ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಯಾವುದು ಅನೈತಿಕತೆ?

ನೈತಿಕ ಅನೈತಿಕಗಳ ಬಗ್ಗೆ ಮಾತನಾಡುವಾಗ ನಾವು ತುಂಬಾ ಜಾಗರೂಕರಾಗಿ ಇರಬೇಕು. ಕಾರಣ ಇದನ್ನು ಮಾತನಾಡುವ ನೈತಿಕ ಹಕ್ಕು ನಮಗೆ ಇರಬೇಕು ಅಲ್ಲವೇ? ಅನೈತಿಕತೆಯನ್ನು ಮೆರೆದ ವ್ಯಕ್ತಿಗೆ ನೈತಿಕತೆಯ ಬಗ್ಗೆ ಮಾತನಾಡಲು ನೈತಿಕತೆ ಇರುವುದೇ? ಹಾಗೆಯೇ ನೈತಿಕತೆಯನ್ನು ಹೊತ್ತು ಬದುಕಿದ ವ್ಯಕ್ತಿಗೆ ಅನೈತಿಕತೆ ಎಂದರೆ ಆಗದು. ಅವನು ಅನೈತಿಕತೆಯ ಬಗ್ಗೆ ಬರೆಯಲು ಹೋಗಲಾರ ಅಲ್ಲವೇ?
   ನೈತಿಕ ಜೀವನ ಸವೆಸಬೇಕು, ಅನೈತಿಕತೆ ಪಾಪ ಕೃತ್ಯ, ಅನೈತಿಕ ಕಾರ್ಯ ಮಾಡಬಾರದು ಎಂದು ಎಲ್ಲಾ ಮನುಷ್ಯರೂ ಬೋಧಿಸುತ್ತಾರೆ ಆದರೆ ಎಲ್ಲರೂ ಮಾಡುವುದು ತಮಗೆ ಸುಖ ನೀಡುವ, ಖುಷಿ ಕೊಡುವ ಕಾರ್ಯಗಳನ್ನು ಮಾತ್ರ. ಪರರ ಬಗ್ಗೆ ಯಾರೂ ಯೋಚನೆ ಮಾಡುವುದೇ ಇಲ್ಲ.  ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಸಂತಸದಿಂದ ಕಳೆಯುವ ಕಾರ್ಯ ಎಲ್ಲರೂ ಮಾಡುತ್ತಾರೆ. ಅದನ್ನು ನೈತಿಕವಾಗಿ ಮಾಡುತ್ತಾ ಬದುಕುವ ಗ್ರೇಟ್ ಅನ್ನಿಸಿ ಕೊಳ್ಳುತ್ತಾನೆ ಅಲ್ಲವೇ?
  ನಾನಿಂದು ನೈತಿಕತೆಯ ಬಗ್ಗೆ ಹೇಳ ಬೇಕೆಂದರೆ ಪರರಿಗೆ ಸಹಾಯ, ಕಷ್ಟಕ್ಕೆ ಸಹಾಯ ಹಸ್ತ, ಇತರರ ಮನಸ್ಸು ನೋಯಿಸದೆ ಇರುವುದು, ಭಯ ಭಕ್ತಿ, ಕಾಳಜಿ, ಪ್ರೀತಿ, ಸ್ನೇಹ, ಪರರ ಮನಸ್ಸಿಗೆ ನೋವು,ದುಃಖ ಕೊಡದೆ ಇರುವುದು, ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ, ಸಾಂಸಾರಿಕ  ಹಿಂಸೆ ಮಾಡದೇ ಬದುಕುವುದೇ ನೈತಿಕ ಜೀವನ. ಹಾಗಾದರೆ ಅನೈತಿಕತೆ ಎಂದರೆ ಏನು?


   ನಮ್ಮ ಜೊತೆಗೆ ನಮಗಾಗಿ ಬದುಕುವವರು ಯಾರು ಇದ್ದಾರೋ ಅವರ ಮನಸ್ಸನ್ನು ಮತ್ತು ಕಷ್ಟವನ್ನು ಅರಿತುಕೊಳ್ಳದೆ ಅವರಿಗೆ ನೋವು ಕೊಡುವುದು, ಹಿಂಸೆ ಕೊಡುವುದು, ಸದಾ ಅವರನ್ನು ತುಚ್ಛೀಕರಿಸಿ ಮಾತನಾಡುವುದು, ನಮ್ಮ ಮನೆಯವರಿಗೆ ಸದಾ ಕಿರಿಕಿರಿ ಉಂಟು ಮಾಡುವುದು, ಮಾನಸಿಕವಾಗಿ ಅವರನ್ನು ಕುಗ್ಗಿಸುವುದು, ದೈಹಿಕ ಹಾಗೂ ಮಾನಸಿಕ ಹಲ್ಲೆ, ಕೆಟ್ಟ ಪದಗಳನ್ನು ಬಳಸಿ ಅವರನ್ನು ಹೀಗಳೆಯುವುದು, ಅಲ್ಲದ, ಇಲ್ಲದ ಸಂಬಂಧಗಳನ್ನು ಜೋಡಿಸಿ ಕೊಡುವುದು, ಅವರನ್ನು ತಪ್ಪಾಗಿ ಅರ್ಥೈಸಿ ಕೊಳ್ಳುವುದು, ಮನೆಗೆ ಕಷ್ಟಪಟ್ಟು ದುಡಿದು ತಂದು ಹಾಕಿದರೂ ಅವರ ಬಗ್ಗೆ ಖುಷಿ, ಸಂತೋಷ, ಧನ್ಯವಾದ ವ್ಯಕ್ತ ಪಡಿಸದೆ ಕೊಟ್ಟಷ್ಟು ಸಾಲದು, ಇನ್ನೂ ಬೇಕು ಎಂಬ ಅತ್ಯಾಸೆ, ದುರಾಸೆ, ಪರರನ್ನು ವಿನಾಕಾರಣ ದ್ವೇಷಿಸುವುದು, ಗಂಡ ಅಥವಾ ಹೆಂಡತಿ, ಮಕ್ಕಳಿಗೆ ಸದಾ ನೋವು, ಬೇಸರ ಕೊಡುತ್ತಾ ಇರುವುದು, ಅದರಿಂದ ಅವರು ಸಂಸಾರದಿಂದ ವಿಮುಖರಾಗುವುದು ಮಾತ್ರವಲ್ಲ, ನಮಗೆ ನಿಜವಾದ ಪ್ರೀತಿ ಎಲ್ಲಿ ಸಿಗುತ್ತದೆ ಎಂದು ಹುಡುಕಿಕೊಂಡು ಹೋಗುವಷ್ಟು ಮನೆಯಲ್ಲಿ ನೋವು ಕೊಡುವುದು,ತಾಳ್ಮೆ ಇದ್ದಷ್ಟು ಸಹಿಸಿ ಕೊಂಡರೂ ಮತ್ತೆ ಮತ್ತೆ ತಾಳ್ಮೆ ಪರೀಕ್ಷಿಸುವುದು, ದೂರ ಹೋದ ಪತಿ ಅಥವಾ ಪತ್ನಿ ಕಷ್ಟ ಪಟ್ಟು ಸಂಸಾರಕ್ಕಾಗಿ ದುಡಿದು ಮನೆಗೆ ನೆಮ್ಮದಿಗಾಗಿ ಮತ್ತು ಪ್ರೀತಿ ಬಯಸಿ ಬಂದಾಗ ಅವರಿಗೆ ಪ್ರೀತಿ ಕೊಡದೆ ನೋವು ಕೊಡುವುದು, ಸದಾ ಜಗಳವಾಡುತ್ತಲೇ ಇರುವುದು,ಸಂಶಯ ಪ್ರವೃತ್ತಿ ಬೆಳೆಸಿಕೊಳ್ಳುವುದು, ತೀಕ್ಷ್ಣವಾದ ಮಾತುಗಳಿಂದ ನಮ್ಮ ಪ್ರೀತಿ ಪಾತ್ರರನ್ನು ಚುಚ್ಚಿ ಚುಚ್ಚಿ ಮಾತನಾಡಿ ಅವರಿಗೆ ನೋವು ಕೊಡುವುದು, ನಮ್ಮ ಕರ್ತವ್ಯವನ್ನು ಮರೆತು ಇತರರ ಬಗ್ಗೆ ಯೋಚಿಸುವುದು, ಋಣಾತ್ಮಕ ಆಲೋಚನೆಗಳು ಕುಟುಂಬದಲ್ಲಿ ನಮಗೂ, ನಮ್ಮನ್ನು ಪ್ರೀತಿಸುವ ನಮ್ಮ ಬಾಳ ಸಂಗಾತಿಗೆ ನಿತ್ಯ ನೋವು ಕೊಡುವುದು ಅನೈತಿಕತೆ ಅಲ್ಲದೆ ಮತ್ತೇನು?
  ಇನ್ನು ಅನೈತಿಕ ಸಂಬಂಧ. ಹಣಕ್ಕಾಗಿ, ದುರಾಸೆಯ ಬುದ್ದಿಗಾಗಿ, ತನ್ನ ಸ್ವಾರ್ಥಕ್ಕಾಗಿ ಸಂಸಾರದಲ್ಲಿ ಖುಷಿಯಾಗಿ ಬದುಕುತ್ತಿರುವ ಬೇರೆಯವರ ಬದುಕಿನೊಳಗೆ ಮಾನಸಿಕ, ದೈಹಿಕ, ಸಾಮಾಜಿಕವಾಗಿ ನುಗ್ಗಿ ಅವರು ಅವರ ಸಂಸಾರಕ್ಕಾಗಿ ದುಡಿದ ಹಣವನ್ನು ಅವರ ಸಂಸಾರಕ್ಕೆ ಸಿಗಲು ಬಿಡದೆ ಪರರು ತಿಂದು, ಅವರ ಸಾಂಸಾರಿಕ, ದೈಹಿಕ, ಮಾನಸಿಕ, ಆರ್ಥಿಕ ನೆಮ್ಮದಿಯನ್ನು ಹಾಳು ಮಾಡುವುದು ಕೂಡ ಅನೈತಿಕತೆ. ಅನೈತಿಕ ಮನಸ್ಸು ಸದಾ ಸ್ವಾರ್ಥ ಹಾಗೂ ತನಗೆ ಬೇಕಾದದ್ದು ನನಗೆ ಸಿಗಬೇಕು ಎನ್ನುವ ಭಾವನೆ ಹೊಂದಿರುತ್ತದೆ. ಅದು ಸರ್ವರೂ ಖುಷಿಯಾಗಿ, ಸುಖ ಸಂತೋಷದಿಂದ ಬದುಕಲಿ ಎಂದು ಯೋಚಿಸುವ ಬದಲಾಗಿ ಈ ಪ್ರಪಂಚದ ಒಳ್ಳೆಯದು ಎಲ್ಲವೂ ನನಗೆಯೇ ಸಿಗಬೇಕು, ಎಲ್ಲರದ್ದೂ ನನಗೆ ಬರಬೇಕು ಇತ್ಯಾದಿ ಸ್ವಾರ್ಥ ಚಿಂತನೆಯನ್ನು ಮಾತ್ರ ಹೆಚ್ಚಿಸಿ ಪರರಿಗೆ ನೋವು ತರುತ್ತದೆ.
  ಅನೈತಿಕತೆ ಎಂದರೆ ನೈತಿಕ ಅಲ್ಲದ್ದು. ಯಾವುದು ಅನೈತಿಕ, ಯಾವುದು ನೈತಿಕ ಎಂದು ನಿರ್ಧರಿಸುವ ಮನಸ್ಸು, ಬುದ್ದಿ ಮಾನವನಿಗೆ ಇದೆ. ಅದನ್ನು ಯಾರೂ ಹೇಳಿ ಕೊಡಬೇಕಾಗಿ ಇಲ್ಲ. ನಾನು ಮಾಡುವುದು ತಪ್ಪು ಕಾರ್ಯ, ಹೇಗೆ ಮಾಡಬಾರದು ಎಂದು ಅವನ ಹೃದಯ ತಪ್ಪಾದಾಗಲೆಲ್ಲ  ಸದಾ ಎಚ್ಚರಿಸುತ್ತಲೇ ಇರುತ್ತದೆ. ಆದ್ದರಿಂದ ಅನೈತಿಕವಾಗಿ ಬದುಕುವ ಯಾವುದೇ ವ್ಯಕ್ತಿ ತನ್ನ ಹೃದಯದ ಭಾವನೆಗಳನ್ನು ಕೊಂದುಕೊಂಡು ಬದುಕುತ್ತಾ ಇರುತ್ತಾನೆ.
  ಅನೈತಿಕತೆ ಎಂದರೆ ಸಮಾಜಕ್ಕೆ ಏನು ಒಪ್ಪುವುದಿಲ್ಲ, ನಮ್ಮ ಬದುಕಲ್ಲಿ ನಾವು ಮಾಡುವ ಯಾವ ಕಾರ್ಯ ಪರರಿಗೆ ನೋವು ತರುತ್ತದೆ ಇದೇ ಅಲ್ಲವೇ? ಒಬ್ಬಳು ಮಡದಿ ತನ್ನ ಪ್ರೀತಿಯ ಪತಿಗೆ ಯಾವಾಗಲೂ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದು ಮನೆಗೆ ಹೋದಾಗಲೆಲ್ಲ ಅವನನ್ನು ತೀಕ್ಷ್ಣ ಮಾತಿನಿಂದ ನೋವು ಕೊಡುತ್ತಾ ದೂಷಿಸುತ್ತಾ, ಬೇರೆ ಹುಡುಗಿಯರ ಜೊತೆ ಛೇಡಿಸುತ್ತಾ, ಅವನಿಗೆ ನೋವನ್ನೆ ಕೊಡುತ್ತಾ ಇದ್ದರೆ, ಬೇಸತ್ತ ಅವನು ಇನ್ನೊಂದು ಗೆಳತಿಯಾಗಿ ಹುಡುಕುತ್ತಾ ಇರುತ್ತಾನೆ. ಇದು ಅವನ ಸಂತಾಸಕ್ಕಾಗಿ ಮಾತ್ರ. ಇದು ಮಹಿಳೆಗೂ ಅನ್ವಯಿಸುತ್ತದೆ. ಪತಿ ತನ್ನ ಮಡದಿಯನ್ನು ನಂಬದೆ ಅವಳ ಮೇಲೆ ಸದಾ ಕೆಟ್ಟ ರೀತಿಯಲ್ಲಿ ದಬ್ಬಾಳಿಕೆ ಮಾಡುತ್ತಾ ಬಂದರೆ ಗಂಡ ಎನ್ನುವ ಕಾರಣಕ್ಕೆ ಒಂದು ಹಂತದವರೆಗೆ ಆ ಅನೈತಿಕತೆಯನ್ನು ಅವಳು ಸಹಿಸಬಹುದು.ಸಹನೆಗೂ ಮಿತಿ ಇದೆ ಅಲ್ಲವೇ? ಗಂಡಸರು ತಮ್ಮ ಆದರೆ ಗೆಳೆಯರ ಜೊತೆ ಮನೆಯಿಂದ ಹೊರಗೆ ಸಮಯ ಕಳೆಯಬಹುದು, ಬಾರಲ್ಲಿ ಹೋಗಿ ಕುಳಿತು ಕುಡಿದು ನೋವು ಮರೆಯಬಹುದು. ಆದರೆ ಮಹಿಳೆ ಮನೆಯಿಂದ ಹೊರ ಹೋಗಿ ತಡವಾಗಿ ರಾತ್ರಿ ಮನೆಗೆ ಬರುವ ಸಂಪ್ರದಾಯ 90% ಭಾರತೀಯರಲ್ಲಿ ಇಲ್ಲ. ತುಂಬಾ ಹಣವಂತರು, ಹೊರ ದೇಶದಿಂದ ಬಂದವರು, ಯಾವುದಕ್ಕೂ ನಾವು ಹೆದರುವುದಿಲ್ಲ ಎಂದು ಇರುವ ಮಹಿಳೆಯರು ಮಾತ್ರ ಈ ರೀತಿ ಮಾಡಬಲ್ಲರು. ಸಾಧಾರಣ, ಮಧ್ಯಮ ವರ್ಗದ ಹೆಣ್ಣು ಮಕ್ಕಳು ದುಡಿದರೂ ಕೂಡ ಮನೆಯಿಂದ ಯಾರದೋ ಜೊತೆ ನಿತ್ಯ ಹೊರ ಹೋಗಿ ಬದುಕನ್ನು ಎಂಜಾಯ್ ಮಾಡಿ ಬರುವ ಪರಿಪಾಠ ಇರದು. ಕಾರಣ ಅವರಿಗೆ ಮನೆ, ಮಕ್ಕಳ ಆರೋಗ್ಯ ಕ್ಷೇಮದ ಜವಾಬ್ದಾರಿ ಇರುತ್ತದೆ. ಜವಾಬ್ದಾರಿಯನ್ನು ನಿಭಾಯಿಸುವ ಬದಲಾಗಿ ತನ್ನ ಸ್ವಾರ್ಥ ನೋಡುತ್ತಾ, ಮಡದಿಗೆ ತನ್ನ ಜವಾಬ್ದಾರಿ ವರ್ಗಾಯಿಸಿ ತಾನು ಕುಡಿದು ತೂರಾಡುವವರು ಹೆಚ್ಚಾಗಿ ಪುರುಷರೇ ಆಗಿರುತ್ತಾರೆ. ಈಗೀಗ ಹಣದಲ್ಲಿ ಸ್ಥಿತಿವಂತರು ಮತ್ತು ಯಾವುದಕ್ಕೂ ಕಡಿಮೆ ಇಲ್ಲ, ಹೆದರುವುದಿಲ್ಲ ಎನ್ನುವ ಒಂದು ಶೇಕಾದಾದಷ್ಟು ಮಹಿಳೆಯರು ಕೂಡಾ ಇವರ ಸಾಲಿಗೆ ಸೇರುತ್ತಾರೆ. ಈ ರೀತಿಯ ನೈತಿಕತೆ ಇಲ್ಲದ ಜೀವನವೂ ಅನೈತಿಕ ಬದುಕು ಅಲ್ಲವೇ?
ಕೆಲವೊಮ್ಮೆ ಮನುಜ ಹಲವಾರು ದುಶ್ಚಟ ಗಳಿಗೆ ಒಳಗಾಗಿ ಗೆಳೆಯರಿಂದ ಕೆಟ್ಟು ಹೋಗಿ ತನ್ನ ಬದುಕನ್ನು ಅನೈತಿಕತೆಯ ಕಡೆಗೆ ದೂಡಿಕೊಂಡರೆ ಇನ್ನೂ ಕೆಲವು ಬಾರಿ ಮನೆಯಲ್ಲಿ ಇರುವವರೇ ಈ ಕಾರ್ಯವನ್ನು ಮಾಡಲು ಪ್ರೇರೇಪಣೆ ಆಗಿರುತ್ತಾರೆ. ಮನುಷ್ಯ ತನ್ನ ಜೀವನದಲ್ಲಿ ಬಯಸುವುದು ನಿಷ್ಕಲ್ಮಶ ಪ್ರೀತಿ, ಸ್ನೇಹ, ಖುಷಿ, ಸಂತೋಷ, ನೆಮ್ಮದಿ, ಆರೋಗ್ಯ ಒಂದೊಳ್ಳೆ ಊಟ, ಒಳ್ಳೆಯ ನಿದ್ರೆ ಅಷ್ಟೇ. ಇದನ್ನು ಎಲ್ಲರೂ ತಮ್ಮ ಮನೆಯಲ್ಲೇ ಬಯಸುತ್ತಾರೆ. ಯಾರಿಗೆ ಮನೆಯಲ್ಲಿ ಇದೆಲ್ಲ ತಮ್ಮ ಮನೆಯಲ್ಲಿ ಕುಟುಂಬದ ಒಳಗೆ ಸಿಗುವುದಿಲ್ಲವೋ ಅವರು ನೈತಿಕವಾಗಿ ಸಿಗದ್ದನ್ನು ಅನೈತಿಕವಾಗಿ ಪಡೆಯಲು ಮುಂದೆ ಹೋಗುತ್ತಾರೆ. ಇದರಿಂದ ಸಮಾಜ ಹಾಳಾಗುತ್ತದೆ. ಅಷ್ಟೇ ಅಲ್ಲ, ಕುಟುಂಬ, ಮನೆ ಎಲ್ಲವೂ ಹಾಳಾಗುತ್ತದೆ. ಅನೈತಿಕ ಬದುಕಿಗೆ ದುಶ್ಚಟಗಳು, ಮನುಷ್ಯನ ದುರಾಸೆ,ಸ್ವಾರ್ಥ, ಕಟ್ಟುಪಾಡುಗಳು, ಸ್ವಾತಂತ್ರ್ಯ ಸಿಗದೇ, ಕೊಡದೆ ಇರುವುದು, ಅತ್ಯಂತ ಹೆಚ್ಚು ಸ್ವಾತಂತ್ರ್ಯ, ಸ್ಸ್ವೇಚ್ಚಾಚಾರ ಎಲ್ಲವೂ ಕಾರಣ. ಹಲವು ಸಲ ಮನುಷ್ಯನ ಮೆದುಳು ನೀನು ಒಳ್ಳೆಯದಲ್ಲದ ಕೆಲಸವನ್ನು ಮಾಡುತ್ತಿರುವೆ ಎಂಬ ಸಂದೇಶ ಕೊಟ್ಟರೂ ಮನುಷ್ಯ ಅದನ್ನು ಕೇಳದೆ ತನಗೆ ಬೇಕಾದ ಹಾಗೆ ದುಷ್ಕೃತ್ಯಗಳನ್ನು ಮಾಡುತ್ತಾ ತನ್ನ ಭಾವನೆಗಳನ್ನು ತಾನೇ ಕೊಂದುಕೊಳ್ಳುತ್ತಾರೆ.ಸುಳ್ಳು ಹೇಳುವ  ಮತ್ತು ಮೋಸ ಮಾಡುವ ಪ್ರತಿ ಮನುಜನೂ ಅನೈತಿಕತೆಯ ಕಾರ್ಯ ಮಾಡುವವನೇ ಅಲ್ಲವೇ?
ಪರರಿಗೆ ಅವರ ಕಣ್ಣಿಗೆ ಕಾಣದ ಹಾಗೆ ಸುಳ್ಳು ಹೇಳಬಹುದು, ಮೋಸ ಮಾಡ ಬಹುದು, ಆದರೆ ತನ್ನ ಅನೈತಿಕತೆಯ ಬದುಕನ್ನು ತನ್ನ ಭಾವನೆಗಳ ಎದುರು, ತನ್ನ ಮನಸಿನ ಎದುರು, ದೇವರೆದುರು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಅಲ್ಲವೇ? ಕೆಲವೊಮ್ಮೆ ಪರಿಸ್ಥಿತಿಯ ಒತ್ತಡ, ಸಮಯ ಸಂದರ್ಭ ಕೆಟ್ಟದಾಗಿ ಇರಬಹುದು. ಆದರೆ ಮನುಷ್ಯನಿಗೆ ತಾನು ಬದಲಾಗಿ ಸರಿಯಾಗಿ ತನ್ನ ಬಾಳು ನಿಭಾಯಿಸಲು ದೇವರು ಬಹಳ ಸಮಯ ನೀಡಿದ್ದಾನೆ ಅಲ್ಲವೇ?
 
ಬದುಕು ನೈತಿಕತೆ ಇದ್ದರೆ ಸುಂದರ. ಅನೈತಿಕತೆ ಬೆಳೆದ ಕೂಡಲೇ ಹತಾಶೆ, ನೋವು, ಭಯ, ದೃಢತೆ ಇಲ್ಲದೆ ಇರುವುದು, ಒಂಟಿತನ, ತಪ್ಪಿತಸ್ಥ ಭಾವನೆ, ಅಂಜಿಕೆ. ಬದುಕನ್ನು ಸಕ್ಸೆಸ್ಫುಲ್ ಅಂತ ಅನ್ನಿಸಿಕೊಳ್ಳಬೇಕು ಎನ್ನುವವ ಈ ರೀತಿಯ ಅನೈತಿಕತೆಯ ಕಡೆ ಜಾರಿ ಹೋಗಲಾರ. ಒಂದೊಮ್ಮೆ ಜಾರಿದರೂ ತಾನೇ ಅದನ್ನು ಸರಿ ಪಡಿಸಿಕೊಂಡು ಮತ್ತೆ ನೈತಿಕವಾಗಿ ಜೀವನವನ್ನು ಉತ್ತಮ ಗೊಳಿಸಿಕೊಳ್ಳುತ್ತಾನೆ. ಅದೇ ಅನೈತಿಕವಾಗಿ ಬದುಕುವ ವ್ಯಕ್ತಿ ತಲೆ ಮರೆಸಿಕೊಂಡು ಒಡಾಡುತ್ತಾನೆ, ಎಲ್ಲರೊಳಗೆ ಸಂತಸದಿಂದ ಬೆರೆತು ಬಾಳುವ ಹಾಗೆ ನಾಟಕದ ಬದುಕು ಬದುಕಿದರೂ ಕೂಡಾ ಒಳಗೊಳಗೇ ಕೊರಗುತ್ತಾ ಇರುತ್ತಾನೆ. ಇಲ್ಲದೆ ಹೋದರೆ ಹಣವಂತರಿಗೆ ಯಾವುದೇ ಸಮಸ್ಯೆಗಳೇ ಇರುತ್ತಿರಲಿಲ್ಲ. ಭಾವನೆಗಳು ನಮ್ಮನ್ನು ಆಳುವ ಕಾರಣ ಭಾವನೆಗಳು ಉತ್ತಮವಾಗಿ ಇದ್ದರೆ ಬದುಕು ನೈತಿಕತೆಯನ್ನು ಹೊಂದಿ ಉತ್ತಮ ಬಾಳು ನಮ್ಮದಾಗುತ್ತದೆ ಅಲ್ಲವೇ? ನೀವೇನಂತೀರಿ

————————————–

ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top