ಸೂರ್ಯಸಖ ಪ್ರಸಾದ್ ಕುಲಕರ್ಣಿಯವರ ಕಾದಂಬರಿ ‘ಸೂರ್ಯನ್ ಪರ್ಪಂಚ’ಅವಲೋಕನ ವರದೇಂದ್ರ ಕೆ ಮಸ್ಕಿ

ಪುಸ್ತಕ ಸಂಗಾತಿ

ಸೂರ್ಯಸಖ ಪ್ರಸಾದ್ ಕುಲಕರ್ಣಿ

‘ಸೂರ್ಯನ್ ಪರ್ಪಂಚ’

ವರದೇಂದ್ರ ಕೆ ಮಸ್ಕಿ

“ಮನದ ಪ್ರಪಂಚವನ್ನು ಪರಿಭ್ರಮಿಸುವ ಸೂರ್ಯನ್ ಪ್ರಪಂಚ”


                ಸಾಮಾಜಿಕ ಕಾದಂಬರಿ ಎಂದು ಬಿಂಬಿಸಿಕೊಂಡಿರುವ ಸೂರ್ಯಸಖ ಪ್ರಸಾದ್ ಕುಲಕರ್ಣಿ ಅವರ “ಸೂರ್ಯನ್ ಪರ್ಪಂಚ” ಕಾದಂಬರಿ, ಸಾಮಾಜಿಕವಾಗಿಯೂ, ಕಾಲ್ಪನಿಕವಾಗಿಯೂ, ಸಾಂಸಾರಿಕವಾಗಿಯೂ, ತತ್ವಸಾರುವ ಸಾಹಿತ್ಯವಾಗಿಯೂ ಕೊನೆಗೆ ಪತ್ತೆದಾರಿ ಕಾದಂಬರಿಯಾಗಿಯೂ ಓದುಗನ ಮನದಲ್ಲಿ ಉಳಿಯುತ್ತದೆ.
     ಕಾದಂಬರಿಕಾರರ ನಿರೂಪಣೆ ಆಕರ್ಷಣೀಯವಾಗಿ ಮತ್ತು ಆಪ್ತವಾಗಿ ಮೂಡಿಬಂದಿದೆ. ಇಲ್ಲಿ ಲೇಖಕರು ಒಬ್ಬ ಮನಃಶಾಸ್ತ್ರಜ್ಞನಾಗಿ, ಮನೋವೈದ್ಯನಾಗಿ, ಸಮಾಜ ತಿದ್ದುವ ಶಿಕ್ಷಕನಾಗಿ, ಸಂಸಾರ ಸಾಗರ ದಾಟಿಸುವ ಮಾರ್ಗ ತೋರುವ‌ ನಾವಿಕನಾಗಿ ಗೋಚರವಾಗುತ್ತಾರೆ.

      ಪ್ರಾರಂಭದಲ್ಲಿ ಇದೇನಪ್ಪಾ, ಕಾದಂಬರಿಗೆ ಒಬ್ಬರು ನಿರೂಪಕರಿರುತ್ತಾರೆ. ಆದರೆ ಇಲ್ಲಿ ನೋಡಿದ್ರೆ ಸಂದರ್ಭಕ್ಕನುಸಾರವಾಗಿ ಪಾತ್ರಧಾರಿಗಳೇ ನಿರೂಪಕರಾಗುತ್ತಾರೆ ಎನಿಸುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿಯಾಗುತ್ತದೆ ಎನಿಸದೇ ಇರದು. ಆದರೆ ಕಾದಂಬರಿ ಓದುತ್ತಾ ಹೋದಂತೆ ಓದುಗನನ್ನು ಕಾದಂಬರಿ ಆವರಿಸಿಕೊಳ್ಳುತ್ತಾ ಸಾಗಿ ಇದೇ ಸರಿ ಅನಿಸಿಬಿಡುತ್ತದೆ. ಇಲ್ಲಿ ಕೃತಿಕಾರರು ಪಾತ್ರಗಳನ್ನು ವಿವರಿಸುವ ಬದಲು ಆ ಪಾತ್ರವೇ ತಮ್ಮ ಕಥೆಯನ್ನು ವಿವರಿಸುವುದು ಸೂಕ್ತ ಅನಿಸುತ್ತದೆ. ಪಾತ್ರಗಳೇ ತಮ್ಮ ಕುರಿತಾಗಿ ವಿವರಣೆಗೆ ನಿಂತರೆ ಭಾವಕ್ಕೆ ಧಕ್ಕೆಯಾಗುವುದಿಲ್ಲ ಎಂಬುದು ಕೃತಿಕಾರರ ಸೂಕ್ಷ್ಮ ದೃಷ್ಟಿಕೋನದ ಅನಾವರಣ ಅನಿಸುತ್ತದೆ.      
     ಒಬ್ಬ ಬರಹಗಾರನಿಂದ ಒಂದು ವಿಷಯ ವಸ್ತು ಕಥೆ, ಕಾದಂಬರಿ ರೂಪ ಪಡೆಯುತ್ತದೆಂದರೆ ಆ ವಿಷಯ ವಸ್ತುವಿಗೆ ಬರಹಗಾರ ಹಲವಾರು ಧನಾತ್ಮಕ ಸಂದೇಶಗಳನ್ನು ಪೋಣಿಸುತ್ತಾ, ಓದುಗರಿಗೆ ಯಾವುದು ತಪ್ಪೋ ಅದನ್ನು ನೇರವಾಗಿ ತಿಳಿಸುತ್ತಾ ಸರಿಯಾದುದನ್ನು ನೇರವಾಗಿ ಹೇಳದೆ, ಓದುಗನು ತನ್ನೆದೆಯೊಳಗೆ ಚಿಂತಿಸುತ್ತಾ ಮನವನ್ನು ಬದಲಾಯಿಸಿಕೊಳ್ಳುತ್ತಾ ಸಾಗುವಂತೆ ಮಾಡುತ್ತಾನೆ. ಈ ನಿಟ್ಟಿನಲ್ಲಿ ಹಲವು ಲೇಖಕರು ಎಡವುತ್ತಾರೆ. ತಮ್ಮ ಭಾವನೆಗಳನ್ನು, ಸಾಹಿತ್ಯದ ಪ್ರೌಢಿಮೆಯನ್ನು ತೋರಿಸಿಕೊಳ್ಳಲು ಹೋಗಿ ಬರ‌ಹದ ದಿಕ್ಕಿನಿಂದ ಪಕ್ಕದ ದಾರಿಗೆ ಹೋಗಿಬಿಡುತ್ತಾರೆ. ಆದರೆ ಇಲ್ಲಿ ಸೂರ್ಯಸಖ ಎಲ್ಲಿಯೂ ಹಾದಿ ತಪ್ಪಿಸಿಲ್ಲ. ತಾವೂ ಒಂದು ಪಾತ್ರವಾಗಿ ಓದುಗನಿಗೆ ಸಂಪೂರ್ಣ ಕಥಾ ವಸ್ತು ವಿಷಯವನ್ನು ಸಂದರ್ಭಕ್ಕನುಸಾರವಾಗಿ ಕವನಗಳನ್ನು, ಹಾಡುಗಳನ್ನು, ಪೌರಾಣಿಕ ಸಾಲುಗಳನ್ನು ಮಿಶ್ರಣಮಾಡಿಕೊಂಡು ಅರ್ಥಪೂರ್ಣವಾಗಿ ವಿವರಿಸುತ್ತಾ ಸಾಗುತ್ತಾರೆ.
     ನಮ್ಮ ಭವಿಷ್ಯದ ಬದುಕಿನಲ್ಲಿ ನಮ್ಮ ಜೀವನ ಹೇಗೆ ರೂಪುಗೊಳ್ಳತ್ತದೆ? ಯಾವಾಗ ಬದುಕು ತಿರುವು ಪಡೆದುಕೊಳ್ಳುತ್ತದೆ? ಆ ತಿರುವು ಬದುಕಿಗೆ ಧನಾತ್ಮಕ ದಾರಿಯಾಗುತ್ತೋ? ಅಥವಾ ಋಣಾತ್ಮಕ ಪರಿಣಾಮ ಬೀರಿ ಅಧೋಗತಿಗೆ ನೂಕುತ್ತೋ!! ಎಲ್ಲವೂ ನಮ್ಮ ನಡೆ, ನುಡಿ, ಸಂಸ್ಕಾರದ ಮೇಲೆ ಅವಲಂಬಿತ ಅನ್ನೋದು ಈ ಕಾದಂಬರಿಯ ತಿರುಳು. “ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ”, ಪ್ರಾಮಾಣಿಕತೆಯ ದಾರಿಯಲ್ಲಿ ಬರುವ ಎಲ್ಲ ತಗ್ಗು ದಿಣ್ಣೆಗಳು ನಮ್ಮನ್ನು ತಾತ್ಕಾಲಿಕ ಖಿನ್ನತೆಗೆ ದೂಡಿದರೂ ದಿಟ್ಟತನದ ಸ್ವಭಾವ ಇದ್ದಲ್ಲಿ ಗುರಿ ಯಾವತ್ತಿಗೂ ದೂರ ಹೋಗುವುದಿಲ್ಲ ಎಂಬುದು ಈ ಕಾದಂಬರಿ ಓದಿನಿಂದ ಕಂಡುಕೊಳ್ಳಬಹುದು.

   ಕಾದಂಬರಿಯಲ್ಲಿ ಬರುವ ಪಾತ್ರಗಳೋ ಲೆಕ್ಕಕ್ಕೇ ಸಿಗುವುದಿಲ್ಲ. ಓದುವ ಪ್ರತಿ ಕಾದಂಬರಿಗಳಲ್ಲಿ ಒಬ್ಬ ನಾಯಕ, ಒಬ್ಬಳು ನಾಯಕಿ, ಮತ್ತೊಬ್ಬರು ಖಳನಾಯಕರ ಪಾತ್ರದಲ್ಲಿ ಕಾಣಸಿಗುತ್ತಾರೆ. ಆದರೆ ಈ ಕಾದಂಬರಿಯಲ್ಲಿ ನಾಯಕ, ನಾಯಕಿ ಎಂದು ಬಿತ್ತರಿಸಿ ಉಳಿದ ಪಾತ್ರಗಳನ್ನು ಕಡೆಗಣಿಸಿಲ್ಲ, ಆಯಾ ಸಂದರ್ಭದಲ್ಲಿ ಆಯಾ ಪಾತ್ರಗಳೇ ಪ್ರಮುಖ ವೇದಿಕೆಯಲ್ಲಿ ನಾಯಕ, ನಾಯಕಿಯರಂತೆ ಕಾಣುತ್ತಾರೆ. ಪ್ರತಿ ಪಾತ್ರಗಳಿಗೂ ಅವುಗಳದ್ದೇ ಆದ ವೈಶಿಷ್ಟ್ಯತೆ, ಮಹತ್ವ ಇದೆ. ಆ ಪಾತ್ರ ಬಿಟ್ಟಿದ್ದರೆ, ಈ ಪಾತ್ರ ಇರದಿದ್ದರೆ ನಡೆಯುತ್ತಿತ್ತು ಎಂದು ಎಲ್ಲಿಯೂ ಅನಿಸುವುದಿಲ್ಲ. ಬಹಳಷ್ಟು ಪಾತ್ರಗಳು ಇಲ್ಲಿ ಎದುರಾಗಿ ಮುಂದಿನ ಓದಿನಲ್ಲಿ ಮರೆಯಾಗುತ್ತವೆಯಾದರೂ, ಮತ್ತೆ ಆ ಪಾತ್ರಗಳನ್ನು ಸಮಯೋಚಿತವಾಗಿ ಆಗಮನ ತಂದು ಈಗ ಈ ಪಾತ್ರ ಅವಶ್ಯವಾಗಿ ಬೇಕಿತ್ತು ಎನ್ನುವಂತೆ ಕೃತಿಕಾರರು ಮಾಡುತ್ತಾರೆ.
     ಈ ಎಲ್ಲ ಪಾತ್ರಗಳಿಗೂ ಬಂಧುತ್ವ, ಸ್ನೇಹ ಸಂಬಂಧ ಹೊಂದಿಸಿರುವುದನ್ನು ನೋಡಿದರೆ ಇದು ಒಂದೋ, ಎರಡೋ ತಿಂಗಳಲ್ಲಿ, ಒಂದೇ ಬಾರಿಗೆ ಮನದ ಮೂಲೆಯಲ್ಲಿ ಮೂಡಿ ಬಂದ ಕಾದಂಬರಿ ಅಲ್ಲ, ಕಾಲ್ಪನಿಕ ಕಥೆಯಂತೂ ಇದು ಅಲ್ಲವೇ ಅಲ್ಲ ಅನಿಸುತ್ತದೆ.
    ಇಲ್ಲಿ ನಾನು ಕೆಲ ಪ್ರಮುಖ ಪಾತ್ರಗಳ ಬಗೆಗೆ ಮಾತಾಡಲೇಬೇಕಿದೆ, ನನ್ನ ಮನ ಹಗುರಾಗುವುದೇ ಅದರ ಭಾವವನ್ನು ಅಕ್ಷರಗಳ ಮೂಲಕ ಹೊರಹಾಕಿದಾಗ ಹಾಗಾಗಿ ನಿಮ್ಮ ಓದಿಗೆ ಎಲ್ಲವೂ ಅಲ್ಲದಿದ್ದದರೂ ಒಂದಷ್ಟು ಪಾತ್ರಗಳ ಪರಿಚಯ ಮಾಡುತ್ತಿದ್ದೇನೆ. ಇನ್ನುಳಿದ ಪಾತ್ರಗಳ ಸಹಭಾಗಿತ್ವವನ್ನು ತಾವು ಕಾದಂಬರಿ ಓದಿಯೇ ತಿಳಿಯಬೇಕೆಂಬುದು ನನ್ನ ಕೋರಿಕೆ.
 *      ಅಹಂಕಾರ ಸ್ವಭಾವದಿಂದ ತನ್ನ ಮತ್ತು ತನ್ನ ಸಖನ ನೆಮ್ಮದಿ ಹಾಳು ಮಾಡಿದ ರಾಗಿಣಿ, ಸೌಮ್ಯ ಸ್ವಭಾವದವನಾಗಿ, ಗೌರವಾನ್ವಿತ ವ್ಯಕ್ತಿಯಾಗಿದ್ದ ಶ್ರೀವತ್ಸ ರಾಗಿಣಿಯ ಸೌಂದರ್ಯಕ್ಕೆ ಮರುಳಾಗಿ “ದಾರಿಯಲ್ಲಿ ಹೋಗೋ ಮಾರಿನ ಮನೆಯಲ್ಲಿ ಕರ್ಕೊಂಡಂತೆ”, ರಾಗಿಣಿಯನ್ನು ಕಟ್ಟಿಕೊಂಡು ಪ್ರಾರಂಭದಲ್ಲಿ ಸುಖದ ಉತ್ತುಂಗ ತಲುಪಿ ನಂತರ ಅವಳ ದುಷ್ಟ ಅನುಮಾನದ ಮನಸ್ಥಿತಿಗೆ ಅಕ್ಷರಶಃ ಮನೆಯವರಾದಿಯಾಗಿ ಬಳಲಿ ಬೆಂಡಾಗಿ, “ಸಂಸಾರ ಅಕ್ಷಯ ಸಾಗರ, ಖುಷಿಯ ಕ್ಷಯದ ಆಗರ” ಎಂದು ವಿಚ್ಛೇದನದ ದಾರಿ ತಲುಪುವುದು ಶೋಚನೀಯವೆನಿ‌ಸುತ್ತದೆ. ಮುಖದ ಸೌಂದರ್ಯಕ್ಕಿಂತ ಮನದ ಸೌಂದರ್ಯವೇ ಉತ್ತಮ ಎಂದು ರಾಗಿಣಿ ಸಾಬೀತುಮಾಡಿದಂತಿದೆ. ರಾಗಿಣಿಯ ನಡೆ ಘೋರ, ಭಯಾನಕ ಅನಿಸುತ್ತದೆ. ಗಂಡ ಕೊಟ್ಟ ಮುತ್ತುಗಳನ್ನೂ ಲೆಕ್ಕ ಹಾಕಿ, ಪ್ರತಿಯಾಗಿ ಒಂದೆರಡು ಹೆಚ್ಚು ಮುತ್ತುಗಳನ್ನು ಕೊಟ್ಟೀನಿ ನೋಡು ನಾನು, ಎಂದು ಗಂಡ‌ ಹೆಂಡತಿಯ ಪವಿತ್ರ ದಾಂಪತ್ಯದಲ್ಲಿ ವ್ಯಾವಹಾರಿಕ ಬುದ್ಧಿಯನ್ನು ತೋರಿದ್ದು, ಹೆಣ್ಣು ಮಕ್ಕಳು ಹೀಗೂ ಇರುತ್ತಾರಾ!! ಎಂಬ ಆಶ್ಚರ್ಯನ್ನು ಮೂಡಿಸುತ್ತದೆ. ದಾಂಪತ್ಯದಲ್ಲಿ ಅನುಮಾನ ಎಂಬ ಪ್ರೇತದ ಆಗಮನ ಆದರೆ ಅಲ್ಲಿಗೆ ಆ ಸಂಬಂಧ ಸ್ಮಶಾನ ಸೇರುವುದು ಖಚಿತ. ಇಲ್ಲಿ ಆಗಿದ್ದೂ ಅದೆ, ರಾಗಿಣಿಯ ಅಣ್ಣ ಸುಬ್ಬಣ್ಣ ರಾಗಿಣಿಯ ಗುಣದ ಬಗ್ಗೆ ಹೇಳಿದರೂ ಶ್ರೀವತ್ಸನ ಮೋಹದ ಪರದೆಗೆ ಅದು ತಾಗದೇ ಇದ್ದುದು ಮುಂದಿನ ಮನೋ ವೇದನೆಗೆ ಕಾರಣವಾಯಿತು.

*    ಕಾಮ ತೃಷೆಯಿಂದ, ಕಂಡ ಚೆಂದನೆಯ ಹೆಣ್ಣು ಮಕ್ಕಳೆಲ್ಲ ತನ್ನ ಭೋಗಕ್ಕೆ ಬೇಕು ಎನ್ನುವ ಶ್ರೀನಿವಾಸನ ತಮ್ಮ ಮಾಧವಾಚಾರಿ ತನ್ನ ತಾಯಿ ಸ್ಥಾನದಲ್ಲಿರುವ ಅತ್ತಿಗೆ ಶಾಲ್ಮಲಿಯನ್ನೂ ಸಹ  ಪಲ್ಲಂಗಕ್ಕೆ ಕರೆಯುವ ಧೂರ್ತತನ ತೋರಿ, ಶಾಲ್ಮಲಿಯ ಅಣ್ಣ ಮಧುಕೇಶ್ವರನಿಂದ ವಧೆಗೊಳ್ಳುವ ಹಂತಕ್ಕೆ ತಲುಪುತ್ತಾನೆ. ಮೇಲ್ನೋಟಕ್ಕೆ ಗತಿಸಿದ ಘಟನೆಯಿಂದ ಶಾಲ್ಮಲಿಯೇ ಕೊಲೆ ಮಾಡಿದ್ದು ಕಂಡು ಬಂದರೂ, ನಂತರ ನಾನೇ ಕೊಲೇಗಾರ ಎಂದು ಮಧುಕೇಶ್ವರ ಮುಂದೆ ಬರುತ್ತಾನೆ. ಮಧುಕೇಶ್ವರನೇ ಕೊಲೆಗಾರ ಎಂದು ನಾವು ತೀರ್ಮಾನಿಸುವ ಹಂತಕ್ಕೆ ಬಂದಾಗ, SI ಗೋವಿಂದರಾಜ್ ಅವರ ಚಾಣಾಕ್ಷ ತನಿಖೆಯಿಂದ ಕಥೆ ತಿರುವುಪಡೆದುಕೊಳ್ಳುತ್ತದೆ. ನಿಜವಾದ ಕೊಲೆಗಾರ ಸಿಗುವುದರ ಜೊತೆಗೆ, ಮಧುಕೇಶ್ವರನ ತ್ಯಾಗದ ಗುಣವು ಓದುಗನ ಕಣ್ಣುಗಳನ್ನು ತೇವವಾಗಿಸುತ್ತವೆ.
*    ಕಾದಂಬರಿಯಲ್ಲಿ ಅತಿ ಹೆಚ್ಚು ಮನಸೂರೆಗೊಳ್ಳುವ ಭಾಗ ಶಾಲ್ಮಲಿಯ ಕಥೆ, ಅವಳ ಪ್ರೇಮ ಪ್ರಸಂಗ, ಆಪ್ತವಾದ ಸ್ನೇಹ, ನಂಬಿದ ಪ್ರೇಮ ಭಂಗ, ಮೆಚ್ಚಿದ್ದ ಸ್ನೇಹಕ್ಕೆ ಆದ ದ್ರೋಹ, ಹೃದಯಕ್ಕೆ ಬಿದ್ದ ಪೆಟ್ಟು, ನಿಶ್ಚಯವಾದ ಮನಗಳ ಮದುವೆ ಮುರಿತ, ನಂತರ ತಮ್ಮ ಮನೆಯಿಂದ ತಯಾರಾಗುತ್ತಿದ್ದ “ಶಿವಶಂಕರಿ ಕುಂಕುಮ”ದ ಖಾಯಂ ಗ್ರಾಹಕ ಶ್ರೀನಿವಾಸನೊಂದಿಗೆ ಮದುವೆ, ಮೈದುನ ಮಾಧವನ ಕಿರುಕುಳ ಇವನನ್ನು ಅಣ್ಣ ಮಧುಕೇಶ್ವರ ಕೊಲೆ ಮಾಡಿದ ಎಂಬುದೂ ಇವಳಿಗೆ ಆಘಾತ ನೀಡುತ್ತದೆ. ಇದಕ್ಕಿಂತ ಹೆಚ್ಚು ಆಘಾತ ನೀಡಿದ್ದು ಗಂಡ ಶ್ರೀನಿವಾಸನೂ ಕಚ್ಚೆ ಹರುಕ ಕಾರ್ಯ ಮಾಡಿದ್ದ ಎಂಬ ಇತಿಹಾಸ. ಇದನ್ನು ತಿಳಿದು ನೊಂದುಕೊಳ್ಳುವ ಶಾಮಿಗೆ ಮಾಮ ಗುರುರಾಜನೊಂದಿಗಿನ ಪ್ರೇಮದ ಭಗ್ನ ಕಾರಣವೇ ಈ ಅನೈತಿಕ ಸಂಬಂಧ ಎಂಬುದು ನೆನಪಾಗುತ್ತದೆ. ಆದರೆ ವಿಧಿ ಇಲ್ಲಿಯೂ ಅಂತದ್ದೇ ಪ್ರಸಂಗ ಸೃಷ್ಟಿಸಿ ಅಸಹಾಯಕ ಸ್ಥಿತಿಗೆ ನೂಕಿದೆ. ಸಹನಾ ಮೂರ್ತಿ, ತ್ಯಾಗದ ಪ್ರತೀಕ, ನಿಷ್ಕಲ್ಮಶ ಮನದ ಪ್ರತಿಮೆ ಅನಿಸಿದ ಶಾಲ್ಮಲಿಗೆ ಗಂಡ ತನ್ನ ಭಂಡತನದ ಗುಟ್ಟನ್ನು ಮುಚ್ಚಿಡುವುದಕ್ಕೆ ತಮ್ಮನೊಂದಿಗೆ ಸಹಕರಿಸು ಎನ್ನುವಾಗ ಓದುಗರಿಗೂ ಮನದಲ್ಲಿ ಕಿಚ್ಚು ಮೂಡಿಸುತ್ತದೆ. ಈ ಮಾತು ಕೇಳಿಯೂ ಅದನ್ನು ಸಹಿಸಿಕೊಂಡು ಮಾಧವನನ್ನು ತಾನೇ ಕೊಲ್ಲಲು ಚಂಡಿ, ಚಾಮುಂಡಿಯಾಗಿ ಊರೆಲ್ಲಾ ಅಟ್ಟಾಡಿಸಿಕೊಂಡು ಹೋಗಿಬಿಡುತ್ತಾಳೆ. ಈ ಸಂದರ್ಭದಲ್ಲಿ ಇವರ ಮನೆಯಲ್ಲಿದ್ದ ಬುದ್ಧಿಮಾಂದ್ಯ ಕೇಶವನ ಒಂದು ಮಾತು ಇವಳ ಪತಿವ್ರತೆಯ ಸ್ಥಾನವನ್ನು ಉಳಿಸುತ್ತದೆ. ಹೀಗೆ ಒಂದು ಚಿಕ್ಕ ಪಾತ್ರಕ್ಕೂ ನ್ಯಾಯ ಒದಗಿಸಿಕೊಟ್ಟ ಕೃತಿಕಾರರ ಸೂಕ್ಷ್ಮ ಮತಿ ದೃಷ್ಟಿಕೋನವನ್ನು ತೋರಿಸುತ್ತದೆ.
*    ಮತ್ತೊಂದೆಡೆ ವಿಶ್ವೇಶ್ವರ ಭಟ್ಟ, ಬಾಲಚಂದ್ರ ಭಟ್ಟರ ಗೋಮುಖ ವ್ಯಾಘ್ರತನ ತನ್ನ ಮಗಳಾದ ಚಂದ್ರಕಲಾಳಿಂದ  ಬಯಲಿಗೆ ಬಂದದ್ದು ರೋಚಕವಾಗಿದೆ. ಬಾಲಚಂದ್ರ ಭಟ್ಟನ ಕಾಮೋದ್ವೇಗಕ್ಕೆ ಬಲಿಯಾದ ಅವಳಿ ಸಹೋದರಿಯರಾದ ಭವಾನಿ-ಶಿವಾನಿಯರ ಆತ್ಮಹತ್ಯೆ ಓದುಗನನ್ನು ರೋಧಿಸುವಂತೆ ಮಾಡುತ್ತದೆ. ಅವರ ಆತ್ಮಗಳು ಮುಕ್ತಿ ಕಾಣದೆ ಚಂದ್ರಕಲಾ ದೇಹದಲ್ಲಿ ಸೇರಿಕೊಂಡು ವಿಶ್ವೇಶ್ವರ ಭಟ್ಟ ಸಹೋದರರ ದುಷ್ಟ ಅವಗುಣಗಳನ್ನು ಅವರ ವಿಷಕಂಠದಿಂದಲೇ ಹೊರಬರುವಂತೆ ಮಾಡಿದ್ದು ಕೃತಿಕಾರರ ಚತುರತೆ ಅನಿಸುತ್ತದೆ. ಇಲ್ಲಿ ಊರಿಗೆ ಕೆಟ್ಟವರಾಗಿದ್ದ ನರಹರಿ ಜೊಯೀಸರ ಒಳ್ಳೆಯತನ ಗೊತ್ತಾಗುತ್ತದೆ, ಊರಿಗೆಲ್ಲಾ ಒಳ್ಳೆಯರೆನಿಸಿಕೊಂಡಿದ್ದ ವಿಶ್ವೇಶ್ವರ ಭಟ್ ಮತ್ತು ಅವರ ತಮ್ಮ ಬಾಲಚಂದ್ರ ಭಟ್ಟರ ದುರ್ಗುಣಗಳು ಗೋಚರವಾಗುತ್ತವೆ.

*     ಇನ್ನು ಕಥಾ ನಾಯಕಿ ವೃಶಾಲಿಯ ಬದುಕು, ಎಷ್ಟು ಹೇಳಿದರೂ ಮುಗಿಯದು. ಅವಳ ದಿಟ್ಟತನ, ಸೌಹಾರ್ದತೆ, ಒಳ್ಳೆಯತನದ ಮೇಲಿನ ನಂಬುಗೆ, ಹೊಂದಿಕೊಳ್ಳುವ ಉತ್ತಮ ಸ್ವಭಾವ ಕಾದಂಬರಿಯ ಪ್ರಮುಖ ಕೇಂದ್ರ ಬಿಂದು‌. ಪ್ರಕಾಶನಂತಹ ಅರೆಹುಚ್ಚ (ಅರೆಹುಚ್ಚ ಎನ್ನುವುದಕ್ಕಿಂತ ಒಬ್ಬ ತತ್ವಜ್ಞಾನಿ ಎನ್ನಬಹುದು)ನನ್ನು ಕಟ್ಟಿಕೊಂಡು ಅವನನ್ನು ಸಮಾನ ಮನಸ್ಥಿತಿಗೆ ತರುವುದರೊಂದಿಗೆ ಬದುಕು ಕಟ್ಟಿಕೊಳ್ಳುವ ವೃಶಾಲಿ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ಅವಳ ಪ್ರೀತಿಯಿಂದ ವಂಚಿತಳಾಗಿ ಅಣ್ಣನ ಪ್ರೇಮ, ಆರೈಕೆ, ಬೆಂಬಲದಿಂದ ಬೆಳೆದವಳು. ಮುಂದೆ ವಕೀಲೆಯಾಗಿ ತನ್ನ ಇರುವನ್ನು ತನ್ನ ಜಗತ್ತಿಗೆ ತೋರಿಸುತ್ತಾಳೆ. ಸೂರ್ಯನ ಗೆಳೆತನ ಒಂದು ಮನೋಬಲ, ಒಂದು ಮನೋಧೈರ್ಯ, ಒಂದು ಮನಃಶಾಂತಿ ವೃಶಾಲಿಗೆ. ಹೀಗೆ ಇವರಿಬ್ಬರ ಸ್ನೇಹ ಕಾದಂಬರಿಯ ಅಂತ್ಯದವರೆಗೂ ಮುಂದುವರೆಯುತ್ತದೆ. ಸೂರ್ಯನೋ ಸಾಹಿತಿ, ಪತ್ರಿಕೆಯ ಸಂಪಾದಕ, ಜ್ಞಾನಿ, ಓಂಥರಾ ಮನಸುಗಳನ್ನು ಪರಿವರ್ತಿಸುವ ಮನೋ ವಿಜ್ಞಾನಿ. ಈ ಸೂರ್ಯನೇ ಈ ಕೃತಿಯ ಲೇಖಕ ಏನೋ  ಎಂಬುವಷ್ಟು ಆಪ್ತವಾದ ನಿರೂಪಣೆ ಇದೆ.
     ಈ ಸೂರ್ಯನ ಪ್ರಪಂಚದಲ್ಲಿ ಬರುವ ಎಲ್ಲಾ ಪಾತ್ರಗಳೂ ಒಂದೊಂದು ಕಥೆಗಳಾಗುತ್ತವೆ. ಎಲ್ಲಾ ಪಾತ್ರಗಳಿಗೆ ಒಂದೊಂದು ಕಥೆ ಇದ್ದರೂ ಬಹುತೇಕ ಎಲ್ಲ ಪಾತ್ರಗಳಿಗೂ ಸಹಸಂಬಂಧ ಕಲ್ಪಿಸಿ, ಭಿನ್ನ ಕಥೆಗಳನ್ನೆಲ್ಲ ಒಗ್ಗೂಡಿಸಿ ಕಾದಂಬರಿ ರೂಪದಲ್ಲಿ ಬಿತ್ತರಿಸಿದ್ದಾರೆ. ಕೃತಿಗೆ ಶೀರ್ಷಿಕೆ ಹೇಗೆ ಬಂದಿದೆ ಎಂಬುದನ್ನೂ ಸಹ ಕಥೆಯಲ್ಲಿಯೇ ಬರುವಂತೆ ಮಾಡಿದ್ದಾರೆ, ಕೃತಿಕಾರರಾದ ಸೂರ್ಯಸಖ ಪ್ರಸಾದ ಕುಲಕರ್ಣಿಯವರು.
  *     ಶ್ರೀವತ್ಸನ ಕಥೆ ಓದಿದ ಸಂದರ್ಭದ ತರುವಾಯ ವೃಶಾಲಿ ಡೈರಿ ಸೂರ್ಯನ ಕೈಗಿಟ್ಟಿರುವುದು ಸ್ವಲ್ಪ ಗೊಂದಲ ಎನಿಸುತ್ತದೆ. ಹಿಂದೆ ಮುಂದೆ ಆಗಿದೆ ಎನಿಸುತ್ತದೆ . ಇಲ್ಲಿ ಇದ್ದಕ್ಕಿದ್ದಂತೆ ನಿರೂಪಕ ಬದಲಾಗಿದ್ದು ಕೂಡ ಪ್ರಾರಂಭದಲ್ಲಿ ಗೊಂದಲ ಅನಿಸುತ್ತದೆ. ಆದರೆ ಈ ತೊಡಕು ಶಾಲ್ಮಲಿ ಕಥೆಯ ಸಂದರ್ಭದಲ್ಲಿ ಬರದಂತೆ ಕೃತಿಕಾರು ಎಚ್ಚರವಹಿಸಿದ್ದಾರೆ. ಶಾಲ್ಮಲಿಯೇ ತನ್ನ ಕಥೆಯನ್ನು ಹೇಳುತ್ತಿರುವಂತೆ ತಾವು ಕಥೆ ಬರೆಯುತ್ತಿರುವುದಾಗಿ ಬಿಂಬಿ‌ಸಿದ್ದು, ಕಾದಂಬರಿಯೊಳಗೊಬ್ಬ ಕಥೆಗಾರನ್ನು ತೋರಿಸಿದ್ದು ಉತ್ತಮವಾಗಿ ಮೂಡಿಬಂದಿದೆ.
    ಒಟ್ಟಾರೆ ಈ ಕೃತಿಯಲ್ಲಿ ಸ್ನೇಹವಿದೆ, ಪ್ರೇಮವಿದೆ, ತ್ಯಾಗವಿದೆ, ನಿಷ್ಠೆಯಿದೆ, ಪ್ರಾಮಾಣಿಕತೆ ಇದೆ. ಜೊತೆಗೆ ಭೇದವಿದೆ, ಭೋಗವಿದೆ, ನಿಯಮವಿದೆ,‌ ನಿಯಮಬಾಹ್ಯವಾಗಿ ನಡೆದುಕೊಳ್ಳುವ ಮೋಸದ ದೃಶ್ಯಗಳೂ ಇವೆ.
      ಈ ಸೂರ್ಯನ್ ಪರ್ಪಂಚ ಮನುಷ್ಯರ ಮನಸ್ಸಿನ ಮಂಡಲವನ್ನೇ ಭ್ರಮಣೆ ಮಾಡಿಸಿದಂತಿದೆ. ಓದುತ್ತಾ ಸಾಗಿದಂತೆ ಆ ಸಂದರ್ಭಗಳು ನಮ್ಮೆದುರಿಗೆ ಚಿತ್ರಗಳಾಗಿ ಬರುತ್ತಲೇ ಹೋಗುತ್ತವೆ. ಪ್ರತೀ ಓದುಗನೂ ಆ ಸಂದರ್ಭಗಳನ್ನು ಕಲ್ಪಿಸಿಕೊಳ್ಳುತ್ತ ತನ್ಮಯನಾಗಿಬಿಡುವಷ್ಟು ಕಾದಂಬರಿ ರೂಪುಗೊಂಡಿದೆ.
    ಈ ಲೇಖನದ ಜೊತೆಗೆ ಈ ಕಾದಂಬರಿಯನ್ನು ಸಂಪೂರ್ಣವಾಗಿ ಓದಿದರೆ ಮಾತ್ರ ಕಥಾ ವಸ್ತು ಸಂಪೂರ್ಣವಾಗಿ ಅರ್ಥವಾಗುತ್ತದೆ. ಎಲ್ಲರೂ ದಯವಿಟ್ಟು ಕೃತಿಕಾರರನ್ನು ಸಂಪರ್ಕಿಸಿ ನೀವೂ ಓದಿ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಲೇಖಕರನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ.


ವರದೇಂದ್ರ ಕೆ ಮಸ್ಕಿ

2 thoughts on “ಸೂರ್ಯಸಖ ಪ್ರಸಾದ್ ಕುಲಕರ್ಣಿಯವರ ಕಾದಂಬರಿ ‘ಸೂರ್ಯನ್ ಪರ್ಪಂಚ’ಅವಲೋಕನ ವರದೇಂದ್ರ ಕೆ ಮಸ್ಕಿ

  1. ಸರ್ ಜೀ…. ನಿಮ್ಮ ಓದು ಮತ್ತು ಓದಿದ ಓದನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂಬ ತುಡಿತವನ್ನು ನೋಡಿಯೇ ಖುಷಿಯಾಯ್ತು. ಬಹು ಚಂದವಾಗಿ ಲೇಖಕನ ಮನೋಧರ್ಮವನ್ನು ಸರಿಯಾಗಿ ಗ್ರಹಿಸಿ ಬರೆದ ಅದ್ಭುತ ವಿಮರ್ಶಾ ಲೇಖನವಿದು. ನನ್ನ ಲೇಖನಿಗೆ ಬರೆಯಲು ಪ್ರೋತ್ಸಾಹದ ಇಂಧನ ತುಂಬಿದಿರಿ.‌ಶರಣು…
    ನೀವು ಬರೆದ ಪ್ರತಿ ವಿವರವೂ ನನಗೆ ಸಂತೋಷದ ಜೊತೆಗೆ ಮತ್ತೂ ಬರೆಯಲು ಪ್ರೇರಣೆ ನೀಡಿತು… ಇದೇ ಪ್ರಶಸ್ತಿ ಸರ್ ಜೀ… ಇದಕ್ಕಿಂತ ಬರಹಗಾರ ಮತ್ತೇನು ತಾನೇ ನಿರೀಕ್ಷಿಸುತ್ತಾನೆ. ನಿಮ್ಮ ಓದಿನ ಪ್ರೀತಿಗೆ.ನೀಡಿದ ಪ್ರೋತ್ಸಾಹಕ್ಕೆ ಶರಣು ನಮನ ಸರ್ ಜೀ.

Leave a Reply

Back To Top