಿಸಿದ್ದು ಆಕೀನೇ ತೀರಿಸಲಾರದಷ್ಟು ,ಆಕಿ ಋಣ ನನ್ನಮೇಲೈತೆ. ಮುಂದೆ ಆಕಿ ಸುಖವಾಗಿ ಬಾಳಿ, ಬದುಕಬೇಕು. ಅದಕ್ಕೆ ನಾನು ಏನು ಮಾಡಬೇಕು ಹೇಳಿರಿ ? .” ಹುಡುಗನ ಸಮತೂಕದ ಮಾತು,ಸಮರ್ಪಣಾ ಭಾವ,ಅಂತರಂಗದ ಶುದ್ಧತೆ , ಸಮಚಿತ್ತದ ನಿರ್ಧಾರ, ತಪ್ಪೊಪ್ಪಿಗೆಯೊಂದಿಗೆ ಋಣಸಂದಾಯದ ಆಶಯ. ನಾನು ನಿರೀಕ್ಷಿಸದ ಪರಿಪೂರ್ಣ ವ್ಯಕ್ತಿತ್ವದ ಅನಾವರಣ ನನ್ನ ಬಾಯಿ ಕಟ್ಟಿಸಿತು . ಪರಸ್ಪರರ ಒಳಿತಿಗೆ ತುಡಿಯುವ ಆ ಮೂರೂ ಜೀವಗಳಿಗೆ ಮನದೊಳಗೆ ಶರಣೆಂದೆ.
ಎರಡು ಎಕರೆ ಜಮೀನನ್ನು ಶಾಶ್ವತ ಜೀವನಾಂಶವನ್ನಾಗಿ ಆಕೆಯ ಹೆಸರಿಗೆ ಬರೆದುಕೊಟ್ಟು ಹರಸಿದರು ತಾಯಿ. ಮಗ. ಈ ವೈವಾಹಿಕ ಬಂಧನದಿಂದ ಬಿಡುಗಡೆಯಾದ. ಅಜ್ಜಿ , ಮಾವ, ಮೊಮ್ಮಗಳ ಬಂಧ ಜವಬ್ದಾರಿಯನ್ನು ಗಟ್ಟಿಗೊಳಿಸಬೇಕೆಂದು ಮೂವರಿಗೂ ತಾಕೀತು ಮಾಡಿ, ವಿಚ್ಛೇದನದ ಅರ್ಜಿ ಗುಜರಾಯಿಸುವ ತಯಾರಿಯಲ್ಲಿ ತೊಡಗಿದೆ.
……….. ………..
ಹುಡುಗಿ ತನ್ನ ಸ್ವಾರ್ಥ ಸುಖ ನೋಡಿಬಿಟ್ಟಳು ಅನಿಸುತ್ತದೆ
ಕಾಲ, ಸಂದರ್ಭದಕ್ಕೆ ತಕ್ಕಂತೆ ಪ್ರಾಮುಖ್ಯತೆ ಗಳೂ ಬದಲಾಗುತ್ತವೆ. ಧನ್ಯವಾದಗಳು ಪ್ರತಿಕ್ರಿಯೆಗೆ.