ಕಾವ್ಯ ಸಂಗಾತಿ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ-
ನನ್ನ ವೇಷದ ನೆರಳು
ನನ್ನ-
ಪಾಪದ ಬಾವಿಯೊಳಗೆ
ಸಾವಿರಾರು ರಹಸ್ಯಗಳಿವೆ
ವಸ್ತಿ ಬಿದ್ದ ಮನಸ್ಸನ್ನು
ಪೋಸ್ಟ್ ಮಾರ್ಟಮ್
ಮಾಡಿದ್ದಾದರೆ,
ಕಾಣದ ತೂತು
ತಳದ ಸಿಂಬೆ ಕಿತ್ತಿದ್ದಾದರೆ
ಸಬೂತು ಸೋರಿ ನಾರುವುದು
ನನ್ನ ನೇಣದ ಧಿಮಾಕು
ಬಿಕನಾಸಿ ಭ್ರಮೆಯಲ್ಲಿ
ಉನ್ಮಾದಗೊಳ್ಳುತ್ತದೆ
ತೋಡಿದಷ್ಟು-
ದಗಾ ಬೇರುಗಳೆ !!
ಎದೆಯ ಹಸನು ಮಾಡಲು
ತನುತ್ವದ ರಸ ಭಯದಲ್ಲೇ
ವರ್ಜಿಸುತ್ತದೆ.
ಎಚ್ಚರ ಕಾಣದೆನ್ನ ಗುಹ್ಯದಲ್ಲಿ-
ಅನ್ಯರಿಗೆ ಬೆರಗು,
ಸಹ್ಯದಲ್ಲಿದ್ದೇನೆಂದು
ಬೆವರ ಕಲೆ ತೊಳೆಯಲು ತಿಣುಕುವುದೆಷ್ಟು?
ಜೀವಮಾನದ ನಡಿಗೆಯಲ್ಲಿ
ಗಾಯಗೊಂಡ ಅಂಡರ್ ವೇರ್ …!!
ನನ್ನ ಹೊಸ ಸುಳ್ಳಿಗೆ
ತಾಳೆಯಾಗದ ಭೀಷಣ
ನಿಟ್ಟುಸಿರು ಒಳಗೊಳಗೆ
ಭ್ರೂಣವಾಗುವುದು
ಗೋರಿಯ ಮಣ್ಣು
ಹಲ್ಕಿಸಿದು
ಎಲ್ಲವನ್ನೂ ಮುಗಿಸುವ
ಕಾಲದೊಂದಿಗೆ
ಲಯವಾಗುವುದು
ಗೊತ್ತಿದ್ದೂ…..
ಕಣ್ಣುಕಟ್ಟಿನಲಿ ಶಾಮೀಲು
ನೀವು ಹೇಗೋ…ಗೊತ್ತಿಲ್ಲ?
ಈಗಲೂ ನಾನು
ಮಗ್ಗಲು ಮುದ್ದೆ ಮಾಡಿ
ನಲುಗು-ಮುಲುಗಿನಲ್ಲಿ
ಮಾತುಗಳನ್ನು ಮಾರುತ್ತೇನೆ
ನನ್ನ ವೇಷದ ನೆರಳಿಗೆ
ಮುತ್ತೈದೆಯಂತೆ ತೆವಲು
ಏನೇನೋ ತಗಲು ಸೋಗು
ಅಗಲು ಬಗಲು
——————————-
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
Super poem talli sir
ಉತ್ತಮ ಬರವಣಿಗೆ.