ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಆಲೋಚನೆಗಳನ್ನು

ಉದಾತ್ತಗೊಳಿಸೋಣ

  ನಮ್ಮ ಸುಪ್ತ ಮನಸ್ಸನ್ನು ಒಮ್ಮೆ ಎಚ್ಚರಿಸಿ ಕೊಳ್ಳೋಣ. ನಮ್ಮ ಮನಸ್ಸಿನಿಂದ ನಾವು ಏನು ಆಲೋಚಿಸುತ್ತೇವೆಯೋ  ಅದೇ ಆಗುತ್ತೇವೆ. ನಮ್ಮ ಮೆದುಳಿಗೆ ಬಹಳ ಶಕ್ತಿ ಇದೆ. ಅದನ್ನು ಸ್ವಲ್ಪ ಆದರೂ ಬಳಸಿ ಕೊಳ್ಳೋಣ . ನಮ್ಮ ಮೆದುಳಿಗೆ ಉತ್ತಮ ಅಂಶಗಳನ್ನು ತುಂಬಿಸಿ ಕೊಳ್ಳೋಣ. ನಾವು ಏನು ಯೋಚಿಸುತ್ತೇವೆಯೋ ಅದೇ ಆಗುತ್ತೇವೆ. ಕಿವಿ, ಕಣ್ಣು, ಕಾಲು, ಕೈ ಗಳೇ ಇಲ್ಲದ ಮನುಷ್ಯರು ಬದುಕನ್ನು ನಮಗಿಂತ ಚೆನ್ನಾಗಿ ನಡೆಸುತ್ತಾ ಇರುವಾಗ ಎಲ್ಲಾ ಅಂಗಾಂಗಗಳನ್ನು ಸರಿಯಾಗಿ ಪಡೆದ ಮಾನವರು ಬದುಕಿಗೆ ಹೆದರಿ ಬದುಕನ್ನು ತಾನೇ ಕೊನೆಗೊಳಿಸುವ ಹಾಗಿದ್ದರೆ ನಮಗೆ ದೇವರು ಉತ್ತಮ ಶರೀರ, ಒಳ್ಳೆಯ ಮನಸ್ಸು , ಆಲೋಚನೆಗಳನ್ನು ಕೊಟ್ಟು ಏನು ಪ್ರಯೋಜನ?  ವಿದ್ಯಾರ್ಥಿಗಳಿಗೆ ಏನಾದರೂ ಕಲಿಸುವ ಮೊದಲು ಶಿಕ್ಷಕರಿಗೆ ತಮ್ಮ ಮನದಲ್ಲಿ ಧನಾತ್ಮಕ ಯೋಚನೆ ಹೊಂದಿರಬೇಕು. ನಮಗೇ ಬದುಕು ಬೇಡ ಎನ್ನುವಷ್ಟರ ಮಟ್ಟಿಗೆ ನಮ್ಮ ಜೀವನವನ್ನು ನಮಗೆ ರೂಪಿಸಲು ಸಾಧ್ಯವಾಗದೆ ಇದ್ದರೆ ಅಂತಹ ಶಿಕ್ಷಕ ತನ್ನ ವಿದ್ಯಾರ್ಥಿಗಳು, ತನ್ನ ಮಕ್ಕಳ ಭವಿಷ್ಯ ರೂಪಿಸಬಲ್ಲನೇ? ಹಾಗೆಯೇ ಪೋಷಕರೂ ಕೂಡ. ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಪೋಷಕರೇ ತಮ್ಮ ಬಾಳನ್ನು ಕೊನೆಗೊಳಿಸಲು ನಿರ್ಧರಿಸಿದರೆ ಮಕ್ಕಳ ಗತಿ ಏನು? ಇನ್ನು ಕೆಲವರು ಬಾಳಿ ಬದುಕಬೇಕಾದ ಮಕ್ಕಳ ಬಾಳನ್ನು ಕೂಡಾ ಚಿವುಟಿ ಬಿಸಾಕಿ ಬಿಡುತ್ತಾರೆ. ಅವರು ಮಾಡಿದ ತಪ್ಪಿಗೆ ಏನೂ ಅರಿಯದ ಮುಗ್ದ ಕಂದರು ಬಲಿಯಾಗುತ್ತಾರೆ.
     ಆಲೋಚನೆ ಬದಲಿಸಿದರೆ ಸಾಕು ಅಷ್ಟೇ. ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯ, ನಾವು ಮೇಲೆ ಏರುವುದು, ಎತ್ತರಕ್ಕೆ ಏರಿ ಸಾಧನೆಗೆ ಚುಕ್ಕಿ ಇಡುವುದು ಎಲ್ಲವೂ ನಾವೇ, ನಮ್ಮ ಆಲೋಚನೆಗಳೇ. ನಾನು ಏನೂ ಮಾಡಲು ಆಗದು, ನನ್ನ ಬಳಿ ಏನೂ ಇಲ್ಲ ಎಂದು ಹೇಳುವವರು ಕೊನೆಗೂ ಬದುಕಿನಲ್ಲಿ ಸಕ್ಸಸ್ ಎನ್ನುವ ಪದ ಕಾಣಲು ಸಾಧ್ಯವೇ?

      ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಾಚಾರ್ಯರು,  ಬದಲಾದರೆ ಮಾತ್ರ ಮುಂದಿನ ದೇಶದ ಭಾಷ್ಯ ಬದಲಾಗುತ್ತದೆ. ಅವರೇ ಹೆದರಿ ಬಾಲ ಮುದುರಿ ಹೋದರೆ ಇನ್ನು ಸಮಾಜ ತಿದ್ದುವವರು ಯಾರೋ… ಇತ್ತೀಚೆಗಂತೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಾಲಿನಲ್ಲಿ ಇವರೂ ಸೇರಿ ಹೋಗಿದ್ದಾರೆ.  ನಮ್ಮ ಬದುಕಿನ ರೂವಾರಿಗಳು, ಇಂಜಿನಿಯರ್ ಗಳು, ಬಿಲ್ಡರ್ ಗಳು, ಮೇಸ್ತ್ರಿಗಳು, ಮೇಷ್ಟ್ರುಗಳು, ಗೈಡ್ ಗಳು, ಎಸ್ಟಿಮೇಟರ್ ಗಳು, ಪ್ಲಾನರ್ ಗಳು ಎಲ್ಲವೂ ನಾವೇ.
          ಡಾ. ಏ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳುವ ಹಾಗೆ ನಮ್ಮ ಆಲೋಚನೆಗಳು ಬಹಳಷ್ಟು ಎತ್ತರದಲ್ಲಿ ಇರಬೇಕು. ಆಕಾಶಕ್ಕಿಂತಲೂ ಎತ್ತರದ ಗುರಿಗಳನ್ನು ಇಟ್ಟುಕೊಂಡರೆ ಆಕಾಶದವರೆಗಾದರೂ ತಲುಪಬಹುದು. ಅದರ ಬದಲು ಸಾವಿನ ಬಗ್ಗೆ ಚಿಂತೆ ಮಾಡಲು ಕನಸಿನ, ಗುರಿಯ ನಡುವೆ ಸಮಯ ಎಲ್ಲಿದೆ? ಸಾವು ಒಂದು ದಿನ ಬಂದೇ ಬರುತ್ತದೆ. ಅದು ತನ್ನ ದಿನವನ್ನು ಎಣಿಸುತ್ತಾ ಕಾದು ಕುಳಿತು ದಿನ ಲೆಕ್ಕ ಹಾಕುತ್ತಿದೆ. ಅದು ಯಾವಾಗ ಬೇಕಾದರೂ ಬರಲಿ ನಾವು ಅದನ್ನು ಖುಷಿಯಿಂದ ಸ್ವೀಕರಿಸಲು ತಯಾರಾಗಬೇಕೇ ಹೊರತು, ನಮ್ಮ ಕನಸುಗಳನ್ನು ಮುರಿಯುವುದಲ್ಲ. ಕನಸು, ಜೊತೆಗೆ ಗುರಿ ಒಟ್ಟಾಗಿ ಓಡುತ್ತಲೇ ಇರಬೇಕು. ಗುರಿಯ ಕಡೆ ಸಾಗುವ ಈ ಬದುಕಿನ ಓಟದ ನಡುವೆ ಸಾವಿನ ದಿನ ಮರೆತು ಹೋಗಬೇಕು.
     ಸಾಯುವುದು ಸುಲಭ. ನಾಡಿಯನ್ನು ನಿಲ್ಲಿಸಿದರೆ ಆಯಿತು,ಹೃದಯ ಬಡಿತ ನಿಂತರೆ ಆಯಿತು. ಆದರೆ ಆಲೋಚನೆಗಳನ್ನು  ನಿಯಂತ್ರಿಸಿ  ಅದರ ಜೊತೆ ಹೋರಾಡಿ ಬದುಕಿನಲ್ಲಿ ಜಯ ಗಳಿಸುವುದು ಇದೆಯಲ್ಲ ಅದು ಗ್ರೇಟ್. ಅದನ್ನು ಮಾಡುವುದು ಒಂದು ತಪಸ್ಸು. ನಾನು ಆ ತಪಸ್ವಿ ಆಗಲಿದ್ದೇನೆ ಎಂಬ ಉದಾತ್ತ ಆಲೋಚನೆ ಮನದಲ್ಲಿ ಬಂದರೆ ಸಾಕು. ಸುಪ್ತ ಮನಸ್ಸು ಮೇಲೆದ್ದು ಅದೇನನ್ನೋ ಸಾಧಿಸಲು ರೆಡಿ ಆಗಿ ಬಿಡುತ್ತದೆ. ನಾನು, ನೀನು, ಅವನು, ಇವನು ಯಾರೂ ಇರದೆಯೂ ಜಗ ನಡೆಯುತ್ತದೆ. ಯಾರೋ ಹೇಳಿದ ಮಾತಿದು. “ಈ ಜಗತ್ತು ನಮಗೆ ಅನಿವಾರ್ಯವೇ ಹೊರತು ನಾವು ಜಗತ್ತಿಗೆ ಅನಿವಾರ್ಯ ಅಲ್ಲ.” ನಾವೇನೋ ಈ ಜಗತ್ತಿನಲ್ಲಿ ಚಿಕ್ಕದನ್ನು ಸಾಧಿಸಲು ಬಂದಿದ್ದೇವೆ. ಅದನ್ನು ಮಾಡಿಯೇ ತೀರಬೇಕು. ಕಳುಹಿಸಿದನಿಗೆ ಹಿಂದೆ  ಕರೆಸಿಕೊಳ್ಳಲು ಗೊತ್ತಿದೆ. ಎಲ್ಲೋ ಓದಿದ ನೆನಪು. ನಾವೇನಾದರೂ ಈಗ ನಮ್ಮನ್ನು ನಾವು ಸಾಯಿಸಿಕೊಂಡು ಅಕಸ್ಮಾತ್ ಮನುಷ್ಯರಾಗಿ ಮತ್ತೆ ಹುಟ್ಟಿ  ಬಂದರೆ…? ಈಗಾಗಲೇ ಸಾಕಾಗಿದೆ…ಮತ್ತೆ ಎಲ್. ಕೆ. ಜಿ ಯಿಂದ ಓದಬೇಕು ಮತ್ತೆ ಕಲಿಯಬೇಕು, ಮತ್ತೆ ಅದೇ ಕಲುಷಿತ ನೀರು, ಆಹಾರ, ಗಾಳಿ ಸೇವಿಸಬೇಕು. ಮತ್ತೆ ಕಾಂಪಿಟೇಶನ್ ಬದುಕು. ಅದೆಲ್ಲ ಯಾಕೆ…. ಬದುಕು ಇದ್ದಷ್ಟು ದಿನ ಆರಾಮಾಗಿ ಇದ್ದು ಬಿಡೋಣ ಅಲ್ಲವೇ? ನೀವೇನಂತೀರಿ?



ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top