ಪಿ.ಅರ್.ನಾಯ್ಕಕೃತಿ ‘ಪಾಟಿಚೀಲ’ ಮಕ್ಕಳ ಕವನ ಸಂಕಲನ.ವಿಮರ್ಶೆ ಗೊರೂರು ಅನಂತರಾಜು,

ಪುಸ್ತಕ ಸಂಗಾತಿ

ಪಿ.ಅರ್.ನಾಯ್ಕಕೃತಿ

‘ಪಾಟಿಚೀಲ’ ಮಕ್ಕಳ ಕವನ ಸಂಕಲನ.

ವಿಮರ್ಶೆ ಗೊರೂರು ಅನಂತರಾಜು,

ಪಾಟಿಚೀಲ ಮಕ್ಕಳ ಕವನ ಸಂಕಲನ. ಇದರಲ್ಲಿ ೬೦ ಕವನಗಳಿವೆ. ಕೃತಿಕಾರರು ಪಿ.ಅರ್.ನಾಯ್ಕ. ಕುಮಟ ಹೊಳೆಗದ್ದೆಯವರು. ಪ್ರಸ್ತುತ ಹೊನ್ನಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು. ತಿಮ್ಮು ಇವರ ಕಥಾ ಸಂಕಲನ. ಗುಲಗಂಜಿ ಇವರ ಮತ್ತೊಂದು ಮಕ್ಕಳ ಕವನ ಸಂಕಲನ. ಇತ್ತೀಚಿಗೆ ಹರಪ್ಪನಹಳ್ಳಿಯಲ್ಲಿ ನಡೆದ ನೂರು ಕೃತಿಗಳ ಲೋಕಾರ್ಪಣೆ ಗಿನಿಸ್ ದಾಖಲೆಯ ಕಾರ್ಯಕ್ರಮದಲ್ಲಿ ಇವರ ಪಾಟಿಚೀಲ ಬಿಡುಗಡೆ ಆಯಿತು. ಇಲ್ಲಿ ನನಗೆ ಪರಿಚಿತರಾದ ನಾಯ್ಕರು ಪಾಟಿಚೀಲ ಕೊಟ್ಟರು. ಶೀರ್ಷಿಕೆ ಓದುತ್ತಿದ್ದಂತೆ ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರರು ನೀರ್ನಳ್ಳಿ ಗಣಪತಿಯವರು ನೆನಪಾದರು. ಅವರು ನನ್ನ ಸಾಕ್ಷರರಾಗೋಣ ಕೃತಿಗೆ ಮುಖಪುಟ ರಚಿಸಿಕೊಟ್ಟು ಅದರಲ್ಲಿ  ಬಾಟ್ಲಿ ಮುಂದೆ ಕುಳಿತ ಅಪ್ಪನಿಗೆ ಸ್ಲೇಟು ಹಿಡಿದ ಮಗ ‘ಬಾಟ್ಳಿ ಹಿಡಿದು ರಾಕ್ಷಸನಾಗಬೇಡ ಪಾಟಿ ಹಿಡಿದು ಸಾಕ್ಷರನಾಗು ಅಪ್ಪಾ.. ಎಂದು ಹೇಳುತ್ತಿರುವ ದೃಶ್ಯಕಲ್ಪನೆ ಅರ್ಥಗರ್ಭಿತವಾಗಿತ್ತು. ನಾನಾದರೂ ಹಾಸನ ಜಿಲ್ಲಾ ಸಾಕ್ಷರತಾ ಆಂದೋಲನ ದಿನಗಳಲ್ಲಿ ಅಕ್ಷರ ಅಭಿಷೇಕ ಪಠ್ಯ ಪುಸ್ತಕ ರಚನಾ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡುವಾಗ ಕಂಡುಕೊಂಡ ಅನುಭವದಿಂದ ಈ ನವಸಾಕ್ಷರರ ಪುಸ್ತಕ ರಚಿಸಿದ್ದೆ. ಈ ಕಡೆಯ ಸ್ಲೇಟು ಆ ಕಡೆ ಪಾಟಿ. ಇಲ್ಲಿ ಲೇಖಕರು ತಮ್ಮ ಪ್ರತಿ ಕವನಕ್ಕೂ ಚಿತ್ರಕಾರರಿಂದ ಮಕ್ಕಳಿಗೆ ಅರ್ಥವಾಗುವ ಚಿತ್ರ ಬರೆಸಿ ಮಕ್ಕಳಿಗೆ ಕವಿತೆಯ ಸಾರ ಅರ್ಥವಾಗುವಂತೆ ಮಾಡಿದ್ದಾರೆ. ಆ ಚಿತ್ರಕಾರರೆಂದರೆ ಸಂಜಯ ಗುಡಿಗಾರ ಮತ್ತು ವೆಂಕಟೇಶ ಪಟಗಾರ. ಸಂಕಲನದ ಮೊದಲ ಕವಿತೆ:


ನಮ್ಮ ಮನೆಯ ತೋಟದಲ್ಲಿ ಇರುವುದೊಂದು ಮಾಮರ
ಹಕ್ಕಿ ಗೂಡ ನೋಡಿ ಬರಲು
ಅಲ್ಲಿಗೆ ನೀವು ಬರುವಿರಾ

ಹಕ್ಕಿ ಗೂಡು ಎಂದ ಕೂಡಲೇ ನಮಗೆ ನೆನಪಾಗುವುದೇ ಗುಬ್ಬಚ್ಚಿ ಗೂಡು. ಪೋನ್‌ ಟೆಲಿಪೋನ್‌ ಟವರ್‌ಗಳಿಂದಾಗಿ ಇಂದಿನ ಮಕ್ಕಳಿಗೆ ಗುಬ್ಬಚ್ಚಿ ಗೂಡು ನೋಡುವುದೇ ಮರೀಚಿಕೆ. ಗುಬ್ಬಚ್ಚಿ ಗೂಡು ಕಟ್ಟಿತು ಎಂಬ ನನ್ನ ಪ್ರಬಂಧ ಸಂಕಲನದಲ್ಲಿ ಈ ಕುರಿತ್ತಾಗಿ ಒಂದು ಪ್ರಬಂಧ ಬರೆದಿರುವೆ.


ಎಷ್ಟು ಅಂದ ಎಷ್ಟು ಚಂದ
ಹಕ್ಕಿ ಹೆಣೆದ ಗೂಡು
ಕಲ್ಲು ಕಡ್ಡಿ ಮುಳ್ಳು ಗಂಟಿ
ಎಲ್ಲ ಉಂಟು ನೋಡು

ಈಗ ಮಕ್ಕಳಿಗೆ ಮೊಮ್ಮಗನಿಗೆ ಎಲ್ಲಿ ತೋರಿಸುವುದು ಗುಬ್ಬಚ್ಚಿ ಗೂಡು. ತೀರಾ ಕಾಡು ಪರಿಸರದಲ್ಲಿ ಕಂಡು ಬರುವ ಗೀಜುಗ ಹಕ್ಕಿಯ ನಾಜೂಕಿನ ಗೂಡು ತೋರಿಸಬೇಕಿದೆ ಅಷ್ಟೇ.

ಗಂಟಲಲ್ಲಿ ಕಾಳನಿಟ್ಟು ಹಾರಲು ಕಲಿಸುವ ಅಮ್ಮನು
ಹಿಡಿದು ತಿನ್ನಲು ಹೊಂಚು ಹಾಕಿ ಅಡಗಿ ಕುಳಿತ ಗುಮ್ಮನು

ಅಮ್ಮನು ಹೇಳುತ್ತಿದ್ದ ಗುಮ್ಮನ ಕಥೆಗೆ ಹೋಗುವ ಮುನ್ನ ನಾನು ಮೊನ್ನೆ ಕಂಡ ದೃಶ್ಯ ಕಣ್ಮುಂದೆ ಬರುತ್ತಿದೆ. ನಮ್ಮ ಮನೆ ಬಾಗಿಲು ಪಶ್ಚಿಮಕ್ಕೆ ಇದ್ದು  ಬಿಸಿಲು ಮಳೆಗೆ ಅಡ್ಡಲಾಗಿ ಹಸಿರು ಬಿದಿರು ಚಾಪೆ ಹಾಕಿದ್ದೇವೆ. ಚಾಪೆಯ ರೋಲರ್ ಕೋಲಿನ ಮೇಲೆ ಉದ್ದನೆ ಕೊಕ್ಕಿನ ಎರಡು ಹಕ್ಕಿಗಳು ಬಂದು ಕೂಡುತ್ತಿದ್ದವು. ನಮ್ಮ ಮನೆಯ ಪಕ್ಕದ ಖಾಲಿ ಸೈಟಿನಲ್ಲಿ ಒಂದು ಮನುಷ್ಯರು ತಿನ್ನದ ಸಣ್ಣ ಸಣ್ಣ ಕೆಂಪು ಹಣ್ಣುಗಳ ಸಿಹಿ ಹಣ್ಣಿನ ಮರವೊಂದು ಬೃಹದಾಕಾರವಾಗಿ ಛತ್ರಿ ರೂಪದಲ್ಲಿ ಹರಡಿಕೊಂಡು ಬೆಳೆದಿತ್ತು.ಇದು ಈ ಹಕ್ಕಿಗಳ ಆಹಾರ ತಾಣವಾಗಿತ್ತು. ಅದು ಯಾವ ಮಾಯದಲ್ಲೋ ನನ್ನ ಅರವಿಗೆ ಬರುವಷ್ಟರಲ್ಲೇ ಅವು ದೋಣಿ ಆಕಾರದ ಪುಟ್ಟ ಗೂಡನ್ನು ನಾವು ಬಿದಿರು ಚಾಪೆಯನ್ನು ಗೋಡೆಗೆ ಕೊಕ್ಕೆ ಮೊಳೆಯನ್ನು ಹೊಡೆದು ತೂಗು ಹಾಕಿದವೆಲ್ಲಾ ಆ ಜಾಗ ಆರಿಸಿಕೊಂಡು ಎಂತಹ ಗಾಳಿ ಮಳೆಗೂ ಕೆಳಗೆ ಬೀಳದಂತೆ ಬಿಗಿಯಾಗಿ ಗೂಡನ್ನು ಅಲ್ಲಿ ಕಟ್ಟಿ ಅದ್ಯಾವಾಗ ಮೊಟ್ಟೆ ಇಟ್ಟವೋ ಗೊತ್ತಿಲ್ಲ. ಆದರೆ ಆ ಗೂಡಿನಲ್ಲಿ ಎರಡು ಪುಟ್ಟ ಮರಿಗಳು ಇದ್ದು ಈ ಹಕ್ಕಿಗಳು ಆ ಮರಿಗಳಿಗೆ ಮರದಿಂದ ಕೆಂಪು ಹಣ್ಣನ್ನು ತಂದು ಕೊಕ್ಕಿನಿAದ ಮರಿಗಳಿಗೆ ತಿನ್ನಿಸುವ ದೃಶ್ಯವನ್ನು ನನ್ನ ಮೊಮ್ಮಗ ಮೋಹಿತನಿಗೆ ತೋರಿಸಿದೆ. ಮೊಮ್ಮಗ ಅವುಗಳನ್ನು ಹೆದರಿಸಲು ಹೋಗಿ ಅಗ ಮನೆಯ ಮುಂದಿನ ವಿದ್ಯುತ್‌ ತಂತಿಯ ಮೇಲೆ ಕುಳಿತಿದ್ದ ಮತ್ತೊಂದು ಹಕ್ಕಿ ನಮ್ಮ ಮೇಲೆ ದಾಳಿ ಮಾಡಲು ಪರ‍್ರೆಂದು ಹಾರಿ ಬಂದು ಬೆಚ್ಚಿ ಹಿಂದೆ ಸರಿದ್ದಿದೆವು. ತಾಯಿ ಹಕ್ಕಿ ಹಣ್ಣು ತಿನ್ನಿಸುವುದಕ್ಕೆ ತಂದೆ ಹಕ್ಕಿ ಕಾವಲು ಕಾಯುತ್ತಿದೆಯೇ ಎನಿಸಿತು ಆಗ ನನ್ನ ಮುಗ್ಧ ಮನಕ್ಕೆ. ಅದಾಗಿ ಕೆಲ ದಿನಗಳ ನಂತರ ಆ ಎರಡು ಪುಟ್ಟ ಮರಿಗಳು ನಾವು ಬಟ್ಟೆ ಒಣ ಹಾಕಲು ಕಟ್ಟಿದ್ದೆವಲ್ಲಾ ಪ್ಲಾಸ್ಟಿಕ್ ವೈರ್‌ ಅದರ ಮೇಲೆ ಕುಳಿತು ಹಾರಿ ಹೋಗಲು ಪ್ರಯತ್ನಿಸುತ್ತಿವೆ. ನಾನು  ಮನೆ ಬಾಗಿಲು ತೆಗೆದು ಆಚೆ ಹೋಗುವಂತಿಲ್ಲ. ಆ ಪ್ರಯತ್ನ ಮಾಡಲು ಹೋಗಿ  ಮುಖಕ್ಕೆ  ಹಕ್ಕಿ ನೇರ ದಾಳಿ ಮಾಡಿ ಕಣ್ಣಿಗೆ ಪೆಟ್ಟಾದರೆ ಎಂಬ ಭಯ ನನಗೆ.
“ ರೀ, ಡೈರಿಗೆ ಹೋಗಿ ಹಾಲು ತೆಗೆದುಕೊಂಡು ಬನ್ನಿ ಮೋಹಿತ ಏಳುವಷ್ಟರಲ್ಲಿ.. ಮಡದಿ ಶಕುಂತಲೆಯ ಉವಾಚ. ತಂತಿಯ ಮೇಲಿನ ತಂದೆ ಗುಬ್ಬಚ್ಚಿ ನನ್ನ ಮೇಲೆ ದಾಳಿ ಮಾಡಲು ಹದ್ದು ಕಾಯುವಂತೆ ಕಾಯುತ್ತಿದೆ. ಹೇಗೆ ಹೊರಗೆ ಹೋಗುವುದು? ನನ್ನ ಪುಕ್ಕಲುತನ ಹೆಂಡತಿಗೆ ಹೇಳಲು ನಾಚಿಕೆ. ಅದಕ್ಕೆ ನಾನೊಂದು ಉಪಾಯ ಹೂಡಿದೆ. ಒಂದು ಟವಲ್‌ನ್ನು ತಲೆತುಂಬಾ ಸುತ್ತಿಕೊಂಡು ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರರ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನಟ ದಿನೇಶ್ ಹಾಲು ಕರೆಯಲು ಹೊರಡುತ್ತಾನಲ್ಲಾ ಹಾಗೇ ಹಾಲು ತರಲು ಹೊರಟೆ.  ವರಾಂಡದ ಸೋಫ ಮೇಲೆ ಕುಳಿತು ಆ ಮರಿ ಹಕ್ಕಿಗಳು ಹೇಗೆ ಹಾರಿ ಹೋಗುತ್ತವೆ ಎಂಬುದನ್ನು ನೋಡಲು ಅರ್ಧ ಬಾಗಿಲು ತೆರೆದು ಇಣುಕಿ ನೋಡತೊಡಗಿದೆ. ತಾಯಿ ಹಕ್ಕಿ ಇರಬೇಕು ಕೆಂಪು ಹಣ್ಣುತಂದು ಆ ಎರಡು ಮರಿಗಳಿಗೆ ತಿನಿಸಿತು. ಸ್ವಲ್ಪ ಚೈತನ್ಯ ಬಂದಂತ್ತಾಗಿ ಆ ಮರಿ ಹಕ್ಕಿ ರೆಕ್ಕೆ ಬಿಚ್ಚಿ ಹಾರುವ ವಿಫಲ ಪ್ರಯತ್ನ ನಡೆಸಿತು. ಇದಾಗಿ ಒಂದು ಗಂಟೆಯ ನಂತರ ನಾನು ಸ್ನಾನ ಮಾಡಿ ತಿಂಡಿ ತಿನ್ನಲು ಅದೇ ಜಾಗದಲ್ಲಿ ಕುಳಿತು ನೋಡಲು ಆ ಮರಿ ಹಕ್ಕಿಗಳು ಮಂಗಮಾಯ. ಈಗ ನಮ್ಮ ಪಕ್ಕದ ಸೈಟನ್ನು ಯಾರೋ ಪುಣ್ಯಾತ್ಮರು ಹಳೆಯ ಸೈಟ್ ಮಾಲೀಕರಿಂದ ಖರೀದಿಸಿ ಆ ಸಿಹಿ ಹಣ್ಣಿನ ಮರವನ್ನು ಕಡಿಸಿ ಹಾಕಿದ್ದಾರೆ. ಈಗ ಆ ಹಕ್ಕಿಗಳು ಇತ್ತ ಬರುತ್ತಿಲ್ಲಎತ್ತ ಹೋದವು ? ಮೊಮ್ಮಗ ಮೋಹಿತನಿಗೆ ತಿಳಿಸಲೆಂದರೇ ಆತನ ತಾಯಿ ಅಜ್ಜಿಯ ಮನೆಯಲ್ಲಿದ್ದಾನೆ. ಮೂರು ವರ್ಷ ಸಾಕಿ ಬೆಳೆಸಿದ ತಂದೆ ಅಜ್ಜಿ ದೂರ..!
ನಾಯ್ಕರ ಕವಿತೆ ಓದುತ್ತಾ ನಾನೊಂದು ಕಥೆ ಕಟ್ಟಿದನಲ್ಲವೇ. ಇದು ಗಾಂಧೀಜಿ ಬರೆದಂತೆ ಸತ್ಯ ಆತ್ಮಕಥೆ. ಕೃತಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ ಅಧ್ಯಕ್ಷರು ಬಿ.ಎನ್. ವಾಸರ ಬರೆದಂತೆ ಮಕ್ಕಳ ಸಾಹಿತ್ಯ ಎಂದರೆ ಅದು ಕೇವಲ ಮಕ್ಕಳಿಂದ ರಚಿತವಾದ ಸಾಹಿತ್ಯವೆಂದೇನೂ ಅರ್ಥವಲ್ಲ. ಮಕ್ಕಳ ವಯೋಮಿತಿಗೆ ಹೊಂದುವ ಹಾಗೆ ಹಿರಿಯರು ಬರೆದ ಸಾಹಿತ್ಯ ಕೂಡಾ ಮಕ್ಕಳ ಸಾಹಿತ್ಯವೇ ಆಗಿದೆ. ಮಕ್ಕಳ ಮನಸ್ಸನ್ನು ಅರಳಿಸುವ, ಕುತೂಹಲ ಕೆರಳಿಸುವ ಭಾವನೆಗಳನ್ನು ಪ್ರಚೋದಿಸುವ ಸಂತೋಷ ನೀಡುವ ಜೊತೆಗೆ ನೀತಿ ಪಾಠಗಳೊಂದಿಗೆ ವ್ಯಕ್ತಿತ್ವ ರೂಪಿಸುವ ಬರಹಗಳನ್ನು ಮಕ್ಕಳ ಸಾಹಿತ್ಯ ಎನ್ನಬಹುದು.ಅದು ಕಥೆ, ಕಾವ್ಯ, ನಾಟಕ, ಪ್ರಬಂಧಗಳು ಮೂಲಕ ನಿರೂಪಿತಗೊಂಡಿರಬಹುದು. ಜನಪದ ಸಾಹಿತ್ಯ ಪರಂಪರೆಯಿಂದಲೂ ಕೂಡ ಮಕ್ಕಳ ಸಾಹಿತ್ಯ ಬೆಸೆದುಕೊಂಡಿದೆ. ಅಜ್ಜಿ ಹೇಳುವ ಕಾಗಕ್ಕ ಗುಬ್ಬಕ್ಕನ ಕಥೆಯಿರಬಹುದು. ಪಂಚತಂತ್ರದ ಕಥೆಗಳಿರಬಹುದು. ರಾಜಕುಮಾರಿಯ ಕಥೆಗಳಿರಬಹುದು. ಒಗಟು ಲಾಲಿ ಪದಗಳಿರಬಹುದು.. ಹೀಗೆ ಈ ಎಲ್ಲ ಜನಪದ ಸಾಹಿತ್ಯಗಳೂ ಕೂಡ ಮಕ್ಕಳ ಮನ ಮುದಗೊಳಿಸುವ ಮಕ್ಕಳ ಸಾಹಿತ್ಯವೇ..

ನೆರೆಮನೆ ಭೀಮನು
ಓಡುತ ಬಂದನು ನಡುಗುತ ಭಯದಿಂದೇಳಿದನು
ಪಳ ಪಳ ಹೊಳೆಯುವ
ಹಾವನು ಕಂಡೆನು
ಬನ್ನಿರಿ ಈಗಲೇ ತೋರುವೆನು

ನಿಜ ಹಾವುಗಳನ್ನು ಕಂಡರೇ ಯಾರಿಗೆ ತಾನೇ ಭಯ ಇರುವುದಿಲ್ಲ. ಇಲ್ಲಿಯೂ ಕೂಡ ನಮ್ಮ ಮನೆಯಲ್ಲಿ ನಡೆದ ಪ್ರಸಂಗ ನೆನಪಾಗಿ ನೀವು ಕಡೆಯಲ್ಲಿ ನಕ್ಕು ಬಿಡುವಿರಿ. ನಮ್ಮ ಮನೆಯ ಒಳಗೆ ವರಾಂಡದಲ್ಲಿನ ಮೆಟ್ಟಿಲು ಪಕ್ಕ ಒಂದು ಕಪ್ಪು ಹಾವು ಚಲಿಸದೇ ಮಲಗಿದೆಯೆಂದು ಮಡದಿ ಶಕುಂತಲೆ ಹೆದರಿ ಹೊರಗೆ ಓಡಿ ಬಂದು ರಂಪಾಟ ಶುರು ಮಾಡಿದಳು. ಎಲ್ಲೋ ಹೊರಗಿದ್ದ ನನಗೆ ಪೋನ್ ಮಾಡಿದಳು. ನಾನು ಮನೆಯ ಹತ್ತಿರ ಬರುವಷ್ಟರಲ್ಲಿ ಮನೆಯ ಮುಂದೆ ಒಂದಿಷ್ಟು ಜನ ಸೇರಿದ್ದರು.
“ಅಣ್ಣ, ನಾನೇ ನೋಡಿದೆ ಅದು ಕರಿ ನಾಗರವೇ ಸರಿ ಎಂದರು ಬಲ ಪಕ್ಕದ ಮನೆಯವರು. ನೀವೇ ಹೋಗಿ ನೋಡಿ ಬೇಕಾದರೇ ಅದು ಕರಿ ನಾಗರಹಾವೋ ಇಲ್ಲ..ಎಡಪಕ್ಕದ ಮನೆಯವರು ಹೇಳುತ್ತಿದ್ದ ಮಾತನ್ನು ನನ್ನ ಮನ ಇಲ್ಲ ಇಲ್ಲ ನಾನು ಖಂಡಿತ ನೋಡಲು ಹೋಗುವುದಿಲ್ಲ. ಗುಬ್ಬಚ್ಚಿ ಕಂಡರೆ ಹೆದರುವ ಪುಕ್ಕಲು ಮನುಷ್ಯನ ಮೇಲೆ ಹಾವಿನ ಬ್ರಹ್ಮಾಸ್ತ್ರ..? ಅಷ್ಟರಲ್ಲಿ ಎದುರು ಮನೆಯವರು ಹಾವು ಹಿಡಿಯುವ ಕೇಶವನಿಗೆ ಪೋನ್ ಮಾಡಿ ಕರೆಸಿದರು. ಆತ ಮನೆಯೊಳಗೆ ಹೋಗಿ ಹಾವು ಹಿಡಿದು ತರುತ್ತಾನೆಂದು ನಾವೆಲ್ಲಾ ಕಾತುರದಿಂದ ಕಾಯುತ್ತಿದ್ದರೇ ಆತ ಹಿಡಿದು ತಂದಿದ್ದು ಪ್ಲಾಸ್ಟಿಕ್ ಹಾವು. ಅದು ಹೇಗೆ ಮನೆಯೊಳಗೆ ಇತ್ತು ಎಂದರೇ ನಮ್ಮ ಸೊಸೆ ಅದನ್ನು ತಂದು ತನ್ನ ರೂಮಿನಲ್ಲಿಟ್ಟಿದ್ದು ಅದನ್ನು ಮೊಮ್ಮಗ ಮೋಹಿತನು ಅಲ್ಲಿ ಎಸೆದು ಹೋಗಿರಬೇಕು. ಅಕಸ್ಮಾತ್ ನಾವು ಆ ಮೊದಲೇ ಸೊಸೆಗೆ ಪೋನ್ ಮಾಡಿದ್ದರೇ ನನಗೆ ಅಷ್ಟೆಲ್ಲಾ ನಷ್ಟವಾಗುತ್ತಿರಲಿಲ್ಲ. ಏಕೆಂದರೆ ಕೇಶವ ಬಡಪೆಟ್ಟಿಗೆ ಐನೂರು ಸಾವಿರಕ್ಕೆ ಒಪ್ಪಲಿಲ್ಲ. ಅದೆಷ್ಟು ಕೊಟ್ಟವೋ ನೆನಪಿಲ್ಲ. ಆದರೆ ಆತ ವಸೂಲಿಗೆ ಮೊದಲು ತನ್ನ ಚೀಲದಲ್ಲಿದ್ದ ಜೀವಂತ ಹಾವೊಂದು ಹೊರಗೆ ಬಿಟ್ಟು ಅದರ ಬಾಲ ಹಿಡಿದು ಆಟ ಆಡಿಸಿ ನಮಗೆಲ್ಲಾ ಭಯ ಹುಟ್ಟಿಸಿ ಹಣ ಪಡೆದು ಹೋಗಿದ್ದನು.  ಹೀಗೆ ಇಲ್ಲಿಯ ಒಂದೊಂದು ಮಕ್ಕಳ ಕವಿತೆಯನ್ನು ಓದುತ್ತಾ ನಾನೊಂದು ಪುಟ್ಟ ಪುಟ್ಟ ಕಥೆಯನ್ನೆ ಕಟ್ಟಿ ಬಿಡುವನೋ ಎನಿಸುತ್ತಿದೆ. ಸಾಹಿತ್ಯವೇ ಹಾಗೇ ಒಂದು ಓದು ಇನ್ನೊಂದರ ಸೃಷ್ಟಿ.

ಊರೂರು ಸುತ್ತುವ ಪಾತರಗಿತ್ತಿ
ಬಣ್ಣಬಣ್ಣದ ಭಿನ್ನಾಣಗಿತ್ತಿ

 ನೋಡಲು ಬಣ್ಣ ಬಣ್ಣದಲ್ಲಿ ಕಣ್ಣಿಗೆ ಚಂದ ಕಾಣುವ ಚಿಟ್ಟಿ ತನ್ನ ರೂಪಾಂತರದಲ್ಲಿ ಕಂಬಳಿ ಹುಳು. ಚಿಟ್ಟೆ ನೋಡಲು ಇಷ್ಟ. ಕಂಬಳಿ ಹುಳು ಕಷ್ಟ. ಬದುಕು ಅಷ್ಟೇ. ಒಳಂತರದ ಬದುಕೇ ಒಂದು ತರಹ. ಹೊರ ನೋಟದ ಬದುಕೇ ಮತ್ತೊಂದು ತರಹ. ಈ ನಡುವಿನ ಸಾಹಿತ್ಯದ ಓದು ಇದೆಯೆಲ್ಲಾ ಅದೇ ಒಂದು ತರಹ ಮುದ. ಪಾಟಿಚೀಲದಲ್ಲಿ ಇಂತಹ ಮುದ ತರುವ ಅನೇಕ ಕವಿತೆಗಳಿವೆ. ಒಂದೊಂದು ಕವಿತೆ ಓದುವಾಗ ಒಂದೊಂದು ಭಾವನೆಗಳು ಗರಿ ಬಿಚ್ಚಿಕೊಳ್ಳುತ್ತವೆ. ಇನ್ಯಾರೋ ಪ್ರಸಿದ್ಧ ಕವಿಗಳು ಬರೆದ ಮಕ್ಕಳ ಕವಿತೆಗಳು ನೆನಪಾಗುತ್ತವೆ. ನಾವು ಬಾಲ್ಯದ ಶಾಲೆಯ ದಿನಗಳಲ್ಲಿ ಓದಿದ ಮಕ್ಕಳ ಪದ್ಯಗಳು ಮನದಲ್ಲಿ ಹಾಯ್ದು ಹೋಗುತ್ತವೆ.

ಹಾರುವ ಹಕ್ಕಿಗೆ ರೆಕ್ಕಪುಕ್ಕ ಹಚ್ಚಿಸಿದಾತನು ಯಾರಮ್ಮ
ಅಂದದ ನವಿಲಿಗೆ ಚಂದದ ರೂಪವ ಕೊಟ್ಟವರಾರು ಹೇಳಮ್ಮ..?
ಯಾರಾದರೂ ಹೇಳುವಿರಾ..

———————————

ಗೊರೂರು ಅನಂತರಾಜು,

Leave a Reply

Back To Top