ಊಟಕ್ಕೆ ಹೊರಗೆ ಹೋಗೋಣ.ನಿಂಗಮ್ಮ ಅಶೋಕ. ಭಾವಿಕಟ್ಟಿ ಅವರ ಪ್ರಬಂಧ.

ಪ್ರಬಂಧ ಸಂಗಾತಿ

ನಿಂಗಮ್ಮ ಅಶೋಕ. ಭಾವಿಕಟ್ಟಿ

ಊಟಕ್ಕೆ ಹೊರಗೆ ಹೋಗೋಣ.

“ಅಮ್ಮ ಇವತ್ತು ಹೊರಗೆ ಊಟಕ್ಕೆ ಹೋಗೋಣ”ಮಗನ ಆಸೆ.
 ಶನಿವಾರ, ರವಿವಾರ ಎಂಜಿನೀಯರ್ಸ್ ಗೆ ರಜಾ ದಿನಗಳು. “ನೀವು ಹೋಗಿಬನ್ನಿ ಫ್ರೆಂಡ್ಸ್ ಜೊತೆ” ಅಂದ್ರೂ ಕೇಳಲಿಲ್ಲ. “ಬರ್ತೀಯಾ ಅಷ್ಟೇ”. ಹುಕುಂ…  ಅಪ್ಪನಂತೆ ಹಠಮಾರಿ.

   ಸಾಮಾನ್ಯವಾಗಿ ಹೊರಗೆ ಊಟಕ್ಕೆ ಹೋಗುವುದು ಫ್ಯಾಷನ್ ಅಲ್ಲ. ಆಗಬಾರದೂ ಕೂಡ. ಅದೇ ರೊಟ್ಟಿ ಅದೇ ಅನ್ನ ಅದೇ ರುಚಿಯಾಕೋ ಒಮ್ಮೆ ಬೇಸರವಾಗಿ ಮನಸು ಹೊರಗಿನ ವಿಭಿನ್ನ ರುಚಿಗೆ ಆಸೆ ಪಡುವುದು ಈಗೀಗ ಸಹಜವಾಗಿದೆ. ಮೊದಲೆಲ್ಲಾ ರೊಟ್ಟಿ ಮೇಲೆ ಪಲ್ಯ ಇರುತಿರಲಿಲ್ಲ. ಚಟ್ಣಿಯೂ… ಅಂತಹ ದಿನಗಳನ್ನು ನಾವೇ ಕಳೆದಿದ್ದೇವೆ. ಅಕ್ಕಿ ಅನ್ನ ಹಬ್ಬಕ್ಕೆ ಮಾತ್ರ, ದಿನಾಲೂ ನುಚ್ಚನ್ನ (ಜೋಳದ ನುಚ್ಚು). ಅದರಲ್ಲಿ ಮನೇಲಿ ಹೈನು ಇದ್ರೆ ಹಾಲು ಮಜ್ಜಿಗೆ ಸಾರು. ಇಲ್ಲದವರು ಹುಣಸೆ ಸಾರು. ನಿಜ ಹೇಳಬೇಕೆಂದರೆ ಅದೇ ಎಷ್ಟು ರುಚಿ ಇರ್ತಿತ್ತು. ತೃಪ್ತಿಯಾಗುತಿತ್ತು. ಆಗಿನ ಬಡತನದಲ್ಲು ಹೊಟ್ಟೆ ತುಂಬಾ ಊಟ ಇದ್ದರೇ ಸುಖಿಗಳು.

ಈಗ ʼಸುಖʼ ಎನ್ನುವುದರ ವ್ಯಾಖ್ಯಾನ ಬದಲಾಗಿದೆ. ಹೊಸ ಹೊಸದನ್ನು ಜೀವ ಬಯಸುತ್ತದೆ. ಉಣ್ಣಲು ಹೊಸ ರುಚಿ ಫುಡ್ ಆರ್ದರ್ ಅಪ್ ಗಳೇ ಎಷ್ಟೊಂದಿವೆ ಅಂತಾನೆ ಮಗ,ಉಡಲು ದಿನಕ್ಕೊಂದು ಹೊಸ  ಫ್ಯಾಷನ್ . ಖರೀದಿಸಲು ಹೊಸ ಆಪ್ಸ್. ಮತ್ತು ಆಫರ್ಸ್ ಆಸೆ.

ಅಯ್ಯೋ ಊಟಕ್ಕೆ ಅಂತ ಕರೆದು ಏನೋ ಹೇಳ್ತಿದ್ದೇನೆ ನೋಡಿ, ಬನ್ನಿ ಆ ಕಡೆಗೇ ಹೋಗೋಣ. ಹೊರಗೆ ಊಟಕ್ಕೆ ಹೋಗುವುದು ಅಂದ್ರೆ ಒಳ್ಳೆಯ ದಾಬಾ, ಹೊಟೆಲ್, ರೆಸ್ಟೋರೆಂಟ್ ಗೆ ಹೋಗಿ ಸ್ಟಾರ್ಟರ್ (ಊಟಕ್ಕೆ ಮೊದಲು ತಿನ್ನುವ ಫುಡ್) ಬಗೆಬಗೆಯ ಬಾಜೀ, ತಂದೂರಿ ನಾನ್, ರೈಸ್, ಸಲೈಡ್ಸ್, ಜೂಸ್, ಡೆಸಾರ್ಟ(ಊಟದ ನಂತರ ತಿನ್ನುವ ಸಿಹಿ) ಅಂತ ಬೇಕಾಗಿದ್ದು ಆರ್ಡರ್ ಮಾಡಿ ತಿಂದು ಬರೋದು ಅಷ್ಟೇನಾ? ಖಂಡಿತ ಅಲ್ಲ.
ಹಾಗಾದ್ರೆ ?

   ನಗರಗಳಿಗಿಂತ ಸಾಮಾನ್ಯವಾದ ಊರುಗಳಲ್ಲಿ ಹೊರಗೆ ಊಟ ಅಂದ್ರೆ ಗಂಡಸರೇ ಹೆಚ್ಚು. ಪಾರ್ಟಿ, ಪ್ರಮೋಶನ್, ಹೊಸ ಕಾರು, ಹೊರಗೆ ಹೋಗಲು ನೆಪ. ಕಾರಣ ಅನ್ನಿ. ಅಲ್ಲೆಲ್ಲಾ ಹೆಂಗಸರು ಹೋಗೋದು ಚೆನಾಗಿರಲ್ಲ. ಎನ್ನುವುದು ಗಂಡಸರ ಅಂಬೋಣ. ಚುನಾವಣೆ ಪ್ರಚಾರದ ಸಮಯದಲ್ಲಿ ಡಾಬಾ ಹೊಟೆಲ್ ಗಳು ಒಬ್ಬೊಬ್ಬರು ಗುತ್ತಿಗೆ ಹಿಡಿದುಬಿಟ್ಟಿರುತ್ತಾರೆ. ʼಇಷ್ಟು ದಿನ ಎಷ್ಟೇ ಆಗಲಿ ಯಾರಿಗೂ ಬಿಲ್ ಕೇಳಬೇಡಿʼ ಅಂತ. ಯಜಮಾನರು ಹೇಳುತ್ತಾರೆ. ಈಗೀಗ ಫ್ಯಾಮಿಲಿ ಲಂಚ್, ಡಿನ್ನರ್ ಖಯಾಲಿ ಶುರುವಾಗಿದೆ. ತಿಂಗಳಿಗೊಮ್ಮೆಯಾದರೂ ಹೋಗುವುದು ಸಾಮಾನ್ಯವಾಗಿದೆ.

ಹೊರಗೆ ಹೋಗುವ ದಿನ ಮುಂಚೆನೇ ಡಿಸೈಡ್ ಆದ್ರೆ ಅಯಾ ಹೊತ್ತಿಗಷ್ಟೇ ಮಾಡಿ ಹೋಗುವುದು ಒಳ್ಳೆಯದು, ದಿಢೀರನೇ ಡಿಸೈಡ್ ಆಗಿ ಹೋಗುವಾಗ ಮನೆ ಅಡಿಗೆ ಕೆಲಸದವರಿಗೆ ಕೊಟ್ಟು ಹೊರಗೆ ಹೋಗೋದೂ ಉಂಟು.

ಹೊರಗೆ ಊಟಕ್ಕೆ ಹೋದಾಗ…
* ಊಟಕ್ಕೆ ಬಂದೀವಿ ತಿಂದು ಹೋಗೋದು ಅಷ್ಟೇ ಎಂಬಂತೆ ಆರ್ಡರ್ ಮಾಡೋದು ಗಬಗಬ ತಿನ್ನೋದು ಕಾರ್ ಹತ್ತಿ ಓಡಿ ಹೋಗೋದು ಆಗಬಾರದು.
*ಆ ಸುಖಕ್ಕೆ ಇಲ್ಲೀವರೆಗೆ ಯಾಕೆ ಹೋಗಬೇಕು ಮನೇಗೇ ತಂದು ತಿಂದು ಇರಬೇಕು.
*ಹೆಂಗಸರಿಗೆ ಹೊರಗೆ ಊಟಕ್ಕೆ ಗೋಗುವುದೂ ಒಂದು ಖುಷಿಯ ಸಮಾಚಾರ. *ಅವರಿಗೆಲ್ಲಾ ಸಡಗರವೇ ಎಂಜಾಯ್ ಮಾಡೋದನ್ನು ಅವರ ನೋಡಿ ಕಲಿಯಬೇಕು.
* ಸಂಜೆ ಮೈಲ್ಡ್ ಆಗಿ ರೆಡಿಯಾಗಿ ಹೋಗಿ ತಂಗಾಳಿಯಲಿ, ಒಳ್ಳೆ ಡಾಬಾ ಆದ್ರೆ ಫ್ಮಾಮಿಲಿ ರೂಂಗಳಿರುತ್ತವೆ.
*ಬಿದಿರಿನ ಅಡ್ಡ ಗೋಡೆಗಳು, ಟ್ರಾನ್ಫರೆಂಟ್ ಕರ್ಟನ್ಸ್, ನಾವು ಬಯಸಿದರೆ ಕ್ಯಾಂಡಲ್ ಲೈಟ್ ವ್ಯವಸ್ಥೆ ಇರುತ್ತೆ. ಇಲ್ಲಂದ್ರೆ ಕಾಮನ್ ಲೈಟ್ಸ್.
*ಯಾರಿಗೆ ಏನು ಬೇಕು ಕೇಳಬೇಕು . ಅವರು ಹೇಳಿ ಬಿಡಲಿ ಅದು ಬೇರೆ.
* ಒಂದಿಷ್ಟು ಅವರ ಟೇಸ್ಟ್. ಒಂದಿಷ್ಟು ನಮ್ಮ ಟೇಸ್ಟ್  ಆರ್ಢರ್ ಮಾಡಿ ಯಾವುದೋ ಹಳೆಯ ಖುಷಿಯ ಸಂಗತಿಗಳನ್ನು ಮೆಲುಕುಹಾಕುತ್ತಾ ಮೆಲ್ಲಗೇ ಅಲ್ಲಿನ ಖಾದ್ಯಗಳನ್ನು ಸವಿಯಬೇಕು.
* ಒಂದೊಂದು ಕಡೆ ಒಂದೊಂದು ಸ್ಪೆಷಲ್ ಡಿಷ್ ಇರುತ್ತೆ.
*ಎರಡು ಫ್ಯಾಮಿಲಿ ಜೊತೆಯಾಗಿ ಹೋದಾಗ ಅವರೆದುರು ನಮ್ಮವರನ್ನು ಎಂದೂ ಕೀಳಾಗಿ ಹೀಯಾಳಿಸಿ ಮಾತನಾಡುವುದು ನಿಷೇಧ. ಅಲ್ಲಿಗೇ ಊಟದ ರುಚಿ ಕೊನೆಯಾದಂತೆಯೇ.
* ಅಷ್ಟೇ ಅಲ್ಲ ಎದುರಿನವರಿಗೆ ʼಹಾಕೊಳ್ಳಿ, ಹಾಕೊಳ್ಳಿʼ ಅಂತ ಕಿರಿಕಿರಿ ಮಾಡಬಾರದು
* ಮನೆಯಲ್ಲಿ ದಿನಾಲೂ ಪತ್ನಿ ಊಟ ಬಡಿಸಿರುತ್ತಾಳೆ ಅವತ್ತು ಹಾಗೇ ಹೊರಗೆ ಹೋದಾಗ ನೀವು ಬಡಿಸಿ ಖುಷಿಪಡಿಸಿ, ಆ ನೆನಪುಗಳು ಅನುಗಾಲ ಉಳಿಯುತ್ತವೆ.
*ಫ್ಯಾಮಿಲಿ ಅಷ್ಟೇ ಬಂದಾಗ ಅಲ್ಲಿನ ಒಡನಾಟ ಮನೆಯ ಸಮಸ್ಯೆಗೆ ನೆಮ್ಮದಿಯ ಪರಿಹಾರ ಸಿಗಬಹುದು ಹಾಗೇ ಆ ಪರಿಸರ, ಆ ಕ್ಷಣಗಳನ್ನು ಪರಿವರ್ತಿಸಿಕೊಳ್ಳಬಹುದು.
* ಗೆಳತಿ ಒಮ್ಮೆ ಹೇಳಿಕೊಂಡಿದ್ದು… ತಾವಿಬ್ಬರೂ ಇನ್ನಿಬ್ಬರೂ ಹೊಟೆಲ್ ಗೆ ಹೋಗಿದ್ರಂತೆ, ಏನು ಬೇಕು ಎಂದು ಒಬ್ಬರಿಗೊಬ್ಬರು ಕೇಳೀದಾಗ ಎದುರಿನಾಕೆಗೆ ಏನು ಬೇಕೆಂದು  ಗಂಡ ಹೇಳಿದ್ದು ಈಕೆಗೆ ಸಹಿಸಲಾಗಲಿಲ್ಲವಂತೆ, ಮದುವೆಯಾಗಿ ಇಪ್ಪತ್ತು ವರ್ಷವಾಯ್ತು ನನಗೇನಿಷ್ಟ ಅಂತ ಗೊತ್ತಿಲ್ಲ ಆಕೆಗೇನು ಬೇಕೆಂದು ಹೇಗೆ ಗೊತ್ತು? ಎನ್ನುವುದು ಇವಳ ವಾದ. ಅಲ್ಲಿಗೆ ಅಂದಿನ ಬ್ರೇಕ್ಫಾಷ್ಟ್ ಹೇಗಿತ್ತು ನೀವೇ ಊಹಿಸಿ.
* ಆದರೂ ಹೆಂಡತಿಯೋಂದಿಗೆ ಹೊರಗೆ ಹೋದಾಗ ಹುಷಾರು ಕಣ್ರೀ.
*ಎಷ್ಟು ದುಬಾರಿ ಗ್ರ್ಯಾಂಡ್ ಹೋಟೆಲ್ಗೆ ಹೋಗಿದ್ದೇವೆ ಎನ್ನುವುದಕ್ಕಿಂತ ಅಲ್ಲಿ ಕಳೆದ ಕ್ಷಣಗಳು ಹೇಗಿದ್ದವು ಎನ್ನುವುದು ಮುಖ್ಯವಾಗುತ್ತದೆ.

    ಈಗ ಮತ್ತೆ ಮೊದಲಿನ ಮಾತಿನಿಂದ… ನಾವೂ ಅವತ್ತು ಸಂಜೆ ʼಡ್ಯಾಡಿʼ ರೆಸ್ಟೋರೆಂಟ್ ಗೆ ಹೋದ್ವಿ. ಮಗನ ಫ್ರೆಂಡ್ಸ್, ಅವರಮ್ಮ ತಂಗಿಯರು… ಟೋಟಲೀ  ಸೂಪರಾಗಿತ್ತು. ಇನ್ನೊಂದು ವಿಷಯ, ನಮಗಿಂತ ಮೊದಲು ಬಂದವರು ನಾವು ಎದ್ದು ಬಂದರೂ ಇನ್ನೂ ಡೆಸಾರ್ಟ್ಸ್ ತಿಂತಾ ಅಲ್ಲೇ ಕುಳಿತಿದ್ದು ನೋಡಿ  “ಇದು ಎಂಥಾ ಲೋಕವಯ್ಯಾ…” ಎನಿಸಿದ್ದು ಸುಳ್ಳಲ್ಲ.
ಇನ್ನೊಂದು ದೃಶ್ಯ… ಹೆಂಡತಿ ದೋಸೆ ಆರ್ಡರ್ ಮಾಡಿದಾರೆ. ಗಂಡ ಎರಡು ಇಡ್ಲಿ ಒಂದು ಒಡೆ. ಆತ ತಿಂದು ಮುಗಿಸಿದರೂ ಆಕೆಯ ಅರ್ಧ ದೋಸೆ ಕೂಡ ಆಗಿರಲಿಲ್ಲ. ಆತ ಧುಮುಧುಮು ಮಾಡ್ತಾಏನೋ ಗೊಣಗುತಿದ್ದ. ಆಕೆ ಅವಸರವಾಗಿ ತಿನ್ನಲು ಪ್ರಯತ್ನಿಸುತುದ್ದಳು. ಆಕೆಗೇನ್ನಿಸಿತೋ ಇಷ್ಟಗಲ ದೋಸೆ ಆತನ ಪ್ಲೇಟಿಗೆ ಹಾಕಿದಳು. ʼನನಗೆ ಸಾಕುʼ ಎನ್ನುತ್ತಾ ಆತ ಅದನ್ನು ತಿನ್ನುವಷ್ಟರಲ್ಲಿ ತಾನು ಮುಗಿಸಬಹುದು ಎಂದು ಆಕೆಗನ್ನಿಸಿಬೇಕು. ಅದನ್ನೂ ಆತ ಗಬ ಗಬ ತಿಂದು ಕೈ ತೊಳೆಯಲು ಹೋದ. ಆಕೆ ಹೋಗುವಾಗ ದೋಸೆಯ ರುಚಿ ಮರೆತುಹೋಗಿತ್ತು.

   ಹಾಗಾದಾಗ ಹೊರಗೆ ಊಟ ಎಂದೊಡನೇ ಆ ಸಿಡುಕು, ಅವಸರ, ಆ ಹೊಟೆಲ್, ರೆಸ್ಟೋರೆಂಟ್ ನೊಂದಿಗೆ ಸೇರಿಕೊಂಡು ಬಿಡುತ್ತದೆ.
ಕೊನೆಗೊಂದು ಮಾತು:  ಸಮಯ, ಸಂಯಮ ಇರದಿರೆ ಹೊರಗೆ ಊಟಕ್ಕೆ ಹೋಗಲೇಬಾರದು.

——————————-

ನಿಂಗಮ್ಮ ಭಾವಿಕಟ್ಟಿ ಹುನಗುಂದ.

ಗೃಹಿಣಿ-ಹುನಗುಂದ

One thought on “ಊಟಕ್ಕೆ ಹೊರಗೆ ಹೋಗೋಣ.ನಿಂಗಮ್ಮ ಅಶೋಕ. ಭಾವಿಕಟ್ಟಿ ಅವರ ಪ್ರಬಂಧ.

Leave a Reply

Back To Top