ಕಾವ್ಯ ಸಂಗಾತಿ
ಮೋಹನ್ ಬಸಪ್ಪನಾಯಕ
ಬಚ್ಚಿಡಲಾಗದ ಸೊಲ್ಲು…..!
ಬರಡಲ್ಲೂ ಬತ್ತದ
ಬುಗ್ಗೆಯ ಉಂಟು ಮಾಡಿ
ಉದ್ಧರಿಸ ಬಲ್ಲಳು..
ನನ್ನ ಅಕ್ಕನೆಂದರೆ ಹಾಗೇ..,
ಅವಳೊಂದು
ನನಗೆ ಚೈತನ್ಯಶೀಲಶಕ್ತಿ…….!
ಅವಳ ಮಾತು,
ಕಲ್ಮಶವಿಲ್ಲದ ಪ್ರೀತಿ
ನಾ ಕಂಡ ಬುದ್ಧನ ಕರುಣೆ
ಎಲ್ಲವೂ….,
ಥೇಟ್ ನನ್ನ ಅವ್ವಳ ಹಾಗೆಯೇ
ನನ್ನ ಅಕ್ಕ…….!
ನನ್ನ ನೋವಿಗೂ
ಹೆದರಿಕೆ ಅವಳ ಎದರಾದರೆ
ಬೇಸರಕೂ ಅದೊಂದು ತರದ
ದಿಗಿಲು ಅವಳು ನಕ್ಕು ನುಡಿದರೆ.,
ಅಕ್ಕನಿಂದಲೇ ಹತ್ತಿ ಉರಿವ
ಬದುಕಾಗಿದೆ ನನ್ನಿಷ್ಟದ
ಚಂಪಾಕಲಿಯಷ್ಟೇ ಸಿಹಿ…….!
ಸುಳ್ಳಲ್ಲ, ಅತಿಶಯವಲ್ಲ
ಅಕ್ಕನೆಂದರೆ ಹಾಗೇ…,
ಸುಡು ತಾಪವು ತಂಪು
ಆಯಾಸದಲ್ಲೂ
ಜನ್ಮತಾಳುವ ಉತ್ಸಾಹ
ಹೀಗಿರುವಾಗ….,
ಅವಳು ಕೂಡ ಈ ಜಗ ನಂಬುವ
ಅಮೂರ್ತ ಬಲದಂತೆ ನನಗೆ……!
ಮೋಹನ್ ಬಸಪ್ಪನಾಯಕ