ಗೊರೂರು ಅನಂತರಾಜು ಅವರ ಕೃತಿ*ಕಾವೇರಿ ಸಂಗಮ” ಮಾಳೇಟಿರ ಸೀತಮ್ಮ ವಿವೇಕ್,

ಪುಸ್ತಕ ಸಂಗಾತಿ

ಗೊರೂರು ಅನಂತರಾಜು ಅವರ ಕೃತಿ

*ಕಾವೇರಿ ಸಂಗಮ”

ಮಾಳೇಟಿರ ಸೀತಮ್ಮ ವಿವೇಕ್

ನಮ್ಮ “ಭಾರತ ದೇಶ  ನಾಗರಿಕತೆಯ ತೊಟ್ಟಿಲು”. ಈ ಸಾಲು ಸದಾ ಇತಿಹಾಸಕಾರರ ನಾಲಿಗೆ ಮೇಲೆ ಉರುಳಾಡುವ ಚಿರಪರಿಚಿತ ಉಕ್ತಿ. ಗಂಗಾ, ಕಾವೇರಿಯಂತಹ‌ ನದಿ ಕಣಜ ಭೂಮಿಯ ವಿಚಾರದಲ್ಲಿ ಅದು ಅಕ್ಷರಶಃ ಸತ್ಯ ಕೂಡ. ಅದರಂತೆ  ಯಾವುದೇ ನದಿಪಾತ್ರಗಳು ಪ್ರಸಿದ್ಧ ಸಾಮ್ರಾಜ್ಯ ಸ್ಥಾಪನೆಗೊಳ್ಳಲು ನಿರ್ವಹಿಸಿದ ಪಾತ್ರ ಅಮೋಘ. ದಕ್ಷಿಣ ಭಾರತದಲ್ಲಿ ಅಂತಹದೊಂದು ಐತಿಹಾಸಿಕ ಛಾಪು ಮೂಡಿಸಿರುವ ನದಿ ಕಾವೇರಿ. ಕೊಡಗಿನಲ್ಲಿ ಹುಟ್ಟಿ ಮೂರು ರಾಜ್ಯ ಹಾದು  ಪೂರ್ವದ ಬಂಗಾಳಕೊಲ್ಲಿ ಸೇರುವ ಕಾವೇರಿ ತನ್ನ ಒಡಲಿನಲ್ಲಿ ಹುದುಗಿಸಿಕೊಂಡಿರುವ ನಾನಾ ಜನಾಂಗಗಳ ಚರಿತ್ರೆಗಳು ಇಂದಿಗೂ ಅನನ್ಯ. ಅದರಲ್ಲೂ  ಕಾವೇರಿ ತೀರದಲ್ಲಿ ನೆಲೆ ನಿಂತಿರುವ ಅನೇಕ  ಜನ ಸಮೂದಾಯಗಳ ಸಂಸ್ಕೃತಿಗಳು ವಿಶಿಷ್ಟ, ವಿಭಿನ್ನ ಹಾಗೂ ಇಂದಿಗೂ ಜೀವಂತವಾಗಿರುವಂತಹದ್ದು. ಹೀಗೆ ಯುಗಯುಗದಿಂದ ಹರಿಯುತ್ತಿರುವ ನದಿಯೊಂದು ಕಂಡಿರಬಹುದಾದ ಮಾನವ ಚರಿತ್ರೆಗಳನ್ನು ಲೆಕ್ಕ ಹಾಕಲು ಸಾಧಾರಣ ವ್ಯಕ್ತಿಗೆ ಸಾಧ್ಯವೇ ಇಲ್ಲ. ಆದರೆ ಬಲ್ಲವರು ಆ ಬಗ್ಗೆ ಪ್ರಸ್ತುತ ವಿಚಾರಗಳನ್ನು ದಾಖಲಿಸುವುದರಿಂದ ಇತಿಹಾಸ ಸೃಷ್ಟಿಸಬಹುದು. ಅಂತಹ ಒಂದು ಪ್ರಮುಖ ನದಿಯ ಪೂರ್ವಾಪರಗಳನ್ನು ಜಾಲಾಡಿರುವ ಇತಿಹಾಸಕಾರರಲ್ಲದ ಸರಳ ವ್ಯಕ್ತಿತ್ವದ ಸಾಹಿತಿಯೊಬ್ಬರು ಸಂಗಮ ಎನ್ನುವ ಹೆಸರಿನಲ್ಲಿ ಬರೆದಿರುವ ಸ್ಥಳಪುರಾಣ ಕೃತಿ  ಶ್ಲಾಘನೀಯವಾಗಿದೆ. ಈ ಪುಸ್ತಕ ನನ್ನ ಕೈ ಸೇರಿದಾಗ ಆ ಕ್ಷಣ ಹೆಚ್ಚಿನ ಗಮನ ಹರಿಸದೆ ನಾನು ಬದ್ಧಳಾಗಿ ತೊಡಗಿಸಿಕೊಂಡಿದ್ದ ಕೆಲಸ ಪೂರ್ಣಗೊಳಿಸುವುದರಲ್ಲೇ ಮಗ್ನಳಾಗಿದ್ದೆ. ಹಾಗಾಗಿ ಅದನ್ನು ಮುಗಿಸಿದ ನಂತರವಷ್ಟೇ ಸಂಗಮ  ಓದಲು ಕೈಗೆತ್ತಿಕೊಂಡೆ. ಅಚ್ಚರಿ ಎಂದರೆ ಎರಡೇ ದಿನದೊಳಗೆ ಓದಿಯೂ ಮುಗಿಸಿದ್ದೆ, ಅಂದರೆ ನನ್ನ ಆಸಕ್ತಿಗೆ ಒಳಪಟ್ಟ ಪುಸ್ತಕಗಳಾಗಿದ್ದರೆ ನಾನು ಆ ಪುಸ್ತಕ ಓದುವ ರೀತಿಯೇ ಬದಲಾಗುತ್ತದೆ. ಹಾಗಾಗಿ  ಅಂತಹ ಪುಸ್ತಕವನ್ನು ನಾನು ಒಂದೇ ಸರಣಿಯಲ್ಲಿ ಓದಿ ಮುಗಿಸಿಬಿಡುತ್ತೇನೆ. ಅದರಂತೆ ಸಂಗಮ ಕೂಡ ನನ್ನ ಓದಿನ ಗತಿ ಬದಲಿಸಿದ ಪುಸ್ತಕಗಳಲ್ಲಿ ಒಂದಾಗಿತ್ತು.  ನಾನು ಕೂಡ ನೋಡಿರುವಂತೆ, “ಅಳಿಲು” ಎಂಬ ಅಡ್ಡ ಹೆಸರಿರುವ, ಪಾದರಸದಂತೆ ಅಕ್ಷರ ಹರಿ ಬಿಡುವ, ವಿವಿಧ ಪ್ರಕಾರದ ಸಾಹಿತ್ಯ ಕೃಷಿ ಗೈದಿರುವ, ಕ್ರಿಯಾಶೀಲ ವ್ಯಕ್ತಿತ್ವದ ಲೇಖಕರು  ಗೊರೂರು ಅನಂತರಾಜು ಅವರು. ಅವರು ಸಂಗಮ ಕೃತಿಯಲ್ಲಿ ದಾಖಲಿಸಿದ  ಅಕ್ಷರಗಳನ್ನು ಓದುವಾಗ,  ಕೃತಿಯಲ್ಲಿ ಯಾವುದೇ ಕೃತಕ ವಿಜೃಂಭಣೆ ಇಲ್ಲದೆ ಸರಳ ನಿರೂಪಣೆಯೊಂದಿಗೆ ವಿಷಯ ಕೇಂದ್ರೀಕೃತವಾಗಿರುವುದು ಗೋಚರಿಸಿತು. ಅದು ನನ್ನ ಓದಿನ ದಾಟಿಯನ್ನು ಕೊಡಗಿನಿಂದ ತಮಿಳುನಾಡಿನವರೆಗೆ ಓಡಿಸಿಕೊಂಡೇ ಹೋಗಿತ್ತು. ಅಷ್ಟು ಬೇಗ ಓದಿ ಮುಗಿಸಿದ ನಂತರ ಕೊನೆಗೆ ಅದರೊಳಗಿದ್ದ ಮಾಹಿತಿ ಸಂಗ್ರಹದ ಮೌಲ್ಯ ತಿಳಿದು ಛೇ! ಇದನ್ನು ಇಷ್ಟು ತಡವಾಗಿ ಓದಿದೆನಲ್ಲ, ಅಂದು ಕೊಂಡೆ. ಅದಾಗಲೇ ನಾನು ಕಾವೇರಿ ಮತ್ತು ಅಗಸ್ತ್ಯರ ಬಗ್ಗೆ ಅಧ್ಯಯನ ನಡೆಸುತ್ತಿದ್ದರಿಂದ  ಈ ಪುಸ್ತಕ ಅಗಸ್ತ್ಯರೇ ನನ್ನ ಕೈಸೇರುವಂತೆ ಮಾಡಿದರೇ?! ಅಂದುಕೊಳ್ಳುವಂತೆಯೂ ಮಾಡಿತ್ತು.. ಏಕೆಂದರೆ ಈ ಪುಸ್ತಕವು ನಾನು ಹುಡುಕುತ್ತಿದ್ದ ಕೆಲ ಮಾಹಿತಿಯನ್ನು ಒಳಗೊಂಡಿದ್ದರಿಂದ ನನ್ನ ಪಾಲಿಗೆ ಬಯಸದೇ ಬಂದ ಭಾಗ್ಯದಂತಿತ್ತು!. ಈ ಪುಸ್ತಕವನ್ನು ಶ್ರೀಯುತ ಅನಂತರಾಜು ಅವರೇ ಸ್ವಯಂ ನನ್ನ ಕೈಗಿತ್ತಿದ್ದರು.
ಈ ಪುಸ್ತಕದಲ್ಲಿ ಅಪರೂಪದ ರಕ್ಷಿತಾರಣ್ಯ, ಉಪನದಿಗಳು, ಮಾತ್ರವಲ್ಲದೆ ಕೊಡಗಿನವರಿಗೇ ತಿಳಿಯದಿರುವ ಸಾಕಷ್ಟು ಕಾವೇರಿ ತೀರದ ಚೋಳ, ಪಾಂಡ್ಯ ಕಾಲಘಟ್ಟದ ಪ್ರಾಚೀನ ಶೈವ, ವೈಷ್ಣವ ದೇವಾಲಯಗಳ ಉಲ್ಲೇಖವಾಗಿರುವಂತಹದ್ದು ನನ್ನ ಗಮನ ಸೆಳೆಯಿತು. ಅದರಲ್ಲೂ ನಾನು ಹುಟ್ಟಿರುವುದು ಕೊಡಗಿನ ಕಾವೇರಿ ತಾಯಿಯ ಮಡಿಲಿನಲ್ಲಿಯೇ.  ಹಾಗಾಗಿ ನಾ ಹುಟ್ಟಿ ಬೆಳೆದ ಸ್ಥಳದ ಹೊಳೆ  ಜಗದ್ವಿಖ್ಯಾತ ನದಿಗಳ ಸಾಲಿನಲ್ಲಿ  ಒಂದು ಎನ್ನುವುದು ನನ್ನ ಆಂತರ್ಯದ ಹೆಮ್ಮೆ. ಅದರಲ್ಲೂ ಕೊಡವರು ಕಾವೇರಿ ನದಿಯೊಂದಿಗೆ  ಅವಿನಾಭಾವ ಸಂಬಂಧ ಇರಿಸಿಕೊಂಡಿದ್ದೇವೆ. ನಾನಂತೂ ತವರಿಗೆ ಹೋದಾಗಲೆಲ್ಲ ಆ ನದಿಯನ್ನು ಕಂಡು ಮಾತನಾಡಿಸಿ ಬರುತ್ತೇನೆ. ಹಾಗೆ ನನ್ನನ್ನು ಕೊಡಗಿನಿಂದ ದೂರವಿರಿಸಿದ್ದಕ್ಕೆ ನದಿಯೊಂದಿಗೆ  ಅಸಮಾಧಾನವನ್ನೂ ವ್ಯಕ್ತಪಡಿಸುತ್ತೇನೆ. ವಿಶೇಷವೆಂದರೆ ನಾನು ಮಾತನಾಡಿದಾಗೆಲ್ಲ ಕಾವೇರಿ ನದಿಯಿಂದ ತಿಳಿಗಾಳಿ ಹಾಯ್ದು ನನ್ನನ್ನು ತೀಡುತ್ತದೆ. ನಂತರ ಹಾಸನದಲ್ಲಿ ಇರುವುದರಿಂದಲ್ವೇ ಇಷ್ಟೊಂದು ಜ್ಞಾನ ಸಂಪಾದಿಸಲು ಸಾಧ್ಯವಾಗಿರುವುದು ಎಂಬ ಉತ್ತರವೂ ನನ್ನಲ್ಲೇ ಮೂಡುತ್ತದೆ. ಆ ಭಾವ ಸದಾ  ನನ್ನನ್ನು ಎಲ್ಲಾದಕ್ಕೂ ಕೃತಜ್ಞಳಾಗಿರುವಂತೆ ಮಾಡಿದೆ. ಇವುಗಳನ್ನೇ ನಾವು ಕಾವೇರಮ್ಮೆ(ಕಾವೇರಿ ತಾಯಿ)ಯ ಆಶೀರ್ವಾದ ಎನ್ನುತ್ತೇವೆ. ಹೀಗೆ  ಪ್ರಕೃತಿಯೊಂದಿಗೆ ಆತ್ಮೀಯ ಒಡನಾಟ ಇರಿಸಿಕೊಂಡಿರುವ ಕೊಡವರು ಮಾತ್ರವಲ್ಲದೆ ಕೊಡವ ಭಾಷಿಕರೆಲ್ಲರು ಯಾವುದೇ ಮಾನವ ರೂಪವಿರದ ಕಾವೇರಿ ನದಿ ಮೂಲವನ್ನೇ ಕುಲದೇವಿ ಎಂದು ಆರಾಧಿಸುವುದು. ಕಾವೇರಿ ದಕ್ಷಿಣ ಭಾರತದ ಕೃಷಿ ಪದ್ಧತಿಗೆ ಅಡಿಪಾಯ ಹಾಕಿರುವಂತಹ ನದಿಯೂ ಹೌದು. ಆ ಕಾರಣಕ್ಕೆ  ಇಲ್ಲಿನ ಜನರು ನದಿಗಳಿಗೆ ಎಷ್ಟೇ ಕೃತಜ್ಞರಾಗಿದ್ದರೂ ಸಾಲದು.
  ಈ ಹೊತ್ತಗೆಯಲ್ಲಿ ಒಂದು ಕ್ಷೇತ್ರದ ನಂತರ ಬರುವ ಕ್ಷೇತ್ರ ವಿಶೇಷತೆ ಎಂಬಂತೆ ಕ್ರಮ ವಹಿಸಿ ದಾಖಲಿಸದಿದ್ದರೂ ಕಾವೇರಿಯ ಹರಿವನ್ನು, ದೇವಾಲಯಗಳನ್ನು,  ಪುರಾಣ ಚರಿತ್ರೆಯನ್ನು, ಕಾವೇರಿ ಮತ್ತು ಇತರೆ ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟು ಮತ್ತು ಅವುಗಳ ಹಿನ್ನಲೆಗಳನ್ನೆಲ್ಲ ಸಮರ್ಥವಾಗಿ ದಾಖಲಿಸಿದ್ದಾರೆ.  ಹೇಮೆಯ ಸಂಬಂಧವನ್ನೂ ತಿಳಿಸುವ ಕಾವೇರಿ ಸಂಗಮ ಓದುಗರನ್ನು  ಕೃತಾರ್ಥರನ್ನಾಗಿಸುವಂತಿದೆ.  ರಂಗ ಚಟುವಟಿಕೆಯ  ಗೀಳಿರುವವರಿಗೆ ಪ್ರಕೃತಿಯೊಂದಿಗೆ ಅಗೋಚರ ಬಾಂಧವ್ಯ ಇದ್ದೇ ಇರುತ್ತದೆ. ಶ್ರೀಯುತ ಅನಂತರಾಜು ಅವರು ಕೂಡ ನಾಟಕವನ್ನು ಅನಂತವಾಗಿ ಪ್ರೀತಿಸುತ್ತಾರೆ ಎಂಬುದನ್ನು ಅವರ ಭಾಗವಹಿಸುವಿಕೆ ಮತ್ತು ಅವರ  ಮಾತುಗಳಿಂದಲೇ ಗ್ರಹಿಸಿದ್ದೇನೆ. ಅದಕ್ಕೆ ಸಂಬಂಧಿಸಿದಂತೆ ನಿರಂತರ ವಿಮರ್ಶೆ ಬರೆಯುವಂತಹದ್ದನ್ನು,  ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಲೇಖನಗಳನ್ನೂ ಓದಿದ್ದೇನೆ. ಹಾಗಾಗಿ ಅವರ ನಾಟಕ ಕೃತಿಯಲ್ಲಿ ಪ್ರಕೃತಿ ಪೂರಕ ವಿಚಾರಗಳನ್ನು ತಿಳಿಸುತ್ತಾ ಅವುಗಳನ್ನು  ಪೋಷಿಸಬೇಕೆಂಬ ಕಾಳಜಿ ವಹಿಸಿರುವುದೂ ಕಾಣಸಿಗುತ್ತದೆ. ಅದೇ ರೀತಿಯ ಕಾರ್ಯಕ್ರಮ ಆಯೋಜನೆಯನ್ನೂ ಮಾಡಿದ್ದಾರೆ.
“ಆಡು ಮುಟ್ಟದ ಸೊಪ್ಪಿಲ್ಲ” ಎಂಬಂತೆ ಒಂದು ರೀತಿಯಲ್ಲಿ ಸಕಲಕಲಾವಲ್ಲಭನಂತಿರುವ ಶ್ರೀಯುತರ ಜ್ಞಾನ ಸಂಪತ್ತು, ಕ್ಷೇತ್ರ ಪರ್ಯಟನೆಯಲ್ಲಿ ಅವರು  ಕಂಡುಕೊಂಡ ಸತ್ಯ ಇವೆಲ್ಲವು ಸಂಗಮ ಎನ್ನುವ ಪುಸ್ತಕದಲ್ಲಿ ಸುಂದರವಾಗಿ ದಾಖಲಾಗಿದೆ. ಇದು ಉತ್ಪ್ರೇಕ್ಷೆಯಲ್ಲ, ಅವರ ಸಾಧನೆಯ ಅನಾವರಣ ಎಂದಷ್ಟೇ ಹೇಳಬಲ್ಲೆ. ಖಂಡಿತವಾಗಿ ಇಂತಹ  ಪುಸ್ತಕಗಳು ನಿರಾಯಾಸವಾಗಿ ಎಲ್ಲರಿಗೂ ತಲುಪುವಂತಿರಬೇಕು. ಕೊನೆಯದಾಗಿ ಶ್ರೀಯುತ ಗೊರೂರು ಅನಂತರಾಜು ಅವರ ನಿತ್ಯ ನಿರಂತರ ಸಾಹಿತ್ಯ ಸೇವಾಕಾರ್ಯಕ್ಕೆ ಶುಭಾಶಯ ತಿಳಿಸುತ್ತ, ಅಭಿನಂದನೆಗಳೊಂದಿಗೆ ಸಂಗಮ ಪುಸ್ತಕ ಕುರಿತಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ ಲೇಖನವನ್ನು ಕೊನೆಗೊಳಿಸುತ್ತಿದ್ದೇನೆ.


ಮಾಳೇಟಿರ ಸೀತಮ್ಮ ವಿವೇಕ್,

Leave a Reply

Back To Top