ಕಾವ್ಯ ಸಂಗಾತಿ
ಪ್ರಮೋದ ಜೋಶಿ
ಮೂಡಿದ ಬೆಳಕು ಹೇಳಿತು
ಕವಿ ಅಂದ್ರ ಸುಮ್ನೆನಾ
ನಿರಂತರ ಪದಗಳ ಸದ್ಬಳಕೆಗಾಗಿ
ಜ್ಞಾನಸಾರದಾಣೆಕಟ್ಟನು ಕಟ್ಟಿ
ಬಯಸಿದಾಗ ಬಳಸುವ ಮೇಧಾವಿಗಳಿರುವಾಗ
ನಾ ಕಿವಿಯಾಗುವ ಬದಲು
ಕವಿಯಾಗ ಹೊರಟೆ
ಕೈಯೊಳಗೊಂದು ಪೆನ್ನು
ಎದುರಿಗೊಂದು ಹಾಳೆ ಹಿಡಿದು
ಹುಡುಕಾಟದೊಳಗಾದ ಹಾಹಾಕಾರಕೆ
ಹೌಹಾರಿತು ಭಾವನೆ
ಕೈಕೊಟ್ಟ ಯೋಚನೆಗೆ
ಸೋಲನ್ನೊಪ್ಪದ ಯಾತನೆ
ತಲೆಯೊಳು ಪದಗಳು ಗಿಜುಗುಟ್ಟಿವೆ
ಉಕ್ಕುತಿವೆ ಹೊರಬರುವ ಯತ್ನದೊಳಗೆ
ತೆರೆಯಲು ಹೊರಟೆ ಬಾಗಿಲು
ಹಾಳೆಯ ಮೇಲೆ ಹರಿಬಿಡಲು
ಒತ್ತರದ ಒತ್ತಾಯಕ್ಕೆ ತೆರೆದುಬಿಟ್ಟಾಗ
ಉಕ್ಕಿ ಹರಿಯಿತು ಸುನಾಮಿ ತೆರದಿ
ರಾಗ ತಾಳ ಲಯ ಕೊಚ್ಚಿ ಹೋಗಿ
ವಿಕೋಪವಾಯ್ತು ಹಾಳೆಯ ಸ್ಥಿತಿ
ಬಿದ್ದಿವೆ ಪದಗಳ ಶವಗಳು
ಪೂರಾ ಹಾಳೆ ತುಂಬಾ
ದಿಕ್ಕುದಶೆ ಇಲ್ಲದ ಸಂಬಂಧಕೆ
ಎಳೆದು ಹಾಕುವ ವೀರಬಾಹು ನಾನಾದೆ
ಬಂದು ನೋಡಿ ಕೇಳಿದವರೆಲ್ಲಾ
ಲೊಚಗುಡುತ್ತ ಮರುಗಿದರು
ಹತ್ಯೆ ಮಾಡಿದ ಹಂತಕನನ್ನ
ದುರುಗುಟ್ಟಿ ನೋಡುತ್ತ
ಕವನವಾಗಿರಲಿಲ್ಲ ಅದು
ಸಾಮೂಹಿಕ ಪದಗಳ ಮಾರಣ ಹೋಮ
ಈ ಹತ್ಯೆಗೆ ನನ್ನೆ ನಾ ಜರಿದೆ
ಯಾಕಾದೆ ಕವಿ ಕಿವಿಯಾಗಿದ್ದದೆ ಒಳಿತಿತ್ತು
ಸಂಸ್ಕಾರಕ್ಕೆಂದು ಗೀರಿದ ಕಡ್ಡಿ
ಹಾಳೆ ದಹಿಸಿದಾಗ ಮೂಡಿದ ಬೆಳಕು ಹೇಳಿತು
ಕೇಳಿ ಕೇಳಿ ಜ್ಞಾನಾನುಭವದಿ ಬರೆದ
ಚಿಂತನ ರೂಪಕಗಳೇ ಕವನವೆಂದು
ಪ್ರಮೋದ ಜೋಶಿ
ಉತ್ತಮವಾದ ಕವನ.
ಒಳ್ಳೆ ಕವನ ಒಳ್ಳೆಯ ಭಾವನೆಗಳು.