‘ಬಹು ಭಾಷಾ ಸೌಹಾರ್ದ ಸಾಹಿತಿ’ ಪ್ರೊ. ಧರಣೇಂದ್ರ ಕುರಕುರಿಯವರ ಬದುಕು ಬರಹದ ಮೇಲೆ ಬೆಳಕು ಚೆಲ್ಲುವ ಕಿರು ಲೇಖನಸುಭಾಷ್ ಹೇಮಣ್ಣಾ ಚವ್ಹಾಣ’

ಪರಿಚಯ ಸಂಗಾತಿ

ಬಹು ಭಾಷಾ ಸೌಹಾರ್ದ ಸಾಹಿತಿ’

ಪ್ರೊ. ಧರಣೇಂದ್ರ ಕುರಕುರಿಯವರ ಬದುಕು ಬರಹ

ಸುಭಾಷ್ ಹೇಮಣ್ಣಾ ಚವ್ಹಾಣ’

 ‘ಜಗದೇಳಿಗೆ ಆಗುವುದಿದೆ ಕನ್ನಡದಿಂದೆ’ ಎಂದು ಸಾರಿದ ವರಕವಿ ಬೇಂದ್ರೆ, ‘ಕನ್ನಡದ ಕುಲ ಪುರೋಹಿತ’,- ‘ಕರ್ನಾಟಕ ಗತವೈಭವ’ದ ಕರ್ತೃ ಆಲೂರು ವೆಂಕಟರಾಯರು, ‘ಹಚ್ಚೇವು ಕನ್ನಡ ದೀಪ’ ನಾಡ ಗೀತೆ ಮೊಳಗಿಸಿದ ಕವಿ ಡಿ. ಎಸ್. ಕರ್ಕಿ, ಸುಪ್ರಭಾತ ಕವಿ ಗಂಗಪ್ಪ ವಾಲಿ, ಸಿದ್ದಪ್ಪ ಕಂಬಳಿ, ‘ಕನ್ನಡ ಕಾವಲು ಸಮಿತಿ’ ಸಂಸ್ಥಾಪಕ ಪಾಟೀಲ ಪುಟ್ಟಪ್ಪ ‘ಉಸಿರಾಗಲಿ ಕನ್ನಡ’ ಎಂದು ಕನ್ನಡಾಭಿಮಾನ ಬಡಿದೆಬ್ಬಿಸಿದ ಚೆಂಬೆಳಕಿನ ಕವಿ ಚೆನ್ನವೀರ ಕಣವಿ, ಸಂಗೀತ ಸರಸ್ವತಿ ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ಗುಡಗೇರಿ ಹೀಗೆ ಅನೇಕ ಜನ ಸಾಹಿತ್ಯ – ಸಂಗೀತ – ಸಾಂಸ್ಕೃತಿಕ ಕ್ಷೇತ್ರದಲ್ಲಿ ಧಾರಾನಗರಿ ಸಾಹಿತ್ಯದ ತವರೂರು ಧಾರವಾಡದ ನೆಲದದನಿಯ ಮೂಲಕ ಮಹತ್ಸದಾನೆ ಮಾಡಿ ನಾಡು ನುಡಿ ಸಂಸ್ಕೃತಿಯ ಅಸ್ತಿತ್ವವನ್ನು ಮೆರೆಸಿದ್ದಾರೆ.

                   ಮಾತೃ ಭಾಷೆಯ ಹಿರಿಮೆ – ಗರಿಮೆಯನ್ನು ಸಾರುವ ಸಾರ್ವಭೌಮ ಭಾಷೆ ಕನ್ನಡದ ಅಸ್ತಿತ್ವಕ್ಕೆ ಮೆರಗು ತರಲು ಇದುವರೆಗೂ 14 ಧಾರವಾಡ ಹಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು ಮುನ್ನುಡಿ ಬರೆದಿದ್ದು ಅದರ ಮುಂದುವರೆದ ಭಾಗವಾಗಿ ಸಂತ ಸಿದ್ದಾರೂಢರ ಕರ್ಮಭೂಮಿ ಹುಬ್ಬಳ್ಳಿಯ ಸವಾಯಿ ಗಂಧರ್ವರ ಸಭಾಭವನದಲ್ಲಿ 24, 25 ಮಾರ್ಚ 2೦23ರ ಎರಡು ದಿನ ನಡೆದ ಧಾರವಾಡ ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕುರುಕುರಿಯವರು ಸಾರಥ್ಯ ವಹಿಸಲು ಹುಬ್ಬಳ್ಳಿ ಶಹರ ತಾಲೂಕು ಕಸಾಪ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಇವರು ಪ್ರೊ ಧರಣೇಂದ್ರ ಕುರಕುರಿ ಅವರ ಹೆಸರನ್ನು ಸೂಚಿಸಿದರು, ಅದಕ್ಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿ ಸಾಲಿ ಅನುಮೋದನೆ ಮೇರೆಗೆ ಸದರಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಧಾರವಾಡ ತಾಲೂಕು ಮುಗದ ಗ್ರಾಮದ ವಿಶ್ರಾಂತ ಪ್ರಾಧ್ಯಾಪಕರಾದ ಹಿರಿಯ ಅನುವಾಕ ಸಾಹಿತಿ ಪ್ರೊ. ಧರಣೇಂದ್ರ ಕುರಕುರಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಮಹೇಶ ಜೋಷಿ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ, ಗೌರವಕಾರ್ಯದರ್ಶಿಯಾದ ಕೆ. ಎಸ್. ಕೌಜಲಗಿ, ೦8 ತಾಲ್ಲೂಕಿನ ಕಸಾಪ ಪದಾಧಿಕಾರಿಗಳು ಹಾಗೂ ಸಾಹಿತ್ಯ ಪೋಷಕ ಬಂಧುಗಳು ಸರ್ವಾನುಮತದಿಂದ ಆಯ್ಕೆಮಾಡಿದ್ದು; ಮೇರು ಸಾಹಿತಿಗೆ ಸಂದ ಯುಕ್ತ ಗೌರವವಾಗಿದೆ. ಶಾಂತವೀರ ಬೆಟಗೇರಿ, ಶ್ರೀಧರ ಹೆಗಡೆ ಭದ್ರನ, ಪ್ರಭು ಕುಂದರಗಿ, ಸಿ. ಎಂ ಚನ್ನಬಸಪ್ಪ, ಸಿದ್ಧರಾಮ ಹಿಪ್ಪರಗಿ, ಡಾ. ಶರಣಮ್ಮ ಗೊರೇಬಾಳ, ಈಶ್ವರ ಜವಳಿ, ಬಾಬಾಜಾನ ಮುಲ್ಲಾ, ಡಾ. ಎನ್. ಎಮ್ ಮಕಾನದಾರ, ರಮ್ಜಾನ್ ಕಿಲ್ಲೇದಾರ, ರವಿರಾಜ ವೆರ್ಣೇಕರ, ಡಾ. ಜಿನದತ್ತ ಅ ಹಡಗಲಿ, ಬಿ. ಜಿ. ಬಾರ್ಕಿ, ಎಸ್. ಎಮ್. ದಾನಪ್ಪನವರ, ಮಹಾಂತೇಶ ನರೇಗಲ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಸಾಹಿತಿ ಧರಣೇಂದ್ರ ಕುರಕುರಿಯವರ ಕೌಟುಂಬಿಕa ಹಿನ್ನೆಲೆ, ಬಾಲ್ಯ, ಶಿಕ್ಷಣ ಮತ್ತು ವೃತ್ತಿ ಚಿತ್ರಣ

            ಕನ್ನಡ ಮತ್ತು ಹಿಂದಿ ಅವಳಿ ಭಾಷೆಗಳ ಅನುವಾಕರಾಗಿ ಎರಡು ಭಾಷೆಗಳ ಸಾಹಿತ್ಯ ಸಂಪರ್ಕಕೊಂಡಿಯಾಗಿರುವ ಖ್ಯಾತ ಕವಿ, ಲೇಖಕ, ವಿಮರ್ಶಕ ಧರಣೇಂದ್ರ ಕುರಕುರಿಯವರು ಧಾರವಾಡ ತಾಲೂಕು ಮಲೆನಾಡಿನ ಸೆರಗಂಚಿನ ಸುಂದರ ಪರಿಸರ ಮುಗದ ಹಳ್ಳಿಯ ಕೃಷಿಕ ಪರಿವಾರದ ರಾಯಪ್ಪ – ಮಲ್ಲಮ್ಮ ದಂಪತಿಗಳ ಉದರದಲ್ಲಿ 1 ಎಪ್ರಿಲ್ 1942 ರಲ್ಲಿ ಜನಿಸಿದ ಇವರು ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಪದವಿ ಮತ್ತು ಸ್ನ್ಯಾತಕೋತ್ತರ ಶಿಕ್ಷಣವನ್ನು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಪೂರೈಸಿದ್ದಾರೆ, 5 ವರ್ಷಗಳ ಕಾಲ ಭಾರತೀಯ ಕುಟುಂಬ ಯೋಜನಾ ಸಂಸ್ಥೆಯಲ್ಲಿ ಹಿರಿಯ ಶಿಕ್ಷಣಾಧಿಕಾರಿಯಾಗಿ, ಮುಂದೆ ಹಾನಗಲ್ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ 25 ವರ್ಷ ಸೇವೆ ಸಲ್ಲಿಸಿ, ನಂತರದಲ್ಲಿ ಶಿರಸಿಯ ಎಂ. ಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಹಿಂದಿ ಭಾಷಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 31 ಮಾರ್ಚ್ 2೦೦೦ ರಲ್ಲಿ ಸೇವಾ ನಿವೃತ್ತಿ ಹೊಂದಿ; ಪ್ರವೃತ್ತಿ ಮೂಲಕ ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸುತಿದ್ದಾರೆ.

ಸಾಹಿತಿ ಧರಣೇಂದ್ರ ಕುರಕುರಿಯವರ ಪ್ರಕಟಣೆಗೊಂಡ ಕಾವ್ಯ ಗ್ರಂಥಗಳು

                   ಹರಕು ಪುಸ್ತಕ, ನೀರಾಗ ಕುಂತೇನ ನೆನಕೊಂತ, ಹೊಸಾ ಕಾಲ ಬರತಾವ, ನಾ ಕವಿ ಅಲ್ಲ, ಕುಂಚ ಮತ್ತು ಬಣ್ಣ, ಶಬ್ದವಾಯಿತು, ನಕ್ಷತ್ರ ಮತ್ತು ಆಯ್ದ ಕವನಗಳು ಮುಂತಾದ ಕವನ ಸಂಕಲನಗಳಲ್ಲಿ ಸಮಾಜದ ಆಯಾಮಗಳನ್ನು ಸೆರೆಹಿಡಿದಿರುವ ರೀತಿ ಸಾಹಿತ್ಯ ಲೋಕದಲ್ಲಿ ಅನುಕರಣೀಯವಾಗಿದೆ. 1972 ರಿಂದ 2011 ರ ವರೆಗೆ ಒಂದು ಅಂಕಣ ಬರಹವೂ ಸೇರಿ ಒಟ್ಟು 9 ಕಾವ್ಯ ಗ್ರಂಥಗಳು ಪ್ರಕಟಗೊಂಡಿವೆ ಇವುಗಳಲ್ಲಿ ಕೆಲವು ಪದವಿ ವರ್ಗಗಳಿಗೆ ಪಠ್ಯ ಪುಸ್ತಕವೂ ಆಗಿವೆ. ಇವರ ಆಯ್ದ ಕವನಗಳು ೦4 ವರ್ಷಗಳ ಬಿ. ಎಸ್ಸಿ ಪದವಿಗೆ ಪಠ್ಯವಾಗಿದ್ದು ಉಲ್ಲೇಖಾರ್ಹ.

ಸಾಹಿತಿ ಧರಣೇಂದ್ರ ಕುರುಕುರಿ ಅವರು ಕನ್ನಡದಿಂದ ಹಿಂದಿಗೆ ಅನುವಾದಿಸಿದ ಗ್ರಂಥಗಳು

           ‌‌        ಅಂಗಾರ ಕಿ ಚೋಟೀ ಪರ (ಮೂಡ್ನಾಕೂಡು ಚಿನ್ನಸ್ವಾಮಿಯವರ ಕನ್ನಡ ಕವಿತೆಗಳು), ಕಠಪುತಲಿ ಕಾ ವಿದ್ರೋಹ (ನಾಟಕ), ಚಾವುಂಡರಾಯ ವೈಭವ (ಕಾದಂಬರಿ), ಪಿ. ಲಂಕೇಶ ಅವರ ಕಥೆಗಳ ಅನುವಾದ (ಪತ್ಥರ್ ಪಿಘಲನೆ ಕಿ ಫಡಿ, ಓಂ ಣಮೋ (ಶಾಂತಿನಾಥ ದೇಸಾಯಿ ಅವರ ಕಾದಂಬರಿ), ಜುರ್ಮಾನ (ಬಸವರಾಜ ಸಾದರ ಕತೆಗಳು), ಶೇರ್ ಬಜಾರ ಮೇಂ ಗಂಗಾ (ಕೆ. ಆರ್. ಪ್ರಕಾಶರ ನಾಟಕ), ಉದ್ಧಾರ ಏವಂ ಬಜಾರ (ದಿವಾಕರ ಹೆಗಡೆ ಅವರ ನಾಟಕ), ದೃಷ್ಟಿ (ನಾ. ಮೊಗಸಾಲೆ ಅವರ ಕಾದಂಬರಿ), ಸೀತಾಯನ (ಚಂಪಾ ಅವರ ಕವಿತೆಗಳು), ಜಡೆಂ (ವೆಂಕಟೇಶ ಮಾಚನೂರು ಅವರ ಕಥೆಗಳು), ಬಗಾವರ ಏವಂ ಅನ್ಯ ಕಹಾನಿಯಾಂ (ಕೇಶವ ರೆಡ್ಡಿ ಹಂದ್ರಾಳರ ಕಥೆಗಳು), ಆಜ ಕಿ ಕನ್ನಡ ಕವಿತಾಯೆಂ, ಕನ್ನಡದಿಂದ ಹಿಂದಿ ಭಾಷೆಗೆ ೧೭ ಗ್ರಂಥಗಳನ್ನು ಅನುವಾದ ಮಾಡಿ ಕನ್ನಡ ಸಾಹಿತ್ಯವನ್ನು ರಾಷ್ಟ್ರ ಮಟ್ಟದಲ್ಲಿ ಪಸರಿಸಿರುವ ಹೆಸರಾಂತ ಅನುವಾದಕರಾಗಿದ್ದಾರೆ.

ಸಾಹಿತಿ ಧರಣೇಂದ್ರ ಕುರುಕುರಿ ಅವರು ಹಿಂದಿಯಿಂದ ಕನ್ನಡಕ್ಕೆ ಭಾಷಾಂತರಿಸಿದ ಕೃತಿಗಳು

                      ಮಾತೃಭಾಷೆ ಕನ್ನಡ ಮತ್ತು ವೃತ್ತಿ ಭಾಷೆ ಹಿಂದಿಯಲ್ಲಿ ಪ್ರಖರ ಪರಿಣಿತಿ ಹೊಂದಿದ್ದ ಕುರಕುರಿಯವರು ನಾವು ಮೆಚ್ಚಿದ ಹಿಂದಿ ಕಥೆಗಳು, ಪ್ರಿಯ ಶಬನಂ (ದೇವೇಶ ಠಾಕೂರರ ಕಾದಂಬರಿ), ನಿರಾಲಾ (ಡಾ.ಪರಮಾನಂದ ಶ್ರೀವಾತ್ಸವರ ಕೃತಿ), ಕಲಿಕತೆ: ವಯಾ ಬೈಪಾಸ್ (ಅಲಕಾ ಸರಾವಗಿ ಅವರ ಕಾದಂಬರಿ), ಜೈನ ಧರ್ಮ ಏನು ಹೇಳುತ್ತದೆ (ಆಚಾರ್ಯ ಮಹಾಶ್ರವಣರ ಪ್ರವಚನಗಳು ಸಂಗ್ರಹಾನುವಾದ), ಮೋಹನದಾಸ (ಉದಯ ಪ್ರಕಾಶರ ಕಾದಂಬರಿ), ಜಾಮಕಿದಾಸ ತೇಜುಪಾಲ ಮ್ಯಾನ್ಸನ್ (ಅಲಕಾ ಸರವಗಿ ಅವರ ಕೃತಿ), ಅಂತ (ಬಿ.ವಿ.ವೈಕುಂಠರಾಜು ಅವರ ಕಾದಂಬರಿ), ೦7 ಗ್ರಂಥಗಳನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿ, ಕನ್ನಡ ಅನುವಾದ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದು; ಒಂದು ಮುರುಕು ಕುರ್ಚಿ (ಬಿ. ವಿ. ವೈಕುಂಠರಾಜು ಅವರ ಕಾದಂಬರಿ) ಕನ್ನಡದಿಂದ ಆಂಗ್ಲಭಾಷೆಗೂ ಸಹ ಭಾಷಾಂತರಿಸುವ ಮೂಲಕ ಅಮೋಘ ಸಾಹಿತ್ಯ ಸೇವೆಯನ್ನು ಮಾಡಿದ್ದಾರೆ. ಒಟ್ಟು 31 ಅನುಪಮ ಗ್ರಂಥಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.

ಸಾಹಿತಿ ಧರಣೇಂದ್ರ ಕುರುಕುರಿಯವರ ಸಾಹಿತ್ಯಿಕ ಮೌಲ್ಯ ಜಪರಪ ಕಾಳಜಿ

                     ಕುರುಕುರಿಯವರ ಕಾವ್ಯದಲ್ಲಿ ನವ್ಯ, ನವೋದಯ, ಬಂಡಾಯ, ವಿಡಂಬನೆ, ಜಾನಪದ ಮತ್ತು ವೈಚಾರಿಕತೆಯ ಛಾಯೆ ಎದ್ದು ಕಾಣುತ್ತದೆ.             ಕನ್ನಡದ ವಿಶಿಷ್ಟ ಕವಿಯಾಗಿ ಕಾವ್ಯದಲ್ಲಿ ಶೋಷಿತರ, ದುರ್ಬಲ ವರ್ಗದವರ ಪರ ದ್ವನಿ ಎತ್ತಿದ್ದಾರೆ. ಹಲವಾರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ಮತ್ತು ಪ್ರಬಂಧಗಳ ಮಂಡನೆ ಮಾಡುದ್ದಾರೆ. ಸಾಹಿತ್ಯದ ಗೋಷ್ಠಿಗಳ ಅಧ್ಯಕ್ಷತೆ‌ ವಹಸಿದ್ದು ಹಲವಾರು ಕವಿತೆಗಳು ಹಿಂದಿಯಲ್ಲದೆ ತೆಲಗು, ತಮಿಳು ಭಾಷೆಗೂ ಅನುವಾದವಾಗಿವೆ. ಆಕಾಶವಾಣಿಯಲ್ಲಿ ಚಿಂತನ, ಸಂದರ್ಶನ ಸೇರಿ ಹಲವಾರು ಕಾರ್ಯಕ್ರಮಗಳ ಮೂಲಕ ಸೌಹಾರ್ದ ಸಮಾಜದ ನಡೆಗೆ ಕೊಡುಗೆ ನೀಡಿದ್ದಾರೆ.

*ಸಾಹಿತಿ ಧರಣೇಂದ್ರ ಕುರುಕುರಿಯವರ aಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿ, ಪುರಸ್ಕಾರ, ಗೌರವ ಸನ್ಮಾನಗಳು *

                ಕೇಂದ್ರೀಯ ಹಿಂದಿ ನಿರ್ದೇಶನಾಲಯದ ರಾಷ್ಟ್ರೀಯ ಪ್ರಶಸ್ತಿ (1995), ಬಾಲಕೃಷ್ಣ ಸಾಹಿತ್ಯ ಪ್ರಶಸ್ತಿ, ಕದಂಬ ಸೇವಾ ರತ್ನ ಪ್ರಶಸ್ತಿ, ದಕ್ಷಿಣ ಭಾರತ ಜೈನ ಸಭೆಯ ಬಾಹುಬಲಿ ಸಾಹಿತ್ಯ ಪ್ರಶಸ್ತಿ (2015), ಕಾಂತಾವರ ಸಾಹಿತ್ಯ ಪ್ರಶಸ್ತಿ (2015), ಚಾವುಂಡರಾಯ ಪ್ರಶಸ್ತಿ (2೦15), ಕರ್ನಾಟಕ ಸಾಹಿತ್ಯ ಅಕ್ಯಾಡಮಿಯ ಸಾಹಿತ್ಯಶ್ರೀ ಪ್ರಶಸ್ತಿ (2೦17), ಜೀವಮಾನದ ಹಿಂದಿ – ಕನ್ನಡ ಅನುವಾದ ಕಾರ್ಯಕ್ಕಾಗಿ ಉತ್ತರ ಪ್ರದೇಶದ ಹಿಂದಿ ಸಂಸ್ಥಾನವು ಎರಡುವರೆ ಲಕ್ಷ ಮೊತ್ತದೊಂದಿಗೆ “ಸೌಹಾರ್ದ ಸಮ್ಮಾನ” ಪ್ರಶಸ್ತಿ ನೀಡಿ 28 ನವೆಂಬರ್ 2021 ರಂದು ಲಖನೌದಲ್ಲಿ ಗೌರವಿಸಿದೆ. 2014 ರಲ್ಲಿ ಸಿರ್ಸಿ ಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ  ಮತ್ತು 2015 ರಲ್ಲಿ ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷತೆ ವಹಿಸಿ ನುಡಿ ಸೆವೆ ಮಾಡಿರುವ ಶ್ರೀಯುತರು ಪ್ರಸ್ತುತ 2೦23ರಲ್ಲಿ ಧಾರವಾಡ ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತಾ ಗೌರವ ಪಡೆದಿದ್ದು ಸಮಯೋಚಿತವಾಗಿದೆ. ಹಿರಿಯ ಸಾಹಿತಿಗಳು, ವಿಮರ್ಶಕರಾದ ಶ್ರೀಯುತರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ೧೭ ಪ್ರಶಸ್ತಿ ಪಡೆದ ಖ್ಯಾತಿ ಇವರಿಗಿದೆ.

ಸಾಹಿತಿ ಧರಣೇಂದ್ರ ಕುರುಕುರಿಯವರ ಸಾರ್ವಜನಿಕ ಕ್ಷೇತ್ರದ ಸೇವೆ

                     1996ರಲ್ಲಿ ಸಿರ್ಸಿಯಲ್ಲಿ ರತ್ನತ್ರಯ ಜೈನ ಸಂಘದ ಮಾರ್ಗದರ್ಶಕರಾಗಿ, ಕೆ ಎಚ್ ಬಿ ಕಾಲೋನಿ ನಿವಾಸಿಗಳ ಸಂಘ (1996 – 2೦೦9) ಅಧ್ಯಕ್ಷರಾಗಿ, ಶ್ರವಣಬೆಳಗೊಳ ಜೈನ ಅಧ್ಯಯನ ಸಂಸ್ಥೆಯ ಸದಸ್ಯರಾಗಿ, ಸೋಂದಾ ಜೈನ ಮಠ 2002 – 2003 ಅಧ್ಯಕ್ಷರಾಗಿ, 2008ರಲ್ಲಿ ನಡೆದ 28ನೇ ರಾಜ್ಯಮಟ್ಟದ ಕೃಷಿಮೇಳದ ಪ್ರದಾನ ಕಾರ್ಯದರ್ಶಿಯಾಗಿ, ಸೌಹಾರ್ದಯುತ ಕಾರ್ಯ ಮಾಡಿರುವ ಶ್ರೀಯುತರು ಆಸ್ಟ್ರೇಲಿಯಾದ ಅಡಿಲೇಡ್ ನಗರದಲ್ಲಿ “ಸ್ಕೂಲ್ ಆಫ್ ಲ್ಯಾoಗವೆಜಿಸ್” ಸಂಸ್ಥೆಯ ಮನವಲಿಸಿ ಕನ್ನಡ ಶಾಲೆಯನ್ನು ಉದ್ಘಾಟನೆ ಮಾಡಿದ ಶ್ರೇಯಸ್ಸು ( 2012 ) ಇವರಿಗೆ ಸಲ್ಲುತ್ತದೆ.

▫️

             ಏತನ್ಮಧ್ಯ1970 ರಲ್ಲಿ ಈಗಿನ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಕರಗುದ್ರಿ ಗ್ರಾಮದ ಗೌರವಾನ್ವಿತ ಗೌಡಕಿ ಮನೆತನದ ಬಸನಗೌಡ ಇವರ ಕಿರಿಯ ಪುತ್ರಿ ವಿಜಯಲಕ್ಷ್ಮಿಯರನ್ನು ಮದುವೆಯಾಗಿ 5೦ ವಸಂತಗಳನ್ನು ಪೂರೈಸಿದಂತೆ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿಯೂ 50ನೇ ವರ್ಷ ಪ್ರಾರಂಭವಾಗಿದೆ. ಇವರ ಶ್ರೇಯಸ್ಸಿನ ಹಿಂದೆ ಸಹಜವಾಗಿ ಇವರ ಧರ್ಮಪತ್ನಿಯ ಪ್ರಭಾವ ಖಂಡಿತ ಇದೆ. ಶರಣರ ವಚನ ಕಾಣ್ಕೆಯಂತೆ ಇಚ್ಛೆಯನರಿವ ಸತಿ, ಬೆಚ್ಚನೆಯ ಸುಂದರ ಪರಿಸರದಲ್ಲಿರುವ ಮನೆ, ಖ್ಯಾತಿ, ಸಿರಿ ಸಂಪತ್ತು ಜೊತೆಗೆ ಅಪಾರವಾದ ಬಂಧು – ಬಳಗ, ಸ್ನೇಹಿತರು – ಹಿತೈಶಿಗಳನ್ನು ಹೊಂದಿದ್ದು, ಈ ದಂಪತಿಗಳಿಗೆ ಒಬ್ಬ ಪುತ್ರ, ಹಾಗು ಒಬ್ಬ  ಪುತ್ರಿ ಮತ್ತು ಪ್ರೀತಿಯ ಮಮ್ಮೊಕ್ಕಳು ಇವರ ಸಂತೋಷವನ್ನು, ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪ್ರಾದ್ಯಾಪಕ, ಖ್ಯಾತ ಹಿರಿಯ ಕವಿ, ಸಾಹಿತಿ, ಬರಹಗಾರ, ಅನುವಾದಕ, ವಿಮರ್ಶಕ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಲೇಖಕ ಮತ್ತು 82 ರ ಹರೆಯದಲ್ಲೂ ಅತ್ಯಂತ ಕ್ರೀಯಾಶೀಲ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಸಾಹಿತ್ಯ ಲೋಕಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಹಿರಿಯ ಚೇತನ. ಕುರಕುರಿಯವರ ಸಾಹಿತ್ಯ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬರಲೆಂದು ಶುಭ ಕಾಮನೆಯನ್ನು ಕೋರುವೆ

————————————–

ಸುಭಾಷ್ ಹೇಮಣ್ಣಾ ಚವ್ಹಾಣ 

Leave a Reply

Back To Top