ಮೊಬೈಲ್ ಫೋನು ಮತ್ತು ನಾನು-ಆದಪ್ಪ ಹೆಂಬಾ ಮಸ್ಕಿ

ವಿಶೇಷ ಲೇಖನ

ಆದಪ್ಪ ಹೆಂಬಾ ಮಸ್ಕಿ

ಮೊಬೈಲ್ ಫೋನು ಮತ್ತು ನಾನು

“ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು” ಅನ್ನೋ ಮಾತಿದೆ. ಈ ಮಾತಿನಲ್ಲಿ ಒಂದಷ್ಟು ಸತ್ಯವೂ ಇದೆ ಅನ್ನಿ. ಅದೇ ರೀತಿ ಕೆಲವರು, ಅದರಲ್ಲೂ ವಿಶೇಷವಾಗಿ ಹಿರಿಯರು, “ಈ ಮೊಬೈಲ್ ಬಂದಾಗಿಂದ ಜಗತ್ತ ಬದ್ಲಾಗಿ ಬಿಟೈತಿ ನೋಡ್ರಿ” ಅಂತನೋ….ಇನ್ನೂ ಮುಂದುವರೆದು, “ಹಾಳಾಗಿ ಹೋಗಿಬಿಟೈತಿ” ಅನ್ನುವವರೂ ಇದ್ದಾರೆ. ಅವರ ವಾದವನ್ನು ಒಂದಷ್ಟು ಮಟ್ಟಿಗೆ ಒಪ್ಪಬಹುದೇನೋ. “ಈ ಮೊಬೈಲು ಫೋನ್ ಬಂದಿಂದ ಸಂಬಂಧಗಳು ಹಾಳಾಗಿವೆ, ಮನೇಲಿರುವವರೇ ಒಬ್ರಿಗೊಬ್ರು ಮುಖ ಕೊಟ್ಟು ಚೆಂದಾಗಿ ಮಾತಾಡಲ್ಲ, ಈ ಮೊಬೈಲು ಬಹುತೇಕರ ಜೀವನವನ್ನು ಪೂರ್ತಿ ಆವರಿಸಿಕೊಂಡುಬಿಟ್ಟಿದೆ, ಈ ಮೊಬೈಲು ಏನೆಲ್ಲವನ್ನೂ ರೀಪ್ಲೇಸ್ ಮಾಡಿದೆ. ಹೆಂಡತಿಯ ಪಾಲಿಗೆ ಗಂಡನ ಜಾಗವನ್ನೂ, ಗಂಡನ ಪಾಲಿಗೆ ಹೆಂಡ್ತಿಯ ಜಾಗವನ್ನೂ ಆಕ್ರಮಿಸಿಕೊಂಡುಬಿಟ್ಟಿದೆ…… ಇನ್ನೂ ಏನೇನೋ….. ಫೈನ್ ಒಪ್ಪಬಹುದಾದದ್ದೇ. ಆದರೆ ಇದ್ಯಾವದಕ್ಕೂ ಆ ಮೊಬೈಲ್ ಹೊಣೆ ಅಲ್ಲ. ಅದರ ಅಡಿಯಾಳಂತಾಗಿರುವುದು ಮನುಷ್ಯನ ವೀಕನೆಸ್ಸೇ ವಿನಃ. ಪಾಪ ಅದರ ತಪ್ಪೇನಿದೆ ? ಅಷ್ಟಕ್ಕೂ ಮನೆ ಹಾಳು ಮಾಡಲು ಈಗದು ಬರೀ ಮಾತನಾಡುವ ಸರಕಾಗಿ ಉಳಿದಿಲ್ಲ. ಇಡೀ ಜಗತ್ತನ್ನೇ, ಕ್ಷಣಾರ್ಧದಲ್ಲಿ, ಅಂಗೈಯಲ್ಲೇ ತೋರಿಸುವ ಮಾಯಾಂಗನೆ! ಸೋ ಆ ಮಾಯಾಂಗನೆ ಬಂದ ಮೇಲೆ ವಾತಾವರಣ ಬದಲಾಗದೇ ಇರುತ್ತಾ ? ಛಾನ್ಸೇ ಇಲ್ಲ, ಬದಲಾಗಲೇ ಬೇಕು. ಅಲ್ವ. ಬದಲಾಗಿದೆ.  ನನ್ನ ಜೀವನದಲ್ಲೂ ಅವಳು ಬಂದಮೇಲೆ ಸಾಕಷ್ಟು ಬದಲಾವಣೆಗಳಾಗಿವೆ. ಬಹುತೇಕ ಬದಲಾವಣೆಗಳೂ ಪಾಸಿಟಿವ್ವೇ. ಕೆಲವೊಂದಷ್ಟು ನೆಗೆಟಿವ್ ಬದಲಾವಣೆ ಆಗಿರುವುದನ್ನೂ ಮರೆಮಾಚುವಂತಿಲ್ಲ. ಅದರಲ್ಲಿ ಮೊದಲನೇ ನೆಗೆಟಿವ್ ಬದಲಾವಣೆ ‘ನೆನಪಿನ ಶಕ್ತಿ’. ಈ ಮಾಯಾಂಗನೆ ನನ್ನ ನೆನಪಿನ ಶಕ್ತಿ ನುಂಗಿ ಹಾಕಿದವರಲ್ಲಿ ಮೊದಲಿಗಳು. ನೀವೇ ಹೇಳಿ ಮೊದಲು ಅದೆಷ್ಟು  ಜನರ ಫೋನ್ ನಂಬರ್ ಗಳು ನಮ್ಮ ಸ್ಮೃತಿ ಪಟಲದಲ್ಲಿ ಚೆನ್ನಾಗಿ ಅಚ್ಚಾಗಿರುತ್ತಿದ್ದವು ? ಈಗ ?
ಒಂದಾದರೂ ನೆನಪಿರತ್ತಾ? ಈ ಪ್ರಶ್ನೆಗೆ ಬಹುತೇಕರಿಂದ ಬರಬಹುದಾದ ಉತ್ತರ ‘ಇಲ್ಲ’. ಅನ್ನೋದೇ.  ಈ ನಂಬರ್ ನೆನಪಿಟ್ಟುಕೊಳ್ಳುವುದು ಅಂದ್ರೆ ನನ್ನ ಜೀವನದಲ್ಲಿ ನಡೆದ ಹಾಸ್ಯ ಪ್ರಸಂಗವೊಂದನ್ನು ನೆನೆಯಲೇ ಬೇಕು. ಅದೆಂದರೆ, ಈಗೊಂದು ಹದಿನೈದು ಹದಿನಾರು ವರ್ಷಗಳ ಹಿಂದಿನ ಮಾತು. ಆಗ ಅದೇ ಕೀ ಪ್ಯಾಡ್ ಫೋನುಗಳದ್ದೇ ದರ್ಬಾರು. ನನ್ನ ಬಳಿಯೂ ಒಂದಿತ್ತು. ಅದು ಬಂದ ಮರುಘಳಿಗೆಯಲ್ಲೇ ನನ್ನ ನೆನಪಿನ ಶಕ್ತಿ ಹಾರೋಯ್ತು. ಒಂದಿನ ಬೆಂಗಳೂರಿಗೆ ಹೋಗಬೇಕಿತ್ತು,  ಹೋದೆ. ಆಗಿನ್ನೂ ಈ ಮೊಬೈಲ್ ಜೊತೆಗೆ ಚಾರ್ಜರನ್ನು ನೆನಪಿಲೆ ಒಯ್ಯಬೇಕು ಎಂಬ ತಿಳುವಳಿಕೆಯಿಲ್ಲದ ಕಾಲ. ಮೊಬೈಲ್ ಒಯ್ದೆ. ಚಾರ್ಜರ್ ಬಿಟ್ಹೋಗಿದ್ದೆ. ಸಂಜೆತನಕ ಆಫೀಸ್ ಕೆಲಸ. ಸುಸ್ತು ಸುಸ್ತು.  ಸಂಜೆಯ ನಂತರ ಲಾಡ್ಜಲಿ ಬಂದು ಮಲಗಿದೆ. ಮಡದಿ ನೆನಪಾದಳು. ಮೊಬೈಲ್ ತಗೆದೆ ಸ್ವಿಚ್ಡ್ ಆಫ್…. ಪರವಾಯಿಲ್ಲ ಬಿಡಿ. ಕಾಯಿನ್ ಬೂತ್ ಗಳಿವೆ ಮಾತನಾಡಿದರಾಯಿತು ಅನ್ಕಂಡೆ. ನಂಬರ್ ನೆನಪಿಲ್ಲ! ಅರೇ ಸ್ವಂತ ಹೆಂಡ್ತಿದು!ನಂಬರ್ ನೆನಪಿಲ್ಲ, ದುರಂತ. ಆಗ ನೆನಪಾದದ್ದು ಹಿರಿಯಣ್ಣ ನಂತಹ ಗೆಳೆಯ ಮೊಹ್ಮದ್ ಶಮೀಮ್. ಯಾಕೆಂದ್ರೆ ಆತನ ನಂಬರ್ ನಲ್ಲೊಂದು ಲಾಲಿತ್ಯವಿತ್ತು ಹೀಗಾಗಿ ಆತನ ನಂಬರ್ ನನಗೆ ನೆನಪಿತ್ತು. ಆತನ ಮೊಬೈಲ್ ನಲ್ಲಿ ನನ್ನವಳ ನಂಬರ್ ಖಂಡಿತ ಇತ್ತು, ಅದು ನನಗೆ ಗೊತ್ತಿತ್ತು. ಸೀದಾ ಕಾಯಿನ್ ಬೂತ್ ಗೆ ಹೋದೆ 9945161646 ಗೆ ಕಾಲ್ ಮಾತಾಡಿದೆ ಆ ಕಡೆಯಿಂದ,
“ಹಲೋ….”
“ಅಣ್ಣ ನಾನು….”
” ಓ ಏನಪಾ ಬೆಂಗ್ಳೂರ್ ಕೆಲಸ ಮುಗೀತಾ”
“ಅಣ್ಣಾ….ಅದು ಬುಡು ಒಂದ್ ನಿಮಿಷ ಆಗಿಬುಡತೈತಿ, ಮೀಟ್ರು ಓಡಾಕತೈತೀ ಮೊದ್ಲು ನಿಮ್ ತಂಗೀ ನಂಬರ್ ಕೊಡು ನನ್ ಫೋನು ಸ್ವಿಚ್ ಆಫ್ ಆಗೈತಿ ಚಾರ್ಜರ್ ಇಲ್ಲ, ನನಗ ನಂಬರ್ ನೆನಪಿಲ್ಲ” ಅಂದೆ. ಆತ,
“ಯಾವ್ ತಂಗೀ….?”
“ನನ್ ಹೆಂಡ್ತೀನೋಪ ಅಕಿದಾ ನಂಬರ್ ಕೊಡಪಾ”
ಆ ಕಡೆಯಿಂದ ಬರೀ ನಗು.
“ಅಣ್ಣ ನಗಬ್ಯಾಡೋ ಆಮ್ಯಾಲ ನಗವಂತಿ ಮೊದ್ಲು ನನ್ ಹೆಂಡ್ತಿ ನಂಬರ್ ಕೊಡಪಾ, ಮೀಟರ್ ಓಡಾಕತೈತೋ ಅಣ್ಣ” ಅಂಗಲಾಚಿದೆ. ಅಣ್ಣ ನಗು ನಗುತ್ತಾ ನನ್ ಹೆಂಡ್ತಿ ನಂಬರ್ ಕೊಟ್ಟ.ನನ್ ಹೆಂಡ್ತೀ ನಂಬರ್ ಮರೆತಿರಬಹುದಾದ ನಾನು ಆ ಅಣ್ಣನ ನಗು ಮರೆಯೊಲ್ಲ. ಯಾಕೆಂದ್ರೆ ಆ ಅಣ್ಣನಾಗಲೀ, ಆತನ ನಗುವಾಗಲೀ ಈಗ ನಮ್ಮ ಜೊತೆ ಇಲ್ಲ. ವಯಸ್ಸಲ್ಲದ ವಯಸ್ಸಿನಲ್ಲಿ ಅಣ್ಣನ ಹೃದಯ ಸ್ತಂಬನವಾಗಿಬಿಟ್ಟಿತು. ಆ ಅಣ್ಣ ಈಗ ನೆನಪು ಮಾತ್ರ. ಎಸ್ ಮೊಬೈಲ್ ಗೆ ನಂಬರ್ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ವಿರಬಹುದು, ಆದರೆ  ಆ ನಗುವನ್ನದು ನೆನಪಿಟ್ಟುಕೊಳ್ಳಲಾರದು. ಅದಕ್ಕೆಲ್ಲವೂ ಇದೆ ಹೃದಯವೊಂದನ್ನು ಬಿಟ್ಟು.

ಇದು ಬಿಟ್ರೆ ಮೊಬೈಲ್ ಕುರಿತು ನನ್ನವು ಪಾಸಿಟಿವ್ ಅಭಿಪ್ರಾಗಳೇ. ಈ ಮೊಬೈಲ್ ಇಲ್ದೇ ಹೋಗಿದ್ರೆ ಬಹುಶಃ ನಾನೂ ಬದುಕಿರ್ತಿರಲಿಲ್ಲ ! ಶಮೀಮ್  ಅಣ್ಣನ ಜೊತೆಗೆ ಸ್ವರ್ಗದಲ್ಲಿ ಕುಳಿತು ಸುರಪಾನ ಮಾಡುತ್ತಿದ್ದೆನೇನೋ. ಏನಾಗಿತ್ತೆಂದ್ರೆ,  ಒಂದಿನ ರಾತ್ರಿ ಸಿಂಧನೂರಿನಲ್ಲಿ ಊಟ ಮಾಡಿ ನಮ್ಮೂರು ಮಸ್ಕಿಗೆ ಬೈಕ್ ಮೇಲೆ ಹೊರಟಿದ್ದೆ. ಏನಾಯ್ತೊ ಇವತ್ತಿಗೂ ನನಗೆ ಗೊತ್ತಿಲ್ಲ. ಆ್ಯಕ್ಸಿಡೆಂಟ್ ! ನಾನು ಸಾಯಬಹುದಾಗಿದ್ದ ಭೀಕರ ಆ್ಯಕ್ಸಿಡೆಂಟ್. ನನ್ನನ್ನು ಬದುಕಿಸಿದ್ದು ಇದೇ ಮೊಬೈಲ್. ಆ್ಯಕ್ಸಿಡೆಂಟ್ ಆಗಿ ಬಿದ್ದ ನನ್ನನ್ನು ಯಾರೋ ನೋಡಿದ್ದಾರೆ. ನಾನ್ಯಾರೋ ಅವರಿಗೆ ಗೊತ್ತಿಲ್ಲ. ನನ್ನ ಜೇಬು ನೋಡಿದ್ದಾರೆ ಅದರಲ್ಲಿ ಮೊಬೈಲ್ ಇದೆ. ತಗೆದು just dailed  call ನೋಡಿದ್ದಾರೆ. ನಾನು ಸಿಂಧನೂರಿನ ಪತ್ರಕರ್ತ ಮಿತ್ರ ಅಮರೇಶ್ ರಿಗೆ ಮಾತಾಡಿದ್ದು ಅಂತ ಗೊತ್ತಾಗಿದೆ. ಅವರಿಗೆ ಕಾಲ್ ಮಾಡಿ ನನಗೆ ಆ್ಯಕ್ಸಿಡೆಂಟ್ ಆದ ವಿಷಯ ತಿಳಿಸಿದ್ದಾರೆ. ಗೆಳೆಯ ಅಮರೇಶ ಮೊದಲೇ ಪತ್ರಕರ್ತ. ಕೂಡಲೇ ತನ್ನ ಮೊಬೈಲ್ ನಿಂದ 108 ಗೆ ಕಾಲ್ ಮಾಡಿದ್ದಾರೆ.  ನನ್ನನ್ನು ಬಳ್ಳಾರಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ನನ್ನನ್ನು ಬದುಕಿಸಿದ್ದಾರೆ. ಇಂದು ನಾನು ಈ ನಾಲ್ಕಕ್ಷರ ಬರೆಯುತ್ತಿದ್ದೇನೆಂದರೆ ಮಿತ್ರ ಅಮರೇಶನನ್ನು, ಈ ಮೊಬೈಲ್ ನ್ನೂ ನೆನೆಯಲೇ ಬೇಕಲ್ಲವೇ? ನಾನ್ಯಾವತ್ತೂ ಅವರಿಗೆ ಋಣಿ.

ನಾನು ಈ ಮೊದಲೇ ಹೇಳಿದಂತೆ ಮೊಬೈಲ್ ಫೋನ್ ಈಗ ಬರೀ ಮಾತನಾಡುವ ಸರಕಾಗಿ ಉಳಿದಿಲ್ಲ. ಅದೊಂದು ಮಾಹಿತಿ ಕಣಜ. ಉಪಯೋಗಿಸುವವನಿಗೆ ಅದರ ಲಿಮಿಟ್ಟು ಗೊತ್ತಿರಬೇಕಷ್ಟೇ. ಈಗಿನದು ಮೊಬೈಲ್ ಅದರಲ್ಲೂ ಸ್ಮಾರ್ಟ್ ಫೋನ್ ಗಳ ಯುಗ. ಅರೆ ಕ್ಷಣದಲ್ಲಿ ಅಂಗೈಯಲ್ಲೇ ಮಾಹಿತಿ ನೀಡುವ ಮಿತ್ರನವನು. ಹೀಗಾಗಿ ಎಲ್ಲೆಲ್ಲೂ….ವ್ಯಾಪಿಸಿದ್ದಾನೆ. ಅದೆಷ್ಟರ ಮಟ್ಟಿಗೆ ಎಂದರೆ. ಇಲ್ಲಿ ಲಘು ತಮಾಷೆಗೆ ಬುದ್ಧ ಮತ್ತು ಕಿಸಾಗೋತಮಿಯರ ಪ್ರಸಂಗ ನೆನಪಿಸಿಕೊಳ್ಳಬೇಕೆನಿಸುತ್ತೆ- ಕಿಸಾಗೋತಮಿ, ಪ್ರಾಣ ಕಳೆದು ಕೊಂಡಿದ್ದ ತನ್ನ ಕಂದನ ದೇಹವನ್ನು ತಂದು ಬುದ್ಧನ ಮುಂದೆ ಹಾಕುತ್ತಾಳೆ. “ಏನೆಲ್ಲ ಪವಾಡಗಳನ್ನು ಮಾಡಿರುವ ನೀನು, ಕೇಳಿದವರಿಗೆ ಎಲ್ಲವನ್ನೂ ಕೊಡುವ ನೀನು,  ನನ್ನ ಮಗನಿಗೆ ಜೀವ ಕೊಡು, ಅವನನ್ನು ಬದುಕಿಸು” ಎಂದು ಬುದ್ಧನಿಗೇ ಸಾವಾಲೆಸೆಯುತ್ತಾಳೆ. ಅದಕ್ಕೆ ಬುದ್ಧ ಮುಗುಳು ನಗೆ ನಕ್ಕು, “ಆಯ್ತಮ್ಮ ನಾನು ನಿನ್ನ ಮಗನನ್ನು ಬದುಕಿಸುತ್ತೇನೆ, ಆದರೆ ಸಾಸಿವೆ ಕಾಳು ಬೇಕು” ಅನ್ನುತ್ತಾನೆ.
“ಅಷ್ಟೇನಾ? ಈಗ ತಂದೆ” ಎಂದು ಓಡಿ ತರಲು ತವಕಿಸುತ್ತಾಳೆ ಕಿಸಾಗೋತಮಿ.‌ ಅಲ್ಲಿ ಬುದ್ಧ ಕತೆಗೊಂದು ಟ್ವಿಸ್ಟ್ ಕೊಡುತ್ತಾನೆ. “ಅಮ್ಮಾ ಸಾಸಿವೆ ಕಾಳು ಅಂದ್ರೆ ಸಾಧಾರಣ ಮನೆಯ ಸಾಸಿವೆ ಕಾಳಲ್ಲ, ಸಾವಿಲ್ಲದ ಮನೆ ಸಾಸಿವೆ ಕಾಳನ್ನು ತರಬೇಕಮ್ಮ” ಅಂತಾನೆ. ಅಲ್ಲಿ ಕಿಸಾಗೋತಮಿ ವಿಫಲವಾಗ್ತಾಳೆ. ಆದ್ರೆ ಸಾವು ಯಾರಿಗೂ ತಪ್ಪಿದ್ದಲ್ಲ ಎಂದು ತಿಳಿದುಕೊಳ್ಳುವಲ್ಲಿ ಸಫಲವಾಗ್ತಾಳೆ. ನಾನ್ಯಾಕೆ ಈ ಪ್ರಸಂಗವನ್ನು ಎಳೆದು ತಂದೆ ಅಂದ್ರೇ…. ಅಕಸ್ಮಾತ್ ಬುದ್ಧ ಈಗಿದ್ದಿದ್ದರೇ…. ಕಿಸಾಗೋತಮಿಗೆ “ಸಾವಿಲ್ಲದ ಮನೆಯ ಸಾಸಿವೆ ಕಾಳಿನ ಬದಲು……  “ಸ್ಮಾರ್ಟ್ ಫೋನ್ ಇಲ್ಲದ ಮನೆಯ ಸಾಸಿವೆ ಕಾಳು ತಗೊಂಡ್ ಬಾಮ್ಮ” ಅಂತ ಹೇಳ್ತಿದ್ದನೇನೋ….. ತಮಾಷೆ ಎನಿಸಿದರೂ ಈ ಮೊಬೈಲ್ ಫೋನ್ ಅಷ್ಟು ನಮ್ಮನ್ನು ಆವರಿಸಿದೆ, ನಮ್ಮ ಸುತ್ತ ವ್ಯಾಪಿಸಿದೆ. ಅದರ ಒಳಿತು ಅರಿತು ಉಪಯೋಗಿಸಿದರೆ ಸಧ್ಯ ಅದರಷ್ಟು ಸುಂದರ ಸೇವಕ;ಸೇವಕಿ ಬೇರಾರಿಲ್ಲ.
ಅಲ್ವೇ ?.


 ಆದಪ್ಪ ಹೆಂಬಾ ಮಸ್ಕಿ

One thought on “ಮೊಬೈಲ್ ಫೋನು ಮತ್ತು ನಾನು-ಆದಪ್ಪ ಹೆಂಬಾ ಮಸ್ಕಿ

Leave a Reply

Back To Top