ಯೋಗರಾಜ್ ಭಟ್ಟರ ಗೀತೆಗಳ ಗಮ್ಮತ್ತು
ರಾಘವೇಂದ್ರ ಈ ಹೊರಬೈಲು
“ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಷದಿಂದ ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ”
ಹತ್ತು ವರ್ಷಗಳ ಹಿಂದೆ, ಹಿರಿಯರು ಕಿರಿಯರೆನ್ನದೆ ಕರುನಾಡಿನ, ಅಷ್ಟೇ ಏಕೆ ಅದರಾಚೆಯ ಎಲ್ಲರೆದೆಯೊಳಗೂ ತಣ್ಣನೆ ಹನಿಹನಿಯಾಗಿ ಸುರಿದು, ಆರ್ದ್ರಗೊಳಿಸಿ, ಮನಸಿನೊಳಗೆ ಚಿರಂತನವಾಗಿ ನಿಂತ “ಮುಂಗಾರು ಮಳೆ” ಎಂಬ ಚಿತ್ರದ ಅಮರ ಗೀತೆಯ ಸಾಲುಗಳಿವು. ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಎಂದು ಪ್ರಾರಂಭವಾಗುವ ಈ ಹಾಡಿನ ಮೇಲಿನ ಸಾಲುಗಳನ್ನು ಈ ಹತ್ತು ವರ್ಷಗಳಲ್ಲಿ ಅದೆಷ್ಟು ಸಾವಿರ ಬಾರಿ ಕೇಳಿದ್ದೇನೋ, ಅದೆಷ್ಟು ಸಾವಿರ ಬಾರಿ ಗುನುಗಿದ್ದೇನೋ ನನಗೇ ಗೊತ್ತಿಲ್ಲ. ಮುಂಗಾರು ಮಳೆಗಿಂತ ಹಿಂದೆ ಹಾಗೂ ಅದು ಬಂದ ನಂತರ ಕೂಡಾ ಅಮೋಘ ಎನ್ನಬಹುದಾದ ಅದೆಷ್ಟೋ ಹಾಡುಗಳನ್ನು ಕೇಳಿದ್ದರೂ, ಈ ಹಾಡಿನ ಪ್ರತೀ ಸಾಲೂ ಮಾಡಿದ ಮೋಡಿ ಪದಗಳಲ್ಲಿ ವರ್ಣಿಸಲಸಾಧ್ಯ. ಇಂತಹ ಅನನ್ಯ ಗೀತೆಯನ್ನು ನೀಡಿದ ಮಹಾನ್ ಬರಹಗಾರ ಯೋಗರಾಜ್ ಭಟ್ಟರ ಬಗ್ಗೆ ಅದಕ್ಕೂ ಮೊದಲು ಕೆಲವೊಮ್ಮೆ ಮಾತ್ರ ಕೇಳಿದ್ದೆ. ಆದರೆ ಈ ಹಾಡಿನ ನಂತರ ನಾನಷ್ಟೇ ಅಲ್ಲ ಕರ್ನಾಟಕದ ಎಲ್ಲ ಸಂಗೀತ ಪ್ರಿಯರು, ಪ್ರಿಯರಲ್ಲದವರೂ ಪಕ್ಕಾ ಅವರ ಅಭಿಮಾನಿಗಳಾದದ್ದು ಸುಳ್ಳಾಗುವುದಕ್ಕೆ ಸಾಧ್ಯವೇ ಇಲ್ಲ.
ಇಂತಹ ಅನೇಕ ಮಾಧುರ್ಯದ ಗೀತೆಗಳಾಚೆ ತಮ್ಮದೇ ವಿಶೇಷ ಶೈಲಿಯ, ಮಾತನ್ನೇ ಹಾಡಾಗಿಸುವ ಅವರ ರೀತಿ ನಿಜವಾಗಿಯೂ ನಿಬ್ಬೆರಗಾಗಿಸುತ್ತದೆ. ಉಡಾಳತನದಲ್ಲಿ ಪ್ರಾರಂಭವಾಗುವ ಹಾಡಿಗೆ ಗಾಂಭೀರ್ಯತೆಯ, ತಾತ್ವಿಕತೆಯ ಅಂತ್ಯ ಹೇಳುವ ಮಹಾನ್ ಮೇಧಾವಿ ಅವರು. ಮೇಲ್ನೋಟಕ್ಕೆ ಹಾಡಿನಲ್ಲಿ ಉಡಾಫೆತನವಿದ್ದರೂ ತಕ್ಷಣವೇ ತನ್ನತ್ತ ಕಿವಿಗೊಡಿಸುವ ಸೆಳೆತವಿರುವುದು ಅವರ ಈ ಹಾಡುಗಳ ಶಕ್ತಿ. “ಅಲ್ಲಾಡ್ಸು ಅಲ್ಲಾಡ್ಸು” ಎಂದು ಪ್ರಾರಂಭಿಸುತ್ತಲೇ ಜೀವನವನ್ನು ಟಾನಿಕ್ಕು ಬಾಟಲನ್ನಾಗಿಸಿ, ಅಂತ್ಯದಲ್ಲಿ “ನಿನ್ನ ಜೀವನಾನ ನೀನೇ ಅಲ್ಲಡಿಸಬೇಕೋ” ಎಂಬಲ್ಲಿಗೆ ತಂದು ನಿಲ್ಲಿಸೋ ಶಕ್ತಿ ಕೇವಲ ಭಟ್ಟರಿಗೆ ಮಾತ್ರ ಸಾಧ್ಯವೇನೋ. “ಗಿಜಿ ಗಿಜಿ ಕಯ ಕಯ ಪಂ ಪಂ ಪಂ” ಎಂದು ವಕ್ರ ವಕ್ರವಾಗಿ ಪ್ರಾರಂಭಿಸುವ ಭಟ್ಟರು, “ಕುಬೇರ ಮೂಲೆ ಮಾತ್ರ ಕಟ್ಸಿ ಟಾಯ್ಲೆಟ್ನಲ್ಲಿ ಹೋಗಿ ಮಲ್ಕೊ” ಎಂದು ನಮ್ಮ ಸಮಾಜದ ಒಂದು ಕುರುಡು ನಂಬಿಕೆ ಮತ್ತು ವ್ಯವಸ್ಥೆಯ ಮೇಲೆ ತಣ್ಣನೆ ಚಾಟಿ ಬೀಸ್ತಾರೆ. “ಯಕ್ಕ ರಾಜ ರಾಣಿ ನಿನ್ನ ಕೈಯೊಳಗೆ. … ಕಾಕಾ ಕಾಕಾ ಕಾಕಾ ಕಾಕಾ ಅಂದರ್ ಬಾಹರ್” ಎನ್ನುತ್ತಲೇ ” ದೇವ್ರವ್ನೇ ಮನೆ ಮಾರಿಬಿಡಿ” ಎಂದು ಕುಟುಕಿ ಅಂದರ್ ಬಾಹರ್ನಿಂದ ಮನೆ ಮಾನ ಕಳ್ಕೊಂಡವರಿಗೆ ಮರ್ಯಾದೆಯಿಂದ ಬುದ್ಧಿ ಹೇಳ್ತಾರೆ. “ಕತ್ಲಲ್ಲಿ ಕರಡೀಗೆ ಜಾಮೂನು ತನಿಸೋಕೆ ಯಾವತ್ತೂ ಹೋಗ್ಬಾರ್ದು ರೀ” ಎಂದು ಕತ್ತಲು ಕರಡಿ ಹೀಗೆ ಏನೇನೋ ಹೇಳುತ್ತಲೇ “ಮಾಡರ್ನು ಪ್ರೇಮಕ್ಕೆ ಮೈಲೇಜು ಕಮ್ಮಿ” ಎಂದು ಇಂದಿನ ‘ಪಾಕೆಟ್ ಖಾಲಿಯಾಗೋವರೆಗಿನ, ತೆವಲು ತೀರಿಸಿಕೊಳ್ಳುವಂತ ಪ್ರೀತಿಗೆ’ ಪಾಠ ಹೇಳ್ತಾರೆ. “ಹತ್ರುಪಾಯ್ಗೊಂದ್ ಹತ್ರುಪಾಯ್ಗೊಂದ್” ಎನ್ನುತ್ತಲೇ ಇಂದಿನ ಸಂಬಂಧಗಳೇ ಮಾರಾಟಕ್ಕಿಟ್ಟಿರುವ ಸರಕಾಗಿರುವುದರ ಬಗ್ಗೆ ನಾಜೂಕಾಗಿಯೇ ಚುರುಕು ಮುಟ್ಟಿಸುತ್ತಾರೆ. ಇವು ಕೆಲವೇ ಉದಾಹರಣೆಗಳಷ್ಟೇ. ಪ್ರಾರಂಭದಲ್ಲಿ ವಕ್ರ ವಕ್ರವೆನ್ನುವಂತೆ ಭಾಸವಾಗುವ ಹಾಡುಗಳಿಗೆ ಗಂಭೀರ ಸಂದೇಶ ತುಂಬಿ ತಾತ್ವಿಕ ನೆಲೆಗಟ್ಟಿನಲ್ಲಿ ನಿಲ್ಲಿಸಿ, ಎಲ್ಲರೂ ಒಮ್ಮೆ ಯೋಚಿಸುವಂತೆ, ಮತ್ತೆ ಮತ್ತೆ ಕೇಳುವಂತೆ ಮಾಡುವ, ಹರಿತವಾದ ಭಾಷೆಯನ್ನು ತನ್ನದೇ ಧಾಟಿಯಲ್ಲಿ ದಾಟಿಸುವ ತಾಕತ್ತು, ಸಮಾಜದ ಗಾಯವನ್ನು ಬೇರೆಯದೇ ರೀತಿಯಲ್ಲಿ ತೋರಿಸುತ್ತಾ, ಅದಕ್ಕೆ ಮುಲಾಮನ್ನೂ ತಮ್ಮ ಸಾಹಿತ್ಯದ ಮೂಲಕವೇ ನೀಡುವ ಕಲೆ ಭಟ್ಟರಿಗಿರುವುದು ಅವರ ದೊಡ್ಡ ಶಕ್ತಿ. “ಅದೇನು ಸಾಹಿತ್ಯನಪ್ಪ, ‘ಕಾಲಿ ಕ್ವಾಟ್ರು, ಅಲ್ಲಾಡ್ಸು, ಕಾ ಕಾ ಕಾ’ ಅಂತ ಅಸಭ್ಯ” ಅಂತ ಭಟ್ಟರ ಸಾಹಿತ್ಯವನ್ನು ಛೇಡಿಸುವವರೂ ಇರಬಹುದು. ಛೇಡಿಸುವವರ ಬಾಯ್ಮುಚ್ಚಿಸುವ ಸಾಹಿತ್ಯ ಭಟ್ಟರ ಬಾಂಡಲಿಯಿಂದ ಗರಿಗರಿಯಾಗಿ ಹೊರಬರುತ್ತಿವೆ. ಭಟ್ಟರನ್ನು ಮೀರಿಸುವ ಇನ್ನೂ ಅತ್ಯದ್ಭುತ ಸಾಹಿತಿಗಳಿರಬಹುದು. ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಅಜರಾಮರವಾಗುವಂತ ತುಂಬಾ ದೊಡ್ಡ ಹೆಸರುಗಳಿವೆ. ಆದರೆ ಭಟ್ಟರು ಅವರಿಗಿಂತ ಕಡಿಮೆಯೇನೂ ಇಲ್ಲ ಎಂಬುದೂ ಇಲ್ಲಿಯ ಕಳಕಳಿ.
ಅವರ ಮುಗುಳುನಗೆ ಹಾಡಿನ ಕುರಿತು ಒಮ್ಮೆ ಸ್ನೇಹಿತ, ಸಾಹಿತಿ ಸದಾಶಿವ ಸೊರಟೂರು ಬರೆದ ಮುದ್ದಾದ ಲೇಖನಕ್ಕೆ ಅಷ್ಟೇ ಮುದ್ದಾಗಿ, ಪ್ರಾಮಾಣಿಕವಾಗಿ “ನಾನಿನ್ನು ಕೂತ್ಕೊಂಡು ನೆಟ್ಟಗೆ ಬರೀತೀನಿ” ಎಂದುತ್ತರಿಸಿದ ಭಟ್ಟರ ರೀತಿ ಇಂದಿನ ಅದೆಷ್ಟೋ ‘ಸ್ವಯಂ ಹೊಗಳು ಕವಿಗಳಿಗೆ’ ಬೆತ್ತವಿಲ್ಲದ ಪಾಠ. ನಾನೊಬ್ಬ ದೊಡ್ಡ ಬರಹಗಾರನೆಂಬ ಹಮ್ಮಿಲ್ಲದ ಭಟ್ಟರ ಸ್ವಭಾವವೋ ಅಥವಾ ಸದಾಶಿವರವರ ಬರಹದ ಮೋಡಿಯೋ ಅಥವಾ ಎರಡೂನೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ. ಅವರೇ ಹೇಳುವಂತೆ ನೆಟ್ಟಗೆ ಕೂತ್ಕೊಂಡು ಬರೆಯದೆಯೇ ಅದ್ಭುತ ಸಾಹಿತ್ಯ ನೀಡುತ್ತಿರುವ ಭಟ್ಟರು, ಸರಿಯಾಗಿ ಬರೆಯಲು ಪ್ರಾರಂಭಿಸಿದರಾದರೆ ಅದೆಂತಹ ಅತ್ಯದ್ಭುತ ಬರಹ ಹೊರಬರಬಹುದು, ಅದೆಂತಹ ದೊಡ್ಡ ಸಾಹಿತಿಯ ಉಗಮವಾಗಬಹುದು ಅಲ್ವಾ? ಅಂತಹ ಅತ್ಯದ್ಭುತ ಬರಹ ಭಟ್ಟರಿಂದ ಸಾವಿರಾರು ಬರಲಿ, ಅದರಿಂದ ನನ್ನಂತಹ ಕೋಟ್ಯಂತರ ಸಾಹಿತ್ಯಾಭಿಮಾನಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಲಿ ಎಂಬ ಚಿಕ್ಕ ಬಯಕೆ.
************
Sir very nice
Thanq sir
useful reminder of Bhat’s songs
Thanq sir
Nice sir
Thanq madam
kavi bhattara sundhara geethegala bagege kurithu baredhiruva ee nimma lekhana very fine.
ಧನ್ಯವಾದಗಳು ಮೇಡಂ
Very nice Raghu sir
Thanq sir