ಧಾರಾವಾಹಿ-ಅಧ್ಯಾಯ –8

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಕಲ್ಯಾಣಿಗೆ ಅರ್ಥಮಾಡಿಸಲು ನಾಣುವಿನ ಹರಸಾಹಸ

ಕಲ್ಯಾಣಿಯವರು ಅಡುಗೆ ಮನೆಯ ಸೂರನ್ನೇ ನೋಡುತ್ತ ನಿಡಿದಾದ ಉಸಿರನ್ನು ಹೊರಚೆಲ್ಲಿ ಪತಿಯೆಡೆಗೆ ನೋಡಿದರು. ಕಲ್ಯಾಣಿಯ ಈ ರೀತಿ ನಾಣುವಿಗೆ ಹೊಸತು.ಏಕೆ ತನ್ನ ಪತ್ನಿ ಇಷ್ಟು ಚಿಂತೆಯಲ್ಲಿ ಇರುವಂತೆ ತೋರುವಳು?

ಪತ್ನಿಯ ಬಾಡಿದ ಮುಖ ಕಣ್ಣುಗಳ ಕಾಂತಿ ಹೀನತೆ ಅವರು ಕಂಡವರೇ ಅಲ್ಲ.  ಇನ್ನೂ ಪತಿಯ ಸಹನೆ ಪರೀಕ್ಷಿಸುವುದು ಬೇಡ ಎಂದು ತೀರ್ಮಾನಿಸಿ ಗಂಟಲು ಸರಿ ಪಡಿಸಿಕೊಂಡು ಹೇಳಿದರು…. ” ನನಗೆ ಏನು ಹೇಳಬೇಕೆಂದು ತೋರುತ್ತಾ ಇಲ್ಲ. ಇಲ್ಲಿಯ ತೋಟ ಮನೆ ಎಲ್ಲವನ್ನೂ ಮಾರಿ ನಾವು ಕರ್ನಾಟಕದಲ್ಲಿ ಹೋಗಿ ನೆಲೆಸುವುದು ನನಗೇಕೋ ಸರಿಯಾದ ನಿರ್ಧಾರ ಎಂದು ಅನಿಸುತ್ತಾ ಇಲ್ಲ.  ಎಲ್ಲವನ್ನೂ  ಕೂಲಂಕುಷವಾಗಿ  ಯೋಚಿಸದೇ ನೀವು ಇಲ್ಲಿಯವರೆಗೂ ಯಾವುದೇ ತೀರ್ಮಾನ ಕೈಗೊಂಡವರಲ್ಲ ಈಗ ಏಕೆ ಇಂತಹ ಆಲೋಚನೆ”…  ಎಂದು ಕೇಳಿದರು.  ತಾನು ನೋಡಿದಂತೆ ಅಲ್ಲಿ ಹೋಗಿ ತೋಟ ನೋಡಿದ್ದರೆ ಇಂತಹ ಮಾತುಗಳು ಹೇಳುತ್ತಾ ಇರಲಿಲ್ಲವೇನೋ ಇವಳನ್ನು ಏನು ಹೇಳಿ ಅರ್ಥ ಮಾಡಿಸಲಿ ಎಂಬ ಯೋಚನೆಗೆ ಒಳಗಾದರು. ಕಲ್ಯಾಣಿಯ ದುಗುಡ ನಾಣುವಿಗೆ ಅರ್ಥವಾಗದೇ ಇರಲಿಲ್ಲ. ವ್ಯರ್ಥವಾಗಿ ಇಲ್ಲಸಲ್ಲದ ಯೋಚನೆ ಮಾಡಿ ಹೀಗೆ ಹೇಳುತ್ತಿದ್ದಾಳೆ ಎಂದು ಅವರಿಗೆ ಅನಿಸಿತು…. “ನೀನು ವೃಥಾ ಇಲ್ಲಸಲ್ಲದ್ದನ್ನು ಕಲ್ಪಿಸಿಕೊಂಡು ಏನೇನೋ ಊಹಿಸಿಕೊಳ್ಳುತ್ತಾ ಇರುವುದರಿಂದ ನಿನಗೆ ಹೀಗೆ ಅನಿಸುತ್ತಿದೆ….ನಾವು ಅಲ್ಲಿ ಹೋದರೆ ಏನೂ ತೊಂದರೆ ಆಗದು ಸರಿಯಾಗಿ ಆಲೋಚಿಸಿ ನೋಡು ಎಂದರು ನಾಣು”….. ಹುಟ್ಟಿ ಬೆಳೆದ ನಾಡನ್ನು ತೊರೆಯಲು ಇವರಿಗೇಕೆ ಇಷ್ಟು ಆತುರ ಸ್ವಲ್ಪವೂ ಬೇಸರ ಆಗದೇ? ಎಂದು ಯೋಚಿಸುತ್ತಲೇ ಹೇಳಿದರು….” ಇದು ನಾವು ಹುಟ್ಟಿ ಬೆಳೆದ ರಾಜ್ಯ ನಮ್ಮ ಬಾಲ್ಯದ ನೆನಪುಗಳು ಇಲ್ಲಿ ಇವೆ…. ನಮಗೆ ಜೀವನ ಕಟ್ಟಿಕೊಟ್ಟ ನಾಡು ಇದು. ನಮ್ಮ ಭಾಷೆ ನೆಲ ಎಲ್ಲವನ್ನೂ ಬಿಟ್ಟು ಬೇರೆ ರಾಜ್ಯದಲ್ಲಿ ಹೋಗಿ ಹೇಗೆ ವಾಸ ಮಾಡುವುದು?”…. ನಾಣು ನಕ್ಕು….

” ಸ್ವಲ್ಪ ಅಭ್ಯಾಸ ಆಗುವವರೆಗೂ ಹಾಗೇ ಅನಿಸುತ್ತದೆ…. ಕಾಲಕ್ರಮೇಣ ನಾವು ಕೂಡಾ ಅಲ್ಲಿನ ಪರಿಸರಕ್ಕೆ ಒಗ್ಗಿಕೊಳ್ಳುತ್ತೇವೆ…. ನೀನು ನಿನ್ನ ತವರುಮನೆ ಹುಟ್ಟೂರಾದ ಅಂಬಲಪುಳ ತೊರೆದು ನನ್ನನ್ನು ವಿವಾಹವಾಗಿ ಪತ್ತನಮ್  ತಿಟ್ಟಕ್ಕೆ ಬರಲಿಲ್ಲವೇ?…. ಇಲ್ಲಿಗೆ ಬಂದಾಗ ಇದು ಕೂಡಾ ನಿನಗೆ ಹೊಸ ಊರು ಪರಿಸರ ಆಗಿತ್ತು ಅಲ್ಲವೇ? 

ಪತಿಯ ಈ ಮಾತು ಕೇಳಿ ಕಲ್ಯಾಣಿ ಹೇಳಿದರು… ” ಪತ್ತನಮ್ ತಿಟ್ಟ ನನ್ನ ಊರಿಂದ ಸುಮಾರು ಅರವತ್ತೈದು ಕಿಲೋಮೀಟರ್ ಇರಬಹುದು….ಅಲ್ಲಿಗೂ ಈಗ ನಾವು ಹೋಗಬೇಕು ಎಂದು ಇರುವ ಪ್ರದೇಶಕ್ಕೂ ಎಲ್ಲಿಯ ಸಾಮ್ಯತೆ? ನನ್ನ ತವರೂರು ಇಲ್ಲಿಯೇ ಹತ್ತಿರ ಹಾಗಾಗಿ ನನಗೆ ಹೆಚ್ಚಿನ ವ್ಯತ್ಯಾಸ ಅನಿಸಲಿಲ್ಲ…. ಅದೂ ಅಲ್ಲದೆ ಹಬ್ಬ ಹರಿದಿನ ಹಾಗೂ ಹೆರಿಗೆ ಬಾಣಂತನಕ್ಕೆ ಹೋಗಿ ಬರುತ್ತಾ  ಇದ್ದೆ….ಮಕ್ಕಳು ಬೆಳೆದು ಶಾಲೆಗೆ ಹೋಗಲು ಪ್ರಾರಂಭವಾದ ನಂತರ ರಜಾ ದಿನಗಳಲ್ಲಿ ಹೋಗಿ ಬರುತ್ತಾ ಇದ್ದುದರಿಂದ ನನಗೆ ಇಲ್ಲಿಯ ಪರಿಸರಕ್ಕೆ ಬೇಗ ಒಗ್ಗಿಕೊಳ್ಳಲು ಸಾಧ್ಯವಾಯಿತು…. ಇದು ಹಾಗಲ್ಲ ಆಳಕ್ಕೆ ಬೇರೂರಿ ಬೆಳೆದ ಮರವನ್ನು ಬುಡ ಸಮೇತ ಕಿತ್ತು ಬೇರೆಡೆ ಕೊಂಡೊಯ್ದು ನೆಡುವ ಹಾಗೇ ಇದೆ….ನಮ್ಮತನವನ್ನೇ ಇಲ್ಲಿ ಪೂರ್ಣವಾಗಿ ಬಿಟ್ಟು ಹೋದಂತೆಯೇ ಅಲ್ಲವೇ?”….ಹಾಗಾಗಿ ನನಗೆ ಇಲ್ಲಿಂದ ಪರ ಊರಿಗೆ ಹೋಗಿ ವಾಸ ಮಾಡಲು ಮನಸ್ಸು ಒಪ್ಪುತ್ತಾ ಇಲ್ಲ”… ಎಂದರು

.

ನನ್ನ ವಿಷಯ ಹಾಗಿರಲಿ ನಮ್ಮ ಮಕ್ಕಳು ಇಲ್ಲಿ ಹುಟ್ಟಿ ಆಡಿ ಬೆಳೆದವರು. ಗೆಳೆಯರ ಜೊತೆಗೂಡಿ ಕಳೆದವರು…ಇಲ್ಲಿನ ಗಿಡ ಮರ ಪ್ರಾಣಿ ಪಕ್ಷಿ ಪರಿಸರ ಎಲ್ಲವೂ ಅವರಿಗೆ ಪ್ರಿಯವಾದುದು…. ಕೂಗಳತೆಯಲ್ಲಿ ಅವರ ಪ್ರಿಯ ಗೆಳೆಯ ಗೆಳತಿಯರ ಮನೆ ಇರುವುದು… ಇಲ್ಲಿಯೇ ಹತ್ತಿರದಲ್ಲೇ ಗಂಡು ಮಕ್ಕಳು ಕಲಿಯುವ ಶಾಲೆ ಇರುವುದು…. ಅವರಿಗೆ ಚಿರಪರಿಚಿತ ಸ್ಥಳ ಇದು…ಅಲ್ಲಿ ಹೋದರೆ ಅವರ ವಿದ್ಯಾಭ್ಯಾಸ ಮುಂದುವರೆಯುವುದು ಹೇಗೆ?…. ಭಾಷೆ ಊರು ಪರಿಸರ ಎಲ್ಲವೂ ಹೊಸತು…. ಇಲ್ಲಿ ಸೆಕೆಯ ವಾತಾವರಣ ಇದ್ದರೆ ಅಲ್ಲಿ ಬಹಳ ಚಳಿಯ ವಾತಾವರಣ ಎಂದು ನೀವೇ ಹೇಳಿದಿರಿ…. ಮಕ್ಕಳು ಇನ್ನೂ ಚಿಕ್ಕವರು…. ಹೆಣ್ಣು ಮಕ್ಕಳಿಗೆ ಇಲ್ಲಿಯೇ ಒಳ್ಳೆಯ ಸಂಬಂಧ ನೋಡಿ ಮಾಡುವೆ ಮಾಡುವುದು ಬೇಡವೇ?…. ಇಲ್ಲಿ ನಿಮ್ಮ ಹಾಗೂ ನನ್ನ ಎಲ್ಲಾ ನೆಂಟರು ಇಷ್ಟರು ಇರುವರು ಅದು ಬಿಟ್ಟು ನಾವೇ ಬೇರೆಲ್ಲೋ ಹೋಗಿ ಇದ್ದರೆ ನಮ್ಮ ಕಷ್ಟ ಸುಖಕ್ಕೆ ಯಾರು ಇರುತ್ತಾರೆ…. ಇದೆಲ್ಲಾ ವಿಷಯಗಳನ್ನು ನೀವು ಯೋಚಿಸಿರುವಿರಾ?”

ನಾಣು ಹೇಳಿದರು “ಇದೆಲ್ಲವೂ ಕೂಡಾ ನನ್ನ ಗಮನದಲ್ಲಿ ಇದೆ ಆದರೆ ನಾವು ಅಲ್ಲಿನ ತೋಟ ಕೊಂಡು ಕೊಂಡರೆ ಅದರಲ್ಲಿ ನಷ್ಟವೇನೂ ಇಲ್ಲ…..ನೀನು ಈ  ಎಲ್ಲಾ ಚಿಂತೆಯನ್ನು ಬಿಡು ಮಕ್ಕಳು ಬೇಗ ಹೊಂದಿಕೊಳ್ಳುವರು ಬದಲಾವಣೆಗೆ ಹೆದರಿ ಹೀಗೆ ನೀನು ಹೇಳಿದರೆ ಹೇಗೆ? ಅವರಿಗೆ ಅಲ್ಲಿಯೂ ಶಾಲೆಗಳು ಇವೆ…. ಭಾಷೆ ಕಲಿಯಲು ಮೊದಲು ಕಷ್ಟ ಆಗಬಹುದು ಆದರೆ ನಮ್ಮ ಮಕ್ಕಳು ಚುರುಕು ಬೇಗನೆ ಕಲಿಯುವರು…. ಅದೇನು ಮನುಷ್ಯರು ವಾಸಿಸದ ಪ್ರದೇಶವೆಂದು ತಿಳಿದುಕೊಂಡೆಯಾ? ನಾನು ಅಲ್ಲಿನ ತೋಟವನ್ನು ಕೊಂಡುಕೊಳ್ಳಲು ತೀರ್ಮಾನಿಸಿದ್ದೇನೆ…. ನಿನ್ನ ಅಭಿಪ್ರಾಯ ಏನು ಎಂದು ತಿಳಿದುಕೊಳ್ಳಲು ಕೇಳಿದೆ…. ನನಗೆ ಆ ತೋಟ ಇಷ್ಟವಾಯಿತು…. ಮಕ್ಕಳಿಗೂ ಎಲ್ಲವನ್ನೂ ತಿಳಿ ಹೇಳಿ ಅವರನ್ನು ಒಪ್ಪಿಸು…. ನಾನು ಒಮ್ಮೆ ತೀರ್ಮಾನಿಸಿದರೆ ಎರಡು ಮಾತಿಲ್ಲ ಎಂದು ನಿನಗೆ ತಿಳಿದಿದೆ…ಆದಷ್ಟು ಬೇಗ ಇಲ್ಲಿನ ನಮ್ಮ ತೋಟ ಮನೆ ಎಲ್ಲಾ ಮಾರಿ ಅಲ್ಲಿಗೆ ಹೋಗೋಣ….ಅಷ್ಟು ಚೆಂದದ ತೋಟ ನಮ್ಮ ಕೈ ತಪ್ಪಿ ಹೋದೀತು ನಾವು ಹೀಗೆ ತಡ ಮಾಡಿದರೆ…. ಎಲ್ಲರಿಗೂ ಬೇಕಾದ ಎಲ್ಲ ವ್ಯವಸ್ಥೆಯೂ ಅಲ್ಲಿದೆ….ಇಲ್ಲಿಗಿಂತ ದೊಡ್ಡ ತೋಟವು ನಮ್ಮದಾಗುತ್ತದೆ. ನಮ್ಮವರು ನಮ್ಮ ಸಹಾಯಕ್ಕೆ ಅಲ್ಲೂ ಇದ್ದಾರೆ…. ವೃಥಾ ಚಿಂತೆ ಮಾಡಬೇಡ…. ಆದಷ್ಟು ಬೇಗ ಎಲ್ಲವೂ ತಯಾರು ಮಾಡಬೇಕಿದೆ…. ನೀನು ಎಂದಿಗೂ ನಾನು ಹೇಳಿದ ಯಾವುದೇ ವಿಷಯಗಳಲ್ಲಿ ಎದುರು ಹೇಳಿದವಳು ಅಲ್ಲ ಇಂದೇಕೆ ಹೀಗೆ ಕಲ್ಯಾಣಿ? ನನಗೆ ತಿಳಿದಿದೆ ನೀನು ಎದುರು ಹೇಳುತ್ತಾ ಇಲ್ಲ ನಿನ್ನ ಮನ ಸ್ವಲ್ಪ ದುಗುಡದಲ್ಲಿದೆ ಹಾಗಾಗಿ ಹೀಗೆಲ್ಲಾ ಯೋಚಿಸುತ್ತಾ ಇರುವೆ….ಸ್ವಲ್ಪ ದಿನಗಳಲ್ಲಿ ನೀನೂ ಕೂಡಾ ಈ ಎಲ್ಲಾ ಬದಲಾವಣೆಗೆ ಹೊಂದಿಕೊಳ್ಳುವೆ.”

ಇಷ್ಟು ಹೇಳಿ ನಾರಾಯಣನ್ ಚಾಯ್ ಕುಡಿದು ತಿಂಡಿ ತಿಂದು ಹೊರ ಹೋಗಲು ತಯಾರಾದರು. ಹೋಗುವ ಮೊದಲು ಪತ್ನಿಯನ್ನು ಕರೆದು….” ಕಲ್ಯಾಣಿ ಆದಷ್ಟು ಬೇಗ ಮಕ್ಕಳಿಗೂ ನಾವು ಕರ್ನಾಟಕಕ್ಕೆ ಹೋಗಿ ನೆಲೆಸುವ ಬಗ್ಗೆ ಹೇಳಿ ಮನವರಿಕೆ ಮಾಡಿಕೊಡು…. ನೀನು ಹೇಳಿದರೆ ಅವರು ಖಂಡಿತಾ ಅರ್ಥಮಾಡಿ ಕೊಳ್ಳುವರು”…. ಎಂದು ಹೇಳಿ ಹೊರ ನಡೆದರು. ಪತಿ ಹೋದ ದಿಕ್ಕಿನೆಡೆಗೆ ನೋಡುತ್ತಾ ಕಲ್ಯಾಣಿ ಸ್ವಲ್ಪ ಹೊತ್ತು ನಿಂತರು. ನಂತರ ಅಡುಗೆ ಮನೆಗೆ ಬಂದು ಮಕ್ಕಳಿಗೆ ತಿಂಡಿ ಮಾಡಲು ತೊಡಗಿದರು. ಅವರಿಗೆ ಯಾವ ಕೆಲಸದಲ್ಲೂ ಆಸಕ್ತಿ ಇಲ್ಲದಂತೆ ತೋರಿತು. ತನಗೇ ಹೀಗೆ ಅನಿಸುತ್ತಾ ಇರುವಾಗ ಪಾಪ ಮಕ್ಕಳಿಗೆ ಇನ್ನು ಹೇಗೆ ಆದೀತು. ಏನೇ ಆಗಲಿ ಪತಿಯು ಹೇಳಿದ್ದನ್ನು ಮಕ್ಕಳಿಗೆ ಹೇಳಿ ಅರ್ಥ ಮಾಡಿಸಬೇಕು. ಇದಲ್ಲದೇ ಬೇರೆ ದಾರಿಯಿಲ್ಲ ಎಂದು  ಯೋಚಿಸುತ್ತಾ ಬೇಗನೆ ತಿಂಡಿ ಮಾಡಿ ಮಕ್ಕಳು ಎದ್ದು  ಬರುವುದನ್ನೇ ಕಾಯುತ್ತಾ ಕುಳಿತರು. ಹೆಣ್ಣು ಮಕ್ಕಳು ಇಬ್ಬರೂ ಬಂದರು. ಅಮ್ಮನ ಬಾಡಿದ ಮುಖ ನೋಡಿ….

” ಏನಾಯ್ತು ಅಮ್ಮ”….ಎಂದು ಒಕ್ಕೊರಲಿನಿಂದ ಕೇಳಿದರು.

ಕಲ್ಯಾಣಿಗೆ ಮಾತೇ ಹೊರಡಲಿಲ್ಲ ಮಕ್ಕಳಿಗೆ ಏನು ಹೇಳಿ ಅರ್ಥ ಮಾಡಿಸಲಿ? ನಾನು ಹೇಳುವ ವಿಷಯವನ್ನು ಅವರು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ? ಆದರೂ ಹೇಳಲೇ ಬೇಕಲ್ಲ. ಇವರಿಗೆ ಅರ್ಥ ಆಗುವ ಹಾಗೆ ಹೇಳುವ ಪ್ರಯತ್ನ ಮಾಡುತ್ತೇನೆ ಎಂದು ತೀರ್ಮಾನಿಸಿದರು.


ರುಕ್ಮಿಣಿನಾಯರ್

ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು

Leave a Reply

Back To Top