“ಸಂವಿಧಾನ ಪೀಠಿಕೆ- “ಭಾರತ ನಿರ್ಮಾಣಕ್ಕೆ ಕಾಣಿಕೆ”ಅಮರೇಶ.ಮ.ಗೊರಚಿಕನವರ

ವಿಶೇಷಲೇಖನ

ಅಮರೇಶ.ಮ.ಗೊರಚಿಕನವರ

“ಸಂವಿಧಾನ ಪೀಠಿಕೆ-

“ಭಾರತ ನಿರ್ಮಾಣಕ್ಕೆ ಕಾಣಿಕೆ”

ಭರತ ಖಂಡ , ಭರತ ಭೂಮಿ , ಜಂಬೂದ್ವೀಪ , ಹಿಂದೂಸ್ಥಾನ , ಇಂಡಿಯಾ ಹಾಗೂ ಭಾರತ ಎಂಬ ಮುಂತಾದ ಹೆಸರುಗಳಿಂದ ವಿವಿದ ಕಾಲಘಟ್ಟಗಳಲ್ಲಿ ತನ್ನದೇಯಾದ ಭೌಗೋಳಿಕ ,ಸಾಂಸ್ಕೃತಿಕ , ಪಾರಂಪರಿಕ ಮತ್ತು ಆಡಳಿತಾತ್ಮಕ ಐತಿಹ್ಯವನ್ನು ಹೊಂದಿದ ಭಾರತ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಹಲವಾರು ರಾಜಮನೆತನಗಳು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಪೋರ್ಚುಗೀಸರು, ಡಚ್ಚರು, ಆಂಗ್ಲರು ಹಾಗೂ ಪ್ರೆಂಚರಿಗೂ ಕೂಡಾ ನೆಲೆ ನೀಡಿ ಅವರ ಅಮಾನವೀಯ ದಬ್ಬಾಳಿಕೆಗೆ ಒಳಪಟ್ಟು ಸ್ವಾತಂತ್ರದೇವಿಯ ಅರ್ಚನೆಗೆ ರಕ್ತತಿಲಕವನ್ನು ಅರ್ಪಿಸಿದ ವೀರಸೇನಾನಿಗಳ ಹಾಗೂ ಅಸಂಖ್ಯಾತ ಯೋಧರ ಅವಿರತ ಹೋರಾಟದ ಫಲವಾಗಿ ಕೊನೆಗೂ ಬ್ರೀಟಿಷರ ಕಪಿಮುಷ್ಟಿಯಿಂದ ೧೯೪೭ ಆಗಷ್ಟ ೧೫ ರಂದು ಭಾರತಮಾತೆಯು ಬಂಧನಮುಕ್ತವಾಗಿ ಸ್ವತಂತ್ರಗೊಂಡಳು .
              ನಮ್ಮ ದೇಶ ಸ್ವತಂತ್ರಗೊಂಡು ಎರಡು ವರ್ಷಗಳ ತರುವಾಯ ತನ್ನದೆಯಾದ ಸಂವಿಧಾನವನ್ನು ಹೊಂದಿತು. ಇದಕ್ಕಾಗಿ ಸ್ವತಂತ್ರ ಪೂರ್ವ ಹಾಗೂ ಸ್ವತಂತ್ರ್ಯಾನಂತರದ ದಿನಗಳಲ್ಲಿ ಹಗಲಿರುಳು ಶ್ರಮಿಸಿದ ಎಲ್ಲಾ ಮಹನೀಯರನ್ನು ಎಂದೆಂದಿಗೂ ಭಾರತೀಯರು ಸ್ಮರಿಸುವದು ಔಚಿತ್ಯಪೂರ್ಣವಾದ ಸಂಗತಿ. ಅಂತಹ ಮಹನೀಯರಲ್ಲಿ  ಅಗ್ರಗಣ್ಯ ಸ್ಥಾನ ಪಡೆಯುವವರೇ ನಮ್ಮ ಭಾರತದ ಸಂವಿಧಾನ  ಶಿಲ್ಪಿ ‘ಡಾ.ಬಾಬಾಸಾಹೇಬ ಅಂಬೇಡ್ಕರ್’ರವರು.

        ‘ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’ ಎಂಬ ಬಾಬಾಸಾಹೇಬರ ಉಕ್ತಿಯಂತೆ ಅವರು ಈ ಪುಣ್ಯಭೂಮಿಗೆ, ಭಾರತೀಯ ಜನರಿಗೆ ಸಂವಿಧಾನ ಎಂಬ ಮಹಾ ಗ್ರಂಥವನ್ನು ರಚಿಸಿ ಭಾರತೀಯರ ಏಳಿಗೆಗಾಗಿ ಅರ್ಪಿಸಿ ಭಾರತ ದೇಶದ ಇತಿಹಾಸದಲ್ಲಿ ಸೂರ್ಯಚಂದ್ರರಿರುವವರೆಗೂ ಮಹಾ-ಇತಿಹಾಸ ಪುರುಷರಾಗಿ ದೇಶದ ಭವಿತವ್ಯದ ದಿನಗಳ ಸುಭಿಕ್ಷ ಆಡಳಿತ ಹಾಗೂ ಅಭಿವೃದ್ದಿಯ ಕ್ರಾಂತಿ ಜ್ಯೋತಿ ಹೊತ್ತಿಸುವುದರ ಮುಖಾಂತರವಾಗಿ ರಾಷ್ಟ್ರದ ಹೊಸ ಪರ್ವಕೆ ನಾಂದಿ ಹಾಡಲು ಕಾರಣೀಭೂತರಾದರು. ಈ ನಿಟ್ಟಿನಲ್ಲಿ ವಿಶ್ವದಲ್ಲೇ ಬೃಹತ್ ಲಿಖಿತ ಸಂವಿಧಾನವೆಂಬ ಹೆಗ್ಗಳಿಕೆಗೆ ಪಾತ್ರವಾದ ನಮ್ಮ ದೇಶದ ಸಂವಿಧಾನವನ್ನು ಪ್ರತಿಯೋರ್ವ ಭಾರತೀಯನು ಅರ್ಥೈಸಿಕೊಂಡು , ಸಂವಿಧಾನಕ್ಕೆ ಬದ್ದವಾಗಿ , ಸಂವಿಧಾನದ ಅಡಿಯಲ್ಲಿ ಬದುಕಿ , ದೇಶದ ಅಭಿವೃದ್ದಿಗೆ ಸದಾ ತುಡಿಯುವ ಮನಸ್ಸನ್ನು ಹಾಗೂ ದೇಶವನ್ನು ಉನ್ನತಕ್ಕೇರಿಸುವ ಸಂಕಲ್ಪವನ್ನು ಹೊಂದಬೇಕಾಗಿರುವುದು ಕೂಡಾ ಮಹತ್ವಪೂರ್ಣ ಸಂಗತಿಯಾಗಿದೆ.
          ಈ ಹಿನ್ನೆಲೆಯಲ್ಲಿ ೪೪೮ ಪುಟಗಳ ೦೬ ಮೂಲಭೂತಹಕ್ಕುಗಳು, ೧೧ ಮೂಲಭೂತ ಕರ್ತವ್ಯಗಳು, ೨೫ ಭಾಗಗಳು, ೪೪೮ ವಿಧಗಳು, ೧೨ ಅನುಸೂಚಿಗಳು ಹಾಗೂ ಒಟ್ಟಾರೆ ೧೧,೧೭,೩೬೯ ಶಬ್ದಗಳುಳ್ಳ ಸಂವಿಧಾನದ ಪೂರ್ವಪೀಠಿಕೆಯಲ್ಲಿ ಉಲ್ಲೇಖಿಸಿರುವುದು ಸಂವಿಧಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ಅತಿಶಯೋಕ್ತಿ ಎನಿಸಲಿಕ್ಕಿಲ್ಲ.


         ಸಂವಿಧಾನದ ಪೀಠಿಕೆಯ ಆರಂಭದ ಸಾಲುಗಳೇ “ಭಾರತದ ಪ್ರಜೆಗಳಾದ ನಾವು” ಸಂವಿಧಾನದ ಮೂಲ ಪೀಠಿಕೆಯ ಪ್ರತಿಯಲ್ಲಿ ಸಾರ್ವಭೌಮ, ಪ್ರಜಾಪ್ರಭುತ್ವ, ಗಣರಾಜ್ಯ ಎಂದಿದ್ದು, ತದನಂತರದ ದಿನಗಳಲ್ಲಿ ಸಮಾಜವಾದಿ ಮತ್ತು ಜಾತ್ಯಾತೀತ ಎಂಬ ಪದಗಳನ್ನು ಸೇರಿಸಿದ್ದು ಕಾಣುತ್ತೇವೆ. ಪೀಠಿಕೆಯಲಿನ ವಾಕ್ಯಗಳು ಭಾರತದ ಸಂವಿಧಾನವು ರಚಿತವಾದ ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಸೂಚಿಗಳನ್ನು ಪ್ರತಿಬಿಂಬಿಸುವ ಅಂಶವು ಪೀಠಿಕೆಯ ಮಹತ್ವವನ್ನು ತಿಳಿಸುವಲ್ಲಿ ಉಲ್ಲೇಖಾರ್ಹವಾಗಿದೆ.
     ಪೀಠಿಕೆಯಲ್ಲಿನ ಆರಂಭದ ಪದಗಳು – ‘ಪ್ರಜೆಗಳಾದ ನಾವು’ ಎಂಬುದು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವ ಆಡಳಿತವನ್ನು ಪ್ರಜಾಸತ್ತಾತ್ಮಕ ವಾತಾವರಣ ಹೊಂದಿದ ದೇಶವೆಂಬುವದನ್ನು ಸಾರಿ ಹೇಳುತ್ತವೆ.  

‘ಸಾರ್ವಭೌಮ’ ಎಂಬ ಪದವು ಸ್ವತಂತ್ರವನ್ನು,  ‘ಸಮಾಜವಾದಿ’ ಎಂಬ ಪದವು ಸಮಾನತೆಯನ್ನು ‘ಜ್ಯಾತ್ಯಾತೀತೆ’ ಎಂಬ ಪದವು ಧಾರ್ಮಿಕ ನಂಬುಗೆ-ಸಹಿಷ್ಣುತೆಯನ್ನು ‘ಪ್ರಜಾಸತ್ತಾತ್ಮಕ’ ಎಂಬ ಪದವು ಸಾರ್ವತ್ರಿಕ ಮತದ ಅಧಿಕಾರವನ್ನು ಹಾಗೂ ‘ಗಣತಂತ್ರ’ ಎಂಬ ಪದವು ರಾಜಪ್ರಭುತ್ವಕ್ಕೆ ವಿರೋಧವಾದ ಪ್ರಜೆಗಳೇ ಪ್ರಭುಗಳು ಎಂಬುದನ್ನು ಗಂಟಾಘೋಷವಾಗಿ ಸಾರುತ್ತವೆ.  

    ಈ ಮೇಲಿನ ಎಲ್ಲಾ ಅಂಶಗಳನ್ನು ರೂಪಿಸುವ ನಿಟ್ಟಿನಲ್ಲಿ ಭಾರತ ದೇಶದ ಕಟ್ಟಕಡೆಯ ಪ್ರಜೆಗೂ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಸಮಾನತೆಯನ್ನು ಸಮಾನ ಅವಕಾಶಗಳ ಸ್ಥಾನಮಾನಗಳ ಉಪಾಸನೆಯ ಸ್ವಾತಂತ್ರ್ಯವನ್ನು ಸಮಸಮಾಜ ನಿರ್ಮಿಸುವ ಸಮತಾ-ಮಮತಾ ಬಂದುತ್ವವನ್ನು ನೀಡುವ ಇವುಗಳಿಂದ ಯಾವ ಪ್ರಜೆಯೂ ವಂಚಿತರಾಗದಿರಲಿ ಎಂಬ ಸದುದ್ದೇಶ ಧ್ಯೇಯದೊಂದಿಗೆ ವಿಚಾರ, ಅಭಿವ್ಯಕ್ತಿಸ್ವಾತಂತ್ರ್ಯ, ಧರ್ಮ ಮತ್ತು ನಂಬಿಕೆಯ ಉಪಾಸನೆಯ ಸ್ವಾತಂತ್ರ್ಯವನ್ನು ಸರ್ವರಿಗೂ ದೊರಕುವಂತೆ ಮಾಡುವ ನಿಟ್ಟಿನಲ್ಲಿ ವ್ಯಕ್ತಿಗೌರವ, ದೇಶದ ಐಕ್ಯತೆ, ಸಮಗ್ರತೆ ಹಾಗೂ ಎಲ್ಲಾ ನಾಗರಿಕರಲ್ಲಿ ಭ್ರಾತೃತ್ವದ ಭಾವನೆಯನ್ನು ಮೂಡಿಸುವ ದೃಡಸಂಕಲ್ಪದೊಂದಿಗೆ ಭಾರತೀಯ ಪ್ರಜೆಗಳಾದ ನಾವುಗಳು ನಮ್ಮ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೂಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ ಎಂಬ ನಮ್ಮ ಸಂವಿಧಾನ ಸಭೆಯಲ್ಲಿ ೧೯೪೯ ನೇಯ ಇಸವಿಯ ನವೆಂಬರ್ ತಿಂಗಳ ೨೬ ನೇ ದಿನದಂದು ಅರ್ಜಿತಗೊಳಿಸಿಕೂಂಡ ಪರಿಯ ಸಂಕ್ಷಿಪ್ತ ಪಕ್ಷಿನೋಟವನ್ನು ಪೂರ್ವ ಪೀಠಿಕೆಯಲ್ಲಿ ಭಾರತಿಯರ ಕರ್ತವ್ಯಪ್ರಜ್ಞೆಯ, ದೇಶನಿಷ್ಠೆಯ ಹಾಗೂ ದೇಶಭಕ್ತಿಯ ಅಂತರಂಗದ ಧ್ವನಿಯನ್ನು ಉಲ್ಲೇಖಿಸಲಾಗಿದೆ.  

   
                          ಸಂವಿಧಾನ ಜಾರಿಗೆಯಾಗಿ ಏಳುದಶಕಗಳೇ ಕಳೆಯುತ್ತಾ ಬಂದರೂ, ವಿಶ್ವದಲ್ಲೇ ಇನ್ನೇನೂ ಜನಸಂಖ್ಯೆಯಲ್ಲಿ ಅಗ್ರಸ್ಥಾನಪಡೆಯುವ ಭಾರತೀಯ ಪ್ರಜೆಗಳಾದ ನಾವುಗಳು ದೇಶದ ಜನರ -ಸಂಸ್ಕೃತಿ, ಗಡಿ, ಕಾನೂನು ಕಾಪಾಡಲು ಎಷ್ಟರಮಟ್ಟಿಗೆ ಕಂಕಣಕಟ್ಟಿ ಬದ್ದರಾಗಿ ನಿಂತ್ತಿದ್ದೇವೆ? ಎಂಬ ಪ್ರಶ್ನೆಗೆ ಉತ್ತರವನ್ನು ಸ್ವತ: ಎಲ್ಲ ಭಾರತೀಯರೂ ತಮ್ಮ ಅಂತರಂಗದೂಳಗೆ ಹುಡಕಬೇಕಾಗಿದೆ. ಉತ್ಕೃಷ್ಟ ಆಡಳಿತ ನೀಡಬೇಕಾದ ನಾಯಕರನ್ನು ಆರಿಸುವಾಗ ದೇಶಾಭಿಮಾನದಿಂದ ಸಂವಿಧಾನದ ತತ್ವಗಳನ್ನು ನಿಜವಾಗಿ ಪಾಲಿಸುತ್ತಿದೆವೆಯೇ? ದೇಶದಲ್ಲಿ ನಡೆಯುವ ಅನ್ಯಾಯ ಅಕ್ರಮಗಳನ್ನು ರಾಜಕಾರಣಿಗಳ ಹಾಗೂ ಉದ್ಯಮಿಗಳ ಹಗರಣಗಳನ್ನು ಪ್ರತಿಭಟಿಸುವ ಶಕ್ತಿ ನಮ್ಮಲ್ಲಿದೆಯೆ?  ಸಿದ್ದಾಂತಗಳನ್ನು ಗಾಳಿಗೆ ತೂರಿ ಸೈದ್ದಾಂತಿಕ ನಿಲುವುಗಳ ಮುಖವಾಡತೊಟ್ಟು ಸ್ವಪ್ರತಿಷ್ಠೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶಕ್ಕೆ ಚ್ಯುತಿ ತರುವ ಹಾಗೂ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವ ಯುವಕರನ್ನು ಪ್ರಶ್ನಿಸುವ ತಾಕತ್ತು ನಮ್ಮೆಲ್ಲರಲ್ಲಿದೆಯೆ? ಸುವ್ಯವಸ್ಥಿತವಾದ ಕಾನೂನು ಹೊಂದಿರುವ ದೇಶದಲ್ಲಿ ಅಪರಾಧ ಸಂಖ್ಯೆಗಳು ಹೆಚ್ಚುತ್ತಿರುವ ಈ ವಿಷಮ ಸಂಧರ್ಭದಲ್ಲಿ ಅಪರಾಧಿಗಳಿಗೆ ಎಷ್ಟರ ಮಟ್ಟಿಗೆ ಶಿಕ್ಷೆಯಾಗಿತ್ತಿದೆ? ನ್ಯಾಯದ ಧ್ವನಿಗೆ ಎಷ್ಟು ಬೇಗ ನ್ಯಾಯದ ಫಲಶೃತಿ ದೊರೆಯುತ್ತಿದೆ?  ‘ನಿರ್ಭಯಾ ಹಾಗೂ ಮಣಿಪುರ’ದಂತಹ ಘಟನೆಗಳು ಅನಾಗರಿಕ ಸಂಸ್ಕೃತಿಯನ್ನು ತೋರ್ಪಡಿಸುವ ವಿಕೃತ ಮನಸ್ಸುಗಳಿಗೆ ಕಡಿವಾಣ ಹಾಕಿ ಬದಲಾಯಿಸಲು ಸಾಧ್ಯವಾಗುತ್ತದೆಯೆ?



   ಇಂತಹ ಹತ್ತು ಹಲವಾರು ಪ್ರಶ್ನೆಗಳನ್ನು ‘ಭಾರತೀಯ ಪ್ರಜೆಗಳಾದ ನಾವುಗಳು’ ವಿಮರ್ಶಾತ್ಮಕವಾಗಿ ಚಿಂತಿಸಿ, ದೇಶದ ಅಭಿವೃದ್ದಿಯ ಅಭ್ಯುದ್ಯಯಕ್ಕೆ ಕೊಡುಗೆ ನೀಡಲು ಟೊಂಕಕಟ್ಟಿ ನಿಲ್ಲಬೇಕಾಗಿರುವುದು ಅನಿವಾರ್ಯ ಹಾಗೂ ಅವಶ್ಯಕ ಸಂಗತಿಯಾಗಿದೆ. ಇವುಗಳಿಗೆ ಪೂರಕವಾಗಿ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯ ಓದುವಿಕೆಯನ್ನು ಕಡ್ಡಾಯಗೂಳಿಸಿರುವುದು ಸ್ವಾಗತಾರ್ಹವಾಗಿದೆ. ಸಂವಿಧಾನ ನಮ್ಮೆಲ್ಲರ ಹಕ್ಕು ಸಂವಿಧಾನ ಭವ್ಯ ಭಾರತದ ನಿರ್ಮಾಣದ ಸಾಧನ , ಸಂವಿಧಾನವು ಯುಗಪುರುಷ ಬಾಬಸಾಹೇಬರ ಕೊಡುಗೆ, ಇದನ್ನು ಯಶಸ್ವಿಯಾಗಿಸಲು ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸಾಗಿಸಲು ಭಾರತವನ್ನು ವಿಶ್ವಗುರುವನ್ನಾಗಿಸುವ ರಾಷ್ಟ್ರ ಧ್ಯೇಯವನ್ನು ಸಾಧಿಸಲು ‘ಬುದ್ದ- ಬಸವ-ಅಂಬೇಡ್ಕರರ’ ಚಿಂತನೆಗಳನ್ನು ಅಧ್ಯಯನ ನಡೆಸುವುದು, ಅಳವಡಿಸಿಕೊಳ್ಳುವುದು, ಪ್ರಚಾರಪಡಿಸುವುದು  ‘ಭಾರತೀಯ ಪ್ರಜೆಗಳಾದ ನಮ್ಮಯ ಕರ್ತವ್ಯವಲ್ಲವೇ’? ಸಂವಿಧಾನವನ್ನು ಓದೋಣ ಬಲಿಷ್ಠ ರಾಷ್ಟ್ರದ ನಿರ್ಮಾಣ ಮಾಡೋಣ.


ಅಮರೇಶ.ಮ.ಗೊರಚಿಕನವರ

Leave a Reply

Back To Top